New Book : ಅಚ್ಚಿಗೂ ಮೊದಲು ; ಎಸ್ತರ್ ಅನಂತಮೂರ್ತಿಯವರ ‘ನೆನಪು ಅನಂತ’ ಸದ್ಯದಲ್ಲೇ ನಿಮ್ಮ ಓದಿಗೆ

U.R. Ananthamurthy : ‘ನಾನು, ನನ್ನ ಅಕ್ಕ ಎಂಥ ಸಂಪ್ರದಾಯಸ್ಥ ವಾತಾವರಣದಲ್ಲಿ ಬೆಳೆಯುತ್ತಿದ್ದೆವೆಂದರೆ ನಮಗೆ ಗರ್ಲ್‌ಫ್ರೆಂಡ್, ಬಾಯ್‌ಫ್ರೆಂಡ್‌ಗಳ ಕಲ್ಪನೆಯೂ ಇರಲಿಲ್ಲ. ಇಂಥ ಸನ್ನಿವೇಶದಲ್ಲಿ ಅನಂತಮೂರ್ತಿಯವರಲ್ಲಿ ಏಕೆ ಒಲವು ಮೂಡಿತು ಎಂಬುದರ ಬಗ್ಗೆ ನನ್ನಲ್ಲಿ ಉತ್ತರವಿರಲಿಲ್ಲ. ಅವರ ಸುಂದರವಾದ ನಿಲುವು ಮಾತ್ರವಲ್ಲ, ಪ್ರಗತಿಪರವಾದ ವಿಚಾರಪ್ರಜ್ಞೆ ನನ್ನ ಅಂತರಂಗವನ್ನು ತಟ್ಟಿರಬೇಕು!’ ಎಸ್ತರ್ ಅನಂತಮೂರ್ತಿ

New Book : ಅಚ್ಚಿಗೂ ಮೊದಲು ; ಎಸ್ತರ್ ಅನಂತಮೂರ್ತಿಯವರ ‘ನೆನಪು ಅನಂತ’ ಸದ್ಯದಲ್ಲೇ ನಿಮ್ಮ ಓದಿಗೆ
ಎಸ್ತರ್ ಅನಂತಮೂರ್ತಿ
Follow us
|

Updated on:Jan 04, 2022 | 2:45 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ನೆನಪು ಅನಂತ ಎಸ್ತರ್ ಅನಂತಮೂರ್ತಿ ನಿರೂಪಣೆ : ಪೃಥ್ವೀರಾಜ ಕವತ್ತಾರು ಪುಟ : 160  ಬೆಲೆ : ರೂ. 180 ಪ್ರಕಾಶನ : ಅಕ್ಷರ ಪ್ರಕಾಶನ, ಹೆಗ್ಗೋಡು 

*

ಮೇಷ್ಟ್ರು ದಿನವಿಡೀ ನಿರಂತರವಾಗಿ ಹನಿಗಡಿಯದ ವಿಚಾರಧ್ಯಾನದಲ್ಲಿದ್ದವರು. ಸದಾ ಮನೆ ತುಂಬಾ ಭೇಟಿಗೆ ಬರುವ ಜನ, ಮಾತು ಚರ್ಚೆಗಳೇ ತುಂಬಿದ್ದರೂ ಗಂಭೀರ ವಿಚಾರಗಳಾಚೆ ಒಂದು ಕ್ಷಣವೂ ಅವರು ಸಮಯ ಕಳೆದವರಲ್ಲ. ಮೇಡಂ ಇಲ್ಲಿ ಬರೆದುಕೊಂಡಂತೆ ಅವರು ಎಲ್ಲರಂತೆ ಒಬ್ಬ ಗೃಹಿಣಿ. ಪ್ರೀತಿಸಿ ಮದುವೆಯಾದ ಅವರಿಗೂ ಇಂತಹ ಜೀನಿಯಸ್ ಬರಹಗಾರ ಪತಿಯೊಡನೆ ಸಂಸಾರ ನಡೆಸುವುದು ಸರಳ ವಿಚಾರವಲ್ಲ. ಮೇಷ್ಟ್ರು ಸದಾ ಸಮಾನತೆಯ ಬುನಾದಿಯ ಮೇಲೆ ಪ್ರಜಾಪ್ರಭುತ್ವದ ಆದರ್ಶ ಸಮಾಜದ ಕನಸುಗಾರರು. ಸಂಸಾರ ಲೌಕಿಕ ಜವಾಬ್ದಾರಿಯನ್ನು ಬೇಡುವ ವಾಸ್ತವ, ಮೇಷ್ಟರೊಡನೆ ಅವರ ಓದು ಬರಹದ ನಿರಂತರ ಧ್ಯಾನಗಳಿಗೆ ತೊಂದರೆ ಆಗದಂತೆ ಕುಟುಂಬವನ್ನು ಬೆಳೆಸಿದ ಜೀವಪ್ರೀತಿಯ ಕಥನವಿದು. ಎಸ್. ಆರ್. ವಿಜಯಶಂಕರ, ವಿಮರ್ಶಕ

ಪ್ರಸಿದ್ಧರ ಪತ್ನಿಯ ಏಳುಬೀಳುಗಳು ಮಾಮೂಲಿ ಕಥನವಾಗದೆ, ಏನೆಂಥ ಹೊತ್ತಿನಲ್ಲೂ ಹೆಣ್ಣಿನ ಆಯ್ಕೆ ಮತ್ತು ಆದ್ಯತೆಗಳು ಕುಟುಂಬವನ್ನು ಉಳಿಸಿ, ಬೆಳೆಸುತ್ತ, ಪೊರೆಯುವುದೇ ಆಗಿರುತ್ತವೆ ಎನ್ನುವುದನ್ನು ಈ ಕಥನ ಹೇಳುತ್ತದೆ. ಆದರೆ, ಇದು ಮಿತಿಯಲ್ಲ, ಇದಕ್ಕೂ ಕೊನೆಯಿಲ್ಲದ ತಾಳ್ಮೆ ಮತ್ತು ಶಕ್ತಿ ಬೇಕು. ಇದರಾಚೆಗೆ ಅನ್ಯೋನ್ಯ ಸಖ್ಯದ ಸಂಭ್ರಮ ಮತ್ತು ಬಿಕ್ಕಟ್ಟುಗಳನ್ನೂ ಇದು ಧ್ವನಿಸುತ್ತದೆ. ಗೃಹಸ್ಥ ಧರ್ಮದ ಗಂಧ ತೇಯುವುದು ಹೆಣ್ಣಿನ ಮೂಲಧರ್ಮ ಎಂದು ಹೇಳಲಾಗುತ್ತದೆ. ಅದು ಕರಾರಲ್ಲ, ಸಾಮಾಜಿಕ ಹೇರುವಿಕೆಯ ಕಾರಣಕ್ಕಾಗಿ ಮಾತ್ರ ನಿಭಾಯಿಸುವಂಥದ್ದಲ್ಲ. ಅದನ್ನು ಹೆಣ್ಣು ತನಗೆ ಬೇಕಾಗಿ, ಕೊನೆಯಿಲ್ಲದ ಪ್ರೀತಿ ಮತ್ತು ತನ್ಮಯತೆಯಲ್ಲಿ ನಿಭಾಯಿಸುತ್ತಾಳೆ. ಅದಕ್ಕೆ ಲೋಕದ ಮನ್ನಣೆ ಈ ಕಾರಣಕ್ಕಾಗಿ ಸಲ್ಲಬೇಕು ಎಂದು ಎಸ್ತರ್ ಅವರ ಈ ನಿರೂಪಣೆ ಹೆಣ್ಣಿನ ಮೆಲುವಾಗಿಯೂ ಗಟ್ಟಿಯಾದ ವಿಶಿಷ್ಟ ಶೈಲಿಯಲ್ಲಿ ಒತ್ತಾಯಿಸುತ್ತದೆ. ಡಾ. ಎಂ. ಎಸ್. ಆಶಾದೇವಿ, ವಿಮರ್ಶಕಿ

*

ಇಂಗ್ಲಿಷ್ ಸರ್ ಎಷ್ಟು ಹ್ಯಾಂಡ್‌ಸಮ್ ಆಗಿದಾರೆ ನೋಡೆ!

ಹೈಸ್ಕೂಲು ದಿನಗಳಲ್ಲಿ ನಾನು ಮುಗ್ಧೆಯೇ. ಆದರೂ ಸಂಗೀತ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಗಿಟ್ಟಿಸುವಷ್ಟು ಚುರುಕಾಗಿದ್ದೆ. ಆಗ ನನಗೆ ಪ್ರಿಯರಾದ ಕನ್ನಡ ಟೀಚರ್ ಒಬ್ಬರಿದ್ದರು. ರಂಗನಾಯಕಮ್ಮ ಎಂದು ಅವರ ಹೆಸರು. ಮತ್ತೊಬ್ಬರು ವಿಜ್ಞಾನದ ಟೀಚರ್ ಕೂಡ ತುಂಬ ಇಷ್ಟವಾಗಿದ್ದರು. ಅವರ ಹೆಸರು ಈಗ ನೆನಪಿಲ್ಲ. ಮುಖ್ಯೋಪಾಧ್ಯಾಯಿನಿಯ ಹೆಸರು ಮಾತ್ರ ಸ್ಪಷ್ಟವಾಗಿ ಗೊತ್ತಿದೆ. ಪಿಚ್‌ಮುತ್ತು ಅಂತ. ಆಗ ಅವರು ಸಹೃದಯ ಮಹಿಳೆಯಾಗಿ ಜನಪ್ರೀತಿ ಗಳಿಸಿದ್ದರು. ಅವರು ಮದುವೆಯಾಗಿರಲಿಲ್ಲವೆಂಬ ಕಾರಣಕ್ಕೆ ಹುಡುಗಿಯರಾದ ನಮಗೆ ಅವರ ಬಗ್ಗೆ ಒಂದು ರೀತಿಯ ಕುತೂಹಲ. ನಾನು ಎಸ್‌ಎಸ್‌ಎಲ್‌ಸಿಯಲ್ಲಿ ಎಲ್ಲ ಪಾಠಗಳಲ್ಲಿ ತೊಂಬತ್ತಕ್ಕಿಂತಲೂ ಅಧಿಕ ಅಂಕ ಗಳಿಸಿ ಉತ್ತೀರ್ಣಳಾದೆ. ಗಣಿತದಲ್ಲಿ ನೂರಕ್ಕೆ ತೊಂಬತ್ತೇಳು ಬಂದಿತ್ತು. ಪಿಚ್‌ಮುತ್ತು ಟೀಚರ್ ನನ್ನನ್ನು ಕರೆದು ತುಂಬ ಪ್ರಶಂಸಿಸಿದರು. ನನಗೆ ಪಿಯುಸಿಗೆ ಸುಲಭದಲ್ಲಿ ಸೀಟು ಸಿಕ್ಕಿತು ಮತ್ತು ಸ್ಕಾಲರ್‌ಶಿಪ್ ಕೂಡಾ ಸಿಕ್ಕಿತು. ನನ್ನ ಹೆತ್ತವರಿಗೆ, ನನಗೆ ಡಾಕ್ಟರ್‌ಳಾಗಬೇಕೆಂಬ ಆಸೆಯಿತ್ತು ತಾನೆ, ಹಾಗಾಗಿ, ನಾನು ಪಿಸಿಎಂ – ವಿಜ್ಞಾನವನ್ನು – ಆಯ್ದುಕೊಂಡೆ.

ಆಗ ಪಿಯುಸಿ ಒಂದೇ ವರ್ಷ ಇತ್ತು. ಆಮೇಲೆ ಅದು ಎರಡು ವರ್ಷಗಳ ಕೋರ್ಸ್ ಆಯಿತು. ಒಂದು ವರ್ಷದ ಪಿಯುಸಿಯಲ್ಲಿ ಕನ್ನಡ ಪಾಠವನ್ನು ಆಸ್ಥೆಯಿಂದ ಕಲಿಸಿದ ಮೇಷ್ಟ್ರು ತಿಪ್ಪೇರುದ್ರಸ್ವಾಮಿ ಅಂತ. ಅವರು ಹಿರಿಯ ಸಾಹಿತಿ ಎಚ್. ಎಂ. ಚೆನ್ನಯ್ಯ ಅವರ ಸಂಬಂಧಿಕರಿರಬೇಕು. ಕಾವ್ಯವನ್ನೂ ಗದ್ಯವನ್ನೂ ಎಷ್ಟೊಂದು ಚೆನ್ನಾಗಿ ವಿವರಿಸುತ್ತಿದ್ದರು. ಮೊದಲ ಬಾರಿಗೆ ಸಾಹಿತ್ಯ ಓದುವ ಒಲವು ಮೂಡಲಾರಂಭಿಸಿದ್ದು ಅವರ ತರಗತಿಯಲ್ಲಿ.

ಇತಿಹಾಸ ಮೇಷ್ಟ್ರು ಶ್ರೀನಿವಾಸಯ್ಯ, ಕನ್ನಡ ಕಲಿಸುವ ಶಿವಬಸವಣ್ಣ ಮತ್ತೊಂದೆಡೆ ಬಾಡಿಗೆ ಮನೆ ಮಾಡಿಕೊಂಡಿದ್ದರು. ಇವರೆಲ್ಲ ಸಂಜೆಯ ಬಿಡುವಿನ ಸಮಯದಲ್ಲಿ ಕೊಠಡಿಯ ಹೊರಗಿನ ವೆರಾಂಡದಲ್ಲಿ ಇಸ್ಪೀಟು ಆಡುತ್ತಿದ್ದ ಚಿತ್ರ ಇನ್ನೂ ನನ್ನ ಮನಸ್ಸಿನಲ್ಲಿದೆ. ನಾವ್ಯಾರಾದರೂ ಸ್ಟೂಡೆಂಟ್‌ಗಳು ಹೋದರೆ ಎದ್ದು ಒಳಗೆ ಹೋಗುತ್ತಿದ್ದರು.

ಅವರ ಜೊತೆಗೆ ಅನಂತಮೂರ್ತಿ ಮೇಷ್ಟ್ರು ಕೂಡ ಇರುತ್ತಿದ್ದರು.

ಅದೊಂದು ದಿನ ಪಿಯುಸಿ ಕ್ಲಾಸ್‌ನಲ್ಲಿ ಒಂದು ಪೀರಿಯಡ್‌ನಿಂದ ಮತ್ತೊಂದಕ್ಕೆ ದಾಟುವ ಬಿಡುವು. ಮೇಷ್ಟ್ರು ತರಗತಿಯಿಂದ ಹೊರಹೋದ ಕೂಡಲೇ ಆರಂಭವಾಗುವ ಗುಲ್ಲು ಮತ್ತೆ ನಿಲ್ಲುವುದು ಮತ್ತೊಬ್ಬ ಮೇಷ್ಟ್ರ ಆಗಮನದ ಬಳಿಕ. ದುಂಡಗಿನ ಮುಖ, ಕುರುಚಲು ಗಡ್ಡ, ಆತ್ಮವಿಶ್ವಾಸದೊಂದಿಗಿನ ಗಾಂಭೀರ್ಯದ ಅವರು ಕ್ಲಾಸ್‌ನೊಳಗೆ ಅಡಿಯಿಟ್ಟದ್ದೇ ನಾವೆಲ್ಲ ಮೌನಿಗಳಾದೆವು. ನೀಟಾಗಿ ಡ್ರೆಸ್ ಮಾಡ್ಕೊಂಡು, ಸೂಟು ಹಾಕ್ಕೊಂಡು ಬಂದಿದ್ದ ಅವರು ತಮ್ಮನ್ನು ತಾವು ‘ಅನಂತಮೂರ್ತಿ’ ಎಂದು ಪರಿಚಯಿಸಿಕೊಂಡರು. ನನ್ನ ಗೆಳತಿ ಉಷಾ ನನ್ನನ್ನು ಮೊಣಕೈಯಿಂದ ತಿವಿದು, ‘ಇಂಗ್ಲಿಸ್ ಸರ್ ಎಷ್ಟು ಹ್ಯಾಂಡ್‌ಸಮ್ ಆಗಿದಾರೆ ನೋಡೆ!’ ಎಂದಿದ್ದಳು. ನಾನು ಸುಮ್ಮನೆ ನಕ್ಕಿದ್ದೆ.

ಆಗಷ್ಟೇ 10ನೇ ತರಗತಿ ಓದಿ ಬಂದವರಲ್ಲವೆ ನಾವು. ನಮಗೆ ಅನಂತಮೂರ್ತಿಯವರ ಹೊಸಬಗೆಯ ಪಾಠಕ್ರಮ ಕುತೂಹಲಕರವಾಗಿತ್ತು. ಒಮ್ಮೆ ವಿಲಿಯಂ ಬ್ಲೇಕ್‌ನ ಪದ್ಯವನ್ನು ಅವರು ವಿವರಿಸುತ್ತಿದ್ದರು.

Tiger Tiger burning bright

In the forests of the night

ಅವರು ಪದ್ಯವನ್ನು ಬಗೆಯುತ್ತಿದ್ದ ಬಗೆಯನ್ನು ನಾವೆಲ್ಲ ಮಂತ್ರಮುಗ್ಧರಾಗಿ ನೋಡುತ್ತಿದ್ದೆವು. ಪ್ಲ್ಯಾಟ್​ಫಾರ್ಮ್ ಮೇಲೆ ಅತ್ತಿತ್ತ ಓಡಾಡುತ್ತ, ಪ್ರತಿಯೊಬ್ಬನ ಮುಖವನ್ನು ದಿಟ್ಟಿಸಿ ನೋಡುತ್ತ ಎಲ್ಲರಿಗೂ ಮನದಟ್ಟಾಗುವಂತೆ ಪಾಠ ಮಾಡೋರು. ಮತ್ತೊಮ್ಮೆ ವಿಲಿಯಂ ಷೇಕ್ಸ್‌ಪಿಯರನ ಟೆಂಪೆಸ್ಟ್ ನಾಟಕವನ್ನು ವಿವರಿಸಿದ ರೀತಿ ನನಗೀಗಲೂ ಚೆನ್ನಾಗಿ ನೆನಪಿದೆ.

ವಿಲಿಯಂ ವರ್ಡ್ಸ್‌ವರ್ತ್ ಅವರಿಗೆ ಪ್ರಿಯನಾದ ಕವಿ. ಅವನ,

I wandered lonely as a cloud

That floats on high o’er vales and hills

ಎಷ್ಟೊಂದು ಭಾವಪೂರ್ಣವಾಗಿ ವಿವರಿಸುತ್ತಿದ್ದರು.

And then my heart with pleasure fills.

And dances with the daffodills

ಎಂದು ಮುಕ್ತಾಯವಾಗುತ್ತದೆ ಈ ಪದ್ಯ. ಮುಂದೊಮ್ಮೆ ನಾವು ಇಂಗ್ಲೆಂಡ್‌ಗೆ ಹೋದಾಗ daffodills ಅನ್ನು ತೋರಿಸಿ, ‘ನಾನವತ್ತು ಪಾಠ ಮಾಡಿದ್ದು ನೆನಪಿದೆಯಾ?’ ಎಂದು ಹೇಳಿ ಕಾಲೇಜು ದಿನಗಳನ್ನು ನೆನಪಿಸಿದ್ದರು.

ಅವರ ಪಾಠ ಕೇಳುತ್ತ ಕೇಳುತ್ತ ನನಗರಿವಿಲ್ಲದಂತೆಯೇ ಅವರತ್ತ ಆಕರ್ಷಿಸಲ್ಪಟ್ಟಿದ್ದೆ.

Acchigoo Modhalu excerpt of Nenapu Anantha by Esther Ananthamurthy narrated by Prithviraj Kavattaru Published by Akshara Prakashana

ಯು. ಆರ್. ಅನಂತಮೂರ್ತಿ ಮತ್ತು ಎಸ್ತರ್

ನಿಜವಾಗಿ ಹೇಳಬೇಕೆಂದರೆ, ನನ್ನ ಮನೆ, ನಾನು ಬೆಳೆದ ಪರಿಸರ ಎಲ್ಲದರ ಪ್ರಭಾವದಿಂದ ಅಮಾಯಕ ಹುಡುಗಿಯಾಗಿ ಬೆಳೆಯುತ್ತಿದ್ದೆ. ನಮ್ಮ ಮನೆಯಲ್ಲಿ ಎಲ್ಲರೂ ಅವರವರ ಕೆಲಸದಲ್ಲಿ ತೊಡಗಿರುವುದರಿಂದ ಅಲ್ಲಿ ನನ್ನ ಭಾವನೆಯನ್ನು ತೋಡಿಕೊಳ್ಳಲು ಅವಕಾಶವಿರಲಿಲ್ಲ. ನಾನು, ನನ್ನ ಅಕ್ಕ ಎಂಥ ಸಂಪ್ರದಾಯಸ್ಥ ವಾತಾವರಣದಲ್ಲಿ ಬೆಳೆಯುತ್ತಿದ್ದೆವೆಂದರೆ ನಮಗೆ ಗರ್ಲ್‌ಫ್ರೆಂಡ್, ಬಾಯ್‌ಫ್ರೆಂಡ್‌ಗಳ ಕಲ್ಪನೆಯೂ ಇರಲಿಲ್ಲ. ಕಾಲೇಜಿನಲ್ಲಿಯೂ ನನಗೆ ಬಹಳ ಆಪ್ತರು ಯಾರೂ ಇರಲಿಲ್ಲ. ಇಂಥ ಸನ್ನಿವೇಶದಲ್ಲಿ ಅನಂತಮೂರ್ತಿಯವರಲ್ಲಿ ಏಕೆ ಒಲವು ಮೂಡಿತು ಎಂಬುದರ ಬಗ್ಗೆ ನನ್ನಲ್ಲಿ ಉತ್ತರವಿರಲಿಲ್ಲ. ಅವರ ಸುಂದರವಾದ ನಿಲುವು ಮಾತ್ರವಲ್ಲ, ಪ್ರಗತಿಪರವಾದ ವಿಚಾರಪ್ರಜ್ಞೆ ನನ್ನ ಅಂತರಂಗವನ್ನು ತಟ್ಟಿರಬೇಕು!

ಹೊಸದಾಗಿ ಬಂದಿದ್ದ ಅನಂತಮೂರ್ತಿ ಮೇಷ್ಟ್ರಿಗೆ ತಾನು ಹೇಗೆ ಪಾಠ ಮಾಡುತ್ತೇನೆ, ತನ್ನನ್ನು ವಿದ್ಯಾರ್ಥಿಗಳು ಹೇಗೆ ಭಾವಿಸುತ್ತಾರೆ ಎಂದು ತಿಳಿದುಕೊಳ್ಳುವ ತವಕ. ‘ನನ್ನ ಪಾಠ ಬೋಧನ ಕ್ರಮವನ್ನು ವಿಮರ್ಶಿಸಿ ಒಂದು ಟಿಪ್ಪಣಿ ಬರೆಯಿರಿ’ ಎಂದೊಮ್ಮೆ ಹೇಳಿದರು. ಆಗ ನಾನು ಅವರ ಬೋಧನೆಯ ವೈಖರಿಯನ್ನು, ಹಾವಭಾವವನ್ನು ವಿಮರ್ಶಿಸಿ ಮೆಚ್ಚುಗೆ ಮಾತುಗಳೊಂದಿಗೆ ವಿವರವಾಗಿ ಬರೆದಿದ್ದೆ. ಎಲ್ಲರ ಬರಹಗಳು ಓದಿದ್ದ ಬಳಿಕ ನನ್ನ ಪತ್ರವನ್ನು ವಿಶೇಷವಾಗಿ ಗಮನಿಸಿ ಅನಂತಮೂರ್ತಿ, ‘ಯಾರು ಬರೆದದ್ದು, ಇದು?’ ಎಂದು ಕೇಳಿದರು. ನಾನು ಕೈ ಎತ್ತಿದೆ. ‘ಚೆನ್ನಾಗಿದೆ’ ಎಂದು ನನ್ನತ್ತ ನೋಡಿ ನಕ್ಕರು.

ಕೆಲವೊಮ್ಮೆ ಟ್ಯೂಶನ್ ಕಾರಣದಿಂದ ಇನ್ನು ಕೆಲವೊಮ್ಮೆ ಕಾರಣವೇ ಇಲ್ಲದೆ ಅವರನ್ನು ಭೇಟಿಯಾಗಲು ನನ್ನ ಮನಸ್ಸು ತವಕಿಸುತ್ತಿತ್ತು. ನಾನು ಅವರಿಗೆ ಪತ್ರ ಬರೆಯುವುದು, ಅವರು ನನಗೆ ಉತ್ತರಿಸುವುದು ಆರಂಭವಾಯಿತು.

ಈ ಪುಸ್ತಕ ಇಲ್ಲಿ ಲಭ್ಯ : MyLang ಅಕ್ಷರ ಪ್ರಕಾಶನ

*

ಅನಂತಮೂರ್ತಿಯವರ ಆತ್ಮಕಥನದಿಂದ : U. R. Ananthamurthy Birthday : ವಿನೋಬಾ ಭಾವೆಯವರ ‘ಓಂ ಹರಿ-ನೋ ಹರಿ-ನೋ ವರಿ’ ಮಂತ್ರ

ಇದನ್ನೂ ಓದಿ : Ayyappa : ಅಭಿಜ್ಞಾನ ; ಯು. ಆರ್. ಅನಂತಮೂರ್ತಿಯವರ ‘ರಾಮು ಮತ್ತು ಅಯ್ಯಪ್ಪ ವ್ರತ’

Published On - 11:02 am, Tue, 4 January 22