ಟೀಮ್ ಇಂಡಿಯಾ ಕೋಚ್ ಆಗಲು ನಾನು ರೆಡಿ: ಸೌರವ್ ಗಂಗೂಲಿ
Sourav Ganguly: ಟೀಮ್ ಇಂಡಿಯಾ 421 ಪಂದ್ಯಗಳನ್ನಾಡಿರುವ ಸೌರವ್ ಗಂಗೂಲಿ 485 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 29305 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 18433 ರನ್ ಕಲೆಹಾಕಿದ್ದಾರೆ. ಇದರ ನಡುವೆ 106 ಅರ್ಧಶತಕಗಳು ಹಾಗೂ 38 ಶತಕಗಳು ಮೂಡಿಬಂದಿವೆ. ಈ ಮೂಲಕ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಭಾರತ ತಂಡ ಕಂಡಂತಹ ಶ್ರೇಷ್ಠ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು. ಅದರಲ್ಲೂ ಮ್ಯಾಚ್ ಫಿಕ್ಸಿಂಗ್ನಿಂದ ಅಧಃಪತನದತ್ತ ಸಾಗಿದ್ದ ಭಾರತೀಯ ಕ್ರಿಕೆಟ್ಗೆ ಕಾಯಕಲ್ಪ ನೀಡಿದ್ದು ಕೂಡ ಇದೇ ಗಂಗೂಲಿ. 2000 ರಲ್ಲಿ ಕೇಳಿ ಬಂದ ಮ್ಯಾಚ್ ಫಿಕ್ಸಿಂಗ್ ಹಗರಣದ ನಡುವೆ ಹೊಸ ತಂಡ ಕಟ್ಟಿದ ದಾದಾ ಟೀಮ್ ಇಂಡಿಯಾವನ್ನು ಬಲಿಷ್ಠ ತಂಡಗಳ ಸಾಲಿನಲ್ಲಿ ತಂದು ನಿಲ್ಲಿಸಿದ್ದರು. ಇದರ ಪರಿಣಾಮ ಭಾರತ ತಂಡವು 2011 ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಂತಾಯಿತು.
ಆದರೆ ಯಾವುದೇ ವಿಶ್ವಕಪ್ ಗೆಲ್ಲದೇ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿರುವ ಸೌರವ್ ಗಂಗೂಲಿ, ಆ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಕಾಣಿಸಿಕೊಂಡರು. ಈ ವೇಳೆ ತೆಗೆದುಕೊಂಡ ಕೆಲ ಪ್ರಮುಖ ನಿರ್ಧಾರಗಳಿಂದ ಭಾರತ ತಂಡವು 2024 ರಲ್ಲಿ ಟಿ20 ವಿಶ್ವಕಪ್ ಗೆಲ್ಲುವಂತಾಯಿತು ಎಂದರೆ ತಪ್ಪಾಗಲಾರದು. ಇದೀಗ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕರಾಗಿರುವ ದಾದಾ ಮುಂದೊಂದು ದಿನ ಟೀಮ್ ಇಂಡಿಯಾದ ಕೋಚ್ ಆಗುವ ವಿಶ್ವಾಸದಲ್ಲಿದ್ದಾರೆ.
ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದ ಸೌರವ್ ಗಂಗೂಲಿಗೆ, ಭಾರತದ ಮುಖ್ಯ ಕೋಚ್ ಆಗಿ ಕೆಲಸ ಮಾಡಲು ನೀವು ಎಂದಾದರೂ ಆಸಕ್ತಿ ಹೊಂದಿದ್ದೀರಾ ಎಂದು ಕೇಳಲಾಗಿತ್ತು. ನಾನು ಅದರ ಬಗ್ಗೆ ಎಂದಿಗೂ ಯೋಚಿಸಲಿಲ್ಲ. ಏಕೆಂದರೆ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ನಾನು ಆಡಳಿತಕ್ಕೆ ಹೋದೆ. ನಾನು ನನ್ನನ್ನು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಮತ್ತು ಬಿಸಿಸಿಐ ಅಧ್ಯಕ್ಷನನ್ನಾಗಿ ಮಾಡಿಕೊಂಡೆ. ಹೀಗಾಗಿ ನಾನು ಕೋಚ್ ಹುದ್ದೆ ಬಗ್ಗೆ ಯೋಚಿಸಿರಲಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಆದರೆ, ಭವಿಷ್ಯದಲ್ಲಿ ಏನಾಗುತ್ತದೆ ಎಂದು ಅವರು ಹೇಳಲು ಸಾಧ್ಯವಿಲ್ಲ. ಈಗ ನನಗೆ ಕೇವಲ 50 ವರ್ಷ. ಅವಕಾಶ ಬಂದರೆ, ನಾನು ಮುಖ್ಯ ಕೋಚ್ ಆಗಿ ಕೆಲಸ ಮಾಡಲು ಮುಕ್ತನಾಗಿದ್ದೇನೆ. ಅಂತಹದೊಂದು ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಾನು ಕೋಚ್ ಹುದ್ದೆಯನ್ನು ಅಲಂಕರಿಸಲು ಸಿದ್ಧನಿದ್ದೇನೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 15 ಸಿಕ್ಸ್: ಶರವೇಗದ ಸೆಂಚುರಿ ಸಿಡಿಸಿದ ಅಭಿಷೇಕ್
ಪ್ರಸ್ತುತ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಧಿಕಾರಾವಧಿ 2027 ರ ಏಕದಿನ ವಿಶ್ವಕಪ್ನೊಂದಿಗೆ ಮುಗಿಯಲಿದೆ. ಇದಾದ ಬಳಿಕ ಬಿಸಿಸಿಐ ಹೊಸ ಕೋಚ್ಗಾಗಿ ಅರ್ಜಿಯನ್ನು ಆಹ್ವಾನಿಸಲಿದ್ದಾರೆ. ಈ ವೇಳೆ ಸೌರವ್ ಗಂಗೂಲಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದರೂ ಅಚ್ಚರಿಪಡಬೇಕಿಲ್ಲ.
