World Sleep Day; ನಿದ್ದೆ ಎಂಬ ಪದಕವಡೆ: ಈ ಕಲಿಯುಗದ ಕುಂಭಕರ್ಣನ ಸತಿಯು ನಾನೆಂದು ಎದೆತಟ್ಟಿ ಪೇಳುವೆನು!
'ಈಗಲೂ ನನ್ನ ಗಂಡ ನಿದ್ದೆ ಮಾಡಿದಾಗ ಸುಲಭಕ್ಕೆ ಏಳುವುದಿಲ್ಲ. ಒಮ್ಮೊಮ್ಮೆ ಛೇಡಿಸ್ತೀನಿ ನೀವೆಷ್ಟು ಗಾಢ ನಿದಿರೆ ಮಾಡುತ್ತೀರಿ ಅಂದರೆ ಯಾರಾದರೂ ನನ್ನ ಕೊಲೆ ಮಾಡಿ ಹೋದರೂ ನಿಮಗೆ ಗೊತ್ತಾಗಲ್ಲ ಅಂತ. ಆಗ ಅವರು ಅಯ್ಯೋ ಅಷ್ಟೆಲ್ಲ ಪುಣ್ಯ ನಂದೆಲ್ಲಿ ಎಂದು ಕಣ್ಣು ಮಿಟುಕಿಸಿ ರೇಗಿಸಿದಾಗ ಬರುವ ನಗು ಕೋಪ ಅಷ್ಟಿಷ್ಟಲ್ಲ.' ಸ್ನೇಹಾ ರಮಾಕಾಂತ
ಏಳಿ, ಎದ್ದೇಳಿ! ಎದ್ದು ಬರೆಯಲು ಕುಳಿತುಕೊಳ್ಳಿ. ಎಲ್ಲಿದ್ದೀರೋ ಅಲ್ಲಿಂದಲೇ ಬರೆಯಲು ಶುರುಮಾಡಿ. ಹಾಳೆಯೋ, ಪರದೆಯೋ ಏನೋ ಒಂದು ನಿಮ್ಮ ಮುಂದೆ ತೆರೆದುಕೊಂಡಿರಲಿ. ಈಗ ಕೈಗಳೆರಡನ್ನೂ ಉಜ್ಜಿಕೊಂಡು ಆ ಖಾಲಿಚೌಕದೊಳಗೆ ನಿಮಗೆ ಕೊಟ್ಟ ಪದವನ್ನು ದಾಳಕ್ಕೆ ಹಾಕಿ. ಅಂದುಕೊಂಡಿದ್ದೇ ಬಿತ್ತಾ, ಇಲ್ಲವಾ? ಮತ್ತೆ ಮತ್ತೆ ಹಾಕಿ. ನಿಮ್ಮ ಉಸಿರು ನಿಮ್ಮ ಹಿಡಿತದಲ್ಲಿಯೇ ಇದೆ ಎಂದು ನಿಮಗನ್ನಿಸುವ ತನಕ ದಾಳ ಹಾಕುತ್ತಲೇ ಇರಿ. ಇಲ್ಲಿ ಕಣ್ಣುಮುಚ್ಚಿಕೊಂಡು ನಿವೇದಿಸಿಕೊಳ್ಳುವುದಂತೂ ಸಂಪೂರ್ಣ ನಿಷಿದ್ಧ!; ಗಾಳಿಯಲ್ಲಿ ತೇಲಿ ಹೋದ ಈ ಸಂದೇಶವನ್ನು ಫಕ್ಕನೆ ಹಿಡಿದು ಬರೆಯಲು ಕುಳಿತರು ನಮ್ಮ ನಡುವಿನ ಬರಹಪ್ರಿಯರು. ‘ವಿಶ್ವ ನಿದ್ದೆ ದಿನ – World Sleep Day’ ಪ್ರಯುಕ್ತ ‘ನಿದ್ದೆ ಎಂಬ ಪದಕವಡೆ’ ಸರಣಿ.
ಪರಿಕಲ್ಪನೆ : ಶ್ರೀದೇವಿ ಕಳಸದ
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸ್ನೇಹಾ ರಮಾಕಾಂತ ಕೊನೆಗೂ ತಮ್ಮ ಗಂಡನನ್ನು ಎಬ್ಬಿಸಿದ್ದು ಹೇಗೆ?
ಈ ನಿದಿರೆ ಅನ್ನೋದು ವರವೋ ಶಾಪವೋ ಎಂದು ಯೋಚಿಸುತ್ತಿದ್ದಾಗ ನನಗೆ ಅನಿಸೋದು ಅದು ಎರಡೂ. ರಾತ್ರಿಯಲ್ಲಿ ಒಳ್ಳೆ ನಿದ್ದೆ ಬಂದರೆ ವರ ಇಲ್ಲದಿದ್ದರೆ ಶಾಪ ನೆನಪುಗಳ ಸರಮಾಲೆ. ನಮ್ಮ ನಿದ್ದೆ ನಮಗೆ ವರ ಒಮೊಮ್ಮೆ ಬೇರೆಯವರಿಗೆ ಶಾಪವಾಗಿ ಬಿಡೊತ್ತೆ. ನಿದ್ದೆ ಮಾಡುವಾಗ ಬರುವ ಗೊರಕೆ ವಿಷಯ ಅಲ್ಲ ಹೇಳುತ್ತಿರುವುದು, ನಿದ್ದೆಯ ಬಗ್ಗೆಯೇ ನಾವು ಗಾಢನಿದ್ದೆಯಲ್ಲಿ ನಮ್ಮ ಸುತ್ತ ಮುತ್ತ ಏನು ನಡೆಯುತ್ತಿದೆ ಎಂಬ ಅರಿವು ನಮಗಿರುವುದಿಲ್ಲ ಆದರೆ ಬೇರೆಯವರಿಗೆ ಅದರಿಂದ ತೊಂದರೆ ಆಗುವ ಎಲ್ಲಾ ಸಾಧ್ಯತೆಯು ಇರುತ್ತದೆ. ನಿದ್ದೆಯಲ್ಲಿ ಎರಡು ವಿಧ ಒಂದು ಕುಂಭಕರ್ಣ ನಿದ್ದೆ ಮತ್ತೊಂದು ಕೋಳಿ ನಿದ್ದೆ. ಮೊದಲನೆಯವರು ನಿದ್ದೆ ಮಾಡಿದರೆ ಸುಲಭಕ್ಕೆ ಏಳುವುದಿಲ್ಲ ಇನ್ನು ಎರಡನೆಯವರನ್ನು ಎಬ್ಬಿಸುವ ಪ್ರಮೇಯವೇ ಇಲ್ಲ ಅವರೇ ಹಲವು ನಿಮಿಷಗಳ ನಂತರ ಎದ್ದು ಬಿಡುತ್ತಾರೆ.
ನನ್ನ ಗಂಡ ಸ್ವಲ್ಪ ಕುಂಭಕರ್ಣ ನಿದ್ದೆ ಮಾಡುವ ಪೈಕಿಯವರು. ಮಲಗಿದರೆ ಸುಲಭಕ್ಕೆ ಬೇಗ ಏಳುವುದಿಲ್ಲ. ಎಬ್ಬಿಸುವುದಕ್ಕೆ ಬಹಳ ಶ್ರಮಿಸಬೇಕು. ಪುಣ್ಯಕ್ಕೆ ಬಾಜಾ ಬಜಂತ್ರಿ ತರಿಸೋವಷ್ಟು ಇಲ್ಲ, ಆದರೂ ಕಷ್ಟವೇ. ಕೆಲವರಿಗೆ ದೇಹಾರೋಗ್ಯ ಇಲ್ಲದಿದ್ದಾಗ ನಿದ್ದೆ ಬರುವುದಿಲ್ಲ ಆದರೆ ಈತ ಸ್ವಲ್ಪ ಆರೋಗ್ಯ ಸರಿ ಇಲ್ಲದಾಗ ಚೆನ್ನಾಗಿ ನಿದ್ದೆ ಮಾಡಿ ನಿದ್ದೆಯಲ್ಲೇ ಅದನ್ನು ಗುಣಪಡಿಸಿಕೊಳ್ಳೋ ಸ್ವಭಾವ. ನಿದ್ದೆ ಎಂದಾಕ್ಷಣ ನೆನಪಿನ ಬುತ್ತಿಯಿಂದ ಏಳುವುದು ಒಂದು ತುತ್ತು.
ಮದುವೆಯಾದ ಹೊಸದರಲ್ಲಿ ನಾನು ಅಮ್ಮನ ಮನೆಗೆ ಬೆಂಗಳೂರಿಗೆ ಬಂದಿದ್ದೆ. ಆಗ ನಾವು ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಬಾಡಿಗೆ ಮನೆಯಲ್ಲಿಇದ್ದೆವು. ಅದು ದೆಹಲಿಯಿಂದ ಸುಮಾರು ೫೦- ೬೦ ಕಿಮಿ ದೂರ. ಮೊಬೈಲ್ ಇಲ್ಲದ ಕಾಲ. ಬೆಳಗ್ಗೆ ಲ್ಯಾಂಡ್ ಲೈನ್ಗೆ ಫೋನ್ ಮಾಡಿದ್ದೆ. ಚೆನ್ನಾಗಿ ನೆನಪಿದೆ ಅಂದು ಶನಿವಾರ ಮನೆಯವರ ಆಫೀಸಿಗೆ ರಜಾ. ಸ್ವಲ್ಪ ಮುಸುಮುಸು ಎನ್ನುತ್ತಲೇ ಫೋನ್ ಎತ್ತಿದ್ದರು. ಯಾಕೋ ಮೈಕೈ ನೋವು ಜ್ವರ ಇರೋ ಹಾಗಿದೆ ಅಂತ ಹೇಳಿದರು. ನನಗೆ ಕಣ್ಣಲ್ಲಿ ಗಕ್ಕನೆ ನೀರಾಡಿತು ವಾಪಸ್ಸು ಬಂದುಬಿಡ್ಲಾ ಅಂದೆ. ಅವರು ನಕ್ಕು ಅಯ್ಯಾ ಜ್ವರಕ್ಕೆಲ್ಲ ಹೀಗಾಡ್ತೀಯಾ, ಏನಾಗಲ್ಲ ಮಾತ್ರೆ ತಗೊಂಡ್ರೆ ಸರಿ ಹೋಗತ್ತೆ ಸುಮ್ಮನಿರು ಅಂದ್ರು . ಇಡೀ ದಿನಾ ಸಮಾಧಾನ ಇಲ್ಲ. ಮಧ್ಯಾಹ್ನ ಫೋನ್ ಮಾಡಿದರೆ ಫೋನ್ ಎತ್ತಲೇ ಇಲ್ಲ, ಎಷ್ಟು ಸಲ ಮಾಡಿದ್ರೂ. ಪಕ್ಕದ ಮನೆಯವರಿಗೆ ಫೋನ್ ಮಾಡಿದ್ರೆ ಲೈನ್ ಸಿಗ್ತಿಲ್ಲ. ನನ್ನ ಕಣ್ಣಿನಿಂದ ಗಂಗಾ ಜಮುನಾ ನಿಲ್ಲಲೇ ಇಲ್ಲ. ನನ್ನ ಗಂಡನ ತಾಯಿಗೆ ಫೋನ್ ಮಾಡಿದೆ ಅವರು ದೆಹಲಿಯಲ್ಲಿ ದೊಡ್ಡ ಮಗನ ಮನೆಯಲ್ಲಿ ಇದ್ದರು. ಅಯ್ಯ… ಮಲಗಿರುತ್ತಾನೆ ಬಿಡು, ಅವನು ಮಲಗಿದರೆ ಕುಂಭಕರ್ಣ ನಿನಗೆ ಗೊತ್ತಿಲ್ವಾ ಅಂದರು. ಆದರೂ ಸಮಾಧಾನ ಇಲ್ಲ. ೫ ಘಂಟೆಗೂ ಫೋನ್ ಎತ್ತದೇ ಇದ್ದಾಗ ಜೋರಾಗಿ ಅಳಲು ಶುರು ಮಾಡಿಬಿಟ್ಟೆ. ನನ್ನ ತಂದೆ ತಾಯಿಗೆ ಪೀಡಿಸಲು ಶುರು ಮಾಡಿದೆ. ನನ್ನ ಬಿಡಿ ನಾನು ನನ್ನ ಮನೆಗೆ ಹೋಗ್ತೀನಿ ಅವರಿಗೇನೋ ಆಗಿದೆ ಅಂತ.
ನಮ್ಮಮ್ಮ ಅಯ್ಯೋ ರಾಮ ಆ ದೂರದ ದೆಹಲಿಗೆ ಒಬ್ಬಳೇ ನಿಂತ ಕಾಲಲ್ಲಿ ಹೇಗೆ ಹೋಗ್ತೀಯಾ? ಸ್ವಲ್ಪ ಇರು ಅಂತ ಬೈದ್ರು. ಕೊನೆಗೆ ನಮ್ಮಪ್ಪ ನನ್ನ ಅಳುವನ್ನು ನೋಡಲಾರದೆ ನನ್ನ ಗಂಡನ ತಂದೆಗೆ ಫೋನ್ ಮಾಡಿದರು. ಅವರು ಅಯ್ಯೋ ಮಲಗಿರುತ್ತಾನೆ ನಾ ಟ್ರೈ ಮಾಡ್ತೀನಿ ಇರಿ ಎಂದು. ಅವರು ನಾಲ್ಕು ಸಲ ಫೋನ್ ಮಾಡಿದರೂ ನನ್ನ ಗಂಡ ಫೋನ್ ಎತ್ತದೆ ಇದ್ದಾಗ ಅವರು ವಾಪಸ್ ಬೆಂಗಳೂರಿಗೆ ಕಾಲ್ ಮಾಡಿ ಅವಳೇನು ಬರೋದು ಬೇಡ ಅಲ್ಲೇನಾಗಿದೆ ಅಂತ ನಾನು ಹೋಗಿ ನೋಡಿ ಫೋನ್ ಮಾಡ್ತೀನಿ ಅಂತ ಟ್ಯಾಕ್ಸಿ ಮಾಡ್ಕೊಂಡು ನನ್ನ ಗಂಡನ ತಂದೆ ತಾಯಿ ನೋಯ್ಡಾಕ್ಕೆ ದೌಡಾಯಿಸಿದರು. ಅವರಿದ್ದ ಜಾಗಕ್ಕೂ ನಮ್ಮ ನೋಯ್ಡಾ ಮನೆಗೂ ಸುಮಾರು 60 ಕಿ.ಮೀ ಅಂತರವಿತ್ತು. ಅಲ್ಲಿಗೆ ಹೋಗಿ ಹತ್ತು ನಿಮಿಷ ಕಾಲಿಂಗ್ ಬೆಲ್ ಒತ್ತಿ ಬಾಗಿಲು ಬಡಿದ ಮೇಲೆ ನನ್ನ ಗಂಡ ನಿದ್ದೆಯಿಂದ ಹೊರಬಂದು ಬಾಗಿಲು ತೆಗೆದರಂತೆ. ಬಾಗಿಲು ತೆಗೆಯುತ್ತಿದ್ದ ಹಾಗೆ ಇಬ್ಬರೂ ಸರಿಯಾಗಿ ಅಷ್ಟೋತ್ತರ ಮಾಡಿದ್ದಾರೆ. ಕೊನೆಗೆ ಎಲ್ಲರಿಗೂ ಅರ್ಥವಾಗಿದ್ದು ಏನು ಎಂದರೆ, ಫೋನ್ ಎತ್ತಿ ಗಾಢ ನಿದ್ರೆಗೆ ಜಾರಿದ್ದು, ಕಲಿಯುಗದ ಕುಂಭಕರ್ಣ! ಅದಾದ ನಂತರ ನಾನು ವಾಪಸ್ ಹೋಗೋ ತನಕ ಅವರಿಬ್ಬರೂ ಆ ಮನೆ ಬಿಟ್ಟು ಕದಲಿರಲಿಲ್ಲ; ಫೋನ್ ಎತ್ತದಿದ್ದುದಕ್ಕೆ ನಿನ್ನ ಹೆಂಡತಿ ರಾದ್ಧಾಂತ ಮಾಡೋದುವು ಗ್ಯಾರಂಟಿ ಅದಕ್ಕೆ ಅವಳು ಬರುವ ತನಕ ಇಲ್ಲೇ ಇರುತ್ತೇವೆ ಎಂದು. ಅಲ್ಲಿಗೆ ನನ್ನ ಗಂಡನಿಗೆ ಸ್ವಾತಂತ್ರ್ಯ ಖೋತಾ ಆಗಿ ಸ್ವಲ್ಪ ಜಾಸ್ತಿ ಸಿಟ್ಟು ಬಂದಿತ್ತು ನನ್ನ ಮೇಲೆ.
ಈಗಲೂ ಅವರು ನಿದ್ದೆ ಮಾಡಿದಾಗ ಸುಲಭಕ್ಕೆ ಏಳುವುದಿಲ್ಲ. ಒಮ್ಮೊಮ್ಮೆ ಛೇಡಿಸ್ತೀನಿ ನೀವೆಷ್ಟು ಗಾಢ ನಿದಿರೆ ಮಾಡುತ್ತೀರಿ ಅಂದರೆ ಯಾರಾದರೂ ನನ್ನ ಕೊಲೆ ಮಾಡಿ ಹೋದರೂ ನಿಮಗೆ ಗೊತ್ತಾಗಲ್ಲ ಅಂತ. ಆಗ ಅವರು ಅಯ್ಯೋ ಅಷ್ಟೆಲ್ಲ ಪುಣ್ಯ ನಂದೆಲ್ಲಿ ಎಂದು ಕಣ್ಣು ಮಿಟುಕಿಸಿ ರೇಗಿಸಿದಾಗ ಬರುವ ನಗು ಕೋಪ ಅಷ್ಟಿಷ್ಟಲ್ಲ.
ಇದನ್ನೂ ಓದಿ : World Sleep Day; ನಿದ್ದೆ ಎಂಬ ಪದಕವಡೆ : ಮಿತ್ರನೂ ಶತ್ರುವೂ ಆಗುವ ನಿದಿರೇಶ್ವರ
Published On - 3:30 pm, Fri, 19 March 21