ಬರೋಬ್ಬರಿ 15 ಸಿಕ್ಸ್: ಶರವೇಗದ ಸೆಂಚುರಿ ಸಿಡಿಸಿದ ಅಭಿಷೇಕ್
Bundelkhand Bulls vs Jabalpur Royal Lions: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬುಂದೇಲ್‌ಖಂಡ್ ಬುಲ್ಸ್ ತಂಡವು ಅಭಿಷೇಕ್ ಪಾಠಕ್ ಅವರ ಭರ್ಜರಿ ಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಿದೆ. ಈ ಗುರಿಯನ್ನು ಬೆನ್ನತ್ತಿದ ಜಬಲ್ಪುರ್ ರಾಯಲ್ ಲಯನ್ಸ್ 227 ರನ್ಗಳಿಸಿ ಆಲೌಟ್ ಆಯಿತು.
Updated on: Jun 22, 2025 | 1:31 PM

ಮಧ್ಯಪ್ರದೇಶ ಟಿ20 ಲೀಗ್ನಲ್ಲಿ (MPL 2025) ಶರವೇಗದ ಸೆಂಚುರಿ ಸಿಡಿಸಿ ಅಭಿಷೇಕ್ ಪಾಠಕ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಗ್ವಾಲಿಯರ್ನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಟೂರ್ನಿಯ 18ನೇ ಪಂದ್ಯದಲ್ಲಿ ಬುಂದೇಲ್‌ಖಂಡ್ ಬುಲ್ಸ್ ಮತ್ತು ಜಬಲ್ಪುರ್ ರಾಯಲ್ ಲಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬುಂದೇಲ್‌ಖಂಡ್ ಬುಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಪಾಠಕ್ ಸ್ಪೋಟಕ ಇನಿಂಗ್ಸ್ ಆಡಿದರು. ಮೊದಲ ಓವರ್ನಿಂದಲೇ ಹೊಡಿಬಡಿ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಅಭಿಷೇಕ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಕೇವಲ 33 ಎಸೆತಗಳಲ್ಲಿ ಅಭಿಷೇಕ್ ಪಾಠಕ್ ಬ್ಯಾಟ್ನಿಂದ ಶತಕ ಮೂಡಿಬಂತು. ಇದು ಮಧ್ಯಪ್ರದೇಶ ಟಿ20 ಲೀಗ್ನಲ್ಲಿ ಮೂಡಿಬಂದ ಅತೀ ವೇಗದ ಶತಕ ಎಂಬುದು ವಿಶೇಷ. ಹಾಗೆಯೇ ಭಾರತೀಯ ಬ್ಯಾಟರ್ ಕಡೆಯಿಂದ ಮೂಡಿಬಂದ 4ನೇ ವೇಗದ ಟಿ20 ಸೆಂಚುರಿಯಾಗಿದೆ.

ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ನ ದಾಖಲೆ ಅಭಿಷೇಕ್ ಶರ್ಮಾ ಹಾಗೂ ಉರ್ವಿಲ್ ಪಟೇಲ್ ಹೆಸರಿನಲ್ಲಿದೆ. ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಪರ ಕಣಕ್ಕಿಳಿದಿದ್ದ ಉರ್ವಿಲ್ ಪಟೇಲ್ ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಆ ಬಳಿಕ ಈ ದಾಖಲೆಯನ್ನು ಅಭಿಷೇಕ್ ಶರ್ಮಾ ಸರಿಗಟ್ಟಿದ್ದರು.

2024 ರಲ್ಲಿ ನಡೆದ ಸೈಯ್ಯದ್ ಮುಷ್ತಾಲ್ ಅಲಿ ಟೂರ್ನಿಯಲ್ಲಿ ಪಂಜಾಬ್ ಪರ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ, ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ 11 ಸಿಕ್ಸ್ಗಳೊಂದಿಗೆ ಶತಕ ಪೂರೈಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಉರ್ವಿಲ್ ಪಟೇಲ್ ದಾಖಲೆಯನ್ನು ಅಭಿಷೇಕ್ ಶರ್ಮಾ ಸರಿಗಟ್ಟಿದರು.

ಇದಕ್ಕೂ ಮುನ್ನ 2018 ರಲ್ಲಿ ದೆಹಲಿ ರಾಜ್ಯ ತಂಡದ ಪರ ಕಣಕ್ಕಿಳಿದಿದ್ದ ರಿಷಭ್ ಪಂತ್ 32 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಇದೀಗ ಮಧ್ಯಪ್ರದೇಶ ಟಿ20 ಲೀಗ್ನಲ್ಲಿ 33 ಎಸೆತಗಳಲ್ಲಿ ಶರವೇಗದ ಸೆಂಚುರಿ ಸಿಡಿಸಿ ಅಭಿಷೇಕ್ ಪಾಠಕ್ ಕೂಡ ಈ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ 35 ಕ್ಕಿಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ 4ನೇ ಭಾರತೀಯ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 48 ಎಸೆತಗಳನ್ನು ಎದುರಿಸಿದ ಅಭಿಷೇಕ್ ಪಾಠಕ್ 15 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 133 ರನ್ ಬಾರಿಸಿದರು. ಈ ಸ್ಫೋಟಕ ಶತಕದ ನೆರವಿನೊಂದಿಗೆ ಬುಂದೇಲ್‌ಖಂಡ್ ಬುಲ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಜಬಲ್ಪುರ್ ರಾಯಲ್ ಲಯನ್ಸ್ ತಂಡವು 19.1 ಓವರ್ಗಳಲ್ಲಿ 227 ರನ್ಗಳಿಸಿ ಆಲೌಟ್ ಆಗುವ ಮೂಲಕ 19 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ.









