ಸಿಕ್ಸರ್ಗಳ ಸುರಿಮಳೆ… 33 ಸಿಕ್ಸ್ ಸಿಡಿಸಿದ ಫಿನ್ ಅಲೆನ್
MLC 2025: ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಪರ ಕಣಕ್ಕಿಳಿಯುತ್ತಿರುವ ಫಿನ್ ಅಲೆನ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. ಐಪಿಎಲ್ 2021 ರಿಂದ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ಅಲೆನ್ ಅವರನ್ನು ಒಮ್ಮೆಯೂ ಕಣಕ್ಕಿಳಿಸಿರಲಿಲ್ಲ ಎಂಬುದೇ ಅಚ್ಚರಿ. ಅಂದರೆ ಮೂರು ವರ್ಷಗಳ ಕಾಲ ಫಿನ್ ಅಲೆನ್ ಆರ್ಸಿಬಿ ಪರ ಬೆಂಚ್ ಕಾದಿದ್ದರು. ಇದೀಗ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
Updated on: Jun 22, 2025 | 7:54 AM

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯಲ್ಲಿ ನ್ಯೂಝಿಲೆಂಡ್ ದಾಂಡಿಗ ಫಿನ್ ಅಲೆನ್ (Finn Allen) ಅಬ್ಬರ ಮುಂದುವರೆದಿದೆ. ಅದು ಕೂಡ ಸಿಕ್ಸರ್ಗಳ ಸುರಿಮಳೆಯೊಂದಿಗೆ ಎಂಬುದೇ ಅಚ್ಚರಿ. ಈ ಬಾರಿಯ ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಕಣಕ್ಕಿಳಿಯುತ್ತಿರುವ ಅಲೆನ್ ಈವರೆಗೆ ಸಿಡಿಸಿರುವ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 33 ..!

ಮೊದಲ ಪಂದ್ಯದಲ್ಲಿ 19 ಸಿಕ್ಸ್ಗಳೊಂದಿಗೆ 151 ರನ್ ಬಾರಿಸಿದ್ದ ಫಿನ್ ಅಲೆನ್, ದ್ವಿತೀಯ ಪಂದ್ಯದಲ್ಲಿ 4 ಸಿಕ್ಸ್ಗಳೊಂದಿಗೆ 52 ರನ್ ಸಿಡಿಸಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಫಿನ್ ಅಲೆನ್ ಬ್ಯಾಟ್ನಿಂದ 2 ಸಿಕ್ಸ್ಗಳು ಮೂಡಿಬಂದಿದ್ದವು. ಇದೀಗ ನಾಲ್ಕನೇ ಪಂದ್ಯದಲ್ಲೂ ತನ್ನ ಬ್ಯಾಟಿಂಗ್ ಆರ್ಭಟವನ್ನು ತೋರಿಸಿದ್ದಾರೆ.

ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫಿನ್ ಅಲೆನ್ ಕೇವಲ 35 ಎಸೆತಗಳಲ್ಲಿ 78 ರನ್ ಚಚ್ಚಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ ಸಿಡಿದ ಸಿಕ್ಸರ್ಗಳ ಸಂಖ್ಯೆ ಎಂಟು. ಈ ಮೂಲಕ ಕೇವಲ 4 ಇನಿಂಗ್ಸ್ಗಳಲ್ಲೇ ಬರೋಬ್ಬರಿ 33 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ.

ಇಂಟ್ರೆಸ್ಟಿಂಗ್ ವಿಷಯ ಎಂದರೆ, ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿರುವುದು ನಿಕೋಲಸ್ ಪೂರನ್. ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಪೂರನ್ 14 ಪಂದ್ಯಗಳಲ್ಲಿ 40 ಸಿಕ್ಸ್ ಬಾರಿಸಿ ಸಿಕ್ಸರ್ ಸರದಾರ ಎನಿಸಿಕೊಂಡಿದ್ದರು. ಆದರೆ ಅತ್ತ ಫಿನ್ ಅಲೆನ್ ಕೇವಲ 4 ಇನಿಂಗ್ಸ್ಗಳಲ್ಲೇ 33 ಸಿಕ್ಸ್ಗಳ ಸಂಖ್ಯೆಯನ್ನು ಮುಟ್ಟಿದ್ದಾರೆ.

ಅಷ್ಟೇ ಅಲ್ಲದೆ ಈ ಬಾರಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ. 4 ಪಂದ್ಯಗಳಲ್ಲಿ 119 ಎಸೆತಗಳನ್ನು ಎದುರಿಸಿರುವ ಅಲೆನ್ ಬರೋಬ್ಬರಿ 295 ರನ್ ಕಲೆಹಾಕಿದ್ದಾರೆ. ಅದು ಕೂಡ 33 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ. ಅಂದರೆ ಸಿಕ್ಸ್-ಫೋರ್ಗಳ ಮೂಲಕವೇ ಅಲೆನ್ 262 ರನ್ಗಳನ್ನು ಕಲೆಹಾಕಿರುವುದು ವಿಶೇಷ.
