6,6,6,6,6,6,6: ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ನಿಕೋಲಸ್ ಪೂರನ್
Nicholas Pooran Records: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ನಿಕೋಲಸ್ ಪೂರನ್ ಒಟ್ಟು 7 ಸಿಕ್ಸ್ ಬಾರಿಸಿದ್ದರು. ಈ ಸಿಕ್ಸ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಪೂರನ್ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 2ನೇ ಎಡಗೈ ದಾಂಡಿಗ ಎನಿಸಿಕೊಂಡಿದ್ದಾರೆ.
Updated on: Mar 25, 2025 | 1:55 PM

IPL 2025: ಐಪಿಎಲ್ನ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನಿಕೋಲಸ್ ಪೂರನ್ (Nicholas Pooran) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ ಕೇವಲ 30 ಎಸೆತಗಳಲ್ಲಿ 75 ರನ್ ಸಿಡಿಸಿದ್ದರು. ಈ ವೇಳೆ ಎಡಗೈ ದಾಂಡಿಗನ ಬ್ಯಾಟ್ನಿಂದ ಮೂಡಿಬಂದ ಸಿಕ್ಸ್ಗಳ ಸಂಖ್ಯೆ ಬರೋಬ್ಬರಿ 7.

ಈ ಏಳು ಸಿಕ್ಸ್ಗಳೊಂದಿಗೆ ಇದೀಗ ನಿಕೋಲಸ್ ಪೂರನ್ ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದಿದ್ದಾರೆ. ಅದು ಸಹ 600 ಸಿಕ್ಸರ್ಗಳ ಮೈಲುಗಲ್ಲನ್ನು ಮುಟ್ಟುವ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಪೂರನ್ ಇದೀಗ 4ನೇ ಸ್ಥಾನಕ್ಕೇರಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಈವರೆಗೆ 385 ಪಂದ್ಯಗಳನ್ನಾಡಿರುವ ನಿಕೋಲಸ್ ಪೂರನ್ ಒಟ್ಟು 359 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ ಬರೋಬ್ಬರಿ 606 ಸಿಕ್ಸ್ಗಳು ಮೂಡಿಬಂದಿವೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 600+ ಸಿಕ್ಸ್ ಬಾರಿಸಿದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಟಿ20 ಕ್ರಿಕೆಟ್ನಲ್ಲಿ 600+ ಸಿಕ್ಸ್ ಸಿಡಿಸಿದ ಮೂವರು ಬ್ಯಾಟರ್ಗಳು ಸಹ ವೆಸ್ಟ್ ಇಂಡೀಸ್ ದಾಂಡಿಗರು ಎಂಬುದು ವಿಶೇಷ. ಈ ಪಟ್ಟಿಯಲ್ಲಿ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದರೆ, ಕೀರನ್ ಪೊಲಾರ್ಡ್ (908) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು 733 ಸಿಕ್ಸ್ ಬಾರಿಸಿರುವ ಆ್ಯಂಡ್ರೆ ರಸೆಲ್ ಮೂರನೇ ಸ್ಥಾನದಲ್ಲಿದ್ದಾರೆ. ಇದೀಗ 606 ಸಿಕ್ಸ್ಗಳೊಂದಿಗೆ ವೆಸ್ಟ್ ಇಂಡೀಸ್ನವರೇ ಆಗಿರುವ ಪೂರನ್ 4ನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಕ್ರಿಸ್ ಗೆಲ್ ಹೆಸರಿನಲ್ಲಿದೆ. 2005 ರಿಂದ 2022 ರವರೆಗೆ 455 ಟಿ20 ಇನಿಂಗ್ಸ್ ಆಡಿರುವ ಗೇಲ್ ಬರೋಬ್ಬರಿ 1056 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.



















