MS Dhoni: ಕೇವಲ 3 ರನ್: ಗ್ರೇಟ್ ಫಿನಿಶರ್ ಫಿನಿಶ್..!
IPL 2025 CSK: ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿತ್ತು. ಇದಾದ ಬಳಿಕ ಸಿಎಸ್ಕೆ ಪಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನುಭವಿಸಿದೆ. ಅದರಲ್ಲೂ ಚೆಪಾಕ್ ಮೈದಾನದಲ್ಲಿ ಸಿಎಸ್ಕೆ ತಂಡವು 17 ವರ್ಷಗಳ ಬಳಿಕ ಆರ್ಸಿಬಿ ವಿರುದ್ಧ ಮುಗ್ಗರಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೊದಲ ಮೂರು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ಮ್ಯಾಚ್ಗಳಲ್ಲಿ ಮುಗ್ಗರಿಸಿದೆ. ಸಿಎಸ್ಕೆ ಸೋತಿರುವ ಈ ಎರಡು ಪಂದ್ಯಗಳಲ್ಲೂ ಮಹೇಂದ್ರ ಸಿಂಗ್ ಧೋನಿ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅದರಲ್ಲೂ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಮೂಲಕ ಧೋನಿ ಅಚ್ಚರಿ ಮೂಡಿಸಿದ್ದರು. ಧೋನಿಯ ಈ ನಿರ್ಧಾರದ ಬೆನ್ನಲ್ಲೇ ಗ್ರೇಟ್ ಫಿನಿಶರ್ ಫಿನಿಶ್ ಆದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಈ ಕೆಳಗಿನ ಅಂಕಿ ಅಂಶಗಳೇ ಉತ್ತರ.
- 2023 ರಿಂದ ಚೆನ್ನೈ ಸೂಪರ್ ಕಿಂಗ್ಸ್ ಚೇಸ್ ಮಾಡಿ ಗೆದ್ದಿರುವ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿಯ ಕೊಡುಗೆ ಶೂನ್ಯ.
- 2023 ರಿಂದ ಧೋನಿ ಬ್ಯಾಟ್ ಬೀಸಿದಾಗ ಸಿಎಸ್ಕೆ ತಂಡವು ಮೂರು ಪಂದ್ಯಗಳನ್ನು ಚೇಸ್ ಮಾಡಿ ಗೆದ್ದುಕೊಂಡಿದೆ. ಈ ವೇಳೆ ಅವರು ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 3 ರನ್ ಮಾತ್ರ.
- 2023 ರಿಂದ ಚೆನ್ನೈ ಸೂಪರ್ ಕಿಂಗ್ಸ್ ಚೇಸಿಂಗ್ ವೇಳೆ ಗೆದ್ದಂತಹ 3 ಪಂದ್ಯಗಳಲ್ಲಿ 9 ಎಸೆತಗಳನ್ನು ಎದುರಿಸಿರುವ ಧೋನಿ ಒಂದೇ ಒಂದು ಫೋರ್ ಬಾರಿಸಿಲ್ಲ. ಸಿಕ್ಸ್ ಅಂತು ದೂರದ ಮಾತು.
- 2023 ರಿಂದ ಸಿಎಸ್ಕೆ ತಂಡವು ಚೇಸಿಂಗ್ ವೇಳೆ ಸೋತಿರುವ ಪಂದ್ಯಗಳಲ್ಲಿ ಮಾತ್ರ ಧೋನಿ ಅಬ್ಬರಿಸಿದ್ದಾರೆ ಎಂದರೆ ನಂಬಲೇಬೇಕು.
- 2023 ರಿಂದ ಸಿಎಸ್ಕೆ ತಂಡವು ಚೇಸಿಂಗ್ ವೇಳೆ 6 ಪಂದ್ಯಗಳಲ್ಲಿ ಸೋತಿದೆ. ಈ ವೇಳೆ ಧೋನಿ 6 ಇನಿಂಗ್ಸ್ಗಳಿಂದ 166 ರನ್ ಕಲೆಹಾಕಿದ್ದಾರೆ.
- ಅಂದರೆ ಸಿಎಸ್ಕೆ ತಂಡವು ಚೇಸಿಂಗ್ ವೇಳೆ ಸೋತಿರುವ ಪಂದ್ಯಗಳಲ್ಲಿ ಮಾತ್ರ 13 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ ಮಹೇಂದ್ರ ಸಿಂಗ್ ಧೋನಿ ಅಬ್ಬರಿಸಿದ್ದಾರೆ. ಇದಾಗ್ಯೂ ತಂಡಕ್ಕೆ ಗೆಲುವು ತಂದುಕೊಡಲು ಧೋನಿಗೆ ಸಾಧ್ಯವಾಗಿಲ್ಲ ಎಂಬುದೇ ಸತ್ಯ.
ಹಾಗಿದ್ರೆ ಬೆಸ್ಟ್ ಫಿನಿಶರ್ ಯಾರು?
ಮಹೇಂದ್ರ ಸಿಂಗ್ ಧೋನಿಯನ್ನು ಸಿಎಸ್ಕೆ ಗ್ರೇಟ್ ಫಿನಿಶರ್ ಎಂದು ಬಿಂಬಿಸಿದರೂ ಅಸಲಿ ಮ್ಯಾಚ್ ವಿನ್ನರ್ ಸುರೇಶ್ ರೈನಾ ಎಂಬುದೇ ತೆರೆಮರೆಯ ಸತ್ಯ. ಏಕೆಂದರೆ ಸಿಎಸ್ಕೆ ಪರ ಚೇಸಿಂಗ್ ವೇಳೆ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ರೈನಾ ಹೆಸರಿನಲ್ಲಿದೆ.
ಚೇಸಿಂಗ್ನಲ್ಲಿ 54 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಸುರೇಶ್ ರೈನಾ 1375 ರನ್ ಗಳಿಸಿ ಮಿಂಚಿದ್ದಾರೆ. ಈ ವೇಳೆ 9 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಸುರೇಶ್ ರೈನಾ ಚೇಸಿಂಗ್ ವೇಳೆ ಆಡಿದ ಬಹುತೇಕ ಪಂದ್ಯಗಳಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಜಯ ಸಾಧಿಸಿದೆ.
ಅತ್ತ ಮಹೇಂದ್ರ ಸಿಂಗ್ ಧೋನಿ ಚೇಸಿಂಗ್ ವೇಳೆ 68 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, ಈ ವೇಳೆ ಒಟ್ಟು 1033 ರನ್ ಗಳಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಧೋನಿ ಆಡಿದ ಪಂದ್ಯಗಳಲ್ಲಿ ಸಿಎಸ್ಕೆ ಗೆದ್ದಿರುವುದಕ್ಕಿಂತ ಸೋತಿರುವುದೇ ಹೆಚ್ಚು.
ಏಕೆಂದರೆ 2022 ರಿಂದ ಸಿಎಸ್ಕೆ ತಂಡವು ಒಮ್ಮೆಯೂ 175 ಕ್ಕಿಂತ ಹೆಚ್ಚಿನ ಸ್ಕೋರ್ ಚೇಸ್ ಮಾಡಿಲ್ಲ. ಅಲ್ಲದೆ 175+ ರನ್ ಬೆನ್ನತ್ತಿದಾಗ 9 ಬಾರಿ ಸೋಲನುಭವಿಸಿದೆ.
ಸಿಎಸ್ಕೆ ತಂಡದ ಈ ಸೋಲುಗಳ ನಡುವೆ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಸುರೇಶ್ ರೈನಾ ಅವರ ಐಪಿಎಲ್ ಕೆರಿಯರ್ ಕೊನೆಗೊಂಡಿದ್ದು 2021 ರಲ್ಲಿ ಎಂಬುದು.
ಇದನ್ನೂ ಓದಿ: IPL 2025: ಸೋಲಿನ ಬೆನ್ನಲ್ಲೇ ರಿಷಭ್ ಪಂತ್ಗೆ ಸಂಜೀವ್ ಗೊಯೆಂಕಾ ಖಡಕ್ ಸೂಚನೆ
ಇದಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಮ್ಮೆಯೂ 175 ಕ್ಕಿಂತ ಹೆಚ್ಚಿನ ರನ್ ಚೇಸ್ ಮಾಡಿ ಗೆದ್ದಿಲ್ಲ ಎಂಬುದೇ ನಗ್ನ ಸತ್ಯ. ಈ ಅಂಕಿ ಅಂಶಗಳೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗ್ರೇಟ್ ಫಿನಿಶರ್ ಯಾರು ಎಂಬುದಕ್ಕೆ ಸ್ಪಷ್ಟ ಉತ್ತರವಂತು ಸಿಕ್ಕಿರುತ್ತದೆ.