ವೈಭವ್ ಸೂರ್ಯವಂಶಿಗೆ 2023ರಲ್ಲಿ 14 ವರ್ಷ… 2025ರಲ್ಲೂ 14 ವರ್ಷ..!
Vaibhav Suryavanshi: ವೈಭವ್ ಸೂರ್ಯವಂಶಿ ಬಿಹಾರ ಮೂಲದ ಕ್ರಿಕೆಟಿಗ. 5ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದ ವೈಭವ್ 12ನೇ ವಯಸ್ಸಿಗೆ ಪ್ರಥಮ ದರ್ಜೆ ಪಂದ್ಯವಾಡಿದ್ದರು ಎಂದರೆ ನಂಬಲೇಬೇಕು. ಅಲ್ಲದೆ ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಇದೀಗ ಐಪಿಎಲ್ಗೆ ಪಾದಾರ್ಪಣೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ವೈಭವ್ ಸೂರ್ಯವಂಶಿ (Vaibhav Suryavanshi) ಹೆಸರಿಗೆ ಸೇರ್ಪಡೆಯಾಗಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 14 ವರ್ಷದ ವೈಭವ್ ಈ ಸಾಧನೆ ಮಾಡಿದ್ದಾರೆ. ಈ ಸಾಧನೆಯ ಬೆನ್ನಲ್ಲೇ ಯುವ ಆಟಗಾರನ ವಯಸ್ಸಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಇದಕ್ಕೆ ಮುಖ್ಯ ಕಾರಣ 2023 ರಲ್ಲಿ ವೈಭವ್ ಸೂರ್ಯವಂಶಿ ನೀಡಿದ ಹೇಳಿಕೆ.
2023 ರಲ್ಲಿ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದ ವೈಭವ್ ಸೂರ್ಯವಂಶಿಗೆ ವಯಸ್ಸಿನ ಬಗ್ಗೆ ಕೇಳಲಾಗಿತ್ತು. ಈ ವೇಳೆ ಸೆಪ್ಟೆಂಬರ್ 27 ರಂದು ನನಗೆ 14 ವರ್ಷ ತುಂಬಲಿದೆ ಎಂದಿದ್ದರು. ಇದೀಗ 2025 ರಲ್ಲೂ ವೈಭವ್ ತನ್ನ ವಯಸ್ಸನ್ನು 14 ಎಂದು ಹೇಳಿಕೊಂಡಿದ್ದಾರೆ.
ಅಂದರೆ 2 ವರ್ಷಗಳ ಹಿಂದೆ 14 ವರ್ಷ ತುಂಬಿದ್ದರೆ, ಈಗ ಅವರಿಗೆ 16 ವರ್ಷಗಳಾಗಬೇಕಿತ್ತು. ಆದರೆ ಐಪಿಎಲ್ನಲ್ಲಿ 14 ವರ್ಷಗಳೊಂದಿಗೆ ಕಾಣಿಸಿಕೊಂಡಿರುವುದು ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ, 2 ವರ್ಷಗಳ ಹಿಂದೆ ವೈಭವ್ ತಮ್ಮ ಜನ್ಮ ದಿನಾಂಕ ಸೆಪ್ಟೆಂಬರ್ 27 ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಮಾರ್ಚ್ 27 ರಂದು. ಹೀಗಾಗಿಯೇ ವೈಭವ್ ಸೂರ್ಯವಂಶಿ ಅವರ ಜನ್ಮ ದಿನಾಂಕದ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ವೈಭವ್ ಸೂರ್ಯವಂಶಿಯ ಹಳೆಯ ಸಂದರ್ಶನದ ವಿಡಿಯೋ:
1.10 ಕೋಟಿ ರೂ. ಪಡೆದ ವೈಭವ್ ಸೂರ್ಯವಂಶಿ:
ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವಾಗ ವೈಭವ್ ಸೂರ್ಯವಂಶಿ ತನ್ನ ವಯಸ್ಸು 13 ಎಂದು ಘೋಷಿಸಿದ್ದರು. ಈ ಕಿರಿಯ ಆಟಗಾರನನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬರೋಬ್ಬರಿ 1.10 ಕೋಟಿ ರೂ.ಗೆ ಖರೀದಿಸಿತು. ಇದರೊಂದಿಗೆ ಐಪಿಎಲ್ಗೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿತ್ತು.