Covid Diary : ಕವಲಕ್ಕಿ ಮೇಲ್ ; ‘ಪಿರಿಯಡ್ಸ್ ಮುಂದೋಯ್ತು ಅಂತ ನೋಡ್ಕೊಂಡೆ, ಪಾಸಿಟಿವ್ ಇದೆ’

Young Blues : ‘ಅರೇ ಕೆಟ್ ಹುಡುಗೀ. ಸತ್ತೋಗದಾದ್ರೆ ಇಷ್ಟೆಲ್ಲ ಕಷ್ಟಪಟ್ಟು ಓದಿ, ಡೆಂಟಲ್ ಸೀಟು ತಗೊಂಡು, ಇಷ್ಟು ಹಾರ್ಡ್‌ವರ್ಕ್ ಮಾಡ್ಬೇಕಿತ್ತ ನೀನು? ಎಲ್ಲ ಸತ್ತೋಗದಾದ್ರೆ ನಿಮ್ಮಮ್ಮ, ನಾವೆಲ್ಲ ಆಸ್ಪತ್ರೇಲಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕೆಲ್ಸಾ ಮಾಡಬೇಕಿತ್ತ? ಹೆದರಬೇಡ. ಎಲ್ಲ ಸರಿಯಾಗುತ್ತೆ. ವಾಟ್ಸಪ್ ಕಾಲ್ ಮಾಡು ನೋಡುವಾ, ಸಾಯೋರು ಹೆಂಗಿದಾರೆ ನೋಡ್ತೆ’

Covid Diary : ಕವಲಕ್ಕಿ ಮೇಲ್ ; ‘ಪಿರಿಯಡ್ಸ್ ಮುಂದೋಯ್ತು ಅಂತ ನೋಡ್ಕೊಂಡೆ, ಪಾಸಿಟಿವ್ ಇದೆ’
covid diary kavalakki mail young blues during corona time by dr hs anupama
Follow us
ಶ್ರೀದೇವಿ ಕಳಸದ
|

Updated on:Jun 28, 2021 | 8:46 AM

‘ಆದ್ರೂ ಲೈಫಲ್ಲಿ ಬರೀ ಸಮಸ್ಯೆ, ಕಷ್ಟ ಅಷ್ಟೆನಾ? ಒಳ್ಳೇದು ಏನೂ ಇಲ್ಲೇ ಇಲ್ವಾ?’ ‘ಹಾಗೆಲ್ಲಿರುತ್ತೆ ಹುಡುಗೀ? ಸುಖಸಂಭ್ರಮ ಕಷ್ಟ ಎರಡೂ ಇದೆ. ಮನುಷ್ಯರಲ್ಲಿ ಒಳ್ಳೇತನ, ಕೇಡಿಗತನ ಎರಡೂ ಇರುತ್ತಲ ಹಾಗೆ. ನಾನೀಗ ಬ್ರೆಗ್ಮನ್ ಅನ್ನೋನ ಒಂದು ಬುಕ್ ಓದ್ತಾ ಇದೀನಿ. ಹ್ಯೂಮನ್ ಕೈಂಡ್ ಅಂತ.’ ‘ಏನದು ಮ್ಯಾಮ್?’ ‘ಅಂದ್ರೆ ಮನುಷ್ಯ ಇತಿಹಾಸದಲ್ಲಿ ಬಿಕ್ಕಟ್ಟುಗಳ ಕಾಲದಲ್ಲೇ ಅವರ ಒಳ್ಳೇತನ ಹೊರಬಂದಿದೆ. ದೊಡ್ಡ ಮಿದುಳಿನ ಮನುಷ್ಯರ ಚಿಂತನೆಯಲ್ಲಿ ಸಹಕಾರ-ಸಹಬಾಳ್ವೆಯೇ ಮೂಲವಾಗಿದೆ. ಅವರು ಗುಂಪಾಗಿ ಜೀವಿಸಲಿಕ್ಕೆ, ಗುಂಪಿಗೆ ಹಿತವಾಗುವಂತೆ ನಡೆದುಕೊಳ್ಳಲಿಕ್ಕೆ ಸೃಷ್ಟಿಯಾಗಿದ್ದಾರೆ. ಬರಬರುತ್ತ ಖಾಸಗಿ ಆಸ್ತಿ ಮೋಹದಿಂದ ಖಾಸಗಿತನ, ಕೇಡು ಎದ್ದು ಕಾಣುವಂತೆ ಆದರೂ ಆಳದಲ್ಲಿ ಮನುಷ್ಯರು ಉದಾತ್ತತೆ, ಸಹಬಾಳ್ವೆಯನ್ನೇ ಮೂಲಗುಣವಾಗಿ ಹೊಂದಿದಾರೆ ಅಂತ ಅದು ಹೇಳುತ್ತೆ.’ ‘ಹೌದಾ?! ನಾನೂ ಓದ್ಬೇಕಾಯ್ತು.’ *

ಇಷ್ಟುದಿನದಲ್ಲಿ ನೇಪಥ್ಯದಲ್ಲಿ ನಿಂತು ಅತಿ ಹೆಚ್ಚು ಕಾಟ ಕೊಟ್ಟವರು ಯಂಗೀಸ್, ತರುಣ ಭಾರತ. ‘ಏನು, ಬರೀ ನಿಮ್ದೆ ಗೋಳು ಆಗೋಯ್ತು?’; ‘ಅರ್ಧ ಲೈಫ್ ಮುಗ್ದೋರ ಕತೆನೇ ಬರೆದಿದಿ. ನಾವಿನ್ನೂ ಕಣ್ಣು ಬಿಡದ್ರಲ್ಲಿ ಎಲ್ಲ ಫಿನಿಶ್ ಆದ ಆತಂಕದಲ್ಲಿದಿವಿ. ನಾವು ಕಾಣ್ಸದೇ ಇಲ್ವಾ?’; ‘ಯೂ ಸ್ಟೋರಿ ಟೆಲ್ಲರ್ಸ್ ಶುಡ್ ಬ್ಯಾಲನ್ಸ್ ದ ಸ್ಕೇಲ್. ನಿಮ್ಗೆ ನಮ್ಮ ಬ್ಲೂಸ್ ಕಾಣದೇ ಇಲ್ವ?’ ಮುಂತಾಗಿ ಚುಚ್ಚುತ್ತ ಇವೆ. ಹಾಗೆ ತುಂಬ ಕಾಟ ಕೊಟ್ಟ ಕೆಲ ‘ಯಂಗೀಸ್ ಬ್ಲೂಸ್’ ಇಲ್ಲಿವೆ!

ಸತ್ತೋಗ್ತೀನಿ ಅನಿಸ್ತಿದೆ

‘ಮೇಡಂ, ನಂಗೆ ಎದೇಲೆಲ್ಲ ಒಂಥರಾ ತ್ರಾಸು ಆಗ್ತಿದ್ದು.’ ‘ನೀನು ಪಾಸಿಟಿವ್ ಆಗಿ ಎಷ್ಟು ದಿನ ಆಯ್ತೇ?’ ‘ಹದಿನಾಲ್ಕು ದಿನ ಆಯ್ತು. ನಾನು ನಾಳೆ ಬರ‍್ಲ ಮೇಡಂ?’ ‘ತುಂಬ ತ್ರಾಸು ಅನಿಸಿದರಷ್ಟೇ ಬಾ ಮನಿಶಾ. ಆಕ್ಸಿಮೀಟರಲ್ಲಿ ನೋಡಿದ್ಯಾ? ಸ್ಯಾಚುರೇಷನ್ ಎಷ್ಟಿದೆ? ಟೆಂಪರೇಚರ್ ನೋಡು.’ ‘ಮಮ್ಮಿ ಆಕ್ಸಿಮೀಟರ್ ಕಳಿಸಿದಾರೆ. ಸ್ಯಾಚುರೇಷನ್ ಶೇ. 99 ಇದೆ. ಪಲ್ಸ್ 90. ಜ್ವರ 97.’ ‘ಓ, ಫೈನ್. ತೊಂದ್ರೆ ಏನಾಗುತ್ತೆ?’ ‘ಈಗ ಉಸುರು ಕಟ್ಟುತ್ತೆನೋ ಅನ್ಸುತ್ತೆ.’ ‘ಊಟ ಸೇರುತ್ತಾ?’ ‘ಊಟ ಸೇರುತ್ತೆ, ಆದ್ರೆ ವಾಂತಿ ಆಗುತ್ತೆನೋ ಅನಿಸುತ್ತೆ.’ ‘ತಂಡಿ, ಕೆಮ್ಮು ಇದೆಯಾ?’ ‘ಏನಿಲ್ಲ, ಆದ್ರೆ ತಂಡಿ ಆಗೋ ಫೀಲ್ ಇದೆ.’

ಇವಳು ಮನಿಶಾ. ಕೋವಿಡ್ ಕಾಲದಲ್ಲಿ ಎರಡನೆಯ ಪಿಯುಸಿ ಪರೀಕ್ಷೆ ಬರೆದು, ಅದರ ನಡುವೆಯೇ ಸಿಇಟಿ ಕಟ್ಟಿ, ಡೆಂಟಲ್ ಕಾಲೇಜಿಗೆ ಸೇರಿ ಬಂದವಳು. ಅವಳ ತಂಗಿ ಪವಿತ್ರ. ಅವಳು ಎಸ್ಸೆಲ್ಸಿ ಮುಗಿಸಿ ಫಸ್ಟ್ ಪಿಯು. ಮನೆಯಲ್ಲಿ ಅವರಿಬ್ಬರದೇ ಕಾರುಭಾರ. ಯಾಕೆಂದರೆ ಅವರಿಬ್ಬರೂ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಅಪ್ಪ ಬೇರೆ ಜಿಲ್ಲೆಯಲ್ಲಿ ಅಂಚೆ ಇಲಾಖೆಯಲ್ಲಿ ಪೋಸ್ಟ್‌ಮಾಸ್ಟರ್ ಆಗಿ ಅಲ್ಲೇ ಉಳಿದಿದ್ದಾರೆ. ಅಮ್ಮ ಸ್ಟಾಫ್‌ನರ್ಸ್ ಆಗಿ ಇದೇ ಊರಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಕೋವಿಡ್ ಬಂದಮೇಲೆ ಅಜ್ಜಿಯನ್ನು ಊರಿಗೆ ಕಳಿಸಿದ್ದಾರೆ. ಇವತ್ತು ಅಮ್ಮನಿಗೆ ನೈಟ್‌ಶಿಫ್ಟ್ ಇರುವುದರಿಂದ ಮನೆಯಲ್ಲಿ ಇವರಿಬ್ಬರೇ. ಜೊತೆಗೆ ಕೋವಿಡ್, ಭಯ. ಅವರಮ್ಮ ಮಾತಾಡುವಂತೆ ಕೇಳಿದರೆಂದು ಫೋನಿಸಿದ್ದೆ.

‘ಯಾಕೋ ನಾನು ಸತ್ತೋಗ್ತೀನಿ ಅನಿಸ್ತಿದೆ ಮೇಡಂ. ಯಾರನ್ನೂ ನೋಡುವಂಗಿಲ್ಲ, ಎಲ್ಲೂ ಹೋಗುವಂಗಿಲ್ಲ. ಇದೆಲ್ಲ ಮುಗಿಯುತ್ತೋ ಇಲ್ವೋ ಅನ್ಸಿದೆ. ಸಾಕು ಇದು, ಸತ್ತೋಗ್ಬೇಕು ಅನಿಸ್ತಿದೆ.’

‘ಅರೇ ಕೆಟ್ ಹುಡುಗೀ. ಸತ್ತೋಗದಾದ್ರೆ ಇಷ್ಟೆಲ್ಲ ಕಷ್ಟಪಟ್ಟು ಓದಿ, ಡೆಂಟಲ್ ಸೀಟು ತಗೊಂಡು, ಇಷ್ಟು ಹಾರ್ಡ್‌ವರ್ಕ್ ಮಾಡ್ಬೇಕಿತ್ತ ನೀನು? ಎಲ್ಲ ಸತ್ತೋಗದಾದ್ರೆ ನಿಮ್ಮಮ್ಮ, ನಾವೆಲ್ಲ ಆಸ್ಪತ್ರೇಲಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕೆಲ್ಸಾ ಮಾಡಬೇಕಿತ್ತ? ಹೆದರಬೇಡ. ಎಲ್ಲ ಸರಿಯಾಗುತ್ತೆ. ವಾಟ್ಸಪ್ ಕಾಲ್ ಮಾಡು ನೋಡುವಾ, ಸಾಯೋರು ಹೆಂಗಿದಾರೆ ನೋಡ್ತೆ’

ಅದರ ತಂಗಿಯಿರಬೇಕು, ಕಿಸಿಕಿಸಿ ಎನ್ನುತ್ತ ಸುದೀಪ, ಸುದೀಪ ಎಂದಳು. ಇವಳ ದನಿ ಗದರುವಂತಾದಾಗ ಫೋನ್ ಕಟ್ ಆಯಿತು. ‘ಸಾರಿ ಮೇಡಂ’ ಎಂಬ ಮೆಸೇಜು ಬಂತು.

ನಾನಿಲ್ಲಿ ಇರಲ್ಲ

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ನಾನ್ ಮಾತ್ರ ಮದ್ವೆ ಆಗಲ್ಲ ಮೇಡಂ. ಈ ಹಗ್ಗ ಜಗ್ಗಾಟ ನೋಡಿ ನೋಡಿ ಸಾಕಾಯ್ತು.’ ‘ನಾನು ಹಳ್ಳೀಲಿ ಮಾತ್ರ ಇರಲ್ಲ ಮೇಡಂ. ಇವ್ರಿಗೆ ನಾವು ಕೂತಿದ್ದು, ಎದ್ದಿದ್ದು, ನಕ್ಕಿದ್ದು, ಅತ್ತಿದ್ದು, ಮುಟ್ಟಾಗಿದ್ದು ಎಲ್ಲ ಅಂದ್ರೆ ಎಲ್ಲ ಬೇಕು. ಚಡ್ಡಿ ಹಾಕಂಗಿಲ್ಲ. ಕೂದ್ಲು ಬಿಟ್ಕಳೋ ಹಂಗಿಲ್ಲ. ಲಿಪ್‌ಸ್ಟಿಕ್ ಕಚ್ಚೋ ಹಂಗಿಲ್ಲ. ಫ್ರೀಡಮ್ಮೇ ಇಲ್ಲ ಇಲ್ಲಿ. ಬಸ್ಸೊಂದು ಶುರುವಾಗ್ಲಿ, ಹೋಗ್ಬಿಡ್ತಿನಿ. ನಾನು ಹಾಯಾಗಿರ‍್ಬೇಕು.’ ‘ನಮ್ಮಮ್ಮಂಗೆ ಬುದ್ಧಿ ಇಲ್ಲ. ತಪ್ಪು ಮಾಡಿದಾರಂತ ಗೊತ್ತಿದ್ರೂ ನಮ್ಮಪ್ಪನ ಪರ ಮಾತಾಡ್ತಾರೆ. ಛೀ, ಐ ಡೋಂಟ್ ಲೈಕ್ ಹರ್’

ಹೀಗೆ ರಶ್ಮಿಯಿಂದ ವಾಟ್ಸಪ್‌ನಲ್ಲಿ ದಿನಕ್ಕೊಂದು ಹೇಳಿಕೆ, ಕೇಳಿಕೆ ಬರುತ್ತಿರುತ್ತದೆ. ಹೈಸ್ಕೂಲು ಓದುವ ಹುಡುಗಿಯಾಗಿದ್ದಾಗಿನಿಂದ ಪರಿಚಿತಳು. ಕೆಳಮಧ್ಯಮ ವರ್ಗದ ಕುಟುಂಬ. ಮಕ್ಕಳನ್ನು ಓದಿಸುವ ಕನಸಿನ ಕಠೋರ ಶಿಸ್ತಿನ ಅಪ್ಪ. ಪುಕ್ಕಲಿ ಅಮ್ಮ. ಇವಳು ಡಿಪ್ಲೊಮಾ ಮುಗಿಸಿ ಮಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಹವ್ಯಾಸಿ ನಾಟಕ ತಂಡ ಸೇರಿ ವಿಚಾರ ಮಾಡುವಂತಾಗಿದ್ದಾಳೆ.

ಅವಳಿದ್ದ ಪಿಜಿಯ ಐವರು ಕೋವಿಡ್ ಪಾಸಿಟಿವ್ ಆದಾಗ ಅಪ್ಪ ಮನೆಗೆ ಕರೆದುಕೊಂಡು ಬಂದರು. ಈಗಿಲ್ಲಿ ಮನೆಯಿಂದ ಕೆಲಸ ಮಾಡುವುದೆಂದರೆ ಕಣಿವೆಯಲ್ಲಿರುವ ತೋಟದ ಮನೆಯಿಂದ ಮೇಲೆ ರಸ್ತೆಗೆ ಬಂದು ಕೂತು ಎಲ್ಲಿ ನೆಟ್‌ವರ್ಕ್ ಸಿಗುವುದೋ ಅಲ್ಲಿ ಕೆಲಸ ಮಾಡಬೇಕು. ಅದಕ್ಕಾಗಿ ಪಪ್ಪ ತಾತ್ಕಾಲಿಕ ಹಕ್ಕೆಮನೆ ಕಟ್ಟಿಕೊಟ್ಟಿದ್ದಾರೆ. ನವೋದಯದಲ್ಲಿ ಹತ್ತನೆಯ ತರಗತಿ ಓದುತ್ತಿರುವ ಅವಳ ಕಿರಿಯ ತಮ್ಮನೂ ಆನ್‌ಲೈನ್ ಕ್ಲಾಸಿಗೆ ಬಂದು ಕೂರುತ್ತಾನೆ. ಕರೆಂಟು ಹೋದರೆ ಟವರು ಬಂದಾಗುತ್ತದೆ. ಸಿಗ್ನಲ್ ನಿಲ್ಲುತ್ತದೆ. ಪವರ್ ಬರುವವರೆಗೂ ಆನ್‌ಲೈನಿಲ್ಲ. ಕೆಲಸವೇ ಸಾಗುವುದಿಲ್ಲ.

‘ಎಷ್ಟು ಹೇಳಿದರೂ ಉಪಯೋಗವಿಲ್ಲ. ಮೌಢ್ಯದ ಕಿಲುಬು ಸ್ವಲ್ಪನೂ ಹೋಗಿಲ್ಲ’

ಎಂದು ಒಂದು ಸಾಲು ಕಳಿಸಿದಳು. ಯಾಕೇ? ಅಂದರೆ ಅವಳು ಮುಟ್ಟಾದಾಗ ಮನೆಯೊಳಗೆ ಬರುವುದು ಬೇಡ ಅನ್ನುತ್ತಿದ್ದಾರಂತೆ ಅವಳಮ್ಮ. ‘ಹೋದಲ್ಲಿ ಹೇಗಾದ್ರೂ ಇರು. ನಿನ್ನ ಮನೇಲಿ ಏನಾದ್ರೂ ಮಾಡ್ಕ. ಆದ್ರೆ ಇಲ್ಲಿ ಮೂಲ ದೇವ್ರ ಕಲಶ, ಮೂರ್ತಿ ಇದೆ. ಮೈಲ್ಗೆಯಾದ್ರೆ ಸರ್ವನಾಶ ಆಗ್ತಿವಿ. ಹೊರಗೆ ಕೂರುದೇ’ ಎಂದರಂತೆ. ಅವರೊಡನೆ ಜಗಳ ಮಾಡಿಕೊಂಡಿದ್ದಾಳೆ.

‘ನಾವು ಮಂಗಳಕ್ಕೆ ಹೋಗಿಬಂದ್ರೇನು, ಮುಟ್ಟಾದರೆ ಅಂಗಳಕ್ಕೂ ಹೋಗುವಂತಿಲ್ಲ. ಕಳೆದ ತಿಂಗ್ಳು ಹೇಳಿರಲೇ ಇಲ್ಲ, ಏನಾಯ್ತು? ಏನಿಲ್ಲ. ಈಗ ರಾದ್ಧಾಂತ. ಹೊರಗಿನ ಕೋಣೇಲಿ ಕೂತಿದೀನಿ. ನಾಳೆನೇ ಮಂಗಳೂರಿಗೆ ಹೋಗ್ತಿದೀನಿ. ಊಟ ತಿಂಡಿ ಇಲ್ದೆ ಉಪವಾಸ ಸತ್ರೂ ಪರವಾಗಿಲ್ಲ, ಇಲ್ಲಿಗೆ ಬರಲ್ಲಾಂತ ಹೇಳ್ತೀನಿ. ಶಿಟ್, ಈ ಹಾಳು ಬಾವೀಲೇ ಸಾಯ್ಲಿ ಎಲ್ಲರೂ, ನಾನಿಲ್ಲಿ ಇರಲ್ಲ’ ಎಂದು ರೋಷದ ಉತ್ತರ ಕಳಿಸಿದಳು.

‘ನಾವು ಬೆಳೆದ, ವಿಚಾರ ಮಾಡುವ ರೀತಿಗೂ, ಅವರ ವಿಚಾರಶಕ್ತಿಯ ದಿಕ್ಕಿಗೂ ವ್ಯತ್ಯಾಸವಿದೆ. ನಿಂಗೆ ಸಿಟ್ಟು ಬರುವುದು ಸಹಜವೇ. ಆದರೆ ದುಡುಕಿ ನ್ಯಾಯತೀರ್ಮಾನದಂತಹ ಮಾತು ಹೇಳಿ ನೋಯಿಸಬೇಡ. ‘ಈ ತರಹ ಇರಲಿಕ್ಕೆ ಇಷ್ಟ ಇಲ್ಲ, ಇದು ಸರಿ ಅಲ್ಲ, ನಾನು ಹೋಗ್ತೀನಿ’ ಅಂತ ಹೇಳಿ ಹೋಗು. ಕಾಲ ಬದಲಾಗುತ್ತದೆ, ಅವರೂ ಬದಲಾಗ್ತಾರೆ. ಆದರೆ ಸಮಯ ಹಿಡಿಯುತ್ತದೆ. ಪ್ರೀತಿಯಿರಲಿ’ ಎಂದು ಬೀಳ್ಕೊಂಡೆ ನಾನು.

ಅವರ ಹತ್ರನೂ ಕೆಲ್ಸ ಮಾಡಿಸು

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಜಾನಕಿ ಮನೆಗೆ ಬರುವಾಗ ಆರೂವರೆಯ ಮೇಲಾಗಿರುತ್ತದೆ. ಅವರು ತಾಲೂಕಿನ ದಂಡಾಧಿಕಾರಿಗಳ ಕಚೇರಿಯಲ್ಲಿ ಮ್ಯಾನೇಜರ್ ಕೆಲಸ ಮಾಡುವರು. ಗಂಡ ಪೊಲೀಸ್ ಎಚ್‌ಪಿಸಿ. ಇಲ್ಲೇ ಸುತ್ತಮುತ್ತಲೇ ಇರುವಂತೆ, ವರ್ಗಾವಣೆಯಾಗದಂತೆ ನೋಡಿಕೊಂಡಿದ್ದಾರೆ. ಜಾನಕಿ ಸಂಜೆ ಬಂದಮೇಲೆ ಬುಡದಿಂದ ಕೆಲಸ ಶುರು ಹಚ್ಚಿಕೊಳ್ಳಬೇಕು. ಚಹಾ, ಸಂಜೆಯ ಸ್ನ್ಯಾಕ್ಸ್, ಆನ್‌ಲೈನ್ ಕ್ಲಾಸಿನಲ್ಲಿರುವ ಶ್ವೇತಾಳ ವಿಚಾರಣೆ, ರಾತ್ರಿ ಊಟಕ್ಕೆ ತಯಾರಿ, ಅದು ಮುಗಿದರೆ ನಾಳೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ತಯಾರಿ, ಹೀಗೇ. ಅಡುಗೆ ಮನೆಯ ಕೆಲಸ ಮುಗಿಯಿತೆಂದಿಲ್ಲ. ಈಗ ಲಾಕ್‌ಡೌನ್ ಆದ್ದರಿಂದ ಮನೆಗೆಲಸದ ಸಹಾಯಕ್ಕೆ ಬರುತ್ತಿದ್ದ ಸಾವಿತ್ರಿಯೂ ಬರುವುದಿಲ್ಲ. ಕಚೇರಿಯಲ್ಲಿ ಎಷ್ಟು ಬರೆದರೂ ಮುಗಿಯುವುದಿಲ್ಲ. ಕೆಲಸ ಪೂರೈಸಲು ಫೈಲುಗಳನ್ನು ಮನೆಗೆ ಹೊತ್ತು ತರುತ್ತಾರೆ. ಮನೆಗೆಲಸ ಮುಗಿಸಿ ಬಳಿಕ ಫೈಲು ನೋಡುವಾಗ ನಿದ್ದೆ ಎಳೆಯುತ್ತಿರುತ್ತದೆ. ಇತ್ತೀಚೆಗೆ ಮುಟ್ಟು ಬೇಗ ಬರುತ್ತಿದೆ, ಸಿಕ್ಕಾಪಟ್ಟೆ ಬ್ಲೀಡಿಂಗ್ ಆಗುತ್ತಿದೆ. ಆಪರೇಷನ್ ಆಗಬೇಕು, ಆದರೆ ಪುರುಸೊತ್ತಿಲ್ಲ. ಕೋವಿಡ್ ಕಮ್ಮಿಯಾದ ಬಳಿಕ ಮಾಡಿಕೊಳ್ಳುವುದು ಅಂದುಕೊಂಡಿದ್ದಾರೆ.

ಅಂದು ರಾತ್ರಿ ಹತ್ತಕ್ಕೆ ‘ನಿಮ್ಮತ್ರ ಐದು ನಿಮಿಷ ಮಾತಾಡಲಾ?’ ಎಂಬ ಸಂದೇಶ ಬಂತು. ಎಂದಿನಂತೆ, ‘ಸ್ವಲ್ಪ ವಿರಾಮ ತಗೊಳ್ಳಿ. ಆತಂಕ ಹೆಚ್ಚಾದಷ್ಟು ಬ್ಲೀಡಿಂಗ್ ಹೆಚ್ಚು. ವಾಕ್, ವ್ಯಾಯಾಮ ರೂಢಿಸಿಕೊಳ್ಳಿ. ಇದೆಲ್ಲಕ್ಕೆ ಕಡಿಮೆಯಾಗದಿದ್ದರೆ ಆಪರೇಷನ್ನೇ ಪರಿಹಾರ’ ಎಂದು ಅದನ್ನೇ ಹೇಳಿದೆ. ವಿರಾಮ ಸಾಧ್ಯವೇ ಇಲ್ಲ. ಕೆಲಸದವರು ಬರುವುದಿಲ್ಲ. ಹೊತ್ತೊತ್ತಿಗೆ ಬೇಯಿಸುವಷ್ಟಾದರೂ ಆಗಬೇಕಲ್ಲ ಎಂದರು. ಈ ಕಷ್ಟ ಹೆಂಗಸರಿಗೆ ಅರ್ಥವಾಗದೇ? ಆದರೂ ಮನೆಗೆಲಸದಿಂದ ರಜೆ ನಾವೇ ತಗೋಬೇಕೇ ಹೊರತು ಯಾವ ಮನೆಯೂ ವಿರಾಮ ತಗೋ ಎಂದು ಹೆಣ್ಣಿಗೆ ಹೇಳುವುದಿಲ್ಲ ಎಂದೆ.

‘ನಂ ಮಗ್ಳೂ ಅದೇ ಹೇಳ್ತಾಳೆ ಮೇಡಂ. ಅಪ್ಪ ಮಾಡಿದಷ್ಟೇ ಕೆಲಸ ನೀನೂ ಮಾಡಿರ‍್ತಿ. ಅವರಿಗಾದಷ್ಟೇ ಸ್ಟ್ರೈನ್ ನಿಂಗೂ ಆಗಿರುತ್ತೆ. ಅವರ ಹತ್ರನೂ ಕೆಲ್ಸ ಮಾಡಿಸು ಅಂತ. ಅಪ್ಪನ ಹತ್ರ ಅವಳು ಜಗಳ ಆಡದು ನೋಡಕ್ಕಾಗಲ್ಲ, ಅದೊಂತರ ಹಿಂಸೆ. ಕೊನೆಪಕ್ಷ ಕೆಲಸ ಮಾಡುವಾಗ ಅವ್ರು ಕೈಯಾದ್ರೂ ಹಾಕಿದ್ರೆ ಸಹಾಯ ಕೇಳಬೋದು. ಹತ್ತುಸಲ ಕರೆದರೂ ಅಡುಗೆಮನೆ ಕಡೆ ಮುಖ ಹಾಕದವರಿಂದ; ಅಕಸ್ಮಾತ್ ಎದ್ದು ಬಂದರೂ ಇದೆಲ್ಲ ನನ್ಕೈಲಿ ಆಗಲ್ಲ, ಆದ್ರೆ ಮಾಡು ಇಲ್ದಿದ್ರೆ ಹೋಟೆಲಿಂದ ತರಿಸ್ತಿನಿ ಅನ್ನೋರಿಂದ ಏನು ಸಹಾಯ ತಗಳದು ಮೇಡಂ? ಇರೋರು ಮೂರ‍್ಜನ, ಅಡುಗೆ ಕೆಲಸ ಏನ್ಮಹಾ ಅಂತಾರೆ. ಅವರಿಗೆ ಶುಗರ್, ನಂಗೆ ಹಿಮೋಗ್ಲೋಬಿನ್ ೭ ಇದೆ ಅಂತ ದಿನಾ ಸೊಪ್ಪು ತರಕಾರಿ, ಮಗಳಿಗೆ ಸೇರುವಂತಹ ಇನ್ನೇನೋ – ಒಂದೊಂದ್ಸಲ ಮೂರು ಜನಕ್ಕೆ ಮೂರು ತರ ಆಗ್ಬೇಕು. ಈ ಜಂಜಾಟಕ್ಕೆ ಕೊನೆನೇ ಇಲ್ವ ಅನ್ಸುತ್ತೆ’

‘ಹೌದು. ಅಡಿಗೆ ಕೆಲಸ ಎಷ್ಟು ಮಹಾ ಅಂತ ಗೊತ್ತಾಗೋದು ನಾವು ಆಗೋದೇ ಇಲ್ಲ ಅಂತ ಮಲಗಿದಾಗ ಮಾತ್ರ. ನಾವು ಹೆಂಗಸ್ರು ನಮ್ಮಿಂದ್ಲೇ ಎಲ್ಲ ನಡೀತಿದೆ ಅಂತ ಒಂದಕ್ಕೆ ಹತ್ತು ಕೈ ಸೇರ‍್ಸಿಕೊಂಡು ಮಾಡ್ತೀವಲ, ಅದಕ್ಕೇ ಎಲ್ಲ ನಮ್ ಹೆಗಲ ಮೇಲೇ ಬೀಳೋದು. ನಾ ಏನು ಮಾಡಿದಿನಿ ಗೊತ್ತ? ಅಡಿಗೆನ ಪ್ಲಾನ್ಡ್ ಮಾಡ್ಕೊಂಡಿದೀನಿ, ಅತಿ ಸರಳಗೊಳಿಸಿದೀನಿ. ಹಂಗಾಗಿ ನಡೆದುಹೋಗುತ್ತೆ.’

‘ನಿಜ ಮೇಡಂ. ಈಗಿನ ಹುಡುಗ್ರು ಏನೇನೋ ಸೊಲ್ಯುಷನ್ಸ್ ಹೇಳಿಕೊಡ್ತಾರೆ. ನನ್ನ ಮಗಳು ತರಕಾರಿ ಹೆಚ್ಚುವ, ಹಿಟ್ಟು ಕಲೆಸುವ, ತುರಿಯುವ ಕೆಲಸ ಮಾಡೋ ಫುಡ್ ಪ್ರೊಸೆಸರ್ ತರಿಸಿಕೊಟ್ಟಳು. ಯೂಟ್ಯೂಬ್ ತೋರ‍್ಸಿ ಹೇಗೆ ಮಾಡೋದು ಅಂತ್ಲೂ ತೋರಿಸಿದ್ಲು. ನಂಗೂ ಮೊದ್ಲು ಒಂತರಾ ಅನುಮಾನ ಇತ್ತು. ಆದ್ರೆ ಚಪಾತಿ ಹಿಟ್ಟನ್ನೂ ಸರಸರ ಕಲಸಿಬಿಡುತ್ತೆ. ಪಲ್ಯಕ್ಕೆ ಏನನ್ನ ಬೇಕಾದ್ರೂ ಹೆಚ್ಚಿ ತುರಿದು ಬಿಸಾಡುತ್ತೆ. ಅದು ಬಂದ್ಮೇಲೆ ಬಾರೀ ಹಗುರ ಆಗಿದೆ.’

‘ಹೌದಾ? ಎಷ್ಟು ಅದಕ್ಕೆ?’ ‘ಅಷ್ಟೇನೂ ದೊಡ್ಡದಿಲ್ಲ ನಮ್ಮನೆದು, ಎಂಟು ಸಾವಿರ ಅಂತೆ.’

‘ನಾನೂ ತಗೊಳೋದಾ ನೋಡ್ತಿದಿನಿ, ಮಕ್ಳು ಹೇಳ್ತನೇ ಇದಾರೆ. ನನ್ನ ಮಗ ಕಳೆದಸಲ ಬಂದೋನು ನಿನ್ನ ಗಾಂಧಿತನ ಸಾಕು ಅಂತ ವಾಶಿಂಗ್ ಮಿಷನ್, ನೆಲ ಗುಡಿಸುವ ರೊಬೊ ತಂದ್ಕೊಟ್ಟು ಹೋಗಿದಾನೆ. ದೈಹಿಕ ಶ್ರಮ ಕಮ್ಮಿಯಾಗುತ್ತೆ ಕಣೋ ಅಂದ್ರೆ ಟ್ರೆಡ್‌ಮಿಲ್ ಹಾಕ್ಸಿದಾನೆ. ಮಗಳಂತೂ ನೀನೆಂಥ ಡಾಕ್ಟ್ರು ಅಂತ ಬೈತಾಳೆ. ಅವಳ ಪ್ರಕಾರ ಯಂತ್ರಗಳ ಸಹಾಯ ತಗೊಂಡರೆ ದಿನನಿತ್ಯದ ಕೆಲಸಕ್ಕೆ ಬೇರೆ ಮನುಷ್ಯರನ್ನು ಇಟ್ಟುಕೊಳ್ಳದೇ ಸ್ವಾವಲಂಬಿ ಆಗಬೋದು. ಅಯ್ಯೋ ಅಪ್ಪ ಅಂದ್ರೆ ಸಾಕು, ಎಲ್ಲಕ್ಕೂ ಒಂದು ಮಿಷನ್ ತರ‍್ಸಿಬಿಡ್ತಾಳೆ. ಬದಲಾವಣೆ ನಿಧಾನ ಆದ್ರೆ ಆಗಲ್ಲ, ಫಟ್ ಅಂತ ಆಗಿಬಿಡ್ಬೇಕು ಅಂತ ವಾದಿಸ್ತಾಳೆ.’

ಮಾತು ಅರ್ಧತಾಸು ಮುಂದುವರೆಯಿತು. ಅಂತೂ ಹೊಸತಲೆಮಾರಿನ ಗಂಡಂದಿರು ನಮ್ಮ ಗಂಡರುಗಳಿಗಿಂತ ಪತ್ನಿಸ್ನೇಹಿ ಆಗಿರಬಹುದು; ಹೊಸತಲೆಮಾರಿನ ಹುಡುಗಿಯರ ಪರಿಸ್ಥಿತಿ ನಮಗಿಂತ ಸುಧಾರಿಸಿರಬಹುದು ಎಂಬ ಆಶಾಭಾವನೆಯೊಂದಿಗೆ ಮಾತು ಮುಗಿಸಿದೆವು.

ಬೆಕ್ಕಿನ ಚಿಂತೆ

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಹೇ ಗಯ್ಸ್, ಟೆಸ್ಟೆಡ್ ಪಾಸಿಟಿವ್ ಫಾರ್ ಕೋವಿಡ್. ಆಸ್ಪತ್ರೆಗೆ ಅಡ್ಮಿಟ್ ಆಗಕ್ಕೆ ಬಂದೆ, ಎರಡು ತಾಸಾದ್ರೂ ಫಾರ್ಮಾಲಿಟೀಸ್ ಮುಗೀತಿಲ್ಲ. ಇಟ್ಸೋಕೆ, ಏನು ಮಾಡಕ್ಕಾಗಲ್ಲ. ನಾವ್ ಬೇರೆಯೋರ‍್ಗೆ ಮಾಡಿದ್ನ ಇವ್ರು ನಮ್ಗೆ ಮಾಡ್ತಾರೆ ಅಷ್ಟೆ.’

ಕೋವಿಡ್ ಬಂದ ಹೊಸದರಲ್ಲಿ ಹೀಗೊಂದು ವಾಟ್ಸಪ್ ಮೆಸೇಜು ರಾತ್ರಿ ಎರಡೂವರೆಗೆ ಬಂದಿತು. ಅಷ್ಟೊತ್ತಿಗೆ ಯಾರೂ ಎಚ್ಚರವಿರಲಿಲ್ಲ. ಗೋವಾದ ಒಂದೂವರೆ ಶತಮಾನ ಹಳೆಯ ಸುಸಜ್ಜಿತ, ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಮಗಳು ಎಂಡಿ ಮಾಡುತ್ತಿದ್ದಳು. ಮದುವೆಯಾಗಿ ಮೂರು ತಿಂಗಳು ಕಳೆದಿತ್ತಷ್ಟೇ. ಬಾಳಸಂಗಾತಿಯಾಗಿದ್ದ ಬಾಲ್ಯಸಖ ಐನೂರು ಕಿಲೋಮೀಟರು ದೂರದ ಬೆಂಗಳೂರಿನಲ್ಲಿದ್ದ. ಅವ ತಿಂಗಳಿಗೆರೆಡು ದಿನ ಜೊತೆಯಿರಲು ಬಂದಾಗ ಬೇಕಾಗುವುದೆಂದು ಮನೆ ಮಾಡಿದ್ದಳು. ಮನೆಗೆ ಮೊದಲು ತಂದದ್ದು ಬೆಕ್ಕು. ಅನಿರೀಕ್ಷಿತವಾಗಿ ಎರಗಿದ ಕೋವಿಡ್‌ನಿಂದ ಅವಳ ಪ್ಲಾನೆಲ್ಲ ತಲೆಕೆಳಗಾಗಿತ್ತು.

ಒಂದೇಸಮ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿತ್ತು. ಇರುವುದು ಅಷ್ಟೇ ಸಂಖ್ಯೆಯ ವೈದ್ಯರು, ನರ್ಸುಗಳು, ಅಷ್ಟೇ ಬೆಡ್ಡಿನ ವಾರ್ಡುಗಳು. ಇದ್ದಕ್ಕಿದ್ದಂತೆ ಕೋವಿಡ್ ಸೋಂಕು ಏರಿದೊಡನೆ ಎಲ್ಲಾ ವಾರ್ಡುಗಳು ಕೋವಿಡ್ ವಾರ್ಡುಗಳಾಗಿ, ಎಲ್ಲ ಐಸಿಯುಗಳು ಕೋವಿಡ್ ಐಸಿಯುಗಳಾದವು. ಒಂದಾದಮೇಲೊಂದು ಹದಿನಾಲ್ಕು ದಿನಗಳ ಡ್ಯೂಟಿ ಮಾಡಿದಳು. ಗಟ್ಟಿದೇಹ, ದೊಡ್ಡ ಮನಸಿನವಳು. ಕೋವಿಡ್ ಬಂದ ಶುರುವಿಗೆ ಕೆಲವರು ಕೆಲಸ ಮಾಡಲು ಹೆದರಿ ಹಿಂಜರಿಯುತ್ತಿದ್ದರೆ ಇವಳು ಧೈರ್ಯವಾಗಿ ಅದೇನು ನೋಡೇಬಿಡುವ ಎಂಬಂತೆ ಎಲ್ಲ ತರಹದ ಡ್ಯೂಟಿ ಮಾಡಿದಳು. ಗುಡುಗು, ಮಳೆ ಬಂದರೂ ಹೆದರದೆ ಸ್ಕೂಟಿಯಲ್ಲಿ ಮೂವತ್ತು ನಲವತ್ತು ಕಿಲೋಮೀಟರ್ ಹೋಗಿ ಡ್ಯೂಟಿಗೆ ಹಾಜರಾದಳು.

ಇದ್ದಕ್ಕಿದ್ದಂತೆ ಜ್ವರ, ಗಂಟಲುನೋವು ಶುರುವಾಯಿತು. ನಮಗೆ ಆತಂಕ, ದುಃಖ. ಟೆಸ್ಟ್ ಮಾಡಿದರೆ ಪಾಸಿಟಿವ್ ಆಗಿದ್ದಳು. ‘ಸೆಲ್ಫ್‌ಕೇರ್ ಪ್ಲಾನ್’ ತೆಗೆದುಕೊಂಡು ಒಬ್ಬಳೇ ಹದಿನಾಲ್ಕು ದಿನ ಹೋಟೆಲು ರೂಮಿನಲ್ಲುಳಿದಳು. ಅವಳಿದ್ದ ಗೋವಾ ರಾಜ್ಯ ಗಡಿ ಮುಚ್ಚಿಕೊಂಡ ಕಾರಣ ನಾವ್ಯಾರೂ ಹೋಗುವಂತಿಲ್ಲ. ‘ಹೆದರಬೇಡ ಅಮ್ಮ, ನಾನು ಯಾರ ಮಗಳು ಹೇಳು? ಆರಾಮಾಗ್ತೀನಿ’ ಎನ್ನುವ ಧೈರ್ಯ ಅವಳದ್ದು.

ಸುಮ್ಮನೆ ಕೂರದ ಚಟುವಟಿಕೆಯ ಹುಡುಗಿ ಹದಿನಾಲ್ಕು ದಿನ ಸಿಂಗಲ್ ರೂಮಿನಲ್ಲಿ ಒಬ್ಬಳೇ ಕಳೆಯಬೇಕು. ಹೇಗೆ ಇರುವಳೋ ಎಂಬ ಆತಂಕ ನಮಗೆ. ಪ್ರತಿದಿನ ವೈಟಲ್ಸ್ ನೋಡಿ ಅಪ್‌ಲೋಡ್ ಮಾಡುವಳು. ಬೇಕಿದ್ದನ್ನು ತೆಗೆದುಕೊಂಡಳು. ಐದಾರು ದಿನಕ್ಕೆ ಆರಾಮವಾದಳು. ತನ್ನ ಪುಸ್ತಕ ತರಿಸಿ ಓದಿಕೊಂಡಳು. ಕೂತು ಬೋರಾದಾಗ ಮೇಜುಕುರ್ಚಿಗಳನ್ನು ಕಾಟಿನ ಮೇಲೇರಿಸಿ ಅಲ್ಲೇ ಅರ್ಧತಾಸು ಸುತ್ತುವರಿದಳು. ಎಲ್ಲೆಲ್ಲಿಯದೋ ವೀಡಿಯೋ ನೋಡಿ, ಕೂತಲ್ಲೇ ಹೋಗಿಬಂದಳು. ‘ಹೇಗೆ ಟೈಂ ಪಾಸ್ ಮಾಡ್ತಿಯ ಪುಟ್ಟೀ’ ಅಂದರೆ, ‘ಕೂತುಕೂತು ದಡ್ಡರಾಗಬಾರ್ದು ಅಂತ ಮಾರಿ ಗೋಲ್ಡ್ ಬಿಸ್ಕತ್ತಲ್ಲಿ ಇಪ್ಪತ್ನಾಲ್ಕು ತೂತು ಇದೆ; ಕರೆಂಟು ಹೋದಮೇಲೆ ಒಂದು ನಿಮಿಷ ಹದಿನಾಲ್ಕು ಸೆಕೆಂಡಿಗೆ ಫ್ಯಾನು ತಿರುಗುವುದು ನಿಲ್ಲಿಸುತ್ತೆ; ತೂತಿರುವ ಒಂದು ಚೊಂಬು ನೀರು ತುಂಬಲು ಏಳೂವರೆ ನಿಮಿಷ ಬೇಕಾಗುತ್ತೆ; ನನ್ನ ರೆಪ್ಪೆಯಲ್ಲಿ ೨೧೨ ಕೂದಲಿವೆ ಅಂತೆಲ್ಲ ಹೊಸಹೊಸಾ ಸಂಶೋಧನೆ ಮಾಡ್ತಿದೀನಿ ಅಮ್ಮಾ’ ಎಂದಳು.

‘ನಿದ್ದೆ ಬರುತ್ತಾ? ಒಬ್ಳೇ ಬೇಜಾರೋ ಏನೋ?’

‘ಒಂದೇಸಮ ಡ್ಯೂಟಿ ಮಾಡಿದ್ದ ಸುಸ್ತೆಲ್ಲ ಆರಿಸಿಕೊಳ್ತಾ ಇದೀನಿ. ಮಧ್ಯಾಹ್ನ ಕೆಲಸ ಇಲ್ಲಂತ ಮಲಗ್ತಿನಿ. ಮಧ್ಯಾಹ್ನ ಮಲಗಿದೀನಿ ಅಂತ ರಾತ್ರಿ ಲೇಟ್ ಮಲಗ್ತಿನಿ. ರಾತ್ರಿ ಲೇಟ್ ಮಲಗಿದೆ ಅಂತ ಬೆಳಿಗ್ಗೆ ಲೇಟ್ ಏಳತೀನಿ. ಮಧ್ಯಾಹ್ನ ಮತ್ ಮಲಗ್ತಿನಿ. ಹೀಗೇ ಹನ್ನೊಂದು ದಿನ ಕಳೆದೇಹೋಯ್ತು. ನಂಗೆ ಒಂದೇ ಚಿಂತೆ.’

‘ ಕೆಟ್ ಹುಡುಗಿ, ಏನೇ ಅದು?’ ‘ನಂ ಬೆಕ್ಕಿನಮರಿ ಬರ್ಫಿಗೆ ಪಾಪ ಎಷ್ಟು ಬೋರಾಗಿದೆಯೋ ಏನೋ?’ ‘ಆಹಾ, ಗಂಡನ ಚಿಂತೆ ಅಂತಾಳೆನೋ ಅಂದ್ರೆ ಬೆಕ್ಕಿನ ಚಿಂತೆ ಅಂತೆ.’ ‘ಗಂಡನ ಚಿಂತೆ ಯಾಕೆ? ಅವ್ನಲ್ಲಿ ಆರಾಮಿದಾನೆ. ದಿನಾ ನೋಡಿ ಮಾತಾಡ್ತಿನಿ. ಲಾಕ್‌ಡೌನ್ ತೆಗೆದ ಕೂಡ್ಲೆ ಬರ‍್ತಾನೆ, ಅಷ್ಟೆ.’

ಲೈಫಲ್ಲಿ ಬರೀ ಸಮಸ್ಯೆ, ಕಷ್ಟ ಅಷ್ಟೆನಾ?

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಮ್ಯಾಮ್, ನಿಂ ಕತೇಲಿ ಬರ‍್ದಿದಿರಲ್ಲ, ನಂದು ಅದೇ ಕತೆ. ಏನೇನೋ ಕನಸಿತ್ತು. ನಂ ಫ್ಯಾಮಿಲೀಲಿ ಯಾರೂ ಇನ್ನೂ ಫಾರಿನ್ನಿಗೆ ಹೋಗಿಲ್ಲ, ಅಮೆರಿಕಕ್ಕೆ ಹೋಗಿ ಕೆಲಸ ಮಾಡ್ಬೇಕು, ಅಮ್ಮ ಅಪ್ಪನಿಗೂ ಫಾರಿನ್ ಟೂರ್ ಮಾಡಿಸ್ಬೇಕು ಅಂತಿತ್ತು. ಎಲ್ಲ ಮಟಾಶ್. ಫೈನಲ್ ಇಯರ್ ಮುಗಿತನೇ ಇಲ್ಲ’

‘ಬದುಕು ಅಂದ್ರೆ ಹಂಗೇ ಕಣೆ ಇನಿ. ಸಮುದ್ರದಲ್ಲಿ ಉಬ್ಬರ ಇಳಿತ ಬರಲ್ವ ಹಂಗೆ. ಏರಿಕೆ, ಇಳಿಕೆ.’ ‘ಆದ್ರೂ ಲೈಫಲ್ಲಿ ಬರೀ ಸಮಸ್ಯೆ, ಕಷ್ಟ ಅಷ್ಟೆನಾ? ಒಳ್ಳೇದು ಏನೂ ಇಲ್ಲೇ ಇಲ್ವಾ?’ ‘ಹಾಗೆಲ್ಲಿರುತ್ತೆ ಹುಡುಗೀ? ಸುಖಸಂಭ್ರಮ ಕಷ್ಟ ಎರಡೂ ಇದೆ. ಮನುಷ್ಯರಲ್ಲಿ ಒಳ್ಳೇತನ, ಕೇಡಿಗತನ ಎರಡೂ ಇರುತ್ತಲ ಹಾಗೆ. ನಾನೀಗ ಬ್ರೆಗ್ಮನ್ ಅನ್ನೋನ ಒಂದು ಬುಕ್ ಓದ್ತಾ ಇದೀನಿ. ಹ್ಯೂಮನ್ ಕೈಂಡ್ ಅಂತ.’ ‘ಏನದು ಮ್ಯಾಮ್?’ ‘ಅಂದ್ರೆ ಮನುಷ್ಯ ಇತಿಹಾಸದಲ್ಲಿ ಬಿಕ್ಕಟ್ಟುಗಳ ಕಾಲದಲ್ಲೇ ಅವರ ಒಳ್ಳೇತನ ಹೊರಬಂದಿದೆ. ದೊಡ್ಡ ಮಿದುಳಿನ ಮನುಷ್ಯರ ಚಿಂತನೆಯಲ್ಲಿ ಸಹಕಾರ-ಸಹಬಾಳ್ವೆಯೇ ಮೂಲವಾಗಿದೆ. ಅವರು ಗುಂಪಾಗಿ ಜೀವಿಸಲಿಕ್ಕೆ, ಗುಂಪಿಗೆ ಹಿತವಾಗುವಂತೆ ನಡೆದುಕೊಳ್ಳಲಿಕ್ಕೆ ಸೃಷ್ಟಿಯಾಗಿದ್ದಾರೆ. ಬರಬರುತ್ತ ಖಾಸಗಿ ಆಸ್ತಿ ಮೋಹದಿಂದ ಖಾಸಗಿತನ, ಕೇಡು ಎದ್ದು ಕಾಣುವಂತೆ ಆದರೂ ಆಳದಲ್ಲಿ ಮನುಷ್ಯರು ಉದಾತ್ತತೆ, ಸಹಬಾಳ್ವೆಯನ್ನೇ ಮೂಲಗುಣವಾಗಿ ಹೊಂದಿದಾರೆ ಅಂತ ಅದು ಹೇಳುತ್ತೆ.’ ‘ಹೌದಾ?! ನಾನೂ ಓದ್ಬೇಕಾಯ್ತು.’ ‘ಓದು, ಓದು. ಆದ್ರೆ ಇಂಥ ಫೀಲ್ ಗುಡ್ ಥಿಯರಿಗಳು ಹೊಸವಲ್ಲ ಇನಿ, ಇತಿಹಾಸವೆಂಬ ನಾಣ್ಯಕ್ಕೆ ಎರಡು ಮುಖಗಳು. ಒಂದರಲ್ಲಿ ಮನುಷ್ಯರ ಉದಾತ್ತತೆ ಸಹಬಾಳ್ವೆ ಕಂಡರೆ ಮತ್ತೊಂದು ಕ್ರೌರ್ಯ, ಕೇಡಿಗತನ, ದಬ್ಬಾಳಿಕೆ ಕಾಣ್ತಾವೆ. ಎರಡೂ ನಿಜ ಅಂತ ನೆನಪಿಡಬೇಕು.’

‘ಮೇಡಂ, ಒಂದು ಪರ್ಸನಲ್ ವಿಷ್ಯ ಮಾತಾಡ್ಬೇಕಿತ್ತು..’ ‘ಹೇಳೇ’ ‘ಅದೂ, ಲಾಕ್‌ಡೌನ್ ಮುಗ್ದಿದ್ದೇ ನನ್ನ ಫ್ರೆಂಡ್ ಬಂದಿದ್ರು ಮೀಟ್ ಆಗಕ್ಕೆ. ಮನೇಲಿ ಗೊತ್ತಿಲ್ಲ ಯಾರ್ಗೂ ಹೇಳ್ಬೇಡಿ. ಫ್ರೆಂಡ್ ಮನೆಗೋಗ್ತಿನಿ ಅಂತ ಅವನ್ಜೊತೆ ತಿರುಗಾಡಿದೆ. ಪಿರಿಯಡ್ಸ್ ಮುಂದೋಯ್ತು ಅಂತ ನೋಡ್ಕೊಂಡೆ, ಪಾಸಿಟಿವ್ ಇದೆ..’ ‘ಓಹೋ, ಲವ್ ಮಾಡ್ತ, ತಿರುಗಾಡ್ತ, ಜುಂ ಅಂತ ಇರೋರು, ‘ಲೈಫಲ್ಲಿ ಎಲ್ಲ ಕೆಟ್ಟದೇ ತುಂಬಿದೆಯ?’ ಅಂತ ಕೇಳ್ತಾರಲ್ಲ ಇನಿ? ಕೂಡಲೇ ಬಾ…’ * ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 29 ; ಮುದುಕವಿರೋಧಿ ಡೌಟಮ್ಮನೂ ಮತ್ತವಳ ವಿಚಿತ್ರಶಾಸ್ತ್ರವು

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಈಚೀಚ್ಗೆ ನಮ್ಮುಡುಗ ಒನ್ನಮನಿ ಆಡ್ತಾನೆ ಕೊರಡಿನಂಗೆ ಮನಗಿ ಬೆಳಿಗ್ಗಿ ಎಂಟಾದ್ರೂ ಏಳತಿಲ್ಲ

Published On - 8:39 am, Mon, 28 June 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ