Literature : ಅಭಿಜ್ಞಾನ ; ಮಗಳಿಗೆ ‘ಲೈಲಾ’ ಎಂದಿಟ್ಟರು, ಮಗನಿಗೆ ‘ಷಹಜಹಾನ್’ ಅಂತಿಡಬೇಕು ಅನ್ನೋ ಆಸೆ ರಾಯರಿಗೆ

A. N. Krishna Rao : ‘ಕಷ್ಟಗಳ ಅರಿವೇ ಇಲ್ಲದ ಹದಿನಾಲ್ಕರ ಹರೆಯದ ಆ ಮುಗ್ಧೆ ಡಾಕ್ಟರಾಗಬೇಕು, ತುಂಬಾ ಪುಸ್ತಕಗಳನ್ನು ಓದಬೇಕು ಎಂದು ಹಂಬಲಿಸಿದ್ದಳು. ಕೃಷ್ಣರಾಯರ ಮೋಹಕ ರೂಪಕ್ಕೆ, ಮಾತುಗಾರಿಕೆಗೆ ಮರುಳಾಗಿದ್ದಳು. ಕೃಷ್ಣರಾಯರಷ್ಟೇ ಭಾವುಕಳಾಗಿದ್ದ ಅವಳು, ‘ನೀವು ನನಗೇನು ಕೊಡದಿದ್ದರೂ ಪರವಾಗಿಲ್ಲ... ನಿಮ್ಮರ್ಧ ಪಂಚೆ ಉಟ್ಕೊಂಡು ನಾನು ಜೀವನ ಮಾಡಬಲ್ಲೆ’ ಎಂದಳು.

Literature : ಅಭಿಜ್ಞಾನ ; ಮಗಳಿಗೆ ‘ಲೈಲಾ’ ಎಂದಿಟ್ಟರು, ಮಗನಿಗೆ ‘ಷಹಜಹಾನ್’ ಅಂತಿಡಬೇಕು ಅನ್ನೋ ಆಸೆ ರಾಯರಿಗೆ
ಸಾಹಿತಿ ಅ. ನ. ಕೃಷ್ಣರಾಯರು
Follow us
|

Updated on:Jan 04, 2022 | 9:36 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

* ಡಾ. ಎಸ್. ವಿದ್ಯಾಶಂಕರ ಬರೆದ ‘ಅನಕೃ-ಬದುಕು ಬರಹ’ ದಿಂದ.

*

ಅನಕೃ ಅವರ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ನಡೆಯಿತು. ಅಂದು ರಾತ್ರಿ ಅವರು ತಮ್ಮ ಭಾವೀಪತ್ನಿಯನ್ನು ತಮ್ಮ ಮುಂದೆ ಕೂಡಿಸಿಕೊಂಡು ಬೆಳಗಿನ ಜಾವದವರೆವಿಗೂ ಹಾಡು ಹೇಳಿಸಿ, ಕೇಳಿ ಸಂತೋಷಪಟ್ಟರು. ಅವರು ನೋವು ತುಂಬಿದ ದನಿಯಲ್ಲಿ ಆ ದಿನ ತಮ್ಮ ಕೈಹಿಡಿಯುವವಳನ್ನು, ‘ನಂದು ಏರುಪೇರು ಬದುಕು. ನಿಶ್ಚಿತವಾದ ಆದಾಯವಿಲ್ಲ, ಮುಳ್ಳಿನ ಹಾದೀಲೇ ನಡೀಬೇಕು. ಇದಕ್ಕೆ ನಿನ್ನ ಒಪ್ಪಿಗೆಯಿದೆಯೇ’ ಎಂದು ಕೇಳಿದ್ದರು.

ಅನಕೃರವರಿಗೆ ಆಗ 24ರ ಹರೆಯ. ಹುಡುಗತನದ ಎಳಸು ಪ್ರಶ್ನೆ ಕೇಳಿರಲಿಲ್ಲ ಪ್ರಬುದ್ಧತೆ ಓದಿನಿಂದ ದೊರೆತಿದ್ದರಿಂದ ಬಾಳಸಂಗಾತಿಯಾಗುವವಳ ಜೊತೆ ಆ ಪ್ರಶ್ನೆ ಕೇಳಿದ್ದರು. ಕಷ್ಟಗಳ ಅರಿವೇ ಇಲ್ಲದ ಹದಿನಾಲ್ಕರ ಹರೆಯದ ಆ ಮುಗ್ಧ ಹೆಣ್ಣು ಏನು ತಾನೇ ಹೇಳಿಯಾಳು. ಕನಸುಗಾಣುವ ವಯಸ್ಸಿನ ಆ ತರುಣಿ ಡಾಕ್ಟರಾಗಬೇಕು, ತುಂಬಾ ಪುಸ್ತಕಗಳನ್ನು ಓದಬೇಕು ಎಂದು ಹಂಬಲಿಸಿದ್ದಳು. ಕೃಷ್ಣರಾಯರ ಮೋಹಕ ರೂಪಕ್ಕೆ, ಮಾತುಗಾರಿಕೆಗೆ ಮರುಳಾಗಿದ್ದಳು. ಕೃಷ್ಣರಾಯರಷ್ಟೇ ಭಾವುಕಳಾಗಿದ್ದ ಅವಳು ‘ನೀವು ನನಗೇನು ಕೊಡದಿದ್ದರೂ ಪರವಾಗಿಲ್ಲ… ನಿಮ್ಮರ್ಧ ಪಂಚೆ ಉಟ್ಕೊಂಡು ನಾನು ಜೀವನ ಮಾಡಬಲ್ಲೆ’ ಎಂದಳು.

ನರಸಿಂಗರಾಯರು ಬೆಂಗಳೂರಿನಲ್ಲಿನ ತಮ್ಮ ಮನೆಯಲ್ಲಿಯೇ ಮದುವೆ ನಡೆಯಬೇಕೆಂದು ಬೀಗರನ್ನು ಒತ್ತಾಯಿಸಿ ಒಪ್ಪಿಸಿದರು. 1932ರ ಅಕ್ಟೋಬರ್ 26ರಂದು ವಿಶಾಲಾಕ್ಷಿ ಅನಕೃರವರ ಕೈಹಿಡಿದಳು, ದಾಂಪತ್ಯ ಜೀವನಕ್ಕೆ ಪದಾರ್ಪಣ ಮಾಡಿದಳು. ಮದುವೆ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಮದುವೆಗೆ ಆಗಿನ ಸಂಪ್ರದಾಯದಂತೆ ಪ್ರಸಿದ್ಧ ನೃತ್ಯಗಾರ್ತಿಯೊಬ್ಬರನ್ನು ಕರೆಯಿಸಿದ್ದರು. ಅವರಿಂದ ಒಳ್ಳೆಯ ನೃತ್ಯ ಕಾರ್ಯಕ್ರಮ ನಡೆಯಿತು. ಸಂಜೆ ಬಿ. ಎಸ್. ರಾಜೈಯ್ಯಂಗಾರ್‌ರವರಿಂದ ಸುಶ್ರಾವ್ಯವಾದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮದುವೆಯಾದ ಮೇಲೆ ವಿಶಾಲಾಕ್ಷಿಅನಕೃರವರ ಮನೆ-ಮನ ತುಂಬಿದ್ದರು. ಆಗಲೇ ವಿಶಾಲಾಕ್ಷಿ ವಸಂತಾದೇವಿ ಆದದ್ದು, ವಸಂತಾದೇವಿಯವರು ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಿದ ಆ ಮಧುರ ನೆನಪುಗಳನ್ನು ಹೀಗೆ ಮೆಲುಕು ಹಾಕುವರು: ‘ಮದುವೆಯಾದ ಹೊಸದರಲ್ಲಿ ರಂಗಿನ ಬದುಕು, ಮೋಜಿನ ಜೀವನ. ಮಧ್ಯಾಹ್ನ ಊಟವಾದ ನಂತರ ನಾನು ಕೋಣೆಯಲ್ಲಿ ಪಿಟೀಲು ನುಡಿಸುತ್ತಾ ಕೂರುವುದು. ರಾಯರು ಅಂಗಾತವಾಗಿ ಮಲಗಿ ಅದನ್ನು ಆಲಿಸುತ್ತಾ ಸುಖಪಡುವುದು. ಮುಂದೆ ನಮಗೆ ಆರು ಮಕ್ಕಳಾದವು. ಎರಡು ಸತ್ತವು. ಹಿರಿಯ ಮಗಳಿಗೆ ರಾಯರು ‘ಲೈಲಾ’ ಅಂತ ಹೆಸರಿಟ್ಟರು. ಮಗನಿಗೆ ‘ಷಹಜಹಾನ್’ ಅಂತ ಇಡಬೇಕು ಅನ್ನೋ ಆಸೆ ಅವರಿಗೆ. ಆಗ ನಾವು ಎಂಥ ಕನಸಿನ ರಾಜ್ಯದಲ್ಲಿ ಇದ್ದೆವೆಂದರೆ ಹೆಸರುಗಳೂ ಮತವನ್ನು ಸೂಚಿಸಬಲ್ಲವು ಅನ್ನೋ ಕಲ್ಪನೇನೂ ಇರಲಿಲ್ಲ.’

ನರಸಿಂಗರಾಯರಿಗೆ ಇಬ್ಬರು ಗಂಡುಮಕ್ಕಳಲ್ಲಿ ಮೊದಲನೆಯವರು ರಾಮರಾಯರು, ವೃತ್ತಿಯಲ್ಲಿ ವಕೀಲರು, ತಕ್ಕಮಟ್ಟಿಗೆ ಗಳಿಸುತ್ತಲಿದ್ದರು. ಕಿರಿಯಮಗ ಅನಕೃ, ಮದುವೆಯಾದ ಮೇಲೂ ಗಳಿಸದೆ ತಿರುಗಲುತಿಪ್ಪನಾಗಿ ಸಂಸಾರದ ಜವಾಬ್ದಾರಿಯನ್ನು ತಂದೆಗೂ ಅಣ್ಣನಿಗೂ ವಹಿಸಿ ನಿರುಂಬಳರಾಗಿರುತ್ತಿದ್ದರು. ತಮ್ಮನ ಬೇಜವಾಬ್ದಾರಿ ಕಂಡು ರಾಮರಾಯರು ಒಂದೊಮ್ಮೆ ಮನೆಯಲ್ಲಿ ರಂಪಮಾಡಿ ಶಾಂತಿ ಕದಡಿಬಿಡುತ್ತಿದ್ದರು. ಅದರ ಬಿಸಿ ಅನಕೃ ಅವರಿಗೆ ತಟ್ಟುತ್ತಿದ್ದರೂ ಸಹಿಸಿಕೊಂಡೇ ಇರುತ್ತಿದ್ದರು. ಮನೆಯ ಕಿರಿಕಿರಿ ಬೇಡವೆಂದು ಅವರು ಸದಾ ಮನೆಯಿಂದ ಹೊರಗೇ ಉಳಿಯುತ್ತಿದ್ದರು. ಅಲ್ಲಿನ ಕೋಪದ ತಾಪ ಅವರಿಗೆ ತಾಗುತ್ತಿರಲಿಲ್ಲ, ಅದು ತಾಗುತ್ತಿದ್ದುದು ವಸಂತಾದೇವಿಯವರನ್ನು ಮನೆಯಲ್ಲಿ ಯಾವಾಗಲೂ ಬಿಗಡಾಯಿಸಿದ ವಾತಾವರಣ.

Ahhijnana anecdote from Anakru Baduku Baraha bu S VidyaShankar Published by Priyadarishini Publications

ಡಾ. ಎಸ್. ವಿದ್ಯಾಶಂಕರ

ಅನಕೃ ತಮ್ಮ ಜೀವನವನ್ನು ಸಾಹಿತ್ಯಕ್ಕೆ ಧಾರೆಯೆರೆದುಕೊಂಡವರು. ಬರವಣಿಗೆಯನ್ನೇ ನಂಬಿ ಬದುಕು ನಡೆಸುವುದು ಕಷ್ಟವೆನ್ನುವುದು ಅವರಿಗೆ ತಿಳಿದಿದ್ದಿತು. ಆದರೂ ಅವರು ತಮ್ಮ ಧ್ಯೇಯವನ್ನು ಬಿಡಲಿಲ್ಲ ಬರವಣಿಗೆಯೊಂದನ್ನೇ ನಂಬಿ ಜೀವನ ನಡೆಸಹೊರಟರು. ಅದರಿಂದಾಗಿ ಮನೆಯ ಒಳಗಿನವರು ಕಷ್ಟವನ್ನು ಎದುರಿಸಬೇಕಾಯಿತು. ಇದರ ಜೊತೆಗೆ ಅನಕೃ ತಮ್ಮ ಪ್ರಗತಿಪರ ನಿಲುವುಗಳಿಂದ ಸಾಹಿತ್ಯಲೋಕದಲ್ಲಿ ಶತ್ರು-ಮಿತ್ರರನ್ನು ಸಂಪಾದಿಸಿದ್ದರು. ವಸಂತಾದೇವಿಯವರು ಬರಹಗಾರನ ಪತ್ನಿಯಾಗಿ ಸಂಪ್ರದಾಯಸ್ಥರ ನಂಜನ್ನು ಎದುರಿಸಬೇಕಾಯಿತು.

ಅನಕೃರವರು ಮನೆಯ ಕಷ್ಟ ಸುಖಗಳನ್ನು ಎಂದೂ ವಿಚಾರಿಸಿದವರಲ್ಲ. ತಮ್ಮಲ್ಲಿ ಹಣವಿಲ್ಲದಿದ್ದರೂ ಮನೆಗೆ ಬಂದ ಅತಿಥಿಗಳಿಗೆ ಯಾವ ಕೊರತೆಯೂ ಆಗಕೂಡದು; ಅತಿಥಿಗಳಿಗೆ ಏನನ್ನೂ ಅನ್ನಕೂಡದು. ಈ ಸಂದಿಗ್ಧದಲ್ಲಿ ನೊಂದವರು ನರಸಿಂಗರಾಯರು ಹಾಗೂ ವಸಂತಾದೇವಿ. ಹೊರಗಿನಿಂದ ಭಾಷಣಕ್ಕೆ ಕರೆ ಬಂದಾಗ ನಿಂತ ನಿಲುವಿನಲ್ಲಿಯೇ ಅನಕೃ ಹೊರಟುಬಿಡುತ್ತಿದ್ದರು. ಅವರು ಹೆಂಡತಿಗೆ ಹೇಳುತ್ತಿದ್ದರು ‘ನರಸಿಂಗರಾವ್ (ತಂದೆ) ಹತ್ರ ಸ್ವಲ್ಪ ದುಡ್ಡು ಈಸ್ಕೊಡು, ಹೋಲ್ದಾಲ್ ರೆಡಿಮಾಡಿರು’ ಅಂಥ ಒಂದು ಹೃದಯಸ್ಪರ್ಶಿ ಸಂದರ್ಭವನ್ನು ವಸಂತಾದೇವಿಯವರು ಹೀಗೆ ನೆನೆದಿರುವರು; ‘… ಭಾವನವರ ಕೋಪಾನ ಎದುರಿಸಿ ರಾಯರನ್ನ ಡಿಫೆಂಡ್ ಮಾಡ್ಕೊಳೋ ಹೊತ್ತಿಗೆ ನಂಗೆ ಅರ್ಧ ಜೀವವಾಗಿತ್ತು. ಮಾವನಿಗೂ ಸಾಕುಸಾಕಾಯ್ತು. ಮನಸ್ಸಿಗಾದ ವೇದನೆಯಿಂದ ನಾನು ಕೋಣೆಯಲ್ಲಿ ಮಲಗಿ ರೋದಿಸುತ್ತಿದ್ದಾಗ ಮಾವ ಮೊಸರನ್ನವನ್ನು ಬಟ್ಟಲಲ್ಲಿ ಕಲಸಿಕೊಂಡು ಬಂದು ಊಟಮಾಡಬೇಕೆಂದು ಬಲವಂತಮಾಡ್ತಿದ್ರು. ‘ಕಳ್ಳು ಒಣಗುತ್ತೆ ಅಂದ್ರೆ ಎಣ್ಣೆ ಒಣಗುತ್ತೇನಮ್ಮಾ’ ಅಂತ ಸಮಾಧಾನ ಮಾಡ್ತಿದ್ರು. ಮಾವನಿಗೆ ಎರಡು ದಿಕ್ಕುಗಳತ್ತ ತಿರುಗಿದ್ದ ಇಬ್ಬರು ಮಕ್ಕಳನ್ನು ನಿಭಾಯಿಸೋದು ದುಸ್ತರ ಎನ್ನಿಸಿದಾಗ ಮನೇನ ಎರಡು ಭಾಗ ಮಾಡಿ ಇಬ್ಬರಿಗೂ ಹಂಚಿದರು. ಊರಲ್ಲಿ ಒಂದಿಷ್ಟು ಜಮೀನಿತ್ತು. ಮಾವ ಅದರ ಕೆಲಸಕ್ಕಾಗಿ ಅಲ್ಲಿಗೆ ಹೋಗಿದ್ದಾಗ ಅಲ್ಲೇ ಕೊನೆಯುಸಿರೆಳೆದರು. ದೇವರಂಥ ಮಾವ ಹೋದಾಗ ನನ್ನ ಎದೆ ಝಲ್ಲೆಂದಿತು. ಮುಂದಿನ ಜೀವನದ ಬಗ್ಗೆ ನಡುಕ ಹುಟ್ಟಿತ್ತು.’

ಸೌಜನ್ಯ : ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. 9845062549

Published On - 12:03 am, Tue, 4 January 22