Poetry : ಅವಿತಕವಿತೆ ; ಕೆಂಪುಮಣ್ಣಿನ ಬಯಲು ತೆರೆದಿತ್ತು ಬೀಸುವ ಗಾಳಿ ಬೀಸುತ್ತಲೇ ಇತ್ತು

Poem : ‘ತಾರುಣ್ಯದ 'ಬಿಗು' ವನ್ನು ಕಳೆದುಕೊಂಡು 'ಸಡಿಲ'ಗೊಂಡಾಗ ಮಾತ್ರ ಎಲ್ಲವನ್ನೂ ‌ಒಳಗೊಳ್ಳುವ ಇನ್ನೊಂದು ತುದಿ ಸಿಗಲು ಸಾಧ್ಯವೇನೋ‌ ಗೊತ್ತಿಲ್ಲ. ಆದರೆ ಬಿಗಿಮಾಡಿದಾಗ ನಾವು ಪಡೆದುಕೊಳ್ಳುವುದೇನು? ಸಡಿಲ ಮಾಡಿದಾಗ ನಾವು ಕಳೆದುಕೊಳ್ಳುವುದೇನು? ಎಂಬುದನ್ನು ವಿಮರ್ಶೆಗೊಡ್ಡಲೇಬೇಕು. ನಮ್ಮ ಸಾಹಿತ್ಯ‌ ಪರಂಪರೆಯಲ್ಲಿಯೇ ಇದಕ್ಕೆ ಉತ್ತರಗಳಿವೆ ಎಂಬುದನ್ನೂ ನಾವು ಮರೆಯುವಂತಿಲ್ಲ.‘ ಆರಿಫ್ ರಾಜಾ,

Poetry : ಅವಿತಕವಿತೆ ; ಕೆಂಪುಮಣ್ಣಿನ ಬಯಲು ತೆರೆದಿತ್ತು ಬೀಸುವ ಗಾಳಿ ಬೀಸುತ್ತಲೇ ಇತ್ತು
Follow us
ಶ್ರೀದೇವಿ ಕಳಸದ
|

Updated on:Dec 12, 2021 | 12:18 PM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಹಿರಿಯ ಪತ್ರಕರ್ತ, ಕವಿ ಜಿ.ಪಿ. ಬಸವರಾಜು ಅವರ ಅವರ ಕವಿತೆಗಳು ನಿಮ್ಮ ಓದಿಗೆ. 

*

ಜಿ. ಪಿ. ಬಸವರಾಜು; ತಕ್ಷಣ ನನಗೆ ನೆನಪಾಗುವುದು, ಕೇವಲ ವಿಐಪಿಗಳಿಗೆ ಮಾತ್ರ ಸೀಮಿತವಾಗಿದ್ದ ‘ಮಯೂರ’ ಮಾಸಿಕದಲ್ಲಿ, ಐಡೆಂಟಿಟಿ ಇಲ್ಲದ, ಹಳ್ಳಿ-ಅರೆ ಪಟ್ಟಣಗಳ‌ ‘ಹಿಂದುಳಿದ ಸಾಮಾಜಿಕ’ ಹಿನ್ನೆಲೆಯ‌ ಹಣೆಪಟ್ಟಿಯನ್ನು ಹೊತ್ತುಕೊಂಡು ಬಂದ ನನ್ನ ತಲೆಮಾರಿನ ನೂರಾರು ಬರಹಗಾರರಿಗೆ ರಾಜ್ಯಮಟ್ಟದಲ್ಲಿ ವೇದಿಕೆಯನ್ನು ಒದಗಿಸಿಕೊಟ್ಟವರು, ಪತ್ರಕರ್ತರಾಗಿ ಅವರ ಸಾಧನೆ ಅನನ್ಯ.

‘ಒಂದು ಗುಲಾಬಿ’ ಅವರಿಗೆ‌ ಹೆಸರು ತಂದು ಕೊಟ್ಟ ಕಥಾ ಸಂಕಲನ. 1982 ರಲ್ಲಿ ಪ್ರಕಟವಾದ ಅವರ ಸಂಪಾದಿತ‌‌ ಕೃತಿ ‘ಲುಷನ್ ಕತೆಗಳು’ ತಾಜಾತನ‌ ನನಗಿನ್ನೂ ಮರೆಯಲಾಗಿಲ್ಲ. ಇಲ್ಲಿನ‌ ಕವಿತೆಗಳ ಬಗ್ಗೆ ಹೇಳುವುದಾದರೆ, ಒಂದು ವಯಸ್ಸು ದಾಟಿದ ಮೇಲೆ, ನಮ್ಮ ನೆನಪು, ಕಾಣುವ ನೋಟ‌, ಆಡುವ ಮಾತು ಹಾಗೂ ಒಟ್ಟಾರೆ ಜೀವನಾನುಭವ ಎಲ್ಲವನ್ನೂ ತಾತ್ವಿಕವಾಗಿ ದಕ್ಕಿಸಿಕೊಳ್ಳಲಾರಂಭಿಸುತ್ತೇವೆ ಅನಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಇಲ್ಲಿನ‌‌ ರಚನೆಗಳನ್ನೇ ಗಮನಿಸಬಹುದು. ಏಸು ಗಾಂಧಿ ಅಲ್ಲಮ ಬರೀ ವ್ಯಕ್ತಿ ಚಿತ್ರಗಳಲ್ಲಿ ಇಲ್ಲಿ. ಅರುಣಾಚಲದಂತಹ ಲ್ಯಾಂಡ್​ಸ್ಕೇ ಪನ್ನೂ ನಾವು ಕೇವಲ ಭೂ ವಿವರವಾಗಿ ನೋಡಲು ಸಾಧ್ಯವಾಗುವುದಿಲ್ಲ. ತಾರುಣ್ಯದ ‘ಬಿಗು’ ವನ್ನು ಕಳೆದುಕೊಂಡು ‘ಸಡಿಲ’ಗೊಂಡಾಗ ಮಾತ್ರ ಎಲ್ಲವನ್ನೂ ‌ಒಳಗೊಳ್ಳುವ ಇನ್ನೊಂದು ತುದಿ ಸಿಗಲು ಸಾಧ್ಯವೇನೋ‌ ಗೊತ್ತಿಲ್ಲ. ಆದರೆ ಬಿಗಿಮಾಡಿದಾಗ ನಾವು ಪಡೆದುಕೊಳ್ಳುವುದೇನು? ಸಡಿಲ ಮಾಡಿದಾಗ ನಾವು ಕಳೆದುಕೊಳ್ಳುವುದೇನು? ಎಂಬುದನ್ನು ವಿಮರ್ಶೆಗೊಡ್ಡಲೇಬೇಕು. ನಮ್ಮ ಸಾಹಿತ್ಯ‌ ಪರಂಪರೆಯಲ್ಲಿಯೇ ಇದಕ್ಕೆ ಉತ್ತರಗಳಿವೆ ಎಂಬುದನ್ನೂ ನಾವು ಮರೆಯುವಂತಿಲ್ಲ. ಆರಿಫ್ ರಾಜಾ, ಕವಿ

*

ಅಲ್ಲಮ

ಬರೆಯಲೂ ಇಲ್ಲ ನೀನು, ಅಲ್ಲಮ, ಅಳಿಸಲೂ ಇಲ್ಲ ಬರೆದ ಲಿಪಿಯನ್ನು, ನಿನ್ನ ಸೊಲ್ಲು ಪಲ್ಲವಿಸಿದಾಗ ಎದ್ದು ನಿಂತವು ಬೃಂದಾವನ, ನೀನು ನಡೆದ ರಭಸಕ್ಕೆ ತೆರೆದುಕೊಂಡಿತು ನಿನ್ನ ಹಾದಿ ಕಾಡುಕಣಿವೆಗಳಲ್ಲಿ

ಎತ್ತಿನಿಲ್ಲಿಸಿದೆ ನೀನು ಆಗಸವನ್ನು, ಕಟ್ಟಿನಿಲ್ಲಿಸಿದೆ ನೀನು ಭೂಮಿಯನ್ನು ಮತ್ತೆ ನೀನು ಅನುಭವ ಮಂಟಪದಲ್ಲಿ ಆಸಗವ ಬೀಳಿಸಿದೆ, ತುಂಡುಮಾಡಿದೆ ಭೂಮಿಯನ್ನು, ಬಿಡಿಸಿ ಹೇಳಿ  ಈ ಒಗಟನ್ನು ಎಂದು ಸವಾಲು ಎಸೆದೆ ಬಲ್ಲಿದರ ಮುಂದೆ

ನಿನ್ನ ಮಾತುಗಳು ತಿಳಿದರೂ ತಿಳಿಯದಂತೆ ಅರಿತರೂ ಅರಿಯದಂತೆ, ತಲೆಕೊಡವಿ ನಿಂತವು ಬಾನೆತ್ತರಕೆ ಚಾಚಿಕೊಂಡು, ಬೆಟ್ಟ ಜರಿದಿತ್ತು, ಮೈದುಂಬಿದ ನದಿ ಬತ್ತಿ ಬೆತ್ತಲಾಗಿತ್ತು, ಭೂಮಂಡಲವ ಸುತ್ತಿಕೊಂಡ ಗಾಳಿ ಮರೆಯಾಗಿ ಉಸಿರು ಉಬ್ಬಸವಾಗಿತ್ತು ಅಲ್ಲಮಾ, ನೀನು ಇದ್ದೆಯೊ ಇಲ್ಲವೊ, ನಿನ್ನಿರವು ಒಗಟಾಗಿತ್ತು ಲೋಕದ ಮಂದಿಗೆ

2

ಸಂತೆಯಲಿ ನಿಂತ ಅಲ್ಲಮ ಬೆರಗಾದ ಕೊಳ್ಳುವುದು ಮಾರುವುದು ಎಲ್ಲೆಲ್ಲು ಜನ ಮುಗೆಬಿದ್ದು ಮುಳುಗಿದ್ದರು ಅದರಲ್ಲಿ ಮಾರುವುದಿರಲಿಲ್ಲ ಏನೂ ಅಲ್ಲಮನಿಗೆ ಕೊಳ್ಳುವುದೂ ಇರಲಿಲ್ಲ ಏನೂ ನಕ್ಕ ಅಲ್ಲಮ ಸಂತೆ ಬೆದರುವ ಹಾಗೆ

ಇಬ್ಬಾಯ ಖಡ್ಗದಲಿ ಸದ್ದುಗದ್ದಲವ ತುಂಡರಿಸಿ ಎದೆಯೊಳಗಿನ ಏಕಾಂತವ ಹೊರಗೆಳೆದು ಕತ್ತಲೆಯ ಸೀಳಿ, ಬೆಳಕಿನ ಬಯಲಿಗೆ ಹೆಜ್ಜೆಹಾಕಿದ ನಿರಾಳವಾಗಿ

*

ಮೋಹನದಾಸ

ಕಿರೀಟವೇನೂ ಇರಲಿಲ್ಲ ಅವನಿಗೆ ಝಗಮಗಿಸುವ ಉಡುಪೂ ಇರಲಿಲ್ಲ ಬೀದಿ ತುಂಬಿತ್ತು  ಅವನ ಕಾಣಲು ಒಬ್ಬರ ಮೇಲೆ ಒಬ್ಬರು ಬಿದ್ದು, ಹೂಗಳು ಬಂದು ಬೀಳುತ್ತಿದ್ದವು ಅವನ ಮೇಲೆ

ಅವನ ಹತ್ತಿರ ಬರಲು, ಅವನ ಮುಟ್ಟುಲು ಅವನ ಮುಗುಳು ನಗೆಯನ್ನು ಕಣ್ಣಿನ ಹೊಳಪನ್ನು ಕಾಣಲು ಹತ್ತಿರ ಹತ್ತಿರಕ್ಕೆ ನುಗ್ಗುತ್ತಿದ್ದರು ಜನ ಅವನು ಬಿರುಸಾಗಿಯೇ ನಡೆಯುತ್ತಿದ್ದ, ಕೈಚಾಚಿ ಮುಟ್ಟುತ್ತಿದ್ದ, ಹೂಹಾರಗಳಿಗೆ ಕೊರಳೊಡ್ಡುತ್ತಿದ್ದ

ಅವನು ನಡೆದ ಹಾದಿಯ ಮಣ್ಣನ್ನೆತ್ತಿ ಕಣ್ಣಿಗೊತ್ತಿ ಹೆಜ್ಜೆ ಗುರುತಿಗೆ ಮುತ್ತಿಕ್ಕಿ ತುಂಬಿದ ಕಣ್ಣುಗಳಿಂದ ತುಳುಕುತ್ತಿದ್ದ ಹನಿಗಳ ಒರೆಸಿಕೊಳ್ಳದೆ ಜನರು ನೋಡಿದರು, ಎದೆಗಳ ತುಂಬಿದ್ದ ನೋವು ಮರೆತು

ಎಲ್ಲಿಂದಲೋ ಯಾರೋ ಕೂಗಿದರು :’ ಮೋಹನಾ’ ‘ಏ ಮೋನಾ’, ನಿಂತನವನು, ಹುಡುಕಿದನು ಧ್ವನಿ ಬಂದ ಜಾಗವನು, ಗುಂಪಲ್ಲಿ ತೂರಿ, ನಡೆದನಲ್ಲಿಗೆ ನಿಂತು ನೋಡಿದರೆ ಅವನೇ ಬಾಲ್ಯದ ಗೆಳೆಯ, ನಗೆ ಅರಳಿ, ಕಣ್ಣುಗಳು ಬೆಳಗಿ ಅಪ್ಪಕೊಂಡನು ಅವನ

ಮಣ್ಣು ನಕ್ಕಿತು, ಮರಗಿಡಗಳು ತೊನೆದಾಡಿದವು ಹಕ್ಕಿ ಹಾಡಿದವು, ಬಾಲ್ಯದ ಹೊಳೆಗಳು ತುಳುಕಾಡಿ ನೆನಪಿನ ಅಲೆಗಳು ಬಂದು ಬಂದು ಬಡಿದವು, ಕಾಲ ಕೂಡಿತ್ತು ಮತ್ತೆ, ನೆಲದ ಮಕ್ಕಳ ಒಂದು ಮಾಡಿ

ದೇವಮಾನವನಲ್ಲ ಇವನು, ಈ ಮಣ್ಣು ಹಡೆದ ಮಗ ಅರೆಹೊಟ್ಟೆಯಲಿ ಬೆಂದವನು, ನೊಂದು ನಲಿದವನು ತನ್ನ ಹಾದಿಯಲಿ ದಿಟ್ಟ ನಡೆದವನು, ಸತ್ಯಬಿಡದವನು ಮೋಹನನೊ, ಮೋಹನ ದಾಸನೊ, ಕರಮಚಂದನೊ

ಊರುಗೋಲು ತಾಕಿತ್ತು ಮಣ್ಣಿಗೆ, ಪ್ರೀತಿ ತುಳುಕಿತ್ತು ಎದೆಯಿಂದ ಎದೆಗೆ, ಹಟವಿತ್ತು, ಸಿಟ್ಟಿಲ್ಲ ಸೆಡವಿಲ್ಲ ಕೇಡಿಲ್ಲದ ಕರುಣಾಳು ಗೆದ್ದು ವೈರಿಗಳನು, ಕುಳಿತಿದ್ದ ಜನರ ಎದೆಸಿಂಹಾಸನಗಳ ಮೇಲೆ ಬಿಗುಮಾನವಿಲ್ಲದೆ

*

Avithakavithe Poetry Column by Kannada Journalist poet GP Basavaraju

ಬಸವರಾಜು ಅವರ ಕೃತಿಗಳು

ಅರುಣಾಚಲ

ಕೆಂಪುಮಣ್ಣಿನ ಬಯಲು ತೆರೆದಿತ್ತು ಬೀಸುವ ಗಾಳಿ ಬೀಸುತ್ತಲೇ ಇತ್ತು ಮುಗಿಲಿಗೆ ಮುಖವೆತ್ತಿ ನಿಂತೇ ಇತ್ತು ಅರುಣಾಚಲ ಚೆಲುವು ಚೆಲುವಾಗಿ

ಗಿಡಮರ ಪೊದೆ ಬಳ್ಳಿಗಳ ಸಣ್ಣ ಕಳ್ಳುಬಳ್ಳಿ ಒಳಗೆ ಕಡುಗತ್ತಲೆಯ ಗುಹೆಗಳು, ಹೀಗೆ ಲೋಕ ಸಂಚಾರ ಹೊರಟ ಯತಿಗಳು ಯಾತ್ರೆಮಧ್ಯದಲಿ ನಿಂತು ನೋಡಿದರು ಅರುಣಾಚಲದ ಸೊಬಗನ್ನು; ಗುಹೆಗಳಲ್ಲಿ ತಂಗಿ ಧ್ಯಾನಿಸಿದರು, ತಮ್ಮಂತರಂಗದ ಬೆಳಕ ನೆಚ್ಚಿ, ಅಚ್ಚ ಕನ್ನಡದ ಯೋಗಿ ಅಲ್ಲಮ ಇಲ್ಲಿನ ಗುಹೆಯ ಕತ್ತಲಲ್ಲಿ ಬೆಳಕಾಗಿ ನಿಂತು ಕತ್ತಲೆ-ಬೆಳಕುಗಳ ಬೆನ್ನು ಸವರಿ, ನಗುನಗುತ್ತ ಶಿಷ್ಯರಿಗೆ ಒಡಪು ಹೇಳಿ, ಬಿಡಿಸಿ, ಬಾಗಿಲನು ತೆರೆದು, ತೆರೆತೆರೆಯಾಗಿ ಸರಿದು ಹೋದನಂತೆ

2

ಮನಸು ತೆರೆದ ಬಾಲನೊಬ್ಬ ಬಂದನಿಲ್ಲಿಗೆ ಬೆಳಕ ಹುಡುಕಿ ಗುಹೆ ಕತ್ತಲಲ್ಲಿ ಕುಳಿತ, ಹೊಳೆವ ಬೆಳಕಲ್ಲಿ ನಡೆದಾಡಿದ, ಬರಿ ಮೈಯಲ್ಲಿ, ಬೆಟ್ಟವೇರಿದ, ಬಂಡೆಗಲ್ಲುಗಳ ಮಾತಾಡಿಸಿದ, ಹಕ್ಕಿ ಕೊರಳ ಹಿಡಿದಾಡಿಸಿದ ಸಹಜ ರಾಗಗಳ, ಮೇಲಿಂದ ಬಯಲ ನೋಡಿದ, ಮುಗಿಲ ನೋಡಿದ, ದಿಗಂತಗಳ ಬಣ್ಣಗಳಲ್ಲಿ ಕಣ್ಣು ನೆಟ್ಟ, ಸೂರ್ಯ ಚಂದ್ರರ ಜೊತೆ ಒಡನಾಡಿದ, ಚುಕ್ಕೆಗಳು ಕಣ್ಣು ಮಿಟುಕಿಸಿದಾಗ ಇವನೂ ಕಣ್ಣು ಮಿಟುಕಿಸಿ ನಕ್ಕ, ಗಾಳಿ ಜೊತೆ ತೂಗುಯ್ಯಾಲೆಯಾಡಿದ, ಬಯಲ ರಾಗಕ್ಕೆ ತನ್ನಂತರಂಗದ ರಾಗ ಜೋಡಿಸಿದ, ನಾಡು ಕಾಡುಗಳ ಒಂದು ಮಾಡುವಂತೆ ಮಾತಿಲ್ಲದೆ ದಿನಗಳನು ಕಳೆದ, ವಾರಗಳೋ ಮಾಸಗಳೊ ಸಂವತ್ಸರಗಳೊ, ಕಾಲದ ಕಲ್ಪನೆಯ ಮೀರಿ ನಿಂತನಿವನು ಇಲ್ಲೇ ಅಚಲವಾಗಿ, ಮಳೆ ಬಿಸಿಲು ಗಾಳಿ ಬಯಲು ಇವನೇ ಆಗಿ, ಬೆರ- ಗೊಂದು ಕತೆಯಾಗಿ ಜಾತ್ರೆ ನೆರೆಯಿತು ಮಾತು ಮಾತೇ ಆಗಿ

3

ತಿಳಿ ಬೆಳಕೆಂದರೆ ಕಡು ಕತ್ತಲೆ, ಬಟಾಬಯಲೆಂದರೆ ಅಡ್ಡವಾದ ಗುಡ್ಡ ಏಕಾಂತದ ಗವಿಯಲ್ಲಿ ಮೌನ ಮುರಿದ ಮಾತಿನ ಗದ್ದಲ, ನಿಲ್ಲಲು ನೆಲೆ ಇಲ್ಲದೆ ಹಾರಿ ಹೋದವು ಹಕ್ಕಿ ದಿಕ್ಕುದಿಕ್ಕುಗಳನು ಅರಸಿ, ಬೆಟ್ಟ ಬರಡಾಗಿ, ತಿಳಿಯಲಾಗದ ಯತಿಯ ಒಡಲ ಮಾತು ಒಗಟಾಗಿ, ದಿಕ್ಕೆಟ್ಟು ಜನ ಕಟ್ಟಿದರು ಗುಡಿಯ ಕೆಳಗೆ, ನೆಲದ ಮೇಲೆ, ಸಾವಿರ ಕಂಬಗಳ ನಿಲ್ಲಿಸಿ, ಕಂಬಗಳಿಲ್ಲದೆ ಕಾಲಾಂತರದಿಂದ ನಿಂತೇ ಇರುವ ಅಂಬರದ ನಗೆಯಲ್ಲಿ ಅರುಣಾಚಲ ಬೆದರಿ ಇಂಚಿಂಚು ಸರಿಯಿತು, ಕಾಲ ಮಹಿಮೆಯ ಅರಿತು

4

ನಾವು ಕಂಡಾಗ ಅರುಣಾಚಲ ನಿಂತೆ ಇತ್ತು ಭಕ್ತರ ಅನುರಕ್ತರ ಗದ್ದಲಕ್ಕೆ ಬೆದರದೆ ಬೆಚ್ಚದೆ, ಬೆಟ್ಟದ ಬೆನ್ನ ಮೇಲೆ ಮುಗಿಲಿಗೇರಿದ ಮೆಟ್ಟಿಲು ಏರುತ್ತ ಹೋದವರ ಬೆವರ ಒರೆಸಿ, ದಣಿವ ಸವರಿ ತೂಗುವ ಗಾಳಿ, ಒಳ ಹೊರಗಿನ ಉಸಿರು ಒಂದಾಗಿ ಎರಡು ಲೋಕಗಳು ಬೆರೆಯುವವು, ತೂಗಿ ತೊನೆಯುವ ಜೀವಗಳು ಅಚಲವಾಗಿ ನಿಲ್ಲುವವು ಕಾಯ ವಾಚ ಮನಸ ಒಂದುಬಿಂದುವಿನಲ್ಲಿ ನಿಂತಂತೆ; ಮೇಲಿಂದ ನೋಡಿದರೆ ಕೆಳಗೆ ಊರು ಕೇರಿ ಗುಡಿ ಗೋಪುರ ಎಲ್ಲ ನಮ್ಮ ಅವತಾರ

5

ಆತಂಕವಿಲ್ಲದೆ ಬೀಸುವುದು ಗಾಳಿ, ತೆರೆ ತೆರೆದ ಬಯಲು, ಖಾಲಿ ನೀಲಿಯಲಿ ಚಿತ್ರ ಬರೆದ ಬಿಳಿಮೋಡಗಳ ಆಕಾರ ನಿರಾಕಾರ ನಿರ್ಗುಣ ನಿರಂಜನ, ಏಕಾಂತಕ್ಕೆ ಎಳಸುವುದು ಜೀವ, ದಾರಿ ಬಿಟ್ಟು, ಗುಹೆ ಗಹ್ವರಗಳ ಬದಿಗಿಟ್ಟು ಮೆಲೇರಿದರೆ ತೆರೆದುಕೊಳ್ಳುವುದು ಜೀವಕ್ಕೆ ಮೂಡುವುವು ರೆಕ್ಕೆ ತಾನೇತಾನಾಗಿ, ಹಾರು ಹಾರೆಲೆ ಹಕ್ಕಿ ಇನ್ನೂ ಮೇಲೆ, ಮೇಲೆಯೇ ಕಣ್ಣು ನೆಟ್ಟು ಎಲ್ಲ ಕಲ್ಮಶ ತೊಳೆದು ಶುಭ್ರ ತೆರೆದ ಮನ ಹಾಯುವುದು ಹೊಸ ಲೋಕಕ್ಕೆ, ನೆಲಕ್ಕಂಟಿದ ಅರುಣಾಚಲವೂ ಅಂಗೈಯ್ಯ ಲಿಂಗದಂತೆ ಕಾಣುವುದು ಏಕಾಂತದ ಈ ಚಿತ್ತದೆತ್ತರದಲ್ಲಿ, ಇನ್ನೊಂದು ನೆಲೆಯಲ್ಲಿ

*

ಏಸು ಪದ್ಯ

‘ತಂದೆ ಮನ್ನಿಸು ಅವರ…’ ಏಸೊಂದು ದಾರಿಗಳು ನಿನ್ನ ಬಳಿಗೆ ತಂದೆ, ಹೊರಟಿದ್ದಾರೆ ಎಲ್ಲ ದಿಕ್ಕುತಪ್ಪಿ, ದಟ್ಟಕಾಡಿನ ನಡುವೆ ಹೆಜ್ಜೆಹೆಜ್ಜೆಗೆ ಹೆದರಿಸುವ ಹುಲಿ ಸಲಗ ಕಿರುಬ ಚಿರತೆ ಕೂರಂಬಿನ ಜೀವ ಜಂತು- ಅವರೊಡಲಲ್ಲಿ ಹೆಡೆ ಎತ್ತಿವೆ ಅಹಂಕಾರ ಸ್ವಾರ್ಥ ಕಾಣರವರು ಒಳಹೊಕ್ಕು ಸತ್ಯವನು, ಕಣ್ಣಪೊರೆ ಮರೆಮಾಡಿದೆ ಎಲ್ಲವನು; ನಿನ್ನ ಬಳಿಗೆ ಬರುವ ದಾರಿ-ನೇರ ಸರಳ ಸಹಜ ಸುಂದರ, ಕರೆಯುವುದು ಹಗಲಿರುಳು ಒಳದನಿ- ಯಾಗಿ, ಇನಿಯಾಗಿ,ಉರಿಬಿಸಿಲಲ್ಲಿ ತಂಪು ನೆಳಲಾಗಿ

ಅರಬ್ಬರೊ, ಇಸ್ರೇಲರೊ, ಯಹೂದ್ಯರೊ, ಕ್ರೈಸ್ತರೊ ಕರಿಯರೊ ಬಿಳಿಯರೊ ನಡುವಿನ ಕಂದು ಜನರೊ ತಿಳಿಯದು ಯಾರಿಗೂ ತಾವೇನು ಮಾಡುವೆವೆಂದು ಗಡಿಯೊ ಗುಡಿ ಗುಂಡಾರವೊ ಮಸೆಯುವರು ಹಲ್ಲು ತಂದೆ ಮನ್ನಿಸು, ತಿಳಿಯರವರು ತಾವು ಮಾಡುವುದ

*

ಪರಿಚಯ : ಜಿ.ಪಿ ಬಸವರಾಜು ಅವರು ಸದ್ಯ ಮೈಸೂರಿನಲ್ಲಿ ವಾಸವಾಗಿದ್ದಾರೆ. ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಇವರ ಪ್ರಮುಖ ಕೃತಿಗಳು. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ : Poetry : ಅವಿತಕವಿತೆ : ‘ಹಾವು ಏಣಿ ಆಟ ಆಡಿದ ಉಸಿರು ಗಂಟಲ ಮೂಲಕ ಸಿಡಿಯುತ್ತದೆ ಬೀಸ್ ರುಪಯ್ಯಾ ಬೀಸ್ ರುಪಯ್ಯಾ..’            

Published On - 12:12 pm, Sun, 12 December 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ