AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರಲು ಪರಿಸರ ಸ್ನೇಹಿ ಮಣ್ಣಿನ ಮಡಿಕೆ

ಮಣ್ಣಿನ ಮಡಿಕೆಗಳನ್ನು ಬಳಸುವುದರಿಂದ ಇದನ್ನು ತಯಾರಿಸುವವರಿಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಸಂಕ್ರಾಂತಿ ಎಂಬುದು ಬರೀ ಹಬ್ಬ ಮಾತ್ರವಲ್ಲ, ಅದು ಪ್ರಕೃತಿ ಮತ್ತು ಮಣ್ಣಿನ ಜತೆಗಿನ ನಮಗಿರುವ ಋಣಾನುಬಂಧವೂ ಎಂಬುದು ಅನುಪಮಾ ಅವರ ಮಾತು.

ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರಲು ಪರಿಸರ ಸ್ನೇಹಿ ಮಣ್ಣಿನ ಮಡಿಕೆ
ಸಿಂಗರಿಸಿದ ಮಡಿಕೆ
ರಶ್ಮಿ ಕಲ್ಲಕಟ್ಟ
|

Updated on:Jan 13, 2021 | 1:40 PM

Share

ಸಂಕ್ರಾಂತಿ ಹಬ್ಬ ಅಂದರೆ ಎಳ್ಳು-ಬೆಲ್ಲ ಬೀರುವ ಗಮ್ಮತ್ತು. ಎಳ್ಳು-ಬೆಲ್ಲ ಹಂಚಲು ಪ್ಲಾಸ್ಟಿಕ್ ಡಬ್ಬಿಯನ್ನೂ ಖರೀದಿ ಮಾಡುವುದು ಹೊಸ ಕಾಲದ ಸಂಪ್ರದಾಯವೆಂಬಂತೆ ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಕೆಲವರು ಪ್ಲಾಸ್ಟಿಕ್ ಡಬ್ಬಿ ಬದಲು ಸ್ಟೀಲ್ ಡಬ್ಬಿಯಲ್ಲಿ ಎಳ್ಳು-ಬೆಲ್ಲ ಕೊಡುತ್ತಾರೆ. ಆದರೆ ಇದು ತುಟ್ಟಿ. ಇದರ ಬದಲಾಗಿ ಪುಟ್ಟಪುಟ್ಟ ಮಣ್ಣಿನ ಮಡಿಕೆ ಬಳಸಿದರೆ ಉತ್ತಮ ಅಂತಾರೆ ಯೂಟ್ಯೂಬರ್ ಅನುಪಮಾ ಹೆಗಡೆ.

ಹತ್ತು ವರ್ಷಗಳ ಹಿಂದಿನಿಂದಲೂ ನಾನು ಎಳ್ಳು-ಬೆಲ್ಲ ಬೀರಲು ಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದೇನೆ. ಸಂಕ್ರಾಂತಿ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ಅದಕ್ಕಾಗಿ ಸಿದ್ಧತೆ ಆರಂಭವಾಗುತ್ತದೆ. ಮಣ್ಣಿನ ಮಡಿಕೆಗಳನ್ನು ತಂದು ಚೆನ್ನಾಗಿ ತೊಳೆದು ಅದರ ಹೊರಭಾಗಕ್ಕೆ ಬಣ್ಣ ಹಚ್ಚಿ ಸಿಂಗರಿಸುವುದೆಂದರೆ ತುಂಬಾನೇ ಖುಷಿ. ಖರ್ಚೂ ಕಡಿಮೆ ಎಂದು ಮಡಿಕೆಯನ್ನು ಸಿಂಗರಿಸುವ ಬಗ್ಗೆ ಅವರು ವಿವರಿಸುತ್ತಾರೆ.

ಬಹುತೇಕ ಎಲ್ಲ ಗ್ರಂಥಿಗೆ ಅಂಗಡಿಗಳಲ್ಲಿ ಪುಟ್ಟಪುಟ್ಟ ಮಡಿಕೆಗಳು ಸಿಗುತ್ತವೆ. ಬೆಂಗಳೂರಿನ ಬೆನ್ಸನ್ ಟೌನ್ ಬಳಿಯ ಪೋಟೆರಿ ಲೇನ್​ನಲ್ಲಿ (pottery lane) ಎಲ್ಲ ರೀತಿಯ ಮಡಿಕೆಗಳು ಕಡಿಮೆ ಬೆಲೆಗೆ ಸಿಗುತ್ತವೆ. ಮಡಿಕೆ ತಂದಾಯ್ತು. ಇನ್ನು ಅದನ್ನು ಡೆಕೊರೇಟ್ ಮಾಡಲು ಬೇಕಾಗಿರುವ ವಸ್ತುಗಳೆಂದರೆ ಆಕ್ರಲಿಕ್ ಪೇಂಟ್, ಪೇಟಿಂಗ್ ಬ್ರಷ್, ಫೆವಿಕಾಲ್, ಕುಂದನ್ ಸ್ಟೋನ್ ಮತ್ತು ಬಣ್ಣದ ಟಿಕ್ಲಿಗಳು.

ಮಡಿಕೆಗಳನ್ನು ಚೆನ್ನಾಗಿ ತೊಳೆದು ಒಣಗಿದ ಮೇಲೆ ನಿಮಗಿಷ್ಟವಾದ ಬಣ್ಣ ಬಳಿಯಬಹುದು. ಅದರ ಮೇಲೆ ನಿಮ್ಮ ಕಲಾತ್ಮಕತೆಯನ್ನೂ ತೋರಿಸಬಹುದು. ಮಕ್ಕಳಿಗೆ ಈ ಕೆಲಸ ವಹಿಸಿಕೊಟ್ಟರೆ ಖುಷಿಯಿಂದ ಮಾಡ್ತಾರೆ. ಯಾವುದೇ ಕಾರಣಕ್ಕೂ ಮಡಿಕೆಯ ಒಳಗೆ ಬಣ್ಣ ಬಳಿಯಬೇಡಿ.

ಪೇಂಟ್ ಮಾಡಿದ ಮಡಿಕೆ

ಪರಿಸರ ಸ್ನೇಹಿ ಸಂಕ್ರಾಂತಿಗೆ ಮಣ್ಣಿನ ಮಡಿಕೆಯಲ್ಲಿಯೇ ಪೊಂಗಲ್ ಮಾಡುವ ರೂಢಿಯಿದೆ. ಈಗ ಪೊಂಗಲ್ ಮಾಡಲು ಮಣ್ಣಿನ ಮಡಿಕೆಗಳನ್ನು ಹೆಚ್ಚಿನವರು ಬಳಸುತ್ತಿಲ್ಲ. ಆದರೆ  ಈ ರೀತಿ ಸಣ್ಣಸಣ್ಣ ಮಡಿಕೆಗಳಲ್ಲಿ ಎಳ್ಳು-ಬೆಲ್ಲ ಬೀರುವುದಾದರೆ ಪರಿಸರಕ್ಕೂ ಒಳ್ಳೆಯದು, ಸಂಪ್ರದಾಯದ ಆಶಯವನ್ನೂ ಪಾಲಿಸಿದಂತೆ ಆಗುತ್ತದೆ. ಸಂಕ್ರಾಂತಿಯಂದು ಎಳ್ಳು- ಬೆಲ್ಲ ಬೀರಿದ ಈ ಪುಟ್ಟ ಮಡಿಕೆಗಳನ್ನು ಆಮೇಲೆ ಶೋಪೀಸ್ ಆಗಿ ಇಡಬಹುದು. ಕಿವಿಯೋಲೆ ಅಥವಾ ಪುಟ್ಟ ಪುಟ್ಟ ವಸ್ತುಗಳನ್ನು ಹಾಕಿಡಲು ಬಳಸಬಹುದು. ನನ್ನ ಗೆಳತಿಯರು ನಾನು ಕೊಟ್ಟ ಮಡಿಕೆಗಳನ್ನು ತುಂಬ ಜತನದಿಂದ ಕಾಪಿಟ್ಟುಕೊಳ್ಳುತ್ತಾರೆ. ಅದು ಕೂಡಾ ಖುಷಿಕೊಡುತ್ತದೆ ಎನ್ನುತ್ತಾರೆ ಅನುಪಮಾ.

ಅನುಪಮಾ ಹೆಗಡೆ

ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ ಅಂತಾರೆ. ಮಣ್ಣಿನ ಮಡಿಕೆಗಳನ್ನು ಬಳಸುವುದರಿಂದ ಇದನ್ನು ತಯಾರಿಸುವವರಿಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಸಂಕ್ರಾಂತಿ ಎಂಬುದು ಬರೀ ಹಬ್ಬ ಮಾತ್ರ, ಅದು ಪ್ರಕೃತಿ ಮತ್ತು ಮಣ್ಣಿನ ಜತೆಗಿನ ನಮಗಿರುವ ಋಣಾನುಬಂಧವೂ ಎಂಬುದು ಅನುಪಮಾ ಅವರ ಮಾತು.

ಸಂಕ್ರಾಂತಿ ವಿಶೇಷ | ಹೀಗೆ ಮಾಡಿದ್ರೆ ರಂಗೋಲಿ ಬಿಡಿಸೋದು ತುಂಬಾ ಸುಲಭ

ಸಂಕ್ರಾಂತಿ ಸಂಭ್ರಮ | ಎಳ್ಳುಬೆಲ್ಲ ಹಂಚಿ ಸ್ನೇಹ ಬೆಸೆಯುವ ಹಬ್ಬಕ್ಕಿದೆ ಧಾರ್ಮಿಕ ಮಹತ್ವ

ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು

Published On - 1:04 pm, Wed, 13 January 21