Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದೊಳಗೆ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಹಿಡಿದಿಟ್ಟಿದ್ದಾರೆ ವಿನಯಾ ಒಕ್ಕುಂದ

Ajeet Cour : ‘ಮಧ್ಯಮವರ್ಗದ ಹಿನ್ನೆಲೆಯಿಂದ ಬಂದ, ನಾಗರಿಕ ಬದುಕಿಗೆ ತೆರೆದುಕೊಂಡ, ಅದಮ್ಯ ಸಂವೇದನಾಶೀಲ ಹೆಣ್ಣು ಹಾದಾಡಬೇಕಾದ ಮುಳ್ಳುಹಾದಿ ಎಂಥದ್ದು ಎನ್ನುವಾಗ, ಅಲ್ಲಿ ಭಾರತದ ಮಧ್ಯಮವರ್ಗದ ಅಗಣಿತ ಹೆಣ್ಣು ಚಹರೆಗಳು ಕಾಣುತ್ತವೆ. ಅವರು ಎದುರಿಸಲೇಬೇಕಾಗಿದ್ದ ಸರಿ-ತಪ್ಪುಗಳ ದ್ವಂದ್ವಗಳಿವೆ. ತಾಕಲಾಟ ತಳಮಳಗಳ ಮಿಲೇಸೂರ್ ಇದೆ.’ ವಿನಯಾ ಒಕ್ಕುಂದ

Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದೊಳಗೆ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಹಿಡಿದಿಟ್ಟಿದ್ದಾರೆ ವಿನಯಾ ಒಕ್ಕುಂದ
ಪಂಜಾಬಿ ಲೇಖಕಿ ಅಜಿತ್ ಕೌರ್, ಅನುವಾದಕಿ ರೇಣುಕಾ ನಿಡಗುಂದಿ, ವಿಮರ್ಶಕಿ ವಿನಯಾ ಒಕ್ಕುಂದ
Follow us
ಶ್ರೀದೇವಿ ಕಳಸದ
|

Updated on:Dec 31, 2021 | 3:48 PM

Kannada Literature | ಓದಿನಂಗಳ 2021 : ಅಂತರಂಗದಿಂದ ಬಹಿರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ನಮ್ಮನ್ನು ನಾವು ನೇಯ್ದುಕೊಳ್ಳಲು ಇರುವ ಹಲವಾರು ಆತ್ಮಾವಲೋಕನದ ಮಾರ್ಗಗಳಲ್ಲಿ ಸಾಹಿತ್ಯವೂ ಒಂದು. ಒಮ್ಮೆ ಈ ‘ರುಚಿ’ಗೆ ಬಿದ್ದರೆ ಮುಗಿಯಿತು. ಪುಸ್ತಕಗಳೇ ನಮ್ಮನೆ ದೇವರು ಎಂದು ಜೀವಿಸುತ್ತಿರುವ ಅಸಂಖ್ಯಾತ ಮನಸ್ಸುಗಳೊಂದಿಗೆ ನಾವು ನಮಗರಿವಿಲ್ಲದೆಯೇ ಬೆಸೆದುಕೊಳ್ಳುತ್ತಾ ಹೋಗುತ್ತೇವೆ. ಎಂಥಾ ದೊಡ್ಡ ಜಾತ್ರೆಯಲ್ಲಿ, ಥರಾವರಿ ಆಟಿಕೆಗಳಲ್ಲಿ ಮಗು ಮನಸ್ಸು ನೆಡುವುದು ಒಂದೇ ಒಂದು ಆಟಿಕೆಯಲ್ಲಿ ಮಾತ್ರ. ಅದೇ ಆಟಿಕೆ ಯಾಕೆ, ಎಂಬ ಪ್ರಶ್ನೆಗೆ ಉತ್ತರವಿದೆಯೇ?; ಹೊಸ ವರ್ಷದ ಹೊಸ್ತಿಲೊಳಗೆ ನಿಂತು ಹಿಂದಿರುಗಿ ನೋಡಿದರೆ, ಈ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಸಾಹಿತ್ಯಕೃತಿಗಳ ಪ್ರಕಟಣೆ ವಿಪುಲ. ಅಂತೆಯೇ ಕನ್ನಡದ ಕೆಲ ವಿಮರ್ಶಕರಿಗೆ, ಈ ವರ್ಷ ನೀವು ಓದಿದ ಪುಸ್ತಕಗಳ ಪೈಕಿ ಯಾವುದೇ ಭಾಷೆಯ, ಯಾವುದೇ ಪ್ರಕಾರದ, ಯಾವುದೇ ವರ್ಷ ಪ್ರಕಟವಾದ ನಿಮಗಿಷ್ಟವಾದ ಒಂದು ಕೃತಿಯ ಬಗ್ಗೆ ನಿಮ್ಮ ಒಳನೋಟಗಳನ್ನು ಕಟ್ಟಿಕೊಡಬಹುದೆ? ಎಂದು ವಿನಂತಿಸಿಕೊಳ್ಳಲಾಯಿತು. ಅವರು ಬರೆದು ಕಳಿಸಿದ್ದು ನಿಮ್ಮ ಓದಿಗೆ. ಒಪ್ಪಿಸಿಕೊಳ್ಳಿ. 

*

ಕೃತಿ : ಅಲೆಮಾರಿಯೊಬ್ಬಳ ಆತ್ಮವೃತ್ತಾಂತ (ಆತ್ಮಕಥನ) ಮೂಲ : ಅಜಿತ್ ಕೌರ್ ಕನ್ನಡಕ್ಕೆ : ರೇಣುಕಾ ನಿಡಗುಂದಿ ಪುಟ : 216 ಬೆಲೆ : ರೂ. 210 ಪ್ರಕಾಶನ : ಅಹರ್ನಿಶಿ ಪ್ರಕಾಶನ, ಶಿವಮೊಗ್ಗ

*

ರೇಣುಕಾ ನಿಡಗುಂದಿ ಅನುವಾದಿಸಿದ ಪಾಕಿಸ್ತಾನಿ ಮೂಲದ ಪಂಜಾಬಿ ಲೇಖಕಿ ಅಜಿತ್ ಕೌರ್ ಅವರ ಆತ್ಮಕಥನ ಅಲೆಮಾರಿಯೊಬ್ಬಳ ಆತ್ಮವೃತ್ತಾಂತ ದ ಬಗ್ಗೆ ವಿಮರ್ಶಕಿ ವಿನಯಾ ಒಕ್ಕುಂದ.

*

ಆತ್ಮಕಥನಗಳು ಅದರಲ್ಲೂ ಮಹಿಳಾ ಆತ್ಮಕಥನಗಳು ನನ್ನನ್ನು ಇನ್ನಿಲ್ಲದಂತೆ ಆವರಿಸಿ ಬಿಡುತ್ತವೆ. ಅಲ್ಲಿಯ ಸತ್ಯದ ಬೆಂಕಿ ನನ್ನಾತ್ಮವನ್ನು ಬೆಚ್ಚಗೆ ಪೋಷಿಸುತ್ತದೆ ಎನ್ನಿಸುತ್ತದೆ. ಹೆಜ್ಜೆ ಊರಲೂ ಆಸ್ಪದವಿಲ್ಲದಲ್ಲಿ ಹೆಜ್ಜೆಯೂರಿ ಒಂದಷ್ಟು ದೂರ ನಡೆದು ತಿಟ್ಹತ್ತಿ ತಿರುಗಿ, ತನ್ನ ಹೆಜ್ಜೆಗಳ ಹಚ್ಚೆಯನ್ನು ಮರಳಿ ನೋಡುವುದು- ಈ ಲೋಕದ ನಡೆಗೆ ಹೆಣ್ಣು ಬರೆದ ಭಾಷ್ಯದಂತೆ ಇರುತ್ತದೆ. ದಿಕ್ಕು-ದಾರಿಗಳು ಯಾವುದೇ ಇರಲಿ, ಅಲ್ಲೊಂದು ಅಪ್ಪಟ ಹೆಣ್ತನದ ಲಯವಿರುತ್ತದೆ. ಅದು ನಂನಮ್ಮ ಬಾಳಿನ ಬೇಕುಗಳನ್ನೂ ಸಂಭಾಳಿಸಿದಂತಿರುತ್ತದೆ. ಅಜಿತ್ ಕೌರ್ ಆತ್ಮಕಥನ ಈ ಎಲ್ಲವನ್ನೂ ಮೀರಿ, ನನ್ನನ್ನು ಗಾಢವಾಗಿ ಅಲ್ಲಾಡಿಸಿದೆ. ಅಜಿತ್ ಕೌರ್ ಅವರ ಆತ್ಮಕಥನ ಖಾನಾಬದೋಶ್‌ನ್ನು ಅಲೆಮಾರಿಯೊಬ್ಬಳ ಆತ್ಮವೃತ್ತಾಂತವಾಗಿ ರೇಣುಕಾ ನಿಡಗುಂದಿ 2020ರಲ್ಲಿ ಕನ್ನಡಕ್ಕೆ ತಂದಿದ್ದಾರೆ.

ಈ ಪುಟಗಳೊಂದಿಗಿನ ಪಯಣ ಸುಳಿಗಾಳಿಯ ಸೆರಗು ಹಿಡಿದು ನಡೆದಂತಿದೆ. ಇದನ್ನು ಓದಿ ಮುಗಿಸಿದ ನಂತರ ಎಷ್ಟೋ ದಿನ ನನ್ನೊಳಗಿನಿಂದಲೇ ಹುಟ್ಟಿದ ಚಿತ್ರವೊಂದು ಕಾಡುತ್ತಿತ್ತು. ಧುಮ್ಮಿಕ್ಕುವ ಪ್ರವಾಹದ ಅಲೆಗಳಿಗೆದುರಾಗಿ ಈಜುತ್ತಿರುವ ನೀರುಕೋಳಿ, ರೆಕ್ಕೆ ಸೋತರೂ ಅರೆಗಳಿಗೆ ಉಸಿರಾಡುವುದೂ ನಿಷಿದ್ಧವಾದ ಹಾಗೆ, ಕೂಗಿಕೊಳ್ಳಲೂ ಸಾಧ್ಯವಿಲ್ಲದ ಹಾಗೆ ಬಾಯಲ್ಲಿ ಮೊಟ್ಟೆ ಕಚ್ಚಿಕೊಂಡು… ಎಲ್ಲ ಶಕ್ತಿ ಹಾಕಿ ಮುಂದಕ್ಕೆ ತಳ್ಳಿಕೊಂಡರೆ, ಎರಡು ಪಟ್ಟು ಬಲದಿಂದ ಹಿಂದಕ್ಕೆಸೆವ ಅಲೆ… ಅವಳು ಅಲೆಮಾರಿ.

ಹೆಣ್ಣಾಗಿರುವ ಕಾರಣಕ್ಕಾಗಿಯೇ ಅವಕಾಶವಂಚಿತವಾದ ಕಥನವೇ ಬದುಕಿನ-ಆರಂಭ. ಯಾವುದೂ ತನ್ನದೆನಿಸದ, ತಾನೂ ತನ್ನದೆನಿಸದ ಈ ಲೋಕದ ಬಹುಪಾಲು ಹೆಣ್ಣುಚರಿತ್ರೆಗೆ ಬರೆದ ವ್ಯಾಖ್ಯಾನದಂತಹ ಬದುಕು. ಕೌಟುಂಬಿಕ ದೌರ್ಜನ್ಯ, ತಾರತಮ್ಯ, ನಿರಾಕರಣೆಗಳಲ್ಲಿ ‘ಇನ್ನೇನೂ ಬಾಕಿ ಉಳಿದಿಲ್ಲ’ ಎಂದು ತೃಪ್ತವಾಗುವ ಸ್ಥಿತಿ. ಹನ್ನೆರಡು ವರ್ಷಗಳ ಉದ್ದ ಕಾಲ, ಸರಿಹೊಂದದ ದಾಂಪತ್ಯದಲ್ಲಿ ಏಗಿ ಕಡೆಗೊಮ್ಮೆ ಹೊರಬಂದಾಗ, ರಪ್ಪನೆ ರಾಚುವ ಮಕ್ಕಳೊಂದಿಗಳಾದ ಒಂಟಿ ಹೆಣ್ಣಿನ ಸವಾಲುಗಳು. ಮಧ್ಯಮವರ್ಗದ ಹಿನ್ನೆಲೆಯಿಂದ ಬಂದ, ನಾಗರಿಕ ಬದುಕಿಗೆ ತೆರೆದುಕೊಂಡ, ಅದಮ್ಯ ಸಂವೇದನಾಶೀಲ ಹೆಣ್ಣು ಹಾದಾಡಬೇಕಾದ ಮುಳ್ಳುಹಾದಿ ಎಂಥದ್ದು ಎನ್ನುವಾಗ, ಅಲ್ಲಿ ಭಾರತದ ಮಧ್ಯಮವರ್ಗದ ಅಗಣಿತ ಹೆಣ್ಣು ಚಹರೆಗಳು ಕಾಣುತ್ತವೆ. ಅವರು ಎದುರಿಸಲೇಬೇಕಾಗಿದ್ದ ಸರಿ-ತಪ್ಪುಗಳ ದ್ವಂದ್ವಗಳಿವೆ. ತಾಕಲಾಟ ತಳಮಳಗಳ ಮಿಲೇಸೂರ್ ಇದೆ. ಪ್ರೀತಿ ಎನ್ನುವುದು ಪ್ರೀತಿ ಆಗಿರಲಿಲ್ಲವೇ ಎಂಬ ಖಾನೆಸುಮಾರಿಗೆ ತೊಡಗಿಸಿಕೊಳ್ಳಬೇಕಾದ ಅದಮ್ಯ ನೋವಿದೆ. ಪರಿತ್ಯಕ್ತಳಾಗಿ ಬಿಡುವ ಸವಾಲು ಬದುಕಿನುದ್ದಕ್ಕೂ ಸತಾಯಿಸುವ ಗಂಟಲಬಿಗಿತವಿದೆ. ತನ್ನ ಕಾಲದ ಗಂಡು ಲೋಕವೊಂದನ್ನು, ಅದರ ಗತ್ತು-ಗೈರತ್ತುಗಳನ್ನು, ಹತ್ತಿರದ ತಾಕುವಿಕೆಯಿಂದ ದೂರನಿಂತು ದಾಖಲಿಸುವ ಕಣ್ಣೋಟವಿದೆ. ಎಲ್ಲ ಹೆಣ್ಣುಗಳ ಬದುಕಿನಲ್ಲೂ ಪಾಲುಪಡೆವ ಯಾತನೆಯ ಬಣ್ಣ ಇಲ್ಲಿದೆ.

ಇಂತಹ ಸುತ್ತಿಗೆಯೇಟಿನ ಸತತ ಬಡಿತದಿಂದ ಛಿದ್ರವಾಗದೆ ತನ್ನನ್ನು ತಾನು ಮರುರೂಪಿಸಿಕೊಳ್ಳುವಲ್ಲಿ ಅಜಿತ್ ಕೌರ್ ಎಂಬ ಬರಹಗಾರ್ತಿಯ, ಶಿಕ್ಷಕಿಯ, ಸಾಮಾಜಿಕ ಬದ್ಧತೆಯ ಹೆಣ್ಣಿನ ಅಸ್ಮಿತೆಯಿದೆ. ಒಂದು ಜನ್ಮದಲ್ಲಿ ನಾಲ್ಕು ಜನ್ಮಗಳನ್ನು ಬದುಕಿದೆ ಎಂಬ ಚರಿತ್ರೆಯಿದು. ಮಗಳ ಸಾವು, ಆ ಭಾಷೆಗೆ ಎಟುಕದ ಯಾತನೆಗೆ ಸಾಕ್ಷಿಯಾಗಬೇಕಾದ ಸ್ಥಿತಿ, ತನ್ನೊಳಗಿನ ಬಡಬಾಗ್ನಿಯಲ್ಲಿ ಪುಟ್ಟಪೂರಾ ಸುಟ್ಟು ಕರಕಲಾಗಿದ್ದೇನೆ ಎಂಬ ಭಾವದಲ್ಲೂ ಬದುಕಿನ ಬಗ್ಗೆ ಉಳಿಸಿಕೊಂಡ ಸಹನಶೀಲ ಚೈತನ್ಯ, ನೊಂದವರಿಗಾಗಿ ನೆಲೆ ಅರಸುವ ಸಾಮಾಜಿಕ ಬದ್ಧತೆ, ಪ್ರೀತಿಸುವ ಶಿಕ್ಷಕ ವೃತ್ತಿ… ಓಹ್, ಹೆಣ್ಣಿಗೆ ವೃತ್ತಿ ಎಂದರೆ ಏನದು? ಈ ಓದು ನಮಗೆ ತಾಕಿಸುವುದು ಹೆಣ್ತನದ ಮೃದುತ್ವ ಮತ್ತು ಚಿಗುಟನ್ನು ದೇಶ-ಕಾಲಗಳನ್ನು ಮುರಿದು ಮಿದ್ದಿ ಹೆಣ್ಣಿನ ಉಸಿರಾಗಿ ಮಾತ್ರ ಪರಿವರ್ತಿಸುವ ಆವರಿಸುವ ಗುಣವಿದೆ. ಸಾರಾ ಷಗುಫ್ತಾ, ಅಮೃತಾ ಪ್ರೀತಿಂ, ಕಮಲಾ ದಾಸ್, ಪ್ರತಿಭಾ ನಂದಕುಮಾರ್– ಹೀಗೆ ಹೆಣ್ಣು ಚರಿತ್ರೆಯನ್ನು ಮೆಲಕು ಹಾಕಿಸುತ್ತದೆ. ಹೆಣ್ಣಿನ ಮನಸ್ಸನ್ನು ಗಾಯಗೊಳಿಸುತ್ತಲೇ ಇರುವ ರಕ್ತವಿಲ್ಲದ ಯುದ್ಧದ ಕಥನದತ್ತ ಗಂಭೀರವಾಗಿ ಪರಿಕಿಸಲು ಒತ್ತಾಯಿಸುತ್ತದೆ. ಕಡೆಗೂ ಹೆಣ್ಣೆಂದರೆ… ಅಜಿತ್ ಹೇಳುತ್ತಾರೆ- ನಾನು ಹುಚ್ಚು ಕಾಡಿನ ಗಾಳಿ, ಜಿಪ್ಸಿ ನದಿ ಬಿಸಿಲಿನ ತುಂಡು, ಅಲೆದಾಡುವ ಪರಿಮಳ, ಕನಸಿನ ಬೀಜ- ಹೌದೇನೋ?

ಒಂದು ಓದು, ಚರಿತ್ರೆಯ ಓದಾಗುವುದು, ಒಂದು ಕಾಲಕೀರ್ತಿಯನ್ನೇ ಕಾಣಿಸುವುದು ಮಹತ್ತದ್ದು, ಅಲ್ಲವೇ?

ರೇಣುಕಾ ನಿಡಗುಂದಿ ಅವರ ಕವಿತೆಗಳು : Poetry : ಅವಿತಕವಿತೆ ; ಸತ್ತಾಗ ಜನ ಹೇಳುವರು ಇಂತವರ ‘ತಾಯಿ’ ತೀರಿಹೋದಳೆಂದು

ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದೊಳಗೆ ‘ವರ್ಣಕ’ದ ಪಾಂಡಿತ್ಯಸಾರ ಬಸಿದಿಟ್ಟಿದ್ದಾರೆ ಜನಾರ್ಧನ ಭಟ್

ಇದನ್ನೂ ಓದಿ : ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಪತ್ರಕರ್ತ ನಾಗೇಶ ಹೆಗಡೆ

Published On - 3:38 pm, Fri, 31 December 21

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್