Poetry : ಅವಿತಕವಿತೆ ; ಸತ್ತಾಗ ಜನ ಹೇಳುವರು ಇಂತವರ ‘ತಾಯಿ’ ತೀರಿಹೋದಳೆಂದು

Translation : ‘ಅನುವಾದವೆಂದರೆ ಯಾವುದೇ ಇತರ ಭಾಷೆಯ ಕವಿತೆಗಳನ್ನು ಓದಿದಾಗ ಅವು ನಮ್ಮೊಳಗಿನ ಅಂತಃಕರಣವನ್ನು ಸ್ಪರ್ಶಿಸಬೇಕು, ನೋವು ಆರ್ದ್ರತೆಗಳನ್ನು ಮೀಟುವ ಯಾವುದೇ ಭಾಷೆಯ ಕವಿತೆಗಳನ್ನು ಅನುವಾದಿಸದೇ ಇನ್ನು ಸಾಧ್ಯವಿಲ್ಲ ಎನಿಸುವಷ್ಟು ಅವು ನಮ್ಮೊಳಗಿಳಿದಾಗ ತಾವಾಗಿಯೇ ಮೂರ್ತಗೊಳ್ಳುತ್ತವೆ.‘ ರೇಣುಕಾ ನಿಡಗುಂದಿ

Poetry : ಅವಿತಕವಿತೆ ; ಸತ್ತಾಗ ಜನ ಹೇಳುವರು ಇಂತವರ ‘ತಾಯಿ’ ತೀರಿಹೋದಳೆಂದು
ಶ್ರೀದೇವಿ ಕಳಸದ | Shridevi Kalasad

|

Jun 27, 2021 | 5:20 PM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ, ಲೇಖಕಿ, ಅನುವಾದಕಿ ರೇಣುಕಾ ನಿಡಗುಂದಿ ಅವರ ಕವಿತೆಗಳನ್ನು ನೀವಿಲ್ಲಿ ಓದಬಹುದು. ಹಾಗೆಯೇ ಅವರು ಅನುವಾದಿಸಿದ ಆದಿವಾಸಿ ಸಂತಾಲಿ ಕವಿ ನಿರ್ಮಲಾ ಪುತುಲ್ ಅವರ ಕವಿತೆಗಳನ್ನೂ. ಝಾರಖಂಡದ ದುಮಕಾ ಜಿಲ್ಲೆಯಲ್ಲಿ ಜನಿಸಿದ ನಿರ್ಮಲಾ ಬಹುಚರ್ಚಿತ ಸಂತಾಲಿ ಕವಿಯತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ರಾಜಕೀಯ ವಿಜ್ಞಾನದಲ್ಲಿ ಪದವಿ ಮತ್ತು ನರ್ಸಿಂಗ್ ತರಬೇತಿಯಲ್ಲಿ ಡಿಪ್ಲೊಮಾ ಪಡೆದಿರುವ ಇವರ ಕವಿತೆಗಳು ಅನೇಕ ಭಾರತೀಯ ಭಾಷೆಗಳಿಗೆ ತರ್ಜುಮೆಗೊಂಡದ್ದಲ್ಲದೆ ಬಿಹಾರ್, ಜಮ್ಮೂ, ರಾಜಸ್ಥಾನ್, ಕೇರಳ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿವೆ. ಅನುವಾದಿಸಿದ್ದಾರೆ. 

*

ಕಳೆದ ಕೆಲವು ದಶಕಗಳಲ್ಲಿ ಕನ್ನಡ ಕಾವ್ಯದಲ್ಲಿ ನನಗೆ ಹೊಸಾ ತೆರಪುಗಳು ಕಾಣುತ್ತಿರುವುದು ಹೆಂಗಸರು ಬರೆದ ಕಾವ್ಯದಲ್ಲಿ. ಇಲ್ಲಿ ನಾನು ಸಾಧ್ಯತೆಗಳ ಬಗ್ಗೆ ಮಾತಾಡುತ್ತಿದ್ದೇನೆಯೇ ಹೊರತು ಸಿದ್ಧಿಯ ಬಗ್ಗೆ ಅಲ್ಲ. ಯಾಕೆಂದರೆ ಕಾವ್ಯದ ಗಂಡು ಸಾಧ್ಯತೆಗಳು ಎಂದೋ ಬರಡಾಗಿ ಹೋಗಿವೆ. ಅದ್ದರಿಂದಲೇ ಏನೋ ಕಳೆದ ಕೆಲವು ದಶಕಗಳ ಕನ್ನಡ ಕವಿತೆಯ ಚಿರಂತನ ಸಾಲುಗಳು ಹೆಂಗರುಳಿನವಾಗಿವೆಯೇ ಹೊರತು ಗಂಡುಮೆಟ್ಟಿನವಾಗಿಲ್ಲ. ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹೆಂಗಸರು ಕಾವ್ಯ ರಚನೆಗೆ ತೊಡಗುತ್ತಿದ್ದಾರೆ. ಗಂಡು ಪೂರ್ವಗ್ರಹಗಳನ್ನು ಬುಡಸಮೇತ ಹಿಡಿದು ಅಲ್ಲಾಡಿಸುವ, ಹೆಬ್ಬಯಕೆಗಳನ್ನು ಒಮ್ಮೆ ಮೆಲುದನಿಯಲ್ಲಿ ಒಮ್ಮೆ ಕಠೋರವಾಗಿ ಕೇಳಿಸಿಕೊಳ್ಳುವಂತೆ ಮಾಡುವ ಕವಿತೆಗಳು ಈ ಅವಧಿಯಲ್ಲಿ ಗಮನಾರ್ಹವಾಗಿ ಬಂದಿವೆ. ಕನ್ನಡ ಕಾವ್ಯದ ಕೊನೆಯ ವಿದ್ಯಾರ್ಥಿಯಾಗಿ ನಾನೂ ಅದರಿಂದ ಬಹಳ ಕಲಿತಿದ್ದೇನೆ. ಈ ಚೌಕಟ್ಟಿನಲ್ಲಿ ರೇಣುಕಾ ಅವರ ಕವಿತೆಗಳನ್ನು ಕೆಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ.

ಪ್ರಾಚೀನ ತಮಿಳು ಕಾವ್ಯ ಮೀಮಾಂಸೆ ಕಾವ್ಯದ ಎರಡು ತುದಿಗಳನ್ನು ಗುರುತಿಸಿತ್ತು. ಹೆಂಗಸಿನ ಜಗತ್ತಿನ ಒಳ ಕವಿತೆಯನ್ನು ಅಗಂ ಎಂದೂ, ಗಂಡು ತುರ್ತುಗಳ ಹೊರ ಕವಿತೆಯನ್ನು ಪುರಂ ಎಂದೂ ಕರೆಯಿತು. ಆದರೆ ಹಾಗೆ ಮಾಡಿದ್ದು ಬಿಚ್ಚು ನೋಟದ ಸಲೀಸಿಗಾಗಿ. ಒಳ ಕವಿತೆ ಹೊರ ತುರ್ತುಗಳಲ್ಲಿ ಮೈದಾಳದೇ ಹೋದರೆ, ಅಥವಾ ಹೊರಗವಿತೆ ಒಳ ತುಡಿತಗಳಿಂದ ಮಿಡಿಯದೇ ಹೋದರೆ ಕವಿತೆಯ ಜೀವ ದೇಹಗಳು ಒಂದಾಗುವುದಿಲ್ಲ. ಇತ್ತಿತ್ತಲಾಗಿನ ಕನ್ನಡ ಕಾವ್ಯದ ತೊಂದರೆ ಇರುವುದು ಇಲ್ಲಿಯೆ. ಕೆಲವು ಸಲ ಗೊಣಗುಡುವಿಕೆಯಾಗಿ ಇನ್ನು ಕೆಲವು ಸಲ ಅಬ್ಬರವಾಗಿ ಕವಿತೆ ಸೋತು ಬಿಡುತ್ತದೆ. ಆದರೆ ರೇಣುಕಾ ಅವರು ಒಳ-ಹೊರಗುಗಳಿಂದನ್ನೂ ಕವಿತೆಯ ನೇಯ್ಗೆ ಒಳಗೆ ಹೆಣೆಯುತ್ತಿರುವುದರಿಂದ ಅವರು ತಮ್ಮ ಕಾವ್ಯಯಾತ್ರೆಯನ್ನು ಸರಿಯಾದ ರೀತಿಯಲ್ಲೇ ಶುರು ಮಾಡಿದ್ದಾರೆ ಎಂದು ನನ್ನ ನಂಬುಗೆ. ಡಾ. ಎಚ್. ಎಸ್. ಶಿವಪ್ರಕಾಶ್, ಹಿರಿಯ ಕವಿ, ನಾಟಕಕಾರರು. * ಹೆಣ್ಣು ಹುಡುಕುತ್ತಿರುವ ಸಖ್ಯಕ್ಕೂ ಅವಳ ಬದುಕಿಗೂ ಆತ್ಮಕ್ಕೂ ಏನು ಸಂಬಂಧ? ಆ ಆತ್ಮವು ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡುತ್ತಿದೆಯೇ? ಯಾಕೋ ಕವಿಗೆ ಅದರ ಬಗ್ಗೆ ನಂಬಿಕೆಯಿರುವಂತೆ ಕಾಣಿಸುವುದಿಲ್ಲ. ಸ್ವತಃ ಆತ್ಮವೇ ನೂರು ನೋವುಗಳಿಗೆ ಪಕ್ಕಾಗಿ ತಾನೇ ಬಿಡುಗಡೆಯ ದಾರಿಯನ್ನು ಹುಡುಕುತ್ತಿರುವ ಅಸಹಾಯಕ ಜೀವಿಯಂತೆ ಕಾಣಿಸುತ್ತದೆ. ಅದೆಷ್ಟೆಂದು ಅದು ನೋವುಗಳ, ನಿಟ್ಟುಸಿರುಗಳ ಭಾರ ಹೊತ್ತೀತು? ನಿರಾಕಾರ ಸ್ವರೂಪಿಯಾದ ಆತ್ಮಕ್ಕೆ ಮೋಕ್ಷ ಸಿಕ್ಕರೆ ಸಾಕೆಂದು ಅನಿಸುವಷ್ಟು ಅದು ಪಾಪದ್ದಾಗಿಬಿಡುವುದು ಅದರ ಮೌನದ ಕಾರಣಕ್ಕಾಗಿ. ಕವಿತೆ ಕಟ್ಟುವ ಮಹತ್ವಾಕಾಂಕ್ಷೆ ಮತ್ತು ಕೌಶಲಕ್ಕಿಂತ ತನ್ನೊಳಗನೇ ಬಗೆದು ಹೇಳುವ ಆರ್ತತೆಯೇ ರೇಣುಕಾ ಅವರಿಗೆ ಮುಖ್ಯ. ಈ ಆರ್ತತೆಯೇ ಇವರ ಕವಿತೆಗಳಿಗೆ ಆರ್ದ್ರತೆಯನ್ನು ಕೊಟ್ಟಿದೆ. ಕಾವ್ಯದ ಎರಡು ಮೂಲ ಉರುಗೋಲುಗಳು, ಜೀವದ್ರವ್ಯಗಳು ಇವರ ಕಾವ್ಯದಲ್ಲಿವೆ ಇದಕ್ಕಿಂತ ಹೆಚ್ಚಿಗೇನು ಬೇಕು ಕಾವ್ಯಕ್ಕೆ? ಜೊತೆಗೆ ಹೆಣ್ಣಿನ ಹೋರಾಟದ ರಾಜಕೀಯ ನೆಲೆಯೂ ಇವರ ಕಾವ್ಯಕ್ಕೆ ದಕ್ಕಲಿ ಎನ್ನುವುದು ನನ್ನ ವೈಯಕ್ತಿಕ ಬಯಕೆ. ಕಾವ್ಯವು ಹೆಣ್ಣಿನ ಅಭಿವ್ಯಕ್ತಿಯೆಷ್ಟೋ ಅಷ್ಟೇ ಅವಳ ಹೋರಾಟದ ಆಯುಧವೂ ಹೌದು. ಇದರರ್ಥ ವ್ಯಗ್ರತೆಯೆಂದಾಗಲೀ ಘೋಷಣಾಕಾವ್ಯವೆಂದಾಗಲೀ ಅಲ್ಲ. Personal is political ಎನ್ನುವ ಅರ್ಥದಲ್ಲಿ. ಡಾ. ಎಂ.ಎಸ್. ಆಶಾದೇವಿ, ಹಿರಿಯ ವಿಮರ್ಶಕರು

*

ನಿರ್ಮಲಾ ಪುತುಲ್ ಅವರ ಎರಡು ಕವಿತೆಗಳು

avitha kavithe

ಕವಿ ನಿರ್ಮಲಾ ಪುತುಲ್

ಮೂಲ : ಹಿಂದಿ

ಹೇಳಬಲ್ಲಿರಾ ನೀವು ?

ಗಂಡಸಿಗಿಂತ ಭಿನ್ನವಾದ ಒಂದು ಹೆಣ್ಣಿನ ಏಕಾಂತ ಏನೆಂದು ಗೊತ್ತೇ ನಿಮಗೆ ?

ಸಂಸಾರ- ಪ್ರೇಮ, ಜಾತಿಗೂ ಮಿಗಿಲಾದ ಹೆಣ್ಣಿನ ಅಸ್ಮಿತೆಯ ಕುರಿತು ಹೇಳಬಲ್ಲಿರಾ ನೀವು?

ಯುಗಗಳಿಂದ ತನ್ನದೇ ಆದ ನೆಲೆಗಾಗಿ ತಹತಹಿಸುತಿರುವ ಹೆಣ್ಣಿಗೆ ಹೇಳಬಲ್ಲಿರಾ ಅವಳ ಮನೆಯ ವಿಳಾಸ?

ಅವಳದೇ ಆದ ಚಿತ್ತಭಿತ್ತಿಯಲಿ ಹೆಣ್ಣು ತನ್ನ ಇರುವಿಕೆಯನೂ, ಇಲ್ಲದಿರುವಿಕೆಯನೂ ಒಟ್ಟೊಟ್ಟಿಗೇ ಅನುಭಸಬಲ್ಲಳೆಂದು ಬಲ್ಲಿರಾ ನೀವು ?

ಕನಸುಗಳಿಂದ ದೂರ ಓಡುವ ಹೆಣ್ಣನ್ನು ಬೆಂಬತ್ತಿ ಹೋಗಿ ಸಂಬಂಜಗಳ ಕುರುಕ್ಷೇತ್ರದಲ್ಲಿ ಏಕಾಂಗಿಯಾಗಿ ಸೆಣಸಾಡುತ್ತಿರುವ ಅವಳ ಕಣ್ಣಲ್ಲಿ ಕಣ್ಣಿಟ್ಟು ಎಂದಾದರೂ ನೋಡಿರುವಿರಾ ?

ದೇಹದ ಭೂಗೋಳದಿಂದಾಚೆ ಹೆಣ್ಣಿನ ಅಂತರಂಗದ ಗಂಟುಗಳನ್ನು ಬಿಡಿಸಿ ಎಂದಾದರೂ ಓದಿರುವಿರಾ ಅವಳೊಳಗಿನ ಕುದಿವ ಇತಿಹಾಸವನು

ಓದಿರುವಿರಾ ಎಂದಾದರೂ ಅವಳ ದಟ್ಟಮೌನದ ಹೊಸಿಲಲಿ ಕುಳಿತು ಮಾತಿಗಾಗಿ ತಡಕಾಡುತಿರುವ ಆ ಮೊಗವನು !

ನೀವೇ ಉತ್ತಿ ಬಿತ್ತಿದ ಭೂಮಿ ನಿಮ್ಮೆದೆಯಲಿ ಹಸಿರು ಹಬ್ಬಿ ನಲಿವಾಗ ಹುಸಿ ಹಮ್ಮು ಬಿಮ್ಮುಗಳಳಿದು ತೇವವಾಗದೇ ಹೃದಯ ಇನಿಸಾದರೂ?

ಅವಳ ಬಂಧ ಅನುಬಂಧಗಳ ವ್ಯಾಕರಣ ಅರುಹಬಲ್ಲಿರಾ ನೀವು ಹೆಂಗರುಳಿನಿಂದಲೇ ಹೆಣ್ಣನರಿಯುತ ಹೆಣ್ತನದ ಪರಿಭಾಷೆಯನು ವಿವರಿಸಬಲ್ಲಿರಾ ನೀವು?

ಇಲ್ಲವಾದರೆ

ಹೆಣ್ಣೆಂದರೆ ನೀವೇನು ಬಲ್ಲಿರಿ ? ಅಡುಗೆ ಮತ್ತು ಹಾಸಿಗೆಯ ಗಣಿತದಾಚೆ ಮಹಿಳೆಯೊಬ್ಬಳ ವಿಳಾಸ ಹೇಳಬಲ್ಲಿರಾ?

ಹೇಳಲಾರಿರಿ ನೀವು ಯಾಕೆಂದರೆ- ಅಸಲಿಗೆ ಅವಳಿಗೆ ವಿಳಾಸವೆಂಬುದೇ ಇಲ್ಲ

ಬಾಲ್ಯದಿಂದ ತಾರುಣ್ಯದ ಹೊಸಿಲತನಕವೂ ಅಪ್ಪನ ವಿಳಾಸವೇ ಅವಳದು.

ಮದುವೆಯ ನಂತರವಂತೂ ಅವಳ ಹೆಸರೂ ಬದಲಾಗುವುದು ಗಂಡನ ಮನೆ ವಿಳಾಸ ಮತ್ತವನ ಹೆಸರೇ ಅವಳ ಗುರುತಾಗುವುದು

ಹೇಳಬಲ್ಲಿರಾ? ಅವಳ ಅಸಲೀ ವಿಳಾಸವನು

ಇಲ್ಲ, ಹೇಳಲಾರಿರಿ!

ಯಾಕೆಂದರೆ- ಕೊನೆಗೂ ಮುದಿತನದಲಿ ಮಗನ ವಿಳಾಸವೇ ಅವಳದಾಗಿ ಉಳಿದುದು ಸತ್ತಾಗ ಜನ ಹೇಳುವರು ಇಂತವರ ‘ತಾಯಿ’ ತೀರಿಹೋದಳೆಂದು!

ಮೂಲ : ಹಿಂದಿ

*

ನೆಲೆ ಅರಸುತ್ತಿರುವ ವ್ಯಾಕುಲ ಮಹಿಳೆ

ಮೂಲ : ಹಿಂದಿ

ಇದೆಂಥ ವಿಪರ್ಯಾಸ ನಾವು ನಮ್ಮದೇ ಲೋಕದಲ್ಲಿ ಗಂಡಸು ಹಾಕಿಟ್ಟ ಚುಕ್ಕಿಗಳಲ್ಲಿ ಅವ ಬಯಸಿದ ರಂಗೋಲಿಯಾಗುವುದೇ ಸಹಜವೆಂಬಷ್ಟು ಪಳಗಿದ್ದೇವೆ ಚುಕ್ಕಿ, ರೇಖೆ, ರಂಗೋಲಿ ನಾನೇ ನಾನಾಗಿ ನನ್ನಿಂದಲೇ ನಾ ಮುಕ್ತಳಾಗಬಯಸುವೆನು !

ಏನಿದೆ ? ಹೆಣ್ಣಿಗೆ-ಮನೆ-ಮಕ್ಕಳು-ಹಿಡಿಪ್ರೇಮದ ಮಹದಾಸೆಯ ಹೊರತಾಗಿ ಏನಿದೆ ? ಅಸಲಿಗೆ ಹೆಣ್ಣು ಈ ಹುದಲಿನಲಿ ಸಿಲುಕಿಕೊಳ್ಳುತ್ತಾ ಹೋದಷ್ಟೂ ನಿಗೂಢದಂತಿರುವ ಅದೆಲ್ಲವೂ ಅಷ್ಟೇ ಅಮೂರ್ತವಾಗುತ್ತ ಹೋಗುವುದು

ಅದೇ ಹೊತ್ತಲಿ ತನ್ನದೇ ಕಲ್ಪನೆಯಲಿ ಅನುದಿನವೂ ತನ್ನನ್ನೇ ತಾನು ಅರಸುತ್ತ ವ್ಯಾಕುಲಗೊಳುವ ಪ್ರತಿ ಹೆಣ್ಣು ಮನೆ, ಪ್ರೇಮ ಹಾಗೂ ಜಾತಿಯಾಚೆಗಿನ ತುಂಡು ಭೂಮಿ ಕೇವಲ ಅವಳದಾಗಿರುವ ತುಂಡು ಭೂಮಿ ಶಬ್ದದಾಚೆಗಿನ ಒಂದು ಉನ್ಮುಕ್ತ ಆಕಾಶ ಬೊಗಸೆಯಲ್ಲದ ಬೊಗಸೆ ಇದೆಯೆಂಬ ಅನುಭೂತಿ ಮಾತ್ರ!

*

ರೇಣುಕಾ ನಿಡಗುಂದಿ ಅವರ ಕವಿತೆಗಳು

avitha kavithe

ರೇಣುಕಾ ಕೈಬರಹದಲ್ಲಿ ಕವಿತೆ

ಸಂತೆಯಲ್ಲೂ ನಾನು ನನ್ನೊಳ ಚಿಪ್ಪಿನಲ್ಲಿ ಆರಾಮವಾಗಿ ಅಡಗಿರಬಲ್ಲೆ. ಸಾವಿರ ಜನ ಮಾತಾಡುತ್ತಿರುವಾಗ ನಾನು ನನ್ನ ಲೋಕದಲ್ಲಿ ಮೌನವಾಗಿರಬಲ್ಲೆ. ಸದಾ ನನ್ನೊಳಗೆ ಮೊರೆಯುತ್ತಿದ್ದುದು ಕಡಲಿನ ಮೊರೆತವೋ, ಶಬ್ಧಗಳ ಲೀಲೆಯೋ, ಭಾವಗಳ ಜಾಗರಣೆಯೋ ಗೊತ್ತಿಲ್ಲ. ಏಳನೇ ತರಗತಿಯಿಂದಲೇ ಕವಿತೆ ಬರೆಯಲು ಪ್ರಾರಂಭಿಸಿದೆ. ನನ್ನ ಏಕಾಂತ. ನನ್ನ ಹತಾಶೆ, ಸೋಲು-ಗೆಲುವು, ಕೀಳರಿಮೆ, ಅಪರಿಚಿತತೆ, ಅನಾಥ ಭಾವಗಳ ಭೋರ್ಗರೆತದಲ್ಲಿ ಸಾಥ್ ನೀಡಿದ್ದು ಕವಿತೆಗಳೇ.

ಅನುವಾದವೆಂದರೆ ಯಾವುದೇ ಇತರ ಭಾಷೆಯ ಕವಿತೆಗಳನ್ನು ಓದಿದಾಗ ಅವು ನಮ್ಮೊಳಗಿನ ಅಂತಃಕರಣವನ್ನು ಸ್ಪರ್ಶಿಸಬೇಕು, ನೋವು ಆರ್ದ್ರತೆಗಳನ್ನು ಮೀಟುವ ಯಾವುದೇ ಭಾಷೆಯ ಕವಿತೆಗಳನ್ನು ಅನುವಾದಿಸದೇ ಇನ್ನು ಸಾಧ್ಯವಿಲ್ಲ ಎನಿಸುವಷ್ಟು ಅವು ನಮ್ಮೊಳಗಿಳಿದಾಗ ತಾವಾಗಿಯೇ ಮೂರ್ತಗೊಳ್ಳುತ್ತವೆ. ಇಲ್ಲಿ ಸಂತಾಲಿ ಕವಿಯತ್ರಿ ನಿರ್ಮಲಾ ಕವಿತೆಗಳು ಬರಿ ಕವಿತೆಗಳಾಗಿರದೇ ಆದಿವಾಸಿ ಹೆಣ್ಣುಮಕ್ಕಳ ಸಂಘರ್ಷ, ದುಃಖ ಯಾತನೆಗಳ ಸಂಕಥನ. ಆದಿವಾಸಿಗಳ ಮೇಲಾಗುವ ಅತ್ಯಾಚಾರ ದೌರ್ಜನ್ಯ ನಮ್ಮನ್ನು ಬಡಿದೆಬ್ಬಿಸುವಂತಹ ಶಕ್ತ ಭಾಷೆಯಲ್ಲಿ ನಿರ್ಮಲಾ ಪದಗಳ ಚಾಟಿಯೇಟನ್ನು ಬೀಸುತ್ತಾರೆ. ಅವರದೇ ಭಾಷೆಯಲ್ಲಿ ‘ಪದಗಳು ನಗಾರಿಯಂತೆ ಬಾರಿಸುತ್ತವೆ, ಧ್ವನಿಸುತ್ತವೆ ವ್ಯವಸ್ಥೆಯ ಅರಾಜಕತೆಯ ಬಗ್ಗೆ, ಆದಿವಾಸಿ ಹೆಣ್ಣುಮಕ್ಕಳ ಅಸಹಾಯಕತೆಯ ಬಗ್ಗೆ, ಅವರದಾಗಿರುವ ನೆಲ ಜಲ, ಬೆಟ್ಟ ಗುಡ್ದ, ಕಾಡುಗಳನ್ನು ಬಂಡವಾಳಶಾಹಿಗಳು ತಮ್ಮ ಸ್ವಾರ್ಥಕ್ಕಾಗಿ ನುಂಗಿಹಾಕಲು ಹವಣಿಸಿದರೆ, ಸರಕಾರಗಳು ಅಭಿವೃದ್ಧಿಯ ಕನಸು ತೋರಿಸಿ ನೈಸರ್ಗಿಕ ಸಂಪನ್ಮೂಲಗಳನ್ನು ನೆಲಸಮಗೊಳಿಸಿ ಅಲ್ಲಿನ ಮೂಲ ನಿವಾಸಿಗಳನ್ನು ನಕ್ಸಲರು, ಅಪರಾಧಿಗಳ ಪಟ್ಟಕಟ್ಟಿ ಕಾಡಿನಿಂದ ಓಡಿಸಲು ಬಂಡವಾಳಶಾಹಿಗಳೊಂದಿಗೆ ಕೈಕೈ ಮಿಲಾಯಿಸುತ್ತಾರೆ’ ಇಂಥ ಅನ್ಯಾಯಗಳ ಬಗ್ಗೆ ನಿರ್ಮಲಾ ಕವಿತೆಗಳು ಜಾಗಟೆಯ ಧ್ವನಿಯಾಗಿ ಅಂತರಂಗವನ್ನು ಬಡಿದೆಬ್ಬಿಸುತ್ತವೆ.

ಕಿಟಕಿಗೆ ಬರುವ ಪಾರಿವಾಳ ಮತ್ತು ನಾನು

ಹೇಗೆ ಗೊತ್ತಾಗುತ್ತದೆ ಈ ಪಾರಿವಾಳಗಳಿಗೆ ನಾನು ಅಡುಗೆ ಮನೆಗೆ ಬಂದದ್ದು ಚಹಕ್ಕೆ ನೀರಿಟ್ಟಿದ್ದು

ರಾತ್ರಿಯಿಡೀ ನನಗಾಗಿಯೇ ಕಾದು ಕುಳಿತಂತೆ ಹಾರಿಬರುತ್ತದೊಂದು ಕಿಟಕಿಯ ದಂಡೆಗೆ ಅದಕ್ಕೆಷ್ಟು ಭರವಸೆ ಕಿಟಕಿ ತೆರೆದು ಕಾಳು ಹಾಕುತ್ತೇನೆಂಬ ನಂಬಿಕೆ ಬಂದಿದ್ದಾದರೂ ಹೇಗೆ?

ಅಚ್ಚರಿಯಾಗುತ್ತದೆ ನನ್ನ‌ ಮುಖ ಗುರುತು ದನಿಯ ಆಲಾಪ ಎದೆಯ ಕುದಿ ಕಣ್ಣ ಬಣ್ಣ ಮೈಯ ಪಸೆ ವಾಸನೆ ಬಲ್ಲವೇ ಅವು?

ಅಥವಾ

ಇಲ್ಲಿಲ್ಲದ ನಿನ್ನ ಅಲ್ಲಿಲ್ಲ‌ದ ನನ್ನ ಬಯಲು ಆಲಯದಲ್ಲಿ ಇಲ್ಲದೆಯೂ ಇದ್ದಿರಬಹುದಾದ ಅಗೋಚರ ಅದೃಶ್ಯ ಆತ್ಮದ ತುಣುಕಗಳನ್ನು ಹೆಗಲಿಗೆ ಕಟ್ಟಿಕೊಂಡು ಅವು ರೆಕ್ಕೆಬಿಚ್ಚಿ ಹಾರುತ್ತಿರಬೇಕು ಅನಂತ ದಿಗಂತದಲ್ಲಿ

ಇಲ್ಲಿನ ಜನ ಹೇಳುತ್ತಾರೆ ಪಾರಿವಾಳಗಳು ಮನುಷ್ಯನ ದುಃಖವನ್ನು ಹಂಚಿಕೊಳ್ಳುತ್ತವಂತೆ ಈ ನೋವಿನ ಯಾತ್ರೆಯನ್ನು ದುಃಖದ ಭಾಷೆಯನ್ನು ಪ್ರೇಮದ ವ್ಯಾಖ್ಯಾನವನ್ನು ಬದಲಿಸಬೇಕೆನಿಸುತ್ತದೆ…

ಕಿಟಕಿಯ ಒಳಗಿನಿಂದಲೇ ನಿರುಕಿಸುತ್ತೇನೆ ಫಳಫಳ ಹೊಳೆದು ಮಾಯವಾಗುವ ಆ ಕಣ್ಣಿನಲ್ಲಿ ನಿನ್ನ ಬಿಂಬವೇನಾದರೂ ಇದೆಯೇನೋ ಎಂದು ಒಂದು ಸಣ್ಣ ಗುಮಾನಿ ಅಷ್ಟೇ !

avitha kavithe

ರೇಣುಕಾ ಅವರ ಪುಸ್ತಕಗಳು

ಇರಬೇಕು ನೀನು

ಇರಬೇಕು ನೀನು ಹೀಗೇ ನನ್ನ ಛಿದ್ರಗೊಂಡ ಆತ್ಮದ ತುಣುಕುಗಳನ್ನ ಫಳ ಫಳ ಉಜ್ಜಿ ಕನ್ನಡಿಯಂತೆ ಆಗಾಗ ನನ್ನೆದುರು ನಿಲ್ಲಿಸಿ ಮತ್ತೆ ಮತ್ತೆ ಕತ್ತುಕೊಂಕಿಸಿ ನೋಡಿಕೊಳ್ಳಲು ಬೇಕು ನೀ ನನಗೆ.

ಸದ್ದಿಲ್ಲದ ಬಾಗಿಲಲ್ಲಿ ಗಾಳಿಯ ಸದ್ದಿಗೂ ಚಡಪಡಿಸುವ ಚಿಲಕದ ಕೊಂಡಿಗೇ ಸಿಕ್ಕಿಹೋದ ಹಳೇ ನಂಟುಗಳ ನೇವರಿಸಿ ಗಂಟು ಬಿಡಿಸಿ ತಾಳೆ ಹಾಕಲು ಹೀಗೇ ಇರಬೇಕು ನೀನು.

ಇರದ ಘಳಿಗೆಗಳ ಸಾಲದಲ್ಲೂ ಸಾಲದೇ ಮತ್ತೆ ಮತ್ತೆ ಸೋಲುವ ಬಯಕೆಗಳು ಹುತ್ತ ಕಟ್ಟಿಹೋದ ಕಾಲದ ಪದರಿನಲ್ಲೂ ಹಂಚಿಹೋದ ನರಳಿಕೆಗಳು ಅತ್ತಲೂ ಇತ್ತಲೂ ಸುಮ್ಮನೇ ಹರಡಿಕೊಂಡ ಬೇರುಗಳನ್ನು ಕೊಂಬೆಗಳ ಮೇಲಿನ ಗೂಡನ್ನೂ ನೋಡಲು ಇರಬೇಕು ನೀ ನನ್ನ ಬಳಿ ಹೀಗೇ.

*

ಇಹ – ಪರ

ನಾನು ಇಹವೆಂದರೆ ಇಹ ಪರವೆಂದರೆ ಪರ ಒಟ್ಟಿನಲ್ಲಿ ಇಹವೋ ಪರವೋ ಹಿಂಜಿದರೂ ಎರಡು ಎರಡಲ್ಲ !

ಬಾಗುವುದೆಂದರೆ ಕಾಮನಬಿಲ್ಲಾಗುವುದು ಗಾಳಿ ಬಿಲ್ಲಿನ ಬೆನ್ನೇರಿ ಮತ್ತೆ ಕಡಲ ನಾಭಿಗೆ ಗುರಿಯಿಟ್ಟು ಧುಮುಕುವಾಗ ದಡದಾಚೆಯ ಮರಳ ತಡಿಕೆಯಲ್ಲಿ ಬೆಳಕೊಂದು ನಡಗುತ್ತಿತ್ತು!

ಉಸಿರು ಹೊತ್ತಿತು ಬತ್ತಿ ಚಾಚಿತು ಬೆರಳ ಸಂದಿಯಿಂದ ಆಯುಷ್ಯವೊಂದು ಸರಿದುಹೋಯ್ತು.

ನಟ್ಟಿರುಳಲಿ ನಡುಗಡಲಿನಲ್ಲಿಯೂ ನಾವೆ ಹಾದಿ ತಪ್ಪುವುದಿಲ್ಲ ನಕ್ಷತ್ರಗಳ ಹಾದಿ ಮೀನನ ಹೆಜ್ಜೆಯ ನಾದ ಎರಡೂ ಬೇರೆಯಲ್ಲ.

ಬೆಳದಿಂಗಳು ಸುಟ್ಟು ಬೂದಿಯಾದ ಮರಳುಗಾಡನ್ನು ದಾಟಲು ಸುಂಕ ಕಟ್ಟಬೇಕು ಇಹದ ಗಣನೆಗೂ ಪರದ ಪದವಿಗೂ ನಿರ್ಗುಣಿಯಾಗಬೇಕು!

*

ಪರಿಚಯ: ರೇಣುಕಾ ನಿಡಗುಂದಿ ಮೂಲ ಧಾರವಾಡ. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ. ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ. ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ ಜಂಟಿಕಾರ್ಯದರ್ಶಿಯಾಗಿಯೂ, ಸಂಘದ ಮುಖವಾಣಿ ‘ಅಭಿಮತ’ ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ ‘ರಾಜಧಾನಿಯಲ್ಲಿ ಕರ್ನಾಟಕ’ ಪುಸ್ತಕವನ್ನು ಸಂಪಾದಿಸಿದ್ದು ಅನೇಕ ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ. ಬಿಡುಗಡೆಯಾದ ಕೃತಿಗಳು; ‘ಕಣ್ಣ ಕಣಿವೆ’, ‘ದಿಲ್ಲಿ ಡೈರಿಯ ಪುಟಗಳು’, ‘ಅಮೃತ ನೆನಪುಗಳು’, ‘ನಮ್ಮಿಬ್ಬರ ನಡುವೆ’, ‘ಬಾ ಇಂದಾದರೂ ಮಾತಾಡೋಣ’ ಅಜೀತ್ ಕೌರ್ ಅವರ ಆತ್ಮಕಥನದ ಅನುವಾದ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’. * ನಿರ್ಮಲಾ ಪುತುಲ್ : ‘ನಗಾಡೆ ಕಿ ತರಹ ಬಜತೆ ಶಬ್ದ’, ಬೇಘರ್ ಸಪನೆ, ಮತ್ತು ಫೂಟೇಗಾ ಏಕ್ ನಯಾ ವಿದ್ರೋಹ್’ ಇವರ ಪ್ರಮುಖ ಕೃತಿಗಳು. ಸಾಹಿತ್ಯ ಅಕಾಡೆಮಿ ಹೊಸ ದಿಲ್ಲಿಯಿಂದ ಭಾಷಾ ಸಮ್ಮಾನ್, ಝಾರಖಂಡ ಸರಕಾರದ ರಾಜಕೀಯ ಸಮ್ಮಾನ, ಮುಕುಟ್ ಬಿಹಾರಿ ಸರೋಜ ಸಮ್ಮಾನ, ‘ನಾಗರಿ ಲಿಪಿ ಪರಿಷದ್- ದಿಲ್ಲಿ ಸಂಸ್ಥೆಯಿಂದ ವಿನೋಭಾ ಭಾವೆ ಸಮ್ಮಾನ, ಭಾರತೀಯ ಭಾಷಾ ಪರಿಷತ್ತು ಕಲಕತ್ತೆಯಿಂದ ಯುವ ಸಮ್ಮಾನ, ಸೆಂಟರ್ ಫಾರ್ ದಲಿತ ಲಿಟರೇಚರ್ ಆಂಡ ಆರ್ಟ್ಸ್ ನೀಡಿರುವ ‘ಅಂತಾರಾಷ್ಟ್ರೀಯ ದಲಿತ ಅಸ್ಮಿತಾ ಸಮ್ಮಾನ’ ಹೀಗೆ ಅಸಂಖ್ಯಾತ ಪ್ರಶಸ್ತಿಗಳು ಅವರ ಮುಡಿಗೇರಿವೆ. ಕಳೆದ ಹದಿನೈದು ವರ್ಷಗಳಿಂದಲೂ ಶಿಕ್ಷಣ, ಸಾಮಾಜಿಕ ಅಭಿವೃದ್ಧಿ, ಮಾನವ ಹಕ್ಕುಗಳು, ಆದಿವಾಸಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ವ್ಯಕ್ತಿಗತ ರೂಪದಲ್ಲಿ , ಸಮುದಾಯಿಕ ಮತ್ತು ಸಾಂಸ್ಥಿಕವಾಗಿ ಸಕ್ರೀಯವಾಗಿರುವ ನಿರ್ಮಲಾ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಡನೆ ಕೈಜೋಡಿಸಿದ್ದಾರೆ.

ಇದನ್ನೂ ಓದಿ  : Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada