IPL 2025: ಸಿಕ್ಸ್ ಹೊಡೆಸಿಕೊಳ್ಳದೇ ಒಂದೇ ಎಸೆತದಲ್ಲಿ ರನ್ ನೀಡಿದ ಶಾರ್ದೂಲ್ ಠಾಕೂರ್
IPL 2025 KKR vs LSG: ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ 234 ರನ್ಗಳಿಸಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು 4 ರನ್ಗಳ ರೋಚಕ ಜಯ ಸಾಧಿಸಿತು.
Updated on: Apr 09, 2025 | 1:54 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 21ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ಅನಪೇಕ್ಷಿತ ದಾಖಲೆ ಬರೆದಿದ್ದಾರೆ. ಅದು ಕೂಡ ಒಂದೇ ಎಸೆತದಲ್ಲಿ 6 ರನ್ಗಳನ್ನು ನೀಡುವ ಮೂಲಕ. ವಿಶೇಷ ಎಂದರೆ ಈ ಆರು ರನ್ಗಳಲ್ಲಿ ಸಿಕ್ಸ್ ಮೂಡಿಬಂದಿಲ್ಲ. ಫೋರ್ ಅನ್ನು ಸಹ ನೀಡಿಲ್ಲ. ಇದಾಗ್ಯೂ ಒಂದೇ ಎಸೆತದಲ್ಲಿ 6 ರನ್ ನೀಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡುವುದು ಸಹಜ.

ಈ ಪ್ರಶ್ನೆಗೆ ಉತ್ತರ 5 ವೈಡ್ಗಳು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇನಿಂಗ್ಸ್ನ 13ನೇ ಓವರ್ ಎಸೆಯಲು ಬಂದ ಶಾರ್ದೂಲ್ ಠಾಕೂರ್ ಬ್ಯಾಕ್ ಟು ಬ್ಯಾಕ್ 5 ವೈಡ್ಗಳನ್ನು ಎಸೆದಿದ್ದಾರೆ. ಅಂದರೆ 5 ಎಸೆತಗಳಲ್ಲಿ 5 ರನ್ ನೀಡಿದರೂ ಶಾರ್ದೂಲ್ ಅವರ ಓವರ್ ಕೌಂಟ್ ಶುರುವಾಗಿರಲಿಲ್ಲ. ಇನ್ನು ಆರನೇ ಎಸೆತದಲ್ಲಿ ಒಂದು ರನ್ ನೀಡುವ ಮೂಲಕ ಮೊದಲ ಎಸೆತವನ್ನು ಪೂರೈಸಿದರು.

ಈ ಮೂಲಕ ಶಾರ್ದೂಲ್ ಠಾಕೂರ್ ಒಂದೇ ಎಸೆತದಲ್ಲಿ 6 ರನ್ಗಳನ್ನು ನೀಡಿ ಅನಗತ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಅತೀ ಹೆಚ್ಚು ಎಸೆತಗಳನ್ನು ಎಸೆದ ಮೂರನೇ ಬೌಲರ್ ಎಂಬ ಹೀನಾಯ ದಾಖಲೆಯೊಂದನ್ನು ಸಹ ಬರೆದರು.

ಇದಕ್ಕೂ ಮುನ್ನ ಇಂತಹದೊಂದು ದಾಖಲೆ ಮೊಹಮ್ಮದ್ ಸಿರಾಜ್ ಹಾಗೂ ತುಷಾರ್ ದೇಶಪಾಂಡೆ ಹೆಸರಿನಲ್ಲಿತ್ತು. 2023 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಸಿರಾಜ್ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಎಸೆದಿದ್ದರು. ಇದೇ ವರ್ಷ ಸಿಎಸ್ಕೆ ಪರ ಆಡಿದ್ದ ತುಷಾರ್ ದೇಶಪಾಂಡೆ ಕೂಡ 11 ಎಸೆತಗಳೊಂದಿಗೆ ಓವರ್ ಪೂರ್ಣಗೊಳಿಸಿದ್ದರು.

ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 11 ಎಸೆತಗಳನ್ನು (wd,wd,wd,wd,wd,1,1,0,4,2,W) ಎಸೆಯುವ ಮೂಲಕ ಶಾರ್ದೂಲ್ ಠಾಕೂರ್ ಕೂಡ ಐಪಿಎಲ್ನಲ್ಲಿ ದೀರ್ಘಾವಧಿ ಬೌಲಿಂಗ್ ಮಾಡಿದ ಬೌಲರ್ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಐಪಿಎಲ್ನ ಅನಗತ್ಯ ದಾಖಲೆ ಶೂರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.



















