Poetry : ಅವಿತಕವಿತೆ : ‘ಹಾವು ಏಣಿ ಆಟ ಆಡಿದ ಉಸಿರು ಗಂಟಲ ಮೂಲಕ ಸಿಡಿಯುತ್ತದೆ ಬೀಸ್ ರುಪಯ್ಯಾ ಬೀಸ್ ರುಪಯ್ಯಾ..’

Poem : ‘ಕಾವ್ಯ ತನ್ನ ರೂಪಕಗಳ ಮೂಲಕ ವಾಸ್ತವವನ್ನು ಬಚ್ಚಿಟ್ಟ್ಟರೆ, ಬಿಚ್ಚಿಟ್ಟರೆ, ಮನಸ್ಸು ತನ್ನ ನಿಗೂಢ ಪರಿಭ್ರಮಣೆಯ ಮೂಲಕ ವಾಸ್ತವವನ್ನು ಬಚ್ಚಿಡುತ್ತದೆ. ದೇಹವನ್ನು ಬಿಚ್ಚಿಡಲು ಸಾಧ್ಯವೇ ಹೊರತು  ಮನಸ್ಸನ್ನಲ್ಲ. ಮನಸ್ಸನ್ನು ಬಿಚ್ಚಿಡುವುದು ವ್ಯವಸ್ಥೆಯ ದೃಷ್ಟಿಯಲ್ಲಿ ಮಹಾ ಅಪಾಯಕಾರಿಯಾದುದು. ಆದುದರಿಂದಲೇ ಕಾವ್ಯ, ರೂಪಕ ಪ್ರತಿಮೆ ಬೆಡಗು ಇತ್ಯಾದಿಗಳ ಒಳದಾರಿಗಳಲ್ಲಿ ತನ್ನ ಹರಿವನ್ನು ಕಂಡುಕೊಳ್ಳುತ್ತದೆ.’ ಡಾ. ಗಿರಿಜಾ ಶಾಸ್ತ್ರಿ

Poetry : ಅವಿತಕವಿತೆ : ‘ಹಾವು ಏಣಿ ಆಟ ಆಡಿದ ಉಸಿರು ಗಂಟಲ ಮೂಲಕ ಸಿಡಿಯುತ್ತದೆ ಬೀಸ್ ರುಪಯ್ಯಾ ಬೀಸ್ ರುಪಯ್ಯಾ..’
Follow us
|

Updated on: Dec 05, 2021 | 9:52 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಮುಂಬೈಯಲ್ಲಿ ವಾಸವಾಗಿರುವ ಕವಿ, ಲೇಖಕಿ ಡಾ. ಗಿರಿಜಾ ಶಾಸ್ತ್ರಿ ಅವರ ಸ್ವಂತ ಮತ್ತು ಅನುವಾದಿತ ಕವನಗಳು ನಿಮ್ಮ ಓದಿಗೆ. 

*

ಹೆಣ್ಣು ಎಂದರೆ ಕಾಯುವ ಬೇಯುವ ನೋಯುವ ಒಂದು ಜೀವ. ಇದು ಚರಿತ್ರೆ, ಇದು ಪುರಾಣ ಇದು ವಾಸ್ತವ. ಶತಮಾನಗಳ ಉದ್ದಕ್ಕೂ ಈ ಹೆಣ್ಣು ಬಚ್ಚಿಟ್ಟುಕೊಂಡ ಬಯಕೆಗಳನ್ನು ಕಂಡ ಕನಸುಗಳನ್ನು, ಪಟ್ಟ ಪಾಡುಗಳನ್ನು ನಿಂತ ನಿಲುವುಗಳನ್ನು ಗಿರಿಜಾ ಶಾಸ್ತ್ರಿಯವರು ತಮ್ಮ ವರ್ತಮಾನದ ಹಲವು ನೆಲೆಗಳ ಮೂಲಕ ಈ ಕವಿತೆಗಳೊಳಗೆ ಹಿಡಿದು ಇರಿಸಿರುವ ಕ್ರಮವು ಬೆರಗು ಹುಟ್ಟಿಸುವಂತಿದೆ. ಸಾರ್ವತ್ರಿಕವಾಗುವ ಕಲೆಗಾರಿಕೆಯೇ ಕಾವ್ಯ. ಇಂಥ ಕವಿತೆಗಳ ಮೂಲಕ ಸಖಿಯಾಗಿ, ಗೃಹಿಣಿಯಾಗಿ, ತಾಯಿಯಾಗಿ ತಮ್ಮ ಅನುಭವಗಳನ್ನು ಅರ್ಥಪೂರ್ಣವಾಗಿ ಅಭಿವ್ಯಕ್ತಿಸಿರುವ ಈ ಹೆಣ್ಣೊಬ್ಬಳ ದನಿಯಲ್ಲಿ ಹೊಸಕಾಲದ ಆತ್ಮಪ್ರಯತ್ನವಿದೆ. ಜೀವನ ಪ್ರೀತಿಯಿಂದ ತುಡಿಯುವ ಉತ್ಸಾಹವಿದೆ, ನಾಳಿನ ಭರವಸೆಗಳಿವೆ. ಜಿ. ಎಸ್. ಶಿವರುದ್ರಪ್ಪ, ಹಿರಿಯ ಸಾಹಿತಿ

ಸಮಕಾಲೀನ ಅಭಿರುಚಿ ಮತ್ತು ಪರಂಪರೆಯ ಪ್ರಜ್ಞೆಗಳ ಜೊತೆ ತನ್ನ ಸುತ್ತಲಿನ ಜಗತ್ತಿನಲ್ಲಿ ಜೀವಂತವಾಗಿರುವ ಎಲ್ಲದರ ಬಗೆಗೂ ಗಿರಿಜಾ ಅವರಿಗಿರುವ ಗಾಢ ಅನುರಕ್ತಿಯೇ ಈ ‘ಬಹುಭಾಷಾ’ ಬಳಕೆಗೆ ಕಾರಣವೆಂದು ನನಗೆ ಅನ್ನಿಸುತ್ತದೆ. ಈ ಅನುರಕ್ತಿಯ ನಡುವೆಯೂ ಬದುಕಿನ ವಿಸಂಗತಿ ಮತ್ತು ಕುರೂಪ ಇವರ ಕಣ್ಣು ತಪ್ಪಿಸಿಕೊಳ್ಳುವುದಿಲ್ಲ. ಈ ಗುಣ, ಇವರ ಕಾವ್ಯವನ್ನು ಭಾವುಕತೆಯಿಂದ ಪಾರುಮಾಡಿದೆ. ಕನ್ನಡ ಭಾಷಿಕ ಪರಂಪರೆಯ ಜೊತೆ, ಕವಿ ಏರ್ಪಡಿಸಿಕೊಳ್ಳುವ ಸಂಬಂಧ ಪೂರ್ತಸ್ವೀಕಾರದ್ದೂ ಅಲ್ಲ; ಪೂರ್ತ ನಿರಾಕರಣೆಯದ್ದೂ ಅಲ್ಲ. ಸದಾ ಜಗಳವಾಡುತ್ತಲೇ ಒಟ್ಟಿಗಿರುವ ಗಂಡಹೆಂಡಿರ ದಾಂಪತ್ಯದ ಹಾಗೆ ಅದು ತಾದಾತ್ಮ್ಯ ಮತ್ತು ಬಿಕ್ಕಟ್ಟುಗಳ ನಿರಂತರ ಗುದಮುರಿಗೆ. ಜಿ. ರಾಜಶೇಖರ್, ಲೇಖಕ, ವಿಮರ್ಶಕ

*

ನಿರೀಕ್ಷೆ

ಹೊಟ್ಟೆಯ ಕರುಳು ನಿರೀಕ್ಷೆಯ ಮುಳ್ಳು ಸದಾ ಚುಚ್ಚುತ್ತದೆ ಬತ್ತಿದ ಮೊಲೆಯ ಮೇಲೆ ಗೀರುಗಾಯ ಹುಣ್ಣು ಕೀವು ರಣ ಕತ್ತರಿಸಿ ಬಿಸಾಡುವ ಧೈರ್ಯವಿಲ್ಲ ಇಟ್ಟುಕೊಳ್ಳುವ ತಾಖತ್ತಿಲ್ಲ

ಒಡ್ಡಿಕೊಂಡರೂ ಕತ್ತಿಗೆ ‘ಕತ್ತರಿಸಿದಷ್ಟು ಬೆಳೆ’ದು ಮತ್ತೆ ಬರುತ್ತದೆ ಕಾಲಾತೀತ ‘ಕುತ್ತಿ’ಗೆ

ಕಾಲವಶ ಗೂಡು ಕೂಗುತ್ತದೆ ‘ಕಾಡು’ ‘ಇರುಳೆಲ್ಲ ಜಾಗರಾಗಿ’ ಜೀಂ..ಜಿರ್ರೋ..ಜೀಂ…ಜಿರ್ರೋ…

*

ಕುಣಿಯಲಿ ಹೇಗೆ

ಪಟ ಹರಿದು ಕಟ್ಟು ಮುರಿದು ನಿಂತೇ ಬಿಟ್ಟ ಧುತ್ತೆಂದು ಎದುರಿಗೆ

ಹದುಳವೇ ಎಂದು ಕೇಳುತ್ತಾನೆ ಸೀದಾ ಎದ್ದು ಬಂದು ನವಿಲುಗರಿ ಪುಟದಿಂದಲೇ

ಮುಖವೇ ಇಲ್ಲದ ಮೀಸೆಯಡಿ ನಗುತ್ತಾ ಹಿಂಬಾಲಿಸುತ್ತಾನೆ ಅಡುಗೆ ಕೋಣೆಗೆ ಎರಡೂ ಕೈ ಆತು ಚೌಕಟ್ಟಿಗೆ ತುಸುವೇ ಬಾಗಿ ನಿಂತು ತಾಗಿಕೊಂಡೇ ನಿತಂಬಕ್ಕೆ ಮಾತು ಮಾತು  ಮಾತು…

ಕದಪು ಕೆಂಪಾಗುವುದಿಲ್ಲ ರಕ್ತ ಬಿಸಿಯೇರುವುದಿಲ್ಲ ಎಲಬು ಹಂದರದೊಳಗೆ ಸಂಧಿವಾತದ ಝಂಝಾವಾತ ಬಗ್ಗುವುದಿಲ್ಲ ಸೊಂಟ ನಿಲ್ಲುವುದಿಲ್ಲ ನೆಟ್ಟಗೆ ಕುರುಳು ಕನಸು ಬೋಳು ಮುಂದೆಲೆ ನೆರಿಗೆ ಸೀರೆಗೆ ಸಾವಿರ ಸುಕ್ಕು ಮದರಂಗಿ ಕೈಗೂ….

ಅವನು ಹಿಡಿದ ನವಿಲುಗರಿ ಮಾತ್ರ ಜಾಗರವಾಡುತ್ತದೆ

*

AvithaKavithe Poetry column by Kannada writer poet Dr Girija Shastri

ಗಿರಿಜಾ ಅವರ ಕೈಬರಹ

ಕಾವ್ಯವೆನ್ನುವುದು ‘ನಿಚ್ಚಂ ಪೊಸತು ಆರ್ಣವಂಬೋಲ್’ ಎನ್ನುತ್ತಾನೆ ಪಂಪ. ಕಾವ್ಯ ಎನ್ನುವುದು ಸಮುದ್ರದ ಹಾಗೆ ನಿತ್ಯ ಹೊಸದಾದುದು. ಇಂಗ್ಲಿಷ್‌ನಲ್ಲಿ ‘One cannot step into the same river twice’ ಎನ್ನುವ ಮಾತೊಂದಿದೆ. ಪಂಪನ ಪ್ರಕಾರ ಅದು ಸಮುದ್ರಕ್ಕೂ ಅನ್ವಯಿಸುತ್ತದೆ. ಹಾಗೆಯೇ ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ ಎನ್ನುತ್ತಾರೆ ಬೇಂದ್ರೆಯವರು. ಕಾವ್ಯವೆನ್ನುವುದು ಕಲ್ಪನೆಯ ರೆಕ್ಕೆಗಳಮೇಲೇರಿ ಸವಾರಿಮಾಡುವಂತಹದು. ಅದಕ್ಕೇ ಅದು ನವನವೋನ್ಮೇಶಶಾಲಿನಿಯಾದುದು. ಯಾಕೆಂದರೆ ಅದಕ್ಕೆ ಭೂಮಿಯ ಮೇಲಿನ ಬಂಧನಗಳಿಲ್ಲ. ತೆಂಕಣಗಾಳಿಯ ಹಾಗೆ, ಮರಿದುಂಬಿಯ ಝೇಂಕಾರದಹಾಗೆ ಅದು ಸರ್ವತಂತ್ರ ಸ್ವತಂತ್ರ. ನಿತ್ಯ ಹೊಸನೀರಿನ ಜೊತೆಗೆ ಸಾಗುವುದರಿಂದಲೇ ಅದು ಹೊಸಕಾಲದ ಕನಸುಗಳಲ್ಲಿ ಹೊಸ ಜನಾಂಗಗಳ ಮೂಲಕ ಮರುಹುಟ್ಟು  ಪಡೆಯುತ್ತದೆ. ಆದುದರಿಂದಲೇ ಅದು ಅಮರವಾದುದು (Immortal). ಈ ನಿತ್ಯ ನೂತನತೆಗೆ ಇಂಬುಗೊಡುವುದು ಮನುಷ್ಯನ ಮನಸ್ಸಿನಲ್ಲೇ ಅಡಗಿರುವ Immortal ಆಗುವ ಬಯಕೆ. Immortal ಆಗುವುದೆಂದರೇನೆ ನಿತ್ಯ ಹೊಸದಾಗಿರುವುದು. ಚಲನಶೀಲವಾಗಿರುವುದು.

ಮನುಷ್ಯನ ಮನಸ್ಸಿಗೆ, ರೆಕ್ಕಗಳೇರಿ ಮೇಲೆ ಹಾರಿ ‘ನಿಚ್ಚಂ ಪೊಸತಾ’ಗುವ ಬಯಕೆ ಸದಾಸರ್ವದಾ ಜಾಗೃತವಾಗಿರುತ್ತದೆ. ಆದರೆ ಈ ಮನಸ್ಸನ್ನು ಆವರಿಸಿಕೊಂಡಿರುವ ದೇಹ ಮಾತ್ರ ಅನೇಕ ಸಾಮಾಜಿಕ ಬಂಧನಗಳಿಗೆ ಸಿಕ್ಕು ಏಕತಾನತೆಯಲ್ಲಿ ನರಳುತ್ತದೆ. ಈ ಏಕತಾನತೆಯನ್ನು ಮುರಿಯಲೆಂದೇ ಮನಸ್ಸು ಅಲೆಮಾರಿಯಾಗಿ ಕಂಡ ಕಂಡ ಗಲ್ಲಿ ಗಟಾರ ಹಾಯ್ದು ಹೆಚ್ಚಾಗಿ, ಏಕಕಾಲಕ್ಕೆ ಬಹುಸ್ತರೀಯ ನೆಲೆಗಳಲ್ಲಿ ತಂಗಿ, ಅನ್ಯ ಖಾಸಗೀ ಲೋಕದೊಳಗೆಲ್ಲಾ ಬಿದ್ದು ಹೊರಳಾಡಿ ಹೊರಬರುತ್ತದೆ. ಈ ಮನಸ್ಸೆಂಬುದು ಒಂದು ಒಡೆಯಲಾರದ ವಿಸ್ಮಯ. ನಮ್ಮ ಶರೀರದೊಡನೆಯೆ ಸಾಗಿಬಂದು ಅದರ ಜೊತೆಯೇ ದಫನ್ ಆಗಿ ಬಿಡುವಂತಹದು. ಅಕಸ್ಮಾತ್ ಈ ಮನಸ್ಸೆನ್ನುವುದನ್ನು ಸ್ಕ್ಯಾನ್​ ಮಾಡಿ ಸಿ.ಡಿ.ಗೆ ಹಾಕಿ ಪರದೆಯ ಮೇಲೇನಾದರೂ ಚಿತ್ರ ತೋರಿಸುವಂತಿದ್ದರೆ, ನಮ್ಮೆಲ್ಲ ವ್ಯವಸ್ಥೆ -ಜಾತಿ ಕುಟುಂಬ, ಮದುವೆ, ಸಮಾಜ, ಧರ್ಮ, ಪಾತಿವ್ರತ್ಯ ಎಲ್ಲ ಎಷ್ಟು ಬೋಗಸ್ ಎಂದು ಅನ್ನಿಸಿಬಿಡುತ್ತಿತ್ತು.

ಕಾವ್ಯ ತನ್ನ ರೂಪಕಗಳ ಮೂಲಕ ವಾಸ್ತವವನ್ನು ಬಚ್ಚಿಟ್ಟ್ಟರೆ, ಬಿಚ್ಚಿಟ್ಟರೆ, ಮನಸ್ಸು ತನ್ನ ನಿಗೂಢ ಪರಿಭ್ರಮಣೆಯ ಮೂಲಕ ವಾಸ್ತವವನ್ನು ಬಚ್ಚಿಡುತ್ತದೆ. ದೇಹವನ್ನು ಬಿಚ್ಚಿಡಲು ಸಾಧ್ಯವೇ ಹೊರತು  ಮನಸ್ಸನ್ನಲ್ಲ. ಮನಸ್ಸನ್ನು ಬಿಚ್ಚಿಡುವುದು ವ್ಯವಸ್ಥೆಯ ದೃಷ್ಟಿಯಲ್ಲಿ ಮಹಾ ಅಪಾಯಕಾರಿಯಾದುದು. ಆದುದರಿಂದಲೇ ಕಾವ್ಯ, ರೂಪಕ ಪ್ರತಿಮೆ ಬೆಡಗು ಇತ್ಯಾದಿಗಳ ಒಳದಾರಿಗಳಲ್ಲಿ ತನ್ನ ಹರಿವನ್ನು ಕಂಡುಕೊಳ್ಳುತ್ತದೆ. ದೇಹವನ್ನೂ ಮನಸ್ಸನ್ನೂ ಬಚ್ಚಿಡುವಂತೆ ಮಾಡಿರುವುದು ನಮ್ಮ ವ್ಯವಸ್ಥೆಯೇ. ದೇಹ ಮತ್ತು ಮನಸ್ಸನ್ನು ಬಿಚ್ಚಿಡುವುದರ ಮೂಲಕ, ಅದನ್ನು ಬತ್ತಲಾಗಿಸುವುದರ ಮೂಲಕ ಅಕ್ಕ ಇಂತಹ ವ್ಯವಸ್ಥೆಗೆ ಒಂದು ಸವಾಲಾದಳು. ನಿಜವಾಗಿ ನೋಡಿದರೆ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಬತ್ತಲಾಗುವುದು ಅನಿವಾರ್ಯ. ಆದರೆ ಬತ್ತಲಾಗಬೇಕಾಗಿರುವುದು ದೇಹ ಮನಸ್ಸುಗಳಲ್ಲ ಬದಲಾಗಿ ನಮ್ಮ ವ್ಯವಸ್ಥೆ. ಅಲ್ಲಿಯವರೆಗೆ ಆಧುನಿಕ ಜನಾಂಗಕ್ಕೆ ಮನಸ್ಸಿನ ಮಾಯೆಗಳಲ್ಲಿ, ಲೀಲೆಗಳಲ್ಲಿ, ಸುಖಿಸುವುದರ ಹೊರತಾಗಿ ಬೇರೆ ಪರ್ಯಾಯಗಳೇ ಇಲ್ಲವೇನೋ.

*

ಕರೆ

ಬೀಸ್ ರುಪಯ್ಯಾ ಬೀಸ್ ರುಪಯ್ಯಾ… ಗಂಟಲೊಂದು ಹರಿದುಕೊಂಡು ಕೂಗುತ್ತಿದೆ ಕೆಳಗೆ ಹದಿನಾರನೆ ಮಹಡಿಗೂ ಅದು ಕೇಳುತ್ತಿದೆ ನನಗೆ ಸೂರ್ಯನ ಕಿವಿಗೂ ತಾಕಿರಬೇಕು

ಲಯ ತಪ್ಪದ ಬೀಸ್‌ರುಪಯ್ಯಾ ಬೀಸ್ ರುಪಯ್ಯಾ ಏನಿರಬಹುದು ಬಟಾಣಿ ಕ್ಯಾಪ್ಸಿಕಮ್ ಸೊಪ್ಪು ಮೂಲಂಗಿ

ಮೂಲಾಧಾರದಿಂದ ಚಿಮ್ಮಬೇಕು ಉಸಿರು ಗುರೂಜಿ ಹೇಳುತ್ತಾರೆ ಸ್ವಾಧಿಷ್ಠಾನದಿಂದಲಾದರೂ ಹೊಮ್ಮಬೇಕು ಯೋಗಕ್ಕೂ ಸಂಗೀತಕ್ಕೂ ಒಂದೆ ಲಯ.

ಹಾವು ಏಣಿ ಆಟ ಆಡಿದ ಉಸಿರು ಗಂಟಲ ಮೂಲಕ ಸಿಡಿಯುತ್ತದೆ ಬೀಸ್ ರುಪಯ್ಯಾ ಬೀಸ್ ರುಪಯ್ಯಾ.. ನನ್ನ ತಟ್ಟೆಯೊಳಗೆ ನಗುತ್ತದೆ ಬಟಾಣಿ ಕ್ಯಾಪ್ಸಿಕಮ್, ಬ್ರಾಕುಲಿ ಕಿತ್ತಲೆ ರಸ ಜೊತೆಗೆ ಗಾಜಿನ ಲೋಟದೊಳಗೆ.

*

AvithaKavithe Poetry column by Kannada writer poet Dr Girija Shastri

ಗಿರಿಜಾ ಅವರ ಕೃತಿಗಳು

ಬೆನ್ನು ಮೂಳೆ 

ನನ್ನ ಗುರ್ತ ಹತ್ತಲಿಲ್ಲೇನ್ರೀ ಸರಾ? ಯಾರೋ ಬಂದರು ಧೋ ಧೋ ಮಳೆಯಲ್ಲಿ ತೊಯ್ದು ತೊಪ್ಪೆ ತಲೆಯಿಂದ ತೊಟ್ಟಿಕ್ಕುತ್ತಿತ್ತು. ಬಂದವನು ಸ್ವಲ್ಪ ಹೊತ್ತು ಕುಳಿತ ನಂತರ ಸ್ವಲ್ಪ ನಕ್ಕ ಮೇಲೆ ನೋಡುತ್ತಾ ಹೇಳಿದ ಗಂಗವ್ವ ಬಂದಿದ್ಲು ನೋಡ್ಲಾಕಂತ ಜರಾ ಇದ್ದು ಹೊಳ್ಳಿ ಹೋದಳು ತವರ ಮನೀಗಿ ಪೋರಿ ಬಂದ್ಹಾಂಗ ಮನೀ ಮಾಡು ಭಿಂತಿ ಒಂದಾ ಮಾಡಿ ಕುಣದ್ಲು ಮನೀಗ್ ಬಂದ ಮಗಳು ಖಾಲಿ ಕೈಲೇ ಹ್ಯಾಂಗ ಹೋಕ್ಯಾಳ್ರೀ? ನಮ್ಮಾಕಿನಾರ್ಯಾ ಬಿಟ್ಟ್ ಹೋಗ್ಯಾಳ್ರೀ ಗ್ವಾಡೀ ಬಿದ್ದದಾ, ಒಲಿ ಆರೇದ ಇದ್ದುವೆಲ್ಲ ಹೋಗ್ಯದ ಕಡೀಗ್ ಪ್ರಸಾದಂತಾ ಕಣ್ಣೀನ್ ಪಾಪೆ ಒಳಗಾ ನಾಕ ಹನಿ ಹಾಕಿ ಹೋಗ್ಯಾಳ್ರಿ ಲಡಾಯಿ ನಡದದಾ… ನನ್ನಾಕೀನೂ ಕೈ ಜೋಡ್ಸ್ಯಾಳ ಕುಸಿದ ಭಿಂತಿ ಕಟ್ಟಾಕ ಹತ್ತೇನ್ರಿ ಮನೀ ಒಳಗಿನ ಹೂಳು ಎತ್ತಾಕ

ಕಿಸೆಯ ಕಡೆಗೆ ಕೈ ಹೋಯಿತು ಮುಗುಳ್ನಗುತ್ತಾ.. ನಿಧಾನ ಎದ್ದ ರೊಕ್ಕ ಬ್ಯಾಡ್ರೀ ಸರಾ, ನಾ ಒಂಟಿ ಅನಸ್ತ್ (ಅದಕಾ ಬಂದಿ) ಮನಿ ಮಾಡ ಅನಕಾ ಮುರ್ದು ಹೋತ್ರೀ ಆದ್ರ ಬೆನ್ನು ಮೂಳಿ ಮುರಿದಿಲ್ರೀ ನಿಮ್ ಕೈ ಯಾಡ್ಸಿ ಅದನ್ ಇನ್ನಾ ಗಟ್ಟಿ ಮಾಡ್ರೀ

(30-40 ವರುಷಗಳ ಹಿಂದೆ ಮಳೆಯ ಅತಿವೃಷ್ಟಿಯಿಂದಾಗಿ ನೆರೆ ಬಂದು ಊರಿಗೆ ಊರೇ ಕೊಚ್ಚಿಕೊಂಡು ಹೋದ ಸಂದರ್ಭದಲ್ಲಿ, ಮರಾಠಿಯ ಮೇರುಕವಿ ಕುಸುಮಾಗ್ರಜರು ಬರೆದ ಕವಿತೆ ‘ಕಣಾ’ ದ ಸ್ಥೂಲ ಅನುವಾದ) 

*

ಕೋಳಿ ಕೂಗು

ನಾನೊಂದು ಕೋಳಿಯಾಗಿದ್ದೇನೆ ಕನ್ನಡದಲ್ಲಿ ಕೂಗುತ್ತೇನೆ ಚಳಿಯಲ್ಲಿ ನನ್ನ ದನಿ ನಡುಗುವುದಿಲ್ಲ ಮಳೆಯಲ್ಲಿ ನೆನೆಯುವುದಿಲ್ಲ.

ಗಾಳಿ ನನ್ನ ದನಿಯನ್ನು ಅನುವಾದಿಸುತ್ತದೆ ನೈಲ್ ನದಿಯಿಂದ ಹಿಡಿದು ದಕ್ಷಿಣ ಧ್ರುವದ ತುದಿಗೆ ಸೂರ್ಯ ಮುಳುಗದ ದೇಶದಿಂದ ಹಿಡಿದು ಅಮೆಜಾನ್‌ ದಟ್ಟ ಕಾಡಿನವರೆಗೆ ಭಾಷೆಯ ಗೆರೆಗಳನ್ನು ಕತ್ತರಿಸಿ ತಲುಪಿಸುತ್ತದೆ

ನನ್ನ ಕೂಗು ಧರ್ಮದ ಹಾಗೆ ನಿಷ್ಠುರವಲ್ಲ ದೇವರ ಹಾಗೆ ತಟಸ್ಥವಲ್ಲ ಅಂತರಾಳದಿಂದ ಕೂಗುವುದು ನನ್ನ ಧರ್ಮ

ನೀನು ಮಲಗಿದ್ದರೂ ಸೂರ್ಯ ಬರಲು ತಡವಾದರೂ ನಾನು ನಿಲ್ಲುವುದಿಲ್ಲ

ಮುದುಕನಿಗೆ ಸತ್ಯದಂತೆ ಗುರುವಿಗೆ ಅಶ್ರುವಿನಂತೆ ನದಿಗೆ ಆಕಾಶದಂತೆ ಪೊದೆಗೆ ಬೆಳಕಿನಂತೆ ನನ್ನ ಧರ್ಮ ನನಗೆ ಪ್ರಿಯವಾಗಿದೆ

ಹುಳ ಹುಪ್ಪಟೆ ತಿನ್ನುತ್ತಾ ಕೂಗುವುದನ್ನು ಮರೆತರೆ ನಾನು ಕೋಳಿಯಲ್ಲ.

ಆದರೆ ನಾನು ಕೋಳಿಯಾಗಿದ್ದೇನೆ ಕೂಗುವುದು ನನ್ನ ಧರ್ಮ ನಾನು ಕೂಗಿಯೇ ಕೂಗುತ್ತೇನೆ ದಿಗಂತ ಕೆಂಪಾಗುವ ಮುನ್ನ ಇಲ್ಲವೇ ಕತ್ತಿನ ಮೇಲೆ ಕತ್ತಿ ಹಾಯುವ ಮುನ್ನ

(ಮರಾಠಿಯ ಪ್ರಸಿದ್ಧ ಕವಿ ನಾರಾಯಣ್ ಕುಲಕರ್ಣಿ ಕೋಠೈಕರ್ ಅವರ “ಬಾಂಗ್” ಕವಿತೆ. ಕನ್ನಡದಲ್ಲಿ “ಕೋಳಿ ಕೂಗು” ಕಲ್ಯಾಣ್ ಕಾವ್ಯಮಂಚ್ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಈ ಕವಿತೆಯನ್ನು ಪೂನಮ್ ಮಾನಕರ್ ಪಿಸೆಯವರು ಹಿಂದಿಯಲ್ಲಿ ಅನುವಾದಿಸಿ ಪ್ರಸ್ತುತ ಪಡಿಸಿದ್ದರು. ಅದನ್ನು ಕನ್ನಡಕ್ಕೆ ತಂದಿರುವೆ.)

AvithaKavithe Poetry column by Kannada writer poet Dr Girija Shastri

ಗಿರಿಜಾ ಅವರ ಕೃತಿಗಳು

*

ಪರಿಚಯ: ಮುಂಬೈಯಲ್ಲಿ ವಾಸಿಸುತ್ತಿರುವ ಡಾ. ಗಿರಿಜಾ ಶಾಸ್ತ್ರೀ ಕನ್ನಡದಲ್ಲಿ ಪಿಎಚ್.ಡಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಂ.ಎ. ಪದವಿಗಳನ್ನು ಪಡೆದಿದ್ದಾರೆ.  ಹೆಣ್ಣೊಬ್ಬಳ ದನಿ, ಕಥಾಮಾನಸಿ, ಕಥಾಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ, ಪುಸ್ತಕ ಮತ್ತು ನವಿಲುಗರಿ, ಮಾನಸಿಯ ಲೋಕ, ತಾಯಮುಖ ಕಾಣದಲ್ಲಾ, ಸೆರಗ ಬಿಡೊ ಮರುಳೇ. ಸಂಜೀವನ- ಬೆಂಗಳೂರಿನ ಜೈವಿಕ ವನದ ನಿರ್ಮಾತೃ ಡಾ. ಲಲಿತಮ್ಮನವರ ಸಾಹಸ ಗಾಥೆ ಪುಸ್ತಕಗಳು ಪ್ರಕಟಗೊಂಡಿವೆ. ಸಾವಿತ್ರಿ: ಪುರುಷೋತ್ತಮ ರೇಗೆಯವರ ಮರಾಠಿ ಕಾದಂಬರಿ ಇವರ ಅನುವಾದ ಕೃತಿ. ಇವರು ಮುಂಬೆಳಕು ಕನ್ನಡ ಬಳಗ ಮತ್ತು  ಸೃಜನಾ: ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಘಟಕಿ ಕೂಡ.

ಇದನ್ನೂ ಓದಿ : Poetry : ಅವಿತಕವಿತೆ ; ‘ರಶಿಯಾದ ಕುಡುಗೋಲಿಗೆ ಕೇರಳದ ತೆಂಗಿನಕಾಯಿ ಸೀಳಿದರೆ ಸಿಹಿನೀರ ಬುಗ್ಗೆ’

Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ