ಲಂಚದ ಆರೋಪ ಸಮರ್ಥಿಸಿದ ಬಿಆರ್ ಪಾಟೀಲ್: ‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಅಕ್ರಮದ ರಹಸ್ಯ
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳ ಹಂಚಿಕೆಗೆ ಲಂಚ ಪಡೆದ ಬಗ್ಗೆ ಮಾಡಿರುವ ಆರೋಪವನ್ನು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿನ ಧ್ವನಿ ತಮ್ಮದೇ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಆರೋಪದ ಅಸಲಿ ವಿಚಾರ ತಿಳಿದುಕೊಳ್ಳಲು ‘ಟಿವಿ9’ ಗ್ರೌಂಡ್ ರಿಪೋರ್ಟ್ ಮಾಡಿದ್ದು, ವಾಸ್ತವ ಬಯಲಾಗಿದೆ. ವಿವರಗಳು ಇಲ್ಲಿವೆ.

ಬೆಂಗಳೂರು, ಜೂನ್ 21: ರಾಜೀವ್ ಗಾಂಧಿ ವಸತಿ ಯೋಜನೆ ಅಡಿ (Rajiv Gandhi Housing Scheme) ಮನೆಗಳ ಹಂಚಿಕೆಗೆ ಲಂಚ ಪಡೆಯಲಾಗಿದೆ ಎಂದು ಮಾಡಿರುವ ಆರೋಪವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕ, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಬಿಆರ್ ಪಾಟೀಲ್ (BR Patil) ಶನಿವಾರ ಸಮರ್ಥಿಸಿಕೊಂಡಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ನನ್ನದೇ, ಸತ್ಯವೇ ಹೇಳಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ, ಶಾಸಕ ಬಿ.ಆರ್.ಪಾಟೀಲ್‌ರ ಆರೋಪಗಳ ಹಿನ್ನೆಲೆಯಲ್ಲಿ ಅಸಲಿ ವಿಚಾರ ಏನು ಎಂದು ತಿಳಿದುಕೊಳ್ಳಲು ‘ಟಿವಿ9’ ಗ್ರೌಂಡ್ ರಿಪೋರ್ಟ್ ಮಾಡಿದೆ. ರಿಯಾಲಿಟಿ ಚೆಕ್ ನಡೆಸಿದೆ. ಇದೇ ವೇಳೆ, ಕಲಬುರಗಿ ಜಿಲ್ಲೆ ಅಫಜಲಪುರ ಕ್ಷೇತ್ರದ ಫರಹತಬಾದ್‌ನಲ್ಲಿ ಗ್ರಾಮಸ್ಥರು ಹಗರಣದ ಕಥೆ ಬಿಚ್ಚಿಟ್ಟಿದ್ದಾರೆ. ಇದರಿಂದ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಲಂಚಕೊಟ್ಟವರಿಗೆಷ್ಟೇ ಮನೆ ಹಂಚಿಕೆ ಎಂಬುದು ಬಟಾಬಯಲಾಗಿದೆ. ಈ ಗ್ರಾಮಕ್ಕೆ 200 ಮನೆಗಳು ಮಂಜೂರಾಗಿದ್ದವು. ಆದರೆ, ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಏಕಾಏಕಿ ಬೇರೆಕಡೆ ಶಿಫ್ಟ್ ಆಗಿವೆ ಎಂದು ಫರಹತಬಾದ್ ಗ್ರಾಮಸ್ಥರು ಆರೋಪಿಸಿದ್ದಾರೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ರ ಆಪ್ತ ಕಾರ್ಯದರ್ಶಿ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ಸಂಭಾಷಣೆ ವೇಳೆ, ಲಂಚ ಪಡೆದು ಮನೆ ವಿತರಿಸಲಾಗುತ್ತಿದೆ ಎಂದು ಬಿಆರ್ ಪಾಟೀಲ್ ನೇರವಾಗಿ ಆರೋಪಿಸಿದ್ದರು. ತಮ್ಮದೇ ಕ್ಷೇತ್ರದಲ್ಲಿ ಒಟ್ಟು 900 ಮನೆಗಳ ಹಂಚಿಕೆಗೆ ಲಂಚ ಪಡೆಯಲಾಗಿದೆ ಎಂದು ದೂರಿದ್ದರು. ಈ ವಿಚಾರವಾಗಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಬಿಆರ್ ಪಾಟೀಲ್, ತಮ್ಮ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ.
ಲಂಚ ಆರೋಪದ ಬಗ್ಗೆ ಬಿಆರ್ ಪಾಟೀಲ್ ಹೇಳಿದ್ದೇನು?
‘ಆಡಿಯೋದಲ್ಲಿನ ಧ್ವನಿ ನನ್ನದೇ. ನಾನು ಸತ್ಯವನ್ನೇ ಹೇಳಿದ್ದೇನೆ. ನಾವು ಜನಪರ ಆಡಳಿತ ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದು. 5-6 ಗ್ರಾಮ ಪಂಚಾಯಿತಿಗಳಲ್ಲಿ ದುಡ್ಡು ಕೊಟ್ಟು ಮನೆಗಳನ್ನು ತೆಗೆದುಕೊಂಡಿದ್ದಾರೆ. ನಾನು ಕೊಟ್ಟ ಪತ್ರಕ್ಕೆ ಮನೆಗಳು ಮಂಜೂರಾಗಿಲ್ಲ, 4 ಪತ್ರಗಳನ್ನು ಬರೆದಿದ್ದೆ. ನನ್ನ ಕ್ಷೇತ್ರಕ್ಕೆ ಮನೆಗಳು ಕೊಡಿ ಎಂದು ಪತ್ರ ಬರೆದರೂ ಕೊಟ್ಟಿರಲಿಲ್ಲ. ಗ್ರಾಮ ಪಂಚಾಯತಿ ಅಧ್ಯಕ್ಷರು ಮನೆಗಳನ್ನು ತಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕರೆದು ಮಾಹಿತಿ ಕೇಳಿದರೆ ಮಾಹಿತಿ ನೀಡುತ್ತೇನೆ’ ಎಂದು ಬಿಆರ್ ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ವರದಿ ಕೇಳಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ್, ನಾನು ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲ ಎಂದು ಉತ್ತರಿಸಿದ್ದಾರೆ. ಗ್ರಾಮಪಂಚಾಯ್ತಿ ಮಟ್ಟದಲ್ಲಿ ನಡೆದಿರುವ ಅಕ್ರಮ ಇದು ಎಂದಿದ್ದಾರೆ. ಲಂಚದ ವಿಚಾರ ತಮಗೆ ಗೊತ್ತೇ ಇಲ್ಲ ಎಂಬ ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿ, ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.
ಭ್ರಷ್ಟಾಚಾರದ ಮೊಟ್ಟೆ ಇಟ್ಟು ಮರಿಗಳನ್ನ ಬೆಳೆಸಿದ್ದು ಕಾಂಗ್ರೆಸ್: ಜೋಶಿ ಕಿಡಿ
ಬಿಆರ್ ಪಾಟೀಲ್ ಹೇಳಿಕೆ ಬಿಜೆಪಿಗೆ ಅಸ್ತ್ರವಾಗಿದೆ. ಬಾಗಲಕೋಟೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಭ್ರಷ್ಟಾಚಾರದ ಬಗ್ಗೆ ಶಾಸಕ ರಾಯರೆಡ್ಡಿ ಮೊದಲು ಹೇಳಿದ್ದರು. ಈಗ ಶಾಸಕ ಬಿ.ಆರ್.ಪಾಟೀಲ್ ಆಡಿಯೋ ಬಿಡುಗಡೆ ಆಗಿದೆ. ಭ್ರಷ್ಟಾಚಾರದ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸಿದ್ದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದೆಡೆ ಬಿಆರ್ ಪಾಟೀಲ್ ಆರೋಪವನ್ನು ಒಪ್ಪಲು ಸಚಿವರು ಸಿದ್ಧರಿಲ್ಲ. ಅವರ ಹೇಳಿಕೆಯನ್ನು ಖಂಡಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿ.ಆರ್.ಪಾಟೀಲ್ ಬಳಿ ಏನಾದರೂ ಮಾಹಿತಿ ಇದ್ದರೆ ಕೊಡಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರೆ, ಅಕ್ರಮ ಆಗಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಆಗುತ್ತದೆ ಎಂದು ಸಚಿವ ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಯಾರೇ ಶಾಮೀಲಾಗಿದ್ದರೂ ಕ್ರಮಕೈಗೊಳ್ಳುತ್ತೇವೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇದನ್ನೂ ಓದಿ: ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ: ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ವೈರಲ್ ಆಡಿಯೋ
ಬಡವರಿಗೆ ಸೂರು ಒದಗಿಸುವ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಬಟಾ ಬಯಲಾಗಿದೆ. ಸ್ವಪಕ್ಷದ ಶಾಸಕರೇ ಆರೋಪ ಮಾಡಿರುವುದು ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.