ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ

‘ಸತಿಂದರ್ ಮಲ್ಲಿಕ್ ಎನ್ನುವ ಸಮಾನ ಮನಸಿಗ ಸಿಕ್ಕರು. ಇಬ್ಬರ ಗುರಿಯೂ ಒಂದೇ ಆಗಿರುವಾಗ ಯಾಕೆ ಜೊತೆಯಾಗಿ ನಡೆಯಬಾರದು ಎನ್ನಿಸಿತು. ಆದರೆ ಮನಸಿನ ಮೂಲೆಯಲ್ಲಿ ಗಂಡು-ಹೆಣ್ಣುವ ಲಿಂಗವಿಷಯ ಆಟವಾಡಿಸಹತ್ತಿತ್ತು. ಆದರೆ ಡ್ರೈವಿಂಗ್ ಎನ್ನುವುದು ಕೌಶಲ. ಮೊದಲು ನಾನು ಡ್ರೈವರ್ ನಂತರ ಹೆಣ್ಣು. ‘Woman Beyond Bounderies’ ಅನ್ನು ಜೆಂಡರ್ ನ್ಯೂಟ್ರಲ್ ಉದ್ದೇಶವನ್ನಿಟ್ಟುಕೊಂಡೇ ‘Wander Beyond Boundaries’ಗೆ ನಾನು ಸತಿಂದರ್ ಬದಲಾಯಿಸಿದೆವು‘ ನಿಧಿ ಸಾಲಗಾಮೆ

ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ
ನಿಧಿ ಸಾಲಗಾಮೆ
Follow us
ಶ್ರೀದೇವಿ ಕಳಸದ
|

Updated on:Mar 18, 2021 | 10:32 AM

ಒಳಗಿರುವ ಜೀವಚೈತನ್ಯಕ್ಕೆ ಲಿಂಗಬೇಧವುಂಟೆ?; ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿ ಇದೀಗ ನಿಮ್ಮೆಲ್ಲರ ಆಪ್ತ ಒಳಗೊಳ್ಳುವಿಕೆಯಿಂದಾಗಿ ರೂಪಾಂತರದ ಹಂತಕ್ಕೆ ಬಂದು ನಿಂತಿದೆ. ನೂರಾರು ವರುಷಗಳಿಂದ ಸುತ್ತಿಕೊಂಡಿರುವ ಎಡರು ತೊಡರುಗಳನ್ನೆಲ್ಲ ಕಿತ್ತೊಗೆದರೇ ನನ್ನೊಳಗಿನ ನಾನು ಪೂರ್ತಿಯಾಗಿ ಅರಳುವುದು, ಹೆಜ್ಜೆ ಕಿತ್ತಿಟ್ಟರೆ ಮಾತ್ರ ಸಹಜ ಗತಿಯಲ್ಲಿ ಚಲಿಸಲು ಸಾಧ್ಯವಾಗುವುದು ಎನ್ನುತ್ತಿದ್ದಾರೆ ನಮ್ಮ ನಡುವಿನ ದಿಟ್ಟ ಮಹಿಳೆಯರು. ತಮ್ಮ ಧೀಶಕ್ತಿಯಿಂದ ಸಮಾಜಕ್ಕೆ ತಕ್ಕ ಉತ್ತರಗಳನ್ನು ಕೊಡುತ್ತ ಬಂದಿರುವ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತ ಸಾಗುತ್ತಿರುವ ಅವರವರ ಪರಿಯನ್ನು ನಿಮ್ಮ ಮುಂದೆ ಇಡುತ್ತಿದ್ದಾರೆ. ಸರಣಿಯಲ್ಲಿ ನೀವೂ ಒಳಗೊಳ್ಳಬೇಕೇ? ದಯವಿಟ್ಟು ಬರೆಯಿರಿ tv9kannadadigital@gmail.com ಪರಿಕಲ್ಪನೆ : ಶ್ರೀದೇವಿ ಕಳಸದ ಬೆಂಗಳೂರು ಮೂಲದ ಟೆರೇನ್​ ಡ್ರೈವರ್ ನಿಧಿ ಸಾಲಗಾಮೆ ವಾಹನಚಾರಣವನ್ನೇ ಉಸಿರಾಡಿಕೊಂಡಿರುವ ಕನಸುಗಣ್ಣಿನ ಗಟ್ಟಿಜೀವ. ಎಂಥ ನಿರ್ಜನ ಪ್ರದೇಶಗಳಲ್ಲಿಯೂ ಯಾವ ಹೊತ್ತಿನಲ್ಲಿಯೂ ಒಂಟಿಯಾಗಿಯೇ ಚಲಿಸಬಲ್ಲ ಛಲದಂಕಮಲ್ಲೆ. ಈ ಛಲದಿಂದಲೇ ಮತ್ತದರ ಫಲದಿಂದಲೇ ಶೀತಲ ಧೃವವನ್ನು ಒಂಟಿಯಾಗಿ ತಲುಪಿದ ಮತ್ತು ದೆಹಲಿ-ಲಂಡನ್​ ಪ್ರಯಾಣವನ್ನು ಏಕಾಂಗಿಯಾಗಿಯೇ ನಿರ್ವಹಿಸಿದ ಮೊದಲ ಭಾರತೀಯ ಮಹಿಳೆ. ಎರಡು ಮಕ್ಕಳ ತಾಯಿಯೂ ಆಗಿರುವ ಇವರ ಕನಸಿನ ದಾರಿ ಅನುಭವಕ್ಕೆ ಪಕ್ಕಾಗಿ ಅರಿವಿಗೆ ಪಟ್ಟಾಗಿ ಮಾರ್ಪಾಟುಗೊಳ್ಳುತ್ತ ಬಂದಿರುವಂಥದ್ದು. ಹಳ್ಳಕೊಳ್ಳ ಕಾಡುಗುಡ್ಡ ಕಣಿವೆಗಳಲ್ಲಿ ಸತ್ಯವನ್ನೂ ಸೌಂದರ್ಯವನ್ನೂ ಹುಡುಕಿಕೊಳ್ಳುವ ಕಷ್ಟ-ಸುಖಕ್ಕೆ ಬಿದ್ದವರು ಎಂದಾದರೂ ಹೆದ್ದಾರಿಯ ಆಕರ್ಷಣೆಗೆ ಒಳಗಾಗುವುದುಂಟೆ? ಓವರ್ ಟು ಗ್ರೇಟರ್ ನೋಯಿಡಾ.

ಮಧ್ಯಮ ವರ್ಗದ ವಿದ್ಯಾವಂತ ಸಂಕೇತಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನನ್ನ ಮೂಲ ಹೆಸರು ಲಕ್ಷ್ಮೀ ಸಾಲಗಾಮೆ. ಅಜ್ಜಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ನಾನು ಹುಟ್ಟಿದ್ದು ಧಾರವಾಡ. ಬೆಳೆದಿದ್ದು ಬೆಂಗಳೂರು. ಅಮ್ಮ ಎಂ.ಎಸ್ಸಿ ಪದವೀಧರೆ, ಬೆಂಗಳೂರು ಡೈರಿಯಲ್ಲಿ ಕ್ವಾಲಿಟಿ ಆಫೀಸರ್. ಅಪ್ಪ ಮೈಕೋ ಕಂಪೆನಿ ಉದ್ಯೋಗಿ. ಹಾಗಾಗಿ ಅಜ್ಜ ಅಜ್ಜಿಯ ಕಣ್ಗಾವಲಿನಲ್ಲಿ ಬೆಳೆಯಲಾರಂಭಿಸಿದೆ.

ನನ್ನ ಅಮ್ಮ ತುಸು ಹೆಚ್ಚೇ ಮಹತ್ವಾಕಾಂಕ್ಷಿ. ನಾನು ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು, ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜಯನಗರದ ಸ್ಪಾರ್ಕ್​ ಚಾರಣ ಸಂಸ್ಥೆ ಮೂಲಕ ಏಳನೇ ವಯಸ್ಸಿಗೇ ಮೊದಲ ಚಾರಣಕ್ಕೆ ಕಳಿಸಿದರು. ಅಲ್ಲಿ ನಾನೊಬ್ಬಳೇ ಚಿಕ್ಕವಳು. ನನ್ನ ಅಕ್ಕನ (ಸಂಬಂಧಿ) ಕೈ ಹಿಡಿದುಕೊಂಡು ಚಾರಣ ಮುಗಿಸಿದೆನಾದರೂ ಅಳು ಮಾತ್ರ ಮುಂದುವರೆದೇ ಇತ್ತು. ಒಟ್ಟಾರೆಯಾಗಿ ಆ ಚಾರಣ ಎನ್ನುವುದು ಸಂಕಟಮಯದಿಂದ ಕೂಡಿತ್ತು. ಇನ್ನೆಂದೂ ನನ್ನನ್ನು ಕಳಿಸಬೇಡ ಎಂದು ಅಮ್ಮನಿಗೆ ಹೇಳಿದೆ.

ಆದರೆ ಮತ್ತೊಂದು ವಾರಾಂತ್ಯಕ್ಕೆ ಅದೇ ಸಂಸ್ಥೆಯೊಂದಿಗೆ ಕನಕಪುರಕ್ಕೆ ಹತ್ತಿರವಿರುವ ರಂಗಸ್ವಾಮಿ ಬೆಟ್ಟಕ್ಕೆ ಕಳಿಸಿದರು. ಏನೋ ಎಂತೋ ಬೆಟ್ಟ ಹತ್ತುತ್ತಾ ಸ್ವಲ್ಪ ಖುಷಿ ಅನ್ನಿಸಲು ಶುರುವಾಯಿತು. ಬಹುಶಃ ನಾನೂ ಬೆಟ್ಟ ಹತ್ತಿದೆ ಎನ್ನುವ ಕಾರಣಕ್ಕಿರಬಹುದು. ಹೀಗೆ ಮೂರು ನಾಲ್ಕು ಚಾರಣಗಳ ನಂತರ ಬೆಟ್ಟ ಹತ್ತುವುದರಿಂದ ಖುಷಿ ಸಿಗುತ್ತದೆ ಎನ್ನುವುದು ಅನುಭವಕ್ಕೆ ಬಂದಿತು. ಹನ್ನೊಂದು ವರ್ಷಕ್ಕೆ ಚಾರಣಗುಂಪಿನೊಂದಿಗೆ ಭೂತಾನಿಗೆ ಹೊರಟು ನಿಂತಾಗ ಅಪ್ಪನಿಗೆ ಆತಂಕವಾಯಿತು. ಆದರೆ ಅಮ್ಮಇನ್ನಿಲ್ಲದಂತೆ ಧೈರ್ಯ ತುಂಬಿದರು. ನಾಲ್ಕೈದು ಚಾರಣಗಳ ನಂತರ ಆತ್ಮವಿಶ್ವಾಸ ಮೂಡಿತು. ಹದಿಮೂರು ವರ್ಷಗಳಾಗುವತನಕ ವಾರಾಂತ್ಯದಲ್ಲಿ ಬೆಂಗಳೂರು ಸುತ್ತಮುತ್ತಲಿನ ಬೆಟ್ಟಗಳನ್ನೆಲ್ಲ ಸುತ್ತಿದೆ. ನಂತರ ನನ್ನ ಮೆಂಟರ್ ಶ್ರೀನಿವಾಸ್ ಎಂ.ಪಿ. ಅವರ ಗುಂಪಿನೊಂದಿಗೆ ಪಶ್ಚಿಮಘಟ್ಟಕ್ಕೆ ಹೋಗಲು ಶುರುಮಾಡಿದೆ. ಕುಮಾರ ಪರ್ವತ, ಆಗುಂಬೆ, ಕಿಗ್ಗ, ಹೀಗೆ. ಸಾವನದುರ್ಗಕ್ಕಂತೂ ತಿಂಗಳಿಗೊಮ್ಮೆ ಹೋಗುತ್ತಿದ್ದೆ.

naanemba parimaladha haadhiyali

ಅಮ್ಮ ಮೃದುಲ್, ತಂದೆ ರವಿ ಮತ್ತು ತಮ್ಮನೊಂದಿಗೆ ನಿಧಿ

ಆದರೆ ನನ್ನ ನಿರಂತರ ಹೊರಾಂಗಣ ಚಟುವಟಿಕೆಗಳಿಂದ ನನ್ನ ಶಾಲಾಭ್ಯಾಸದ ಬಗ್ಗೆ ಪೋಷಕರಿಗೆ ಚಿಂತೆಯಾಯಿತು. ನಾನಾಗ ಕುಮಾರನ್ಸ್​ನಲ್ಲಿ ಓದುತ್ತಿದ್ದೆ. ಇಂತಿಂಥ ಗ್ರೇಡ್​ನಲ್ಲಿ ಪಾಸಾದರೆ ಮಾತ್ರ ಚಾರಣಕ್ಕೆ ಕಳಿಸುತ್ತೇವೆಂದು ಕಟ್ಟಳೆ ಹೇರಲಾರಂಭಿಸಿದರು. ಇಷ್ಟೇ ಅಲ್ಲ ಚಾರಣವನ್ನು ತಪ್ಪಿಸಲು ವಿಧವಿಧದಲ್ಲಿ ಪ್ರಯತ್ನಿಸಿದರು. ಆದರೆ ಚಾರಣ ಎನ್ನುವುದು ಅದೆಷ್ಟು ಬೇಗ ನನ್ನೊಳಗೆ ಮನೋಗತವಾಗಿಬಿಟ್ಟಿತ್ತು ಎನ್ನುವುದರ ಬಗ್ಗೆ ಅವರಿಗೆ ಅರಿವು ಇದ್ದಂತಿರಲಿಲ್ಲ. ಅವರು ಹೂಡುವ ಉಪಾಯಗಳಲ್ಲಿ, ನಮ್ಮ ಬಳಿ ಹಣವಿಲ್ಲವೆಂದು ಹೇಳುವುದು ಮುಖ್ಯವಾಗಿತ್ತು. ಮುಂದೇನು ಮಾಡುವುದು? ನಾನಾಗ ಪರ್ಯಾಯ ಹಾದಿ ಹುಡುಕಿಕೊಂಡೆ.

ನನಗಿನ್ನೂ ಬಹಳ ಚೆನ್ನಾಗಿ ನೆನಪಿದೆ, ಒಂಬತ್ತನೇ ಕ್ಲಾಸ್​ನಲ್ಲಿದ್ದ ನಾನಾಗ ಶಾಲಾ ಸಮವಸ್ತ್ರದ ಮೇಲೆಯೇ ವನ್ಯಜೀವಿಗಳ ಗಣತಿ ನಡೆಸುವ ಗುಂಪಿನೊಂದಿಗೆ ಕಾಡಿಗೆ ಹೋಗಲಾರಂಭಿಸಿದೆ. ಇಡೀ ಗುಂಪಿನಲ್ಲಿ ನಾನೊಬ್ಬಳೇ ಹುಡುಗಿ. ನೋಡಲು ಸ್ವಲ್ಪ ಮೈಕೈ ತುಂಬಿಕೊಂಡಿದ್ದರಿಂದ ನನ್ನ ವಯಸ್ಸಿನ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ನಾನೂ ಕೂಡ ನನ್ನ ನಿಜವಾದ ವಯಸ್ಸನ್ನು ಯಾರಿಗೂ ಹೇಳಬಾರದೆಂದು ತೀರ್ಮಾನಿಸಿದ್ದೆ. ಒಟ್ಟಿನಲ್ಲಿ ನನ್ನ ಉದ್ದೇಶ, ಹೇಗೋ ಹಣ ಗಳಿಸಬೇಕು. ನನ್ನ ಟ್ರೆಕ್ಕಿಂಗ್​ ಟ್ರಿಪ್​ಗಳನ್ನು ನಾನೇ ನಿರ್ವಹಿಸಿಕೊಳ್ಳುವಂತಾಗಬೇಕು.

ಆಗ ಬಸ್ಸು ಹತ್ತಿಕೊಂಡು ಇಂಡಿಯನ್​ ಎಕ್ಸ್​ಪ್ರೆಸ್​ಗೆ ಹೋದೆ. ಶನಿವಾರದ ಪುರವಣಿಗಳನ್ನು ಯಾರು ನಿರ್ವಹಿಸುತ್ತಾರೆ ಎಂದು ಕೇಳಿ ತಿಳಿದುಕೊಂಡೆ. ಶಿಬಾ ಮತ್ತು ಪ್ರಿಯಾ ಗಣಪತಿ ಅವರ ಬಳಿ ಹೋಗಿ, ‘ನೋಡಿ, ನಾನು ವೈಲ್ಡ್​ ಲೈಫ್​ ಸೆನ್ಸಸ್ ಬಗ್ಗೆ ನನ್ನ ಅನುಭವ ಬರೆದಿದ್ದೀನಿ‘ ಅಂದೆ. ಅವರಿಗೆ ಸರ್ಪ್ರೈಝ್ ಆಯ್ತು. ಹೇಯ್ ಹುಡುಗಿ ಎಂಥಾ ಧೈರ್ಯ ನಿನಗೆ! ಎಂದ ಅವರು ಮೊದಲ ಬರಹವನ್ನು ಪ್ರಕಟಿಸೋದಕ್ಕೆ ಒಪ್ಪಿದರು. ಹೀಗೆ ನಾನು ಬರೆವಣಿಗೆಯ ಮೂಲಕ ನನ್ನ ಮೊದಲ ಸಂಭಾವನೆ ಪಡೆದೆ. ನಿಯಮಿತವಾಗಿ ಚಾರಣಗಳ ಅನುಭವಗಳನ್ನು ಬರೆಯೋದಕ್ಕೆ ಶುರುಮಾಡಿದೆ. ನನ್ನ ಮೂಲ ಹೆಸರಿನಲ್ಲೇ ಅವು ಡೆಕ್ಕನ್​ ಹೆರಾಲ್ಡ್ ಮತ್ತಿತರ ಇಂಗ್ಲಿಷ್​ ಪತ್ರಿಕೆ, ವೆಬ್​ಗಳಲ್ಲಿ ಪ್ರಕಟವಾದವು. ಕೈಯಲ್ಲೊಂದಿಷ್ಟು ಹಣವಾಡುತ್ತ ಹೋದಂತೆ ನಾನೇ ಟ್ರೆಕ್​  ಲೀಡ್ ಮಾಡಲಾರಂಭಿಸಿದೆ.

ಹತ್ತನೇ ಕ್ಲಾಸ್ ಮುಗಿಯಿತು. ಬ್ರಾಹ್ಮಣ ಕುಟುಂಬಗಳಲ್ಲಿ ಆಗ ಸಾಮಾನ್ಯವಾಗಿ ಓದು ಎಂದರೆ ಒಂದು ಎಂಜಿನಿಯರಿಂಗ್​ ಮತ್ತೊಂದು ಮೆಡಿಕಲ್. ಆದರೆ ನನಗೆ ನನ್ನ ಬದುಕಿನ ಬಗ್ಗೆ ಬಹಳ ಬೇಗ ಸ್ಪಷ್ಟತೆ ಸಿಕ್ಕಿತ್ತು. ಇದೆಲ್ಲ ಸಾಧ್ಯವಾಗಿದ್ದು ಟ್ರೆಕ್ಕಿಂಗ್​ನಿಂದಲೇ. ಆ ಎತ್ತರೆತ್ತರ ಬೆಟ್ಟಗಳನ್ನು ಹತ್ತುವುದು, ಗುಡ್ಡುಗಾಡು, ನದೀಕೊಳ್ಳಗಳಲ್ಲಿ ಸುತ್ತುವುದು ಬದುಕಿನ ನಿಜವಾದ ದರ್ಶನ. ಬೆಟ್ಟವನ್ನು ಹತ್ತಿನಿಂತಾದ ಮೇಲೆ ಮೂಡುವ ಪ್ರಶಾಂತ ಭಾವ ಇದೆಯಲ್ಲ, ಮತ್ತಲ್ಲಿ ಹೊಮ್ಮುವ ವಿಚಾರಸ್ಪಷ್ಟತೆ, ಆತ್ಮವಿಶ್ವಾಸ ಇದೆಯಲ್ಲ ಅದು ಕೇವಲ ಅನುಭವದಿಂದ ಮಾತ್ರ ಸಿಗಲು ಸಾಧ್ಯ. ಏನು ಮಾಡುವುದು? ಅಪ್ಪಅಮ್ಮನ ಒತ್ತಾಯಕ್ಕೆ ವಿಜಯಾ ಕಾಲೇಜಿಗೆ ಸೇರಿ ಪಿಸಿಎಂಬಿ ತೆಗೆದುಕೊಂಡೆ. ಕ್ಲಾಸಿನಲ್ಲಿ ಟ್ರೆಕ್ಕಿಂಗ್ ಪ್ಲ್ಯಾನ್ ಮಾಡುವುದು, ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದು, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು… ಹೇಗೂ ಪಿಯು ಮೊದಲ ವರ್ಷ ಮುಗಿಯಿತು. ಸೆಕೆಂಡ್ ಪಿಯೂ ಬಂದಾಗ ಟ್ಯೂಷನ್ ಹಾವಳಿ! ಟ್ಯೂಷನ್ ಎಂದು ಮನೆಯಿಂದ ಹೊರಟರೂ ಎಲ್ಲೋ ಹೋಗಿ ಕೂಡುತ್ತಿದ್ದೆ. ನನ್ನ ಕಸಿನ್ಸ್ ಎಲ್ಲರೂ ಬಿಎಂಸಿ, ಐಐಟಿ ಎಂದು ಮದ್ರಾಸ್, ಮುಂಬೈನಲ್ಲಿ ವಾಸವಾಗಿದ್ದರು.

ಆಗಾಗ ಅಪ್ಪ ಅಮ್ಮನಿಗೆ ಅನುಭವ ಆಧಾರಿತ ಶಿಕ್ಷಣ, ಹೊರಾಂಗಣ ಶಿಕ್ಷಣ, ವನ್ಯಜೀವಿ ನಿರ್ವಹಣೆಗೆ ಸಂಬಂಧಿಸಿದ ಬ್ರೋಷರ್​ಗಳನ್ನು ತಂದುಕೊಡುತ್ತಿದ್ದೆ. ಆದರೆ ಇದಕ್ಕೆಲ್ಲ ವಿದೇಶಗಳಲ್ಲಿ ಮಾತ್ರ ಹೆಚ್ಚು ಪ್ರೋತ್ಸಾಹವಿತ್ತು. ಆ ಕೋರ್ಸ್ ಪೂರೈಸಲು ಸುಮಾರು 20 ಲಕ್ಷಗಳಾದರೂ ಬೇಕಾಗುತ್ತಿತ್ತು. ಆದರೆ ನನ್ನ ಅಪ್ಪ, ಆರ್ಥಿಕ ಪರಿಸ್ಥಿತಿಯ ನೆಪ ಹೇಳುತ್ತಿದ್ದರು.

naanemba parimaladha haadhiyali

ಕಾಡಿನಿಂದ ಮಂಜಿಗೆ

ನನ್ನ ಯಾವ ಪ್ರಯತ್ನಗಳಿಗೂ ಇಲ್ಲಿ ಸಹಕಾರ ಸಿಗದು ಎಂದು ಗೊತ್ತಾಗಿ ಹೋಯಿತು. ಡಿಸೆಂಬರ್​ನ ಒಂದು ಸಂಜೆ, ‘ನಾನಿನ್ನು ಕಾಲೇಜು​ ಮುಂದುವರಿಸುವುದಿಲ್ಲ, ಪಿಯು ಪರೀಕ್ಷೆಯನ್ನೂ ಬರೆಯುವುದಿಲ್ಲ. ನನಗಿಷ್ಟವಾದಂತೆ ಬದುಕಬೇಕೆಂಬ ನಿರ್ಧಾರಕ್ಕೆ ಬಂದಿದ್ದೇನೆ‘ಎಂದೆ. ಅವರಿಗೆ ಆಘಾತವಾಯಿತು. ‘ನೀನು ಈ ಮನೆಯಲ್ಲಿರಬೇಕೆಂದರೆ ಚೆನ್ನಾಗಿ ಓದಲೇಬೇಕು, ನಾವು ಗೌರವಸ್ಥ ಕುಟುಂಬದಿಂದ ಬಂದವರು‘ ಎಂದರು. ‘ನಾನು ಏನು ಎನ್ನುವುದು ನಿಮಗೆ ಅರ್ಥವಾಗುತ್ತಿಲ್ಲವೆಂದಾದಲ್ಲಿ ಇಲ್ಲಿದ್ದು ಮಾಡುವುದಾದರೂ ಏನು?‘ ಎಂದೆ. ಆ ಇಡೀ ರಾತ್ರಿ ಒಬ್ಬಳೇ ಮನೆಯ ಹೊರಗೆ ಕುಳಿತೆ. ಬೆಳಗ್ಗೆ ಹಾಲಿನವ ಬಂದಾಗ ಬಾಗಿಲು ತೆರೆದರು. ಸುಮ್ಮನೆ ಒಳಗೆ ಹೋದೆ. ಬ್ಯಾಗಿಗೆ ಒಂದಿಷ್ಟು ಬಟ್ಟೆ ತುಂಬಿಕೊಂಡು ಮನೆಬಿಟ್ಟು ಹೊರಟೆ. ಎಲ್ಲಿ ಹೋಗುವುದು, ಏನು ಮಾಡುವುದು? ಗೊತ್ತಿಲ್ಲ. ರಾಜಾಜಿನಗರದಲ್ಲಿ ಒಂದು ಸಾಹಸ ಸಂಸ್ಥೆ ಇತ್ತು. ಅವರ ಬಗ್ಗೆ ಲೇಖನ ಕೂಡ ಬರೆದಿದ್ದೆ. ಅವರಲ್ಲಿ ನನ್ನ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡೆ. ‘ನನಗೆ ಮಲಗಲು ಸ್ವಲ್ಪ ಜಾಗ ಮತ್ತು ಹೊಟ್ಟಗೆ ಊಟ ಬೇಕು. ಕೆಲಸ ಮಾಡುವುದು ಗೊತ್ತು, ಮತ್ತೆ ಚಾರಣಗಳ ನಾಯಕತ್ವ ವಹಿಸಿಕೊಳ್ಳುವುದೂ ಗೊತ್ತು.‘ ಅಂದೆ. ಅವರು ವಿಚಾರ ಮಾಡಿ ಬುದ್ಧಿವಾದ ಹೇಳಿದರು. ಆದರೆ ನಾನು ನನ್ನ ನಿರ್ಧಾರ ಬದಲಿಸಲಿಲ್ಲ. ಹಾಗೇ ಚಾರಣಶಿಬಿರಗಳನ್ನು ಏರ್ಪಡಿಸುತ್ತಾ ಈ ಕ್ಷೇತ್ರದಲ್ಲಿಯೇ ನೆಲೆ ಕಂಡುಕೊಳ್ಳಾರಂಭಿಸಿದೆ.

ಸಾಕಷ್ಟು ಹೊಸ ಹೊಸ ಚಾರಣದ ದಾರಿಗಳನ್ನು ಹುಡುಕಿದೆ. ಹೊನ್ನೆಮರಡುವಿನ ತನಕ ಹೋಗಿದ್ದುಬರಲು ಶುರುಮಾಡಿದೆ. ಆ ಜಾಗ ತಲುಪಲು ನಿರ್ಜನ ಪ್ರದೇಶದಲ್ಲಿ ಸುಮಾರು 8.ಕಿ.ಮೀ ನಡಿಗೆಯಲ್ಲಿ ಸಾಗಬೇಕಾಗುತ್ತಿತ್ತು. ಒಟ್ಟಾರೆ ಈ ಪಯಣದ ಮೂಲಕ ವಿವಿಧ ಸಾಮಾಜಿಕ ಸ್ತರಗಳ ಪರಿಚಯವಾಯಿತು. ಅಷ್ಟೊತ್ತಿಗೆ ನನ್ನ ಹಿಂದಿನ ಬದುಕು ನನ್ನ ಮನಸ್ಸಿನಿಂದ ಸಂಪೂರ್ಣವಾಗಿ ಅಳಿಸಿಹೋಗಿತ್ತು. ಹಾಗಂತ ಕಷ್ಟಗಳೇನು ಕರಗಿರಲಿಲ್ಲ. ಕಷ್ಟಗಳಿಗೆ ವಿರುದ್ಧವಾಗಿ ಈಜುವುದನ್ನೆಲ್ಲ ರೂಢಿಸಿಕೊಂಡೆ. ಹಿಂದೆ ಮುಂದೆ ಯಾರೂ ಇರಲಿಲ್ಲ ಮಾರ್ಗದರ್ಶನ ಮಾಡೋದಕ್ಕೆ. ಆದರೂ ಹೊಸ ಜೀವನ ಶುರು ಮಾಡಲೇಬೇಕೆಂಬ ತೀವ್ರ ಹಂಬಲವಿತ್ತು. ಈ ಸಂದರ್ಭದಲ್ಲೇ ಲೈಂಗಿಕ ದೌರ್ಜನ್ಯಕ್ಕೀಡಾಗುವ ಜೀವನಕ್ರಮದಲ್ಲಿ ವಾಸಿಸತೊಡಗಿದ್ದೆ. ಶೋಷಣೆಗೆ ಒಳಗಾಗುತ್ತಿದ್ದೇನೆ ಎನ್ನುವುದು ನನ್ನ ಅರಿವಿಗೆ ಬರುತ್ತಲೇ ಇರಲಿಲ್ಲ. ಮುಂದೊಂದು ದಿನ ಅದು ಅರ್ಥವಾಗುವ ಹೊತ್ತಿಗೆ ಅಸಹಾಯಕಳಾಗಿದ್ದೆ. ನಾರ್ಸಿಸಿಸ್ಟ್ ಮನಸ್ಥಿತಿಯವರು ನಮ್ಮ ಕೌಶಲವನ್ನು ಬಹಳ ಉಪಾಯದಿಂದ ತಮ್ಮ ತೆವಲಿಗೆ ಬಳಸಿಕೊಂಡುಬಿಡುತ್ತಾರೆ. ನಾವು ಪೂರ್ತಿಯಾಗಿ ಯಾರನ್ನು ಅವಲಂಬಿಸಿರುತ್ತೇವೋ ಅವರ ಬಗ್ಗೆ ಧ್ವನಿ ಎತ್ತಲಾಗದ, ದೂರು ನೀಡಲಾಗದ ಸಂದಿಗ್ಧಕ್ಕೆ ಸಿಲುಕಿಕೊಂಡು ಬಿಡುತ್ತೇವೆ. ನನಗೂ ಹಾಗೇ ಆಯಿತು. ಬದುಕು ಹಿಮ್ಮುಖವಾಗಿ ಚಲಿಸಲಾರಂಭಿಸಿತು. ಯಾವುದು ಸರಿ ಯಾವುದು ತಪ್ಪು ಎಂಬ ಗೊಂದಲದಲ್ಲಿ ತೊಳಲಾಟಕ್ಕೆ ಬಿದ್ದೆ. ನನ್ನಲ್ಲಿದ್ದ ಬೆಟ್ಟದಂತಹ ಆತ್ಮವಿಶ್ವಾಸ ಮುರುಟುತ್ತ ಹೋಯಿತು. ಕೊನೆಗೆ ಎಲ್ಲಿಗೆ ಹೋಗುವುದು? ಮನೆಯನ್ನು ಬಿಟ್ಟುಬಂದವಳು ನಾನು. ಕೊನೆಗೊಮ್ಮೆ ಈ ಜಗತ್ತನ್ನೇ ತೊರೆಯುವ ನಿರ್ಧಾರ ಮಾಡಿದೆ. ಆದರೆ ನಂದಿಗೋಡಿನ ಗಂಗಣ್ಣನೆಂಬ ರೈತ, ಸಾಮಾಜಿಕ ಹೋರಾಟಗಾರ ನನ್ನನ್ನು ಕಾಪಾಡಿಬಿಟ್ಟ. ಹೊನ್ನೆಮರಡುವಿನ ಬಳಿ ಇದ್ದ ತನ್ನ ತೋಟಕ್ಕೆ ಕರೆದುಕೊಂಡು ಹೋಗಿ ಪೋಷಿಸಿದ. ತಕ್ಕಮಟ್ಟಿಗೆ ಸುಧಾರಿಸಿಕೊಂಡೆ. ನನಗಾಗ ಹತ್ತೊಂಬತ್ತು.

ಕೆಲ ತಿಂಗಳುಗಳ ನಂತರ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಿಗೆ ಚಾರಣ ಆಯೋಜಿಸಿದೆ.  ಅಲ್ಲೊಂದು ಕೆಡೆಟ್ಸ್​ ಟೀಮ್​ ಬಂದಿತ್ತು. ಅದನ್ನು ಕರೆತಂದ ವ್ಯಕ್ತಿ ಭಾರತೀಯ ಸೇನೆಯಲ್ಲಿದ್ದವರು ಮತ್ತು ಉತ್ತರ ಭಾರತದ ಮೂಲದವರು. ಅವರ ಪರಿಚಯವಾಯಿತು. ಪತ್ರಗಳ ಮೂಲಕ ಹೆಚ್ಚು ಆಪ್ತರಾದೆವು. ಅಷ್ಟೊತ್ತಿಗೆ ನನ್ನ ಮನೆಯಿಂದ ಕರೆ ಬಂದಿತು. ಒತ್ತಾಯಕ್ಕಾಗಿ ಮನೆಗೆ ಹೋಗಲೇಬೇಕಿತ್ತು. ನೀವು ನನ್ನೊಂದಿಗೆ ಬರಬಹುದಾ ಎಂದು ಅವರಲ್ಲಿ ಕೇಳಿಕೊಂಡೆ, ಒಪ್ಪಿದರು. ಈ ಹೊತ್ತಿಗಾಗಲೇ ನಮ್ಮಿಬ್ಬರಲ್ಲಿ ಆಕರ್ಷಣೆ ಬೆಳೆದಿತ್ತು. ತಲೆತಗ್ಗಿಸಿಕೊಂಡು ಮನೆ ಒಳಗೆ ಹೋದೆ. ಮುಂದೆ ಏನು ಮಾಡುವುದು ಎಂದು ಗೊತ್ತಿಲ್ಲ. ಹಾಗೆಂದು ಅಲ್ಲಿಯೇ ಇರುವಂತಿಲ್ಲ. ಅಲ್ಲಿಂದ ಓಡಿಹೋಗದಿದ್ದರೆ ಮುಂದೆ ಬದುಕಿಲ್ಲ! ಜೀವನವಿಡೀ ಅದೇ ಮಾತು… ಓದಲಿಲ್ಲ, ನಮ್ ಮಾತು ಕೇಳಲಿಲ್ಲ. ಆಕರ್ಷಣೆ ಪ್ರೀತಿಯಲ್ಲಿ ಬಲಗೊಂಡಿತು. ಈ ವ್ಯಕ್ತಿ ಮಾತ್ರ ನನ್ನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆನ್ನಿಸಿತು. ನಾನು ಬದುಕಬೇಕಿತ್ತು, ಬಿದ್ದ ಏಟುಗಳಿಂದ ಹೊರಬರಬೇಕಿತ್ತು. ಮೊದಲು ಒದಗಿದ ಸನ್ನಿವೇಶದಿಂದ ಪಾರಾಗಬೇಕಿತ್ತು.

naanemba parimaladha haadhiyali

ದಾರಿ ಹುಡುಕುತ್ತ

ಜೊತೆಯಾದ ಜೀವದಿಂದಾಗಿ ಕಳೆದು ಹೋದ ನನ್ನ ಆತ್ಮವಿಶ್ವಾಸ ಮತ್ತೆ ಚಿಗುರಿತು. ಕೊನೆಗೆ ಆರು ತಿಂಗಳಲ್ಲಿ ಮದುವೆಯಾದೆವು. ನನಗಾಗ ಕೇವಲ 20. ನಂತರ ಅವರೊಂದಿಗೆ ಉತ್ತರ ಭಾರತಕ್ಕೆ ಹೋದೆ. ಮರುವರ್ಷದೊಳಗೆ ಸಮಿಕ್ ಹುಟ್ಟಿದ. ಎರಡು ವರ್ಷಗಳ ನಂತರ ಅವಿಕ್ ಹುಟ್ಟಿದ. ಸಂಪೂರ್ಣ ಗೃಹಿಣಿ ಬದುಕಿಗೆ ತೆರೆದುಕೊಂಡೆ. ಆದರೂ ನನ್ನ ಹೊರಾಂಗಣ ಚಟುವಟಿಕೆ ಆಗಾಗ ಅವಕಾಶಗಳನ್ನು ಹುಡುಕಿಕೊಳ್ಳುತ್ತಿದ್ದೆ. ಮೊದಲ ಮಗ ಹುಟ್ಟಿದ ಎರಡು ವಾರಕ್ಕೇ ಅವನನ್ನು ಬೇಬಿ ಕ್ಯಾರಿಯರ್​ ಕಟ್ಟಿಕೊಂಡು ಹಾಲು ಕುಡಿಸುತ್ತಲೇ ಚಾರಣ ಮಾಡಿದೆ. ಬೆನ್ನಿಗೊಬ್ಬನನ್ನು, ಎದೆಗೊಬ್ಬನನ್ನು ಕಟ್ಟಿಕೊಂಡು ಚಾರಣ ಮಾಡಹತ್ತಿದೆ. ಬದುಕು ಹೀಗೆ ಸಾಗುತ್ತಿರುವಾಗಲೇ ಗಂಡ ಕಾಂಗೋಗೆ ವರ್ಗಾವಣೆಗೊಂಡರು.

2006ರಲ್ಲಿ ಬೆಂಗಳೂರಿಗೆ ವಾಪಸ್ಸಾಗಿ ಆರ್ಮಿ ಕ್ವಾರ್ಟರ್ಸ್​ನಲ್ಲಿ ವಾಸಿಸಲಾರಂಬಿಸಿದೆ. ಮಕ್ಕಳೊಂದಿಗೆ ಮನೆಯಲ್ಲೇ ಕಟ್ಟಿಹಾಕಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ನನ್ನ ಕನಸ್ಸು ನನ್ನನ್ನು ಕರೆಯುತ್ತಲೇ ಇತ್ತು. ಆದರೆ ಬೆಳೆಯುತ್ತಿದ್ದ ಮಕ್ಕಳನ್ನು ಎಷ್ಟಂತ ಹೊತ್ತುಕೊಂಡು ಓಡಾಡಲಿ? ಇದಕ್ಕೆ ಏನಾದರೂ ಒಂದು ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನಿಸಿತು. ಮಕ್ಕಳು ನಮ್ಮ ಬದುಕಿನ ಒಂದು ಭಾಗವೇ ಆಗಿರುವಾಗ ಅವರನ್ನು ಬಿಟ್ಟು ಹೋಗಲು ಸಾಧ್ಯವೇ? ಆಗ ಹೊಳೆದಿದ್ದು ನಾಲ್ಕು ಚಕ್ರದ ವಾಹನ. ಒಂದು ಜೀಪ್​ ಕೊಂಡುಕೊಳ್ಳುವುದು ಎಂದು ತೀರ್ಮಾನಿಸಿದೆ. ಆದರೆ ಅಷ್ಟೊಂದು ಹಣ? ನನ್ನ ಮೆಂಟರ್ ಶ್ರೀನಿವಾಸ್ ಜೀಪ್ ಥ್ರಿಲ್ಸ್ ಗ್ರೂಪ್​ ನಡೆಸುತ್ತಿದ್ದರು, ಪರಿಚಯದವರ ಬಳಿ ಒಂದು ಹಳೇ ಚಾಸಿಸ್ ಕೊಡಿಸಿದರು. ಗುಜರಿಯಿಂದ ಬೊಲೆರೋ ಎಂಜಿನ್ ಖರೀದಿಸಿದೆ. ನಂತರ ಅದನ್ನು ಜೋಡಿಸುವ ಕೆಲಸ ಶುರು. ಮೆಕ್ಯಾನಿಕ್​ಗೆ ಕೊಡುವಷ್ಟು ಹಣ ನನ್ನ ಬಳಿ ಇರಲಿಲ್ಲ. ಏನು ಮಾಡುವುದು? ಮಕ್ಕಳಿಬ್ಬರನ್ನೂ ಕರೆದುಕೊಂಡು ಸಂಜೆತನಕ ವರ್ಕ್​ಶಾಪ್​ನಲ್ಲಿ ಮೆಕ್ಯಾನಿಕ್​ ಜೊತೆ ಕೆಲಸ ಮಾಡಿ ಆ ಹಣವನ್ನು ಅವನಿಗೇ ಕೊಟ್ಟೆ. ನಂತರ ವೀಕೆಂಡ್​ಗಳಲ್ಲಿ ಜೀಪ್​ ಥ್ರಿಲ್ಸ್ ಜೊತೆ ಆಫ್ ರೋಡಿಂಗ್​ ಶುರುಮಾಡಿದೆ. ಬೇಸಿಕ್​ ಡ್ರೈವಿಂಗ್ ಗೊತ್ತಿದ್ದುದರಿಂದ ಸುಲಭವಾಯಿತು. 4/4 ಪ್ರಯಾಣ ನನಗೆ ಹೊಸ ಜಗತ್ತನ್ನು ಪರಿಚಯಿಸಿತು. ಈ Medium ಮಾತ್ರ ನನಗೆ ಬೇರೊಂದು ಜಗತ್ತಿಗೆ ಕರೆದೊಯ್ಯಬಲ್ಲುದು ಎಂಬ ಸೂಚನೆ ಸಿಕ್ಕಿತು. ನಿರ್ಜನ ಪ್ರದೇಶಗಳಿಗೆ ಮಕ್ಕಳನ್ನೂ ಕರೆದುಕೊಂಡು ಡ್ರೈವ್ ಮಾಡಲಾರಂಭಿಸಿದೆ.

ಹೀಗೆ ನಾನು ಮತ್ತೊಂದು ಮಜಲಿನಲ್ಲಿ ಹೊರಾಂಗಣ ಚಟುವಟಿಕೆಗಳಿಗೆ ಸಂಪರ್ಕ ಸಾಧಿಸತೊಡಗಿದೆ ಎನ್ನುವ ಖುಷಿಯಲ್ಲಿದ್ದಾಗಲೇ ಕೌಟುಂಬಿಕವಲಯದಲ್ಲಿ ನನ್ನ ಅನುಪಸ್ಥಿತಿಯಿಂದಾಗಿ ಸಮಸ್ಯೆಗಳು ಶುರುವಾದವು. ಸಾಹಸ, ಸ್ವತಂತ್ರ ಮನೋಭಾವದ ಯಾವ ಭಾರತೀಯ ಮಹಿಳೆಯೂ ಎದುರಿಸುವಂಥ, ಅನುಭವಿಸುವಂಥ ಸಹಜ ಸ್ಥಿತಿ ಮತ್ತು ಸನ್ನಿವೇಶ ಇದು. ಗಂಡ ಕಾಂಗೋನಿಂದ ವಾಪಸ್ ಬಂದರು. ಜೀಪಿಂಗ್ ನಿಲ್ಲಿಸಿದಲ್ಲಿ ಮಾತ್ರ ತನ್ನೊಂದಿಗೆ ಜೆಹೆಸೆಲ್ಮೆರ್​ನಲ್ಲಿ ವಾಸಿಸಲು ಸಾಧ್ಯ ಎಂದುಬಿಟ್ಟರು. ಆಗಲಿ, ನನ್ನ ಜೀಪ್​ ಅನ್ನು ಅಪ್ಪ ಅಮ್ಮನ ಮನೆಯಲ್ಲೇ ಬಿಟ್ಟುಬರುತ್ತೇನೆ ಎಂದೆ. ಕೆಲ ತಿಂಗಳುಗಳು ಕಳೆದ ನಂತರ ವಾಪಸ್ ಬಂದು ಜೀಪ್ ತೆಗೆದುಕೊಂಡು ಹೋಗೋಣ ಎಂದುಕೊಂಡೆ. ಆದರೆ ನನ್ನ ವೈವಾಹಿಕ ಜೀವನ ಸುಸ್ಥಿತಿಯಲ್ಲಿ ಸಾಗಲಿ ಎನ್ನುವ ಕಾರಣಕ್ಕೋ ಏನೋ, ನನ್ನ Labour of Love : ಜೀಪ್, ಅಪ್ಪ ನನಗೆ ಗೊತ್ತಿಲ್ಲದಂತೆ ಮಾರಿಬಿಟ್ಟರು!

naanemba parimaladha haadhiyali

ಎರಡು ವಾರದ ತನ್ನ ಮಗುವನ್ನು ಚಾರಣಕ್ಕೆ ಕರೆದೊಯ್ದ ನಿಧಿ

ಈ ಬೆಳವಣಿಗೆಯಿಂದಾಗಿ ನನ್ನೊಳಗಿದ್ದ ಕ್ರಾಂತಿಕಾರಿಯ ಹಸಿವು ಮತ್ತಷ್ಟು ಹಿಗ್ಗಿತು. ನಾನು ಬಯಸಿದಂತೆ ನನ್ನ ಬದುಕು ಸಾಗುತ್ತಿಲ್ಲವೆಂದ ಮೇಲೆ ಅದು ನನ್ನ ಬದುಕೇ ಅಲ್ಲ ಎಂದು ಬಲವಾಗಿ ಅನ್ನಿಸಿತು. ಹೊರಾಂಗಣ ಸಾಹಸೀ ಚಟುವಟಿಕೆಗಳೇ ನನ್ನ ಕೌಶಲ. ಇದನ್ನು ಬಿಟ್ಟು ನನಗೆ ಬದುಕನ್ನು ಊಹಿಸಲು ಸಾಧ್ಯವೇ ಇಲ್ಲ ಎನ್ನಿಸಿಬಿಟ್ಟಿತು. ಅಷ್ಟಕ್ಕೂ ಪಿಯು ಪೂರ್ಣಗೊಳಿಸದ ನನಗೆ ಸಿಗುವ ಕೆಲಸವಾದರೂ ಏನು? ಮಕ್ಕಳೊಂದಿಗೆ ಬೆಂಗಳೂರಿಗೆ ವಾಪಾಸು ಬಂದು ಹೊನ್ನೆಮರಡುವಿನ ಬಳಿ ಇದ್ದ ರೈತ ಗಂಗಣ್ಣನ ತೋಟಕ್ಕೆ ಬಂದೆ. ನಗರದ ಮಂದಿ ಆರಾಮದಾಯಕವಾಗಿ ಇದ್ದು ಹೋಗಲೆಂದು ಅಲ್ಲಿಯೇ ಹೋಮ್​ ಸ್ಟೇ ಶುರುಮಾಡಿದೆ. ಗುಂಪುಗಳನ್ನು ಚಾರಣಕ್ಕೆ ಕರೆದುಕೊಂಡು ಎಂದಿನಂತೆ ಮಕ್ಕಳೂ ನನ್ನೊಂದಿಗಿರುತ್ತಿದ್ದರು.

ಮುಂದೆ ಕರೆಸ್ಪಾಂಡೆನ್ಸ್​ನಲ್ಲಿ ಎಂಬಿಎ ಓದಿದೆ. ಈ ಪದವಿಯಿಂದ ಮುಂದೆ ಏನೋ ಘಟಿಸಿಬಿಡುತ್ತದೆ ಅಂತೇನಲ್ಲ, ಮ್ಯಾನೇಜ್​ಮೆಂಟ್​ನ ವಿಷಯಗಳನ್ನು ಅರಿತುಕೊಳ್ಳುವ ಆಸಕ್ತಿಯಿಂದ. ಅಲ್ಲಿಂದ ಮುಂದೆ ಲೀಡರ್​ಶಿಪ್​​ ಕೋರ್ಸ್​ ಮಾಡಲು ನಾರ್ಥ್ ಕೆರೋಲಿನಾಗೆ ಹೋಗಬೇಕೆಂದು ಬಯಸಿದೆ. ಆದರೆ ಅಷ್ಟೊಂದು ಹಣ? ಮಕ್ಕಳನ್ನು ಬಿಟ್ಟು ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ಅಪ್ಪ ಅಮ್ಮ ನನ್ನ ಈ ನಿರ್ಧಾರಕ್ಕೆ ಸಹಕರಿಸಲಿಲ್ಲ. ಆದರೆ ನಾನಿದನ್ನು ಆಯ್ಕೆ ಮಾಡಿಕೊಂಡಿದ್ದು ನನ್ನ ಶೈಕ್ಷಣಿಕ ಭಾಗವಾಗಿ. ಸದ್ಯ ಶೇ. 90 ರಷ್ಟು ಸ್ಕಾಲರ್ಶಿಪ್ ದೊರೆಯಿತು. ಕೆಲ ತಿಂಗಳುಗಳಲ್ಲಿ ಕೋರ್ಸ್ ಮುಗಿಸಿ ವಾಪಸ್​ ಬಂದಾಗ ನಾನು ವಿಭಿನ್ನ ವ್ಯಕ್ತಿಯಾಗಿದ್ದೆ.

ಹೊರಾಂಗಣ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ಕೊಡಲಾರಂಭಿಸಿದೆ. ಮುಖ್ಯವಾಹಿನಿಯಲ್ಲಿರುವ ಶಾಲೆಗಳಲ್ಲಿ ಈ ಶಿಕ್ಷಣ ಮಾದರಿಯನ್ನು ಅಳವಡಿಸಲೇಬೇಕೆಂದು ಸತತ ಪ್ರಯತ್ನಕ್ಕೆ ಬಿದ್ದೆ. ಅಜೀಮ್ ಪ್ರೇಮ್​ಜೀ ಫೌಂಡೇಶನ್​ ಗೆ ಅರ್ಜಿ ಸಲ್ಲಿಸಿದೆ. ಹಳ್ಳಿ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವಂತ ಕೆಲಸ ಸಿಕ್ಕಿತು. ಅದರೊಂದಿಗೆ ನನಗೆ ಬರೆವಣಿಗೆ ಹಿನ್ನೆಲೆ ಇದ್ದಿದ್ದರಿಂದ ಡಾಕ್ಯುಮೆಂಟೇಷನ್ ಕನ್ಸಲ್ಟಂಟ್ ಎಂಬ ಕೆಲಸವೂ ಜೊತೆಯಾಯಿತು. ಹೊರಾಂಗಣ ಶಿಕ್ಷಣ ಮತ್ತು ಪರ್ಯಾಯ ಶಿಕ್ಷಣದ ಅನುಭವದ ಹಿನ್ನೆಲೆಯಲ್ಲಿ ‘ಲರ್ನಿಂಗ್​ ಕರ್ವ್‘ ಜರ್ನಲ್​ ನೋಡಿಕೊಳ್ಳತೊಡಗಿದೆ. ಇದರಿಂದಾಗಿ ನನ್ನ ಕುಟುಂಬಕ್ಕೆ ಆರ್ಥಿಕ ಬೆಂಬಲ ದೊರೆಯಿತು. ಇದೆಲ್ಲ ಒಂದು ಹಂತಕ್ಕೆ ಬಂದು ನಿಲ್ಲುವ ಹೊತ್ತಿಗೆ ನನ್ನ ವೈವಾಹಿಕ ಜೀವನ ತಳ ಒಡೆದ ದೋಣಿಯಂತಾಗಿತ್ತು. ಅದು ಸುಸ್ಥಿತಿಯಲ್ಲಿರಬೇಕೆಂದರೆ ವೈವಾಹಿಕ ಜೀವನಕ್ಕೆ ಮತ್ತೊಂದು ಅವಕಾಶ ಕೊಟ್ಟುಕೊಳ್ಳುವುದು ಒಳ್ಳೆಯದು ಎನ್ನಿಸಿತು. ಒಳಗೊಳಗೆ ‘ನಾನು’ ಮುರಿದು ಕುಸಿಯುತ್ತಿದ್ದರೂ ಎಲ್ಲವನ್ನೂ ಬಿಟ್ಟು ಮಕ್ಕಳೊಂದಿಗೆ ದೆಹಲಿಗೆ ಹೋದೆ.

ಆಗಲೂ ಮತ್ತೆ ಉಸಿರಾಡುವಂತೆ ಮಾಡಿದ್ದು ನನ್ನ ಡ್ರೈವಿಂಗ್. ನನ್ನ ಉಸಿರಿಗೆ ಬಲ ತುಂಬುತ್ತ ಹೋಗಿದ್ದು ಹಿಮಾಲಯದ ಪ್ರತೀ ರಸ್ತೆಗಳು, ತಿರುವುಗಳು, ತಗ್ಗುದಿನ್ನೆಗಳು. ನಂತರ ಗುರ್​ಗಾಂವ್​ನಲ್ಲಿ ಒಂದು ಕೆಲಸ ಹುಡುಕಿಕೊಂಡೆ. ಇದರಿಂದ ನನ್ನ ಕುಟುಂಬ ನಿರಾಯಾಸವಾಗಿ ಉಸಿರಾಡುವಂತಾಯಿತು. ಆದರೆ ನನ್ನೊಳಗಿನ ನಾನು? ಅಮವಾಸ್ಯೆ ಸಮೀಪಿಸುವ ಚಂದ್ರನಂತೆ ಕರಗುತ್ತಿದ್ದೆ. ಆಗ ಉಂಟಾದ ಮನಃಸ್ಥಿತಿಯಿಂದಾಗಿ ನನ್ನ ವಿಚಾರ ಪ್ರಕ್ರಿಯೆಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿ ನನ್ನೊಂದಿಗೆ ನಾನೇ ಕನೆಕ್ಟ್​ ಆಗಲು ಸಾಧ್ಯವಾಗುತ್ತಿಲ್ಲ ಎನ್ನಿಸಿತು. ಭಾರತೀಯ ಮಹಿಳೆ ಒಂದು ಕುಟುಂಬ ಇಲ್ಲವೆ ಅವಳ ಕನಸು-ಅಸ್ತಿತ್ವ, ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕು. ಈ ಹೊಯ್ದಾಟದಲ್ಲಿ ಅಸಂತುಷ್ಟವೇ ಹೆಚ್ಚೆಚ್ಚು ನನ್ನ ಉಡಿಗೆ ಬೀಳುತ್ತ ಹೋಯಿತು. ನಾನು ಖುಷಿಯಾಗಿದ್ದರೆ ಮಾತ್ರ ನನ್ನ ಮಕ್ಕಳನ್ನು ಖುಷಿಯಿಂದ ಬೆಳೆಸಲು ಸಾಧ್ಯ. ಸಂತೋಷ ಎನ್ನುವುದು ಹೆಣ್ಣಿಗೆ ಎಷ್ಟು ಮುಖ್ಯ, ತನ್ನ ಬಗ್ಗೆಯೇ ತಾನು ಖುಷಿ, ಪರಿಪೂರ್ಣತೆ, ತೃಪ್ತಭಾವ ಅನುಭವಿಸದಿದ್ದರೆ ಅದೊಂದು ಬದುಕೇ? ಎನ್ನಿಸಿ, ಹೆಣ್ಣುಮಕ್ಕಳು ಅವರವರ ಕನಸುಗಳಲ್ಲಿ ಖುಷಿ ಕಂಡುಕೊಳ್ಳುವಂತಾಗಬೇಕು ಎನ್ನುವುದನ್ನು ನನ್ನ ಗಂಡುಮಕ್ಕಳಿಬ್ಬರಿಗೂ ಈಗಿನಿಂದಲೇ ಅರ್ಥ ಮಾಡಿಸಬೇಕು; ಹೀಗೊಂದು ಪರಿಕಲ್ಪನೆಯನ್ನು ಯೋಚಿಸುತ್ತಲೇ 2015ರಲ್ಲಿ ದೆಹಲಿಯಿಂದ ಲಂಡನ್​ಗೆ ವಾಹನಚಾರಣ ಮಾಡಬೇಕೆನ್ನುವ ದೊಡ್ಡ ಕನಸಿನ ರೆಕ್ಕೆಗಳನ್ನು ಕಟ್ಟಿಕೊಂಡೆ. ಹಣ ಹೊಂದಿಸಿಕೊಳ್ಳಲು ಸುಮಾರು ಎಂಟು ತಿಂಗಳು ತನಕ ಹಗಲಿರುಳೂ ದುಡಿದೆ. ಆದರೂ ಅಷ್ಟೊಂದು ಹಣವನ್ನು ಯಾರು ಪ್ರಾಯೋಜಿಸುತ್ತಾರೆ? ಅದಕ್ಕಾಗಿ ವಾಹನ ಹುಡುಕಿಕೊಳ್ಳುವುದು ಹೇಗೆ? ಈತನಕ ಯಾರೊಬ್ಬ ಹೆಣ್ಣುಮಗಳೂ ಆ ರಸ್ತೆಗಳಲ್ಲಿ ಗಾಡಿ ಓಡಿಸಿದ್ದೇ ಇಲ್ಲ. ಅಕಸ್ಮಾತ್ ಓಡಿಸಬೇಕೆಂದರೆ ಅವಳ ರಕ್ಷಣೆಗಾಗಿ ನಾಲ್ಕೈದು ಜನರನ್ನು ಕಳಿಸಬೇಕು. ಒಬ್ಬಾಕೆಯ ಬೆಂಗಾವಲಿಗೆ ಅಷ್ಟು ಜನರನ್ನು ಅಪಾಯಕ್ಕೆ ಸಿಲುಕಿಸಬೇಕೇ, ಎಂಬ ಧೋರಣೆಯೇ.

naanemba parimaladha haadhiyali

‘Wander Beyond Boundaries’ ವಾಹನಚಾರಣ

ಈ ಕನಸಿಗಾಗಿ ಹಣ ಹೊಂದಿಸುತ್ತ ಪೂರಕ ಪರವಾನಿಗೆ, ಸೌಲಭ್ಯಗಳಿಗಾಗಿ ಸರ್ಕಾರಿ ಆಫೀಸುಗಳ ಹೊರಗೆ ದಿನವಿಡೀ ಕಾಯುತ್ತ ನಿಂತ ದಿನಗಳೆಷ್ಟೋ. ಕೊನೆಗೊಂದು ದಿನ ಭಾರತ ಸರ್ಕಾರದ ಮೂಲಕ ದೆಹಲಿ ಲಂಡನ್ ರೋಡ್ ಜರ್ನಿಗೆ ಪರವಾನಿಗೆ ದೊರೆಯಿತು. ಹದಿನೇಳು ದೇಶಗಳನ್ನು ದಾಟಿಕೊಂಡು 97 ದಿನಗಳ ಕಾಲ ಈ ಏಕಾಂಗಿ ಸಾಹಸಪ್ರಯಾಣ ಮುಗಿಸಿದೆ. ಮಧ್ಯೆ ಮಾಯೆನ್ಮಾರ್​ನಲ್ಲಿ ಚಂಡಮಾರುತದಿಂದಾಗಿ ನಲವತ್ತು ದಿನಗಳ ಕಾಲ ಅಲ್ಲಿಯೇ ತಂಗಬೇಕಾಯಿತು. ಇದೆಲ್ಲವನ್ನೂ ಮುಗಿಸಿ ಬಂದಾಗ ನಾನು ಹೊಸ ಮನುಷ್ಯಳಾಗಿದ್ದೆ. ನಾನು ಏನು ಎಂದು ನನ್ನ ಸಾಮರ್ಥ್ಯದ ಆಚೆಗೂ ಅರ್ಥ ಮಾಡಿಕೊಳ್ಳಲು ಇದೊಂದು ಅದ್ಭುತ ಅವಕಾಶವಾದಂತಾಯಿತು.

ಈ ಪ್ರಯಾಣದಲ್ಲಿ ಎದುರಾದ ಒಂದು ಘಟನೆಯನ್ನು ಹಂಚಿಕೊಳ್ಳಬೇಕೆನ್ನಿಸುತ್ತಿದೆ. ಇದ್ದಕ್ಕಿದ್ದಂತೆ  ನಾಲ್ಕೈದು ಜನರು ನನ್ನನ್ನು ತಡೆದು ವಾಹನಕ್ಕೆ ಮುತ್ತಿಗೆ ಹಾಕಿದರು. ಕುಡಿದು ತೂರಾಡುತ್ತಿದ್ದರು. ಒಂದು ಸಾವಿರ ಡಾಲರ್ ಕೊಟ್ಟರೆ ಮಾತ್ರ ಬಿಡುವುದಾಗಿ ಹೇಳಿದರು. ಎಷ್ಟೋ ಹೊತ್ತು ಅಸಹ್ಯವಾಗಿ ಕಾಡಿಸಿ ಪೀಡಿಸಿದರು. ನಿಜಕ್ಕೂ ನನ್ನ ಬಳಿ ಹಣವಿರಲಿಲ್ಲ. ದುಃಖ ಉಕ್ಕಿ ಕಣ್ಣೀರಿಳಿಯತೊಡಗಿತು. ಅದರಲ್ಲಿ ಒಬ್ಬವ, ಹಣ ಕೊಡದಿದ್ದರೆ ಗಾಜು ಒಡೆಯುತ್ತೇನೆಂದು ದೊಡ್ಡ ಕಲ್ಲನ್ನೆತ್ತಿಕೊಂಡು ಬಂದ. ಇನ್ನೊಬ್ಬ ಇನ್ನೇನೋ ಮಾಡುತ್ತೇನೆಂದ. ಕೊನೆಗೆ ಅದೆಲ್ಲಿಂದ ಧೈರ್ಯ ಬಂದಿತೋ ಕೆಳಗಿಳಿದು ನಿಂತೆ. ಬನ್ನಿ ಅದೇನು ಮಾಡುತ್ತೀರೋ ಮಾಡಿ ನನಗೆ. ಕೊಲ್ಲುತ್ತೀರೋ? ಅದೇ ಕಲ್ಲು ಎತ್ತಿ ಹಾಕಿ ಎಂದು ಮುಂದೆ ಮುಂದೆ ಹೋದೆ. ಅವರು ಹಿಂದೆ ಹಿಂದೆ ಹೋದರು. ನಿಶೆಯಲ್ಲೂ ದಂಗಾಗಿ ಹತ್ತು ನಿಮಿಷ ಸುಮ್ಮನೇ ನಿಂತರು. ನಾನೂ ಸುಮ್ಮನೇ ನಿಂತೆ. ಕೊನೆಗೆ ಅಲ್ಲಿಂದ ಹೊರಟುಹೋದರು.

ವಾಪಾಸು ಬಂದಮೇಲೆ ಮತ್ತೆ ನಾನು ನನ್ನ ಗಂಡನೊಂದಿಗೆ ಮಾತನಾಡಲು ಶುರು ಮಾಡಿದೆ. ಅಫ್ಕೋರ್ಸ್!​ ಈಗಲೂ ಅವರು ನನಗೆ ಒಳ್ಳೆಯ ಗೆಳೆಯನೇ. ಪರಿಸ್ಥಿತಿ ವಿಷಮ ಸ್ಥಿತಿಗೆ ತಲುಪುವ ಮೊದಲೇ ನಾವು ನಮ್ಮ ವೈವಾಹಿಕ ಬದುಕಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳುದು ಒಳ್ಳೆಯದು. ಸಾಂಪ್ರದಾಯಿಕ ನಿರೀಕ್ಷೆಗಳನ್ನು ಈಡೇರಿಸಲು ನನಗೆ ಸಾಧ್ಯವಾಗದು. ಏಕೆಂದರೆ ನಾನು ಬೆಳೆದ ಬಂದ ಹಾದಿಯೇ ಹಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನಿಮಗೆ ಅನ್ಯಾಯವಾಗುವುದು ನನಗಿಷ್ಟವಿಲ್ಲ ಎಂದೆ. ಇಬ್ಬರೂ ನಮ್ಮ ದಾರಿಗಳನ್ನು ಪರಸ್ಪರ ತಿಳಿವಳಿಕೆಯಿಂದಲೇ ಬೇರ್ಪಡಿಸಿಕೊಳ್ಳುವ ಮೊದಲು ಮಕ್ಕಳನ್ನು ಎದುರಿಗೆ ಕೂರಿಸಿಕೊಂಡು ನಮ್ಮ ನಮ್ಮ ಹಾದಿಗಳು ಹೇಗೆ ಭಿನ್ನ ಮತ್ತು ಯಾಕೆ ಎಂಬುದನ್ನು ತಿಳಿಸಿದೆವು. ಮಕ್ಕಳಿಗಾಗಿ ಭೇಟಿಯಾದಾಗ ಕೋಪತಾಪ ಪ್ರಕಟಿಸುವುದನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಬೇಕು ಎನ್ನುವ ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಂಡೆವು. ದೊಡ್ಡ ಮಗನಿಗೆ ಹದಿನಾಲ್ಕು ವರ್ಷ. ತಂದೆಯೊಂದಿಗೆ ಬೆಂಗಳೂರಿನಲ್ಲಿದ್ದಾನೆ. ಚಿಕ್ಕವನಿಗೆ ಹನ್ನೆರಡು, ವಸತಿಶಾಲೆಗೆ ಹೊಂದಿಕೊಂಡಿದ್ದಾನೆ.

naanemba parimaladha haadhiyali

ಮಕ್ಕಳೊಂದಿಗೆ

ವೈವಾಹಿಕ ಜೀವನದಿಂದ ಹೊರಬಂದ ಮೇಲೆ ಬದುಕು ಹೆಚ್ಚು ಆತ್ಮವಿಶ್ವಾಸದಿಂದ ಕೂಡಿತು. ಹಾಗಂತ ಮೊದಲಿದ್ದ ಕಷ್ಟಗಳು ಕರಗಿದವು ಅಂತಲ್ಲ. ನಾನು ಆಯ್ಕೆ ಮಾಡಿಕೊಂಡ ಹಾದಿಯಲ್ಲಿ ಅವು ಎಂದೂ ಕರಗದಂಥವು. ಏಕೆಂದರೆ ಪ್ರತೀ ವಾಹನಚಾರಣವೂ ಹೋರಾಟವೇ. ಅದರಲ್ಲಿ ಹಣ ಹೊಂದಿಸಿಕೊಳ್ಳುವುದು ಮೊದಲ ಸಾಹಸ. ಉಳಿದದ್ದು ಟೆರೇನ್​ ಡ್ರೈವಿಂಗ್ ಎಂದರೆ ಆ ಬಗ್ಗೆ ವಿವರಿಸಬೇಕಿಲ್ಲ. ಈ ಎಲ್ಲ ಸ್ಥಿತ್ಯಂತರಗಳ ನಂತರ ನಾನು ಪೋಲ್​ ಆಫ್​ ಕೋಲ್ಡ್​ಗೆ ಒಂಟಿಯಾಗಿ ಪ್ರಯಾಣಿಸಿದ ಮೊದಲ ಭಾರತೀಯ ಮಹಿಳೆಯೂ ಎನ್ನಿಸಿಕೊಂಡೆ. ಆದರೆ ಇದಕ್ಕಾಗಿ ನಾನು ವೈಯಕ್ತಿಕ ಸಾಲ ತೆಗೆದುಕೊಂಡಿದ್ದೆ. ಈ ಸಾಹಸ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಸಲ ಸತ್ತುಬದುಕಿದೆ. ಜೀವ ಎನ್ನುವುದು ಪ್ರಕೃತಿ ನೀಡುವ ಅದ್ಭುತ ವರದಾನ ಹೇಗೆ ಎನ್ನುವುದನ್ನು ಮೌನದಲ್ಲಿ ಅನುಭವಿಸಿದೆ. ಈ ಸಾಧನೆಯ ನಂತರ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ  ಅಖಿಲೇಶ್ ಯಾದವ್ ಸಾಲ ಮನ್ನಾ ಮಾಡಿದರು.

ನಂತರ ಪರಿಚಯವಾದವರೇ ಸತಿಂದರ್ ಮಲ್ಲಿಕ್ ಎನ್ನುವ ಸಮಾನ ಮನಸಿಗ. ಅವರು ಆಗ ಸೇನೆಯಿಂದ ನಿವೃತ್ತಿ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರು. ನಾವಿಬ್ಬರೂ ಸೇರಿ ನಮ್ಮಿಬ್ಬರ ಗುರಿಗಳನ್ನು ಒಟ್ಟಿಗೇ ಸೇರಬಹುದಲ್ಲ ಎನ್ನಿಸಿತು. ಅದಾಗಲೇ ‘Women Beyond Boundaries’ ಪ್ರಾರಂಭಿಸಿದ್ದೆನಾದರೂ, ನಮ್ಮ ಗುರಿ ಸೇರುವ ವಿಷಯವೂ ಸೇರಿದಂತೆ ಒಟ್ಟಾರೆಯಾಗಿ ನನ್ನ ಮನಸಿನ ಮೂಲೆಯಲ್ಲಿ ಗಂಡು-ಹೆಣ್ಣುವ ಲಿಂಗವಿಷಯ ಆಟವಾಡಿಸಹತ್ತಿತ್ತು. ಆದರೆ ಡ್ರೈವಿಂಗ್ ಎನ್ನುವುದು ಕೌಶಲ. ಮೊದಲು ನಾನು ಡ್ರೈವರ್ ನಂತರ ಹೆಣ್ಣು. ಡ್ರೈವಿಂಗ್ ಸೀಟ್ ಮೇಲೆ ಕುಳಿತಾಗ ಅದು ಹೆಣ್ಣೋ ಗಂಡೋ ಎಂದು ಯಾವತ್ತಾದರೂ ಪ್ರಶ್ನಿಸುತ್ತದೆಯೇ? ಜೆಂಡರ್ ನ್ಯೂಟ್ರಲ್ ಉದ್ದೇಶವನ್ನಿಟ್ಟುಕೊಂಡೇ ನಾನು ಸ್ಯಾಟಿ (ಸತಿಂದರ್) 2018ರಲ್ಲಿ ‘Wander Beyond Boundaries’ ಎಂದು ಮರುನಾಮಕರಣ ಮಾಡಿದೆವು. ಈ ಎಲ್ಲ ವಿಚಾರಮಂಥನಕ್ಕೊಳಗಾದಷ್ಟೂ ನಮ್ಮಿಬ್ಬರ ಮನಸ್ಸುಗಳು ಮತ್ತಷ್ಟು ಹತ್ತಿರವಾದವು. ಇಬ್ಬರೂ ಸಂಗಾತಿಗಳಾಗಿರಲು ತೀರ್ಮಾನಿಸಿದೆವು. ಐದಾರು ಗುಂಪುಗಳನ್ನು ಮಾಡಿ ವಾಹನಚಾರಣಕ್ಕೆ ಕರೆದೊಯ್ಯಲು ಶುರುಮಾಡಿದೆವು. ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲೆಂದೇ ಚಾರಣಾರ್ಥಿಗಳನ್ನು ನಿರ್ಜನ ಪ್ರದೇಶಗಳಿಗೆ ಕರೆದೊಯ್ದೆವು. ಈತನಕ ಸುಮಾರು ಏಳು ವಾಹನಚಾರಣಗಳನ್ನು ಮುಗಿಸಿದ್ದೇವೆ.

ಹಿಂದಿರುಗಿ ನೋಡಿದಾಗ ನನ್ನ ಸುತ್ತಮುತ್ತಲಿನವರೆಲ್ಲ ನನ್ನನ್ನು ‘ಸಟ್ಕೇಲಾ’ ಎಂದು ಕರೆಯುತ್ತಿದ್ದುದು ನೆನಪಾಗುತ್ತದೆ. ಒಂದು ದಿನ ಇದರ ಅರ್ಥವೇನು ಎಂದು ಗೂಗಲ್​ಗೆ ಕೇಳಿದ್ದೆ, A crazy person; someone who is talking about nonsensical tasks that are not feasible to perform ಎಂದಿತು. Well, that’s why I am truly ಅನ್ನಿಸಿತು. ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ ಎನ್ನುವುದು ನನ್ನನ್ನು ಇನ್ನಿಲ್ಲದಂತೆ ಪ್ರಭಾವಿಸಿದೆ.

naanemba parimaladha haadhiyali

ಸಂಗಾತಿ ಸತಿಂದರ್ ಮಲಿಕ್ (ಸ್ಯಾಟಿ) ಜೊತೆ ನಿಧಿ.

ಒಟ್ಟಾರೆಯಾಗಿ ಪ್ರತೀ ಮನುಷ್ಯನೂ ಕನಸು ಕಾಣುತ್ತಾನೆ. ಆದರೆ ಹಲವರು ಈಡೇರಿಸಿಕೊಳ್ಳಲು ಬಯಸುತ್ತಾರೆ. ಆದರೆ, ಕೆಲವರಷ್ಟೇ ಆ ಹಾದಿಯನ್ನು ನಿರ್ವಹಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತಾ ಹೋಗುತ್ತಾರೆ. ಈ ದಾರಿಗೆ ಒಳಗಿನಷ್ಟೇ ಹೊರಗಿನ ದಾರಿಯೂ ಮುಖ್ಯ. ಹೊರಗಿನ ದಾರಿಯಷ್ಟೇ ಒಳಗಿನ ದಾರಿಯೂ. ಆದರೆ ಸಾಕಷ್ಟು ಜನ ಕನಸುಗಳ ಕೈಬಿಡಲು ಕಾರಣ? ಭಯ. ಕಳೆದುಕೊಳ್ಳುವಿಕೆಯ ಭಯ, ಸೋಲುವ ಭಯ, ಅವಮಾನದ ಭಯ, ಅನಾಥಗೊಳ್ಳುವ ಭಯ. ಆನಂತರವೂ ಅಷ್ಟೇ. ನನ್ನ ಅಪ್ಪ ನನ್ನ ಮಕ್ಕಳನ್ನು ತೋರಿಸಿ ನನ್ನ ಕನಸಿನ ಹಾದಿಯನ್ನು ತಡೆಯುವ ಪ್ರಯತ್ನ ಮಾಡಿದರು, ಮಕ್ಕಳು ನಿನ್ನನ್ನು ಅವಲಂಬಿಸಿವೆ ಯಾಕೆ ನಿನ್ನನ್ನು ನೀನು ಅಪಾಯಕ್ಕೆ ಒಡ್ಡಿಕೊಳ್ಳುತ್ತಿರುತ್ತೀಯಾ ಎಂದು. ಅವರು ಹೇಳುತ್ತಿರುವುದರ ಹಿಂದಿರುವುದೂ ಅದೇ. ಎರಡಕ್ಷರದ ಭಯ.

ಈಗಲೂ ನನ್ನ ಮಕ್ಕಳ ತಂದೆ ನನಗೆ ಒಳ್ಳೆಯ ಗೆಳೆಯ. ಮಕ್ಕಳೊಂದಿಗೆ ಆಗಾಗ ಭೇಟಿಯಾಗುತ್ತಿರುತ್ತೇವೆ. ಮಕ್ಕಳೂ ಕೂಡ ರಜಾ ದಿನಗಳಲ್ಲಿ ನನ್ನ ಮತ್ತು ಸ್ಯಾಟಿಯೊಂದಿಗೆ ನೋಯಿಡಾಕ್ಕೆ ಬಂದಿದ್ದು ಹೋಗುತ್ತಾರೆ. ಆದರೆ ಮಕ್ಕಳು ಅಮ್ಮಾ, ನಿನ್ನ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ. You are bravo! ಎಂದಪ್ಪಿಕೊಳ್ಳುವಾಗ ಮನಸ್ಸು ಆರ್ದ್ರಗೊಳ್ಳುತ್ತದೆ ಮತ್ತಷ್ಟು ದೃಢವಾಗುತ್ತದೆ.

ಇದನ್ನೂ ಓದಿ : Woman Director; ನಾನೆಂಬ ಪರಿಮಳದ ಹಾದಿಯಲಿ: ಸ್ಕ್ರಿಪ್ಟ್​ ರೆಡಿಯಾಗ್ತಿದೆ ‘ಕಾವೇರಿ 24/7’

Published On - 5:29 pm, Wed, 17 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ