IPL 2025: ಸೋತರೂ ವಿಶ್ವ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್
IPL 2025 MI vs RCB: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 10 ವರ್ಷಗಳ ಬಳಿಕ ಸೋಲನುಭವಿಸಿದೆ. ಈ ಸೋಲಿನ ಹೊರತಾಗಿಯೂ ಈ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ತಂಡ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದೆ.
Updated on: Apr 08, 2025 | 9:04 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 20ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ (MI) ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ವಿಶ್ವ ದಾಖಲೆಯನ್ನು ಬರೆಯುವ ಮೂಲಕ ಎಂಬುದು ವಿಶೇಷ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಮುಂಬೈ ಪಡೆ 12 ರನ್ಗಳಿಂದ ಸೋಲೊಪ್ಪಿಕೊಂಡಿತು.

ಈ ಸೋಲಿನ ಹೊರತಾಗಿಯೂ ಈ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದೆ. ಅದು ಕೂಡ ಅತ್ಯಧಿಕ ಪಂದ್ಯಗಳನ್ನಾಡುವ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಪಂದ್ಯಗಳನ್ನಾಡಿದ ತಂಡವೆಂಬ ದಾಖಲೆ ಮುಂಬೈ ಇಂಡಿಯನ್ಸ್ ಪಾಲಾಗಿದೆ.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಇಂಗ್ಲೆಂಡ್ನ ಕೌಂಟಿ ತಂಡ ಸೋಮರ್ಸೆಟ್ ಹೆಸರಿನಲ್ಲಿತ್ತು. ಸೋಮರ್ಸೆಟ್ ತಂಡವು ಟಿ20 ಕ್ರಿಕೆಟ್ನಲ್ಲಿ 287 ಪಂದ್ಯಗಳನ್ನಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಮುಂಬೈ ಇಂಡಿಯನ್ಸ್ ತಂಡ ಯಶಸ್ವಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಚಾಂಪಿಯನ್ಸ್ ಲೀಗ್ನಲ್ಲಿ ಕಣಕ್ಕಿಳಿದಿರುವ ಮುಂಬೈ ಇಂಡಿಯನ್ಸ್ ತಂಡವು ಈವರೆಗೆ 288 ಪಂದ್ಯಗಳನ್ನಾಡಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಪಂದ್ಯಗಳನ್ನಾಡಿದ ತಂಡವೆಂಬ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
























