Fuel Price: ಪೆಟ್ರೋಲ್, ಡೀಸಲ್ ಮೇಲಿನ ಅಬಕಾರಿ ಸುಂಕ 2 ರೂ ಹೆಚ್ಚಳ; ಆದರೆ ಬೆಲೆ ಏರಿಕೆ ಇರಲ್ಲ
Excise duty raised on Petrol and Diesel: ಬೆಲೆ ಏರಿಕೆಯ ಬಿಸಿಯಲ್ಲಿರುವ ಮಧ್ಯಮ ವರ್ಗದವರಿಗೆ ಗಾಯದ ಮೇಲೆ ಬರೆ ಬೀಳುತ್ತಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಎರಡು ರೂಗಳಷ್ಟು ಹೆಚ್ಚಿಸಿದೆ. ಕರ್ನಾಟಕದ ಜನರಿಗೆ ಡಬಲ್ ಶಾಕ್ ಸಿಕ್ಕಂತಾಗಿದೆ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಡೀಸಲ್ ಮೇಲೆ ಎರಡು ರೂ ಹೆಚ್ಚುವರಿ ತೆರಿಗೆ ಹೇರಿತ್ತು. ಈಗ ಕೇಂದ್ರದಿಂದ ಎರಡು ರೂ ಅಬಕಾರಿ ಸುಂಕ ಹೆಚ್ಚಳ ಆಗಿದೆ.

ನವದೆಹಲಿ, ಏಪ್ರಿಲ್ 7: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಎರಡು ರೂಗಳಷ್ಟು ಹೆಚ್ಚಿಸಿದೆ. ಪೆಟ್ರೋಲ್ ಮೇಲೆ ಅಬಕಾರಿ ಸುಂಕ ಒಂದು ಲೀಟರ್ಗೆ 11 ರೂ ಇದ್ದದ್ದು 13 ರೂಗೆ ಏರಿಕೆ ಆಗುತ್ತಿದೆ. ಡೀಸಲ್ ಮೇಲಿನ ಅಬಕಾರಿ ಸುಂಕವು ಪ್ರತೀ ಲೀಟರ್ಗೆ 10 ರೂಗೆ ಏರಿಕೆ ಆಗುತ್ತಿದೆ. ಆದರೆ, ಆದರೆ, ಪೆಟ್ರೋಲ್ ಮತ್ತು ಡೀಸಲ್ನ ರೀಟೇಲ್ ಬೆಲೆಗಳಲ್ಲಿ (Petrol prices) ಹೆಚ್ಚಳ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ, ಅಂತಾರಾಷ್ಟ್ರೀಯ ಕಚ್ಚಾ ತೈಲ (crude oil) ಬೆಲೆ ಇಳಿಕೆ. ಅಬಕಾರಿ ಸುಂಕ ಏರಿಕೆಯು ನಾಳೆ ಮಂಗಳವಾರದಿಂದ (ಏಪ್ರಿಲ್ 8) ಜಾರಿಗೆ ಬರುತ್ತದೆ. ದರ ಬದಲಾವಣೆ ಆಗುತ್ತಿದ್ದರೆ ನಾಳೆ ಸ್ಪಷ್ಟವಾಗುತ್ತದೆ.
ಜಾಗತಿಕ ಕಚ್ಛಾ ತೈಲ ಬೆಲೆ ಇಳಿಕೆ
ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದೆ. ನಾಲ್ಕು ವರ್ಷದಲ್ಲೇ ಅತಿ ಕಡಿಮೆ ಬೆಲೆ ಇದೆ. ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸಲು ಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲೇ ಸರ್ಕಾರವು ಅಬಕಾರಿ ಸುಂಕ ಏರಿಕೆ ಮಾಡಿದೆ. ಇಲ್ಲಿ ಅಬಕಾರಿ ಸುಂಕ ಏರಿಕೆ ಆಗುತ್ತಿದ್ದರೆ, ಅತ್ತ ರೀಟೇಲ್ ಬೆಲೆ ಕಡಿಮೆ ಆಗುತ್ತಿದೆ. ಇದರಿಂದ ಅಂತಿಮವಾಗಿ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ಯಾವುದೇ ವ್ಯತ್ಯಯ ಆಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಭಾರತ ಮಾತ್ರವಲ್ಲ, ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ; ಏನು ಕಾರಣ?
ಕೇಂದ್ರ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯ ಈ ವಿಚಾರದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದೆ. ಅಬಕಾರಿ ಸುಂಕ ಏರಿಕೆ ಮಾಡಲಾದರೂ ಪೆಟ್ರೋಲ್ ಮತ್ತು ಡೀಸಲ್ನ ರೀಟೇಲ್ ದರಗಳನ್ನು ಹೆಚ್ಚಿಸಲಾಗುವುದಿಲ್ಲ ಎಂದು ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ತಮಗೆ ಮಾಹಿತಿ ನೀಡಿರುವುದಾಗಿ ಸಚಿವಾಲಯವು ಈ ಪೋಸ್ಟ್ನಲ್ಲಿ ತಿಳಿಸಿದೆ.
PSU Oil Marketing Companies have informed that there will be no increase in retail prices of #Petrol and #Diesel, subsequent to the increase effected in Excise Duty Rates today.#MoPNG
— Ministry of Petroleum and Natural Gas #MoPNG (@PetroleumMin) April 7, 2025
ಕರ್ನಾಟಕ ಸರ್ಕಾರದಿಂದ ಡೀಸಲ್ ಶಾಕ್
ಕರ್ನಾಟಕ ಸರ್ಕಾರ ಇತ್ತೀಚೆಗೆ ಡೀಸಲ್ ಮೇಲಿನ ತೆರಿಗೆಯನ್ನು ಎರಡು ರೂ ಹೆಚ್ಚಿಸಿತ್ತು. ಈಗ ಕೇಂದ್ರದಿಂದ ಅಬಕಾರಿ ಸುಂಕದಲ್ಲಿ ಎರಡು ರೂ ಹೆಚ್ಚಳ ಆಗಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು.
ಇದನ್ನೂ ಓದಿ: ಟೆಸ್ಲಾಗೆ ವೈರಿ ಕಂಪನಿಯ ಸ್ವಾಗತ; ಭಾರತದಲ್ಲಿ ಪ್ರಬಲ ಪ್ರತಿಸ್ಪರ್ಧೆ ಬಯಸುತ್ತಿರುವ ಬಿಎಂಡಬ್ಲ್ಯು
ಬೆಂಗಳೂರಿನಲ್ಲಿ ಸದ್ಯ ಒಂದು ಲೀಟರ್ ಪೆಟ್ರೋಲ್ ಬೆಲೆ 102.92 ರೂ ಇದೆ. ಡೀಸಲ್ ಬೆಲೆ 90.99 ರೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Mon, 7 April 25