Greta Thunberg : ಅಭಿಜ್ಞಾನ ; ‘ಅಪ್ಪ, ನೀನು ನನ್ನನ್ನು ತಿದ್ದಬೇಡ, ಆ ಉದ್ಯಮಿಗಳನ್ನು ರಾಜಕಾರಣಿಗಳನ್ನು ತಿದ್ದು’

Autism Spectrum : ‘ಆಟಿಸಂ ಸ್ಪೆಕ್ಟ್ರಮ್’ ತೀರ ಉಗ್ರ ಸ್ವರೂಪದ್ದೇನಲ್ಲ. ತನ್ನ ಲೋಕವೇ ಬೇರೆ ಎಂಬಂತೆ ಏನನ್ನೋ ಯೋಚಿಸುತ್ತ ಕೂತಲ್ಲೇ ಮುಗುಮ್ಮಾಗಿ ಕೂರುವ ಮನೋವಿಕಲ್ಪ ಅಷ್ಟೆ. ತೊಂದರೆ ಕೊಡುವ ರೋಗ ಅಲ್ಲ. ಅಂಥವರ ಮಿದುಳು ಭಾರೀ ಚುರುಕು ಇರುತ್ತದಂತೆ. ಜಗತ್ತಿನ ಅನೇಕ ಖ್ಯಾತ ವ್ಯಕ್ತಿಗಳು ಹದಿಹರಯದಲ್ಲಿ ಇಂಥ ತೊಂದರೆ ಅನುಭವಿಸಿದ್ದಾರೆ. ‘‘ತಂತಾನೇ ಸರಿಯಾಗುತ್ತಾಳೆ’’ ಎಂದು ಅಪ್ಪಅಮ್ಮನಿಗೆ ಡಾಕ್ಟರು ವಿವರಿಸಿದರು.

Greta Thunberg : ಅಭಿಜ್ಞಾನ ; ‘ಅಪ್ಪ, ನೀನು ನನ್ನನ್ನು ತಿದ್ದಬೇಡ, ಆ ಉದ್ಯಮಿಗಳನ್ನು ರಾಜಕಾರಣಿಗಳನ್ನು ತಿದ್ದು’
ಸ್ವೀಡಿಶ್ ಮೂಲದ ಪರಿಸರವಾದಿ ಗ್ರೇತಾ ಥನ್​ಬರ್ಗ್
Follow us
ಶ್ರೀದೇವಿ ಕಳಸದ
|

Updated on:Dec 18, 2021 | 8:59 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಪತ್ರಕರ್ತ ನಾಗೇಶ ಹೆಗಡೆ ಅವರ ‘ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ – ಗ್ರೇತಾ ಥನ್​ಬರ್ಗ್’ ಕೃತಿಯಿಂದ.

*

‘ಅವನಿ’ ಎಂದರೆ ಭೂಮಿ. ‘ಅವನಿ’ಗೆ ಕಾಯಿಲೆ ಬಂದಿದ್ದು ಗೊತ್ತಾಗುತ್ತಲೇ ಹನ್ನೊಂದನೇ ವರ್ಷದಲ್ಲಿ ಗ್ರೇತಾ ಮಾತು ಕಡಿಮೆ ಮಾಡಿದಳು. ಕ್ರಮೇಣ ಅವಳಿಗೆ ಖಿನ್ನತೆ ಆವರಿಸತೊಡಗಿತ್ತು. ಊಟ ಕಮ್ಮಿ; ಮಾತೂ ಕಮ್ಮಿ. ಅಮ್ಮನಿಗೆ ಭಾರೀ ಚಿಂತೆ. ಮಗಳು ದಿನದಿನಕ್ಕೆ ಕೃಶಳಾಗುತ್ತಾ ಹೋಗುತ್ತಿರುವಾಗ ಯಾವ ಅಮ್ಮನಿಗೆ ಚಿಂತೆ ಇರುವುದಿಲ್ಲ ಹೇಳಿ? ಹೇಗಾದರೂ ಅವಳಿಗೆ ಏನನ್ನಾದರೂ ತಿನ್ನಿಸಬೇಕೆಂದು ಅಮ್ಮ, ಅಪ್ಪ, ತಂಗಿ ಸತತ ಯತ್ನಿಸುತ್ತಾರೆ. ಅವಳಿಗೆ ಇಷ್ಟವಿದ್ದ ಆಹಾರವನ್ನೇ ತಯಾರಿಸಿದರೂ ಮಗಳಿಗೆ ಆಸಕ್ತಿ ಇಲ್ಲ. ಡಾಕ್ಟರನ್ನು ಕೇಳಿ, ಊಟದ ರುಚಿ ಹೆಚ್ಚಿಸುವ ಚಿಕ್ಕಪುಟ್ಟ ಔಷಧಗಳನ್ನು ತಂದರೂ ಪ್ರಯೋಜನ ಇಲ್ಲ. ಅಪ್ಪನ ಮೆಲುದನಿಯ ಒತ್ತಾಯ, ಆಮಿಷ, ಅಮ್ಮನ ಅಳು, ಬೆದರಿಕೆ ಯಾವುದೂ ಫಲ ಕೊಡುವುದಿಲ್ಲ. ಸಾಕಾಗಿ, ಅಮ್ಮ ಒಂದು ಹಾಳೆಯ ಮೇಲೆ ಅವಳ ಊಟದ ದಿನಚರಿಯನ್ನು ಗೋಡೆಗೆ ತಗುಲಿ ಹಾಕಿ, ದಿನವೂ ಮಗಳ ತಿಂಡಿ ವೈಖರಿಯನ್ನು ದಾಖಲಿಸುತ್ತ ಹೋಗುತ್ತಾಳೆ. ‘ಬೆಳಗಿನ ತಿಂಡಿ: ಅರ್ಧ ಬಾಳೆಹಣ್ಣು: 53 ನಿಮಿಷ’… ರಾತ್ರಿ ಊಟ: ಒಂದು ಅವಕಾಡೊ (ಬೆಣ್ಣೆಹಣ್ಣು), 25 ಗ್ರಾಮ್ ಅನ್ನ, 30 ನಿಮಿಷ’. ಹೀಗೆ.

ತೂಕ ಹೆಚ್ಚಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಮಗಳು ದಿನದಿನಕ್ಕೆ ಸಣಕಲು ಆಗುತ್ತಿದ್ದಾಗ ಮನೋವಿಜ್ಞಾನಿಗಳ ಬಳಿ ಮಗಳನ್ನು ಕರೆದೊಯ್ದರು. ಪರೀಕ್ಷೆ ಮಾಡಿದ ಡಾಕ್ಟರು, ಇವಳಿಗೆ ‘ಆಸ್ಪರ್ಗರ್ಸ್ ಸಿಂಡ್ರೋಮ್’ ಎಂಬ ಕಾಯಿಲೆ ಬಂದಿದೆ ಎಂದರು. ಅದೊಂದು ವಿಚಿತ್ರ ಕಾಯಿಲೆ. ಅಂಥ ಮಕ್ಕಳು ಯಾರೊಂದಿಗೂ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲಾರರು; ಮನಸ್ಸು ಬಿಚ್ಚಿ ಮಾತಾಡಲಾರರು. ಮಾತಾಡುವಾಗಲೂ ಮುಖದಲ್ಲಿ ಯಾವುದೇ ಭಾವನೆಯನ್ನಾಗಲೀ ಅಂಗಾಂಗಗಳ ಹಾವಭಾವವನ್ನಾಗಲೀ ತೋರಿಸಲಾರರು. ನಗುವಂತೂ ಇಲ್ಲೇ ಇಲ್ಲ. ಮಾತಾಡುವಾಗ ಹುಬ್ಬೇರಿಸುವುದು ಅಥವಾ ಕಣ್ಣು ಮಿಟುಕಿಸುವುದು ಯಾವುದೂ ಇಲ್ಲ. ರೋಬಾಟ್ ಮಾತಾಡಿದ ಹಾಗೇ. ಅಮ್ಮ ಈಗ ಕೊಂಚ ಸಮಾಧಾನದ ನಿಟ್ಟುಸಿರು ಬಿಟ್ಟರು. ಏಕೆ, ಚಿಂತೆ ಜಾಸ್ತಿ – ಆಗಬೇಕಿತ್ತಲ್ಲವೆ? ಅದು ಹಾಗಲ್ಲ. ಇಷ್ಟು ದಿನ ಅವಳಿಗೆ ಏನಾಗುತ್ತಿದೆ ಎಂಬುದೇ ಮನೆಯವರಿಗೆ ಗೊತ್ತಾಗುತ್ತಿರಲಿಲ್ಲ. ಈಗ ಕಾಯಿಲೆಯ ಹೆಸರು ಗೊತ್ತಾಗಿದೆ; ಅದಕ್ಕೆ – ಔಷಧವೂ ಇದೆ. ವೈದ್ಯರ ಸಹಾಯ ಸಿಗುತ್ತದೆ. ಹಾಗಾಗಿ ಸಮಾಧಾನ.

ಆದರೆ ಡಾಕ್ಟರು ನೀಡಿದ ಔಷಧ ತೀರ ದುರ್ಬಲವಾಗಿತ್ತೊ ಏನೊ. ಅಷ್ಟೇನೂ ಪ್ರಯೋಜನ ಆಗಲಿಲ್ಲ. ಬದಲಿಗೆ ಇವಳಿಗೆ ಓಸಿಡಿ ಎಂಬ ಗೀಳು ಕಾಯಿಲೆಯೂ ಸೇರಿಕೊಂಡಿತು. ಮಾಡಿದ್ದನ್ನೇ ಮಾಡುವುದು, ಪದೇಪದೇ ಕೈತೊಳೆಯುವುದು, ಉಜ್ಜಿದ್ದನ್ನೇ ಉಜ್ಜುತ್ತ ಕೂರುವುದು, ಬರೆದಿದ್ದನ್ನು ಹೊಡೆದು ಹಾಕಿ ಮತ್ತೆ ಅದನ್ನೇ ಬರೆಯುವುದು. ಖಿನ್ನಳಾಗಿ ಗಂಟೆಗಟ್ಟಲೆ ಒಂದೇ ಕಡೆ ಕೂರುವುದು ಈ ಕಾಯಿಲೆಯ ಲಕ್ಷಣ. ಒಮ್ಮೊಮ್ಮೆ ದಿನಗಟ್ಟಲೆ ಯಾರೊಂದಿಗೂ ಏನೂ ಮಾತಾಡುತ್ತಿರಲಿಲ್ಲ. ಮನಸ್ಸು ಬಂದರೆ ಎಲ್ಲ ಹುಡುಗಿಯರಂತೆ ಮಾತು. ಮೂಡ್ ಇಲ್ಲ ಅಂದರೆ ಯಾರ ಯಾವ ಪ್ರಶ್ನೆಗೂ ಉತ್ತರವಿಲ್ಲ. ಕ್ಲಾಸಿನಲ್ಲಿ ಇಡೀ ದಿನ ಮೂಕಿ.

ಇನ್ನೊಬ್ಬ ಮನೋವೈದ್ಯರಿಗೆ ತೋರಿಸಿದಾಗ ಅವರು, ಗ್ರೇತಾಗೆ ಮೂರನೆಯ ಕಾಯಿಲೆಯೂ ಇದೆ ಎಂದರು. ಅದಕ್ಕೆ ‘ಇಚ್ಛಾವರ್ತಿ ಮೂಕತನ’ ಎಂಬ ಹೆಸರನ್ನೂ ಹೇಳಿದರು. ಈ ಮೂರು ಕಾಯಿಲೆಗಳೂ ಮನಸ್ಸಿಗೆ ಸಂಬಂಧಿಸಿದ್ದು. ಅದು ‘ಆಟಿಸಂ’ ಎಂಬ ಕಾಯಿಲೆಗುಚ್ಛದ ಕ್ಷೀಣ ಲಕ್ಷಣಗಳು. ಇಂಗ್ಲಿಷ್‌ನಲ್ಲಿ ಅವೆಲ್ಲ ಕಾಯಿಲೆಗಳನ್ನೂ ಸೇರಿಸಿ ‘ಆಟಿಸಂ ಸ್ಪೆಕ್ಟ್ರಮ್’ (ಅಂದರೆ ರೋಹಿತ) ಎನ್ನುತ್ತಾರೆ. ಯಾವುದೂ ತೀರ ಉಗ್ರ ಸ್ವರೂಪದ್ದೇನಲ್ಲ. ತನ್ನ ಲೋಕವೇ ಬೇರೆ ಎಂಬಂತೆ ಏನನ್ನೋ ಯೋಚಿಸುತ್ತ ಕೂತಲ್ಲೇ ಮುಗುಮ್ಮಾಗಿ ಕೂರುವ ಮನೋವಿಕಲ್ಪ ಅಷ್ಟೆ. ತೊಂದರೆ ಕೊಡುವ ರೋಗ ಅಲ್ಲ. ಅಂಥವರ ಮಿದುಳು ಭಾರೀ ಚುರುಕು ಇರುತ್ತದಂತೆ. ಜಗತ್ತಿನ ಅನೇಕ ಖ್ಯಾತ ವ್ಯಕ್ತಿಗಳು ಹದಿಹರಯದಲ್ಲಿ ಇಂಥ ತೊಂದರೆ ಅನುಭವಿಸಿದ್ದಾರೆ, “ಕ್ರಮೇಣ ತಂತಾನೇ ಸರಿಯಾಗುತ್ತಾಳೆ’’ ಎಂದು ಅಪ್ಪಅಮ್ಮನಿಗೆ ಡಾಕ್ಟರು ವಿವರಿಸಿ ತಿಳಿಸಿದರು. ಖಿನ್ನತೆ ಕಡಿಮೆಯಾಗುವಂತೆ ಸೆಟ್ರಾಲೈನ್ ಮತ್ತೂ ಕೆಲವು ಮಾತ್ರೆಗಳನ್ನು ಔಷಧಗಳನ್ನು ಕೊಟ್ಟರು. ಮಗಳನ್ನು ಗೆಲುವಾಗಿಡಲು, ಅವಳಿಗೆ ಚೈತನ್ಯ ತುಂಬಲು ಹಿರಿಯರು ಏನೇನು ಚಟುವಟಿಕೆ ಮಾಡಬೇಕು ಎಂದೆಲ್ಲ ತಿಳಿಸಿದರು. ‘ಇದೇನೂ ಗಂಭೀರ ಕಾಯಿಲೆ ಮಾಡಬೇಡಿ’ ಎಂದರು ಡಾಕ್ಟರು.

Abhijnana excerpt of Swedish Environmental activist Greta Thunberg by Nagesh Hegde Published by Bhoomi Books

ಲೇಖಕ ನಾಗೇಶ ಹೆಗಡೆ

ಅದೇ ವೇಳೆಗೆ, ಅಂದರೆ 2015ರಲ್ಲಿ ಪ್ಯಾರಿಸ್ ನಗರದಲ್ಲಿ ಒಂದು ಭಾರೀ ಜಾಗತಿಕ ಮೇಳ ನಡೆಯಿತು. ಭೂಮಿಗೆ ಬಂದ ಕಾಯಿಲೆಗೆ ಔಷಧ ಹುಡುಕಲೆಂದು ಜಗತ್ತಿನ ಎಲ್ಲ ರಾಷ್ಟ್ರಗಳ ನಾಯಕರು ಅಲ್ಲಿಗೆ ಬಂದು, ಐದು ದಿನಗಳ ಕಾಲ ಶೃಂಗಸಭೆ ನಡೆಸಿ, ಭೂಮಿಯ ಸಂಕಷ್ಟಗಳ ನಿವಾರಣೆ ಕುರಿತು ಚರ್ಚೆ ಮಾಡಿದರು ವಾಯುಮಂಡಲ ಬಿಸಿಯಾಗುತ್ತಿದೆ, ನೆಲವೂ ಬಿಸಿಯಾಗುತ್ತಿದೆ, ಇಡೀ ಭೂಮಿಯ ಕಾವು ಏರುತ್ತಿದೆ ಎಂದು ವಿಜ್ಞಾನಿಗಳು ಚಿತ್ರಗಳ ಮೂಲಕ ವಿವರಿಸಿದರು. ಸಹಜವಾಗಿಯೇ ಗ್ರೇತಾ ಆ ಎಲ್ಲ ವರದಿಗಳನ್ನೂ ದಿನದಿನವೂ ನೋಡುತ್ತಿದ್ದಳು. ಪತ್ರಿಕೆಗಳಲ್ಲಿ ತಜ್ಞರ ಅಭಿಪ್ರಾಯಗಳನ್ನೂ ಓದುತ್ತಿದ್ದಳು. ಪರಿಸರ ಸಂಘಟನೆಗಳ ಹೋರಾಟಗಳ ಬಗ್ಗೆ ಓದುತ್ತಿದ್ದಳು. ಎಲ್ಲರು ಸೇರಿ ಭೂಮಿಗೆ ಎಂಥದೋ ಚಿಕಿತ್ಸೆ ಮಾಡಲಿದ್ದಾರೆ, ಭೂಮಿ ಸರಿ ಹೋಗುತ್ತದೆ ಎಂಬ ನಿರೀಕ್ಷೆಯಲ್ಲಿ ಅವಳ ಕಾಯಿಲೆಗಳೆಲ್ಲ ಕ್ರಮೇಣ ವಾಸಿಯಾಗುತ್ತ ಬಂದವು.

ಗ್ರೇತಾ ತುಸು ಗೆಲುವಾದಳು. ಊಟ ಆದರೆ ತೂಕ ಮಾತ್ರ ಹೆಚ್ಚಾಗಲಿಲ್ಲ. ಶಾಲೆಗೆ ರಜೆ ಹಾಕಿದ್ದರಿಂದ ಮನೆಯಲ್ಲೇ ಕೂತು ಅವಳು ತನ್ನ ಪಾಡಿಗೆ ಏನನ್ನೋ ಬರೆಯುತ್ತಿದ್ದಳು. ಅವೆಲ್ಲವೂ ಭೂಮಿಯ ಸಂಕಟದ ವಿಷಯಗಳೇ ಆಗಿದ್ದವು. ಭೂಮಿಯ ತಾಪಮಾನ ಏರಿಕೆಯ ಬಗ್ಗೆ ಭಾಷಣವನ್ನು ಬರೆಯುತ್ತಿದ್ದಳು. ಅಪ್ಪನಿಗೆ ತೋರಿಸುತ್ತಿದ್ದಳು. ಅವಳ ಅಂಥ ಬರೆವಣಿಗೆಗಳಲ್ಲಿ ಉದ್ಯಮಿಗಳನ್ನು, ರಾಜಕಾರಣಿಗಳನ್ನು, ತೀವ್ರವಾಗಿ ಟೀಕಿಸುತ್ತಿದ್ದಳು ಆ ಬರಹದಲ್ಲಿದ್ದ ಕಟು ಮಾತುಗಳನ್ನು ಅಪ್ಪ ಅಲ್ಲಲ್ಲಿ ತಿದ್ದುತ್ತಿದ್ದ. ಇಬ್ಬರ ಮಧ್ಯೆ ವಾಗ್ವಾದ ಆಗುತ್ತಿತ್ತು. ‘ನನ್ನನ್ನು ತಿದ್ದಬೇಡ. ಆ ನಾಯಕರನ್ನು ತಿದ್ದು’ ಎನ್ನುತ್ತ ಇವಳು ಅಪ್ಪನಿಗೇ ಗೊತ್ತಿಲ್ಲದ ಅದೆಷ್ಟೊ ಅಂಕಿ ಅಂಶಗಳನ್ನು ಪತ್ರಿಕೆಗಳಿಂದ ಎತ್ತಿ ತೋರಿಸುತ್ತಿದ್ದಳು. ಅಮ್ಮ ಅಪ್ಪನ ಎದುರು ರಾಜಕಾರಣಿಗಳ ಪೊಳ್ಳು ಮಾತುಗಳ ಅಣಕು ಭಾಷಣ ಮಾಡುತ್ತಿದ್ದಳು. ಅದೆಷ್ಟೋ ವಾರಗಳಿಂದ ಮಾಯವಾಗಿದ್ದ ನಗುವಿನ ಕ್ಷಣಗಳು ಮನೆಯಲ್ಲಿ ಮತ್ತೆ ಕುಲುಕಾಡಿದವು.

ಶಾಲೆಯಲ್ಲೂ ಅಷ್ಟೇ. ಆಟ ಪಾಟ ಕುಣಿದಾಟಗಳಲ್ಲಿ ಎಲ್ಲ ಹುಡುಗಿಯರಷ್ಟು ಚುರುಕಾಗಿ ಇಲ್ಲದಿದ್ದರೂ ನಿಯಮಿತವಾಗಿ ಕ್ಲಾಸಿನ ಚರ್ಚೆಗಳಲ್ಲಿ ಭಾಗವಹಿಸತೊಡಗಿದಳು. ಮನೆಯಲ್ಲಿ ಊಟ, ತಿಂಡಿ ಮಾತುಕತೆಗಳೆಲ್ಲ ಮಾಮೂಲಿನ ಮಟ್ಟಕ್ಕೆ ಬಂತು.

ಸೌಜನ್ಯ : ಭೂಮಿ ಬುಕ್ಸ್. 9449177628​

ಇದನ್ನೂ ಓದಿ : Suad Amiry : ಅಭಿಜ್ಞಾನ ; ‘ನಾನು ಮರ್ಯಾದಸ್ಥ ಕುಟುಂಬದಿಂದ ಬಂದ ಹುಡುಗಿ, ನಾವು ಹೀಗೆಲ್ಲಾ ಮಾಡುವುದು ಬೇಡ!’

Published On - 8:52 am, Sat, 18 December 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ