ಪಂತ್ ಪರಾಕ್ರಮಕ್ಕೆ ಆಸ್ಟ್ರೇಲಿಯನ್ನರ ದಾಖಲೆಗಳೇ ಉಡೀಸ್
India vs England: ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 471 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿರುವ ಇಂಗ್ಲೆಂಡ್ ತಂಡವು 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿದೆ.
Updated on: Jun 22, 2025 | 10:31 AM

ಹೆಡಿಂಗ್ಲೆ ಮೈದಾನದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಇಂಗ್ಲೆಂಡ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಆಸ್ಟ್ರೇಲಿಯನ್ ಲೆಜೆಂಡ್ ಆ್ಯಡಂ ಗಿಲ್ಕ್ರಿಸ್ಟ್ ಹಾಗೂ ಬ್ರಾಡ್ ಹಾಡಿನ್ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಗಳನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಲೀಡ್ಸ್ನಲ್ಲಿ ನಡೆದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬಿರುಸಿನ ಬ್ಯಾಟಿಂಗ್ನೊಂದಿಗೆ ಪಂತ್ 178 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 134 ರನ್ ಬಾರಿಸಿದರು. ಈ ಶತಕದೊಂದಿಗೆ ಪಂತ್ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಅಂದರೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ವಿದೇಶಿ ವಿಕೆಟ್ ಕೀಪರ್ ಬ್ಯಾಟರ್ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆ್ಯಡಂ ಗಿಲ್ಕ್ರಿಸ್ಟ್ ಹಾಗೂ ಬ್ರಾಡ್ ಹಾಡಿನ್ ಅಗ್ರಸ್ಥಾನದಲ್ಲಿದ್ದರು. ಈ ಇಬ್ಬರು ಆಸೀಸ್ ದಾಂಡಿಗರು ಆಂಗ್ಲರ ವಿರುದ್ಧ ತಲಾ 3 ಟೆಸ್ಟ್ ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ರಿಷಭ್ ಪಂತ್ ಯಶಸ್ವಿಯಾಗಿದ್ದಾರೆ. ಪಂಟರ್ ಪಂತ್ ಈವರೆಗೆ 7 ಟೆಸ್ಟ್ ಶತಕ ಸಿಡಿಸಿದ್ದಾರೆ. ಈ ಏಳರಲ್ಲಿ 4 ಶತಕಗಳು ಮೂಡಿಬಂದಿರುವುದು ಇಂಗ್ಲೆಂಡ್ ವಿರುದ್ಧ ಎಂಬುದು ವಿಶೇಷ. 2018 ರಲ್ಲಿ ಲಂಡನ್ನ ಓವಲ್ ಮೈದಾನದಲ್ಲಿ ಚೊಚ್ಚಲ ಸೆಂಚುರಿ ಸಿಡಿಸಿದ್ದ ಪಂತ್, ಆ ಬಳಿಕ 2022 ರಲ್ಲಿ ಎಡ್ಜ್ಬಾಸ್ಟನ್ನಲ್ಲಿ ಶತಕ ಬಾರಿಸಿದ್ದರು.

ಈ ಎರಡು ಶತಕಗಳ ಬಳಿಕ ರಿಷಭ್ ಪಂತ್ ಅಹಮದಾಬಾದ್ನಲ್ಲಿ ಆಂಗ್ಲರ ವಿರುದ್ಧ 101 ರನ್ ಬಾರಿಸಿ ಅಬ್ಬರಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ನಲ್ಲೇ ಮೂರನೇ ಸೆಂಚುರಿ ಸಿಡಿಸಿದ್ದಾರೆ. ಈ ಶತಕದೊಂದಿಗೆ ಕ್ರಿಕೆಟ್ ಜನಕರ ವಿರುದ್ಧ ಟೆಸ್ಟ್ನಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆಯನ್ನು ರಿಷಭ್ ಪಂತ್ ತಮ್ಮದಾಗಿಸಿಕೊಂಡಿದ್ದಾರೆ.
