ಜನಪ್ರತಿನಿಧಿಗಳೇ ಎಚ್ಚರವಿರಲಿ : ಯಾವುದೋ ಗಂಡು ಸುಮ್ಮನೆ ಸವರಿಹೋದರೂ ಸಾಕು ಆ ಅಸಾಧ್ಯ ಸಂಕಟ ನಿಮಗೇನು ಗೊತ್ತು?

Patriarchy : ‘ಇವೆಲ್ಲವೂ ಈಗಾಗಲೇ ಸ್ಥಾಪಿತವಾಗಿರುವ ಪುರುಷ ಪ್ರಾಬಲ್ಯದ ಹೀನ ಸುಳಿಗಳು. ಹೆಣ್ಣೆಂದರೆ ಭೋಗದ ಯಾಂತ್ರಿಕ ಸಿದ್ಧಮಾದರಿ. ಆಕೆಯ ಅಸ್ತಿತ್ವ, ಅಸ್ಮಿತೆ, ಅಸಾಧಾರಣತೆಯನ್ನೆಲ್ಲ ನಿರಾಕರಿಸಿ, ನಿವಾಳಿಸಿ ಎಸೆದು ಹೆಣ್ಣಾಕೃತಿಯ ಅಂಗಗಳನ್ನೆಲ್ಲ ಕಣ್ಣಿನಲ್ಲೆ ಅಳತೆ ಮಾಡಿ ಮಾನಸಿಕವಾಗಿಯೇ ಭೋಗಿಸಿಬಿಡುವ, ಪಾರಂಪರಿಕವಾಗಿ ಪಯಣಿಸಿ ಜೊತೆಯಲ್ಲೆ ಸಾಗಿಬಂದ ಗಂಡಿನ ಸ್ವೇಚ್ಛಾಚಾರದ ಪ್ರತಿಬಿಂಬಗಳು.’ ಮಮತಾ ಅರಸೀಕೆರೆ

ಜನಪ್ರತಿನಿಧಿಗಳೇ ಎಚ್ಚರವಿರಲಿ : ಯಾವುದೋ ಗಂಡು ಸುಮ್ಮನೆ ಸವರಿಹೋದರೂ ಸಾಕು ಆ ಅಸಾಧ್ಯ ಸಂಕಟ ನಿಮಗೇನು ಗೊತ್ತು?
ಲೇಖಕಿ ಮಮತಾ ಅರಸೀಕೆರೆ
Follow us
ಶ್ರೀದೇವಿ ಕಳಸದ
|

Updated on: Dec 18, 2021 | 11:08 AM

Rape : ನಿನ್ನೆ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್​ ಮುಖಂಡ ಕೆ.ಆರ್​. ರಮೇಶ್​ ಕುಮಾರ್​ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್​ ಕುಮಾರ್​, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ. 

ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com

*

ಅರಸೀಕೆರೆಯಲ್ಲಿ ವಾಸವಾಗಿರುವ ಲೇಖಕಿ ಮಮತಾ ಅರಸೀಕೆರೆ ಅವರ ಪ್ರತಿಕ್ರಿಯೆ.

*

ಅತ್ಯಾಚಾರವೆಂಬುದು ಕೇವಲ ಒಂದು ಹೇಯ ಘಟನೆ ಮಾತ್ರವಲ್ಲ. ಅದು ಪೈಶಾಚಿಕ ಕೃತ್ಯ. ಅದಕ್ಕಿರುವ ಆಯಾಮಗಳು ನೂರಾರು. ಯಾವುದೇ ಸಂಗತಿಗಾದರೂ ವ್ಯಾಖ್ಯಾನದ ಅಡಿಯಲ್ಲಿ ನಿರೂಪಣೆಯ ರೂಪ ಕೊಡಬಹುದು. ಅತ್ಯಾಚಾರ ಎಲ್ಲಾ ದುರ್ಘಟನೆಗಳನ್ನು ಮೀರಿದ್ದು. ಕೊಲೆಗೊಂದು ಸಮರ್ಥನೆಯಾದರೂ ಇದ್ದೀತು. ಅತ್ಯಾಚಾರಕ್ಕಲ್ಲ. ಜಗತ್ತಿನ ಯಾವುದೇ ಭಾಷೆ ಅತ್ಯಾಚಾರದ ವಿಕೃತ ಪರಿಣಾಮಗಳನ್ನು ಸಾದ್ಯಂತವಾಗಿ  ವಿವರಿಸಲು ಶಕ್ತವಲ್ಲ. ಪದಗಳಿಗೆ ನಿಲುಕದ, ಭಾವಕ್ಕೆ ಊಹಿಸಲೂ ಅಶಕ್ತವಾದ, ವ್ಯಕ್ತಪಡಿಲಾಗದ, ಉನ್ಮಾದ ಮೌನದ ಪರಮಾವಧಿ ಸ್ಥಿತಿಯ ಅವಸ್ಥೆ.

ಅತ್ಯಾಚಾರವೆಂಬುದು ಜಗತ್ತಿನ ಪಿಡುಗು. ಗಂಡಸಿನ ಪರಮ ದೌರ್ಬಲ್ಯದ ಸಂಕೇತ. ವಯಸ್ಸು, ಜಾತಿ, ಸಂಬಂಧದ ತೀವ್ರತೆ, ಸ್ಥಳ-ಪ್ರದೇಶದ ಬೇಧಭಾವವಿಲ್ಲದ ಯಾವುದೇ ಮಾನದಂಡಕ್ಕೂ ನಿಲುಕದ ಹೇಯ ಕೃತ್ಯ. ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಗಂಡುಕುಲ ತೋರ್ಪಡಿಸುವ ಮೃಗೀಯ ವರ್ತನೆ. ಪೌರುಷ ತೋರಿ ದೌರ್ಜನ್ಯ ಎಸಗಿ ಗಂಡು ಸಲೀಸಾಗಿ ನಡೆದುಬಿಡಬಹುದು. ಹೆಣ್ಣೆಂಬ ದೇಹರೂಪಿ ಜೀವಕ್ಕೆ ಅದರಿಂದುಂಟಾಗುವ ಭೀಕರ ಪರಿಣಾಮ ಜೀವನವಿಡೀ ಕಾಡುವ ವಿಚಿತ್ರ ಭಯಾನಕ ಹಿಂಸೆ ಸ್ವರೂಪಿ. ಅಂಥದ್ದರಲ್ಲಿ ಅತ್ಯಾಚಾರವೆಂಬುದು ಆನಂದದ ಸಂಗತಿಯಾಗುವುದು ಹೇಗೆ? ಯಾರಿಗೆ ಆನಂದ? ಹೆಣ್ಣುಜೀವದ ಆ ಚಡಪಡಿಕೆ, ತಳಮಳ, ತಲ್ಲಣದ ಅವಸ್ಥೆ, ಗಾಸಿಯ ಪ್ರಮಾಣಗಳನ್ನು ಅಳೆಯಲು ಯಾವ ಅಳತೆಗೋಲೂ ಸಹ ಇಲ್ಲ. ಮನಸು ಸ್ಥಂಭಿಸುತ್ತದೆ. ದೇಹ ಜಡವಾಗುತ್ತದೆ. ಕಂಡಕಡೆಯೆಲ್ಲ ಶೂನ್ಯ, ಅಪನಂಬಿಕೆಯಲ್ಲಿ ಬದುಕು ಜರ್ಜರಿತ, ಕಡೆಯ ಉಸಿರಿನವರೆಗೂ ಜೀವಂತ ಶವದ ಯಾನ. ಹಾಗಾದಾಗ ಈ ದುರ್ಬರತೆ ಗಂಡಿಗೆ ಅರಿವಿದೆಯೇ?

ಇಷ್ಟೆಲ್ಲ ಕುಖ್ಯಾತಿ, ಘನಘೋರ ಪರಿಣಾಮಗಳು ಈ ಅತ್ಯಾಚಾರದಿಂದ ಉಂಟಾಗುತ್ತವೆ ಗೊತ್ತಿದೆಯೇ ಮಾನ್ಯರೆ. ನೀವೇನೋ ಅತ್ಯಾಚಾರವನ್ನು ತಡೆಯಲು ಅಸಾಧ್ಯವಾದರೆ ಆನಂದಿಸಿ ಅಂತೆಲ್ಲ ಬಿಡುಬೀಸು ಹೇಳಿಕೆ ಕೊಟ್ಟುಬಿಡ್ತೀರಿ ಈ ಹಿಂದೆ ಅದ್ಯಾರೋ ಮಹಾನುಭಾವರೊಬ್ಬರು ಕೂಡ ಹೀಗೆ ಹೇಳಿದ್ದ ನೆನಪು. ‘ಒಂದು ವೇಳೆ ಅತ್ಯಾಚಾರವನ್ನು ತಡೆಯಲು ಅಸಾಧ್ಯವಾದರೆ ಆ ಘಟನೆಯನ್ನು ಅನುಭವಿಸಿಬಿಡಿ’ ಎಂಬ ಮಾನಸಿಕ ಅಸ್ವಸ್ಥ ಹೇಳಿಕೆ. ಯಾಕೆ ಹೇಳಿ? ಆ ದುರ್ಘಟನೆ ತಮ್ಮ ಮೇಲೆ ಜರುಗುವುದಿಲ್ಲ ನೋಡಿ. ತಮಗೆ ಅನುಭವಕ್ಕೆ ಬರದ ಯಾವುದೇ ಪ್ರಸಂಗವೂ ಕೂಡ ಬಹಳ ಸುಲಭಕ್ಕೆ ಉಪದೇಶದ ಪರಿಧಿಯೊಳಗೆ ಅಡ್ಡಾದಿಡ್ಡಿ ತೇಲಾಡುತ್ತವೆ. ಆಲೋಚನೆಯ ಪರಿಕ್ರಮದೊಳಗೆ ಗಂಭೀರ ಸ್ಥಿತಿ ಪಡೆಯದ ಯಾವುದೇ ಸಾಮಾಜಿಕ ಪಿಡುಗು ಅಥವಾ ಘಟನೆ ಮತ್ತೊಬ್ಬರ ದೃಷ್ಟಿಯಲ್ಲಿ ತೀರಾ ತೆಳು ಸಂದರ್ಭವನ್ನು ದಕ್ಕಿಸಿಕೊಳ್ಳುವುದು ದುರಂತ.

ಈಗಾಗಲೇ ಅತ್ಯಾಚಾರಗಳು ಸಹಜವೇ ಸಹಜವೆಂಬಂತೆ, ಗಂಡಿನ ತೆವಲು ಹಾಗೂ ಕ್ಷಣಿಕ ಸಮಯದ ಚಟದ ಅವಶ್ಯಕತೆಯೆಂಬಂತೆ ಘಟಿಸುತ್ತಲಿವೆ. ಈ ಕೃತ್ಯಕ್ಕೆ ಕೊನೆಮೊದಲಿಲ್ಲದೆ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಅಸಹಾಯಕಳು. ಸುರಕ್ಷಿತವೆಂದು ತೋರಿಕೆಗೆ ಭಾವಿಸುವ ನಾಲ್ಕು ಗೋಡೆಯ ಮನೆಯಾವರಣದಿಂದ, ಬಯಲಿನ ಬದುಕಿನ ಎಲ್ಲಾ ಸ್ಥಳವೂ ಆಕೆಗೆ ಅಸುರಕ್ಷಿತ. ಯಾವುದೋ ಗಂಡು ಸುಮ್ಮನೆ ಸವರಿಹೋದರೂ ಸಾಕು ಅಸಾಧ್ಯ ಸಂಕಟ ಅನುಭವಿಸುವ ಆಕೆಯ ತಳಮಳ ನಿಮಗೇನು ಗೊತ್ತು? ಸಾವಿರಾರು ಅತ್ಯಾಚಾರಗಳಾಗಿ ಆ ಹೆಣ್ಣುಗಳು ಸಾಮಾಜಿಕ, ಮಾನಸಿಕ, ಕೌಟುಂಬಿಕ ನರಕ ಹಿಂಸೆಯನ್ನು ಅನುಭವಿಸುವಾಗ ಈ ಎಲ್ಲಾ ಕೆಟ್ಟ ಪರಿಸ್ಥಿತಿಗೆ ಇನ್ನೂ ಮದ್ದು ಕಂಡುಹಿಡಿಯಲೇ ಇಲ್ಲ. ಅಶಕ್ತವಾದ ಸಮಾಜದಲ್ಲಿ ತಮ್ಮಂತಹ ಜನಪ್ರತಿನಿಧಿಗಳು, ಸೂಕ್ಷ್ಮಜ್ಞರೆನಿಸಿಕೊಂಡವರು  ಇಂತಹ ಅನಾರೋಗ್ಯಕರ, ಅಸಹಜ, ಅಪ್ರಸ್ತುತ, ಅಸೂಕ್ಷ್ಮ ಮಾತುಗಳನ್ನಾಡಿದರೆ ಯಾವ ತೀರ್ಮಾನ ತೆಗೆದುಕೊಳ್ಳುವುದು? ಏನೆಂದು ನಿರ್ಧರಿಸುವುದು?

ಇವೆಲ್ಲವೂ ಈಗಾಗಲೇ ಸ್ಥಾಪಿತವಾಗಿರುವ ಪುರುಷ ಪ್ರಾಬಲ್ಯದ ಹೀನ ಸುಳಿಗಳು. ಹೆಣ್ಣೆಂದರೆ ಭೋಗದ ಯಾಂತ್ರಿಕ ಸಿದ್ಧಮಾದರಿ. ಆಕೆಯ ಅಸ್ಥಿತ್ವ, ಅಸ್ಮಿತೆ, ಅಸಾಧಾರಣತೆಯನ್ನೆಲ್ಲ ನಿರಾಕರಿಸಿ, ನಿವಾಳಿಸಿ ಎಸೆದು ಹೆಣ್ಣಾಕೃತಿಯ ಅಂಗಗಳನ್ನೆಲ್ಲ ಕಣ್ಣಿನಲ್ಲೆ ಅಳತೆ ಮಾಡಿ ಮಾನಸಿಕವಾಗಿಯೇ ಭೋಗಿಸಿಬಿಡುವ ಪಾರಂಪರಿಕವಾಗಿ ಪಯಣಿಸಿ ಜೊತೆಯಲ್ಲೆ ಸಾಗಿಬಂದ ಗಂಡಿನ ಸ್ವೇಚ್ಛಾಚಾರದ ಪ್ರತಿಬಿಂಬಗಳು. ಯಾವುದೇ ಎಗ್ಗಿಲ್ಲದೆ ಸಮಯ ಸಂದರ್ಭ ನೋಡದೆ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಸೆನ್ಸಾರಿಲ್ಲದೆ ಹೆಣ್ಣನ್ನು ಬೆತ್ತಲೆಯಾಗಿಸಿಬಿಡಬಹುದು. ಅದನ್ನೊಂದು ರುಚಿಕರವಾದ ಸಂಗತಿಯ ತಿನಿಸನ್ನಾಗಿ ಮಾಡಿಕೊಂಡ ಜೊತೆಯವರು ನಿರಾಳವಾಗಿ, ನಿರಾತಂಕವಾಗಿ ಚಪ್ಪರಿಸಿಬಿಡಬಹುದಾದ ಯಕಃಶ್ಚಿತ್ ಸಾಮಗ್ರಿಯನ್ನಾಗಿಸಿ ಆನಂದದಿಂದ ಸವಿಯಬಹುದು.

ಎಲ್ಲಾ ರೀತಿಯ ದಬ್ಬಾಳಿಕೆ ದೌರ್ಜನ್ಯದಿಂದ ರಕ್ಷಿಸಬೇಕಾದ ಪ್ರಜ್ಞಾವಂತರು, ಆರಾಮಾವಾಗಿರುವಂತಹ, ನಿರಾತಂಕದ ವಾತಾವರಣ ಸೃಷ್ಟಿಸಬೇಕಾದ ಪ್ರತಿನಿಧಿಗಳು ಈ ರೀತಿಯ ಹೇಳಿಕೆ ನೀಡುವುದು ನಾಗರೀಕ ಸಮಾಜಕ್ಕೆ ತರವಲ್ಲ. ಸಭ್ಯ ಸಮಾಜದ ನಿರ್ಮಾಣ ಪ್ರಭುತ್ವ ಹಾಗೂ ನಾಗರಿಕರ ಕರ್ತವ್ಯ. ಅಸಹ್ಯಕರ ಸ್ಥಾಪಿತ ಸಂಗತಿಗಳಾಗಿ ಮನಸ್ಸಿನಲ್ಲಿ ಹುದುಗಿದ್ದುದೇ ಯಾವತ್ತಿಗೂ ಹೊರಬರುವುದು. ಪ್ರಜ್ಞಾಪೂರಕವಾಗಿ ಅಂತಹುಗಳನ್ನು ನಿರ್ಬಂಧಿಸದಿದ್ದರೆ ಈ ಪಿಡುಗಿಗಾವ ಅಂತ್ಯವೂ ಇಲ್ಲ.

ಇದನ್ನೂ ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಮಲಗಿ ಆನಂದಿಸುವುದು’ ಹೆಂಗಸರಿಗೆ ಅನಿವಾರ್ಯವಾಗಿರುವುದು ಕುಟುಂಬದಲ್ಲೇ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ