Autobiography : ಅಭಿಜ್ಞಾನ ; ‘ನನ್ನ ಮೊದಲ ಸಂಬಳವೆಂದರೆ, ತಾರಿ ದಾಟಲು ಸಾಕಾಗದಷ್ಟು ಕಾಸು’
Yakshagana : ‘ದುರ್ಗಾಕೇರಿಯಲ್ಲಿ ಕಾಸೀಂ ಸಾಯಬ್ ಅಂತ ಒಬ್ಬ ಇದ್ದ. ಬೀಡಿ ಅಂಗಡಿ ಇಟ್ಟುಕೊಂಡಿದ್ದ. ಸ್ವಲ್ಪ ಮಟ್ಟಿಗೆ ನನಗೆ ಅವನ ಪರಿಚಯ ಇತ್ತು. ಒಂದು ಕಾಲದಲ್ಲಿ ಅವನೇ ನನಗೆ ಸೈಕಲ್ ನಡೆಸಲು ಕಲಿಸಿಕೊಟ್ಟಿದ್ದ. ‘ಮಾರಾಯಾ ನನಗೆ ಒಂದಾಣೆ ರೊಕ್ಕ ಕೊಡು. ಅದಕ್ಕೆ ಎಷ್ಟು ಬೀಡಿ ಕಟ್ಟಿಕೊಡಬೇಕು ಹೇಳು. ನಾನು ಕಟ್ಟಿಕೊಟ್ಟೇ ಹೋಗುತ್ತೇನೆ’ ಎಂದೆ.’ ಕೆರೆಮನೆ ಶಿವರಾಮ ಹೆಗಡೆ
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಯಕ್ಷಗಾನ ಕಲಾವಿದ ಕೆರೆಮನೆ ಶಿವರಾಮ ಹೆಗಡೆ ಅವರ ಆತ್ಮಕಥನ ‘ನೆನಪಿನ ರಂಗಸ್ಥಳ’ದಿಂದ. ನಿರೂಪಣೆ – ಜಿ.ಎಸ್. ಭಟ್
*
ಒಂದು ಕಡೆ ಮನೆಯಲ್ಲಿ ಮನಸ್ಸಿಗೆ ಮುಟ್ಟುವ ಬಡತನ; ಇನ್ನೊಂದು ಕಡೆ ನನಗೆ ಆಟ ಕುಣಿಯುವ ಗೀಳು. ಇದರಲ್ಲಿ ಯಾವುದಾದರೊಂದನ್ನೂ ಕಡೆಗಣಿಸಿ ಬಿಡುವಂತಿಲ್ಲ. ಎರಡನ್ನೂ ಸಮ-ಸಮ ತೂಗಿಸಿಕೊಂಡು ಹೋಗಬೇಕೆಂಬುದು ನನ್ನ ಹಂಬಲ. ಪ್ರಾಯಕ್ಕೆ ಬಂದ ಮನೆಯ ಹಿರಿಯ ಮಗ ಮನೆಯಲ್ಲಿ ಮನೆಗಾಗಿ ಏನೂ ಮಾಡದೆ ಬರೀ ಅರದಾಳ ಹಚ್ಚಿಕೊಂಡು ಆಟ ಕುಣಿಯುತ್ತ ದಿನ ಕಳೆಯುವ ಹಾಗೂ ಇಲ್ಲ. ಆಟ ಕುಣಿದು ಹೊಟ್ಟೆ ತುಂಬಿಸಿಕೊಳ್ಳಲೂ ಸಾಧ್ಯವಿಲ್ಲ. ಯಕ್ಷಗಾನದ ಕಡೆಗೇ ಮನಸ್ಸು ಕೊಟ್ಟರೆ ಮನೆಯ ಚರಿತಾರ್ಥ ನಡೆಯುವ ಹಾಗೆ ಇಲ್ಲ. ಆದ್ದರಿಂದ ಯಾವುದೋ ಒಂದು ಉದ್ಯೋಗ ಎಂಬುದು ಬೇಕಲ್ಲ? ಅದಕ್ಕಾಗಿ ಹುಡುಕತೊಡಗಿದೆ.
ಯಕ್ಷಗಾನವನ್ನೇ ಬದುಕಿನ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಳ್ಳಲು ಆ ಕಾಲಕ್ಕೆ ಸಾಧ್ಯವೇ ಇರಲಿಲ್ಲ. ಯಕ್ಷಗಾನಕ್ಕೆ ಸಾಮಾಜಿಕವಾಗಿ ಮನ್ನಣೆಯಾಗಲೀ ಬೇಡಿಕೆಯಾಗಲೀ ಇರಲಿಲ್ಲ. ಅಷ್ಟೇ ಅಲ್ಲ; ವೇಷಧಾರಿಗಳ ಬಗ್ಗೆ ಒಳ್ಳೆಯ ಭಾವನೆ ಕೂಡ ಇರಲಿಲ್ಲ. ನನ್ನ ಈ ತಿಳುವಳಿಕೆಯನ್ನು ಗಟ್ಟಿ ಮಾಡುವ ಒಂದೆರಡು ಪ್ರಕರಣಗಳೂ ಆ ಕಾಲಕ್ಕೆ ನಡೆದವು.
ಒಂದು ಸಲ ನಾನು ಎಲ್ಲೋ ತಾಳಮದ್ದಳೆಗೋ ಆಟ ನೋಡಲಿಕ್ಕೋ ಹೋದವ ವಾಪಾಸು ಮನೆಗೆ ಬರುವಾಗ ಹೊನ್ನಾವರಕ್ಕೆ ಬರುವಷ್ಟರಲ್ಲಿ ನನ್ನ ಕಿಸೆಯಲ್ಲಿ ದಮ್ಡಿ ಇಲ್ಲ. ಹೊಳೆ ದಾಟಿ ಈಚೆ ಬರಲೂ ಸಾಧ್ಯವಿಲ್ಲ. ತಾರಿ ದಾಟಲು ಎರಡು ಬಿಲ್ಲೆ ಸರಕಾರೀ ಬಿಲ್ಲೆ ಕೊಡಬೇಕು. ಮತ್ತೆ ಎರಡು ಬಿಲ್ಲೆಯನ್ನು ದೋಣಿ ದಾಟಿಸುವವರು ಇನಾಮು ಕೇಳುತ್ತಾರೆ. ಕೊಡದಿದ್ದರೆ ದುಃಖ ಕೊಡುತ್ತಾರೆ. ಹೀಗೆ ನಾನು ಒಂದು ಆಣೆಗೂ ತುಟ್ಟಿ. ಏನು ಮಾಡುವುದು?
ಆ ಕಾಲದಲ್ಲಿ ದುರ್ಗಾಕೇರಿಯಲ್ಲಿ ಕಾಸೀಂ ಸಾಯಬ್ ಅಂತ ಒಬ್ಬ ಇದ್ದ. ಆತ ಒಂದು ಬೀಡಿ ಅಂಗಡಿ ಇಟ್ಟುಕೊಂಡಿದ್ದ. ಸ್ವಲ್ಪ ಮಟ್ಟಿಗೆ ನನಗೆ ಅವನ ಪರಿಚಯ ಇತ್ತು. ಒಂದು ಕಾಲದಲ್ಲಿ ಅವನೇ ನನಗೆ ಸೈಕಲ್ ನಡೆಸಲು ಕಲಿಸಿಕೊಟ್ಟಿದ್ದ. ಅವ ಇದ್ದಲ್ಲಿಗೆ ಹೋಗಿ… ‘ಮಾರಾಯಾ ನನಗೆ ಒಂದಾಣೆ ರೊಕ್ಕ ಕೊಡು. ಅದಕ್ಕೆ ಎಷ್ಟು ಬೀಡಿ ಕಟ್ಟಿಕೊಡಬೇಕು ಹೇಳು. ನಾನು ಕಟ್ಟಿಕೊಟ್ಟೇ ಹೋಗುತ್ತೇನೆ’ ಎಂದೆ. ಆತ ‘ಬೀಡಿಗೀಡಿ ಕಟ್ಟಿಕೊಡೋದು ಬೇಡ. ರೊಕ್ಕ ತಕ್ಕೊಂಡು ಹೋಗು; ಯಾವಾಗಾದರೂ ವಾಪಸ್ ಕೊಡು’ ಅಂದ. ‘ಅದೆಲ್ಲ ಆಗೋದಿಲ್ಲ.. ನನಗೆ ರೊಕ್ಕ ಬೇಕೇ ಬೇಕು. ಎಷ್ಟು ಬೀಡಿ ಸುತ್ತಿ ಕೊಡಬೇಕು? ನೀನು ಮಜೂರಿ ಹೇಗೆ ಕೊಡುತ್ತೀಯ?’ ಎಂದು ಹಠ ಮಾಡಿದೆ.
ಕೊನೆಗೆ ಆತ ಅದೆಷ್ಟೋ ಬೀಡಿ ಸುತ್ತಿ ಹಾಕಲು ಹೇಳಿದ. ಹತ್ತು ಹೆಚ್ಚೇ ಸುತ್ತಿ ಹಾಕಿದ್ದೆನೆಂದು ನೆನಪು. ಬೀಡಿ ಸುತ್ತಲು ನನಗೆ ಚೆನ್ನಾಗಿಯೇ ಬರುತ್ತಿತ್ತು. ಒಂದಾಣೆ ತೆಗೆದುಕೊಂಡು ಹೊಳೆ ದಾಟಿ ಬಂದೆ. ಇದು ಆಗಿನ ಪರಿಸ್ಥಿತಿ.
ಕೇವಲ ಚಟವಾಗಿ ಅಂಟಿಕೊಂಡಿದ್ದ ಯಕ್ಷಗಾನವೂ ಎಷ್ಟರ ಮಟ್ಟಿಗೆ ಸಂಪಾದನೆ ತಂದುಕೊಟ್ಟೀತು? ಅದನ್ನೂ ನನಗೆ ತೋರಿಸಿಕೊಟ್ಟ ಒಂದು ಘಟನೆಯನ್ನು ಇಲ್ಲಿ ಹೇಳಿಬಿಡುವುದು ಒಳ್ಳೆಯದು. ಇದರಿಂದ ನಾನು ಸ್ವಂತ ಉದ್ಯೋಗಕ್ಕಾಗಿ ಏಕೆ ಹಾತೊರೆದೆ ಎಂಬುದು ಮನದಟ್ಟಾದೀತು.
ಇದೇ ಸಮಯದಲ್ಲಿ ನಮ್ಮ ತಾಲ್ಲೂಕಿನ ಹೊಸಾಡು ಎನ್ನುವಲ್ಲಿ ಕುರ್ಜು ಅಂತ ಒಂದು ಉತ್ಸವ ನಡೆಯುತ್ತಿತ್ತು. ಅದರ ಅಂಗವಾಗಿ ಒಂದು ರಾತ್ರಿ ಬಯಲಾಟವೂ ನಡೆಯುತ್ತಿತ್ತು. ನಮ್ಮ ಹಳೆಯ ಮೇಳದ್ದೇ ಒಂದು ಬಯಲಾಟ. ಮಂಜಪ್ಪ ಭಾಗವತರು, ಸದಾನಂದ ಹೆಗಡೆ, ಮೂಡ್ಕಣಿ ನಾರಾಯಣ ಹೆಗಡೆ ಮುಂತಾದವರೆಲ್ಲ ಭಾಗವಹಿಸುವ ಕಾಲ ಅದು. ಆ ಆಟ ನೋಡಲಿಕ್ಕಾಗಿ ನಾನು ಹೋಗಿದ್ದೆ. ‘ಕಾರ್ತವೀರ್ಯಾರ್ಜುನ’ ಆವತ್ತಿನ ಪ್ರಸಂಗ. ಆಟಕ್ಕೆ ಹೋದರೆ ಸುಮ್ಮನೆ ಚೌಕಕ್ಕೂ ಹೋಗುವುದು ಒಂದು ಚಟ. ನಾನು ಸುಮ್ಮನೆ ಚೌಕಕ್ಕೆ ಹೋಗಿದ್ದೆ. ‘ಒಂದು ಈಶ್ವರನ ವೇಷ ಮಾಡು… ಯಾರೂ ಇಲ್ಲ’ ಅಂದರು. ಆ ಕಾಲಕ್ಕೆಲ್ಲ ಮೇಳ, ಆಟ ಎಂದರೆ ಅಷ್ಟೇ. ಕರೆದಾಗ ಬರುತ್ತೇನೆಂದು ಮಾತು ಕೊಟ್ಟವರೆಲ್ಲ ಆಟಕ್ಕೆ ಬರುತ್ತಲೇ ಇರಲಿಲ್ಲ. ಆಟ ಅಂತ ಗೌಜಿ ಬಿದ್ದರೂ ಆ ಸ್ಥಳದಲ್ಲಿ ಆಟ ಆಗಿಯೇಬಿಡುತ್ತದೆಂಬ ನಿಯಮವಿಲ್ಲ. ಹೀಗೆಲ್ಲ ಒತ್ತು. ಒಟ್ಟಾರೆ ಅಸ್ತವ್ಯಸ್ತ. ಹೊತ್ತಿಗೆ ಸರಿಯಾಗಿ ಸಿಕ್ಕಿದ ನನ್ನ ಕೈಲಿ ‘ಈಶ್ವರನ ಮಾಡು’ ಎಂದನು. ಒಳ್ಳೆ ಚಳಿ ದಿನ. ಮೈಬಿಟ್ಟು ಈಶ್ವರನನ್ನು ಮಾಡಿಸಿಬಿಟ್ಟರು. ಚಳಿಯಿಂದ ಗಡಗಡ ನಡುಗತೊಡಗಿದೆ. ಬೆಳಿಗ್ಗೆ ಮಂಜಪ್ಪ ಭಾಗವತರು ಒಂದೂವರೆ ಆಣೆ ದುಡ್ಡು ಕೊಟ್ಟರು. ಅಂದರೆ ಅದು ಬಿಲ್ಲಿ. ಅದು ನನ್ನ ಸಂಬಳ. ನನ್ನ ಬದುಕಿನಲ್ಲಿ ನಾನು ಪಡೆದ ಮೊದಲ ಸಂಬಳ ಅದು. ತಾರೀ ದಾಟಲೂ ಸಾಕಾಗದ ಕಾಸು ಅದು. ಮನೆಗೆ ಹೋಗುವಾಗ ನಾನು ಮೂರು ತಾರಿ ದಾಟಬೇಕು. ವೇಷ ಮಾಡಿ ಸಂಬಳ ಪಡೆಯಲಿಕ್ಕಾಗಿ ಹೋದವನಲ್ಲ ನಾನು ಅನ್ನಿ. ಮೊದಲ ಸಲ ಹಳೇಮೇಳದ ವೇಷಧಾರಿಗಳ ಜತೆಗೆ ಕೆಲಸ ಮಾಡಿ ಸಂಬಳ ಪಡೆದೆ ಎಂಬುದಷ್ಟೇ ಹೆಮ್ಮೆ.
ಸೌಜನ್ಯ : ಅಭಿನವ, ಬೆಂಗಳೂರು. 9448804905
ಇದನ್ನೂ ಓದಿ : Greta Thunberg : ಅಭಿಜ್ಞಾನ ; ‘ಅಪ್ಪ, ನೀನು ನನ್ನನ್ನು ತಿದ್ದಬೇಡ, ಆ ಉದ್ಯಮಿಗಳನ್ನು ರಾಜಕಾರಣಿಗಳನ್ನು ತಿದ್ದು’
Published On - 9:47 am, Mon, 20 December 21