ಸಿಇಟಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಜನರ ನಂಬಿಕೆ ಮೇಲಿನ ದಾಳಿ; ಪ್ರಲ್ಹಾದ್ ಜೋಶಿ
ಸಿಇಟಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ದಾಳಿ ನಡೆಸಿದಂತೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಹೋಂ ಗಾರ್ಡ್ನನ್ನು ಅಮಾನತು ಮಾಡಿ ಕೈ ತೊಳೆದುಕೊಂಡಿದ್ದು ಸರಿಯಲ್ಲ. ಕೇವಲ ಬ್ರಾಹ್ಮಣರಷ್ಟೇ ಜನಿವಾರ ಹಾಕುವುದಿಲ್ಲ. ಇದೊಂದು ಧಾರ್ಮಿಕ ನಂಬಿಕೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಇದಕ್ಕೊಂದು ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಧಾರವಾಡ, ಏಪ್ರಿಲ್ 19: ಕರ್ನಾಟಕದ ಬೀದರ್, ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಲಾಗಿದೆ ಎಂಬ ವರದಿಯ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಕ್ರಿಯೆ ನೀಡಿದ್ದಾರೆ. ” ಕರ್ನಾಟಕದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ವಿಷಯ ನನಗೆ ತಿಳಿಯಿತು. ಇದು ಜನರ ನಂಬಿಕೆಯ ಮೇಲಿನ ದಾಳಿ. ಕರ್ನಾಟಕದಲ್ಲಿ ಹುಸಿ ಜಾತ್ಯತೀತ ಸರ್ಕಾರದ ಮನೋಭಾವವನ್ನು ನೀವು ನೋಡಬಹುದು. ಅವರು ಕೆಲವು ವಿದ್ಯಾರ್ಥಿಗಳಿಂದ ಜನಿವಾರ ತೆಗೆಯುವಂತೆ ಮಾಡಿದ್ದಾರೆ. ಒಂದು ಕೇಂದ್ರದಲ್ಲಿ ಜನಿವಾರ ತೆಗೆಯಲು ಸೂಚಿಸಿದ್ದರೆ ಇನ್ನೊಂದು ಸ್ಥಳದಲ್ಲಿ ಜನಿವಾರವನ್ನು ಕತ್ತರಿಸಲಾಗಿದೆ. ಇದು ತುಂಬಾ ಖಂಡನೀಯ. ಸಂಬಂಧಪಟ್ಟ ಪ್ರಾಧಿಕಾರ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದೆ ಮತ್ತು ಕ್ಷಮೆ ಯಾಚಿಸಿದೆ. ಆದರೆ ಪರೀಕ್ಷೆ ಬರೆಯಲು ಅವಕಾಶ ಸಿಗದ ವ್ಯಕ್ತಿಗೆ ಪರಿಹಾರವೇನು?” ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ