Maha Shivaratri; ಕಾಯುವನೇ ಶಿವ?: ಯಾರದ್ ಸ್ಯಟ್ಟಿ ಕುಟ್ಟೂದ್ ಹೋಯ್ನಿ ಕಾಂಬ ಅತ್ಲಾಯ್

‘ನನಗಂತೂ ಅವನು ಬಂದರೆ ಏನೋ ನಿರಾಳ. ನಮ್ಮ ಮನೆಯ ಬಿಗುವಿನ ವಾತಾವರಣ ಮರೆತು ನಗಲೊಂದು  ಸುಸಂದರ್ಭ. ಏನಾದರೊಂದು ತಮಾಷೆ ಮಾಡಿ, ನಾವು ನಗುವುದನ್ನು ಕಂಡು ತಾನೂ ನಗುನಗುತ್ತಾ ಅವಲಕ್ಕಿ, ಹೆಸರುಗಂಜಿ ತಿಂದು ಎರಡುಮುಡಿಯ ಕಡೆ ಗಿಡ್ಡ ಹೊರಟಾಗ ನಮಗೆ ಬೇಜಾರು. ಆದರೆ ಅವನು ಅಜ್ಜಿಯ ನಿರ್ದೇಶನದಂತೆ ಬೊಂಡ ಕದಿಯುವವರನ್ನು ಓಡಿಸಲು ಟಾರ್ಚ್ ಹಿಡಿದು ಹೊರಟು ಹೋಗುತ್ತಿದ್ದ. ನನಗಂತೂ ಅವನ ಜೊತೆ ಹೋಗಿ ಕಳ್ಳರನ್ನು ಕಾಯಬೇಕೆಂದು ಆಸೆಯಾಗುತ್ತಿತ್ತು!' ವಿಜಯಶ್ರೀ ಹಾಲಾಡಿ

Maha Shivaratri; ಕಾಯುವನೇ ಶಿವ?: ಯಾರದ್ ಸ್ಯಟ್ಟಿ ಕುಟ್ಟೂದ್ ಹೋಯ್ನಿ ಕಾಂಬ ಅತ್ಲಾಯ್
ವಿಜಯಶ್ರೀ ಹಾಲಾಡಿ
Follow us
ಶ್ರೀದೇವಿ ಕಳಸದ
|

Updated on:Mar 11, 2021 | 6:43 PM

ಮತ್ತೊಂದು ಶಿವರಾತ್ರಿಯಲ್ಲಿ ನಾವು ನೀವೆಲ್ಲ. ಕ್ಷಣಕ್ಷಣವೂ ಅಲ್ಲೆಲ್ಲಿಂದಲೋ ಘಂಟೆಗಳ ನಿನಾದ ಕೇಳಿಬರುತ್ತಿರಬಹುದು. ನೂರೆಂಟು ನಾಮಾವಳಿಗಳು ಅನುರಣಿಸುತ್ತಿರಬಹುದು. ಫಲಾಹಾರಗಳು ನಿಮ್ಮೆದುರಿಗಿರಬಹುದು. ಮೈಕುಗಳಿಂದ ನಾಮಸಂಕೀರ್ತನೆಗಳು ತೇಲಿಬರುತ್ತಿರಬಹುದು. ಉರಿಬಿಸಿಲಿನಲ್ಲಿ ಸಾಲಿನಲ್ಲಿ ತುದಿಗಾಲ ಮೇಲೆ ದರ್ಶನಕ್ಕಾಗಿ ನಿಂತಿರಬಹುದು. ಜಾಗರಣೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು; ಸತ್ಯ, ಶಕ್ತಿ, ಸೌಂದರ್ಯ ಸ್ವರೂಪನಾದ ಅಚಿಂತ್ಯ ನಿಮ್ಮ ಮನಸ್ಸನ್ನು ಈವತ್ತು ಹೇಗೆ ಆವರಿಸಿಕೊಂಡಿದ್ದಾನೆ, ಈ ಕ್ಷಣದಲ್ಲಿ ತೇಲಿಬಂದ ನೆನಪನ್ನು ಹಂಚಿಕೊಳ್ಳಬಹುದೇ ಎಂದು ‘ಟಿವಿ 9 ಕನ್ನಡ ಡಿಜಿಟಲ್’​ ಕೇಳಿತು. ಆಗ ಹೊಮ್ಮಿದ್ದೇ ‘ಕಾಯುವನೇ ಶಿವ?’ ಸರಣಿ. ಇಲ್ಲಿ ಅವನು ಪುಳಕಗೊಳಿಸಿದ್ದಾನೆ. ಕಳವಳಕ್ಕೆ ದೂಡಿದ್ದಾನೆ, ವಿಷಾದಕ್ಕೆ ನೂಕಿದ್ಧಾನೆ, ಆಪ್ತವಾಗಿ ಕೈಹಿಡಿದಿದ್ದಾನೆ, ಪ್ರೀತಿಯಿಂದಲೂ ಅಪ್ಪಿದ್ದಾನೆ. ಅನುಭವ ಅರಿವಿನಿಂದ ಮುನ್ನಡೆಸಿದ್ದಾನೆ. 

ಪರಿಕಲ್ಪನೆ: ಶ್ರೀದೇವಿ ಕಳಸದ

ತಮ್ಮೂರಿನ ಶಿವರಾತ್ರಿಯ ನಿಗೂಢ ಲೋಕವನ್ನಿಲ್ಲಿ ತೆರೆದಿಟ್ಟಿದ್ದಾರೆ ಲೇಖಕಿ ವಿಜಯಶ್ರೀ ಹಾಲಾಡಿ.

ಶಿವರಾತ್ರಿಯೊಂದಿಗೆ ಬೆಸೆದುಕೊಂಡ ನಮ್ಮೂರಿನ ನೆನಪುಗಳು ಆಪ್ತ ಮತ್ತು ನಿಗೂಢ. ಆಡುಭಾಷೆಯಲ್ಲಿ ‘ಮುದುವೇರಿ’ಎಂದು ಕರೆಸಿಕೊಳ್ಳುವ ನಮ್ಮೂರು ಮುದೂರಿ;  ಹಾಲಾಡಿ ಗ್ರಾಮದ ಒಂದು ಸಣ್ಣಹಳ್ಳಿ. ರಸ್ತೆಯಾಗಲಿ, ವಿದ್ಯುತ್ತಾಗಲಿ ಇಲ್ಲದ ಕಾಲವದು. ಹಾಡಿ, ಹಕ್ಕಲು, ತೋಟಗಳಿಂದ ಸುತ್ತುವರಿದ ಗದ್ದೆಗಳ ಅಂಚಿನಲ್ಲಿ ನಮ್ಮ ಮನೆ. ಫರ್ಲಾಂಗು-ಎರಡು ಫರ್ಲಾಂಗಿಗೊಂದೊಂದು ಮನೆಗಳಿರುವ; ಅತ್ತ ಕಡುಕರಾವಳಿಯೂ ಅಲ್ಲದ, ಇತ್ತ ಮಲೆನಾಡೂ ಅಲ್ಲದ ಊರು ಮುದೂರಿ.

ಶಿವರಾತ್ರಿಯ ಆಸುಪಾಸಿನ ದಿನಗಳಲ್ಲಿ ಗದ್ದೆ ಹೂಟಿ ನಡೆದು, ‘ಸೆಟ್ಟೆ’ ಎಂದು ಕರೆಯುವ ಮಣ್ಣಿನ ಹೆಂಟೆಗಳು ಹರಡಿಕೊಂಡಿರುತ್ತವೆ. ಹಗಲು ಹೊತ್ತಿನಲ್ಲಿ ರಣಬಿಸಿಲು, ಸಂಜೆಯಿಳಿಯುತ್ತಿದ್ದಂತೆ ತುಸು ಚಳಿ. ಅದರಲ್ಲೂ ಶಿವರಾತ್ರಿಯ ಆಸುಪಾಸಿನ ದಿನಗಳಲ್ಲಿ ಜಾಸ್ತಿಯಾಗುವ ಚಳಿ ಆಮೇಲೆ ‘ಶಿವಶಿವಾ’ ಎಂದು ಊರು ಬಿಟ್ಟು ಘಟ್ಟ ಹತ್ತದಂತೆ! ಸುತ್ತಲಿನ ಕಾಡುಗಳಿಂದ ಇರುಳ ಹಕ್ಕಿಗಳ ಕೂಗು; ಅದರಲ್ಲೂ ನೀರಿಗೆ ಕಲ್ಲು ಹಾಕಿದಂತೆ ಬಿಟ್ಟು ಬಿಟ್ಟು ಕೂಗುವ ನತ್ತಿಂಗ (ನೈಟ್ ಜಾರ್)ದ  ಕೂಗಂತೂ ನಿಗೂಢ ಲೋಕವೊಂದಕ್ಕೆ ಕರೆದೊಯ್ಯುತ್ತದೆ! ಶಿವರಾತ್ರಿಯ ಹಗಲು ಅಜ್ಜಿಗೆ ಉಪವಾಸ. ರಾತ್ರಿ ಎಲ್ಲರಿಗೂ ಹೆಸರುಗಂಜಿ ಮತ್ತು ಅವಲಕ್ಕಿಯ ಉಪಾಹಾರ. ನಮ್ಮೂರಲ್ಲಿ ಶಿವರಾತ್ರಿಯ ವಿಶೇಷವೆಂದರೆ ಬೊಂಡ ಕದಿಯುವ, ಮನೆಗೆ ಸೆಟ್ಟೆ ಕುಟ್ಟುವ ಕಳ್ಳರು! ಈ ರೋಮಾಂಚನಕಾರಿ ಅನುಭವಕ್ಕಾಗಿ ನಾವು ಮಕ್ಕಳು ವರ್ಷಪೂರ್ತಿ ಕಾಯುತ್ತಿದ್ದೆವು! ಮನೆಯಿಂದ ತುಸು ದೂರದಲ್ಲಿ ಎರಡುಮುಡಿ ಗದ್ದೆ ಕಂಟ( ಬದು)ದಲ್ಲಿರುವ ತೆಂಗಿನ ಮರಗಳನ್ನು ಕಾಯುವುದಕ್ಕಾಗಿ ಗಿಡ್ಡ ಬರುತ್ತಿದ್ದ. ಸಂಜೆ ಇಳಿದು ಕತ್ತಲು ಮುತ್ತಿದೊಡನೆ ಕಂಬಳಿ, ದೊಣ್ಣೆ ಹಿಡಿದು ಪ್ರತ್ಯಕ್ಷನಾಗುತ್ತಿದ್ದ ಗಿಡ್ಡಮಕ್ಕಳನ್ನು ಕುಶಾಲು ಮಾಡಿ ನಗಿಸುವುದರಲ್ಲಿ ಪ್ರತಿಭಾನ್ವಿತ. ನನಗಂತೂ ಅವನು ಬಂದರೆ ಏನೋ ನಿರಾಳ. ನಮ್ಮ ಮನೆಯ ಬಿಗುವಿನ ವಾತಾವರಣ ಮರೆತು ನಗಲೊಂದು  ಸುಸಂದರ್ಭ. ಏನಾದರೊಂದು ತಮಾಷೆ ಮಾಡಿ, ನಾವು ನಗುವುದನ್ನು ಕಂಡು ತಾನೂ ನಗುನಗುತ್ತಾ ಅವಲಕ್ಕಿ, ಹೆಸರುಗಂಜಿ ತಿಂದು ಎರಡುಮುಡಿಯ ಕಡೆ ಗಿಡ್ಡ ಹೊರಟಾಗ ನಮಗೆ ಬೇಜಾರು. ಆದರೆ ಅವನು ಅಜ್ಜಿಯ ನಿರ್ದೇಶನದಂತೆ ಬೊಂಡ ಕದಿಯುವವರನ್ನು ಓಡಿಸಲು ಟಾರ್ಚ್ ಹಿಡಿದು ಹೊರಟು ಹೋಗುತ್ತಿದ್ದ. ನನಗಂತೂ ಅವನ ಜೊತೆ ಹೋಗಿ ಕಳ್ಳರನ್ನು ಕಾಯಬೇಕೆಂದು ಆಸೆಯಾಗುತ್ತಿತ್ತು!

ಗಿಡ್ಡ ಬರುವುದಕ್ಕೆ ಸ್ವಲ್ಪ ಮೊದಲು ಮನೆಯಲ್ಲಿ ಇನ್ನೊಂದು ಸಂದರ್ಭ ಎದುರಾಗುತ್ತಿತ್ತು. ಅದು ಸೆಟ್ಟೆ ಕುಟ್ಟುವವರ ಉಪದ್ರ. ಗದ್ದೆಯಲ್ಲಿನ ಸೆಟ್ಟೆಗಳು ಮನೆಯೊಳಗೆ ಬಂದು ಬೀಳುತ್ತಿದ್ದವು. ‘ಅತ್ತೇ,  ಅಡಿಗೆಮನಿಗೇ ಬಂದ್ ಬಿತ್ತ್ ಕಾಣಿ ಸ್ಯಟ್ಟಿ’  ಎಂದು ಅಮ್ಮ ಕೂಗಿಕೊಂಡರೆ , ‘ತ್ವಾಟದ್ ಬದಿಂದ ಯಾರೋ ಸ್ಯಟ್ಟಿ ಕುಟ್ತ್ರ್ ಕಾಣಿಯೇ ಎಂದು ಆಚೆಮನೆ ದೊಡ್ಡಮ್ಮ ಬೊಬ್ಬೆ ಹೊಡೆಯುತ್ತಿದ್ದರು. ಚಾವಡಿಯಲ್ಲಿ ಹೆಸರುಗಂಜಿ -ಅವಲಕ್ಕಿ ಮೆಲ್ಲುತ್ತಾ ಕುಳಿತ ನಾವು “ಅಮ್ಮ, ತಟ್ಟೆಗೂ ಬಂದ್ ಬಿತ್ತ್’ ಎಂದು ದೂರಿಡುತ್ತಿದ್ದೆವು. ಆರಂಭದಲ್ಲಿ ನಿಧಾನವಾಗಿ ಶುರುವಾಗುತ್ತಿದ್ದ ಸೆಟ್ಟೆಯ ಮಳೆ ಕ್ರಮೇಣ ಜೋರಾಗುತ್ತಿತ್ತು. ಅಜ್ಜಿ ಸುಮ್ಮನಿರುವ ಪೈಕಿಯಲ್ಲ. ಕೋಲು ಹಿಡಿದು, ಬ್ಯಾಟರಿ ಹಾಕಿಕೊಂಡು ಮನೆ ಹತ್ತಿರದ ತೋಟ ಸುತ್ತಾಡಿ ಬರುತ್ತಿದ್ದರು. ‘ಯಾರದ್ ಸ್ಯಟ್ಟಿ ಕುಟ್ಟೂದ್, ಹೋಯ್ನಿ ಕಾಂಬ ಅತ್ಲಾಯ್’ ಎಂದು ಕತ್ತಲಲ್ಲಿ ಕಾಣದೆ ಮರೆಯಾದ ಯಾರನ್ನೋ ಬಯ್ಯುತ್ತಿದ್ದರು. ಇತ್ತ, ‘ಶಿವರಾತ್ರಿ ದಿನ ಸ್ಯಟ್ಟಿ ಕುಟ್ಟಿರೆ ಇವ್ರಿಗೆ ಎಂತ ಸಿಕ್ಕತ್ತೋ ನಂಗೊತ್ತಿಲ್’ ಎಂದು ಗೊಣಗುತ್ತಾ ಅಮ್ಮ ಹಿಡಿ ಕಟ್ಟಲ್ಲಿ  ಮಣ್ಣು, ಕಲ್ಲನ್ನೆಲ್ಲ ಒಟ್ಟು ಮಾಡುತ್ತಿದ್ದರು.

ನಮಗೆ ಮಕ್ಕಳಿಗಂತೂ ಅರಿಯದ ಯಾರೋ ನಡೆಸಿಕೊಡುವ ಈ  ‘ಕಾರ್ಯಕ್ರಮ’ ಎಂತದೋ ರೋಮಾಂಚನ, ಕೌತುಕ ಹುಟ್ಟಿಸುತ್ತಿತ್ತು.  ಮಸಿಕತ್ತಲೆಯ ಆಳದಿಂದ ಬಂದು ಬೀಳುವ ಸೆಟ್ಟೆ, ಕಲ್ಲುಗಳು ನಿಗೂಢ ಲೋಕಕ್ಕೆ ಎಳೆದೊಯ್ಯುತ್ತಿದ್ದವು. ಅಂತೂ ಇನ್ನೇನು ನಿದ್ದೆ ತೂಗುವ ಸಮಯಕ್ಕೆ ಸೆಟ್ಟೆಯ ಮಳೆ ಕಮ್ಮಿಯಾಗುತ್ತಿತ್ತು. ಅಷ್ಟೊತ್ತಿಗೆ ಆಚೆಮನೆ ದೊಡ್ಡಮ್ಮ ಬಂದು ಅಜ್ಜಿ, ಅಮ್ಮನ ಜೊತೆ ಗುಪ್ತ ಸಮಾಲೋಚನೆ ನಡೆಸುತ್ತಿದ್ದರು. ಚಿಮಣಿ ಬೆಳಕಿನ ಸುತ್ತ ನಡೆಯುತ್ತಿದ್ದ ಈ ಸಭೆಯ ವಿಷಯವೆಂದರೆ,  ‘ಸೆಟ್ಟೆ ಕುಟ್ಟುವವರು ಯಾರಿರಬಹುದು’ ಎಂದು ನಮಗೆ ಮಕ್ಕಳಿಗಂತೂ ಆಗ ನಾಲ್ಕೈದು ಕಿವಿಗಳು ಹುಟ್ಟಿಕೊಳ್ಳುತ್ತಿದ್ದವು! ಫಕ್ಕನೆ ಎರಡು ಮುಡಿ ತೋಟದ ಕಡೆಯಿಂದ ದೊಡ್ಡದೊಂದು ಸದ್ದು ಕೇಳಿ ಬಂದು, ಅಜ್ಜಿ ಬ್ಯಾಟರಿ ಹಿಡಿದು ಆ ಕಡೆ ಹೊರಡುವಷ್ಟರಲ್ಲಿ ಗಿಡ್ಡ ತರಾತುರಿಯಲ್ಲಿ ಧಾವಿಸಿ ತನ್ನ ಬಿಗಿ ಕಾವಲಿನ ನಡುವೆಯೂ ಕಳ್ಳ ತೆಂಗಿನ ಮರ ಒರಕಲು ಶುರುಮಾಡಿದ್ದು, ತಾನು ದೊಣ್ಣೆ ಬೀಸಿದ್ದು, ಕೂಡಲೇ  ಆ ಜನ ಪುಡ್ಚ ಆದದ್ದು ಎಲ್ಲವನ್ನೂ ವರ್ಣಿಸಿ ವಾಪಸಾಗುತ್ತಿದ್ದ. ‘ಅಂತೂ ಶಿವರಾತ್ರಿ ಕಳ್ರ ದೆಸಿಂದ ಆಪ್ದಲ್ಲಪ’ ಎಂದು ಅಜ್ಜಿ ಉದ್ಗರಿಸಿ ‘ಮಕ್ಳೇ ಎಂತ ಕಾಂತ್ರೀ, ಮನಿಕಣಿ ಹೋಯ್ನಿ’ ಎಂದು ನಮಗೆ ಜಪ್ಪಳಿಸುತ್ತಿದ್ದರು.  ನಾವು ಒಂದೇ ಹಾರಿಗೆ ಹಾಸಿಗೆ ಸೇರಿ ಹೊದಿಕೆಯೊಳಗೆ ಮರೆಯಾಗಿ ಕಿವಿಗಳನ್ನು ಮಾತ್ರ ಹೊರಗಿಡುತ್ತಿದ್ದೆವು! ಬೆಳಗಿನ ಜಾವ ಎಚ್ಚರಾದಾಗ ಕಂಬಳಿ ಹೊದ್ದ ಗಿಡ್ಡ ರಾತ್ರಿ ತಾನು ಕಳ್ಳರನ್ನು ಬೆನ್ನಟ್ಟಿದ ಸಾಹಸದ ಬಗ್ಗೆ ವರ್ಣಿಸುವುದನ್ನು ಕಂಡು ‘ಛೇ !ಇಷ್ಟು ಬೇಗ ಮುಗಿದು ಹೋಯಿತಾ ಶಿವರಾತ್ರಿ!’ ಎಂದು ಪೇಚಾಡಿಕೊಳ್ಳುತ್ತಿದ್ದೆವು.

ಇದನ್ನೂ ಓದಿ : Maha Shivaratri; ಕಾಯುವನೇ ಶಿವ?: ಬೆಳಕು ಇಳಿದು ಹೋಯಿತು ಖಾಲಿ ಸೀಟನ್ನು ಸವರುತ್ತಾ ಕುಳಿತೆ

Published On - 6:42 pm, Thu, 11 March 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ