RCB ದಾಖಲೆ ಧೂಳೀಪಟ ಮಾಡಿದ ಡೆಲ್ಲಿ ಬಾಯ್ಸ್
IPL 2025 DC vs LSG: ಐಪಿಎಲ್ 2025ರ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಒವರ್ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.3 ಓವರ್ಗಳಲ್ಲಿ 211 ರನ್ ಬಾರಿಸಿ 1 ವಿಕೆಟ್ನಿಂದ ರೋಚಕ ಗೆಲುವು ದಾಖಲಿಸಿತು.
Updated on: Mar 25, 2025 | 11:54 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಇನಿಂಗ್ಸ್ವೊಂದರಲ್ಲಿ ಮೊದಲ 5 ವಿಕೆಟ್ ಕಳೆದುಕೊಂಡ ನಂತರ 120+ ರನ್ಗಳಿಸಿ ಗೆದ್ದಿರುವುದು ಕೇವಲ 3 ತಂಡಗಳು ಮಾತ್ರ. ಈ ದಾಖಲೆ ಪಟ್ಟಿಯಲ್ಲಿ ಸೋಮವಾರದವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ರಸ್ಥಾನದಲ್ಲಿತ್ತು. ಆದರೆ ಇದೀಗ RCB ತಂಡದ ಈ ಅಪರೂಪದ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಧೂಳೀಪಟ ಮಾಡಿದೆ.

ವಿಶಾಖಪಟ್ಟಣದ ವೈಎಸ್ಆರ್ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 65 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ 80 ಎಸೆತಗಳಲ್ಲಿ 146 ರನ್ ಬಾರಿಸಿದೆ. ಈ ಮೂಲಕ ಅಸಾಧ್ಯವಾದದನ್ನು ಸಾಧಿಸಿ 1 ವಿಕೆಟ್ನ ರೋಚಕ ಜಯ ಗೆಲುವು ದಾಖಲಿಸಿದೆ.

ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 5 ವಿಕೆಟ್ ಕಳೆದುಕೊಂಡ ಬಳಿಕ ಅತೀ ಹೆಚ್ಚು ರನ್ ಬಾರಿಸಿ ಗೆದ್ದ ತಂಡವೆಂಬ ದಾಖಲೆ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿತ್ತು.

2016 ರ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಆರ್ಸಿಬಿ 29 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಇದಾಗ್ಯೂ ಎಬಿ ಡಿವಿಲಿಯರ್ಸ್ (79) ಅವರ ಸ್ಪೋಟಕ ಇನಿಂಗ್ಸ್ನೊಂದಿಗೆ ಆರ್ಸಿಬಿ ಪಡೆ 159 ರನ್ಗಳನ್ನು ಚೇಸ್ ಮಾಡಿ 4 ವಿಕೆಟ್ಗಳ ಜಯ ಸಾಧಿಸಿತ್ತು. ಅಂದು ಆರ್ಸಿಬಿ 5 ವಿಕೆಟ್ ಕಳೆದುಕೊಂಡ ಬಳಿಕ ಕಲೆಹಾಕಿದ್ದು ಬರೋಬ್ಬರಿ 130 ರನ್ಗಳು. ಈ ಮೂಲಕ ಐಪಿಎಲ್ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆ ಅಳಿಸಿ ಹಾಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊಸ ಇತಿಹಾಸ ಬರೆದಿದೆ. ಅದು ಸಹ 5 ವಿಕೆಟ್ ಪತನದ ಬಳಿಕ ಬರೋಬ್ಬರಿ 146 ರನ್ ಬಾರಿಸುವ ಮೂಲಕ. ಅಶುತೋಷ್ ಶರ್ಮಾ (66) ಹಾಗೂ ವಿಪ್ರಾಜ್ ನಿಗಮ್ (39) ಅವರ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಕಳೆದ 8 ವರ್ಷಗಳಿಂದ ಆರ್ಸಿಬಿ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನದಾಗಿಸಿಕೊಂಡಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



