IPL 2025: ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು
IPL 2025 RCB vs MI: ಐಪಿಎಲ್ನ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 221 ರನ್ ಕಲೆಹಾಕಿದರೆ, ಮುಂಬೈ ಇಂಡಿಯನ್ಸ್ ತಂಡ 209 ರನ್ಗಳಿಸಿ 12 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಆರ್‌ಸಿಬಿ ತಂಡದ ಈ ಗೆಲುವಿನ ಬೆನ್ನಲ್ಲೇ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ತನ್ನ ಹೇಳಿಕೆಯನ್ನು ಬದಲಿಸಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ದ ಸದಾ ನಾಲಿಗೆ ಹರಿಬಿಡುವ ಅಂಬಾಟಿ ರಾಯುಡು (Ambati Rayudu) ಇದೇ ಮೊದಲ ಬಾರಿ ಯೂಟರ್ನ್ ಹೊಡೆದಿದ್ದಾರೆ. ಅದು ಸಹ ಈ ಸಲ ಆರ್‌ಸಿಬಿ ತಂಡ ಕಪ್ ಗೆಲ್ಲುತ್ತೆ ಎನ್ನುವ ಮೂಲಕ..! ಖಾಸಗಿ ಚಾನೆಲ್ವೊಂದರ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದ ಅಂಬಾಟಿ ರಾಯುಡುಗೆ ಈ ಸಲ ಯಾರು ಕಪ್ ಗೆಲ್ಲಬಹುದು ಎಂದು ಪ್ರಶ್ನಿಸಲಾಗಿತ್ತು.
ಈ ಪ್ರಶ್ನೆಗೆ ಉತ್ತರಿಸಿದ ಅಂಬಾಟಿ ರಾಯುಡು, ನಾನು ಯಾವತ್ತೂ ಮುಂಚಿತವಾಗಿ ಆರ್‌ಸಿಬಿ ಪರ ಭವಿಷ್ಯ ನುಡಿದಿಲ್ಲ. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವ ನಿರೀಕ್ಷೆಯಿದೆ ಎಂದಿದ್ದಾರೆ. ಅಲ್ಲದೆ ಈ ಸಲ ಕಪ್ ಆರ್‌ಸಿಬಿ ತಂಡದ್ದು ಎನ್ನುವ ಮೂಲಕ ಗಮನ ಸೆಳೆದಿದ್ದಾರೆ.
ಇದೀಗ ಅಂಬಾಟಿ ರಾಯುಡು ಅವರ ಹೇಳಿಕೆಯು ವೈರಲ್ ಆಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ರಾಯುಡು ಉಲ್ಟಾ ಹೊಡೆದಿದ್ದಾರೆ ಎಂದು ಆರ್‌ಸಿಬಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.
ಆರ್‌ಸಿಬಿ ಕಪ್ ಗೆಲ್ಲಬಾರದು ಎಂದಿದ್ದ ರಾಯುಡು:
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರನಾಗಿ ಅಂಬಾಟಿ ರಾಯುಡು ಇದಕ್ಕೂ ಮುನ್ನ ಆರ್‌ಸಿಬಿ ತಂಡ ಕಪ್ ಗೆಲ್ಲಬಾರದು ಎಂದಿದ್ದರು. ಎಸ್ ಬ್ರದಿನಾಥ್ ನಡೆಸಿದ ಚಿಟ್ ಚಾಟ್ನಲ್ಲಿ ಕಾಣಿಸಿಕೊಂಡಿದ್ದ ರಾಯುಡುಗೆ ಈ ಬಾರಿಯಾದರೂ ಆರ್‌ಸಿಬಿ ತಂಡದ ಕಾಯುವಿಕೆ ಕೊನೆಗೊಳ್ಳಲಿದೆಯಾ ಎಂದು ಪ್ರಶ್ನಿಸಲಾಗಿತ್ತು.
ಇದಕ್ಕೆ ನಗುತ್ತಾ ಉತ್ತರಿಸಿದ ರಾಯುಡು, ಈ ಸಲ ನನಗೆ ಆರ್‌ಸಿಬಿ ತಂಡ ಕಪ್ ಗೆಲ್ಲೋದು ಇಷ್ಟವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರುನಂತಹ ತಂಡ ಇರಬೇಕು. ಏಕೆಂದರೆ ನಿರೀಕ್ಷೆಗಳನ್ನು ಹೆಚ್ಚಿಸಿ ಅದನ್ನು ಪೂರೈಸಲು ವಿಫಲವಾಗುವ ತಂಡ ಇದ್ದರೇನೇ ಮನರಂಜನೆ ಸಿಗೋದು. ಹೀಗಾಗಿ ಆರ್ಸಿಬಿಯಂತಹ ತಂಡ ಐಪಿಎಲ್ನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ.
ಅಲ್ಲದೆ ಆರ್‌ಸಿಬಿ ತಂಡವು ಗೆಲ್ಲಲು ಹೆಣಗಾಡುವುದನ್ನು ನೋಡಿ ನಾನು ಸದಾ ಆನಂದಿಸುತ್ತೇನೆ. ಇದಾಗ್ಯೂ ಅವರು ಟ್ರೋಫಿ ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ ಈ ಬಾರಿ ಅವರು ಕಪ್ ಗೆಲ್ಲಬಾರದು. ಮುಂದೊಂದು ದಿನ ಯಾವತ್ತಾದರು ಗೆಲ್ಲಲಿ. ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟ್ರೋಫಿ ಎತ್ತಿ ಹಿಡಿಯಬೇಕು ಎಂದು ಅಂಬಾಟಿ ರಾಯುಡು ಹೇಳಿದ್ದರು.
ಇದಕ್ಕೂ ಮುನ್ನ ಪೋಡ್ ಕಾಸ್ಟ್ವೊಂದರಲ್ಲಿ ಮಾತನಾಡಿದ್ದ ರಾಯುಡು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ದಿನ ಕಪ್ ಗೆಲ್ಲಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಈ ವರ್ಷ ಅವರು ಕಪ್ ಗೆಲ್ಲದಿರಲಿ ಎಂದು ನಾನು ಆಶಿಸುತ್ತೇನೆ ಹಾಗೂ ಪ್ರಾರ್ಥಿಸುತ್ತೇನೆ ಎಂದಿದ್ದರು.
ಇದನ್ನೂ ಓದಿ: IPL 2025: ಗೆದ್ದರೂ ಅಂಕ ಪಟ್ಟಿಯಲ್ಲಿ ಮೇಲೇರದ RCB
ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಮೊದಲ 4 ಪಂದ್ಯಗಳಲ್ಲೇ ಬಲಿಷ್ಠ ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿಗೆ ಸೋಲುಣಿಸಿದೆ. ಈ ಭರ್ಜರಿ ಗೆಲುವುಗಳ ಬೆನ್ನಲ್ಲೇ ಅಂಬಾಟಿ ರಾಯುಡು ಕೂಡ ತನ್ನ ಹೇಳಿಕೆಯನ್ನು ಬದಲಿಸಿಕೊಂಡಿರುವುದು ವಿಶೇಷ.