ಮನೆ ಹಂಚಿಕೆಗೆ ಹಣ: ಆಡಿಯೋ ರಿಲೀಸ್ ಮಾಡಿದ್ದ ಬಿಆರ್ ಪಾಟೀಲ್ ಕ್ಷೇತ್ರದ ವಿಡಿಯೋ ವೈರಲ್
ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಗಂಭೀರ ಆರೋಪ ಮಾಡಿದ್ದರು. ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಂಗಾಪುರ ಗ್ರಾಮದಲ್ಲಿ ಮನೆ ಹಂಚಿಕೆ ಸಂಬಂಧ ನಡೆದ ಹಣಕಾಸಿನ ವ್ಯವಹಾರದ ವಿಡಿಯೋವೊಂದು ವೈರಲ್ ಆಗಿದೆ.
ಕಲಬುರಗಿ, ಜೂನ್ 22: ಬಡವರಿಗೆ ಮನೆ ಬೇಕು ಅಂದರೆ ವಸತಿ ಇಲಾಖೆ ಅಧಿಕಾರಿಗಳಿಗೆ ಹಣ ಕೊಡಲೇಬೇಕು ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ (BR Patil) ಬಾಂಬ್ ಸಿಡಿಸಿದ್ದರು. ಇದರ ಬೆನ್ನಲ್ಲೇ ಟಿವಿ9 ರಿಯಾಲಿಟಿ ಚೆಕ್ ಮಾಡಿದಾಗ ಅಫಜಲಪುರ ಕ್ಷೇತ್ರದಲ್ಲಿ ಹಣ ಕೊಡದಿದಕ್ಕೆ ಮನೆಗಳ ಸ್ಥಳಾಂತರ ಮಾಡಿರುವುದು ಬೆಳಕಿಗೆ ಬಂದಿತ್ತು. ಇದೀಗ ಇದೇ ರೀತಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರ (Aland Assembly constituency) ವ್ಯಾಪ್ತಿಯ ಗ್ರಾಮದಲ್ಲಿ ಕೂಡ ರಿಯಾಲಿಟಿ ಚೆಕ್ ಮಾಡಿದ್ದು, ಮತ್ತೊಂದು ಸಾಕ್ಷಿ ಲಭ್ಯವಾಗಿದೆ.
ಹಣ ಕೊಟ್ಟರಷ್ಟೇ ಮನೆ ಅಂತಾ ಆರೋಪಿಸಿದ್ದ ಬಿ.ಆರ್.ಪಾಟೀಲ್, ಕೆಲ ಗ್ರಾಮ ಪಂಚಾಯಿತಿ ಹೆಸರು ಉಲ್ಲೇಖ ಮಾಡಿದ್ದರು. ಅದರಲ್ಲಿ ಆಳಂದ ವಿಧಾನಸಭಾ ಕ್ಷೇತ್ರ ಕೂಡ ಒಂದು. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ದಂಗಾಪುರ ಗ್ರಾಮ ಪಂಚಾಯಿತಿನಲ್ಲಿ 200 ಮನೆ ಹಂಚಿಕೆ ಸಂಬಂಧ ನಡೆದ ಹಣಕಾಸಿನ ವ್ಯವಹಾರದ ವಿಡಿಯೋ ಸಾಕ್ಷಿ ಲಭ್ಯವಾಗಿದೆ.
ಇದನ್ನೂ ಓದಿ: ಲಂಚದ ಆರೋಪ ಸಮರ್ಥಿಸಿದ ಬಿಆರ್ ಪಾಟೀಲ್: ‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಅಕ್ರಮದ ರಹಸ್ಯ
ಇನ್ನು ಭಟ್ಟರಕಿ ಗ್ರಾಮದ ಯುವಕ 10 ಸಾವಿರ ರೂ ಹಣ ಕೊಟ್ಟಿದ್ದಾಗಿ ಹೇಳಿಕೆ ನೀಡಿದ್ದು, ಹೆಸರಿಗೆ ಗ್ರಾಮ ಸಭೆ ಮಾಡಿ ದುಡ್ಡು ಕೊಟ್ಟವರಿಗೆ ಮನೆ ಕೊಡುತ್ತಿದ್ದಾರೆ. ಹಣ ಪಡೆದು ಲಿಸ್ಟ್ ರೆಡಿ ಮಾಡಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಮೂಲಕ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಮನೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಅಫಜಲಪುರ ಕ್ಷೇತ್ರದಲ್ಲಿಯೂ ಸಹ ವಸತಿ ಇಲಾಖೆಯಡಿ ಗೋಲ್ ಮಾಲ್
ಆಳಂದ ಕ್ಷೇತ್ರದ ಜೊತೆಗೆ ಅಫಜಲಪುರ ಕ್ಷೇತ್ರದಲ್ಲಿಯೂ ಸಹ ವಸತಿ ಇಲಾಖೆಯಡಿ ಗೋಲ್ ಮಾಲ್ ನಡೆದಿರುವ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಆರೋಪ ಮಾಡಿದ್ದರು, ಹೀಗಾಗಿ ಅಫಜಲಪುರ ಕ್ಷೇತ್ರದಲ್ಲಿ ನಿನ್ನೆ ಟಿವಿ9 ರಿಯಾಲಿಟಿ ಚೆಕ್ ಮಾಡಿದ್ದು, ಈ ವೇಳೆ ಫರಹತಬಾದ್ ಗ್ರಾಮ ಪಂಚಾಯತಿಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿರುವದು ಬಟಾಬಯಲಾಗಿತ್ತು.
ಇದನ್ನೂ ಓದಿ: ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ: ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ವೈರಲ್ ಆಡಿಯೋ
ಈ ಗ್ರಾಮದಲ್ಲಿ ಅರ್ಹ ಫಲಾನುಭವಿಗಳನ್ನ ಗುರುತಿಸಿ ರಾಜೀವ್ ಗಾಂಧಿ ಯೋಜನೆಡಿ 200 ವಸತಿ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಇನ್ನೂ ಮನೆ ಬೇಕು ಅಂದರೆ ಬಡ ಅರ್ಹ ಕುಟುಂಬದವರಿಂದ ಪ್ರತಿ ಮನೆಗೆ ಇಲ್ಲಿನ ಪಂಚಾಯತಿ ಕೆಲ ಸದಸ್ಯರು 20 ರಿಂದ 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ ಯಾವ ಫಲಾನುಭವಿಗಳು ಸಹ ಹಣ ಕೊಡದೆ ಇದ್ದಾಗ ಈ ಗ್ರಾಮಕ್ಕೆ ಮಂಜೂರಾದ ಮನೆಗಳನ್ನು ಶಾಸಕ ಎಂ.ವೈ.ಪಾಟೀಲ್ ಅವರ ಲೇಟರ್ ಹೆಡ್ ಬಳಸಿ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಇಲ್ಲಿನ ಬಡ ಫಲಾನುಭವಿಗಳು ಹಣ ನೀಡುತ್ತಿಲ್ಲ ಎನ್ನೋ ಕಾರಣಕ್ಕೆ ನಮ್ಮೂರಿಗೆ ಮಂಜೂರಾಗಿದ್ದ ಮನೆಗಳನ್ನೇ ಶಿಫ್ಟ್ ಮಾಡಿದ್ದಾರೆ ಅಂತ ಅಳಲು ತೊಡಿಕೊಳ್ಳುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







