AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಸಿಎಸ್​ಪಿ-ಟಿಎಸ್​ಪಿಯ 9 ಸಾವಿರ ಕೋಟಿ ರೂ. ಹಣ ಗ್ಯಾರಂಟಿಗೆ ಬಳಸಿಕೊಂಡ ಸರ್ಕಾರ

ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಬಳಸಿಕೊಂಡಿರುವುದಾಗಿ ವಿಧಾನ ಪರಿಷತ್​ ನಲ್ಲಿ ಒಪ್ಪಿಕೊಂಡಿದೆ. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ವಿಪಕ್ಷಗಳು ಸರ್ಕಾರದ ವಿರುದ್ಧ ದಲಿತ ವಿರೋಧಿ ನೀತಿ ಎಂದು ಆರೋಪಿಸಿದವು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ವಿಚಾರವಾಗಿ ವಿಧಾನ ಪರಿಷತ್​ನಲ್ಲಿ ಸರ್ಕಾರ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯಿತು.

ಎಸ್​ಸಿಎಸ್​ಪಿ-ಟಿಎಸ್​ಪಿಯ 9 ಸಾವಿರ ಕೋಟಿ ರೂ. ಹಣ ಗ್ಯಾರಂಟಿಗೆ ಬಳಸಿಕೊಂಡ ಸರ್ಕಾರ
ವಿಧಾನಸೌಧ, ಗ್ಯಾರಂಟಿ
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ|

Updated on:Mar 14, 2025 | 1:12 PM

Share

ಬೆಂಗಳೂರು, ಮಾರ್ಚ್​ 14: ಪ್ರಸಕ್ತ ಹಣಕಾಸು ವರ್ಷದಲ್ಲೂ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ (Guarantee) ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ (SCSP-TSP) ಅನುದಾನವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​ ಆರೋಪಿಸುತ್ತಿವೆ. ಈ ನಡುವೆ ಗ್ಯಾರಂಟಿ ಯೋಜನೆಗಳಿಗೆ ಎಸ್​ಸಿಎಸ್​ಪಿ-ಟಿಎಸ್​ಪಿ ಅನುದಾನ ಬಳಕೆ ವಿಚಾರವನ್ನು ವಿಧಾನ ಪರಿಷತ್​ನಲ್ಲಿ ಸದಸ್ಯರಾದ ಹೇಮಲತಾ ನಾಯಕ್, ಟಿ.ಎ.ಶರವಣ ಪ್ರಸ್ತಾಪಿಸಿದರು.

ಗ್ಯಾರಂಟಿಗಳಿಗೆ ಪ್ರತ್ಯೇಕವಾಗಿ 52 ಸಾವಿರ ಕೋಟಿ ಮೀಸಲಿಟ್ಟಿದ್ದೀರಿ. ಆದರೂ, ಗ್ಯಾರಂಟಿ ಯೋಜನೆಗಳಿಗೆ ಎಸ್​ಸಿಎಸ್​ಪಿ-ಟಿಎಸ್​ಪಿ ಹಣ ಯಾಕೆ ಅಗತ್ಯವಿದೆ?, ಹಾಗಾದರೆ ಬಜೆಟ್​​ನಲ್ಲಿ ಮೀಸಲಿಟ್ಟ ಈ ಹಣ ಎಲ್ಲಿಗೆ ಹೋಯ್ತು? ಹೇಳೋದೊಂದು ಮಾಡೋದೊಂದು ಎಂದು ಹೇಮಲತಾ ನಾಯಕ್​ ಪ್ರಶ್ನಿಸಿದರು.

ಸಾರಿಗೆ ಬಸ್​ಗಳಲ್ಲಿ ಓಡಾಡುವ ಎಸ್​ಸಿ, ಎಸ್​ಟಿ ಮಹಿಳೆಯರ ಸಂಖ್ಯೆ ಎಷ್ಟು? ಸರ್ಕಾರದ ಬಳಿ ಫಲಾನುಭವಿಗಳ ಸಂಖ್ಯೆಯೇ ಇಲ್ಲ ಅನಿಸುತ್ತದೆ ಎಂದು ಟಿ.ಎ.ಶರವಣ ಪ್ರಶ್ನಿಸಿದರು.

ಇದನ್ನೂ ಓದಿ
Image
ನಿಮ್ಹಾನ್ಸ್​​​​ನಲ್ಲಿ ಫೀಲ್ಡ್ ಡೇಟಾ ಕಲೆಕ್ಟರ್ ಹುದ್ದೆಗಳಿಗೆ ನೇರ ಸಂದರ್ಶನ
Image
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
Image
ಪೋಕ್ಸೋ ಕೇಸ್​: ಸಮನ್ಸ್​ಗೆ ತಡೆ ನೀಡಿದ ಹೈಕೋರ್ಟ್, ಯಡಿಯೂರಪ್ಪಗೆ ರಿಲೀಫ್
Image
ಗ್ಯಾರಂಟಿ ಯೋಜನೆಗೆ SCSP-TSP ಹಣ ಬಳಕೆ: ವರದಿ ಕೇಳಿದ ಪರಿಶಿಷ್ಟ ಪಂಗಡ ಆಯೋಗ

ಹೇಮಲತಾ ನಾಯಕ್ ಮತ್ತು ಟಿ.ಎ ಶರವಣ ಪ್ರಶ್ನೆಗೆ ಸಚಿವ ಮಹದೇವಪ್ಪ ಉತ್ತರ ನೀಡಿದರು. “2011ರ ಜನಗಣತಿ ಪ್ರಕಾರ 21.78 ಲಕ್ಷ ಎಸ್​ಸಿ ಕುಟುಂಬಗಳಿವೆ. 8.76 ಲಕ್ಷ ಎಸ್​ಟಿ ಕುಟುಂಬಗಳಿವೆ. ಈ ಎಲ್ಲಾ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ಲಭಿಸುತ್ತಿದೆ. 52.10 ಲಕ್ಷ ಎಸ್​ಸಿ ಮಹಿಳೆಯರು, 21.42 ಲಕ್ಷ ಎಸ್​ಟಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ತಲುಪುತ್ತಿದೆ. ಎಸ್​ಸಿ, ಎಸ್​ಟಿ ಸಮುದಾಯದ ಹಣವನ್ನು ಬೇರೆ ಯೋಜನೆಗೆ ಬಳಸುವುದಿಲ್ಲ. ಬೇರೆ ಯೋಜನೆಗೆ ಆ ಹಣ ಬಳಸುವ ಪ್ರಮೆಯವೇ ಬರುವುದಿಲ್ಲ” ಎಂದು ಉತ್ತರಿಸಿದರು.

ಸರ್ಕಾರ ಹಾರಿಕೆ ಉತ್ತರವನ್ನು ಕೊಡುತ್ತಿದೆ. ಬೇರೆ ಉದ್ದೇಶಗಳಿಗೆ ಎಸ್​ಸಿಎಸ್​ಪಿ-ಟಿಎಸ್​ಪಿ ಹಣ ಬಳಸಬಾರದು. ಎಸ್​ಸಿಎಸ್​ಪಿ-ಟಿಎಸ್​ಪಿ ಯೋಜನೆಗೆ ಘೋಷಣೆ ಮಾಡಿದ್ದು 42 ಸಾವಿರ ಕೋಟಿ ರೂ. ಆದರೆ ಸಿಗುತ್ತಿರುವುದು ಕೇವಲ 7 ಸಾವಿರ ಕೋಟಿ ರೂ. ದಲಿತರಿಗೆ ಈ ಸರ್ಕಾರದಿಂದ ಆದಷ್ಟು ಅನ್ಯಾಯ ಬೇರೆ ಯಾರಿಂದಲೂ ಆಗಿಲ್ಲ. ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಮೋಸ ಆಗುತ್ತಿದೆ. ದಲಿತರಿಗೆ ಮೋಸ ಆಗುತ್ತಿರುವುದನ್ನು ಕೇಳಬಾರದಾ? ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಸಿದರು.

ಉತ್ತರದ ವೇಳೆ ಎಸ್​ಸಿಎಸ್​ಪಿ-ಟಿಎಸ್​ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ ದಾಖಲೆಯನ್ನು ಸರ್ಕಾರ ನೀಡಿದೆ. ಎಸ್​ಸಿಎಸ್​ಪಿ-ಟಿಎಸ್​ಪಿ ಯೋಜನೆಗೆ ​2024-25 ರಲ್ಲಿ 42 ಕೋಟಿ ರೂ. ಮೀಸಲು ಇಡಲಾಗಿತ್ತು. ಇದರಲ್ಲಿ 14282 ಕೋಟಿ ರೂ. ಗ್ಯಾರಂಟಿಗೆ ಮೀಸಲು. ಇದರಲ್ಲಿ 9797 ಕೋಟಿ ರೂ. ಗ್ಯಾರಂಟಿಗೆ ಬಳಕೆ ಮಾಡಲಾಗಿದೆ ಎಂದು ಉತ್ತರ ನೀಡಿದೆ.

ಇದನ್ನೂ ಓದಿ: ದಲಿತರ ಬಗ್ಗೆ ಕಾಳಜಿ ಇದ್ರೆ ರಾಷ್ಟ್ರ ಮಟ್ಟದಲ್ಲಿ SCSP/TSPI ಕಾಯ್ದೆ ಜಾರಿಗೆ ತನ್ನಿ: ಮೋದಿಗೆ ಸಿಎಂ ಸವಾಲ್

ಎಸ್​ಸಿಎಸ್​ಪಿ-ಟಿಎಸ್​ಪಿ ಹಣವನ್ನು ಗ್ಯಾರಂಟಿ ಬಳಸುವ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯಿತು. ಈ ಹಿನ್ನೆಲೆಯಲ್ಲಿ ಪರಿಷತ್​ ಕಲಾಪವನ್ನು ಮತ್ತೆ ಮುಂದೂಡಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Fri, 14 March 25