PSL 2025: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ RCB ಮಾಜಿ ಆಟಗಾರರು
PSL 2025: ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ RCB ತಂಡದ ಮಾಜಿ ಆಟಗಾರರಾದ ಮೈಕೆಲ್ ಬ್ರೇಸ್ವೆಲ್, ಫಿನ್ ಅಲೆನ್ ಸೇರಿದಂತೆ ಹಲವು ಆಟಗಾರರು ಅನ್ಸೋಲ್ಡ್ ಆಗಿದ್ದರು. ಹೀಗೆ ಬಿಕರಿಯಾಗದೇ ಉಳಿದ ಕೆಲ ಸ್ಟಾರ್ ಆಟಗಾರರು ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನತ್ತ ಮುಖ ಮಾಡಿದ್ದಾರೆ.
Updated on: Apr 10, 2025 | 9:10 AM

PSL 2025: ಪಾಕಿಸ್ತಾನ್ ಸೂಪರ್ ಲೀಗ್ಗೆ ನಾಳೆಯಿಂದ (ಏಪ್ರಿಲ್ 11) ಚಾಲನೆ ದೊರೆಯಲಿದೆ. 6 ತಂಡಗಳ ನಡುವಣ ಈ ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸಿದ 8 ಆಟಗಾರರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಅವಕಾಶ ಸಿಗದ ಆರ್ಸಿಬಿ ತಂಡದ ಮಾಜಿ ಆಟಗಾರರು ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನತ್ತ ಮುಖ ಮಾಡಿದ್ದಾರೆ. ಅವರೆಂದರೆ...

ಟಾಮ್ ಕರನ್ - ಡೇವಿಡ್ ವಿಲ್ಲಿ: ಇಂಗ್ಲೆಂಡ್ ತಂಡದ ಆಲ್ರೌಂಡರ್ಗಳಾದ ಟಾಮ್ ಕರನ್ ಹಾಗೂ ಡೇವಿಡ್ ವಿಲ್ಲಿ ಈ ಹಿಂದೆ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. 2024 ರಲ್ಲಿ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ಕರನ್ ಒಂದೇ ಒಂದು ಪಂದ್ಯವಾಡದಿದ್ದರೂ, ಡೇವಿಡ್ ವಿಲ್ಲಿ RCB ಪರ 2023 ರಲ್ಲಿ 4 ಪಂದ್ಯಗಳನ್ನಾಡಿದ್ದರು.

ಕ್ರಿಸ್ ಜೋರ್ಡಾನ್ - ಡೇವಿಡ್ ವೀಝ: ಇಂಗ್ಲೆಂಡ್ ತಂಡದ ಆಲ್ರೌಂಡರ್ ಕ್ರಿಸ್ ಜೋರ್ಡನ್ 2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಹಾಗೆಯೇ 2015 ರಲ್ಲಿ ನಮೀಬಿಯಾ ಆಟಗಾರ ಡೇವಿಡ್ ವೀಝ ಆರ್ಸಿಬಿ ಪರ ಕಣಕ್ಕಿಳಿದಿದ್ದರು.

ಮೈಕೆಲ್ ಬ್ರೇಸ್ವೆಲ್ - ಫಿನ್ ಅಲೆನ್: ನ್ಯೂಝಿಲೆಂಡ್ ಕ್ರಿಕೆಟಿಗರಾದ ಮೈಕೆಲ್ ಬ್ರೇಸ್ವೆಲ್ ಆರ್ಸಿಬಿ ಪರ 2023 ರಲ್ಲಿ 5 ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ಫಿನ್ ಅಲೆನ್ 2021 ರಿಂದ 3 ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದರು.

ಅಲ್ಝಾರಿ ಜೋಸೆಫ್ - ಕೈಲ್ ಜೇಮಿಸನ್: ವೆಸ್ಟ್ ಇಂಡೀಸ್ ವೇಗಿ ಅಲ್ಝಾರಿ ಜೋಸೆಫ್ ಕಳೆದ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ನ್ಯೂಝಿಲೆಂಡ್ ತಂಡದ ವೇಗದ ಬೌಲರ್ ಕೈಲ್ ಜೇಮಿಸನ್ 2021 ರಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದರು.

ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಈ ಆಟಗಾರರಿಗೆ ಈ ಬಾರಿ IPL ನಲ್ಲಿ ಅವಕಾಶ ದೊರೆತಿಲ್ಲ. ಹೀಗಾಗಿ ಈ 8 ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ನತ್ತ ಮುಖ ಮಾಡಿದ್ದಾರೆ. ಅದರಂತೆ ಪಿಎಸ್ಎಲ್ 2025 ರಲ್ಲಿ ಮಾಜಿ ಆರ್ಸಿಬಿ ಆಟಗಾರರು ಕಣಕ್ಕಿಳಿಯುವುದನ್ನು ಎದುರು ನೋಡಬಹುದು.



















