Book Release : ಅಚ್ಚಿಗೂ ಮೊದಲು ; ಇಂದು ಧಾರವಾಡದಲ್ಲಿ ಆರಿಫ್ ರಾಜಾ ‘ಎದೆ ಹಾಲಿನ ಪಾಳಿ’ ಕವನ ಸಂಕಲನ ಬಿಡುಗಡೆ

Poet : ‘‌ಅನ್ಯಮನಸ್ಕತೆಯೆಂಬುದು ಕವಿಯ ಹುಟ್ಟುಗುಣ, ಅದುವೇ ಅವನ ಬಂಡವಾಳ; ಅದಿಲ್ಲದೇ ಅವನು ಕಲಾವಿದನಾಗಲಾರ. ಆದರೆ ಪ್ರಭುತ್ವದಿಂದ ಹೇರಲ್ಪಟ್ಟ ಏಕಾಂತ ಅಥವಾ ಕವಿಸಮಯ ಹೆರುವುದಾದರೂ ಏನನ್ನು? ನಮ್ಮದೇ ತಬ್ಬಲಿನುಡಿಗೂಸುಗಳನ್ನು!’ ಆರಿಫ್ ರಾಜಾ

Book Release : ಅಚ್ಚಿಗೂ ಮೊದಲು ; ಇಂದು ಧಾರವಾಡದಲ್ಲಿ ಆರಿಫ್ ರಾಜಾ ‘ಎದೆ ಹಾಲಿನ ಪಾಳಿ’ ಕವನ ಸಂಕಲನ ಬಿಡುಗಡೆ
ಕವಿ ಆರಿಫ್ ರಾಜಾ
Follow us
ಶ್ರೀದೇವಿ ಕಳಸದ
|

Updated on:Dec 05, 2021 | 1:36 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

* ಕೃತಿ : ಎದೆ ಹಾಲಿನ ಪಾಳಿ (ಕವನ ಸಂಕಲನ) ಲೇಖಕರು : ಆರಿಫ್ ರಾಜಾ ಪುಟ : 160 ಬೆಲೆ : 150 ಮುಖಪುಟ ವಿನ್ಯಾಸ : ಮಂಜುನಾಥ ಲತಾ ಪ್ರಕಾಶನ : ಸಂಗಾತ ಪುಸ್ತಕ, ಧಾರವಾಡ

*

ಇಂದು ಸಂಜೆ (ಡಿ. 5) 5ಕ್ಕೆ ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಈ ಕೃತಿಯನ್ನು ಲೇಖಕಿ ವಿಜಯಾ ಗುತ್ತಲ ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಆರಿಫ್ ರಾಜಾ ಅವರ ಮನಬಿಚ್ಚಿದ್ದು ಮತ್ತು ಕವನ ನಿಮ್ಮ ಓದಿಗೆ.

* ಅನ್ಯ‌ಮನಸ್ಕತೆ ಎಂಬುದು ಕವಿಯ ಹುಟ್ಟು ಗುಣ, ಅದುವೇ ಅವನ ಬಂಡವಾಳ

ನನ್ನೊಂದಿಗೆ ನಾನು ಸಂವಹನ ಕಳೆದುಕೊಳ್ಳುತ್ತಿದ್ದೇನೆ ಅಂತ ಅನಿಸಿದಾಗ,ನಾನು ಕವಿತೆ ಬರೆಯಲಾರಂಭಿಸುತ್ತೇನೆ . ಕವಿತೆ ಕೇವಲ ನನ್ನ ಹೊರಗಿನ ಗದ್ದಲವಲ್ಲ, ನನ್ನೊಳಗಿನ ಗದ್ದಲವೂ ಹೌದು. ಏಕೆಂದರೆ ನನ್ನೊಂದಿಗೆ ನಾನು ಸಂವಹನ ಕಳೆದುಕೊಳ್ಳವುದೆಂದರೆ,ನನ್ನ ಸುತ್ತಲಿನ ಪರಿಸರದೊಂದಿಗೆ ಸಂವಹನ ಕಳೆದುಕೊಳ್ಳುವುದೆಂದೇ ಅರ್ಥ. ಈ ವಿಶಾಲವಾದ ಜಗದಲಿ ನಾನೂ ಒಬ್ಬ ಇದ್ದೇನೆ ಅಂತ ಹೇಳಲು ಅಥವಾ ಲೋಕದ ಎದುರು ಹಾಜರಿ ಹಾಕಲು ಇರುವ ನನ್ನ ಪಾಲಿನ ಏಕೈಕ ಮಾಧ್ಯಮ ಕವಿತೆ.

ರೀ ಡಿಫೈನಿಂಗ್ ಆಫ್ ಅವರ್ ಟೈಮ್ ಅಂಡ್ ಸ್ಪೇಸ್ ಅನ್ನುವುದೇ ಆರ್ಟ್. ಹತ್ತು ಜನ ಹೇಳಿದ ನಂತರ ಹನ್ನೊಂದನೆಯವರಿಗೂ ಅವಕಾಶ ಸಿಗುವುದಾದರೆ, ಅದೇ ನನ್ನ ಪಾಲಿನ‌ ನಿಜಗವಿತೆ.ಇದನ್ನು ನೀವು ಡೆಮೊಕ್ರಸಿ ಅಂತಿರೊ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ? ನಿಮಗೆ ಬಿಟ್ಟಿದ್ದು.

ನನ್ನ ಅಸ್ವಸ್ಥತೆಯು ನನ್ನ ಕಾಲದ ಅಸ್ವಸ್ಥತೆಯು ಹೌದು, ನನ್ನ ಸುತ್ತಲಿನ ಸಮಾಜದ ಅಸ್ವಸ್ಥತೆಯು ಹೌದು ಅಂತಾದರೆ, ಅದಕ್ಕೊಂದು ಚಲನಶೀಲ ಲಯ ದಕ್ಕಿದಾಗ,ಅದು ರೂಪಕವಾಗತ್ತದೆ ನನ್ನ ಪಾಲಿಗೆ.ಆ ಚಲನಶೀಲ ನಾದ ಕೆಲವೊಮ್ಮೆ ಸಂಗೀತ,ಕೆಲವೊಮ್ಮೆ ಹೋಲಿಕೆ, ಮತ್ತೆ ಕೆಲವು ಸಲ ಬರೇ ಮಾತು,ಹಲವು ಸಲ ಇವೆಲ್ಲವೂ ಸೇರಿದ ಅನುಭವ. ಕವಿತೆ ಏಕಕಾಲದಲ್ಲಿ, ಗರ್ವ ನಿರಸನ ಕ್ರಿಯೆಯೂ ಹೌದು, ಕವಿಯೊಬ್ಬನ‌ ಸ್ವಾಭಿಮಾನದ ಪ್ರಶ್ನೆಯು ಹೌದು!

ಹೀಗಾಗಿ ಯಾವುದೇ ಕಲಾಕಾರ ಅಥವಾ ಬರಹಗಾರನಲ್ಲಿ ನಾನು ಗಮನಿಸುವುದು ಬರೀ ‘ಇಸಂ’ಗಳನಲ್ಲ,ಅವನ ಒಟ್ಟಾರೆ ನಿಲುವು ಜೀವಪರವೋ ಅಥವಾ ಜೀವವಿರೋಧಿಯೋ ಅನ್ನುವುದೇ ನನಗೆ ಮುಖ್ಯ. ಫ್ರೀ ಸ್ಪಿರಿಟೆಡ್ ಮೈಂಡ್ ಕವಿತೆಯಲ್ಲಿ ಇರಲು ಸಾಧ್ಯ ಎಂದು ನಂಬಿದವ ನಾನು.

ಮತ್ತೆ ಮತ್ತೆ ಹೇಳುತ್ತೇನೆ: ನಾನು ಕನ್ನಡ ಕಲಿತೆ; ಹೀಗಾಗಿ ನನ್ನ ಮನೆಮಾತಿನಿಂದಲೇ ದೂರವಾದೆ.ಅದೇ ಎಲ್ಲರೂ ಹೇಳುತ್ತಾರಲ್ಲ ತಾಯ್ನುಡಿ ಅಂತ ಅದರಿಂದ. ಈಗೀಗ ನನಗೆ ಕನಸುಗಳು ಕೂಡ ಕನ್ನಡದಲ್ಲೇ ಬೀಳುತ್ತಿವೆ. ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ತಾಯ್ನುಡಿಯಲಿ ಬಿದ್ದ ಯಾವ ಕನಸುಗಳೂ ನನಗೆ ಸರಿಯಾಗಿ ನೆನಪಿಲ್ಲ. ನಡುನಡುವೆ ಬೈಲಿಂಗ್ವಲ್ ಕನಸುಗಳು ಬೀಳುತ್ತಿದ್ದವು. ಅದಕ್ಕೆ ಕಾರಣ ಬೇರೆ ಇದೆ! ನನ್ನೊಳಗೆ ನಾನೇ ಮಾತಾಡಿಕೊಳ್ಳುವುದು, ಆಗಾಗ ನನ್ನ ಸ್ನೇಹಿತರೊಂದಿಗೆ ಮಾತನಾಡುವುದು, ಯಾವಾಗಲೂ ನನ್ನ ಆಪ್ತಸಖಿಯೊಂದಿಗೆ ಮಾತನಾಡುವುದು ಕನ್ನಡದಲ್ಲೇ ಯಾದರೂ -ಅವಳ ತಾಯ್ನಡಿ ಕನ್ನಡವಲ್ಲವಾದರೂ-ನನ್ನ ಕುಟುಂಬಸ್ಥರೊಂದಿಗೆ ಮಾತನಾಡಲಿಕ್ಕೆಆಡುಮಾತಿನ ಉರ್ದುವನ್ನು ಪ್ರಾಣ ವಿಸರ್ಜನೆಯ ಸಂಕಟ ಅನುಭವಿಸುತ್ತಿರುವ ಈ ಲೋಕದ ಕೊನೆಯ ಗಜ಼ಲಿನಂತೆ ಉಳಿಸಿಕೊಂಡಿದ್ದೇನೆ.

‌ಇದೊಂದು ವಿಚಿತ್ರ ವಿಧಿ.ಒಂದು ಸಾಹಿತ್ಯಿಕ ಭಾಷೆಯ ಆಯ್ಕೆ ಒಬ್ಬ ಲೇಖಕನನ್ನು ಏನನ್ನು ಬರೆಯಬೇಕು? ಹೇಗೆ ಬರೆಯಬೇಕು? ಯಾರ ಸಲುವಾಗಿ ಬರೆಯಬೇಕು? ಎಂಬುದನ್ನೆಲ್ಲಾ ನಿರ್ಧರಿಸಿ ನಿಯಂತ್ರಿಸುವುದು ಸುಳ್ಳಲ್ಲ. ಕವಿಯೊಬ್ಬ ಭಾಷೆಯನ್ನು ಆರಿಸಿಕೊಳ್ಳುವುದಿಲ್ಲ; ಭಾಷೆಯೇ ಅವನನ್ನು ಹಾರಿಸಿಕೊಂಡು ಹೋಗುತ್ತದೆ.ಎಲ್ಲರಿಗೂ ಗೊತ್ತು, ಈ ಒತ್ತಾಯ ಪೂರ್ವಕ ಆಯ್ಕೆಯ ಹಿಂದೆ ಹಲವು ಚಾರಿತ್ರಿಕ ಸಾಂಸ್ಕೃತಿಕ ಕಹಿ ಸತ್ಯಗಳಿವೆ. ಭಾಷೆಯೆಂಬುದು ಕೇವಲ ಶುಷ್ಕ ಅಕ್ಷರ ಬಳ್ಳಿಯಲ್ಲ; ನಮ್ಮ ಭಾವಕೋಶಗಳಿಗೆ ನೆತ್ತರ ಹಾಲು ಪೂರೈಸುವ ನಿತ್ಯ ನಿರಾಳ ನರ ನಾಡಿಯದು.

ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಿ? ನನ್ನ ಪಾಲಿಗೆ, ಕನ್ನಡವೆಂಬುದು ಅನ್ನಕೊಡುವ ಬದುಕೂ ಹೌದು; ‌ನನಗೆ ನಾನೇ ಮಾಡಿಕೊಂಡ ಆತ್ಮವಂಚನೆಯೂ ಹೌದು; ಆತ್ಮಸಂಗಾತವೂ ಹೌದು! ಆಗ ಶಿಶುನಾಳ ಶರೀಫರಿಗೆ ಕೇಳಿರಬಹುದಾದ ಹಲವು ಪ್ರಶ್ನೆಗಳನ್ನು ನನಗೀಗಲೂ ಕೇಳಲಾಗುತ್ತದೆ; ಆದರೆ ಅಂಬಿಕಾತನಯದತ್ತರಿಗಿದ್ದ ಹಲವು ಸವಲತ್ತುಗಳು ನನಗಿಲ್ಲ. ‘ಓಂಕಾರದ ನಾದಕ್ಕಿಂತ ಕಿಂಚಿದೂನ’ ಅಂದ್ರೆ ನೊ ಪ್ರಾಬ್ಲಮ್ ಅದೇ ನಾನು ‘ನಟ್ಟ ನಡುರಾತ್ರಿ ಅಜ಼ಾನ್ ಕೂಗಬಹುದು ಹುಂಜ ಕುಕ್ಕರಿನಲಿ’ ಅಂತ ಬರೆದರೆ ಏನೋ ಇರಿಸುಮುರುಸಾಗಿ ಹಿರಿಯ ಕವಿಯೊಬ್ಬರು ಅಸಮಾಧಾನದಿಂದ ಫೋನ್ ಮಾಡುತ್ತಾರೆ!

Acchigoo Modhalu axcerpt of ede halina pali by Kannada Poet Arif raja published by sangata dharwad

ಆರೀಫ್ ರಾಜಾ ಕೃತಿಗಳು

‌ಆದರೆ ಕವಿಯೊಬ್ಬನ ಕೋಪಕ್ಕೆ ವಿಷಾದದ ನುಡಿಗಳಿಗೆ ಯಾವ ಭಾಷೆಯ ಗಡಿರೇಖೆಗಳೂ ತಡೆಯೊಡ್ಡಲಾರವು. ಜಗತ್ತಿನಾದ್ಯಂತ ನೋವಿಗಿರುವಿದೊಂದೇ ಭಾಷೆ, ನಲಿವಿಗಿರುವಿದೊಂದೇ ಭಾಷೆ, ನೆನಪಿಗಿರುವೊಂದೇ ಭಾಷೆ. ನುಡಿಯೆಂಬುದು ತೀರ ವೈಯಕ್ತಿಕವಾದದ್ದು ಹೀಗಾಗಿ ಎಲ್ಲರಿಗೂ ಸೇರಿದ್ದು, ನಮ್ಮ ಕನಸುಕನವರಿಕೆಗಳಿಗೆ ಸಂಬಂಧಿಸಿದ್ದು, ಜ್ವರಬಂದಾಗ ಬಡಬಡಿಸುವ ಆವೇಶದಂತಹದ್ದು. ಇದು ರಾಜಕೀಯ ಭಾಷಣವಲ್ಲ; ಧರ್ಮಗುರುವಿನ ಪ್ರವಚನವಲ್ಲ,ವಿಜ್ಞಾನಿಯ ಖಚಿತ ಅತ್ಮವಿಶ್ವಾಸ ಇದಲ್ಲ. ಇದೊಂದು ಬಗೆಯ ಭೂತನರ್ತನ ..ಅಷ್ಟೇ. ಇದೊಂದು ಸಾಂಕೇತಿಕವಾದ ಆದಿಮಲಯ, ನಿಗೂಢ ನುಡಿ. ಒಡೆದರೂ ಒಡುಪಾಗಿ ಉಳಿವ ತಿಳುವಳಿಕೆ. ಮಾತಿಗೂ ಮೊದಲಿನ ಮೌನ, ಮೌನಕ್ಕೂ ಮೊದಲಿನ ಧ್ಯಾನ, ಧ್ಯಾನಕ್ಕೂ ಮದಲಿನ ಜ್ಞಾನ, ಜ್ಞಾನಕ್ಕೂ ಮೊದಲಿನ ಇನ್ನೇನೋ..?

‌ಅನ್ಯಮನಸ್ಕತೆಯೆಂಬುದು ಕವಿಯ ಹುಟ್ಟುಗುಣ, ಅದುವೇ ಅವನ ಬಂಡವಾಳ; ಅದಿಲ್ಲದೇ ಅವನು ಕಲಾವಿದನಾಗಲಾರ. ಆದರೆ ಪ್ರಭುತ್ವದಿಂದ ಹೇರಲ್ಪಟ್ಟ ಏಕಾಂತ ಅಥವಾ ಕವಿಸಮಯ ಹೆರುವುದಾದರೂ ಏನನ್ನು? ನಮ್ಮದೇ ತಬ್ಬಲಿನುಡಿಗೂಸುಗಳನ್ನು! ‌ ಈ ಕವಿತೆಗಳನ್ನು ನಾನೇನಾದರೂ ಉರ್ದುವಿನಲ್ಲಿ ಬರೆದಿದ್ದರೆ; ಇನ್ನೂ ನಿಖರವಾಗಿ ಹೇಳಬೇಕೆಂದರೆ ಆಡುಮಾತಿನ ದಖನಿಯಲ್ಲಿ ಬರೆದಿದ್ದರೆ,ಇದರ ಸ್ವರೂಪವೇ ಬಹುಶಃ ಬೇರೆಯಾಗಿರಬಹುದಿತ್ತೇನೋ. ‌ನೊ ಮ್ಯಾನ್ಸ್ ನಲ್ಲಿ ಲ್ಯಾಂಡ್ ನಲ್ಲಿ ಹುಟ್ಟುವ ರೂಪಕಗಳಿಗೆ ಯಾವ ಅರ್ಥವನ್ನು ಹಚ್ಚಲು ಬರುವುದಿಲ್ಲ. ಒಬ್ಬ ನಿಜವಾದ ಕಲಾವಿದ ಅವನು ಸ್ವರ್ಗಕ್ಕೂ ಸೇರಿರುವುದಿಲ್ಲ; ನರಕಕ್ಕೂ.. ಪ್ರಜ್ಞೆ ಅಪ್ರಜ್ಞೆಯ ತೊಳಲಾಟದಾಚೆಗೆ ಅವನದು ತ್ರಿಶಂಕು ಸ್ವರ್ಗ. ಅವನಿಗೆ ಗೊತ್ತಿರುತ್ತದೆ ಶಬ್ದಗಳು ಶಬ್ದಗಳೆ ಪದಗಳು ಪದಗಳೇ ಪಂಚಭೂತಗಳ ಹಾಗೆ ತಾಯಿಯ ಎದೆಹಾಲಿನ ಹಾಗೆ ನಿತ್ಯಾತೀತ ಜಾತ್ಯಾತೀತ ಧರ್ಮಾತೀತ.

*

ಮುದ್ದು ಗೆಳತಿಗೊಂದು ಪತ್ರ

ಪೊಲೀಸರು ಕೈ ಕೋಳ ತೊಡಿಸಿದಾಗ ನನ್ನಜ್ಜನನ್ನ ಜನ ‘ಸ್ವತಂತ್ರ ಹೋರಾಟಗಾರ’ ಅಂತ ಕರೆದರು

ಮತ್ತದೇ ಪೊಲೀಸರು ನಮಪ್ಪನ ಕೈಗೆ ಬೇಡಿ ಹಾಕಿದಾಗ ಇದೇ ಜನ ‘ಮೂಲಭೂತವಾದಿ.. ಉಗ್ರಗಾಮಿ’ ಅಂತ ಜರೆದರು

ಮತ್ತೆ ನನ್ನನ್ನು ಅದೇ ಪೊಲೀಸರು ಅರೆಸ್ಟ್ ಮಾಡುತ್ತಾರೆ ಮತ್ತೆ ಅದೇ ಜನ ನನಗೀಗ ಪ್ರೀತಿಯಿಂದ ಹೆಸರಿಡುತ್ತಾರೆ ‘ಜಿಹಾದಿ..ಲವ್ ಜಿಹಾದಿ’

ಹೌದು ಗೆಳತಿ ನೀನು ಹೇಳಿದ್ದು ಖರೇ

ಹೆಸರಿನೊಳಗೇನೈತಿ ಬರೀ ಹೆಸರು ಮಾತ್ರ!

*

(ಈ ಸಂಕಲನದ ಖರೀದಿಗೆ : 8431113501)

ಪರಿಚಯ : ಆರಿಫ್‌ ರಾಜಾ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದವರು. 1983 ಡಿಸೆಂಬರ್‌ 6ರಂದು ಜನನ. ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವು ಕವಿತೆಗಳು ಇಂಗ್ಲಿಷ್, ಸ್ಪ್ಯಾನಿಷ್, ಪರ್ಷಿಯನ್ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಗುಜರಾತಿ, ಪಂಜಾಬಿ, ಅಸ್ಸಾಮಿ ಮುಂತಾದ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. 2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತರಾದ ಇವರು, ಸೈತಾನನ ಪ್ರವಾದಿ, ಜಂಗಮ ಫಕೀರನ ಜೋಳಿಗೆ, ಬೆಂಕಿಗೆ ತೊಡಿಸಿದ ಬಟ್ಟೆ, ನಕ್ಷತ್ರ ಮೋಹ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಭಾವನಾತ್ಮಕ ತಾಕಲಾಟವನ್ನು ಬಹುಸಂಸ್ಕೃತಿಯ ನೆಲೆಯಲ್ಲಿ ಪುನರ್‌ಸಂಘಟಿಸುವ ಇವರ ರಚನೆಗಳಲ್ಲಿ ಹೊಸ ನುಡಿಗಟ್ಟಿದೆ ಎಂದು ವಿಮರ್ಶಕರು ಗುರುತಿಸಿದ್ದಾರೆ.

ದಿನಕರ ದೇಸಾಯಿ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ, ಕ.ಸಾ.ಪ. ಅರಳು ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ದೊರೆತಿವೆ. 2012 ರಲ್ಲಿ ಕೇರಳದ ತ್ರಿವೇಂದ್ರಮ್ ನಲ್ಲಿ ನಡೆದ ‘ಕೃತ್ಯ’ ಇಂಟರ್ನ್ಯಾಷನಲ್ ಪೊಯೆಟ್ರಿ ಫೆಸ್ಟಿವಲ್​ನಲ್ಲಿ ಭಾಗವಹಿಸಿರುತ್ತಾರೆ.

*

ಇದೇ ಕಾರ್ಯಕ್ರಮದಲ್ಲಿ : New Poetry Collection : ಎಚ್. ಎಸ್. ಶಿವಪ್ರಕಾಶರ ನಾಲ್ಕು ದಶಕದ ಕವಿತೆಗಳು ‘ಹೋಗಿಬನ್ನಿ ಋತುಗಳೇ’ ಇಂದು ಬಿಡುಗಡೆ

Published On - 1:32 pm, Sun, 5 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ