World Sleep Day; ನಿದ್ದೆ ಎಂಬ ಪದಕವಡೆ: ಉಗ್ಗದಲ್ಲಿ ನೀರಲ್ಲ ಕಣ್ಣೀರು ತುಂಬಿತ್ತು
'ಪ್ರವಾಸದ ಕೊನೆಯ ಘಟ್ಟ ಕಾಶಿಗೆ ಹತ್ತಿರದಲ್ಲಿದ್ದೆವು. ಬೆಳಗಿನ ಜಾವ ಮೂರರ ಸಮಯ. ಯಾವುದೋ ಸ್ಟೇಶನ್ನಲ್ಲಿ ರೈಲು ನಿಂತಿತ್ತು. ಅಪ್ಪನಿಗೆ ಎಚ್ಚರವಾಗಿ ಕಣ್ಣು ಬಿಟ್ಟರೆ, ಪಕ್ಕ ಮಲಗಿದ್ದ ನಾನಿಲ್ಲ. ಜೋರಾಗಿ ಕೂಗುತ್ತಾ ಬಾಗಿಲ ಬಳಿ ಓಡಿದರೆ ಅಲ್ಲಿ ಕಂಡದ್ದೇನು? ಮಂಪರು ಕಣ್ಣುಜ್ಜುತ್ತಾ ಕೈಯಲ್ಲಿ ಸ್ಟೀಲ್ ಉಗ್ಗ ಹಿಡಿದು ರೈಲು ಇಳಿಯಲು ಸಿದ್ಧಳಾದ ನಾನು! ಒಂದು ಕಾಲು ಆಗಲೇ ಕೆಳಗಿಟ್ಟಾಗಿತ್ತು. ಅಪ್ಪನನ್ನು ಕಂಡೊಡನೆ ‘ಅಪ್ಪ, ಉಗ್ಗದಲ್ಲಿ ನೀರು ಖಾಲಿಯಾಗಿದೆ; ಇಲ್ಲಿ ಇಳಿದು ತುಂಬಿಸೋಣ. ತುಂಬಾ ನಿದ್ದೆ ಬಂದಿತ್ತು, ಆದರೂ ನೆನಪಿಟ್ಟುಕೊಂಡು ನೀವು ಹೇಳಿದ ಹಾಗೆ ಸ್ಟೇಶನ್ ಬಂದ ಕೂಡಲೇ ಎದ್ದುಬಿಟ್ಟೆ’ ಅಂದೆನಂತೆ.' ಡಾ. ಕೆ. ಎಸ್. ಚೈತ್ರಾ
ಏಳಿ, ಎದ್ದೇಳಿ! ಎದ್ದು ಬರೆಯಲು ಕುಳಿತುಕೊಳ್ಳಿ. ಎಲ್ಲಿದ್ದೀರೋ ಅಲ್ಲಿಂದಲೇ ಬರೆಯಲು ಶುರುಮಾಡಿ. ಹಾಳೆಯೋ, ಪರದೆಯೋ ಏನೋ ಒಂದು ನಿಮ್ಮ ಮುಂದೆ ತೆರೆದುಕೊಂಡಿರಲಿ. ಈಗ ಕೈಗಳೆರಡನ್ನೂ ಉಜ್ಜಿಕೊಂಡು ಆ ಖಾಲಿಚೌಕದೊಳಗೆ ನಿಮಗೆ ಕೊಟ್ಟ ಪದವನ್ನು ದಾಳಕ್ಕೆ ಹಾಕಿ. ಅಂದುಕೊಂಡಿದ್ದೇ ಬಿತ್ತಾ, ಇಲ್ಲವಾ? ಮತ್ತೆ ಮತ್ತೆ ಹಾಕಿ. ನಿಮ್ಮ ಉಸಿರು ನಿಮ್ಮ ಹಿಡಿತದಲ್ಲಿಯೇ ಇದೆ ಎಂದು ನಿಮಗನ್ನಿಸುವ ತನಕ ದಾಳ ಹಾಕುತ್ತಲೇ ಇರಿ. ಇಲ್ಲಿ ಕಣ್ಣುಮುಚ್ಚಿಕೊಂಡು ನಿವೇದಿಸಿಕೊಳ್ಳುವುದಂತೂ ಸಂಪೂರ್ಣ ನಿಷಿದ್ಧ!; ಗಾಳಿಯಲ್ಲಿ ತೇಲಿ ಹೋದ ಈ ಸಂದೇಶವನ್ನು ಫಕ್ಕನೆ ಹಿಡಿದು ಬರೆಯಲು ಕುಳಿತರು ನಮ್ಮ ನಡುವಿನ ಬರಹಪ್ರಿಯರು. ‘ವಿಶ್ವ ನಿದ್ದೆ ದಿನ – World Sleep Day’ ಪ್ರಯುಕ್ತ ‘ನಿದ್ದೆ ಎಂಬ ಪದಕವಡೆ’ ಸರಣಿ.
ಪರಿಕಲ್ಪನೆ : ಶ್ರೀದೇವಿ ಕಳಸದ
ಲೇಖಕಿ ಡಾ. ಕೆ. ಎಸ್. ಚೈತ್ರಾ ಅವರು ನಿದ್ದೆಯಿಂದ ನಡೆದಿದ್ದೆಲ್ಲಿಗೊ?!
‘ಊಟ ತಿಂಡಿಯನ್ನಾದರೂ ಬಿಟ್ಟೇನು, ನಿದ್ದೆಯನ್ನಲ್ಲ!’ ಇದು ಈಗಲ್ಲ, ಹುಟ್ಟಿದಾಗಿನಿಂದ ನನ್ನ ನಿಲುವು. ಪುರುಸೊತ್ತು ಸಿಕ್ಕಿದರೆ ಹಗಲು, ಮಧ್ಯಾಹ್ನ, ರಾತ್ರಿ ಹೀಗೆ ಯಾವಾಗ ಬೇಕಾದರೂ ನಿದ್ದೆ ಮಾಡಬಲ್ಲ ‘ಪ್ರತಿಭೆ’ ನನ್ನದು. ಮಧ್ಯಾಹ್ನ ನಿದ್ದೆ ಮಾಡಿದರೆ ರಾತ್ರಿ ನಿದ್ದೆ ಬರಲ್ಲ ಎಂದು ಚಡಪಡಿಸುವವರು ಬಹಳಷ್ಟು ಜನ. ನನ್ನದು ಹಾಗಲ್ಲ; ನಿದ್ದೆ ನನಗೆ ಮೂಲಭೂತ ಅಗತ್ಯದ ಜತೆ ಖುಷಿ ನೀಡುವ ಪ್ರೀತಿಯ ಹವ್ಯಾಸವೂ ಹೌದು! ಆದ್ದರಿಂದಲೇ ಎಲ್ಲಿ ಬೇಕಾದರೂ, ಎಷ್ಟು ಹೊತ್ತಿಗಾದರೂ ನಿದ್ದೆ ಹೊಡೆಯಬಲ್ಲೆ. ಹೊಟ್ಟೆಕಿಚ್ಚನ್ನೂ ಮೂಡಿಸಬಲ್ಲೆ.
ನಿದ್ದೆಯೆಂದರೆ ಇಷ್ಟ, ಮಲಗಿದೊಡನೆ ತಾನಾಗಿ ಆವರಿಸುವುದೂ ಸತ್ಯ. ಆದರೆ ಏನಾದರೂ ಕೆಲಸ ಮಾಡಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸಿದ್ದರೆ ಕೂಡಲೇ ಎಚ್ಚರವಾಗುವುದೂ ನನ್ನ ನಿದ್ದೆಯ ಮಹಿಮೆ. ಇದರಿಂದ ಬಾಲ್ಯದಲ್ಲಿ ಕಳೆದೇಹೋಗುವ ಸಂದರ್ಭ ಎದುರಾಗಿತ್ತು ಎಂದು ಅಪ್ಪ ಯಾವಾಗಲೂ ನೆನೆಯುತ್ತಾರೆ. ಅಪ್ಪ-ಅಮ್ಮ ಪುಟ್ಟ ಮಕ್ಕಳಾದ ನಮ್ಮನ್ನು ಕರೆದುಕೊಂಡು ಬೇಸಿಗೆಯಲ್ಲಿ ಉತ್ತರಭಾರತದ ಪ್ರವಾಸ ಹೊರಟಿದ್ದರು. ನನಗೆ ನಾಲ್ಕೂವರೆ ವರ್ಷವಾದರೆ ತಂಗಿ ಪವಿತ್ರ ಎರಡು ವರ್ಷದ ಮಗು. ಮೊದಲಿನಿಂದಲೂ ಮಕ್ಕಳು ಸ್ವತಂತ್ರರಾಗಿ ಬೆಳೆಯಬೇಕು, ದೇಶ ತಿರುಗಬೇಕು ಎಂಬ ಮನೋಭಾವದ ಅಪ್ಪನಿಗೆ ಅದು ಕಲಿಕೆಯ ಭಾಗವೇ ಅನ್ನಿಸಿತ್ತು. ಮಕ್ಕಳಾದ ನಮಗೆ ಅನುಕೂಲ (ಮಲಗಿ, ಆರಾಮಾಗಿ ಕುಳಿತು ಮತ್ತು ರಾತ್ರಿಯೂ ಪಯಣಿಸಬಹುದೆಂಬ ಯೋಚನೆಯಿಂದ) ಎಂದು ರೈಲನ್ನು ಆಯ್ಕೆ ಮಾಡಿಕೊಂಡಿದ್ದರು. ಬೆಂಗಳೂರಿನಿಂದ ಚುಕುಪುಕು ರೈಲಿನಲ್ಲಿ ಹೋಗುವ ಸಂಭ್ರಮ ನನಗೆ. ಅಲ್ಲಲ್ಲಿ ಇಳಿದು ಪ್ರೇಕ್ಷಣೀಯ ಸ್ಥಳ ನೋಡಿ, ಒಂದೆರಡು ದಿನ ತಂಗಿ ಮತ್ತೆ ಪ್ರಯಾಣ ಎಂದು ತೀರ್ಮಾನವಾಗಿತ್ತು. ಆದರೂ ಪುಟ್ಟ ಮಕ್ಕಳನ್ನು ನಿಭಾಯಿಸುವುದು ಕಷ್ಟವೇ ಸರಿ. ಹಾಗಾಗಿ ಅಪ್ಪ ಹೊರಡುವ ಹಿಂದಿನ ದಿನ ನನ್ನನ್ನು ಕರೆದು ‘ಮರಿ! ಪ್ರವಾಸ ಅಂದ್ರೆ ಮಜಾ, ಆದ್ರೆ ಪುಟ್ಟಿ ಸಣ್ಣವಳು. ಅವಳನ್ನು ಹುಷಾರಾಗಿ ನೋಡಿಕೊಳ್ಳಬೇಕು. ದೊಡ್ಡವಳಾದ ನೀನು ನಿನ್ನಿಂದಾದಷ್ಟು ಸಹಾಯ ಮಾಡಬೇಕು. ರೈಲಿನಲ್ಲಿ ಹೋಗುವಾಗ ನೀರು ಕೊಡುವುದು, ಸ್ಟೇಶನ್ ಬಂದಾಗ ಬೇಗ ಇಳಿಯುವುದು, ಪುಟ್ಟಿಗೆ ನಡೆಸುವುದು ಎಲ್ಲಾ ಮಾಡುತ್ತಿಯಲ್ಲಾ? ನಿದ್ದೆ ಮಾಡುತ್ತಾ ಇರಬಾರದು. ರೈಲು ನಿಂತೊಡನೆ ಏಳಬೇಕು’ ಎಂದಿದ್ದರು. ಅದಕ್ಕೆ ಸರಿಯಾಗಿ ನನ್ನ ಕೈಗೆ ಪುಟ್ಟದೊಂದು ರೈಲು ಚೊಂಬು (ಸ್ಟೀಲ್ ಉಗ್ಗ) ಕೊಟ್ಟು ಅದರಲ್ಲಿ ನೀರು ತುಂಬಿಸುವ ಕೆಲಸ ಕೊಟ್ಟಿದ್ದರು. ಎಲ್ಲರಿಗೂ ನೀರು ಕೊಡುವ, ಅದರೊಳಗೆ ನೀರು ಖಾಲಿಯಾದೊಡನೆ ತುಂಬಿಸುವ ಜವಾಬ್ದಾರಿ ನನ್ನದು ಎಂಬುದು ನನ್ನ ಪಾಲಿಗೆ ಬಹು ದೊಡ್ಡ ವಿಷಯವಾಗಿತ್ತು.
ರೈಲಿನಲ್ಲಿ ಪ್ರಯಾಣ ಶುರುವಾಗಿತ್ತು. ಅಪ್ಪ-ಅಮ್ಮರ ಜತೆ ಹಳೆ ಕತೆ, ಪುಟ್ಟಿಯೊಡನೆ ಆಟ, ಕಿಟಕಿಯಿಂದ ಮರ-ಗಿಡ-ಜನ ನೋಡುವುದು, ಆಗಾಗ್ಗೆ ಕುರುಕಲು ತಿನ್ನುವುದು, ಸ್ಟೇಶನ್ ಬಂದಾಗ ಅಪ್ಪನೊಡನೆ ಓಡಿ ಹೋಗಿ ಕೆಳಗೆ ಇಳಿದು ನೀರು ತುಂಬಿಸಿ ಬರುವುದು ಹೀಗೆ ಮಜವಾಗಿತ್ತು. ರಾತ್ರಿ ಮಲಗುವಾಗ ಅಮ್ಮನ ಪಕ್ಕ ಪುಟ್ಟಿ, ಅಪ್ಪನ ಪಕ್ಕ ನಾನು. ಓಡುವ ರೈಲಿನ ಲಯಕ್ಕೆ ಪುಟ್ಟಿಗೆ ಮಾತ್ರವಲ್ಲ ನನಗೂ ತೊಟ್ಟಿಲು ತೂಗಿದ ಅನುಭವವೇ! ಬಿಸಿಲಿನಲ್ಲಿ ಊರೂರು ಸುತ್ತಿ, ಸೇರಿದಷ್ಟು ತಿಂದು, ರಾತ್ರಿ ರೈಲಿನಲ್ಲಿ ಕುಳಿತರೆ ಮೈಮರೆಯುವಷ್ಟು ನಿದ್ದೆ! ಇದಲ್ಲದೆಯೂ ಆಗಾಗ್ಗೆ ಅಂದರೆ ಬೇಕಾದಾಗೆಲ್ಲಾ ನಿದ್ದೆಯನ್ನೂ ಮಾಡುತ್ತಿದ್ದೆ. ಪ್ರತಿಬಾರಿ ಮಲಗುವಾಗ ಮನಸ್ಸಿನಲ್ಲಿ ಬೇಗ ಏಳಬೇಕು ಎಂದುಕೊಳ್ಳುತ್ತಿದ್ದೆ.
ಹೀಗೆ ಸಾಗುತ್ತಾ ಬಂದ ಪ್ರವಾಸದ ಕೊನೆಯ ಘಟ್ಟ ಕಾಶಿಗೆ ಹತ್ತಿರದಲ್ಲಿದ್ದೆವು. ಅಪ್ಪ ಹೇಳುವ ಹಾಗೆ ಬೆಳಗಿನ ಜಾವ ಮೂರರ ಸಮಯ. ಯಾವುದೋ ಸ್ಟೇಶನ್ನಲ್ಲಿ ರೈಲು ನಿಂತಿತ್ತು. ಒಂದಿಷ್ಟು ಜನರು ಇಳಿಯುತ್ತಿದ್ದರು, ಮತ್ತಷ್ಟು ಜನ ಹತ್ತುತ್ತಿದ್ದರು. ಚಾಯ್- ಸಮೋಸಾ ಮಾರುವವರ ಕೂಗು ಕೇಳುತ್ತಿತ್ತು. ಪ್ರಯಾಣಿಕರಲ್ಲಿ ಯಾರೋ ಜೋರಾಗಿ ಮಾತನಾಡಿದರು ಎಂದು ಅಪ್ಪನಿಗೆ ಎಚ್ಚರವಾಗಿತ್ತು. ಹಾಗೇ ಕಣ್ಣು ಬಿಟ್ಟರೆ, ಪಕ್ಕ ಮಲಗಿದ್ದ ನಾನಿಲ್ಲ. ಅಪರಿಚಿತ ಜಾಗ, ಪುಟ್ಟ ಹುಡುಗಿ, ತಿಳಿಯದ ಭಾಷೆ. ಏನಾಯಿತು ಎಂದು ಅಪ್ಪನ ಎದೆ ಧಸಕ್ಕೆಂದಿದ್ದು ಸಹಜವೇ. ಕೂಡಲೇ ಮರೀ ಎಂದು ಜೋರಾಗಿ ಕೂಗುತ್ತಾ ಬಾಗಿಲ ಬಳಿ ಓಡಿದರೆ ಅಲ್ಲಿ ಕಂಡದ್ದೇನು? ಮಂಪರು ಕಣ್ಣುಜ್ಜುತ್ತಾ ಕೈಯಲ್ಲಿ ಸ್ಟೀಲ್ ಉಗ್ಗ ಹಿಡಿದು ರೈಲು ಇಳಿಯಲು ಸಿದ್ಧಳಾದ ನಾನು! ಒಂದು ಕಾಲು ಆಗಲೇ ಕೆಳಗಿಟ್ಟಾಗಿತ್ತು. ಅಪ್ಪನನ್ನು ಕಂಡೊಡನೆ ‘ಅಪ್ಪ, ಉಗ್ಗದಲ್ಲಿ ನೀರು ಖಾಲಿಯಾಗಿದೆ; ಇಲ್ಲಿ ಇಳಿದು ತುಂಬಿಸೋಣ. ತುಂಬಾ ನಿದ್ದೆ ಬಂದಿತ್ತು, ಆದರೂ ನೆನಪಿಟ್ಟುಕೊಂಡು ನೀವು ಹೇಳಿದ ಹಾಗೆ ಸ್ಟೇಶನ್ ಬಂದ ಕೂಡಲೇ ಎದ್ದುಬಿಟ್ಟೆ’ ಅಂದೆನಂತೆ. ಅಪ್ಪನಿಗೆ ಹೋದ ಉಸಿರು ಮರಳಿ ಬಂದಿತ್ತು. ಉಗ್ಗದಲ್ಲಿ ನೀರಲ್ಲ ; ಕಣ್ಣೀರು ತುಂಬಿತ್ತು! ಕಾಶಿ ವಿಶ್ವನಾಥನಿಗೆ ಎಲ್ಲರ ಹರಕೆ ಸಂದಿತ್ತು.
ಇದೆಲ್ಲ ನಡೆದು ನಾಲ್ಕು ದಶಕಗಳೇ ಕಳೆದಿವೆ. ಅಪ್ಪನ ಮನೆಯಲ್ಲಿ ಸ್ಟೀಲ್ ಉಗ್ಗ ಇನ್ನೂ ಇದೆ. ಪ್ರತಿ ಬಾರಿ ಪ್ರವಾಸದಲ್ಲೂ ಅಪ್ಪ ಈ ಕತೆ ಹೇಳಿ ಹೇಳಿ ಎಲ್ಲರಿಗೂ ಬಾಯಿಪಾಠವಾಗಿದೆ! ಈಗಲೂ ನನಗೆ ನಿದ್ದೆ ಹೆಚ್ಚು ಎಂದು ಎಲ್ಲರೂ ಛೇಡಿಸಿದಾಗಲೆಲ್ಲಾ ಅಪ್ಪ ಮಾತ್ರ ‘ ನಿದ್ದೆ ಹೆಚ್ಚಾದರೇನು, ಬೇಕೆಂದಾಗ ಏಳುವ ಶಕ್ತಿ ಅವಳಿಗಿದೆ. ಜಾಣೆ ನನ್ನ ಮಗಳು’ ಎಂದು ನನ್ನ ಪರ ವಹಿಸುತ್ತಾರೆ. ಅಮ್ಮ ಮಾತ್ರ ಮಲಗಿದರೂ, ಎದ್ದರೂ, ನಡೆದರೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ನಗುತ್ತಾಳೆ!
***
ಪರಿಚಯ: ಮೂಲತಃ ಶಿವಮೊಗ್ಗೆಯವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ದಂತವೈದ್ಯೆ, ಪ್ರವೃತ್ತಿಯಲ್ಲಿ ಲೇಖಕಿ ಮತ್ತು ದೂರದರ್ಶನ ನಿರೂಪಕಿ. ಉತ್ತಮ ನೃತ್ಯ ಸಂಗೀತ ಕಲಾವಿದೆಯಾಗಿರುವ ಚೈತ್ರಾ, ಭರತನಾಟ್ಯದಲ್ಲಿ ದೂರದರ್ಶನದ ಗ್ರೇಡೆಡ್ ಕಲಾವಿದೆ ಮತ್ತು ಶಿಕ್ಷಕಿ. ನೃತ್ಯ-ಸಂಗೀತ-ಸಂಸ್ಕೃತಿಯಪ್ರಚಾರ-ಅಭಿವೃದ್ಧಿಗಾಗಿ ಇರುವ ಶ್ರೀವಿಜಯ ಕಲಾನಿಕೇತನದ ಟ್ರಸ್ಟಿಯಾಗಿದ್ದಾರೆ.
ಇದನ್ನೂ ಓದಿ : World Sleep Day; ನಿದ್ದೆ ಎಂಬ ಪದಕವಡೆ: ಮಲಗಿ ಮಲಗಲು ಬಿಡಿ! ಇದು ಚಂದ್ರಕಲಾ ಕಲಾಪ
Published On - 1:04 pm, Fri, 19 March 21