IND vs AUS: ‘ಕೊಹ್ಲಿ ಉದ್ದೇಶಪೂರ್ವಕವಾಗಿ…’; ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್ಸ್ಟಾಸ್
IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ವಿರಾಟ್ ಕೊಹ್ಲಿ ಮತ್ತು ಸ್ಯಾಮ್ ಕೊನ್ಸ್ಟಾಸ್ ನಡುವೆ ಮೈದಾನದಲ್ಲೇ ಘರ್ಷಣೆ ನಡೆದಿತ್ತು. ಇದೀಗ ಈ ಘಟನೆಯ ಬಗ್ಗೆ ಮಾತನಾಡಿರುವ ಸ್ಯಾಮ್ ಕೊನ್ಸ್ಟಾಸ್ ಇದು ಆಕಸ್ಮಿಕ ನಡೆದ ಘಟನೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಕೊಹ್ಲಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನೆ ನಾಲ್ಕನೇ ಟೆಸ್ಟ್ನ ಮೊದಲ ದಿನದಾಟ ಮುಕ್ತಾಯಗೊಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ ಪಡೆ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್ ಕಲೆಹಾಕಿದೆ. ಅಂದರೆ ಮೊದಲ ದಿನದಾಟದ ಗೌರವ ಉಭಯ ತಂಡಗಳಿಗೂ ಸಮನಾಗಿ ಹಂಚಿಕೆಯಾಗಿದೆ. ಈ ನಡುವೆ ಮೊದಲ ದಿನದಾಟದ ವೇಳೆ ನಡೆದ ಅದೊಂದು ಘಟನೆ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು, ಇದೀಗ ಅದರ ಭಾರವನ್ನು ಕ್ರಿಕೆಟ್ ಲೋಕದ ಸಾಮ್ರಾಟ ವಿರಾಟ್ ಕೊಹ್ಲಿ ಹೊರಬೇಕಾಗಿ ಬಂದಿದೆ. ಆದಾಗ್ಯೂ ಪಂದ್ಯ ಮುಗಿದ ಬಳಿಕ ಆ ಘಟನೆಯ ಬಗ್ಗೆ ಮಾತನಾಡಿರುವ ಸ್ಯಾಮ್ ಕೊನ್ಸ್ಟಾಸ್, ಈ ಘಟನೆಯಲ್ಲಿ ತನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯದ್ದು ಯಾವುದೇ ತಪ್ಪಿಲ್ಲ ಎಂದಿದ್ದು, ಕೊಹ್ಲಿ ಆಕಸ್ಮಿಕವಾಗಿ ನನಗೆ ಡಿಕ್ಕಿ ಹೊಡೆದರು ಎನ್ನುವ ಮೂಲಕ ವಿವಾದಿತ ಘಟನೆಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
ವಾಸ್ತವವಾಗಿ ಆಸೀಸ್ ಇನ್ನಿಂಗ್ಸ್ ವೇಳೆ ತಂಡದ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಸ್ಯಾಮ್ ಕೊನ್ಸ್ಟಾಸ್ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಂಡಿದಲ್ಲದೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದ್ದರು. ಕೂಡಲೇ ಈ ಇಬ್ಬರ ಮಧ್ಯ ಪ್ರವೇಶಿಸಿದ್ದ ಅಂಪೈರ್ಗಳು ಸನ್ನಿವೇಶವನ್ನು ತಿಳಿಗೊಳಿಸಿದ್ದರು. ನಡೆದ ಘಟನೆಯಲ್ಲಿ ವಿರಾಟ್ ಕೊಹ್ಲಿಯದ್ದೇ ತಪ್ಪು ಎಂಬುದು ಮೇಲ್ನೋಟಕ್ಕೆ ಕಾಣುತ್ತಿದ್ದ ಕಾರಣ ಇಡೀ ಘಟನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ತನಿಖೆ ನಡೆಸಿರುವ ಮ್ಯಾಚ್ ರಿಫೆರಿ, ವಿರಾಟ್ ಕೊಹ್ಲಿಗೆ ದಂಡ ವಿಧಿಸಿದ್ದಾರೆ. ಆ ಪ್ರಕಾರ ಪಂದ್ಯ ಶುಲ್ಕದ ಶೇ.20 ರಷ್ಟು ದಂಡವಾಗಿ ವಿಧಿಸಲಾಗಿದ್ದು, ಒಂದು ಡಿಮೆರಿಟ್ ಪಾಯಿಂಟ್ ಸಹ ನೀಡಲಾಗಿದೆ.
ಘಟನೆ ನಡೆದ ಬಳಿಕ ಈ ಸುದ್ದಿ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಮಾಜಿ ಕ್ರಿಕೆಟಿಗರು ಹಾಗೂ ಪರಿಣಿತರು ಕೊಹ್ಲಿ ವಿರುದ್ಧ ಮುಗಿಬಿದ್ದಿದ್ದರು. ಆದರೀಗ ಇಡೀ ಘಟನೆಯ ಬಗ್ಗೆ ಮಾತನಾಡಿರುವ ಸ್ಯಾಮ್ ಕೊನ್ಸ್ಟಾಸ್, ‘ಕೊಹ್ಲಿ ಉದ್ದೇಶಪೂರ್ವಕವಾಗಿ ತನಗೆ ಡಿಕ್ಕಿ ಹೊಡೆದಿಲ್ಲ. ಬದಲಿಗೆ ಅದು ಆಕಸ್ಮಿಕವಾಗಿ ನಡೆದ ಘಟನೆಯಾಗಿದೆ. ಕ್ರಿಕೆಟ್‌ನಲ್ಲಿ ಈ ರೀತಿಯ ಘಟನೆಗಳು ಆಗಾಗ ಸಂಭವಿಸುತ್ತವೆ. ಆ ಸಂದರ್ಭದಲ್ಲಿ ನನಗೇನೂ ಅರ್ಥವಾಗಲಿಲ್ಲ. ನಾನು ನನ್ನ ಕೈಗವಸುಗಳನ್ನು ಹಾಕಿಕೊಳ್ಳುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೊಹ್ಲಿ ಅವರ ಭುಜವು ನನ್ನ ಕೈಗೆ ತಾಗಿತು. ಇದೆಲ್ಲವೂ ಕ್ರಿಕೆಟ್‌ನಲ್ಲಿ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ. ಈ ಮೂಲಕ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ವಿಷಯವನ್ನು ತಿಳಿಗೊಳಿಸುವ ಕೆಲಸವನ್ನು ಈ ಯುವ ಕ್ರಿಕೆಟಿಗ ಮಾಡಿದ್ದಾನೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ