Naseem Shah: 11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ವಿಶ್ವ ದಾಖಲೆ ಬರೆದ ನಸೀಮ್ ಶಾ
New Zealand vs Pakistan: ಪಾಕಿಸ್ತಾನ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ನ್ಯೂಝಿಲೆಂಡ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 50 ಓವರ್ಗಳಲ್ಲಿ 292 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 208 ರನ್ಗಳಿಗೆ ಆಲೌಟ್ ಆಯಿತು. ಈ ಸೋಲಿನ ಹೊರತಾಗಿಯೂ ಪಾಕ್ ಆಟಗಾರ ನಸೀಮ್ ಶಾ ಭರ್ಜರಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದು ವಿಶೇಷ.
Updated on: Apr 02, 2025 | 1:54 PM

ಏಕದಿನ ಕ್ರಿಕೆಟ್ನಲ್ಲಿ ನಸೀಮ್ ಶಾ (Naseem Shah) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ. ಹ್ಯಾಮಿಲ್ಟನ್ನ ಸೆಡೆನ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 292 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಅಗ್ರ ಕ್ರಮಾಂಕದ ಬ್ಯಾಟರ್ಗಳು ವಿಫಲರಾಗಿದ್ದರು. ಆದರೆ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಸೀಮ್ ಶಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ನಸೀಮ್ ಶಾ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 51 ರನ್ ಬಾರಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಹಾಫ್ ಸೆಂಚುರಿ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಇಂತಹದೊಂದು ಸಾಧನೆ ಮಾಡಿದ್ದು ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಅಮೀರ್. 2016 ರಲ್ಲಿ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮೊಹಮ್ಮದ್ ಅಮೀರ್ ಕೇವಲ 28 ಎಸೆತಗಳಲ್ಲಿ 58 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ನ್ಯೂಝಿಲೆಂಡ್ ವಿರುದ್ಧ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ನಸೀಮ್ ಶಾ 44 ಎಸೆತಗಳಲ್ಲಿ ಹಾಫ್ ಸೆಂಚುರಿಸಿ ಸಿಡಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಕ್ರಮಾಂಕದಲ್ಲಿ ಕಣಕ್ಕಿಳಿದು ಹಾಫ್ ಸೆಂಚುರಿಸಿದ ವಿಶ್ವದ 2ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.



















