AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rains: ಮಳೆ ಅನಾಹುತಕ್ಕೆ ಕರ್ನಾಟಕದಲ್ಲಿ 8 ಮಂದಿ ಸಾವು, ಎತ್ತಿನಗಾಡಿ ಮುಗುಚಿಬಿದ್ದು ಇಬ್ಬರು ಮಕ್ಕಳ ಸಾವು

ಕರ್ನಾಟಕ ಮಳೆ: ಕರ್ನಾಟಕದ ಉದ್ದಗಲಕ್ಕೂ ಮುಂಗಾರಿನ ಮೊರೆತ ಹೆಚ್ಚಾಗಿದೆ. ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಮಳೆ ಅಬ್ಬರಿಸಿದರೆ, ಹಲವೆಡೆ ಮಳೆ ಸಂಬಂಧಿತ ಅವಘಡಗಳಿಂದ 8 ಮಂದಿ ಪ್ರಾಣ ಬಿಟ್ಟಿದ್ದಾರೆ. ಮಳೆಯಿಂದ ಯಾವ ಜಿಲ್ಲೆಯಲ್ಲಿ ಏನು ಅನಾಹುತವಾಯಿತು? ಎಲ್ಲೆಲ್ಲಿ ಪ್ರವಾಹ ಪರಿಸ್ಥತಿ ಉಂಟಾಯಿತು ಎಂಬಿತ್ಯಾದಿ ವಿವರಗಳು ಇಲ್ಲಿವೆ.

Karnataka Rains: ಮಳೆ ಅನಾಹುತಕ್ಕೆ ಕರ್ನಾಟಕದಲ್ಲಿ 8 ಮಂದಿ ಸಾವು, ಎತ್ತಿನಗಾಡಿ ಮುಗುಚಿಬಿದ್ದು ಇಬ್ಬರು ಮಕ್ಕಳ ಸಾವು
ಮಳೆ ಅನಾಹುತಕ್ಕೆ ಕರ್ನಾಟಕದಲ್ಲಿ ಒಂದೇ ದಿನ 8 ಮಂದಿ ಸಾವು
Ganapathi Sharma
|

Updated on: May 28, 2025 | 6:52 AM

Share

ಬೆಂಗಳೂರು, ಮೇ 28: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ (Monsoon Rain) ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಮಳೆ ಸಂಬಂಧಿತ ಅವಘಡಗಳು ಹಲವರನ್ನು ಬಲಿ ಪಡೆದಿವೆ. ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 8 ಮಂದಿ ಮೃತಪಟ್ಟಿದ್ದಾರೆ. ಬೆಳಗಾವಿ (Belagavi) ಜಿಲ್ಲೆ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದ ಗಣೇಶ್ ಕಾಂಬಳೆ ಎಂಬ 9 ವರ್ಷದ ಬಾಲಕ ಹಾಗೂ ದೀಪಕ್ ಕಾಂಬಳೆ ಎಂಬ 11 ವರ್ಷದ ಬಾಲಕ ಎತ್ತಿನಗಾಡಿಯಲ್ಲಿ ತೆರಳುತ್ತಿದ್ದರು. ನಿರಂತರ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದಲ್ಲಿ ದಾರಿ ಕಾಣದೇ ಎತ್ತಿನ ಬಂಡಿ ಮಗುಚಿಬಿದ್ದಿದೆ. ಪರಿಣಾಮವಾಗಿ ಮಕ್ಕಳಿಬ್ಬರು ಮೃತಪಟ್ಟಿದ್ದು, ಒಂದು ಎತ್ತು ಕೂಡ ಸಾವನ್ನಪ್ಪಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಹಾವೇರಿ ಜಿಲ್ಲೆಯಲ್ಲೇ ಮೂವರು ಸಾವು

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಶಾಂತಮ್ಮ ತಳವಾರ ಎಂಬವರು ಮೃತಪಟ್ಟಿದ್ದಾರೆ . ಕಂದಾಯ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಬ್ಯಾಡಗಿ ತಾಲೂಕಿನ ಶಿಡೇನೂರು ಬಳಿ ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ವಿದ್ಯುತ್‌ ಸ್ಪರ್ಶದಿಂದ ಜಮೀನಿನಲ್ಲಿದ್ದ ರೈತ ಬಾಬುಲಾಲ್ ಬ್ಯಾಡಗಿ ಅಸುನೀಗಿದ್ದಾರೆ. ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಶಶಾಂಕಗೌಡ ಮುದ್ದಿನಗೌಡ ಎಂಬ ಬಾಲಕ ಇಹಲೋಕ ತ್ಯಜಿಸಿದ್ದಾನೆ. ಪಂಪ್‌ಸೆಟ್‌ ಮೋಟರ್ ಆನ್‌ ಮಾಡಲು ಹೋದಾಗ ದುರಂತ ಸಂಭವಿಸಿದೆ.

ಇತ್ತ ದೊಡ್ಡಬಳ್ಳಾಪುರ ತಾಲೂಕಿನ ಕಂಗಳಾಪುರದಲ್ಲಿ ಟ್ರಾನ್ಸ್​ಫಾರ್ಮರ್ ರಿಪೇರಿ ಮಾಡುವಾಗ ಕರೆಂಟ್ ಶಾಕ್​ ಹೊಡೆದು ರಂಗಪ್ಪ ಎಂಬವರು ಸಾವಿಗೀಡಾಗಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ಮನೆ ಬಳಿ ಕೆಲಸ ಮಾಡುತ್ತಿದ್ದಾಗ ಮರದ ಕೊಂಬೆ ಬಿದ್ದು ವಿಷ್ಣು ಬೆಳ್ಯಪ್ಪ ಎಂಬವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ
Image
ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಜೂನ್ 2ರವರೆಗೆ ಮಳೆಯ ಅಬ್ಬರ
Image
ಬೆಳಗಾವಿ: ಹಳ್ಳದಲ್ಲಿ ಎತ್ತಿನ ಗಾಡಿ ಮಗುಚಿ ಬಿದ್ದು ಇಬ್ಬರು ಮಕ್ಕಳು ಸಾವು
Image
ಭಾರಿ ಮಳೆಯಿಂದ ಕರ್ನಾಟಕದ ಈ ಎರಡು ಕಡೆ ಅರಣ್ಯ ಸಫಾರಿ ರದ್ದು
Image
ಅವೈಜ್ಞಾನಿಕವಾಗಿ ಸವಾರರನ್ನು ತಡೆಯಬೇಡಿ: ಪೊಲೀಸರಿಗೆ ಪರಮೇಶ್ವರ್ ಎಚ್ಚರಿಕೆ

 ಶಿವನಸಮುದ್ರ: ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ?

ಮಳೆ ಹೆಚ್ಚಾಗುತ್ತಿದ್ದಂತೆಯೇ ನದಿಗಳ ಅಬ್ಬರ ಕೂಡಾ ಹೆಚ್ಚಾಗಿದೆ. ಈ ಮಧ್ಯೆ, ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ನಾಲ್ವರ ಪೈಕಿ ಓರ್ವ ವಿದ್ಯಾರ್ಥಿ ನಾಪತ್ತೆ ಆಗಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ. ಬೆಂಗಳೂರಿನ ಖಾಸಗಿ ಕಾಲೇಜಿನ 7 ವಿದ್ಯಾರ್ಥಿಗಳು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರಕ್ಕೆ ತೆರಳಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಈಜಲು ಇಳಿದು ಪರದಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೂವರನ್ನು ರಕ್ಷಿಸಿದ್ದಾರೆ. ಪ್ರಫುಲ್ಲಾ, ತುಷಾರಾ, ಪ್ರಮೋದ್ ಎಂಬವರನ್ನು ರಕ್ಷಣೆ ಮಾಡಲಾಗಿದೆ. ನೀರಿನ ಸೆಳೆತಕ್ಕೆ ಸಿಲುಕಿ ನಂದಕುಮಾರ್ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.

ಸಿಡಿಲಿನ ಹೊಡೆತಕ್ಕೆ 80 ಕ್ಕೂ ಹೆಚ್ಚು ಕುರಿಗಳ ಸಾವು

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ತಡೋಳಾ ಗ್ರಾಮದಲ್ಲಿ ಸಿಡಿಲು ಬಡಿದು 7 ಕುರಿಗಳು ಮೃತಪಟ್ಟಿವೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಜೀನಿಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ 80ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ. ಜೀನಿಹಳ್ಳಿ ಗ್ರಾಮದ ಮಹೇಶಪ್ಪ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು, ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಜೂನ್ 2ರವರೆಗೆ ಮಳೆಯ ಅಬ್ಬರ

ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಕಾಲಿಟ್ಟಿರುವ ಮುಂಗಾರು ಮಳೆ ಒಂದೆಡೆ ರೈತರಿಗೆ ಸಂತಸ ತಂದಿದ್ದರೆ, ಮತ್ತೊಂದೆಡೆ ಹಲವು ಅವಘಡಗಳಿಂದ ಸಾವು-ನೋವು ಹೆಚ್ಚಾಗಿರುವುದು ಬೇಸರಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ