ಬೇಸಿಗೆಯ ಬಾಯಾರಿಕೆಯನ್ನು ತಣಿಸಲಿದೆ ಯಾದಗಿರಿಯ ಆಧುನಿಕ ಶೈಲಿಯ ಮಣ್ಣಿನ ಮಡಿಕೆ
ಈ ಹಿಂದೆ ಕುಂಬಾರರು ಒಂದೇ ಶೈಲಿಯಲ್ಲಿ ಮಣ್ಣಿನ ಮಡಿಕೆಗಳನ್ನ ತಯಾರಿಸುತ್ತಿದ್ದರು. ಹೀಗಾಗಿ ಮಣ್ಣಿನ ಮಡಿಕೆಗಳು ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದವು. ಆದರೆ ಈ ಬಾರಿಯ ಯಾದಗಿರಿ ಕುಂಬಾರರ ಹೈಟೆಕ್ ಪ್ಲಾನ್ ನಿಂದ ಸಿಟಿಯಲ್ಲೂ ಸಹ ಮಡಿಕೆಗಳಿಗೆ ಬಾರಿ ಬೇಡಿಕೆ ಉಂಟಾಗಿದೆ.
ಯಾದಗಿರಿ: ಮಣ್ಣಿನ ಮಡಿಕೆ ಎಂದರೆ ಸಾಕು ಗ್ರಾಮೀಣ ಭಾಗದಲ್ಲಿ ನೈಸರ್ಗಿಕ ಫ್ರಿಜ್ ಎಂದೇ ಹೆಸರು ವಾಸಿಯಾಗಿದ್ದು, ತಣ್ಣನೆಯ ಮತ್ತು ಆರೋಗ್ಯಕರ ನೀರನ್ನು ಈ ಮಣ್ಣಿನ ಮಡಿಕೆಗಳು ನೀಡುತ್ತವೆ. ಸಾಧಾರಣವಾಗಿ ಒಂದೆ ಆಕಾರದಲ್ಲಿ ದೊರೆಯುತ್ತಿದ್ದ ಮಡಿಕೆಗಳು ಈಗ ಆಧುನಿಕತೆಗೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದು, ಬೆಸಿಗೆ ಕಾಲದಲ್ಲಿ ಗ್ರಾಹಕರನ್ನ ಸೆಳೆಯುವುದ್ದಕ್ಕೆ ಯಾದಗಿರಿ ಜಿಲ್ಲೆಗೆ ರಾಜಸ್ಥಾನ ಮಡಿಕೆಗಳು ಬರಲಾರಂಭಿಸಿವೆ.
ಬೇಸಿಗೆ ಆರಂಭವಾದರೆ ಸಾಕು ಜನ ನೀರಿನ ದಾಹ ತೀರಿಸಿಕೊಳ್ಳಲು ತಣ್ಣನೆಯ ನೀರಿನ ಮೊರೆ ಹೋಗುತ್ತಾರೆ. ಶ್ರೀಮಂತರು ಸಾಮಾನ್ಯವಾಗಿ ಫ್ರಿಡ್ಜ್ ಉಪಯೋಗಿಸುತ್ತಾರೆ. ಆದರೆ ಬಡವರು ಮತ್ತು ಮದ್ಯಮ ವರ್ಗದ ಜನರು, ಫ್ರಿಡ್ಜ್ ಎಂದೆ ಕರೆಸಿಕೊಳ್ಳುವ ಕುಂಬಾರರು ತಯಾರಿಸಿರುವ ಮಡಕೆಯನ್ನ ಖರೀದಿಸುತ್ತಾರೆ. ಇನ್ನು ಮಾರ್ಚ್ನಿಂದ ಬೇಸಿಗೆ ಕಾಲ ಕೂಡ ಶುರುವಾಗಿದ್ದು, ಯಾದಗಿರಿ ಜಿಲ್ಲೆಯಲ್ಲೂ ಬಿಸಿಲು ನೆತ್ತಿ ಮೇಲೆ ಕುಕ್ಕುತ್ತಿದೆ.
ಗಿರಿನಾಡಿನ ಜನರ ದಾಹ ತಣಿಸಲು ಈ ಬಾರಿ ಜಿಲ್ಲೆಗೆ ರಾಜಸ್ಥಾನಿ ಮಡಿಕೆಗಳು ಬರುತ್ತಿವೆ ಎನ್ನುವುದು ವಿಶೇಷ. ಫುಲ್ ಸ್ಟೈಲಿಶ್ ಆಗಿರುವ ಈ ಮಡಿಕೆಗಳನ್ನು ನೋಡಿ ಇವು ಪಿಂಗಾಣಿ ಅಥವಾ ಪಿಓಪಿಯಿಂದ ತಯಾರು ಮಾಡಿರಬಹುದು ಎಂದುಕೊಳ್ಳುವವರೆ ಜಾಸ್ತಿ ಆದರೆ ಈ ಊಹೆ ತಪ್ಪು. ಏಕೆಂದರೆ ಈ ಮಡಿಕೆ ಅಪ್ಪಟ ದೇಸಿ ಮಣ್ಣಿನಿಂದ ಮಾಡಿದವುಗಳಾಗಿದೆ.
ಈ ಹಿಂದೆ ಕುಂಬಾರರು ಒಂದೇ ಶೈಲಿಯಲ್ಲಿ ಮಣ್ಣಿನ ಮಡಿಕೆಗಳನ್ನ ತಯಾರಿಸುತ್ತಿದ್ದರು. ಹೀಗಾಗಿ ಮಣ್ಣಿನ ಮಡಿಕೆಗಳು ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದವು. ಆದರೆ ಈ ಬಾರಿಯ ಯಾದಗಿರಿ ಕುಂಬಾರರ ಹೈಟೆಕ್ ಪ್ಲಾನ್ನಿಂದ ಸಿಟಿಯಲ್ಲೂ ಸಹ ಮಡಿಕೆಗಳಿಗೆ ಬಾರಿ ಬೇಡಿಕೆ ಉಂಟಾಗಿದೆ.
ಇನ್ನು ಇಂದಿನ ಅಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಹಾಗೆ ಕುಂಬಾರರು ತಮ್ಮ ಮಡಿಕೆ ಮಾಡುವ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಬೇಸಿಗೆ ಸೀಜನ್ನಲ್ಲಿ ಯಾದಗಿರಿಯಲ್ಲಿ ಮಣ್ಣಿನಿಂದ ತಯಾರಿಸಿದ ಮಡಿಕೆ ಮಾತ್ರವಲ್ಲದೆ ಮಣ್ಣಿನ ವಾಟರ್ ಬಾಟಲ್, ಮಣ್ಣಿನಿಂದ ತಯಾರಿಸಿದ ನೀರಿನ ನೈಸರ್ಗಿಕ ಫಿಲ್ಟರ್ ಹೀಗೆ ವಿವಿಧ ಶೈಲಿಯಲ್ಲಿ ದಿನ ಬಳಕೆಯ ಸಾಮಾನುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ಇಷ್ಟು ದಿನ ಬರಿ ಒಂದೇ ಶೈಲಿಯಲ್ಲಿ ಮಡಿಕೆ ಖರೀದಿಸುತ್ತಿದ್ದ ಯಾದಗಿರಿ ಜನರು ಈಗ ಸಂತೋಷಗೊಂಡಿದ್ದಾರೆ. ಇನ್ನು ಈ ಬಾರಿ ಬೇಸಿಗೆ ಸಂದರ್ಭದಲ್ಲಿ ಗ್ರಾಹಕರನ್ನ ತಮ್ಮತ್ತ ಸೆಳೆಯಬೇಕು ಎನ್ನುವ ಕಾರಣಕ್ಕೆ ರಾಜಸ್ಥಾನದಿಂದ ಮಡಿಕೆಗಳನ್ನ ಕೂಡ ಇಲ್ಲಿಗೆ ತರಿಸಿಕೊಂಡಿದ್ದಾರೆ. ಹೀಗಾಗಿ ರಾಜಸ್ಥಾನದಿಂದ ತಂದಿರುವ ಮಡಿಕೆಗಳಿಗೆ ಸಾಕಷ್ಟು ಬೇಡಿಕೆ ಇದೆ.
ಇಷ್ಟೆಲ್ಲಾ ಕಷ್ಟ ಅನುಭವಿಸಿದ್ದರೂ ಸರ್ಕಾರ ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಿಲ್ಲ. ರಸ್ತೆ ಮೇಲೆ ಮಡಕೆಗಳನ್ನ ಇಟ್ಟುಕೊಂಡು ವ್ಯಾಪಾರ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಂಬಾರರಾದ ಮಲ್ಲಣ್ಣ ಹೇಳಿದ್ದಾರೆ.
ಒಟ್ನಲ್ಲಿ ಇಷ್ಟು ದಿನ ಬೇಸಿಗೆ ಸಮಯದಲ್ಲಿ ಒಂದೇ ಶೈಲಿಯ ಮಡಿಕೆಗಳು ಖರೀದಿಸುತ್ತಿದ್ದ ಯಾದಗಿರಿ ಜನ, ಈ ಬಾರಿಯ ಬೇಸಿಗೆಯನ್ನು ಆಧುನಿಕ ಮಡಿಕೆಯಲ್ಲಿ ಕಳೆಯಲು ಉತ್ಸುಕರಾಗಿದ್ದಾರೆ. ಹಳೆ ಕಾಲದ ಹಿರಿಯರಿಂದ ಈಗಿನ ಕಾಲದ ಮಕ್ಕಳನ್ನು ಸಹ ಈ ಮಡಿಕೆಗಳು ಆಕರ್ಷಿಸುತ್ತಿವೆ ಎನ್ನುವುದೇ ವಿಶೇಷ.
ಇದನ್ನೂ ಓದಿ: ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರಲು ಪರಿಸರ ಸ್ನೇಹಿ ಮಣ್ಣಿನ ಮಡಿಕೆ
Published On - 5:59 pm, Tue, 16 March 21