World Heath Day 2025: ಆರೋಗ್ಯವೇ ಭಾಗ್ಯ; ಆರೋಗ್ಯವಂತರಾಗಿರಲು ಪ್ರತಿನಿತ್ಯ ನೀವು ಅನುಸರಿಸಲೇಬೇಕಾದ ಪ್ರಮುಖ ವಿಷಯಗಳಿವು
ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಬಹಳ ಮುಖ್ಯ. ಆದರೆ ಇಂದಿನ ಧಾವಂತದ ಬದುಕಿನಲ್ಲಿ ಹೆಚ್ಚಿನವರು ಒತ್ತಡದಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಒತ್ತಡದಲ್ಲಿ ಜೀವನ ಸಾಗಿಸುತ್ತ ಆರೋಗ್ಯದ ಕಡೆ ಗಮನ ಕೊಡದಿದ್ದರೆ, ಅದು ರೋಗಗಳನ್ನು ಹಾಗೂ ಅನಾರೋಗ್ಯವನ್ನು ಆಹ್ವಾನಿಸಿದಂತೆ. ಆದ್ದರಿಂದ ವಿಶ್ವ ಆರೋಗ್ಯ ದಿನದ ಈ ಸಂದರ್ಭದಲ್ಲಿ ಆರೋಗ್ಯವಂತರಾಗಿರಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಲು ಈ ಕೆಲವೊಂದು ವಿಷಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ.

ಆರೋಗ್ಯಕ್ಕಿಂತ (Health) ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಆದರೆ ಇಂದು ಮನುಷ್ಯ (Human) ಹೆಸರು ಮತ್ತು ಹಣ ಗಳಿಸುವ ಧಾವಂತದಲ್ಲಿ ಮಾನಸಿಕ (Mental) ಹಾಗೂ ದೈಹಿಕ ಆರೋಗ್ಯದ (Physical Health) ಕಡೆ ಗಮನ ಹರಿಸುವುದನ್ನೇ ಬಿಟ್ಟು ಬಿಟ್ಟಿದ್ದಾನೆ. ನಮ್ಮ ಬಳಿ ಎಷ್ಟು ಹಣ ಆಸ್ತಿ ಇದೆ ಎನ್ನುವುದಕ್ಕಿಂತ ನಮ್ಮ ಆರೋಗ್ಯ ಚೆನ್ನಾಗಿದೆಯೇ, ನಾವು ಆರೋಗ್ಯವಂತರಾಗಿ ಸಂತೋಷಕರ ಜೀವನವನ್ನು ಸಾಗಿಸುತ್ತಿದ್ದೇವೆಯೇ ಎನ್ನುವುದೇ ಬಹಳ ಮುಖ್ಯ. ಆರೋಗ್ಯವಂತರಾಗಿದ್ದಾಗ ಹಣ ಗಳಿಸಬಹುದು, ಆದರೆ ಆರೋಗ್ಯವನ್ನು ಹಣಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಒಂದೊಳ್ಳೆ ಜೀವನಶೈಲಿಯನ್ನು (Lifestyle) ಪಾಲಿಸುತ್ತಾ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ, ಆರೋಗ್ಯ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್ 07 ರಂದು ವಿಶ್ವ ಆರೋಗ್ಯ ದಿನವನ್ನು (World Health Day) ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ಆರೋಗ್ಯ ದಿನದ ಇತಿಹಾಸ:
ಎರಡನೆಯ ಮಹಾಯುದ್ಧದ ನಂತರ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕು ಎಂಬ ಚಿಂತನೆಯನ್ನಿಟ್ಟುಕೊಂಡು ಹಾಗೂ ಇಡೀ ಜಗತ್ತನ್ನು ಆರೋಗ್ಯಕರವಾಗಿರಿಸಬೇಕು ಎಂಬ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು (WHO) ಏಪ್ರಿಲ್ 7, 1948 ರಲ್ಲಿ ಸ್ಥಾಪಿಸಲಾಯಿತು. ಇದರ ಸ್ಥಾಪನ ವಾರ್ಷಿಕೋತ್ಸವದ ನೆನಪಿಗಾಗಿ 1950 ರಿಂದ ವಿಶ್ವ ಆರೋಗ್ಯ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ರೋಗ ತಡೆಗಟ್ಟುವಿಕೆ, ಆರೋಗ್ಯಕರ ಜೀವನಶೈಲಿ ಮತ್ತು ಆರೋಗ್ಯ ಸೌಲಭ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್ 7 ರಂದು ಪ್ರಪಂಚದಾದ್ಯಂತ ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಆರೋಗ್ಯ ದಿನದ ಉದ್ದೇಶ ಮತ್ತು ಮಹತ್ವ:
ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು, ಜನರ ಆರೋಗ್ಯವನ್ನು ಸುಧಾರಿಸುವುದು, ಅವರ ಆರೋಗ್ಯ ಮಟ್ಟವನ್ನು ಹೆಚ್ಚಿಸುವುದು ಮತ್ತು ಸಮಾಜದಲ್ಲಿ ರೋಗಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಮತ್ತು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುದಾಗಿದೆ.
ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸುವುದು ಮತ್ತು ಜಾಗತಿಕ ಆರೋಗ್ಯ ಸವಾಲುಗಳ ಬಗ್ಗೆ ಗಮನ ಹರಿಸುವ ಹಾಗೂ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಉದ್ದೇಶವನ್ನು ಹೊಂದಿದೆ. ಈ ದಿನ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಮಾನಸಿಕ ಆರೋಗ್ಯ, ದೇಹಾರೋಗ್ಯ, ಪೋಷಣೆ, ನೈರ್ಮಲ್ಯ, ಉಚಿತ ಆರೋಗ್ಯ ತಪಾಸಣೆಯಂತಹ ಜಾಗೃತಿ ಅಭಿಯಾನಗಳು, ಕಾರ್ಯಗಾರಗಳನ್ನು ನಡೆಸುತ್ತವೆ.
ಇದನ್ನೂ ಓದಿ: ಪ್ರಶಾಂತ ಮನಸ್ಸು, ಆರೋಗ್ಯಕರ ದೇಹ , ಸಮೃದ್ಧ ಬದುಕಿಗೆ ಗುಟ್ಟು ಕೇಳಿ
ಆರೋಗ್ಯವಂತರಾಗಿರಲು ಪ್ರತಿನಿತ್ಯ ನೀವು ಅನುಸರಿಸಲೇಬೇಕಾದ ಪ್ರಮುಖ ವಿಷಯಗಳಿವು:
• ಪ್ರತಿದಿನ ವ್ಯಾಯಾಮ ಮಾಡಿ: ಪ್ರತಿದಿನ ಒಂದು 30 ನಿಮಿಷಗಳಷ್ಟು ಸಮಯವನ್ನು ನಿಮಗಾಗಿ ಮೀಸಲಿಟ್ಟು ಯೋಗ, ವಾಕಿಂಗ್, ಸೈಕ್ಲಿಂಗ್ ಸೇರಿದಂತೆ ವ್ಯಾಯಾಮಗಳನ್ನು ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ, ಇದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಪ್ರಯೋಜನಕಾರಿಯಾಗಿದೆ.
• ಸಾಕಷ್ಟು ನೀರು ಕುಡಿಯಿರಿ: ದಿನಕ್ಕೆ ಕನಿಷ್ಟ 7 ರಿಂದ 8 ಲೋಟ ನೀರನ್ನು ಕುಡಿಯಿರಿ. ಇದು ನಿರ್ಜಲೀಕರಣವನ್ನು ತಡೆಯುವುದರ ಜೊತೆಗೆ ದೇಹದಲ್ಲಿನ ವಿಷವನ್ನು ಹೊರ ಹಾಕಲು ಕೂಡಾ ಸಹಕಾರಿ.
• ಸಮತೋಲಿತ ಆಹಾರವನ್ನು ಸೇವನೆ ಮಾಡಿ: ತರಕಾರಿ, ಹಣ್ಣುಗಳು, ಕಾಳುಗಳು ಸೇರಿದಂತೆ ಪ್ರೋಟೀನ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಆಹಾರ ಸೇವನೆ ಮಾಡಿ.
• ಉತ್ತಮ ನಿದ್ರೆಯನ್ನು ಪಡೆಯಿರಿ: ಒಂದೊಳ್ಳೆ ನಿದ್ರೆ ಕೂಡಾ ಆರೋಗ್ಯಕ್ಕೆ ತುಂಬಾನೇ ಮುಖ್ಯ. ಅದಕ್ಕಾಗಿ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ. ಇದು ದೇಹ ದಣಿವಿನ ಜೊತೆಗೆ ಮಾನಸಿಕ ಆಯಾಸವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
• ಫಾಸ್ಟ್‌ಫುಡ್ ಮತ್ತು ಎಣ್ಣೆಯುಕ್ತ ಆಹಾರಗಳನ್ನು ತಪ್ಪಿಸಿ: ಫಾಸ್ಟ್‌ಫುಡ್ ಸೇರಿದಂತೆ ಅನಾರೋಗ್ಯಕರ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ. ಈ ಆಹಾರಗಳು ಬೊಜ್ಜಿನ ಜೊತೆಗೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು.
• ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ: ಬಿಪಿ, ಶುಗರ್ ಸೇರದಂತೆ ಅಗತ್ಯ ಆರೋಗ್ಯ ತಪಾಸಣೆಗಳನ್ನು, ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸುತ್ತಿರಿ. ಇದರಿಂದ ಯಾವುದೇ ರೋಗಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಬಹುದು.
• ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ: ಧೂಮಪಾನ ಮತ್ತು ಕುಡಿತದಂತಹ ಚಟಗಳು ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತವೆ. ಮತ್ತು ಕಾಲನಂತರದಲ್ಲಿ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
• ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: ಆರೋಗ್ಯವನ್ನು ಕಾಪಾಡಿಕೊಳ್ಳಲು ಸೋಂಕುಗಳು ಬಾರದಂತೆ ತಡೆಗಟ್ಟಲು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದೇಹ ಸ್ವಚ್ಛತೆಯ ಜೊತೆಗೆ ಸುತ್ತ ಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ