MI vs RCB: ಸೋಲಿಗೆ ರೋಹಿತ್ ಶರ್ಮಾ ಕಾರಣ? ಪರೋಕ್ಷವಾಗಿ ಕುಟುಕಿದ ಹಾರ್ದಿಕ್ ಪಾಂಡ್ಯ
Mumbai Indians vs Royal Challengers Bengaluru: ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 221 ರನ್ ಕಲೆಹಾಕಿದರೆ, ಮುಂಬೈ ಇಂಡಿಯನ್ಸ್ ತಂಡವು 209 ರನ್ಗಳಿಸಲಷ್ಟೇ ಶಕ್ತರಾದರು.

IPL 2025: ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಹೀನಾಯವಾಗಿ ಸೋತಿದ್ದ ಮುಂಬೈ ಇಂಡಿಯನ್ಸ್ (MI) ತಂಡವು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಕೂಡ ಮುಗ್ಗರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಜಯಿಸಿದ ಹಾರ್ದಿಕ್ ಪಾಂಡ್ಯ ಆರ್ಸಿಬಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿತು.
222 ರನ್ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಅದರಲ್ಲೂ ಅನುಭವಿ ಆಟಗಾರ ರೋಹಿತ್ ಶರ್ಮಾ (17) ಬೇಗನೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಮುಂಬೈ ಪಡೆ ದಿಟ್ಟ ಹೋರಾಟ ಪ್ರದರ್ಶಿಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್ಗಳಲ್ಲಿ 209 ರನ್ ಬಾರಿಸಿ 12 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಪರೋಕ್ಷವಾಗಿ ರೋಹಿತ್ ಶರ್ಮಾ ಅವರನ್ನು ಗುರಿಯಾಗಿಸಿದ್ದಾರೆ. ಈ ಪಿಚ್ ಬ್ಯಾಟಿಂಗ್ಗೆ ತುಂಬಾ ಸಹಕಾರಿಯಾಗಿತ್ತು. ನಾವು ಒಂದೆಡಡು ಬಿಗ್ ಹಿಟ್ ಬಾರಿಸುವಲ್ಲಿ ವಿಫಲರಾದೆವು. ಅದರಲ್ಲೂ ನಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಆದ ಬದಲಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿತು.
ಕಳೆದ ಪಂದ್ಯದಲ್ಲಿ ನಮನ್ ಧೀರ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ರೋಹಿತ್ ಶರ್ಮಾ ಇಲ್ಲದ ಕಾರಣ ಅವರಿಗೆ ಮೇಲಿನ ಕ್ರಮಾಂಕ ನೀಡಲಾಗಿತ್ತು. ಇದೀಗ ಹಿಟ್ಮ್ಯಾನ್ ಮರಳುವಿಕೆಯಿಂದಾಗಿ ನಮನ್ ಧೀರ್ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಬೇಕಾದ ಅನಿವಾರ್ಯತೆ ಎದುರಾಯಿತು.
ನಮನ್ ಧೀರ್ ಮೇಲಿನ ಕ್ರಮಾಂಕದಲ್ಲಿ ತುಂಬಾ ಚೆನ್ನಾಗಿ ಆಡಿದ್ದರು. ಇದಾಗ್ಯೂ ರೋಹಿತ್ ಶರ್ಮಾ ಎಂಟ್ರಿಯೊಂದಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದ್ದೇವೆ. ಒಂದು ವೇಳೆ ನಮನ್ ಕೂಡ ಮೇಲಿನ ಕ್ರಮಾಂಕದಲ್ಲಿ ಆಡಿದ್ದರೆ ಫಲಿತಾಂಶ ಬದಲಾಗುವ ಸಾಧ್ಯತೆಯಿತ್ತು ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಮನ್ ಧೀರ್ ಕೇವಲ 24 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 46 ರನ್ ಬಾರಿಸಿದ್ದರು. ಆದರೆ ಈ ಬಾರಿ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಉಂಟಾದ ಬದಲಾವಣೆಯಿಂದಾಗಿ ಅವರು ಕೇವಲ 11 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಇಲ್ಲಿ ನಮನ್ ಧೀರ್ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಬಗ್ಗೆ ಮಾತನಾಡುವಾಗ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಅವರನ್ನು ಯಾಕೆ ಗುರಿಯಾಗಿಸಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಹಿಟ್ಮ್ಯಾನ್ ಮುಂಬೈ ಇಂಡಿಯನ್ಸ್ ಪರ ಅರಂಭಿಕನಾಗಿ ಕಣಕ್ಕಿಳಿಯುತ್ತಿರುವ ಆಟಗಾರ. ನಮನ್ ಧೀರ್ ಈ ಹಿಂದೆಯೂ ಮಧ್ಯಮ ಕ್ರಮಾಂಕದಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಇದಾಗ್ಯೂ ರೋಹಿತ್ ಶರ್ಮಾ ಅವರ ಆಗಮನದಿಂದಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಿದೆ ಎನ್ನುವ ಮೂಲಕ ಹಾರ್ದಿಕ್ ಪಾಂಡ್ಯ ಪರೋಕ್ಷವಾಗಿ ಸೋಲಿಗೆ ಹಿಟ್ಮ್ಯಾನ್ ಕಾರಣ ಎನ್ನುತ್ತಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPL 2025: ಗೆದ್ದರೂ ಅಂಕ ಪಟ್ಟಿಯಲ್ಲಿ ಮೇಲೇರದ RCB
ಒಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಮುಂಬೈ ಇಂಡಿಯನ್ಸ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದ್ದು, ಈ ಸೋಲುಗಳೊಂದಿಗೆ ಇದೀಗ ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದಾಗ್ಯೂ ಮುಂದಿನ 9 ಪಂದ್ಯಗಳ ಮೂಲಕ ಹಾರ್ದಿಕ್ ಪಾಂಡ್ಯ ಪಡೆ ಕಂಬ್ಯಾಕ್ ಮಾಡಲಿದೆಯಾ ಕಾದು ನೋಡಬೇಕಿದೆ.