Covid Diary : ಕವಲಕ್ಕಿ ಮೇಲ್ ; ಈಚೀಚ್ಗೆ ನಮ್ಮುಡುಗ ಒನ್ನಮನಿ ಆಡ್ತಾನೆ ಕೊರಡಿನಂಗೆ ಮನಗಿ ಬೆಳಿಗ್ಗಿ ಎಂಟಾದ್ರೂ ಏಳತಿಲ್ಲ

Youth : ‘ಮೇಡಂ, ಫೇಸ್ ಶೀಲ್ಡ್ ಅದೆಯ? ಇದ್ರೆ ಒಂದ್ ಕೊಡಿ, ಅರ್ಜೆಂಟ್’ ಅಂದು ಕೈಚಾಚಿದ. ಮುಂಗೈಯ ಕಪ್ಪು ಬ್ಯಾಂಡಿನ ಮೇಲೆ ಬಿಳಿಯ ಅಕ್ಷರದಲ್ಲಿ ಬರೆದುಕೊಂಡಿತ್ತು: ‘ಒನ್ ಲವ್, ಒನ್ ಹಾರ್ಟ್, ಒನ್ ಏಮ್’ ಎಂದು. ಅದರ ಕಡೆ ನೋಡಿ ಅದೇನು ಎಂದು ಕಣ್ಣಲ್ಲೇ ಪ್ರಶ್ನಿಸಿದೆ. ‘ಅದು ಮೇಡಂ, ಎಲ್ಲ ಒಂದೇ ಅಂತ. ನಂ ಗ್ರೂಪಿಂದು ಟೈಟಲ್ಲು’ ಅಂದ.

Covid Diary : ಕವಲಕ್ಕಿ ಮೇಲ್ ; ಈಚೀಚ್ಗೆ ನಮ್ಮುಡುಗ ಒನ್ನಮನಿ ಆಡ್ತಾನೆ ಕೊರಡಿನಂಗೆ ಮನಗಿ ಬೆಳಿಗ್ಗಿ ಎಂಟಾದ್ರೂ ಏಳತಿಲ್ಲ
Follow us
ಶ್ರೀದೇವಿ ಕಳಸದ
|

Updated on: Jun 27, 2021 | 9:11 AM

ಬಾಗಿಲನ್ನು ಅರೆತೆರೆದ ಹಸೀನಮ್ಮ ಬಾಳೆಹಣ್ಣಿನ ಕೋಣೆಯಲ್ಲಿದ್ದರು. ಒಳಗಿಂದ ಒಂದೊಂದೇ ಗೊನೆ ತಂದು ಹೊರಗೆ ಹಾಕುತ್ತಿದ್ದರು. ಕೆಲವು ಗಳಿತು ಪಿಸಿಪಿಸಿ ಎನ್ನುತ್ತಿವೆ. ಕೆಲವು ಕೊಳೆಯುವುದೊಂದು ಬಾಕಿ. ಅರೆ ಇವನ್ನೆಲ್ಲ ಏನು ಮಾಡುವರೋ ಅಂದುಕೊಳ್ಳುವಾಗ ಕೇಶವ ಬಂದನು. ಅವ ಈ ಊರಿಗೇ ಸಿರಿವಂತರೆಂದುಕೊಂಡವರ ಮನೆಯಲ್ಲಿ ಕೆಲಸ ಮಾಡುವವ. ಅವ ಐದುಗೊನೆ ಹಣ್ಣನ್ನು ಹೆಡಿಗೆಗೆ ತುಂಬಿದ. ‘ಅರೇ ಮೇಡಂ, ನೀವ್ಯಂತ ಇಲ್ಲಿ?’ ಎಂದ. ಅವನ ಒಡೆಯರು ಪ್ರತಿದಿನ ಬೆಳಿಗ್ಗೆ ಊರ ಬೀಡಾಡಿ ಗೋವುಗಳಿಗೆ ಬಾಳೆಯಹಣ್ಣು ಕೊಡುತ್ತ ಖ್ಯಾತರಾಗಿದ್ದರು. ಕೋವಿಡ್ ಬಂದು ಗುಣವಾದಮೇಲೆ ಗೋಸೇವೆ ಶುರುವಾಗಿತ್ತು. ಬೆಳಕು ಹರಿದದ್ದೇ ಅವರ ಮನೆಯ ಎದುರು ದನಗಳ ಸಂತೆ ನೆರೆದಿರುತ್ತದೆ. ನಾಳಿನ ತಿಂಡಿ ಒಯ್ಯಲು ಇಂದೇ ಅವ ಬಂದಿದ್ದಾನೆ. ಅವ ಹೊಡುವಾಗ ‘ಹಂಝನಿಗೆ ನಾಳಿ ಬತ್ತಿನಿ ಅಂತ ಹೇಳಿ, ಇನ್ಮೇಲೆ ದಿನಾ..’ ಅಂದ. ಇವರು, ‘ಬಗ್ಗೇಲ್ ಕಾಯಿ ಕೊಯ್ದ್ ಕೊಡ ತಮಾ. ಮಾಡಿನ ಮ್ಯಾಲೆ ಬಿದ್ದು ಹಂಚು ಒಡಿತೇ ಇದೆ’ ಎಂದರು.

*

ನಾನು ಅವರ ಬಳಿ ಮಾತನಾಡಬೇಕೆಂದು ಒಳಗೆ ಕರೆದದ್ದು ಏತಕ್ಕೋ, ಅವರು ಹೇಳಿದ್ದು ಇನ್ನೇನೋ.

ಲಾಕ್‌ಡೌನ್ ಸಮಯ. ಅಂದು ಬೆಳಿಗ್ಗೆ ಕ್ಲಿನಿಕ್ಕಿಗೆ ಬರುವಾಗ ನೋಡುತ್ತೇನೆ, ಹಮ್ಜಾ ಸ್ಕೂಟಿ ಬಿಟ್ಟುಕೊಂಡು ರಸ್ತೆ ಮೇಲೆ ಹೋಗುತ್ತಿದ್ದಾನೆ. ಅವನ ಹಿಂದೆ ಮತ್ತೊಬ್ಬ ಹುಡುಗನಿದ್ದಾನೆ. ರಸ್ತೆ ನಿರ್ಜನವಾಗಿದೆ. ವೇಗವಾಗಿ ಬಂದವನೆದುರು ವಾಹನ ಬಂತಿರಬೇಕು, ನಮ್ಮ ಕಾರು ನೋಡದೇ ಸೀದಾ ಸೈಡ್ ತಗೊಂಡ. ಇನ್ನೇನು ಢಿಕ್ಕಿ ಹೊಡೆಯುತ್ತಾನೆ ಅನಿಸುವಾಗ ರೊಂಯ್ಞನೆ ಟರ್ನ್ ಮಾಡಿ ಆಚೆ ಹೋಗಿಬಿಟ್ಟ. ಅವನಿಗೆ ಸ್ಕೂಟಿ ಯಾಕೆ ಕೊಡಿಸಿದರು? ವಾಹನ ಚಲಾಯಿಸುವುದು ಅಪಾಯವೆಂದು ಹೇಳಿತ್ತಲ್ಲ? ದೃಷ್ಟಿದೋಷವಿರುವ, ಸ್ಪಷ್ಟವಾಗಿ ರಸ್ತೆ ಕಾಣಿಸದ ಅವ ಮತ್ತೊಬ್ಬನನ್ನು ಕೂರಿಸಿಕೊಂಡು ಹೋಗುತ್ತಿದ್ದಾನಲ್ಲ!? ಹಸೀನಮ್ಮನಿಗೆ ಹೇಳಬೇಕು. ಸ್ಕೂಟಿ ಹೊಡೆಯಬೇಡ ಎಂದು ಹೇಳಿಸಬೇಕು ಎಂದುಕೊಂಡೆ.

ಅದಕ್ಕೆ ಸರಿಯಾಗಿ ಅವತ್ತೇ ಹಸೀನಮ್ಮ ಕ್ಲಿನಿಕ್ಕಿಗೆ ಬರಬೇಕೆ? ಬೆಳಗಿನ ಪೇಶೆಂಟುಗಳು ಮುಗಿದು ಊಟಕ್ಕೆ ಹೊರಡಬೇಕೆನ್ನುವಾಗ ಬಂದರು.

ಹಸೀನಮ್ಮ ನನಗೆ ಆಪ್ತರು. ನಮ್ಮ ಊರಿನ ಬಾಳೆಯ ಹಣ್ಣಿನ ಶಫೀಕ್ ಸಾಹೇಬರ ಪತ್ನಿ. ಶಫೀಕ್ ಸಾಹೇಬರು ಈಗಿಲ್ಲ. ಕೊರೊನಾ ಶುರುವಾದ ಆರಂಭದಲ್ಲೇ ಕೊರೊನಾದಿಂದಲೋ, ಹಾರ್ಟ್ ಅಟ್ಯಾಕೇ ಆಯಿತೋ ಅಂತೂ ತಮ್ಮ ಕಾಲ ಕಳೆದುಕೊಂಡು ನಡೆದುಬಿಟ್ಟರು. ರಸ್ತೆಪಕ್ಕದ ಗುಡ್ಡೆಯಾಗಿದ್ದ ನಮ್ಮೂರು ‘ಊರು’ ಆಗುವಾಗ ಬಂದವರಲ್ಲಿ ಶಫೀಕ್ ಸಾಹೇಬರು ಮೊದಲಿಗರು. ಅವರಿಲ್ಲಿಯ ಮೂಲನಿವಾಸಿ. ಬಾಳೆಕಾಯಿ, ವೀಳ್ಯದೆಲೆ, ಅಡಿಕೆ, ಕಾಳುಮೆಣಸು, ಮಲ್ಲಿಗೆ ಹೂವೇ ಮೊದಲಾದ ಸ್ಥಳೀಯ ಉತ್ಪನ್ನಗಳನ್ನು ಗಟ್ಟದ ಮೇಲೆ ಕಳಿಸುವ ವ್ಯಾಪಾರ ಶುರುಮಾಡಿದರು. ಈ ಭಾಗದಲ್ಲಿ ಬೆಳೆಯುವ ಕರಿಬಾಳೆ, ಮಿಟಕ, ಪುಟ್ಟ ಬಾಳೆ, ಹುಳಿಬಾಳೆ, ಚಂದ್ರಬಾಳೆಯ ಹಣ್ಣುಗಳ ಮಂಡಿ ಮಾಡಿದರು. ಸುಲಭವಾಗಿ ಬೆಳೆವ, ಬೃಹತ್ ಗೊನೆ ಬಿಟ್ಟು ಹೆಚ್ಚುಸಂಖ್ಯೆಯ ಹಣ್ಣು ಕೊಡುವ ಹುಳಿಬಾಳೆ ಅಥವಾ ಮೈಸೂರು ಬಾಳೆಯ ಹಣ್ಣಿನ ‘ಬನ್ಸ್’ ತಿಂಡಿಯು ಹಣ್ಣಿನ ಬೇಡಿಕೆಯನ್ನು ಹೆಚ್ಚಿಸಿತು. ಎಲ್ಲಿ ಸಿಗದಿದ್ದರೂ ಶಫೀಕ್ ಸಾಹೇಬರ ಬಳಿ ಸಿಗುವುದೆಂದು ಹೋಟೆಲಿನವರು ಬರುವರು. ಬಾಳೆಯಗೊನೆ ಹರಕೆ ಹೊತ್ತು ನಾಗ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಶಫೀಕ್ ಸಾಹೇಬರ ಬಾಳೆಯಹಣ್ಣು ಗೂಡಂಗಡಿಗಳಲ್ಲಿ ಪೂರೈಕೆಯಾಗುವುದು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಬರಬರುತ್ತ ಅವರ ವಹಿವಾಟು ವಿಸ್ತಾರಗೊಂಡಿತು. ಹೆಣ್ಣುಮಕ್ಕಳನ್ನು ಮದುವೆ ಮಾಡಿ ಸಾಗರ, ರಿಪ್ಪನ್‌ಪೇಟೆ, ಹುಬ್ಬಳ್ಳಿ ಎಂದು ಗಟ್ಟ ಹತ್ತಿಸಿದರು. ಸ್ವಲ್ಪ ವಿರಾಮದಲ್ಲಿರುವ ಹೆಂಡತಿ ಹಸೀನಮ್ಮನನ್ನೂ ಕೈ ಜೋಡಿಸಲು ಕರೆದರು. ಅವರು ಗಂಡನಷ್ಟೇ ಪ್ರಾಮಾಣಿಕರು. ಚುರುಕು. ನಿಷ್ಕಪಟಿ.

ನಾನವರನ್ನು ನೋಡುವಾಗ ಸಾಹೇಬರಿಗೆ ನಾಲ್ವರು ಮಕ್ಕಳು. ಮೂರು ಹೆಣ್ಣಾದ ಮೇಲೊಬ್ಬ ಹುಡುಗ ಹುಟ್ಟಿದ್ದ. ಬಳಿಕ ಮಕ್ಕಳು ಬೇಡವೆಂದು ಇವರ ಬಯಕೆ. ಸಾಹೇಬರಿಗೆ ಇನ್ನೊಂದು ಗಂಡು ಬೇಕು. ಮೊದಲ ಬಾರಿ ನನ್ನಲ್ಲಿ ಬಂದಿದ್ದು ‘ಗುಡ್‌ನ್ಯೂಸ್ ಆದರೂ ನನಗೆ ಬೇಡ’ವೆಂದು ಹೇಳಿ. ಈ ಕಡೆಯ ಭಾಷೆ ಬಳಕೆಗೆ ಹೊಸಬಳಾದ ನನಗೆ, ‘ಗುಡ್‌ನ್ಯೂಸ್ ಆದರೆ ಬೇಡ’ ಎಂದರೇನೆಂದು ತಿಳಿಯಲು ಸ್ವಲ್ಪ ಸಮಯ ಹಿಡಿದಿತ್ತು. ಕೊನೆಗೆ ಗರ್ಭನಿಂತರೆ ಅದು ಬೇಡವೆಂದು ಅರ್ಥವಾಯಿತು. ಕಿರಿಯ ಮಗ ಹಂಝಾನಿಗೇ ಕುಟುಂಬ ನಿಂತಿತು.

ಹಂಝನಿಗೆ ಅತಿ ಅಪರೂಪದ ರೆಟಿನೈಟಿಸ್ ಪಿಗ್ಮೆಂಟೋಸಾ ಎಂಬ, ಹೆಚ್ಚುತ್ತ ಹೋಗುವ ಅರೆ ಅಂಧತ್ವ ಕಾಯಿಲೆ ಇದೆ. ಬರಬರುತ್ತ ನೇರ ಎದುರಿನದು ಬಿಟ್ಟರೆ ಆಚೀಚಿನ ನೋಟ ಕಡಿಮೆಯಾಗುತ್ತ, ರಾತ್ರಿ ದೃಷ್ಟಿ ಮಂದವಾಗುತ್ತ, ಚಿತ್ರಗಳು ಅಸ್ಪಷ್ಟವಾಗಿ ಕಾಣುತ್ತ ಹೋಗುವ ಅರೆ ಅಂಧತ್ವ ಅದು. ವಯಸ್ಸಾಗುತ್ತ ಬಂದಂತೆ ಬೆಳಕು ಕತ್ತಲು ಬಿಟ್ಟು ಮತ್ತೇನೂ ಗೋಚರಿಸದಂತೆ ಆಗಬಹುದು. ತನಗೆ ದೃಷ್ಟಿಯದೇನೋ ತೊಂದರೆ ಇದೆಯೆಂದು ಅವನಿಗೆ ಅನ್ನಿಸುತ್ತಿದ್ದರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಜಿದ್ದಾಗೆ ಹೋಗಲು ವೀಸಾ ಮಾಡುವಾಗ ವೈದ್ಯಕೀಯ ತಪಾಸಣೆಯ ವೇಳೆ ಪತ್ತೆಯಾಯಿತು. ಅದು ಅವನ ಕನಸಿನ ಸೌಧ ಮುರಿದು ಬಿದ್ದ ಅನುಭವ ನೀಡಿತು. ಹೇಗೆ, ಹೇಗೆ ಎಂದು ಎಷ್ಟು ಸಲ ನನ್ನಲ್ಲಿ ಕೇಳಿದನೋ? ಚಿಕಿತ್ಸೆ ಇಲ್ಲವೆಂದರೂ ಅದೆಷ್ಟು ಆನ್‌ಲೈನ್ ಹುಡುಕಾಟ ನಡೆಸಿದನೋ?

ರೆಟಿನೈಟಿಸ್ ಪಿಗ್ಮೆಂಟೋಸಾ ವಂಶಪಾರಂಪರ್ಯವಾಗಿ ಬರುವಂಥದು. ಹುಟ್ಟುವಾಗ ದೃಷ್ಟಿ ಸರಿಯಿರುವ ಮಕ್ಕಳು ಹದಿವಯಸ್ಸು ದಾಟಿದಮೇಲೆ ನಿಧಾನವಾಗಿ ದೃಷ್ಟಿ ಕಳೆದುಕೊಳ್ಳುತ್ತ ಹೋಗುವರು. ಅಕ್ಷಿಪಟಲದ ಜೀವಕೋಶಗಳು ಬರಬರುತ್ತ ನಾಶವಾಗುವ ಈ ಕಾಯಿಲೆಗೆ ಪರಿಹಾರವಿಲ್ಲ. ಸಂಬಂಧದಲ್ಲಿ ಅಮ್ಮಿ, ಅಬ್ಬಾ ಮದುವೆಯಾಗಿರುವುದರಿಂದ ಬಂದಿದೆ ಎಂದು ವೈದ್ಯರು ಹೇಳಿದ್ದು ಕೇಳಿ ಇಬ್ಬರ ಮೇಲೂ ಹಂಝಾ ಸಿಟ್ಟಾದ. ಆದರೆ ತಮ್ಮ ವಂಶದಲ್ಲಿ ಯಾರಿಗೂ ಇಲ್ಲವೆಂದೇ ಅವರ ವಾದ. ಮಗನ ಪ್ರಶ್ನೆಗಳನ್ನು ಹೊತ್ತು ಹಸೀನಮ್ಮ ಪದೇಪದೇ ಬರುತ್ತಿದ್ದರು. ರೋಗ, ವಿಜ್ಞಾನದ ಬಗೆಗೆ ಹೇಳಿದೆನಾದರೂ ಅವರ ದುಃಖ ಕರಗಿಸಲು ನನ್ನ ಬಳಿ ಏನೂ ಇರಲಿಲ್ಲ.

ಹಂಝನಾದರೋ ಬರಬರುತ್ತ ತಾನು ಕುರುಡಾಗುತ್ತೇನೆ ಎಂದು ತಿಳಿದು ಇವತ್ತೇ ಬದುಕಿನ ಕೊನೆಯ ದಿನ ಎನ್ನುವಂತೆ ಆಡತೊಡಗಿದ. ಎಲ್ಲೆಲ್ಲಿ ಹೋಗುವನೋ, ಏನನ್ನೆಲ್ಲ ತಿನ್ನುವನೋ, ಎಷ್ಟು ಟ್ರಿಪ್ ದೋಸ್ತರೊಡನೆ ಹೊಡೆಯುವನೋ ಅಂತೂ ಅಮ್ಮಿ, ಅಬ್ಬಾನ ಅಂಕೆ ತಪ್ಪಿ ಹೋಗತೊಡಗಿದ. ಸಾಹೇಬರು ಮೂವರು ಹೆಣ್ಣುಮಕ್ಕಳ ಮದುವೆಯ ಬಳಿಕ ಮಗನ ವೀಸಾಗೆಂದು ಉಳಿಸಿಟ್ಟ ದುಡ್ಡು ಕರಗಿಸಿದ. ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡುಬಿಟ್ಟ. ಒಂದು ರಾಯಲ್ ಎನ್‌ಫೀಲ್ಡ್ ಬುಲೆಟ್ ಕೊಂಡ. ಜಿಮ್‌ಗೆ ಹೋಗಿ ಮೈ ಹುರಿಗೊಳಿಸಿದ. ಬೈಕಿನ ಮೇಲೆ ಗೆಳೆಯರ ಜೊತೆ ತಿರುಗುವ. ಮನೆಯಲ್ಲಿ ಊಟ ತಿಂಡಿಯಿಲ್ಲ. ಹೊರಗೇ ಹೆಚ್ಚು. ತಾಸೆರೆಡು ತಾಸು ಅಂಗಡಿಯಲ್ಲಿದ್ದಂತೆ ಮಾಡಿ ಡ್ರಾವರಿನಲ್ಲಿದ್ದ ಕಾಸು ಎತ್ತಿಕೊಂಡು ಹೊರಟುಬಿಡುತ್ತಿದ್ದ. ಏನಾದರೂ ಹೇಳಿದರೆ ಊರುಬಿಟ್ಟು ಬೇರೆ ಕೆಲಸಕ್ಕೆ ಹೋಗುವೆನೆನ್ನುತ್ತಿದ್ದ. ಹೋದರೆ ಹೋಗು ಎಂದು ಸಾಹೇಬರು ಹೇಳಿದರೆಂದು, ಬ್ಯಾಕ್‌ಪ್ಯಾಕ್ ಹೊಲಿಯುವ ಟ್ರೈನಿಂಗಿಗೆ ಜೈಪುರಕ್ಕೆ ಹೋಗಿ ಮೂರು ತಿಂಗಳು ಕಳೆದ. ಮತ್ಯಾವುದೋ ಕೆಲಸ ಎಂದು ಲಖನೌದಲ್ಲಿ ಆರು ತಿಂಗಳು ಕಳೆದ. ಹೀಗೆ ಒಂದರ ಬಳಿ ಹೋಗುವುದರಲ್ಲಿ ಇನ್ನೊಂದು. ಮಗ್ನತೆಯೇ ಇಲ್ಲ. ಆತಂಕ, ತನ್ನದೇ ದಾರಿ. ಮನೆಯವರೊಡನೆ ಮಾತಿಲ್ಲ. ಅವನನ್ನು ಏನು ಮಾಡುವುದೋ ಎಂದು ಹಸೀನಮ್ಮ ಚಿಂತಿತರಾದರು. ಪ್ರತಿದಿನ ನಮಾಜು ಮಾಡುವನೋ ಇಲ್ಲವೋ ಕಾಯತೊಡಗಿದರು. ಅವ ಸರಿಯಾದರೆ ಅಜ್ಮೇರ್ ಶರೀಫ್‌ಗೆ ಕರೆತರುವುದಾಗಿ ಹರಕೆ ಹೊತ್ತರು. ಬಾಬಾ ಒಬ್ಬರನ್ನು ಮನೆಗೆ ಕರೆಸಿ ಬುದ್ಧಿ ಹೇಳಿದ್ದರು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಬಿಪಿ ನೋಡಿಸಿ, ಇದನ್ನೆಲ್ಲ ಹೇಳಿಹೋಗಲು ಬಂದಿದ್ದರು.

‘ಯಂತ ಗೊತ್ತದೆ ಮೇಡಂ? ಈಚೀಚ್ಗೆ ನಮ್ಮುಡುಗ ಒನ್ನಮನಿ ಆಡ್ತಾನೆ. ಕೊರಡಿನಂಗೆ ಮನಗಿ ಬೆಳಿಗ್ಗಿ ಎಂಟಾದ್ರೂ ಏಳತಿಲ್ಲ. ಇಡೀ ದಿನ ಮಬೈಲು, ಮಬೈಲು, ಮಬೈಲು. ಸಂಜಿ ಮುಂದೆ ಒಷ್ಟ್ ಹುಡುಗರು ಬರ‍್ತಾರೆ, ಎಲ್ಲಾ ನಾಪತಾ ಆಗ್ತಾರೆ. ನಾ ಯೇನಾದ್ರು ಕೇಳಿದ್ರೆ ಸಿಟ್ಟು. ಕೂಗಾಡ್ತಾನೆ. ಹಂಗಂತ ಹೆಂಡ ಪಂಡ ಕುಡಿಯಲ್ಲ, ನಂ ಜಾತ್ಯಾಗೆ ಅದಿಲ್ಲ. ಎಲ್ ಹೋಗ್ತ, ಯಂತ ಮಾಡ್ತ ಮಾತೇ ಇಲ್ಲ. ಒಂದ್ಕಡೆ ಸಾಹೇಬ್ರು ಕೆ ಬಿಟ್ಟು ಹೋದ್ಮೇಲೆ ಅಂಗ್ಡಿನ ಒಬ್ಳೇ ನೋಡ್ಬೇಕಂತ ಟೇನ್ಶನ್ನಾಗಿದೆ. ಇಂವಾ ನೋಡ್ರೆ ಬೆಳ್ದ ಮಗಾ ಹೀಂಗ್ ಮಾಡ್ತಾನೆ. ಏನಾಗ್ತಾನೋ, ಏನ್ಮಾಡ್ತಾನೋ ಅಲ್ಲಾಗೇ ಗೊತ್ತು. ಅವ್ನಿಗೆ ಸಂಗದೋಸ್ತಿ ಸರೀ ಇಲ್ಲ. ಅದ್ಕೇ ಹಿಂಗಾಗಾನೆ. ಬಾರೀ ಪರೇಶಾನ್ ಮೇಡಮ್ಮು. ಏನ್ ಮಾಡುದೂ ತಿಳೀದಂಗಾಗಿದೆ. ನಿಮ್ಯಾಲೆ ಬಾರೀ ಬಾವ್ನೆ ಅವುನ್ಗೆ. ನೀವೊಂದ್ಸಲ ಮಾತಾಡಿ ಹೇಳ್ತಿರೆನು ಕೇಳುವಾ ಅಂದಿ ಬಂದೆ. ಹ್ಯಾಂಗೆ?’

ಅವನ ಬಳಿ ಒಮ್ಮೆ ಮಾತಾಡುವೆ ಎಂದು ಸಮಾಧಾನ ಹೇಳಿ ಕಳಿಸಿದೆ. ಅವ ಸ್ಕೂಟಿ ಬಿಡುತ್ತಿದ್ದ ವಿಷಯ ಗಂಟಲಲ್ಲೇ ಉಳಿಯಿತು.

ದಿನದ ಕೊನೆಯ ಹೊತ್ತಿಗೆ ಹಂಝಾನೇ ಬರಬೇಕೆ? ಅರೆ, ಇದೇನು ಅಚ್ಚರಿ? ನೆನೆದವರೆಲ್ಲ ಕಣ್ಣೆದುರು ಬಂದು ನಿಲ್ಲುತ್ತಿದ್ದಾರಲ್ಲ? ಇವನಿಗೇನು ಹೇಳಲಿ, ಎಲ್ಲಿಂದ ಶುರುಮಾಡಲಿ ಅಂದುಕೊಳ್ಳುವಾಗ ತರಾತುರಿಯಲ್ಲಿ ನೂರರ ನೋಟು ಮುಂದೆ ಹಿಡಿದ.

‘ಮೇಡಂ, ಫೇಸ್ ಶೀಲ್ಡ್ ಅದೆಯ? ಇದ್ರೆ ಒಂದ್ ಕೊಡಿ, ಅರ್ಜೆಂಟ್’ ಅಂದು ಕೈಚಾಚಿದ. ಮುಂಗೈಯ ಕಪ್ಪು ಬ್ಯಾಂಡಿನ ಮೇಲೆ ಬಿಳಿಯ ಅಕ್ಷರದಲ್ಲಿ ಬರೆದುಕೊಂಡಿತ್ತು: ‘ಒನ್ ಲವ್, ಒನ್ ಹಾರ್ಟ್, ಒನ್ ಏಮ್’ ಎಂದು. ಅದರ ಕಡೆ ನೋಡಿ ಅದೇನು ಎಂದು ಕಣ್ಣಲ್ಲೇ ಪ್ರಶ್ನಿಸಿದೆ. ‘ಅದು ಮೇಡಂ, ಎಲ್ಲ ಒಂದೇ ಅಂತ. ನಂ ಗ್ರೂಪಿಂದು ಟೈಟಲ್ಲು’ ಅಂದ.

‘ಯಾವ ಗ್ರೂಪೋ?’ ‘ಅದು ನಾವೆಲ್ಲ ಫ್ರೇಂಡ್ಸ್ ಸೇರ‍್ಕಂಡಿ ಮಾಡ್ಕಂಡಿದ್ದು.’ ‘ಓಹ್, ಒಳ್ಳೇದು. ಏನ್ ಮೋಟೋ?’ ‘ಸೋಷಲ್ ಸರ್ವೀಸ್. ನೀವೇ ಸ್ಫೂರ್ತಿ’ ‘ಆಯ್ತು ಕತೆ. ಅಲ್ವೋ, ಮತ್ತೆ ಅಮ್ಮಿಗೆ ಸ್ವಲ್ಪ ಸಹಾಯ ಮಾಡಬಾರ್ದಾ? ಗ್ರೂಪಿನ ಸುದ್ದಿ ಅಮ್ಮಿಗೆ ಹೇಳಬಾರ್ದಾ ಹಂಝ?’ ‘ಅವ್ರಿಗೆ ಹೇಳ್ರೆ ತಿಳುದಿಲ್ಲ. ಅಂಗ್ಡಿ ಅಂಗ್ಡಿ ಅಂತ್ರು. ಅವ್ರಿಗೆ ಯಾಪಾರ ಬಿಟ್ಟಿ ಬ್ಯಾರೇ ಥಿಂಕಿಂಗೇ ಇಲ್ಲ. ಒಂಚೂರು ಹೀಂಗಾತು ಹಂಗಾತು ಅಂದ್ರೆ ಮಬೈಲ್ ಹಿಡ್ಕಂಡಿ ಕೂರ‍್ತೆ, ಅದುಕ್ಕೆ ಅಂತಾರೆ’ ‘ಆದ್ರು ನೀನು ಅಷ್ಟು ಫಾಸ್ಟ್ ಗಾಡಿ ಬಿಡೋದು ಯಾಕೆ?’ ‘ಅದ್ ಬ್ಯಾರೇನೇ ಅದೆ, ಇವತ್ ಅರ್ಜೆಂಟ್ ಕೆಲ್ಸಾ ಬಂತು. ನಾ ಈಗ ಗಾಡಿ ಹೊಡಿಯುದಿಲ್ಲ ಮೇಡಂ, ಎನ್‌ಫೀಲ್ಡ್ ಕೊಟ್ ಹಾಕಿದ್ದೆ’

ಇಷ್ಟೆಂದವನೇ ‘ನಾವ್ ಬರ‍್ತ್ರು ಮೇಡಂ’ ಎಂದು ಬಿರುಗಾಳಿಯಂತೆ ಹೊರಗೋಡಿದ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಅಲ್ಲಾಹುವಿನ ಕರುಣೆಯ ಮೇಲೆ ವಿಶ್ವಾಸವಿಟ್ಟು ಹಸೀನಮ್ಮ ತಮ್ಮ ಕಷ್ಟಗಳನ್ನೆಲ್ಲ ನುಂಗಿ ಬದುಕುತ್ತಿದ್ದರು. ಇದ್ದೊಬ್ಬ ಮಗನಿಗೆ ಕಣ್ಣು ಕಾಣದಂತಾಗುವ ಕಾಯಿಲೆ ಬಂತೆಂದು ನೆನೆದಾಗ ಅಧೀರರಾಗಿ ದುಃಖಿಸುವರು. ಯಾರಿಗೂ ಅನ್ಯಾಯ ಮಾಡದ ನಮ್ಮನ್ನು ದೇವರು ಹೀಗೆ ಪರೀಕ್ಷಿಸುವುದೇಕೋ ಎಂದುಕೊಳ್ಳುವರು. ಇರಲಿ, ಕಯಾಮತ್ತಿನ ದಿವಸ ಎಲ್ಲ ಲೆಕ್ಕವಾಗುತ್ತದೆ, ತಾವು ಏನೇ ಆದರೂ ನ್ಯಾಯನೀತಿ ಬಿಡಬಾರದೆಂಂದು ಗಟ್ಟಿ ಮಾಡಿಕೊಳ್ಳುವರು. ಮಗನಿಗೆ ಹೇಗಾದರೂ ವ್ಯಾಪಾರ ತಾಗಿಸಿಕೊಡಬೇಕು, ಅವನ ಕಾಲಮೇಲೆ ಅವನು ನಿಲ್ಲುವಂತಾಗಬೇಕೆಂಬ ಯೋಜನೆ ಹಾಕುವರು. ಅವ ಮದುವೆ ಬೇಡಬೇಡ ಎಂದರೂ ಒಂದು ಮದುವೆ ಮಾಡಬೇಕೆಂದು ಯೋಚಿಸಿದ್ದರು. ಅವರಿಗೆ ಹೀಗೆ ಕೊನೆಮೊದಲಿರದ ಯೋಚನೆ, ಚಿಂತೆ.

ಹಸೀನಮ್ಮನಿಗೆ ನಿಮ್ಮ ಮಗ ಸಮಾಜಸೇವೆ ಮಾಡುತ್ತಿದ್ದಾನೆ, ಹೆದರಬೇಡಿ ಎಂದು ಹೇಳಬೇಕು ಎಂದುಕೊಳ್ಳುತ್ತ ಅಂದಿನ ಕಾಯಕ ಮುಗಿಸಲು ಸಜ್ಜಾದೆವು. ಸುಬ್ರಾಯ ಬಂದವನೇ ವಾಟ್ಸಪ್ಪಿನಲ್ಲಿ ಬಂದ ಸುದ್ದಿ ತುಣುಕನ್ನು ಓದಿ ಹೇಳಿದ:

‘ಯುವಕರ ಶ್ಲಾಘನೀಯ ಕಾರ್ಯ: ಅನಾಥ ಹೆಣಗಳ ಸಂಸ್ಕಾರ ಮಾಡುತ್ತಿರುವ ತರುಣ ಭಾರತ್ ವಿಷನ್’ ಎಂಬ ತಲೆಬರಹದಡಿಯಲ್ಲಿ ಹದಿಮೂರು ತರುಣರಿಂದ ಶುರುವಾಗಿ ಇಂದು ನೂರು ಜನ ವಾಲಂಟಿಯರ್ಸ್ ತಂಡವಾಗಿ ಬೆಳೆದ ಸಂಘಟನೆಯ ಬಗೆಗೆ ಪತ್ರಿಕೆಯಲ್ಲಿ ವಿವರಗಳಿದ್ದವು. ತಾಲೂಕಿನಲ್ಲಿ ಕೋವಿಡ್ ಆಗಿ ಮೃತಪಟ್ಟು, ಬಂಧುಗಳು ಒಯ್ಯದ, ಸಂಸ್ಕಾರ ಮಾಡಲು ಹೆದರುವ ಶವಗಳನ್ನು ಅವರ ಬಂಧುಗಳ ಇಚ್ಛೆಯಂತೆ ಶವಸಂಸ್ಕಾರ ಮಾಡುತ್ತಿರುವ ಗುಂಪು ಅದು. ಪಾಸಿಟಿವ್ ಆಗಿ ಗೃಹಬಂಧನದಲ್ಲಿರುವವರಿಗೆ ವಸ್ತು ತಂದುಕೊಡುವುದು, ದಾನಿಗಳಿಂದ ಹಣ ಸಂಗ್ರಹಿಸಿ, ದುಡಿಮೆಯಿಲ್ಲದ ಸಣ್ಣ ಹೋಟೆಲುದಾರರ ಬಳಿ ಊಟ ತಯಾರಿಸಿ, ಪ್ರತಿದಿನ 2೦೦ ಊಟವನ್ನು ಟ್ರಕ್ ಮತ್ತು ವಾಹನ ಚಾಲಕರಿಗೆ ಹೈವೇ ಪಕ್ಕ ನಿಂತು ಹಂಚುವುದು; ಕ್ರೌಡ್ ಫಂಡಿಂಗ್ ವೆಬ್‌ಸೈಟ್ ಮೂಲಕ ಹಣ ಸಂಗ್ರಹಿಸಿ, ತಾಲೂಕಿನಲ್ಲಿ ಗುರುತಿಸಿ 250 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವುದು ಮೊದಲಾದ ನಿಸ್ವಾರ್ಥ ಕೆಲಸಗಳನ್ನು ಹುಡುಗರು ಮಾಡುತ್ತಿರುವ ಬಗ್ಗೆ ಬರೆದಿದ್ದರು. ಕೊನೆಗೆ ಎಲ್ಲ ಮತಧರ್ಮದವರಿರುವ ಗುಂಪಾದ ‘ತರುಣ ಭಾರತ ವಿಷನ್’ ಅನ್ನು ಶುರುಮಾಡಿದ ಸ್ಫೂರ್ತಿ ಹಂಝಾ ಎಂಬ ದೃಷ್ಟಿಮಾಂದ್ಯ ಯುವಕನಾಗಿದ್ದು, ವಾಟ್ಸಪ್ ಮೂಲಕ ಸಮಾಜ ಸೇವೆಗೆ ತರುಣರನ್ನು ತಯಾರಿ ಮಾಡುತ್ತಿರುವನೆಂದು ಬರೆದಿದ್ದರು. ಹದಿಮೂರು ಜನರ ತಮ್ಮ ತಂಡಕ್ಕೆ ಇನ್ನೂ ಹೆಚ್ಚು ಕೈಗಳು ಬೇಕೆಂದೂ, ಕೊರೊನಾದ ಕಷ್ಟಕಾಲದಲ್ಲಿ ಯುವಕರು ಸಮಾಜಸೇವೆಯಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕೆಂದೂ ಹಂಝಾ ಹೇಳಿದ್ದ. ತಮ್ಮಂತೆ ಯೋಚಿಸುವ ತರುಣ ತರುಣಿಯರನ್ನು ಕೆಲಸಕ್ಕೆ ಕೈಜೋಡಿಸಿ ಎಂದು ಕರೆದಿದ್ದ.

ತನ್ನ ನೋಟ ಮಂದವಾಗುತ್ತಿರುವಾಗ ಅದನ್ನು ಎದುರಿಸಲೋ ಎಂಬಂತೆ ‘ತರುಣ ಭಾರತ್ ವಿಷನ್’ ಮಾಡಿಕೊಂಡಿರುವ ಹಂಝನ ಕುರಿತ ವರದಿ ಓದಿ ಎದೆ ತುಂಬಿಬಂತು. ಹಸೀನಮ್ಮನಿಗೆ ಇದನ್ನು ತೋರಿಸಬೇಕು ಎನಿಸಿ ಈಗಲೇ ಬಾಳೆಹಣ್ಣಿನ ಅಂಗಡಿಗೆ ಹೋಗೋಣ ಎಂದು ಹೊರಟೆ.

ಬಾಗಿಲನ್ನು ಅರೆತೆರೆದ ಹಸೀನಮ್ಮ ಬಾಳೆಹಣ್ಣಿನ ಕೋಣೆಯಲ್ಲಿದ್ದರು. ಒಳಗಿಂದ ಒಂದೊಂದೇ ಗೊನೆ ತಂದು ಹೊರಗೆ ಹಾಕುತ್ತಿದ್ದರು. ಕೆಲವು ಗಳಿತು ಪಿಸಿಪಿಸಿ ಎನ್ನುತ್ತಿವೆ. ಕೆಲವು ಕೊಳೆಯುವುದೊಂದು ಬಾಕಿ. ಅರೆ ಇವನ್ನೆಲ್ಲ ಏನು ಮಾಡುವರೋ ಅಂದುಕೊಳ್ಳುವಾಗ ಕೇಶವ ಬಂದನು. ಅವ ಈ ಊರಿಗೇ ಸಿರಿವಂತರೆಂದುಕೊಂಡವರ ಮನೆಯಲ್ಲಿ ಕೆಲಸ ಮಾಡುವವ. ಅವ ಐದುಗೊನೆ ಹಣ್ಣನ್ನು ಹೆಡಿಗೆಗೆ ತುಂಬಿದ. ‘ಅರೇ ಮೇಡಂ, ನೀವ್ಯಂತ ಇಲ್ಲಿ?’ ಎಂದ. ಅವನ ಒಡೆಯರು ಪ್ರತಿದಿನ ಬೆಳಿಗ್ಗೆ ಊರ ಬೀಡಾಡಿ ಗೋವುಗಳಿಗೆ ಬಾಳೆಯಹಣ್ಣು ಕೊಡುತ್ತ ಖ್ಯಾತರಾಗಿದ್ದರು. ಕೋವಿಡ್ ಬಂದು ಗುಣವಾದಮೇಲೆ ಗೋಸೇವೆ ಶುರುವಾಗಿತ್ತು. ಬೆಳಕು ಹರಿದದ್ದೇ ಅವರ ಮನೆಯ ಎದುರು ದನಗಳ ಸಂತೆ ನೆರೆದಿರುತ್ತದೆ. ನಾಳಿನ ತಿಂಡಿ ಒಯ್ಯಲು ಇಂದೇ ಅವ ಬಂದಿದ್ದಾನೆ. ಅವ ಹೊಡುವಾಗ ‘ಹಂಝನಿಗೆ ನಾಳಿ ಬತ್ತಿನಿ ಅಂತ ಹೇಳಿ, ಇನ್ಮೇಲೆ ದಿನಾ..’ ಅಂದ. ಇವರು, ‘ಬಗ್ಗೇಲ್ ಕಾಯಿ ಕೊಯ್ದ್ ಕೊಡ ತಮಾ. ಮಾಡಿನ ಮ್ಯಾಲೆ ಬಿದ್ದು ಹಂಚು ಒಡಿತೇ ಇದೆ’ ಎಂದರು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಅಲ್ಲಿದ್ದ ಮತ್ತೊಬ್ಬ ಹೋಟೆಲಿನ ಶ್ರೀಕಾಂತ. ಕಡಿಮೆ ಬೆಲೆಗೆ, ಹೆಚ್ಚು ಪ್ರೀತಿ ಉಣಿಸುವ ಅವನ ಹೋಟೆಲು, ಅವನ ಬನ್ಸು ತುಂಬ ಫೇಮಸ್ಸು. ಈಗ ಹೋಟೆಲಿಲ್ಲದಿದ್ದರೂ ಒಯ್ಯಲು ಪಾರ್ಸೆಲ್ ತಯಾರಿ ಮಾಡುತ್ತಾನಂತೆ. ಕ್ವಾರಂಟೈನ್ ಆಗಿ ಮನೆಯಲ್ಲಿರುವ ನಾಲ್ಕಾರು ಮನೆಗೆ ಇವನದೇ ಊಟ, ತಿಂಡಿ ಸಪ್ಲೈ. ಅದಕ್ಕಾಗಿ ಬಾಳೆಯ ಹಣ್ಣು ಒಯ್ಯಲು ಬಂದಿದ್ದ. ‘ಒಳ್ಳೇದಾಗ್ಲಿ. ಕೊರೊನಾ ಆದೋರ ಮನ್ಗೆ ಊಟ ಕೊಡಕ್ ಹೋಗ್ತಿ, ಹುಶಾರಿ ತಮಾ,’ ಎಂದು ಎಚ್ಚರಿಸಿ ಕಳಿಸಿದರು ಹಸೀನಮ್ಮ.

ಅವರಾಚೆ ಹೋದಮೇಲೆ ಸಿಪ್ಪೆ ಕರಿಯಾದ ಮೂರುಗೊನೆ ತಂದು ಒಂದು ಬದಿಗಿಟ್ಟರು. ಇಷ್ಟು ಕೊಳೆತದ್ದು ಯಾರು ಬಳಸುತ್ತಾರೆ ಎಂದು ನಾನಂದುಕೊಳ್ಳುವಾಗ,

‘ಕಳಿತರೆ ಒಂದು ಉಪೇಗ ಅದೆ. ಕೊಳೆತರೂ ಒಂದು ವಿನಿಯೋಗ ಅದೆ. ಅದ್ನ ಕಳ್ಳಭಟ್ಟಿಯರು ಒಯ್ತರೆ. ಮನ್ಶರಂಗಲ್ಲ, ಬಾಳೆಹಣ್ಣು ಒಟ್ಟೇ ದಂಡ ಆಗಲ್ಲ.’

ನೀನಾರಿಗಾದೆಯೋ ಎಲೆ ಮಾನವಾ? ನೆನಪಾಯಿತು. ಅವರಿಗೆ ಒಳ್ಳೆಯ ಸುದ್ದಿ ಹೇಳಿಬಿಡುವಾ ಎಂದು ಪೇಪರು ತೋರಿಸಿದೆ. ಸಂಜೆ ಹಂಝ ಬಂದದ್ದನ್ನೂ ಹೇಳಿದೆ. ಪ್ರಾಯದ ಮಕ್ಕಳನ್ನು ನಿಭಾಯಿಸುವುದು ಆತಂಕವೇ ಆದರೂ ತಾಳ್ಮೆಯಿಂದಿರಿ ಎಂದೆ. ಅವರಿಗೆ ಕಣ್ಣಲ್ಲಿ ನೀರು ದಳದಳ ಸುರಿಯಿತು. ಇನ್ನಾದರೂ ತಮಗೆ ಚಿಂತೆಯಿಲ್ಲದ ದಿನಗಳು ಬಂದಾವೋ ಎಂದು ಹನಿಗಣ್ಣಾದರು. ಕಳೆದ ಸಲ ಕೋಮುಗಲಭೆಯ ಹೊತ್ತಿನಲ್ಲಿ ತಮ್ಮ ಮನೆಯ ಮೇಲೆ ಕಲ್ಲು ಹೊಡೆದು, ಬೆಂಕಿ ಹಚ್ಚಲು ಬಂದಿದ್ದವ ಈಗ ತಮ್ಮ ಗೋವುಗಳಿಗೆ ಕೊಡಲು ಬಾಳೆಯಹಣ್ಣು ಒಯ್ದ ಎಂದು ಹೇಳುವಾಗ ದನಿ ಗದ್ಗದವಾಯಿತು.

‘ಮೇಡಂ, ನಾವು ನಮ್ಮನೇರು ಈ ಊರ‍್ಗೆ ಯಲ್ಲಾರ‍್ಕಿಂತ ಮದ್ಲೆ ಬಂದಿದ್ವಿ. ಆದ್ರೆ ಅಂವಾ ನೀವ್ ಈ ಊರು ಬಿಟ್ಟೋಗಿ ದನಾ ತಿನ್ನರೇ ಅಂತ ಬೈದಾಡಿದ್ದ. ಅಂವಾ ಹಂಗ್ ಕೂಗ್ತ ಇದ್ದದ್ದು ನಂಗೆ ಮರೆಯಕ್ಕೇ ಆಗಿಲ್ಲ. ಒಂದಿನ ಅಂಗ್ಡಿಗೆ ಅಂವ ಬಂದಕೂಡ್ಲೆ ಎದೆ ವಡ್ದಂಗಾತು. ಕಡೀಗ್ ನೋಡ್ರೆ ಐದು ಗೊನಿ ಬಾಳೆಹಣ್ಣು ಕೊಡಿ ಅಂದ. ದಿನಾ ಬೇಕು ಅಂದ. ನಂಗೆ ತಡಿಲಾರ‍್ದೆ, ‘ಅವತ್ ಹಂಗೆ ಊರು ಬಿಟ್ಟು ಹೋಗಿ ಅಂದುಬಿಟ್ಯಲ್ಲ ಮಗಾ’ ಅಂತ ಕೇಳಿದೆ. ‘ಹಸೀನಮ್ಮ ನಾ ಅವತ್ ಕುಡ್ದ್ ಹಂಗೆಲ್ಲ ಅಂದಾಡ್ಬಿಟ್ಟೆ. ಏನೂ ಅಂದ್ಕಬೇಡಿ’ ಅಂತ ಕಾಲು ಕೈ ಹಿಡ್ಕಂಡ್ ಬಿಟ್ಟ. ಆಯ್ತು, ನಂಗೀಗ ಊರಮೇಲೆ ಯಾವ ಹೆದರ‍್ಕೆನೂ ಇಲ್ಲ. ಯಾ ಅಲ್ಲಾ..’

ಭಯ, ಸಮಾಧಾನ, ನಿರಾಳ, ಸಂತೋಷ ಮುಂತಾದ ಭಾವಗಳೆಲ್ಲ ಏಕಕಾಲಕ್ಕೆ ಸುಳಿದು ಅವರ ಗಂಟಲು ಕಟ್ಟಿಹೋಯಿತು. ‘ನಾಳಿಗ್ ಮಾಡಿ’ ಎಂದು ಚೆನ್ನಾಗಿ ಕಳಿತ ಒಂದು ಡಜನು ಹುಳಿಬಾಳೆ ಹಣ್ಣು ಕೊಟ್ಟರು. ನಾಳಿನ ತಿಂಡಿಯ ಚಿಂತೆ ಬನ್ಸಿನಲ್ಲಿ ಕಳೆಯಿತು ಎಂದುಕೊಳ್ಳುತ್ತ ಮನೆಗೆ ಬಂದೆ.

* ಫೋಟೋ : ಎಸ್. ವಿಷ್ಣುಕುಮಾರ್ * ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 27 : ಯಂಗೀಸ್ ಬ್ಲ್ಯೂಸ್ ‘ಪಿರಿಯಡ್ಸ್ ಮುಂದೋಯ್ತು ಅಂತ ನೋಡ್ಕೊಂಡೆ, ಪಾಸಿಟಿವ್ ಇದೆ’

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಮಣ್ಣಿನ ಯಾವ ಗುಣದಿಂದ ಗುಲಾಬಿ ಹೂವಿನ ಜೊತೆ ಮುಳ್ಳು ಬೆಳೀತು ಅಂತ ಹುಡುಕಕ್ಕಾಗುತ್ತ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ