Shivanand Patil Resign: ಶಾಸಕ ಸ್ಥಾನಕ್ಕೆ ಶಿವಾನಂದ ಪಾಟೀಲ್ ರಾಜೀನಾಮೆ, ಯತ್ನಾಳ್ ಸವಾಲು ಸ್ವೀಕರಿಸಿದ ಸಚಿವ
ಶಿವಾನಂದ ಎಸ್ ಪಾಟೀಲ್ ರಾಜೀನಾಮೆ: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲನ್ನು ಸ್ವೀಕರಿಸಿರುವ ಸಚಿವ ಶಿವಾನಂದ ಎಸ್ ಪಾಟೀಲ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಯುಟಿ ಖಾದರ್‌ಗೆ ಪತ್ರ ಬರೆದಿದ್ದಾರೆ. ಆದರೆ, ಯತ್ನಾಳ್ ರಾಜೀನಾಮೆ ನೀಡಿ ಅದು ಅಂಗೀಕಾರವಾದರೆ ಮಾತ್ರ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ!

ಬೆಂಗಳೂರು, ಮೇ 2: ಮಹತ್ವದ ಬೆಳವಣಿಗೆಯೊಂದರಲ್ಲಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ (Shivanand S Patil) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಸವಾಲನ್ನು ಸ್ವೀಕರಿಸಿ ಈ ಕ್ರಮ ಕೈಗೊಂಡಿರುವುದಾಗಿ ಸ್ಪೀಕರ್ ಯುಟಿ ಖಾದರ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ಯತ್ನಾಳ್ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದೇನೆ. ಅವರು ನಮ್ಮ ಪೂರ್ವಜರ ಮನೆತನದ ಹೆಸರಿನ ಬಗ್ಗೆ ತಪ್ಪಾಗಿ ಮಾತನಾಡಿದ್ದರು. ಅವರೂ ಸಹ ರಾಜೀನಾಮೆ ನೀಡಿ ಅದು ಅಂಗೀಕಾರವಾದರೆ ಮಾತ್ರ ತಮ್ಮ ರಾಜೀನಾಮೆಯನ್ನು ಸ್ವೀಕರಿಸಬೇಕು ಎಂದು ಶಿವಾನಂದ ಪಾಟೀಲ ಹೇಳಿದ್ದಾರೆ.
ರಾಜೀನಾಮೆ ಪತ್ರದಲ್ಲೇನಿದೆ?
‘‘ವಿಜಯಮರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ (ಯತ್ನಾಳ್) ರವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಾಗಿ ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದುದರಿಂದ, ಬಸನಗೌಡ ಆರ್. ಪಾಟೀಲ್ (ಯತ್ನಾಳ್) ರವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ’’ ಎಂದು ಸ್ಪೀಕರ್ ಯುಟಿ ಖಾದರ್‌ಗೆ ಬರೆದ ಪತ್ರದಲ್ಲಿ ಶಿವಾನಂದ ಪಾಟೀಲ್ ಉಲ್ಲೇಖಿಸಿದ್ದಾರೆ.
ಏನಿದು ಯತ್ನಾಳ್ – ಶಿವಾನಂದ ಪಾಟೀಲ್ ಸವಾಲು, ಪ್ರತಿ ಸವಾಲು?
ವಿಜಯಪುರ ನಗರ ಕ್ಷೇತ್ರದಿಂದ ಯತ್ನಾಳ್ ವಿರುದ್ಧ ಒಮ್ಮೆ ಚುನಾವಣೆ ಸ್ಪರ್ಧೆ ಮಾಡುವ ಆಸೆ ಇದೆ ಎಂದು ಸಚಿವ ಶಿವಾನಂದ ಪಾಟೀಲ್ ಕೆಲವು ದಿನ ಹಿಂದೆ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಶಿವಾನಂದ್ ಪಾಟೀಲ್ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಅವರ ಮನೆ ಹೆಸರು ಪಾಟೀಲ್ ಅಲ್ಲ ‘ಹಚಡದ’ ಎಂದು ಹೇಳಿದ್ದರು. ಮುಂದುವರಿದು, ನಿಮ್ಮಪ್ಪ ನೀವು ಸೇರಿ ನಿಮ್ಮ ಸರ್ ನೇಮ್ ಬದಲಾಯಿಸಿಕೊಂಡವರು. ರಾಜಕಾರಣಕ್ಕಾಗಿ ಪಾಟೀಲ್ ಎಂದು ಮಾಡಿಕೊಂಡಿದ್ದಾರೆಂದು ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಬಸನಗೌಡ ಯತ್ನಾಳ್ ಕೈ ಬಿಡಬೇಡಿ ಎಂದು ಕೆಲ ಸಂಸದರು ನನಗೆ ಹೇಳಿದ್ದಾರೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಯತ್ನಾಳ್ ವಾಗ್ದಾಳಿ ಬೆನ್ನಲ್ಲೇ ಅವರ ಸವಾಲು ಸ್ವೀಕರಿಸುವುದಾಗಿ ಹೇಳಿ ಶಿವಾನಂದ ಪಾಟೀಲ್, ಸ್ಪೀಕರ್ಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಇದೀಗ ಯತ್ನಾಳ್ ಏನು ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Fri, 2 May 25