Virat Kohli: ಕ್ರಿಸ್ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Virat Kohli Records: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 67 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಆರ್ಸಿಬಿ ತಂಡ 20 ಓವರ್ಗಳಲ್ಲಿ 221 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 209 ರನ್ಗಳಿಸಿ 12 ರನ್ಗಳಿಂದ ಸೋಲನುಭವಿಸಿತು.
Updated on: Apr 08, 2025 | 11:09 AM

ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ (Virat Kohli) ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಬರೋಬ್ಬರಿ 13 ಸಾವಿರ ರನ್ಗಳನ್ನು ಪೂರೈಸುವ ಮೂಲಕ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಕೇವಲ 42 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 67 ರನ್ ಬಾರಿಸಿದ್ದರು.

ಈ 67 ರನ್ಗಳೊಂದಿಗೆ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 13 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಹಾಗೂ ವಿಶ್ವದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 13 ಸಾವಿರ ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ನಲ್ಲಿ 13 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಕೇವಲ 381 ಇನಿಂಗ್ಸ್ಗಳ ಮೂಲಕ 13000 ರನ್ ಪೇರಿಸಿ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದರು. ಇದೀಗ ಈ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.

ವಿರಾಟ್ ಕೊಹ್ಲಿ 13000 ರನ್ ಕಲೆಹಾಕಲು ತೆಗೆದುಕೊಂಡಿರುವುದು ಬರೋಬ್ಬರಿ 386 ಇನಿಂಗ್ಸ್ಗಳು. ಅಂದರೆ ಕ್ರಿಸ್ ಗೇಲ್ಗಿಂತ 5 ಇನಿಂಗ್ಸ್ಗಳನ್ನು ಹೆಚ್ಚುಗೆ ತೆಗೆದುಕೊಂಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 13 ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳುವ ಅವಕಾಶವನ್ನು ಕೇವಲ 5 ಇನಿಂಗ್ಸ್ಗಳಿಂದ ತಪ್ಪಿಸಿಕೊಂಡಿದ್ದಾರೆ.

ವಿಶೇಷ ಎಂದರೆ ವಿರಾಟ್ ಕೊಹ್ಲಿ ಈ 13000 ರನ್ಗಳನ್ನು ಕಲೆಹಾಕಿರುವುದು ಕೇವಲ 2 ತಂಡಗಳ ಪರ ಮಾತ್ರ ಕಣಕ್ಕಿಳಿದು. ಅಂದರೆ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಮಾತ್ರ ಪ್ರತಿನಿಧಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 2 ತಂಡಗಳ ಪರ ಮಾತ್ರ ಕಣಕ್ಕಿಳಿದು ಅತ್ಯಧಿಕ ರನ್ ಪೇರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.



















