ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಹೆಸರಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಮೊಹಮ್ಮದ್ ಸಿರಾಜ್ಗೆ ಸ್ಥಾನ ಲಭಿಸಿಲ್ಲ. ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗಿಲ್ಲ. ಆದರೆ ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಕಳೆದ 2 ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಮೊಹಮ್ಮದ್ ಸಿರಾಜ್.
ಅಂದರೆ ಎರಡು ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. 2022 ರಲ್ಲಿ 24 ವಿಕೆಟ್ ಕಬಳಿಸಿದ್ದ ಸಿರಾಜ್, 2023 ರಲ್ಲಿ 44 ವಿಕೆಟ್ ಉರುಳಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ 2 ವರ್ಷಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.
ಅಷ್ಟೇ ಅಲ್ಲದೆ 2022 ರಿಂದ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವೇಗದ ಬೌಲರ್ಗಳ ಪಟ್ಟಿಯಲ್ಲೂ ಮೊಹಮ್ಮದ್ ಸಿರಾಜ್ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ 42 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಸಿರಾಜ್ ಒಟ್ಟು 71 ವಿಕೆಟ್ ಕಬಳಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿ ವಿಶ್ವದ ಯಾವುದೇ ವೇಗದ ಬೌಲರ್ ಕಳೆದ ಎರಡು ವರ್ಷಗಳಲ್ಲಿ 70 ವಿಕೆಟ್ ಕಬಳಿಸಿಲ್ಲ ಎಂಬುದು ವಿಶೇಷ. ಅಷ್ಟೇ ಅಲ್ಲದೆ ಪ್ರಸ್ತುತ ಏಕದಿನ ಬೌಲರ್ಗಳ ಶ್ರೇಯಾಂಕದಲ್ಲಿ ಸಿರಾಜ್ 8ನೇ ಸ್ಥಾನದಲ್ಲಿದ್ದಾರೆ. ಅಂದರೆ ಸಿರಾಜ್ ಕಳೆದ ಕೆಲ ಸರಣಿಗಳಿಂದ ವಿಕೆಟ್ ಟೇಕರ್ ಆಗಿರುವ ಕಾರಣ ಏಕದಿನ ಶ್ರೇಯಾಂಕದಲ್ಲಿ ಟಾಪ್-10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟ.
ಈ ಎಲ್ಲಾ ಅಂಕಿ ಅಂಶಗಳ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧದ ಸರಣಿಗೆ ಜಸ್ಪ್ರೀತ್ ಬುಮ್ರಾ ಅವರ ಬದಲಿಯಾಗಿ ಆಯ್ಕೆ ಮಾಡಿಕೊಂಡಿದ್ದು ಹರ್ಷಿತ್ ರಾಣಾ ಅವರನ್ನು ಎಂಬುದೇ ಅಚ್ಚರಿ. ಲಿಸ್ಟ್ ಎ ಕ್ರಿಕೆಟ್ನಲ್ಲಿ ಹರ್ಷಿತ್ ಈವರೆಗೆ ಪಡೆದಿರುವ ವಿಕೆಟ್ಗಳ ಒಟ್ಟು ಸಂಖ್ಯೆ ಕೇವಲ 22 ಮಾತ್ರ. ಅಂದರೆ ಮೊಹಮ್ಮದ್ ಸಿರಾಜ್ 2 ವರ್ಷಗಳಲ್ಲಿ ಪಡೆದಿರುವುದಕ್ಕಿಂತಲೂ ಕಡಿಮೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾ ಏಕದಿನ ತಂಡದ ಖಾಯಂ ಸದಸ್ಯರಾಗಿದ್ದ ಮೊಹಮ್ಮದ್ ಸಿರಾಜ್ ಇದೀಗ ಹೊರಬಿದ್ದಿದ್ದಾರೆ. ಅದು ಕೂಡ ಐಸಿಸಿ ಏಕದಿನ ಬೌಲರ್ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವಾಗ ಎಂಬುದೇ ಅಚ್ಚರಿ.
Published On - 10:11 am, Sun, 19 January 25