World Sleep Day; ನಿದ್ದೆ ಎಂಬ ಪದಕವಡೆ: ಮಲಗಿ ಮಲಗಲು ಬಿಡಿ! ಇದು ಚಂದ್ರಕಲಾ ಕಲಾಪ…
'ಗ್ರೀಕ್ ದೇಶದಲ್ಲಿ ಎಲ್ಲದಕ್ಕೂ ಒಬ್ಬೊಬ್ಬರು ಅಧಿದೇವತೆ ಇರುವಂತೆ ನಿದ್ದೆಗೆ ಮಾರ್ಫಿಯಸ್ ಎನ್ನುವ ಅಧಿದೇವತೆ. ಈ ದೇವತೆಯು ಹಿಪ್ನೋಸ್ ಅಥವಾ ಸೊಮ್ನಸ್ ಎಂಬುವವನ ಮಗ. ಬಹುಶಃ ನಿದ್ದೆಗೆ ಸಂಬಂಧಿಸಿದ ಕಾಯಿಲೆಗೆ ಇನ್ಸೋಮ್ನಿಯಾ ಅಂತ ಹೆಸರು ಬಂದಿರುವುದು ಮಾರ್ಫಿಯಸ್ನ ತಂದೆಯಿಂದಲೇ ಇರಬೇಕು! ಇನ್ನು ನಮ್ಮ ಭಾರತದಲ್ಲಿ ನಾವು ನಿದ್ರೆಯನ್ನು ದೇವಿಗೆ ಹೋಲಿಸುತ್ತೇವೆ. ಆಕೆ ಅಪ್ಪಿಕೊಳ್ಳಲು ಬಂದಾಗ ಪ್ರೀತಿಯಿಂದ ಒಪ್ಪಿಕೊಂಡುಬಿಡುವಂತಾಗಬೇಕು. ಆದರೆ ಒಳಗೂ ಹೊರಗೂ ದುಡಿಯುವ ಹೆಣ್ಣಿನ ಸ್ವಾತಂತ್ರ್ಯದ ಲಿಸ್ಟಿನಲ್ಲಿ ನಿದ್ದೆ ಎಂಬ ಪದ ಅನಾಯಾಸವಾಗಿ ಸೇರುವಲ್ಲಿ ಯಾರ ಮನಸ್ಥಿತಿ ಹೆಚ್ಚು ಬದಲಾಗಬೇಕಿದೆ? ಸ್ವಲ್ಪ ಯೋಚಿಸಿ.‘ ಚಂದ್ರಕಲಾ ಮಂಜುನಾಥ
ಏಳಿ, ಎದ್ದೇಳಿ! ಎದ್ದು ಬರೆಯಲು ಕುಳಿತುಕೊಳ್ಳಿ. ಎಲ್ಲಿದ್ದೀರೋ ಅಲ್ಲಿಂದಲೇ ಬರೆಯಲು ಶುರುಮಾಡಿ. ಹಾಳೆಯೋ, ಪರದೆಯೋ ಏನೋ ಒಂದು ನಿಮ್ಮ ಮುಂದೆ ತೆರೆದುಕೊಂಡಿರಲಿ. ಈಗ ಕೈಗಳೆರಡನ್ನೂ ಉಜ್ಜಿಕೊಂಡು ಆ ಖಾಲಿಚೌಕದೊಳಗೆ ನಿಮಗೆ ಕೊಟ್ಟ ಪದವನ್ನು ದಾಳಕ್ಕೆ ಹಾಕಿ. ಅಂದುಕೊಂಡಿದ್ದೇ ಬಿತ್ತಾ, ಇಲ್ಲವಾ? ಮತ್ತೆ ಮತ್ತೆ ಹಾಕಿ. ನಿಮ್ಮ ಉಸಿರು ನಿಮ್ಮ ಹಿಡಿತದಲ್ಲಿಯೇ ಇದೆ ಎಂದು ನಿಮಗನ್ನಿಸುವ ತನಕ ದಾಳ ಹಾಕುತ್ತಲೇ ಇರಿ. ಇಲ್ಲಿ ಕಣ್ಣುಮುಚ್ಚಿಕೊಂಡು ನಿವೇದಿಸಿಕೊಳ್ಳುವುದಂತೂ ಸಂಪೂರ್ಣ ನಿಷಿದ್ಧ!; ಗಾಳಿಯಲ್ಲಿ ತೇಲಿ ಹೋದ ಈ ಸಂದೇಶವನ್ನು ಫಕ್ಕನೆ ಹಿಡಿದು ಬರೆಯಲು ಕುಳಿತರು ನಮ್ಮ ನಡುವಿನ ಬರಹಪ್ರಿಯರು. ‘ವಿಶ್ವ ನಿದ್ದೆ ದಿನ – World Sleep Day’ ಪ್ರಯುಕ್ತ ‘ನಿದ್ದೆ ಎಂಬ ಪದಕವಡೆ’ ಸರಣಿ.
ಪರಿಕಲ್ಪನೆ : ಶ್ರೀದೇವಿ ಕಳಸದ
ಮಹಿಳೆಯ ಸ್ವಾತಂತ್ರ್ಯದ ಲಿಸ್ಟಿಗೆ ಈ ನಿದ್ದೆಯೂ ಸೇರಲಿ ಎಂದು ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ ಬೆಂಗಳೂರಿನ ಚಂದ್ರಕಲಾ ಮಂಜುನಾಥ.
ಸ್ತ್ರೀ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಅಂತ ಇನ್ನಿತರ ಹಲವಾರು ಸ್ವಾತಂತ್ರ್ಯಗಳಂತೆ, ಒಳ್ಳೆ ನಿದ್ದೆ ಮಾಡಲು ಅವಕಾಶ ಸಿಗುವುದು ಒಂದು ರೀತಿಯ ಸ್ವಾತಂತ್ರ್ಯವೇ. ಈ ಮಾತು ಯಾಕೆ ಹೇಳುತ್ತಿದ್ದೇನೆ ಅಂದರೆ ನನಗೆ ಬುದ್ಧಿ ತಿಳಿದಾಗಿನಿಂದಲೂ (ತವರು ಮನೆಯವರ ಲೆಕ್ಕದಲ್ಲಿ ಇನ್ನೂ ನನಗೆ ಬುದ್ಧಿ ಬಂದಿಲ್ಲ) ಬೆಳಗ್ಗೆ ತಡವಾಗಿ ಎದ್ದಾಗ ನಮ್ಮಮ್ಮ ಹಾಡುತ್ತಿದ್ದ ಸುಪ್ರಭಾತ ಒಂದೇ; ಇಷ್ಟೊತ್ತು ಮಲ್ಕೊಂಡ್ರೆ ಹೋದ ಮನೇಲಿ ಏನಂತಾರೆ? ಅಡುಗೆ- ಮನೆಕೆಲಸ ಯಾರ್ ಬಂದು ಮಾಡ್ತಾರೆ ಅಲ್ಲಿ? ಅತ್ತೆ ಮನೆಯವರು ಸುಮ್ಮನೆ ಇರ್ತಾರೆ ಅಂದ್ಕೊಂಡಿದ್ದೀಯ? ಹಿಂಗೇ ಆದ್ರೆ ನಿನ್ನನ್ನಲ್ಲ ನನ್ನನ್ನ ಹಾಡಿ ಹರಸ್ತಾರೆ. ಈ ಬೈಗುಳದ ಪ್ರವರ ಮುಂದುವರೆದು ಬೇರೆಬೇರೆ ವಿಚಾರಗಳಿಗೆ ತಿರುವು ಪಡೆದುಕೊಂಡು ಮತ್ತೆ ಬಂದು ನಿಲ್ಲುತ್ತಿದ್ದುದು ಆಗ ಕಂಡಿರದ ಅತ್ತೆಮನೆ ಅಥವಾ ಗಂಡನ ಮನೆಯಲ್ಲೇ (ಮಾವನ ಮನೆ ಅಂತ ಯಾಕೆ ಹೇಳಲ್ವೋ ಗೊತ್ತಿಲ್ಲ). ಹಾಗಂತ ನಮ್ಮಮ್ಮ ಮಲಗಿದ್ದವಳನ್ನು ಎಬ್ಬಿಸಿ ಬೈದ ಉದಾಹರಣೆಗಳಿಲ್ಲ. ನಮ್ಮ ತಂದೆ ಮಾತ್ರ ಬದುಕಿರುವವರೆಗೂ ನಾನು ಅವರ ಮುದ್ದಿನ ಮಗಳಾದರೂ ಸಹ ನಿದ್ದೆ ವಿಷಯದಲ್ಲಿ ಮಾತ್ರ ಯಾಕೋ ತಾರತಮ್ಯ ಮಾಡುತ್ತಿದ್ದರು. ಹೆಣ್ಣುಮಕ್ಕಳು ಬೆಳಗ್ಗೆ ಹೆಚ್ಚು ಹೊತ್ತು ನಿದ್ದೆ ಮಾಡುವುದು ಒಳ್ಳೆ ಅಭ್ಯಾಸ ಅಲ್ಲಮ್ಮಾ. ಎದ್ದೇಳು ಬೇಗ ಅನ್ನುವಾಗಲೂ ಸಹ ನಮ್ಮಮ್ಮ ‘ಮಲಗಲಿ ಬಿಡು. ಎದ್ದು ಏನ್ ಮಾಡ್ಬೇಕಾಗಿದೆ ಈಗ’ ಅನ್ನುವುದನ್ನು ಸುಮಾರು ಬಾರಿ ನಿದ್ದೆಗಣ್ಣಲ್ಲೇ ಕೇಳಿಸಿಕೊಂಡಿದ್ದೇನೆ.
ಇದಿಷ್ಟು ಬಾಲ್ಯದ ನಿದ್ದೆ ವಿಚಾರ ಆಯ್ತು. ಇನ್ನು ಬೆಳೆದಂತೆಲ್ಲಾ ಈ ನಿದ್ದೆಗೆ ಸ್ವಾತಂತ್ರ್ಯ ಬರಬರುತ್ತಾ ಕಡಿಮೆಯಾಗ್ತಾನೆ ಹೋಯ್ತು. ನಮ್ಮಣ್ಣನ ಮದುವೆಯಾಗಿ ಮನೆಗೆ ಅತ್ತಿಗೆ ಬಂದಾಗ ನಮ್ಮಮ್ಮ ನನಗಾಗಿ ಹಾಡುತ್ತಿದ್ದ ಸುಪ್ರಭಾತದಲ್ಲಿ ಕೊಂಚ ಬದಲಾವಣೆ ಆಯ್ತು. ‘ಇಷ್ಟೊತ್ತು ಮಲಕ್ಕೊಂಡ್ರೆ ಹೆಂಗೆ? ಬಂದೋಳು ಏನ್ ಅನ್ಕೋತಾಳೆ? ಮಗಳಿಗೆ ಏನ್ ಬುದ್ಧಿ ಕಲಿಸಿದ್ದಾರೋ ಅನ್ಕೊಳಲ್ವಾ? ಬೇಗ ಎದ್ದು ಏನಾದ್ರೂ ಕೆಲಸ ಮಾಡೋಕೆ ಏನ್ ನಿನಗೆ? ಹೋಗಿದ್ ಮನೇಲಿ ಬೈಸ್ಕೊಂಡ್ರೆ ಮನೆಗೆ ಬಂದೋಳ ಮುಂದೆ ಸಲಿಗೆ, ಸದರ ಆಗಲ್ವಾ? ಅಂತ. ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವಳಾಗಿದ್ದ ತಪ್ಪಿಗೆ ಎಲ್ಲರಿಂದಲೂ ಬೈಗುಳದ ಅರ್ಚನೆಗೆ ಬರ ಇರಲಿಲ್ಲ. ಬಾಲ್ಯದಿಂದಲೂ ಇದನ್ನ ಕೇಳಿಕೇಳಿ ರೋಸಿ ಹೋಗಿದ್ದಕ್ಕೋ ಅಥವಾ ಆಗಷ್ಟೇ ಪದವಿಯಲ್ಲಿ ಮಹಿಳಾ ಅಧ್ಯಯನ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡು ಸ್ತ್ರೀ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಲಿಂಗ ತಾರತಮ್ಯ, ಲಿಂಗಪ್ರಭೇದ, ರೂಢಿಗತ ಸಂಪ್ರದಾಯಗಳು (ಸ್ಟಿರಿಯೋಟೈಪ್ಸ್) ಇತ್ಯಾದಿ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಾ ಹೋದಂತೆಲ್ಲಾ ಮನೆಯವರ ಧೋರಣೆಗಳ ವಿರುದ್ಧ ದಂಗೆ ಏಳುವುದನ್ನು ರೂಢಿಸಿಕೊಂಡೆ. ಕಾರಣ ಇಷ್ಟೇ… ಬದಲಾವಣೆಯನ್ನು ಮನೆಯಿಂದಲೇ ಶುರುಮಾಡಬೇಕು ಎಂಬ ಹುಂಬ ಉತ್ಸಾಹ. ಕಾಲೇಜಿನಲ್ಲಿ ಬೋಧಿಸುತ್ತಿದ್ದ, ಓದುತ್ತಿದ್ದ ವಿಚಾರಗಳನ್ನು ಮನೆಯಲ್ಲೇ ಪ್ರಯೋಗಿಸಲು ಶುರುಮಾಡಿಕೊಂಡಿದ್ಧೇ ಬಂತು ಭಾಗ್ಯ! ದಿನವೂ ನಮ್ಮಮ್ಮನ ಸುಪ್ರಭಾತಕ್ಕೆ ವಿರುದ್ಧವಾಗಿ ನಿಂತುಬಿಡುತ್ತಿದ್ದೆ. ನಿದ್ದೆ ಮಾಡಲು ಅವಕಾಶ ಸಿಗದ ಸೋ ಕಾಲ್ಡ್ ಇನ್ನೂ ಕಂಡಿರದ ಅತ್ತೆಮನೆ, ಗಂಡನ ಮನೆಯ ಅವಶ್ಯಕತೆಯಾದರೂ ಯಾಕೆ ಬೇಕು? ಯಾರದೋ ಮನೆ ಚಾಕರಿ ಮಾಡೋಕೆ ನಾನ್ಯಾಕೆ ಮದುವೆ ಆಗಲಿ? ಬೇಕಾಗಿಲ್ಲ ಹೋಗು ಅಂದಾಗೆಲ್ಲಾ ನಮ್ಮಮ್ಮ, ನನ್ನಿಬ್ಬರು ಅಣ್ಣಂದಿರು ಸೇರಿ ನಿನ್ನನ್ನ ಮತ್ತೆ ಹಾಗೇ ಮನೇಲಿ ಇಟ್ಕೊಳ್ಳೋಕೆ ಆಗುತ್ತಾ? ಎಷ್ಟು ವರ್ಷ ಅಂತ ಇಟ್ಕೊಳ್ಳೋದು ಅನ್ನುತ್ತಿದ್ದರು. ನಾವು ಮನೇಲಿ ಇಟ್ಕೊಂಡ್ರು ಮನೆಗೆ ಬರೋ ಸೊಸೆಯರು ಸುಮ್ನೆ ಇರ್ತಾರ? ಅಂತೆಲ್ಲಾ ಮರು ಪ್ರಶ್ನೆಯ ಬೈಗುಳ ಶುರುವಾದರೆ ‘ಯಾರೂ ಬೇಕಾಗಿಲ್ಲ ಹೋಗು… ಒಬ್ಬಳೆ ಎಲ್ಲಾದರೂ ಬದುಕ್ತೀನಿ!’ ಅನ್ನುತ್ತಿದ್ದೆ. ‘ಒಬ್ಬಳೇ ಬದುಕಿದ್ರೆ ನೋಡಿದವರು ನಮ್ಮನ್ನ ಆಡ್ಕೊಳಲ್ವಾ? ಹೋಗಿದ್ ಮನೇಲೂ ಹೀಗೆ ಎದುರು ಉತ್ತರ ಕೊಟ್ಟರೆ ನಿನ್ನನ್ನ ಅನ್ನಲ್ಲ, ನಮ್ಮನ್ನ ಅಂತಾರೆ’ ಅಂತ ಮತ್ತದೇ ಕೊನೆಯಿರದ ಸುಪ್ರಭಾತ ಮುಂದುವರೆಯುತ್ತಿತ್ತು.
ಅದೃಷ್ಟ ಅನ್ನೋದು ಹೇಗಿರುತ್ತೆ ನೋಡಿ. ಗಂಡನ ಮನೇಲಿ ಈತನಕ ನಿದ್ದೆ ವಿಷಯವಾಗಿ ಮಾತೆತ್ತಿದ್ದೇ ಇಲ್ಲ ಇನ್ನು ಬಯ್ಯೋದೆಲ್ಲಿ! ಆದರೆ ನಮ್ಮಮ್ಮ ಬಾಲ್ಯದಲ್ಲಿ ತಲೆಗೆ ತುಂಬಿದ್ದಕ್ಕೋ ಏನೋ ಕ್ರಮೇಣ ಬಹಳ ಬೇಗ ಎಚ್ಚರವಾಗೋದಕ್ಕೆ ಶುರುವಾಯ್ತು. ಜೊತೆಗೆ ನಾನಾಗ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೆ. ಗಂಡನ ಮನೆಯಲ್ಲಿ ಸುಪ್ರಭಾತದ ಹಾವಳಿ ಇಲ್ಲದಿದ್ದರೂ ಕೆಲಸದ ಒತ್ತಡದಿಂದ ಬಿಡುಗಡೆ ಪಡೆದು ನೆಮ್ಮದಿಯಾಗಿ ನಿದ್ದೆ ಮಾಡುವುದು ತುಟ್ಟಿಯೇ ಆಯಿತು. ಅದಕ್ಕೆ ಸರಿಯಾಗಿ ಆರೋಗ್ಯವೂ ಕೈಕೊಟ್ಟು ನಿದ್ದೆ ಅನ್ನೋದು ನಿಲುಕದ ನಕ್ಷತ್ರವಾಯಿತು. ಹಾಗೆ ನೋಡಿದರೆ ಈಗ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇನೆ. ಈಗಂತೂ ಸಮಯದ ನಿಬಂಧನೆಗಳಿಲ್ಲ ಯಾಕೆಂದರೆ ಆಫೀಸಿಗೆ ಹೋಗುತ್ತಿಲ್ಲ.
ಇವಿಷ್ಟು ವೈಯಕ್ತಿಕ ಬದುಕಿಗೆ ಸಂಬಂಧಿಸಿದ್ದಾದರೆ ಇಲ್ಲಿಗೆ ಈ ವಿಚಾರ ಮುಗಿದಂತೆ. ಆದರೆ ಹೆಣ್ಣಿನ ವಿಷಯದಲ್ಲಿ ನಿದ್ದೆ ಅನ್ನುವುದು ಸಾಂಸಾರಿಕ ಸಮಸ್ಯೆ ಅಷ್ಟೇ ಅಲ್ಲ, ಜಾಗತಿಕ ಸಮಸ್ಯೆಯೂ ಹೌದು. ಈ ಮೊದಲೇ ಹೇಳಿದಂತೆ ನಿದ್ದೆಯ ವಿಚಾರದಲ್ಲೂ ಅನೇಕ ರೂಢಿಗತ ಪದ್ಧತಿಗಳನ್ನು (ಸ್ಟೀರಿಯೋಟೈಪ್ಸ್) ಸೃಷ್ಟಿಸಿ ಹೆಣ್ಣನ್ನು ಅಶಕ್ತಳನ್ನಾಗಿಸಿದ್ದಾರೆ. ಹಬ್ಬ ಹರಿದಿನಗಳಲ್ಲಿ, ಮನೆಯ ಸಮಾರಂಭಗಳಲ್ಲಿ, ಕಟ್ಟುನಿಟ್ಟಿನ ವ್ರತ ಪೂಜೆಗಳಂದು ನಸುಕಿನಲ್ಲಿ ಎದ್ದು ಮಡಿಯುಟ್ಟು ಪೂಜೆಗೆ ಅಣಿಗೊಳಿಸುವ, ಮನೆಮಂದಿಗೆ ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸುವ, ಬಡಿಸುವ, ಸ್ವಚ್ಛಗೊಳಿಸುವ ಎಲ್ಲಾ ಜವಾಬ್ದಾರಿಗಳೂ ಹೆಣ್ಣಿನದು. ಇವೆಲ್ಲವೂ ಮುಗಿಯುವ ಹೊತ್ತಿಗೆ ನಿಜವಾದ ‘ಹಬ್ಬ’ ಆಗಿರುತ್ತದೆ ಆಕೆಗೆ. ಇನ್ನು ಇದಕ್ಕೆಲ್ಲಾ ಅರ್ಧ ತಯಾರಿ ಹಿಂದಿನ ದಿನ ತಡರಾತ್ರಿಯವರೆಗೂ ನಡೆಸಿ ಮಲಗಿರುತ್ತಾಳೆ.
ಈ ವಿಚಾರ ಇನ್ನೂ ಗಂಭೀರವಾಗಿ ಮುಂದುವರೆದರೆ ತಾಯ್ತನ ಅವಳ ನಿದ್ದೆಯನ್ನೆಲ್ಲಾ ನುಂಗಿ ನೀರು ಕುಡಿದಿರುತ್ತದೆ. ಹೆಣ್ಣು ತಾನು ತಾಯಿಯಾದ ಘಳಿಗೆಯಿಂದಲೇ ತ್ಯಾಗ ಮಾಡುವುದು ನಿದ್ದೆಯನ್ನು. ಇಲ್ಲಿ ತ್ಯಾಗ ಅನ್ನುವ ಶಬ್ಧ ಬಳಕೆಗೆ ಕಾರಣ ಅವಳು ಆ ಕೆಲಸವನ್ನು ಸ್ವಯಂಪ್ರೇರಿತಳಾಗಿ ಮಾಡುತ್ತಿರುತ್ತಾಳೆ; ಪ್ರೀತಿ, ವಾತ್ಸಲ್ಯ, ಮಮತೆ, ಶ್ರದ್ಧೆಯೆಂಬ ಗುಣಭಾವಗಳೆಂಬ ಸಹಜ ಹರಿವಿನೊಂದಿಗೆ. ಆದರೆ, ವಿದೇಶಗಳಲ್ಲಿ ಮಗುವಿನ ಲಾಲನೆ-ಪಾಲನೆಗಳಲ್ಲಿ ತಂದೆ-ತಾಯಿಗಳಿಗೆ ಸಮಪಾಲು ಇವೆ. ನಮ್ಮ ಭಾರತದಲ್ಲಿ ಅದಿನ್ನೂ ಹೆಣ್ಣಿನ ಕರ್ತವ್ಯವೇ ಆಗಿರುವುದಕ್ಕೆ ಕಾರಣ ನಮ್ಮದು ಪಿತೃಪ್ರಧಾನ ರಾಷ್ಟ್ರ (ಇತ್ತೀಚಿನ ಉದ್ಯೋಗಸ್ಥ ಮಹಿಳೆಯರ ಪತಿಯರು ಸ್ವಲ್ಪ ಮಟ್ಟಿಗೆ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಹೊರತುಪಡಿಸಿ). ಇಂಥಾ ಸಂದರ್ಭಗಳಲ್ಲೂ ಹಲವು ಅತ್ತೆಯರಿಗೆ ಒಳಗೊಳಗೆ ತಮ್ಮ ಮಗನ ಕುರಿತಾಗಿ ಅನುಕಂಪ. ಮಗನ ಮೇಲಿನ ಅನುಕಂಪ ಸೊಸೆಯ ಮೇಲಿನ ಮೂದಲಿಕೆಗೆ ತಿರುಗುತ್ತದೆ. ‘ಅಯ್ಯೋ… ನನ್ನ ಮಗ ಹೊರಗೆ ದುಡಿದು ಸಾಕಾಗಿ ಬಂದಿರ್ತಾನೆ. ಮತ್ತೆ ಮನೆಯಲ್ಲೂ ಮಕ್ಕಳನ್ನ ನೋಡ್ಕೋಬೇಕು. ಆರಾಮಾಗಿ ಮನೆಯಲ್ಲಿರುವವಳು ಗಂಡನನ್ನು ಬುಗುರಿ ಆಡಿಸಿದಂತೆ ಆಡಿಸುತ್ತಾಳೆ ಅಂತಲೋ ಅಥವಾ ಸೊಸೆ ಉದ್ಯೋಗಸ್ಥೆಯಾಗಿದ್ದರೆ ‘ನಾಲ್ಕು ಕಾಸು ಸಂಪಾದಿಸುವುದಕ್ಕೆ ಮಗುವನ್ನು ನಿರ್ಲಕ್ಷಿಸುತ್ತಾಳೆ. ನನ್ನ ಮಗನ ಆರೋಗ್ಯದ ಗತಿ ಏನಾಗಬೇಕು. ಅವನು ಆರೋಗ್ಯ ತಪ್ಪಿದರೆ ಯಾರು ಹೊಣೆ’ ಎಂಬಂತಹ ಆಕ್ಷೇಪಗಳಿಗೆ ಗುರಿಯಾಗಬೇಕಾಗುತ್ತದೆ. ಮನೆಯಲ್ಲಿ ಅವಿರತ ದುಡಿಯುವ ಹೆಣ್ಣಿನ ಆರೋಗ್ಯದ ಸ್ಥಿತಿ-ಗತಿಗಳು ಮಾತ್ರ ಇಂತಹ ಮೂದಲಿಕೆಗಳ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ. ರಾತ್ರಿ ವೇಳೆಯಲ್ಲಿ ಮಕ್ಕಳಿಗೆ ಹಾಲುಣಿಸುವ, ಒದ್ದೆಯಾದ ನ್ಯಾಪ್ಕಿನ್ಗಳನ್ನು ಬದಲಿಸುವ ಕಾಯಕದಲ್ಲಿ ಆಕೆಯ ಸುಪ್ತ ಮನಸ್ಸು ಎಚ್ಚರವಾಗೇ ಇರುತ್ತದೆ. ಹಾಲುಣಿಸುವ ವಿಚಾರದಲ್ಲಿ ಸೃಷ್ಟಿ ಕ್ರಿಯೆಯೂ ಹಾಗೇ ಇದೆ. ಹಾಲುಣಿಸುವಂತಹ ದೈಹಿಕ ರಚನೆ ಗಂಡಿಗಿಲ್ಲ. ಹಾಲುಣಿಸುವ ಹಂತ ದಾಟುತ್ತಿದ್ದಂತೆ ಮತ್ತೆ ಮಕ್ಕಳನ್ನು ಶಾಲೆಗೆ ಅಣಿಗೊಳಿಸುವ ತರಾತುರಿಯಲ್ಲಿ ನಿದ್ದೆ ಅರೆಬರೆ.
ಆಧುನಿಕ ಮಹಿಳೆಯರ ಪಾಡು ಇನ್ನೊಂದಿಷ್ಟು ಭಿನ್ನ. ಆರ್ಥಿಕ ಸ್ವಾತಂತ್ರ್ಯ ಪಡೆಯುವ ಉತ್ಸುಕತೆ ಒಂದೆಡೆಯಾದರೆ ಹಲವು ಸಂದರ್ಭಗಳಲ್ಲಿ ಕುಟುಂಬ ನಿರ್ವಹಣೆಯ ಹೊಣೆಯೂ, ಅನಿವಾರ್ಯವೂ ಆಗಿರುತ್ತದೆ. ಆಧುನಿಕ ಮಹಿಳೆ ಸುಲಭಕ್ಕೆ ಸೋಲೊಪ್ಪಿಕೊಳ್ಳದವಳು. ತನ್ನ ಸಬಲತೆಯನ್ನು ಮನೆಯ ಒಳಗೂ, ಹೊರಗೂ ದುಡಿದು ತಾನು ಸಮರ್ಥಳೆಂದು ಮನದಟ್ಟು ಮಾಡಿಸುವ ಛಲ ಹೊಂದಿರುವವಳು. ಉದ್ಯೋಗಸ್ಥ ಮಹಿಳೆ ತಾಯಿಯಾಗಿದ್ದಲ್ಲಿ ಆಕೆ ಕಚೇರಿಯಲ್ಲಿದ್ದರೂ ಮನಸ್ಸು ಆಗಾಗ ಮನೆಯ ಕಡೆಗೆ ಹೊಯ್ದಾಡುತ್ತಲೇ ಇರುತ್ತದೆ. ಅದರಲ್ಲೂ ಬದಲಾಗಿರುವ ಶೈಕ್ಷಣಿಕ ಕ್ಷೇತ್ರದಿಂದಾಗಿ ಮಕ್ಕಳಿಗಾಗಿ ಸಮಯವನ್ನು ಹೊಂದಿಸಿಕೊಳ್ಳುವ ಅನಿವಾರ್ಯತೆ. ಬೆಳಗ್ಗೆ 9ರ ಶಾಲೆಗೆ 7 ರಿಂದ 7.30ಗೆ ಬರುವ ಶಾಲಾ ಬಸ್ ಗೆ ಹೊಂದಿಕೊಂಡು ತನ್ನ ದೈನಂದಿನ ಚಟುವಟಿಕೆಗಳನ್ನು ರೂಪಿಸಿಕೊಳ್ಳುವ ಆಧುನಿಕ ತಾಯಿಗೆ ಹಿಂದಿನ ದಿನ ಸಂಜೆಯಿಂದಲೇ ‘ನಾಳೆ ಏನ್ ತಿಂಡಿ ಮಾಡಲಿ? ಏನ್ ಸಾರು ಮಾಡಲಿ? ಮಕ್ಕಳಿಗೆ ಸ್ನ್ಯಾಕ್ಸ್ ಬಾಕ್ಸ್ ಗೆ ಏನು ಹಾಕಿಕೊಡಲಿ? (ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಅವರು ನಿಗದಿಪಡಿಸಿರುವ ಸ್ನ್ಯಾಕ್ಸ್ ಮಾತ್ರವೇ ಹಾಕಿ ಕೊಡಬೇಕಾಗಿರುತ್ತದೆ). ಇದಕ್ಕೆಲ್ಲಾ ಹಿಂದಿನ ರಾತ್ರಿ ಎಷ್ಟು ತಡವಾದರೂ ತಯಾರಿ ಮುಗಿಸಿಕೊಂಡರಷ್ಟೇ ಮರುದಿನದ ಆರಂಭ ಸುಲಭ. ತಾನು ಬೇಗ ಏಳುವುದಲ್ಲದೆ ಗಾಢ ನಿದ್ದೆಯಲ್ಲಿರುವ ಮಗುವನ್ನು ಎಬ್ಬಿಸಿ ಶಾಲೆಗೆ ಸಿದ್ಧಗೊಳಿಸಿ, ಎಷ್ಟು ಸಮಯಾವಕಾಶದಲ್ಲಿ ಮಗು ತಿನ್ನುತ್ತದೋ ಅಷ್ಟನ್ನು ತಿನ್ನಿಸಿ ಕಳಿಸಿದರೆ ಮುಗಿದು ಹೋಯ್ತು ಅನ್ನುವಂತಿಲ್ಲ. ಉದ್ಯೋಗಸ್ಥ ಮಹಿಳೆಯಾದರೆ ಕಚೇರಿಯಲ್ಲಿ ಕುಳಿತಿದ್ದರೂ ‘ತನ್ನ ಮಗು ಮನೆಗೆ ಬಂತಾ? ಕಳಿಸಿಕೊಟ್ಟ ಊಟದ ಡಬ್ಬಿ ಖಾಲಿ ಆಗಿರುತ್ತಾ? ಒಂದು ವೇಳೆ ಖಾಲಿಯಾಗಿರದಿದ್ದರೆ ಅದಕ್ಕೆ ಕಾರಣಗಳನ್ನು ಹುಡುಕಿ, ಮರುದಿನ ಮಗುವಿಗಿಷ್ಟದ ಅಡುಗೆ ಮಾಡುವ ತರಾತುರಿ. ಬಾಕ್ಸ್ ಖಾಲಿ ಮಾಡಿ ತಂದ ದಿನ ಸಮಾಧಾನ, ಸಂತೋಷ ಅನ್ನಿಸಿದರೂ ‘ನೀನೇ ತಿಂದ್ಯಾ? ಅಥವಾ ಫ್ರೆಂಡ್ಸ್ ಗೆ ಕೊಟ್ಟು ಬಂದ್ಯಾ? ಅನ್ನುವ ಮರುಪ್ರಶ್ನೆ. ಬೇಬಿ ಸಿಟ್ಟಿಂಗ್, ಪ್ಲೇ ಹೋಮ್ಗಳಲ್ಲಿ ಮಕ್ಕಳನ್ನು ಬಿಡುವವರ ಪಾಡಂತೂ ಇನ್ನೂ ಭಿನ್ನ. ಪ್ರತಿದಿನ ಮಗುವನ್ನು ಪ್ರವಾಸಕ್ಕೆ ಕರೆದೊಯ್ಯುವಂತೆ ಊಟ, ಬಟ್ಟೆಯನ್ನು ಪ್ಯಾಕ್ ಮಾಡಿ ಬಿಟ್ಟುಬರುವುದು. ಮಗುವಿನ ನಿದ್ದೆಗೂ ಭಂಗ. ಪರಿಣಾಮ ಮಗುವಿನ ಆರೋಗ್ಯ ಹದಗೆಟ್ಟರಂತೂ ಮತ್ತೆ ಮಗು ಸುಧಾರಿಸಿಕೊಳ್ಳುವವರೆಗೂ ಪ್ರತೀ ರಾತ್ರಿ ಶಿವರಾತ್ರಿ ಜಾಗರಣೆಯೆ.
ಅತಿಯಾಗಿ ನಿದ್ದೆಗೆಡುವುದರ ಪರಿಣಾಮ ಹೆಚ್ಚಾಗುತ್ತಿರುವ ಒತ್ತಡಗಳು. ಒತ್ತಡಗಳ ಪರಿಣಾಮ ಕೌಟುಂಬಿಕ ಕಲಹಗಳು, ಅನಾರೋಗ್ಯದ ಸಮಸ್ಯೆಗಳು. ನಿದ್ದೆಗೂ- ಅನಾರೋಗ್ಯಕ್ಕೂ ಅವಿನಾಭಾವ ಸಂಬಂಧ. ಒಂದನ್ನು ಬಿಟ್ಟು ಒಂದು ಇರುವುದಿಲ್ಲ. ವಯಸ್ಸಾಗುತ್ತಾ ಬಂದಂತೆಲ್ಲಾ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತಾ ಸಾಗುತ್ತದೆ. ಸುಲಭವಾಗಿ ನಿದ್ದೆಗೆ ಜಾರಲು ಮಾತ್ರೆಗಳ ಮೊರೆ ಹೋಗುವಂತಾಗುತ್ತದೆ. ದುಡ್ಡು ಕೊಟ್ಟು ನಿದ್ದೆಯನ್ನು ಕೊಂಡುಕೊಳ್ಳುವ ಪರಿಯಿದು. ನಿದ್ದೆ ಮಾತ್ರೆಗಳು ಅಷ್ಟು ಪರಿಣಾಮಕಾರಿ ಅಂತಾದ ಮೇಲೆ ನಿದ್ದೆ ಇಲ್ಲದ ಸಮಸ್ಯೆಯನ್ನು ಜಾಗತಿಕ ಸಮಸ್ಯೆ ಎಂದು ಪರಿಗಣಿಸಬಹುದು.
ನಿದ್ದೆಯನ್ನು ಇಲ್ಲಿ ಬರೀ ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಮಾತ್ರ ವಿಶ್ಲೇಷಿಸುತ್ತಾ ಇದ್ದೇನೆ ಅಂದ ಮಾತ್ರಕ್ಕೆ ಹಾಗಾದ್ರೆ ಗಂಡಿಗೆ ನಿದ್ದೆಯ ಅವಶ್ಯಕತೆ ಇಲ್ಲವೇ? ಎಂಬ ಪ್ರಶ್ನೆಯನ್ನು ಮುಂದಿಡಬಹುದು. ತಾಯ ಗರ್ಭದೊಳಗೆ ಶೈಶವಾವಸ್ಥೆಯಿಂದ ಹಿಡಿದು ಚಿರನಿದ್ರೆಗೆ ಜಾರುವವರೆವಿಗೂ ಯಾವ ವಯೋಮಾನದವರಾಗಲಿ, ಗಂಡಾಗಲೀ, ಹೆಣ್ಣಾಗಲಿ, ತ್ರಿಲಿಂಗಿಗಳಾಗಲಿ ಆರೋಗ್ಯ ಹದಗೆಟ್ಟು ವೈದ್ಯರ ಬಳಿ ಹೋದಾಗ ಕೇಳುವ ಪ್ರಶ್ನೆ ‘ನಿದ್ದೆ ಸರಿಯಾಗಿ ಬರ್ತಿದೆಯಾ? ಮೋಷನ್ ಸರಿಯಾಗಿ ಆಗ್ತಿದೆಯಾ? ಅಂತಲೇ. ನಿದ್ದೆ ಏರುಪೇರಾದಲ್ಲಿ ದೇಹದಲ್ಲಿ ಪಿತ್ತದಂಶದಲ್ಲಿ ಏರುಪೇರಾಗುತ್ತದೆ. ಪಿತ್ತ ಏರುಪೇರಾದರೆ ರಕ್ತದೊತ್ತಡ ಏರುಪೇರು. ಪರಿಣಾಮ ಕೋಪ, ಉದ್ವೇಗ, ಆತಂಕ, ಒತ್ತಡಗಳು. ಅರ್ಥಾತ್ ವೈದ್ಯಕೀಯ ಭಾಷೆಯಲ್ಲಿ ಬಿಪಿ, ಶುಗರ್, ಥೈರಾಯ್ಡ್, ಇನ್ನಿತರ ಹೇಳ ಹೆಸರಿಲ್ಲದ ಹೊಸ ಹೊಸ ಕಾಯಿಲೆಗಳು.
ಹೀಗಾಗಿ ಬದಲಾದ ಜೀವನ ಶೈಲಿಯ ಪರಿಣಾಮ ನಿದ್ದೆ ಬಾರದಿರುವಿಕೆ ಒಂದು ಜಾಗತಿಕ ಸಮಸ್ಯೆಯೇ. ನಿದ್ದೆ ಬಾರದಿರುವುದು, ನಿದ್ದೆಯಲ್ಲಿ ಮಾತನಾಡುವುದು, ನಿದ್ದೆಯಲ್ಲಿ ನಡೆದಾಡುವುದು, ನಿದ್ದೆಯ ಮಧ್ಯೆ ಎದ್ದು ತಿನ್ನುವುದು, ನಿದ್ದೆಯಲ್ಲಿ ಹಲ್ಲು ಕಡಿಯುವುದು, ಗೊರಕೆ ಹೊಡೆಯುವುದು, ಕನಸಿನಲ್ಲಿ ಬೆಚ್ಚಿಬೀಳುವುದು ಇವೆಲ್ಲವೂ ನಿದ್ದೆಗೆ ಸಂಬಂಧಿಸಿದ ಕಾಯಿಲೆಗಳು. ನಿದ್ದೆಗೆಟ್ಟು ಟಿವಿ, ಸಿನಿಮಾ ನೋಡುವುದು, ನಿದ್ದೆಗೆಡಿಸಿಕೊಂಡು ತಡರಾತ್ರಿಯವರೆಗೂ ಮೊಬೈಲ್ ಬಳಸುವುದು, ಲೇಟ್ ನೈಟ್ ಪಾರ್ಟಿಗಳು, ರಾತ್ರಿ ಪಾಳಿ ಉದ್ಯೋಗಗಳು ಇಂತಹ ಬದಲಾದ ಜೀವನಶೈಲಿಗಳು ಮತ್ತಿವುಗಳಿಂದ ಉಂಟಾಗುವ ಪರಿಣಾಮಗಳ ಮೂಲ ಇರುವುದು ನಿದ್ದೆ ಎಂಬ ಪದದಿಂದಲೇ.
ಗ್ರೀಕ್ ದೇಶದಲ್ಲಿ ಎಲ್ಲದಕ್ಕೂ ಒಬ್ಬೊಬ್ಬರು ಅಧಿದೇವತೆ ಇರುವಂತೆ ನಿದ್ದೆಗೆ ಮಾರ್ಫಿಯಸ್ ಎಂಬ ಅಧಿದೇವತೆ. ಈ ದೇವತೆಯು ಹಿಪ್ನೋಸ್ ಅಥವಾ ಸೊಮ್ನಸ್ ಎಂಬುವವನ ಮಗ. ಬಹುಶಃ ನಿದ್ದೆಗೆ ಸಂಬಂಧಿಸಿದ ಕಾಯಿಲೆಗೆ ಇನ್ಸೋಮ್ನಿಯಾ ಅಂತ ಹೆಸರು ಬಂದಿರುವುದು ಮಾರ್ಫಿಯಸ್ನ ತಂದೆಯಿಂದಲೇ ಇರಬೇಕು! ಇನ್ನು ನಮ್ಮ ಭಾರತದಲ್ಲಿ ನಾವು ನಿದ್ರೆಯನ್ನು ದೇವಿಗೆ ಹೋಲಿಸುತ್ತೇವೆ. ಆಕೆ ಅಪ್ಪಿಕೊಳ್ಳಲು ಬಂದಾಗ ಪ್ರೀತಿಯಿಂದ ಒಪ್ಪಿಕೊಂಡುಬಿಡುವಂತಾಗಬೇಕು. ಏನೇ ಆಗಲಿ, ಒಳಗೂಹೊರಗೂ ದುಡಿಯುವ ಹೆಣ್ಣಿಗೆ ಆಕೆಯ ಸ್ವಾತಂತ್ರ್ಯದ ಲಿಸ್ಟಿನಲ್ಲಿ ನಿದ್ದೆ ಎಂಬ ಪದವೂ ಸೇರಿಸುವುದು ಒಟ್ಟಾರೆ ಭವಿಷ್ಯದ ದೃಷ್ಟಿಯಿಂದಲೂ ಹಿತ. ಹಾಗಿದ್ದರೆ ಇದನ್ನೆಲ್ಲ ಮೊದಲು ಯಾರು ಅರ್ಥ ಮಾಡಿಕೊಳ್ಳಬೇಕು? ಸ್ವಲ್ಪ ಯೋಚಿಸಿ.
*** ಪರಿಚಯ: ಚಂದ್ರಕಲಾ ಮಂಜುನಾಥ ಅವರು ಅವರು ಪತ್ರಿಕೋದ್ಯಮ ಹಾಗೂ ಮಹಿಳಾ ಅಧ್ಯಯನ ವಿಷಯದಲ್ಲಿ ಪದವಿ ಹಾಗೂ ಕನ್ನಡ ಸಾಹಿತ್ಯ (ತೌಲಾನಿಕ ಸಾಹಿತ್ಯ) ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದಷ್ಟು ವರ್ಷಗಳ ಕಾಲ ಮಾಧ್ಯಮದಲ್ಲಿ ಕೆಲಸ ನಿರ್ವಹಿಸಿದ ಅನುಭವವಿದೆ. ವಿಶ್ವಭಾರತಿ ಕ್ರೀಡಾ ಮತ್ತು ಸಾಂಸ್ಕೃತಿ ಕೇಂದ್ರ’ ಎಂಬ ತಂಡವನ್ನು ಕಟ್ಟಕೊಂಡಿದ್ದು, ಶಾಲಾಮಕ್ಕಳಿಗೆ ನಮ್ಮ ಜಾನಪದ ಕಲೆ, ಜಾನಪದ ಕ್ರೀಡೆಗಳನ್ನು ಪರಿಚಯಿಸುವ ಉದ್ದೇಶ-ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಸದ್ಯಕ್ಕೆ ಉತ್ತರ ವಲಯಕ್ಕೆ ಬರುವ (ಯಲಹಂಕ) ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಜಾನಪದ ಕಲೆಯ ತರಬೇತಿ ನೀಡುವುದಲ್ಲದೆ ಆಯಾ ಗ್ರಾಮ ಅಥವಾ ಸ್ಥಳದ ಇತಿಹಾಸದ ಸಂಶೋಧನೆ ನಡೆಸಿ ಮಕ್ಕಳಿಗೆ ರೂಪಕದ ಮೂಲಕ ಅವರದೇ ಊರಿನ ಹಿನ್ನೆಲೆ ತಿಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಓದು ಮತ್ತು ಬರಹ ಇವರ ಹವ್ಯಾಸ.
ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ
Published On - 11:47 am, Fri, 19 March 21