ಪ್ರವಾಸಿಗರಿಗಾಗಿ ಹೊನ್ನಾವರ-ಗೇರಸೊಪ್ಪಾ ಜಲಯಾನ ಯೋಜನೆ; ಇತಿಹಾಸದ ಕಾಲಗರ್ಭದಿಂದ ಇಲ್ಲಿಯವರೆಗೆ..

Honnavar-Gerusoppa: ಸ್ವಾತಂತ್ರ್ಯದ ನಂತರ ಬೆಂಗಳೂರು - ಹೊನ್ನಾವರ ರಾಜ್ಯ ಹೆದ್ದಾರಿ ಎಂದು ಪರಿಗಣಿಸಲ್ಪಟ್ಟು ಗೇರಸೊಪ್ಪಾದಿಂದ ಹೊನ್ನಾವರದವರೆಗೆ ಹೊಸ ರಸ್ತೆ ತಯಾರಾಯಿತು. ಅಲ್ಲಿಯವರೆಗೂ ಶರಾವತಿ ನದಿಯಲ್ಲಿ ನಿಯಮಿತವಾದ ಲಾಂಚ್ ಜಲಸಾರಿಗೆ ವ್ಯವಸ್ಥೆ ಇತ್ತು. ನಾನು ಚಿಕ್ಕವನಿದ್ದಾಗ ಒಮ್ಮೆ ಈ ಲಾಂಚ್​ನಲ್ಲಿ ಸಂಚರಿಸಿದ ನೆನಪು ಮಸುಕು ಮಸುಕಾಗಿ ಇದೆ ಕೂಡ : ಅಶೋಕ್ ಹೆಗ್ಡೆ ಮಾವಿನಗುಂಡಿ

ಪ್ರವಾಸಿಗರಿಗಾಗಿ ಹೊನ್ನಾವರ-ಗೇರಸೊಪ್ಪಾ ಜಲಯಾನ ಯೋಜನೆ; ಇತಿಹಾಸದ ಕಾಲಗರ್ಭದಿಂದ ಇಲ್ಲಿಯವರೆಗೆ..
ಜೋಗ ಜಲಪಾತ
Follow us
Guruganesh Bhat
| Updated By: guruganesh bhat

Updated on:Jun 27, 2021 | 4:29 PM

ವಿಶ್ವವಿಖ್ಯಾತ ಜೋಗ ಜಲಪಾತ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಜಲಪಾತವನ್ನು ಪ್ರವಾಸಿಗರು ಕಣ್ತುಂಬಿಕೊಂಡಂತೆ ಶರಾವತಿ ನದಿಯಲ್ಲಿ ಜಲಯಾನಕ್ಕೂ ಅವಕಾಶ ಕಲ್ಪಿಸಬೇಕು ಎಂಬ ದೃಷ್ಟಿಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ರಾಜ್ಯದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್ ಅವರು ಹೊನ್ನಾವರ – ಗೇರಸೊಪ್ಪಾ ನಡುವೆ ಶರಾವತಿ ನದಿಯಲ್ಲಿ ಜಲಯಾನ ಪ್ರವಾಸೋದ್ಯಮ ಕೈಗೊಳ್ಳುವ ಕುರಿತು ಘೋಷಿಸಿದ್ದಾರೆ. ಈ ಯೋಜನೆಯ ಸಾಧಕಗಳೇನು ಬಾಧಕಗಳೇನು? ಈ ಯೋಜನೆ ಬಗ್ಗೆ ಸ್ಥಳೀಯರ ಅಭಿಪ್ರಾಯವೇನು ಎಂಬುದನ್ನು ತೆರೆದಿಡಲು ಟಿವಿ9 ಕನ್ನಡ ಡಿಜಿಟಲ್ ಮುಂದಾಗುತ್ತಿದೆ.  ಪ್ರವಾಸಿಗರಿಗೆ ಚಿರಪರಿಚಿತವೇ ಆದ ಜೋಗ ಜಲಪಾತದ ಸಮೀಪದ ‘ಮಾವಿನಗುಂಡಿ’ಯ ಕೃಷಿಕರೂ, ಲೇಖಕರೂ ಪರಿಸರ-ಪ್ರವಾಸೋದ್ಯಮಗಳಲ್ಲಿ ತೀವ್ರ ಆಸಕ್ತರೂ ಆದ ಅಶೋಕ್ ಹೆಗ್ಡೆ ಅವರು ಪ್ರಸ್ತಾಪಿತ ಯೋಜನೆಯ ಬಗ್ಗೆ ಅಮೂಲಾಗ್ರವಾಗಿ ಬರೆದಿದ್ದಾರೆ. ಜತೆಗೆ ಟಿವಿ9 ಕನ್ನಡ ಡಿಜಿಟಲ್​ ಓದುಗರಿಗಾಗಿ ಇತಿಹಾಸದ ದಾರಿಯಲ್ಲಿನ ಹೊನ್ನಾವರ-ಗೇರಸೊಪ್ಪಾ ಜಲಮಾರ್ಗದ ಪಯಣವನ್ನೂ ತೆರೆದಿಟ್ಟಿದ್ದಾರೆ.  ಈ ಕುತೂಹಲ ಓದು ನಿಮಗಾಗಿ..

ಸ್ವಾಗತಿಸಲೇಬೇಕಾದ ಸರ್ಕಾರದ ಈ ಯೋಜನೆಯ ಪೂರ್ಣ ವಿವರಗಳು ನನಗೆ ಲಭ್ಯವಿಲ್ಲ. ಆದರೆ ನನಗೆ ಗೊತ್ತಿರುವಷ್ಟು ಹಿನ್ನೆಲೆ, ಸ್ಥಳೀಯ ಸ್ಥಿತಿಗತಿ ಮಾಹಿತಿ ನೀಡುವ ಪ್ರಯತ್ನ ಮಾಡುತ್ತೇನೆ.

ಶರಾವತಿ ನದಿಯ ಜೋಗ ಜಲಪಾತದ ಮುಂದಿನ ಭಾಗದಲ್ಲಿ ಆಳವಾದ ಕಣಿವೆ ಪ್ರದೇಶ, ಜಲಾಶಯ, ಟೇಲ್​ರೇಸ್ ಆಣೆಕಟ್ಟು ಇದೆ. ನಂತರ ನದಿ ಎಡಬಲದಲ್ಲಿ ಜನವಸತಿ, ಜಲಸಂಚಾರ ಯೋಗ್ಯ ನದಿ ಪಾತ್ರ. ಐತಿಹಾಸಿಕ ಹೆಸರುವಾಸಿ ಗೇರಸೊಪ್ಪಾ ಈ ಭಾಗದ ಆರಂಭ ಸ್ಥಳ. ನದಿ ಸಮುದ್ರ ಸೇರುವುದು ಅರಬ್ಬಿ ಸಮುದ್ರದ ಅಂಚಿನಲ್ಲಿರುವ ಹೊನ್ನಾವರದಲ್ಲಿ. ಹೊನ್ನಾವರದಿಂದ ಪೂರ್ವಕ್ಕೆ ಸುಮಾರು ಮೂವತ್ತು ಕಿಮೀ ಒಳನಾಡಲ್ಲಿರುವ ಗೇರಸೊಪ್ಪಾ ಕರಾವಳಿ ಭಾಗವೆಂದೇ ಪರಿಗಣಿಸುವ ಸ್ಥಳ. ಗೇರಸೊಪ್ಪಾ ಐತಿಹಾಸಿಕವಾಗಿ ಕಾಳುಮೆಣಸಿನ ರಾಣಿ ಎಂದು ಪ್ರಸಿದ್ಧಿಪಡೆದ ಸಾಳ್ವ ವಂಶದ ರಾಣಿ ಚನ್ನಭೈರಾದೇವಿಯ ರಾಜಧಾನಿ. ಆಗ ವಾಣಿಜ್ಯ ಕೇಂದ್ರ ಕೂಡ ಆಗಿತ್ತು. 1965 ರ ಸುಮಾರಿಗೆ ಹೊನ್ನಾವರ – ಗೇರಸೊಪ್ಪಾ ರಸ್ತೆ ನಿರ್ಮಾಣ ಆಗುವವರೆಗೆ ಸಂಚಾರ ವ್ಯವಸ್ಥೆ ನದಿಯಲ್ಲಿ ಜಲಯಾನವೇ ಆಗಿತ್ತು. ಗೇರಸೊಪ್ಪಾದಿಂದ ಪೂರ್ವಕ್ಕೆ ಪಶ್ಚಿಮ ಘಟ್ಟದ ದಟ್ಟ ಅರಣ್ಯ, ಅರಣ್ಯದಲ್ಲಿ ಮಾವಿನಗುಂಡಿ ದಾಟಿ ಮಲೆನಾಡಿನ ಭಾಗಕ್ಕೆ ರಸ್ತೆ ಸಂಪರ್ಕ. ಇದು 1965 ರ ಪೂರ್ವದ ಪರಿಸ್ಥಿತಿ.

ಸ್ವಾತಂತ್ರ್ಯದ ನಂತರ ಬೆಂಗಳೂರು – ಹೊನ್ನಾವರ ರಾಜ್ಯ ಹೆದ್ದಾರಿ ಎಂದು ಪರಿಗಣಿಸಲ್ಪಟ್ಟು ಗೇರಸೊಪ್ಪಾದಿಂದ ಹೊನ್ನಾವರದವರೆಗೆ ಹೊಸ ರಸ್ತೆ ತಯಾರಾಯಿತು. ಅಲ್ಲಿಯವರೆಗೂ ಶರಾವತಿ ನದಿಯಲ್ಲಿ ನಿಯಮಿತವಾದ ಲಾಂಚ್ ಜಲಸಾರಿಗೆ ವ್ಯವಸ್ಥೆ ಇತ್ತು. ನಾನು ಚಿಕ್ಕವನಿದ್ದಾಗ ಒಮ್ಮೆ ಈ ಲಾಂಚ್​ನಲ್ಲಿ ಸಂಚರಿಸಿದ ನೆನಪು ಮಸುಕು ಮಸುಕಾಗಿ ಇದೆ ಕೂಡ. ಹೊನ್ನಾವರ – ಗೇರಸೊಪ್ಪಾ ರಸ್ತೆ ನಿರ್ಮಾಣ ಆಗಿದ್ದೇ ತಡ, ಈ ಮಾರ್ಗ ಅತ್ಯಂತ ಜನಾನುಕೂಲಿಯಾಗಿ ರಸ್ತೆಯ ಇಕ್ಕೆಲಗಳಲ್ಲಿ ಜನವಸತಿ, ಹೊಸ ಊರುಗಳು, ಇದ್ದ ಊರುಗಳ ಅಭಿವೃದ್ಧಿ, ಭಾರೀ ಬದಲಾವಣೆ ಕಂಡುಬಂದಿತು. ನದಿಯಲ್ಲಿ ಲಾಂಚ್ ಸಾರಿಗೆ ಸ್ಥಗಿತವಾಯಿತು. ಜಲಯಾನ ಇತಿಹಾಸ ಸೇರಿತು.

Honnavara Talaguppa

ಪ್ರಾಸ್ತಾವಿತ ಯೋಜನೆಯ ಜಲಮಾರ್ಗ

1950 ರ ದಶಕದಲ್ಲಿ ಇದೇ ಶರಾವತಿ ನದಿಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸಂಪೂರ್ಣ ಬಳಕೆಯ ಯೋಜನೆ ಸಿದ್ಧವಾಗಿ 1965 ರ ವೇಳೆಗೆ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗಿ ಬ್ರಹತ್ ಶರಾವತಿ ವಿದ್ಯುದಾಗಾರ ಪ್ರಾರಂಭವಾಯಿತು. ಈ ಸ್ಥಾವರದ ಎಲ್ಲ ಹತ್ತು ಘಟಕಗಳು 1970 ರ ದಶಕದ ಆದಿಯಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದವು. ಅದರಿಂದ ಶರಾವತಿ ನದಿಯ ಕೆಳಭಾಗದಲ್ಲಿ ಬೇಸಿಗೆಯಲ್ಲಿ ಉತ್ತಮ ಹರಿವು (ಸುಮಾರು 5000 ಕ್ಯೂಸೆಕ್ಸ್) ಇರುವಂತಾಯಿತು. ಈ ಕಾಲಮಾನದ ಪೂರ್ವದಲ್ಲಿ ಅರಬ್ಬಿ ಸಮುದ್ರದ ಉಪ್ಪು ನೀರು ಬೇಸಿಗೆಯಲ್ಲಿ ನದಿಯ ಹರಿವು ಕಡಿಮೆ ಇರುತ್ತಿದ್ದರಿಂದ ಗೇರಸೊಪ್ಪಾವರೆಗೂ ಭರತ ( High tides) ದ ಸಮಯದಲ್ಲಿ ಒಳನುಗ್ಗುತ್ತಿತ್ತು. ಲಿಂಗನಮಕ್ಕಿ ಜಲಾಶಯದಲ್ಲಿ ಮಳೆಗಾಲದ ನೀರಿನ ಸಂಗ್ರಹ ವರ್ಷವಿಡೀ ವಿದ್ಯುತ್ ಉತ್ಪಾದನೆಗೆ ನಿಯಮಿತ ಪ್ರಮಾಣದಲ್ಲಿ ಬಳಸಿ ನದಿಗೇ ಪುನಃ ಹರಿಸುವದರಿಂದ ಬೇಸಿಗೆಯಲ್ಲಿ ಸಿಹಿ ನೀರು ಗೇರಸೊಪ್ಪಾ ದಿಂದ ಮುಂದಿನ ನದಿ ಭಾಗದಲ್ಲಿ ಹರಿಯತೊಡಗಿ ನದಿ ಮಗ್ಗಲಿನ ಕ್ರಶಿ, ಜನಜೀವನಕ್ಕೆ ಅತ್ಯಂತ ಉಪಯುಕ್ತವಾಗಿ ಪರಿಣಮಿಸಿತು. ಇಡೀ ಭಾಗದ ಸುಧಾರಣೆ, ಅಭಿವೃದ್ಧಿಯ ಮಹಾದ್ವಾರ ತೆರೆದಂತಾಯಿತು.

ಈಗ ಇಪ್ಪತ್ತೊಂದನೇ ಶತಮಾನಕ್ಕೆ ಬರೋಣ. ಹೊಸ ಸಹಸ್ರಮಾನದ ಆರಂಭದಲ್ಲೇ ಹೊನ್ನಾವರ – ತುಮಕೂರು (ಬೆಂಗಳೂರು) ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿತು. ಒಟ್ಟಾರೆ ರಾಷ್ಟ್ರ ಕಂಡ ಬದಲಾವಣೆ, ಅಭಿವೃದ್ಧಿಗಳು ಈ ಭಾಗದಲ್ಲೂ ತಪ್ಪಲಿಲ್ಲ. ಕೇಂದ್ರದಲ್ಲಿ ಸಚಿವರಾಗಿದ್ದ ನಿತಿನ್ ಗಡ್ಕರಿಯವರು ಸಾರಿಗೆ ಕ್ಷೇತ್ರದಲ್ಲಿ ಹೊಸಹೊಸ ಕಲ್ಪನೆಗಳನ್ನು ಪರಿಚಯಿಸುತ್ತ, ಹಲವು ವಿಶಿಷ್ಟ ಯೋಜನೆಗಳನ್ನು ಸಾದರುಪಡಿಸತೊಡಗಿದರು. ಅವುಗಳಲ್ಲಿ ಜಲಸಾರಿಗೆಗೂ ಮಹತ್ವ ನೀಡಿ ಪುನಃಶ್ಚೇತನಗೊಳಿಸುವದೂ ಒಂದು. ಅರ್ಧ ಶತಮಾನದ ಹಿಂದಿನ ವರೆಗೂ ಚಾಲ್ತಿಯಲ್ಲಿದ್ದ ಹೊನ್ನಾವರ – ಗೇರಸೊಪ್ಪಾ ಜಲಮಾರ್ಗ ಮತ್ತೆ ಬಳಕೆಯಲ್ಲಿ ತರುವ ಯೋಜನೆಯೂ ಅದರಲ್ಲಿ ಸೇರಿದ್ದು ಮೂರ್ನಾಲ್ಕು ವರ್ಷಗಳ ಹಿಂದೆಯೇ ಸುದ್ದಿಯಾಗಿ ನಮ್ಮನ್ನೆಲ್ಲ ಪುಳಕಿತಗೊಳಿಸಿತ್ತು.

Sharavathi Vally

ಶರಾವತಿ ಕಣಿವೆ

ಇದೀಗ ಪ್ರವಾಸೋದ್ಯಮ ಸಚಿವರ ಘೋಷಣೆ  ಹೊನ್ನಾವರ – ಗೇರಸೊಪ್ಪಾ ಜಲಮಾರ್ಗ ಪ್ರವಾಸಿ ಆಕರ್ಷಣೆಯಾಗಿ ಮಾರ್ಪಡಿಸುವ ಸುಂದರ ಚಿತ್ರಣದ ಕನಸು ಕಾಣುವಂತೆ ಮಾಡಿದೆ. ಥಟ್ಟನೆ ಇದು ಎಷ್ಟು ಸೂಕ್ತ.? ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ. ಆದರೆ, ಅನುಮಾನ ಬೇಡ. ಒಳ್ಳೆಯ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ ಈ ಪ್ರವಾಸ ಜಲಯಾನ ಅತ್ಯಂತ ಆಕರ್ಷಕವಾಗುವುದರಲ್ಲಿ ಸಂಶಯವಿಲ್ಲ.

ಶರಾವತಿಯ ಸುಮಾರು 30 ಕಿಲೋಮೀಟರ್ ನದಿಪಾತ್ರವು ಇಕ್ಕೆಲಗಳ ಹಚ್ಚ ಹಸಿರಿನ ತೆಂಗು ಕಂಗುಗಳ, ಗುಡ್ಡಬೆಟ್ಟಗಳ, ದಟ್ಟಣೆಯಿಲ್ಲದ ಜನವಸತಿಯ ಮನತಣಿಸುವ ದೃಶ್ಯ ವೈಭವವನ್ನು ಜಲಯಾತ್ರಿಕರಿಗೆ ತೆರೆದಿಡುತ್ತದೆ. ಕೇರಳದಲ್ಲಿ ಸಾಕಷ್ಟು ಹಿಂದಿನಿಂದ ಪ್ರವಾಸೋದ್ಯಮಕ್ಕೆ ತೆರೆದು ಬೆಳೆಸಿರುವ ಬ್ಯಾಕ್ ವಾಟರ್ ಟೂರಿಸಂಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದಂಥ ಅವಕಾಶ ಇಲ್ಲಿದೆ. ಇಲ್ಲಿರುವ ಸದವಕಾಶಗಳನ್ನು ಪ್ರವಾಸೋದ್ಯಮಕ್ಕೆ ಬಳಸುವ ಪ್ರಾಮಾಣಿಕ ಪ್ರಯತ್ನಗಳಿಗೆ ಯುವ ಉತ್ಸಾಹಿಗಳು ಸಜ್ಜಾಗಬೇಕಾಗಿದೆ. ಉಳಿದಂತೆ ಸ್ಥಳೀಯರು ಧನಾತ್ಮಕವಾಗಿ ಪ್ರೋತ್ಸಾಹ ನೀಡಿ ತಮ್ಮ ಸುಸಂಸ್ಕೃತಿಯನ್ನು ಕಾಪಾಡಿಕೊಂಡು ಈ ಭಾಗದ ಹಿರಿಮೆ ಸಾರಬೇಕು.

ಎಚ್ಚರಿಕೆ ವಹಿಸಬೇಕಾದ ಅಂಶಗಳು ಪ್ರವಾಸಿಗಳು, ಪ್ರವಾಸೋದ್ಯಮ ಎಂದರೇ ಲಂಗುಲಗಾಮಿಲ್ಲದ ಸ್ವೇಚ್ಛ ವರ್ತನೆ, ಪರಿಸರ, ಸಂಸ್ಕೃತಿ ನಾಶ, ವ್ಯವಹಾರಸ್ಥರ ಲಾಭಬಡುಕತನ, ಮೋಸ ಎಂಬ ಪರಿಸ್ಥಿತಿ ಅನೇಕ ಕಡೆ ಇದೆ. ಉತ್ತಮ ಅಭಿರುಚಿಯ ಪ್ರವಾಸಿಗರು ಬರಬೇಕು, ಅವರಿಗೆ ಯೋಗ್ಯ ಬೆಲೆ, ಗುಣಮಟ್ಟದ ಸೇವೆ ನೀಡಿ ನ್ಯಾಯವಾದ, ಲಾಭದಾಯಕ ಉದ್ಯೋಗ ಸ್ಥಳಿಕರಿಗೆ ಲಭ್ಯವಾಗಬೇಕು. ಹೀಗಾದರೆ ಇಂಥ ಯೋಜನೆ ಸಂಪೂರ್ಣ ಸಾರ್ಥಕ.

ASHOK HEGDE MAVINAGUNDI

ಲೇಖಕರಾದ ಅಶೋಕ್ ಹೆಗ್ಡೆ ಮಾವಿನಗುಂಡಿ

ಲೇಖಕರಾದ ಅಶೋಕ್ ಹೆಗ್ಡೆ ಮಾವಿನಗುಂಡಿ ಅವರು  ಜೋಗ ಜಲಪಾತದ ಸಮೀಪದ ಮಾವಿನಗುಂಡಿ ಊರಿನವರು. ಮೂಲತಃ ಕೃಷಿಕರೂ, ಸ್ವ ಉದ್ಯೋಗಿಗಳೂ ಆಗಿದ್ದ ಅವರು ಈಗ ನಿವೃತ್ತರು. ಜತೆಗೆ ಲೇಖಕರು ಪರಿಸರ-ಪ್ರವಾಸೋದ್ಯಮಗಳಲ್ಲಿ ತೀವ್ರ ಆಸಕ್ತರೂ ಆದ ಅವರು ಅಭಿವೃದ್ಧಿ ಸುಸಂಬದ್ಧ ಜೀವನ, ಜಗದ ಬದಲಾವಣೆಗಳಿಗೆ ತೊಡಗಿಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ.

ಇದನ್ನೂ ಓದಿ: ಮುಂದಿನ ವಾರದಿಂದಲೇ ಪ್ರವಾಸಿ ಸ್ಥಳಗಳು ಓಪನ್ : ಸಚಿವ ಸಿ ಪಿ ಯೋಗೇಶ್ವರ್ ಘೋಷಣೆ 

(What is Honnavar-Gerusoppa Waterway Project for Travelers near Jog Falls announced by Karnataka Tourism minister CP Yogeshwar here is the history and significance)

Published On - 4:21 pm, Sun, 27 June 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್