Odinangala : ವರ್ಷಾಂತ್ಯ ವಿಶೇಷ ; ರಾಜೇಂದ್ರ ಚೆನ್ನಿ ‘ಓದಿನಂಗಳ’ಕ್ಕೆ ಕರೆತಂದಿದ್ದಾರೆ ಅಬ್ದುಲ್​ರಝಾಕ್ ಗುರ್ನಾ ಅವರ ‘ಆಫ್ಟರ್ ಲೈವ್ಸ್​’

Odinangala : ವರ್ಷಾಂತ್ಯ ವಿಶೇಷ ; ರಾಜೇಂದ್ರ ಚೆನ್ನಿ ‘ಓದಿನಂಗಳ’ಕ್ಕೆ ಕರೆತಂದಿದ್ದಾರೆ ಅಬ್ದುಲ್​ರಝಾಕ್ ಗುರ್ನಾ ಅವರ ‘ಆಫ್ಟರ್ ಲೈವ್ಸ್​’
ವಿಮರ್ಶಕ ರಾಜೇಂದ್ರ ಚೆನ್ನಿ ಮತ್ತು ನೊಬೆಲ್ ಪುರಸ್ಕೃತ ಸಾಹಿತಿ ಅಬ್ದುಲ್ ರಝಾಕ್ ಗುರ್ನಾಹ್

Abdulrazak Gurnah : ‘16ನೇ ವಯಸ್ಸಿನಲ್ಲಿಯೇ ಇಂಗ್ಲೆಂಡ್‌ಗೆ ವಲಸೆಹೋದ ಗುರ್ನಾ ತಾವು ಬಲ್ಲ ಸಮಾಜದ ಚರಿತ್ರೆ, ಸಂಸ್ಕೃತಿ ಹಾಗೂ ಬಿಕ್ಕಟ್ಟುಗಳನ್ನು ಇಷ್ಟು ಮೂರ್ತವಾಗಿ ತಮ್ಮ ಬರಹದಲ್ಲಿ ತರುವುದು ಆಶ್ಚರ್ಯ ಹುಟ್ಟಿಸುತ್ತದೆ. ಅವರ ಕಾಳಜಿ ಇರುವುದು ಮನುಷ್ಯ ಸಂಬಂಧಗಳು ಹಾಗೂ ಮನುಷ್ಯ ವ್ಯಕ್ತಿತ್ವಗಳ ಬಗ್ಗೆ.’ ಡಾ. ರಾಜೇಂದ್ರ ಚೆನ್ನಿ

ಶ್ರೀದೇವಿ ಕಳಸದ | Shridevi Kalasad

|

Dec 31, 2021 | 4:58 PM

Kannada Literature | ಓದಿನಂಗಳ 2021 : ಅಂತರಂಗದಿಂದ ಬಹಿರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ನಮ್ಮನ್ನು ನಾವು ನೇಯ್ದುಕೊಳ್ಳಲು ಇರುವ ಹಲವಾರು ಆತ್ಮಾವಲೋಕನದ ಮಾರ್ಗಗಳಲ್ಲಿ ಸಾಹಿತ್ಯವೂ ಒಂದು. ಒಮ್ಮೆ ಈ ‘ರುಚಿ’ಗೆ ಬಿದ್ದರೆ ಮುಗಿಯಿತು. ಪುಸ್ತಕಗಳೇ ನಮ್ಮನೆ ದೇವರು ಎಂದು ಜೀವಿಸುತ್ತಿರುವ ಅಸಂಖ್ಯಾತ ಮನಸ್ಸುಗಳೊಂದಿಗೆ ನಾವು ನಮಗರಿವಿಲ್ಲದೆಯೇ ಬೆಸೆದುಕೊಳ್ಳುತ್ತಾ ಹೋಗುತ್ತೇವೆ. ಎಂಥಾ ದೊಡ್ಡ ಜಾತ್ರೆಯಲ್ಲಿ, ಥರಾವರಿ ಆಟಿಕೆಗಳಲ್ಲಿ ಮಗು ಮನಸ್ಸು ನೆಡುವುದು ಒಂದೇ ಒಂದು ಆಟಿಕೆಯಲ್ಲಿ ಮಾತ್ರ. ಅದೇ ಆಟಿಕೆ ಯಾಕೆ, ಎಂಬ ಪ್ರಶ್ನೆಗೆ ಉತ್ತರವಿದೆಯೇ?; ಹೊಸ ವರ್ಷದ ಹೊಸ್ತಿಲೊಳಗೆ ನಿಂತು ಹಿಂದಿರುಗಿ ನೋಡಿದರೆ, ಈ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಸಾಹಿತ್ಯಕೃತಿಗಳ ಪ್ರಕಟಣೆ ವಿಪುಲ. ಅಂತೆಯೇ ಕನ್ನಡದ ಕೆಲ ವಿಮರ್ಶಕರಿಗೆ, ಈ ವರ್ಷ ನೀವು ಓದಿದ ಪುಸ್ತಕಗಳ ಪೈಕಿ ಯಾವುದೇ ಭಾಷೆಯ, ಯಾವುದೇ ಪ್ರಕಾರದ, ಯಾವುದೇ ವರ್ಷ ಪ್ರಕಟವಾದ ನಿಮಗಿಷ್ಟವಾದ ಒಂದು ಕೃತಿಯ ಬಗ್ಗೆ ನಿಮ್ಮ ಒಳನೋಟಗಳನ್ನು ಕಟ್ಟಿಕೊಡಬಹುದೆ? ಎಂದು ವಿನಂತಿಸಿಕೊಳ್ಳಲಾಯಿತು. ಅವರು ಬರೆದು ಕಳಿಸಿದ್ದು ನಿಮ್ಮ ಓದಿಗೆ. ಒಪ್ಪಿಸಿಕೊಳ್ಳಿ. 

*

ಕೃತಿ : After Lives (Novel) ಲೇಖಕರು : Abdulrazak Gurnah ಪುಟ : 288 ಬೆಲೆ : Rs. 420 ಪ್ರಕಾಶನ : Bloomsbury

*

ತಾಂಜಾನಿಯಾ ಮೂಲದ ನೊಬೆಲ್ ಪುರಸ್ಕೃತ ಸಾಹಿತಿ ಅಬ್ದುಲ್​ರಝಾಕ್ ಗುರ್ನಾ ಅವರ After Lives ಕಾದಂಬರಿಯ ಬಗ್ಗೆ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ.

*

2021ರ ಸಾಲಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಅಬ್ದುಲ್​ರಝಾಕ್ ಗುರ್ನಾ ಪೂರ್ವ ಆಫ್ರಿಕಾದ ಜಾಂಜಿಬಾರ್ ಪ್ರಾಂತಕ್ಕೆ ಸೇರಿದವರು. ಇಂಗ್ಲಿಷ್ ಭಾಷೆಯಲ್ಲಿ ಬರೆಯುವ ಅವರ ಕಾದಂಬರಿಗಳನ್ನು ಓದಿದಾಗ ನನಗೆ ಅನ್ನಿಸಿದ್ದೆಂದರೆ ಇಷ್ಟು ಸುಂದರವಾದ ಇಂಗ್ಲಿಷ್ ಗದ್ಯವನ್ನು ಕಥನ ಪ್ರಕಾರದಲ್ಲಿ ನೋಡಿ ವರ್ಷಗಳೇ ಆದವು ಎಂದು. ಹೆಚ್ಚಿನ ಶಬ್ದಾಡಂಬರವಿಲ್ಲದೆ, ಪಾರದರ್ಶಕವಾಗಿ ಹದವಾದ ಲಯಗಾರಿಕೆಯಿಂದ ಬರೆಯುವ ಗುರ್ನಾ ವೈವಿಧ್ಯಪೂರ್ಣವಾದ ಅನುಭವಗಳನ್ನು, ಅವುಗಳ ಆಳ ಮತ್ತು ಸೂಕ್ಷ್ಮಗಳನ್ನು ತಮ್ಮ ಗದ್ಯದ ಮೂಲಕ ಅಭಿವ್ಯಕ್ತಿಸಬಲ್ಲರು- ಅವರ ಕಾದಂಬರಿಗಳು ಗಂಭೀರ ಮಾತ್ರವಲ್ಲ ವಿಷಾದದ ಛಾಯೆ ಉಳ್ಳವು. ಜಾಂಜಿಬಾರ್ ಸೇರಿದಂತೆ ಪೂರ್ವ ಆಫ್ರಿಕಾದ ನಾಡುಗಳು ಪಶ್ಚಿಮದ ವಸಾಹತುಶಾಹಿ ಆರಂಭವಾಗುವ ಮೊದಲು ಜಾಗತಿಕ ವ್ಯಾಪಾರದ ಕೇಂದ್ರಗಳಾಗಿದ್ದವು. ಭಾರತೀಯರು ಸೇರಿದಂತೆ ಅನೇಕ ದೇಶಗಳ ವ್ಯಾಪಾರಿಗಳು ಅಲ್ಲಿಗೆ ವಲಸೆ ಬಂದಿದ್ದರು. ಜಗತ್ತು ಈ ಮೊದಲೂ ಒಂದು ಜಾಗತೀಕರಣದ ಚರಿತ್ರೆಯನ್ನು ಸುದೀರ್ಘ ಕಾಲ ಅನುಭವಿಸಿತ್ತು. ಆದರೆ ಪಶ್ಚಿಮದ ರಾಷ್ಟ್ರಗಳು ಆರಂಭಿಸಿದ ವಸಾಹತುಶಾಹಿಯು ತೀರಾ ವಿಭಿನ್ನ ಸ್ವಭಾವದ್ದಾಗಿತ್ತು. ಜಾಂಜಿಬಾರ್‌ನ ವಿಶಿಷ್ಟ ಭೌಗೋಳಿಕ ನೆಲೆಯಿಂದಾಗಿ ಈ ರಾಷ್ಟ್ರಗಳು ಈ ಪ್ರದೇಶದಲ್ಲಿ ತಮ್ಮ ಅಧಿಕಾರ ಸ್ಥಾಪನೆಗಾಗಿ ಪರಸ್ಪರ ಯುದ್ಧ ಮಾಡುವ ಜೊತೆಗೆ ಅಲ್ಲಿಯ ಸಮಾಜಗಳನ್ನು ಹಾಗೂ ಜನಾಂಗಗಳನ್ನು ಅಪಾರವಾದ ಹಿಂಸೆ ಹಾಗೂ ಶೋಷಣೆಗಳಿಗೆ ಒಡ್ಡಿದವು. ಗುರ್ನಾ ಅವರ ಕಾದಂಬರಿಗಳ ಎರಡು ಮುಖ್ಯ ವಸ್ತುಗಳೆಂದರೆ ಒಂದು ಈ ವಸಾಹತುಶಾಹಿಯ ವಿಶ್ಲೇಷಣೆ. ಇನ್ನೊಂದು ಆಧುನಿಕ ಮತ್ತು ಸಮಕಾಲೀನ ಹಂತಗಳಲ್ಲಿ ಇಂಗ್ಲೆಂಡ್‌ಗೆ ವಲಸೆ ಹೋಗುವವರ ಬವಣೆಗಳು. ವ್ಯಂಗ್ಯವೆಂದರೆ ಆಫ್ರಿಕಾ ಖಂಡದ ಬಹುಭಾಗವನ್ನು ಅಕ್ಷರಶಃ ಹರಿದು ಮುಕ್ಕಿದ ಇಂಗ್ಲೆಂಡ್‌ಗೆ ವಲಸೆ ಹೋಗುವ ಆಫ್ರಿಕನ್‌ರು ಈಗ “ನುಸುಳುಕೋರರು” ಅಲ್ಲಿಯ ಆರ್ಥಿಕತೆಗೆ ಹೊರೆಯಾಗಿರುವವರು!

ಗುರ್ನಾರವರ After Lives ಕಾದಂಬರಿ ಜಾಂಜಿಬಾರ್‌ನ ವಸಾಹತುಶಾಹಿ ಕಾಲದ ಬಗ್ಗೆ ಇದೆ. 20ನೇ ಶತಮಾನದ ಎರಡನೇ ದಶಕದಲ್ಲಿ ಜರ್ಮನಿ ಮತ್ತು ಇಂಗ್ಲೆಂಡ್ ದೇಶಗಳು ಈ ನಾಡನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಳ್ಳಲು ಸ್ಪರ್ಧೆಯಲ್ಲಿವೆ. ಜರ್ಮನಿಯ ಸೈನ್ಯವು ಈ ನಾಡಿನ ಜನರನ್ನೇ ತನ್ನ ಕಾಲಾಳುಗಳನ್ನಾಗಿಸಿಕೊಂಡಿದೆ. ಇಂಗ್ಲೆಂಡ್ ತನ್ನ ನೌಕಾಪಡೆಯನ್ನು ಇಲ್ಲಿಗೆ ಕಳಿಸಿದೆ. ನಂತರದ ದಿನಗಳಲ್ಲಿ ಜಗತ್ತಿನ ವಿವಿಧ ಕಡೆಗೆ ಇದ್ದ ತನ್ನ ವಸಾಹತುಗಳ ಜನರನ್ನು ಸೈನಿಕರನ್ನಾಗಿ ಇಲ್ಲಿಗೆ ಕಳಿಸಿದೆ. ಅವರಿಗೆ ಇಲ್ಲಿದ್ದ ವ್ಯಾಪಾರ ವ್ಯವಸ್ಥೆಯನ್ನು ಕ್ರಮೇಣವಾಗಿ ನಾಶಮಾಡಲಾಗುತ್ತದೆ. ಹಲವು ಕಾರಣಗಳಿಗಾಗಿ ಜರ್ಮನ್ ಸೈನ್ಯವನ್ನು ಸೇರಿದ ಆಫ್ರಿಕನ್‌ರ ಮೇಲೆ ನಡೆಯುವ ದೈಹಿಕ, ಲೈಂಗಿಕ ಹಿಂಸೆ, ಕ್ರೌರ್ಯ ಇವು ಈ ಕಾದಂಬರಿಯ ವಸ್ತುವಾಗಿವೆ. ಕಾದಂಬರಿಯ ಮುಖ್ಯ ಪಾತ್ರಗಳಲ್ಲಿ ಒಬ್ಬನಾಗಿರುವ ಹಮ್ಜಾ ಎನ್ನುವ ಯುವಕ ಜರ್ಮನ್ ಸೈನ್ಯವನ್ನು ಸೇರಿದ್ದಾನೆ. ಅವನ ಅನುಭವಗಳ ಮೂಲಕ ವಸಾಹತುಶಾಹಿಯ ಕರಾಳವಾದ ಮುಖವು ಅನಾವರಣಗೊಳ್ಳುತ್ತದೆ.

ಆಫ್ರಿಕಾ ಖಂಡವನ್ನು ನಾಗರೀಕಗೊಳಿಸಲು ಬಂದಿರುವ, ದ್ವೇಷೇಚ್ಛೆ ಮತ್ತು ಚರಿತ್ರೆಯ ಆದೇಶವನ್ನು ಪಾಲಿಸಲು ಬಂದಿರುವ ಸುಸಂಸ್ಕೃತ ಪಶ್ಚಿಮದ ಜನಾಂಗೀಯ ದ್ವೇಷ, ಹಿಂಸಾವಿನೋದಿ ಸ್ವಭಾವ ಇವುಗಳನ್ನು ಗುರ್ನಾ ತಮ್ಮ ತಣ್ಣಗಿನ ಭಾಷೆಯಲ್ಲಿ ವಿವರಿಸುತ್ತಾರೆ. ಅದು ಕೂಡ ಕೇವಲ ಘಟನೆಗಳು ಹಾಗೂ ಪಾತ್ರಗಳ ಮೂಲಕ. ಲೇಖಕರಾಗಿ ಅವರು ಕೃತಿಯಲ್ಲಿ ಪ್ರವೇಶ ಮಾಡುವುದು ಇಲ್ಲವೇ ಇಲ್ಲವೆಂದರೂ ಸರಿ. ಹಾಗೆಂದು ಆಫ್ರಿಕಾದ ಸಮಾಜಗಳು ಸುಸಂಗತವಾದ, ಸಾವಯವ ಸಮಾಜಗಳಾಗಿದ್ದವೆಂದು ಈ ಕಾದಂಬರಿ ಹೇಳುವುದಿಲ್ಲ. ಇಲ್ಲಿ ಬಡತನ, ಮಲೇರಿಯಾ, ವಿಚಿತ್ರ ರೋಗಗಳು, ಅಸಹ್ಯವಾದ ಕೊಳಕು ಇವೆಲ್ಲ ಇವೆ. ಸಾಲ ತೀರಿಸಲಾಗದ ತಂದೆಯರು ತಮ್ಮ ಗಂಡುಮಕ್ಕಳನ್ನು ವ್ಯಾಪಾರಿಗಳಿಗೆ ಜೀತದಾಳುಗಳಂತೆ ಮಾರಿ ಬಿಡುತ್ತಾರೆ.

ಅನಾಥ ಹೆಣ್ಣು ಮಕ್ಕಳು ಸಂಬಂಧಿಕರ ಮನೆಯಲ್ಲಿ ತೊತ್ತುಗಳಾಗಿ ನರಕ ಅನುಭವಿಸುತ್ತಾರೆ. ಹಮ್ಜಾ ಮದುವೆಯಾಗುವ ಆಷೀಯಾ ಅಕ್ಷರ ಕಲಿತಳು ಎನ್ನುವ ತಪ್ಪಿಗಾಗಿ ಅವಳ ಚಿಕ್ಕಪ್ಪ ಅವಳ ಕೈ ಮುರಿದು ಹೋಗುವಂತೆ ಹೊಡೆಯುತ್ತಾನೆ. ವ್ಯಾಪಾರಿಗಳು ಕಳ್ಳದಂಧೆಗಳನ್ನು ಮಾಡುತ್ತಿದ್ದಾರೆ. ನಾಡಿನ ಕೆಲವು ಪ್ರಾಂತಗಳಲ್ಲಿ ಆಳುತ್ತಿದ್ದ ಮುಸ್ಲಿಮ್ ರಾಜರುಗಳು ಕೊಲೆಗಡುಕರಂತೆ ವರ್ತಿಸುತ್ತಾರೆ. ಅಮಾನುಷವಾದ ಕಟ್ಟಳೆಗಳಿವೆ. ಅಲ್ಲದೆ ಕ್ರೂರವಾದ ವಸಾಹತುಶಾಹಿ ತನ್ನ ಅನುಕೂಲಕ್ಕಾಗಿಯೇ ಇರಬಹುದು, ಶಾಲೆಗಳನ್ನು, ಆಸ್ಪತ್ರೆಗಳನ್ನು, ಕೆಲವರಾದರೂ ಕರುಣಾಮಯಿಗಳಿರುವ ಕ್ರಿಶ್ಚಿಯನ್ ಆಶ್ರಮಗಳನ್ನು ಸ್ಥಾಪಿಸಿದೆ. ವಿರೋಧಾಭಾಸಗಳಿಂದ ಕೂಡಿದ ಒಂದು ಮಾದರಿಯ ಆಧುನಿಕತೆ ಪ್ರವೇಶಮಾಡಿದೆ. ಗುರ್ನಾ ಅವರ ಕಾದಂಬರಿಗಳ ಶಕ್ತಿ ಇರುವುದೇ ಈ ವಸ್ತುನಿಷ್ಠತೆಯಲ್ಲಿ. ಚರಿತ್ರೆಯ ಗಾಯಗಳನ್ನು ಮುಚ್ಚುಮರೆ ಇಲ್ಲದೆ ತೋರಿಸುತ್ತಲೇ ಕೇವಲ ದೋಷಾರೋಪಣೆಯಲ್ಲಿ ತೊಡಗುವ ಸುಲಭ ನಿರೂಪಣೆಯಿಂದ ದೂರವಿರುತ್ತಾರೆ.

16ನೇ ವಯಸ್ಸಿನಲ್ಲಿಯೇ ಇಂಗ್ಲೆಂಡ್‌ಗೆ ವಲಸೆಹೋದ ಗುರ್ನಾ ತಾವು ಬಲ್ಲ ಸಮಾಜದ ಚರಿತ್ರೆ, ಸಂಸ್ಕೃತಿ ಹಾಗೂ ಬಿಕ್ಕಟ್ಟುಗಳನ್ನು ಇಷ್ಟು ಮೂರ್ತವಾಗಿ ತಮ್ಮ ಬರಹದಲ್ಲಿ ತರುವುದು ಆಶ್ಚರ್ಯ ಹುಟ್ಟಿಸುತ್ತದೆ. ಅವರ ಕಾಳಜಿ ಇರುವುದು ಮನುಷ್ಯ ಸಂಬಂಧಗಳು ಹಾಗೂ ಮನುಷ್ಯ ವ್ಯಕ್ತಿತ್ವಗಳ ಬಗ್ಗೆ. ಹೀಗಾಗಿ ಚರಿತ್ರೆಯು ಎಲ್ಲಿಯೂ ಭಾರವಾಗದಂತೆ ಬಡ ಸಾಮಾನ್ಯರ ಬದುಕಿನ ಮೂಲಕವೇ ಗಹನವಾದ ಅನುಭವವನ್ನು ನೀಡುತ್ತಾರೆ. 2020ರಲ್ಲಿ ಪ್ರಕಟವಾದ ಈ ಕಾದಂಬರಿ ಅಷ್ಟೇನೂ ಪ್ರಸಿದ್ಧರನ್ನದ ಗುರ್ನಾ ನೊಬೆಲ್ ಪ್ರಶಸ್ತಿ ಪಡೆದ ಮೇಲೆ ಸುಲಭವಾಗಿ ಲಭ್ಯವಾಗಿದೆ. ನಾನು ಓದಿದ ಉತ್ತಮ ಕೃತಿಗಳಲ್ಲಿ ಈ ಕಾದಂಬರಿ ನನಗೆ ಬಹಳ ಮೆಚ್ಚುಗೆಯಾಗಿದೆ.

ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದೊಳಗೆ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಹಿಡಿದಿಟ್ಟಿದ್ದಾರೆ ವಿನಯಾ ಒಕ್ಕುಂದ

ಇದನ್ನೂ ಓದಿ : ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅನುವಾದಕಿ ನಾಗರೇಖಾ ಗಾಂವಕರ

Follow us on

Related Stories

Most Read Stories

Click on your DTH Provider to Add TV9 Kannada