Odinangala : ವರ್ಷಾಂತ್ಯ ವಿಶೇಷ ; ‘ಇಂಥದೊಂದು ಪುಸ್ತಕ ಕನ್ನಡಕ್ಕೆ ಬೇಕು’ ಎಚ್ಎಸ್​ ರಾಘವೇಂದ್ರ ರಾವ್ ‘ಓದಿನಂಗಳ’ದೊಳಗೆ ಹೇಳುತ್ತಿದ್ದಾರೆ

Bill Bryson : ‘ಬಿಲ್ ಬ್ರೈಸನ್ ಅವರ ಬರವಣಿಗೆಯ ಶೈಲಿ ಈ ಪುಸ್ತಕದ ಇನ್ನೊಂದು ಲಕ್ಷಣ. ಅವರ ಹಾಸ್ಯಪ್ರಜ್ಞೆಯು ಪುಸ್ತಕದ ಓದನ್ನು ಸಂತೋಷದ ಸಂಗತಿಯಾಗಿ ಮಾಡಿದೆ. ಕನ್ನಡದ ಎಂ. ಶಿವರಾಂ, ಬಿ.ಜಿ.ಎಲ್. ಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಮುಂತಾದವರನ್ನು ಇಂಗ್ಲಿಷಿನಲ್ಲಿ ಓದುತ್ತಿರುವಂತೆ ಭಾಸವಾಗುವ ಬರವಣಿಗೆ ಇಲ್ಲಿನದು.’ ಡಾ. ಎಚ್. ಎಸ್. ರಾಘವೇಂದ್ರ ರಾವ್

Odinangala : ವರ್ಷಾಂತ್ಯ ವಿಶೇಷ ; ‘ಇಂಥದೊಂದು ಪುಸ್ತಕ ಕನ್ನಡಕ್ಕೆ ಬೇಕು’ ಎಚ್ಎಸ್​ ರಾಘವೇಂದ್ರ ರಾವ್ ‘ಓದಿನಂಗಳ’ದೊಳಗೆ ಹೇಳುತ್ತಿದ್ದಾರೆ
ವಿಮರ್ಶಕ ಡಾ. ಎಚ್. ಎಸ್. ರಾಘವೇಂದ್ರ ರಾವ್ ಮತ್ತು ಅಮೆರಿಕದ ಲೇಖಕ ಬಿಲ್ ಬ್ರೈಸನ್
Follow us
ಶ್ರೀದೇವಿ ಕಳಸದ
|

Updated on:Jan 01, 2022 | 2:11 PM

Kannada Literature | ಓದಿನಂಗಳ 2021 : ಅಂತರಂಗದಿಂದ ಬಹಿರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ನಮ್ಮನ್ನು ನಾವು ನೇಯ್ದುಕೊಳ್ಳಲು ಇರುವ ಹಲವಾರು ಆತ್ಮಾವಲೋಕನದ ಮಾರ್ಗಗಳಲ್ಲಿ ಸಾಹಿತ್ಯವೂ ಒಂದು. ಒಮ್ಮೆ ಈ ‘ರುಚಿ’ಗೆ ಬಿದ್ದರೆ ಮುಗಿಯಿತು. ಪುಸ್ತಕಗಳೇ ನಮ್ಮನೆ ದೇವರು ಎಂದು ಜೀವಿಸುತ್ತಿರುವ ಅಸಂಖ್ಯಾತ ಮನಸ್ಸುಗಳೊಂದಿಗೆ ನಾವು ನಮಗರಿವಿಲ್ಲದೆಯೇ ಬೆಸೆದುಕೊಳ್ಳುತ್ತಾ ಹೋಗುತ್ತೇವೆ. ಎಂಥಾ ದೊಡ್ಡ ಜಾತ್ರೆಯಲ್ಲಿ, ಥರಾವರಿ ಆಟಿಕೆಗಳಲ್ಲಿ ಮಗು ಮನಸ್ಸು ನೆಡುವುದು ಒಂದೇ ಒಂದು ಆಟಿಕೆಯಲ್ಲಿ ಮಾತ್ರ. ಅದೇ ಆಟಿಕೆ ಯಾಕೆ, ಎಂಬ ಪ್ರಶ್ನೆಗೆ ಉತ್ತರವಿದೆಯೇ?; ಹೊಸ ವರ್ಷದ ಹೊಸ್ತಿಲೊಳಗೆ ನಿಂತು ಹಿಂದಿರುಗಿ ನೋಡಿದರೆ, ಈ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಸಾಹಿತ್ಯ ಕೃತಿಗಳ ಪ್ರಕಟಣೆ ವಿಪುಲ. ಅಂತೆಯೇ ಕನ್ನಡದ ಕೆಲ ವಿಮರ್ಶಕರಿಗೆ, ಈ ವರ್ಷ ನೀವು ಓದಿದ ಪುಸ್ತಕಗಳ ಪೈಕಿ ಯಾವುದೇ ಭಾಷೆಯ, ಯಾವುದೇ ಪ್ರಕಾರದ, ಯಾವುದೇ ವರ್ಷ ಪ್ರಕಟವಾದ ನಿಮಗಿಷ್ಟವಾದ ಒಂದು ಕೃತಿಯ ಬಗ್ಗೆ ನಿಮ್ಮ ಒಳನೋಟಗಳನ್ನು ಕಟ್ಟಿಕೊಡಬಹುದೆ? ಎಂದು ವಿನಂತಿಸಿಕೊಳ್ಳಲಾಯಿತು. ಅವರು ಬರೆದು ಕಳಿಸಿದ್ದು ನಿಮ್ಮ ಓದಿಗೆ. ಒಪ್ಪಿಸಿಕೊಳ್ಳಿ. 

* ಕೃತಿ : The Body; A Guide ‍For Occupants ಲೇಖಕರು : Bill Bryson ಪುಟ : 532 ಬೆಲೆ : Rs. 599 ಪ್ರಕಾಶನ : Penguin Random House

* ವಿಮರ್ಶಕ ಡಾ. ಎಚ್. ಎಸ್. ರಾಘವೇಂದ್ರ ರಾವ್ ಸಾಹಿತ್ಯೇತರ ಕೃತಿ The Body; A Guide For Occupants ಬಗ್ಗೆ.

*

ಈ ವರ್ಷ ಕನ್ನಡದಲ್ಲಿ ಬಂದ ಹತ್ತು ಹಲವು ಮುಖ್ಯವಾದ ಪುಸ್ತಕಗಳನ್ನು, ಅದರಲ್ಲೂ ನನ್ನ ನಂತರದ ಪೀಳಿಗೆಗಳ ಲೇಖಕಿ-ಲೇಖಕರು ಬರೆದವನ್ನು ಓದಿ ನಾನು ಬಹಳ ಸಂತೋಷ ಪಟ್ಟಿದ್ದೇನೆ. ಆದರೂ, ಇಲ್ಲಿ ನಾವೆಲ್ಲರೂ ಓದಲೇ ಬೇಕಾದ ಇಂಗ್ಲಿಷ್ ಪುಸ್ತಕವೊಂದನ್ನು ಕುರಿತು ಬರೆಯುತ್ತಿದ್ದೇನೆ. ಅದರ ಹೆಸರು, The Body: A Guide ‍For Occupants’. ಬರೆದವರು ಪ್ರಸಿದ್ಧ ಲೇಖಕರಾದ ಬಿಲ್ ಬ್ರೈಸನ್. ಪೆಂಗ್ವಿನ್-ರ್ಯಾಂಡಮ್ ಹೌಸ್ ಪ್ರಕಟಣೆ. ಇದು ನನ್ನ ಮಗ ಮನು ನನಗೆ ಪರಿಚಯ ಮಾಡಿಕೊಟ್ಟ ಪುಸ್ತಕ. ನಾನೂ ಇದನ್ನು ತರಿಸಿಕೊಂಡು ಓದಿದೆ. ಇಂಥದು ಕನ್ನಡದಲ್ಲಿ ಇಲ್ಲವಲ್ಲಾ ಎಂಬ ವಿಷಾದ ನನ್ನನ್ನು ಕಾಡಿತು.

ಬಿಲ್ ಬ್ರೈಸನ್ ಹಲವು ಕಾಲದಿಂದ ‘ತಿಳಿವಳಿಕೆ’ಯ ಬಗೆಗಿನ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವ ಪುಸ್ತಕಗಳನ್ನು ಬರೆದು, ‘ಜ್ಞಾನ-ವಿಜ್ಞಾನ’ ಮತ್ತು ನಮ್ಮಂತಹ ಜನಸಾಮಾನ್ಯರ ನಡುವೆ ಸಂವಹನದ ಸೇತುವೆ ಕಟ್ಟಿದ್ದಾರೆ. ಅವರ ‘A Short History of Almost Everything’ ಎಂಬ ಪುಸ್ತಕವು ದೇಶ, ಕಾಲಗಳ ನಡುವೆ ಚಲಿಸುತ್ತಾ ಇಡೀ ವಿಶ್ವವನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಕೀಲಿಕೈಗಳನ್ನು ಕೊಡಲು ಪ್ರಯತ್ನಿಸುತ್ತದೆ. 2019 ರಲ್ಲಿ ಪ್ರಕಟವಾದ, ಪ್ರಸ್ತುತ ಪುಸ್ತಕವು ಮನುಷ್ಯರ ಒಡಲೆಂಬ ವಿಸ್ಮಯವನ್ನು ನಮಗೆ ಪರಿಚಯ ಮಾಡಿಕೊಡುವ ಕೆಲಸವನ್ನು ಬಹಳ ಆಕರ್ಷಕವಾಗಿ, ಅಧಿಕೃತವಾಗಿ ಮತ್ತು ಸರಳವಾಗಿ ನಿರ್ವಹಿಸಿದೆ. ಅದ್ಭುತವಾದ ಈ ಜೀವಂತ  ಯಂತ್ರದ ಬೇರೆ ಬೇರೆ ಭಾಗಗಳ ರಚನೆಯನ್ನು, ಅಲ್ಲಿ ಎಡೆಬಿಡದೆ ನಡೆಯುತ್ತಿರುವ ವಿದ್ಯಮಾನಗಳನ್ನು ಸಾವಿರಾರು ವಿವರಗಳೊಂದಿಗೆ ನಿರೂಪಿಸಲಾಗಿದೆ. ಇಪ್ಪತ್ಮೂರು ಅಧ್ಯಾಯಗಳಲ್ಲಿ, ಐನೂರಕ್ಕೂ ಹೆಚ್ಚು ಪುಟಗಳಲ್ಲಿ ಹರಡಿಕೊಂಡಿರುವ ‘ಶರೀರ ಗಾಥೆಯು’ ಇಂಥ ತಿಳಿವಳಿಕೆಯನ್ನು ಅನಾವರಣ ಮಾಡಿದ ವಿಜ್ಞಾನಿಗಳ ಸಂಶೋಧನೆಯ ಮೈನವಿರೇಳಿಸುವ ಇತಿಹಾಸವೂ ಆಗಿದೆ. ಇಂತಹ ಸಂಶೋಧನೆಗಳು ಕ್ರಮಬದ್ಧವಾದ ಹುಡುಕಾಟವೂ ಹೌದು, ಅನಿರೀಕ್ಷಿತವೂ ಹೌದು. ಎಷ್ಟೋ ಲೋಕೋಪಕಾರಿ ಔಷಧಗಳು ಹೀಗೆಯೇ ಅನಾವರಣವಾದವು. ವಿಜ್ಞಾನ ಮತ್ತು ತಂತ್ರಜ್ಞಾನಗಳ ನಿರಂತರ ಸಹಯೋಗವು ವೈದ್ಯಕೀಯದ ದಾಪುಗಾಲು ಹೆಜ್ಜೆಗಳಿಗೆ ಕಾರಣವಾಗಿದೆ. ಆದರೆ ಹಲವು ದಶಕಗಳ ಹಿಂದೆ ಅರಿವಳಿಕೆಯ ಮದ್ದುಗಳು ಇಲ್ಲದಿದ್ದ ಕಾಲದಲ್ಲಿ ಶಸ್ತ್ರಕ್ರಿಯೆಗಳು ರೋಗಕ್ಕಿಂತ ಯಾತನಾಮಯವಾದ ಪ್ರಕ್ರಿಯೆಗಳಾಗಿದ್ದವು. ಓದುತ್ತಾ ಓದುತ್ತಾ ಇಂತಹ ಮೊದಲ ಹೆಜ್ಜೆ ಇಟ್ಟ ಹಿರಿಯರ ಬಗ್ಗೆ ಕೃತಜ್ಞತೆಯಿಂದ ತಲೆಬಾಗುತ್ತೇವೆ.  ಅವರಲ್ಲಿ ಹಲವರು ನಮ್ಮ ನೆನಪುಗಳ ನಕ್ಷೆಯಲ್ಲಿಯೇ ಉಳಿದಿಲ್ಲ. ಆದರೂ ಅವರು ನಮ್ಮ ಬಾಳನ್ನು ಹಸನು ಮಾಡಿದ್ದಾರೆ. ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ನಿಷ್ಕಾರಣವಾದ ಹಗುರ ಮಾತುಗಳು ಕೇಳಿಬರುತ್ತಿರುವ ಈ ದಿನಗಳಲ್ಲಿ ಇಂತಹವರ ನೆನಪು ನಮ್ಮನ್ನು ತಿದ್ದಬೇಕು.

ಬ್ರೈಸನ್ ಅವರು ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದ ತಜ್ಞರನ್ನು ಭೇಟಿ ಮಾಡಿ, ಅವರು ಕೆಲಸ ಮಾಡುವ ಪ್ರಯೋಗಾಲಯಗಳಿಗೆ ಹೋಗಿ, ಅಲ್ಲಿ ಪಡೆದ ಮಾಹಿತಿಗಳನ್ನು ತಾಳೆ ನೋಡಿ, ಅವುಗಳ ಬೆಲೆ ಕಟ್ಟಿ ಈ ಬರವಣಿಗೆಯನ್ನು ರೂಪಿಸಿದ್ದಾರೆ. ವಿಜ್ಞಾನದ ಬಗೆಗಿನ ಗೌರವವು, ಅದನ್ನು ಸರ್ಕಾರಗಳು, ಔಷಧೋದ್ಯಮಗಳು ಮತ್ತು ಬಂಡವಾಳಶಾಹಿಗಳು ನಿಯಂತ್ರಿಸುವ ಬಗೆಯನ್ನು ಕುರಿತು ಬರೆಯಲು ಅಡ್ಡಿಯಾಗಿಲ್ಲ. ವಿಜ್ಞಾನಿಗಳದೇ ಈರ್ಷೆ, ಅಸೂಯೆಗಳ ಫಲವಾದ ಅನ್ಯಾಯಗಳನ್ನೂ ಇಲ್ಲಿ ದಾಖಲಿಸುತ್ತಾರೆ.

ಮನುಷ್ಯಜೀವದ ಉಗಮದ ಕ್ಷಣದಿಂದ ಅವನು ಕೊನೆಯುಸಿರೆಳೆಯುವ ಗಳಿಗೆಯವರೆಗಿನ ಸಮಸ್ತ ಚಟುವಟಿಕೆಗಳನ್ನು ಕಣ್ಣಮುಂದೆ ತರುವ ಕೆಲಸ ಇಲ್ಲಿ ನಡೆದಿದೆ. ಆರೋಗ್ಯ, ಅನಾರೋಗ್ಯ ಮತ್ತು ವ್ಯಾಯಾಮಗಳ ಬಗೆಗಿನ ನಮ್ಮ ಅರಿವನ್ನು ಹೆಚ್ಚಿಸುವ, ಭ್ರಮೆಯನ್ನು ನಿವಾರಿಸುವ ಕೆಲಸ ಪುಸ್ತಕದುದ್ದಕ್ಕೂ ನಡೆದಿದೆ. ‘ಮನುಷ್ಯನನ್ನು ಕಟ್ಟುವುದು ಹೇಗೆ?’, ‘ಜೀವಕಣಗಳ ಲೋಕ’, ‘ತಲೆ’, ‘ಮೆದುಳು’, ‘ಹೃದಯ ಮತ್ತು ರಕ್ತ’, ‘ರಸಾಯನಶಾಸ್ತ್ರ ವಿಭಾಗ’, ‘ಸಮತೋಲನ’,  ‘ಅಧೋಲೋಕ’, ‘ನರವ್ಯೂಹ ಮತ್ತು ನೋವು’, ‘ಕೆಲಸ ಕೆಟ್ಟಾಗ- ರೋಗಗಳು’, ‘ನಿದ್ದೆ’, ‘ಇನ್ನು ಮುಂದೆ ದಾರಿಯಿಲ್ಲವೇ?..ಕ್ಯಾನ್ಸರ್’ ಮುಂತಾದ ಅಧ್ಯಾಯಗಳು ಹೆಸರಿಗಿಂತಲೂ ರೋಚಕವಾಗಿವೆ. ಎಲ್ಲರೂ ‘ಗುಟ್ಟು’ ಮಾಡುವ ಲೈಂಗಿಕತೆಯ ಬಗೆಗೂ ಬಹಳ ಮುಖ್ಯವಾದ ಮಾಹಿತಿಗಳಿವೆ. ಕೊನೆಗೂ ಇದೆಲ್ಲವೂ ಮನುಷ್ಯನ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಲೇ ಅದರಾಚೆಗಿನ ಸಂಗತಿಗಳ ಬಗ್ಗೆ ಬೆರಗುಮೂಡಿಸುವ ನಿಲುವು ಲೇಖಕರದೂ ಹೌದು; ಓದುವ ನಮ್ಮನಿಮ್ಮದೂ ಹೌದು.

ಬಿಲ್ ಬ್ರೈಸನ್ ಅವರ ಬರವಣಿಗೆಯ ಶೈಲಿ ಈ ಪುಸ್ತಕದ ಇನ್ನೊಂದು ಲಕ್ಷಣ. ಅವರ ಹಾಸ್ಯಪ್ರಜ್ಞೆಯು ಪುಸ್ತಕದ ಓದನ್ನು ಸಂತೋಷದ ಸಂಗತಿಯಾಗಿ ಮಾಡಿದೆ. ಕನ್ನಡದ ಎಂ. ಶಿವರಾಂ, ಬಿ.ಜಿ.ಎಲ್. ಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಮುಂತಾದವರನ್ನು ಇಂಗ್ಲಿಷಿನಲ್ಲಿ ಓದುತ್ತಿರುವಂತೆ ಭಾಸವಾಗುವ ಬರವಣಿಗೆ ಇಲ್ಲಿನದು. ಆದರೂ ವಿಷಯದ ಬಗೆಗಿನ ಗೌರವ ಒಂದಿನಿತೂ ಮುಕ್ಕಾಗಿಲ್ಲ. ಪುಸ್ತಕದಲ್ಲಿರುವ ಚಿತ್ರಗಳು ಮತ್ತು ರೇಖಚಿತ್ರಗಳು ಅದರ ಮೌಲಿಕತೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಇಂಥ ಪುಸ್ತಕಗಳ ಬಗ್ಗೆ ಎಷ್ಟು ಬರೆದರೂ ಸಾಲದು. ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದ, ಇಂದಿಗೂ ಅದರ ಬಗೆಗಿನ ಕುತೂಹಲ ಮತ್ತು ಪ್ರೀತಿಗಳನ್ನು ಉಳಿಸಿಕೊಂಡಿರುವ ನನಗೆ ಇದರ ಓದು ‘ಹಬ್ಬದೂಟ’ ಆಯಿತು. ಇದು ಕನ್ನಡದಲ್ಲಿ ಬಂದರೆ ಬಹಳ ಚೆನ್ನು. ಬರದಿದ್ದರೂ ಇಂಗ್ಲಿಷ್​ನಲ್ಲಿ ನೀವೂ ಓದಿ, ನಿಮ್ಮ ಮಕ್ಕಳಿಂದಲೂ ಓದಿಸಿ ಎನ್ನುವುದು ನನ್ನ ಪ್ರೀತಿಯ ಅಹವಾಲು.

ಇದನ್ನೂ ಓದಿ : Awards : ಪ್ರಶಸ್ತಿ ಎಂಬ ‘ಕೀರ್ತಿಶನಿ’ ಮತ್ತು ‘ಯಶೋಲಕ್ಷ್ಮಿ’ಯ ಕುರಿತು ಡಾ. ಎಚ್. ಎಸ್. ರಾಘವೇಂದ್ರ ರಾವ್

ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ರಾಜೇಂದ್ರ ಚೆನ್ನಿ ‘ಓದಿನಂಗಳ’ಕ್ಕೆ ಕರೆತಂದಿದ್ದಾರೆ ಅಬ್ದುಲ್​ರಝಾಕ್ ಗುರ್ನಾ ಅವರ ‘ಆಫ್ಟರ್ ಲೈವ್ಸ್​’

Published On - 2:08 pm, Sat, 1 January 22

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು