ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಬಲಾತ್ಕಾರದ ಕುರಿತು ಹೊಸ ಮಹಿಳಾಪರ ವ್ಯಾಖ್ಯಾನದ ಅವಶ್ಯಕತೆಯಿದೆ’ ಡಾ. ಕೆ. ಎಸ್. ವೈಶಾಲಿ

ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಬಲಾತ್ಕಾರದ ಕುರಿತು ಹೊಸ ಮಹಿಳಾಪರ ವ್ಯಾಖ್ಯಾನದ ಅವಶ್ಯಕತೆಯಿದೆ’ ಡಾ. ಕೆ. ಎಸ್. ವೈಶಾಲಿ
ಸ್ತ್ರೀವಾದಿ ಡಾ. ಕೆ. ಎಸ್. ವೈಶಾಲಿ

Sexual Terrorism : ‘ವಿಕೃತ ಲೈಂಗಿಕತೆ ಮತ್ತು ಹೆಣ್ಣಿನ ಶಾರೀರಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವುದು ಯಕಶ್ಚಿತ್ ವಿಷಯವೆಂದು ಗೇಲಿ ಮಾಡುವ, ಮಹಿಳಾ ವಿರೋಧಿ, ಹಿಂಸಾತ್ಮಕ ಪುರುಷ ಲೈಂಗಿಕತೆಯನ್ನು ಪ್ರಚೋದಿಸುವ, ಲಿಂಗ ಅಸಮಾನತೆಯು ಸ್ವಾಭಾವಿಕವಾದದ್ದೆಂದು ಪ್ರತಿಪಾದಿಸುವ, ಪುರುಷ ಪ್ರಧಾನ, ಲೈಂಗಿಕ ಭಯೋತ್ಪಾದನೆಯ ಮನಸ್ಥಿತಿಯನ್ನು ಹುಟ್ಟು ಹಾಕುತ್ತಿದೆ.’ ಡಾ. ಕೆ. ಎಸ್. ವೈಶಾಲಿ

ಶ್ರೀದೇವಿ ಕಳಸದ | Shridevi Kalasad

|

Dec 19, 2021 | 3:59 PM

Rape : ಗುರುವಾರ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್​ ಮುಖಂಡ ಕೆ.ಆರ್​. ರಮೇಶ್​ ಕುಮಾರ್​ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್​ ಕುಮಾರ್​, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ನಂತರ ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ. 

ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com

*

ಬೆಂಗಳೂರಿನಲ್ಲಿ ವಾಸವಾಗಿರುವ ಸ್ತ್ರೀವಾದಿ, ಉಪನ್ಯಾಸಕಿ ಡಾ. ಕೆ. ಎಸ್. ವೈಶಾಲಿ ಅವರ ಪ್ರತಿಕ್ರಿಯೆ.

*

“ಅತ್ಯಾಚಾರ ಆಗುವಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಎಂಜಾಯ್ ಮಾಡಿ ಬಿಡಬೇಕು” ಎನ್ನುವ ಅಸಭ್ಯ , ಅನಾಗರೀಕ, ಮೃಗೀಯ ಹೇಳಿಕೆಯನ್ನು ನೀಡಿದ ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್‌ಕುಮಾರ್‌ರವರ ಸಂವೇದನಾ ರಹಿತ, ಕಾಮುಕ ಪೈಶಾಚಿಕತೆಯನ್ನು ಬಿಂಬಿಸುವ ಹೇಳಿಕೆಗೆ ವ್ಯಾಪಕವಾದ ಖಂಡನೆ ವ್ಯಕ್ತವಾಗಿದೆ. ಇಂತಹ ಭಂಡ, ಪುರುಷಾಹಮಿಕೆಯ ಮಾತುಗಳನ್ನು ಅಷ್ಟೇ ಲಘುವಾಗಿ ಪರಿಗಣಿಸಿ, ವಿನೋದದ ನಗೆ ಬೀರಿರುವ ಸ್ಪೀಕರ್ ವಿಶ್ವೇಶ್ವರ ಕಾಗೇರಿಯವರ ವರ್ತನೆಯೂ ಅಷ್ಟೇ ಹೇಯವಾದದ್ದು ಎನ್ನುವುದಂತೂ ನಿರ್ವಿವಾದ. ಆದರೆ ಇಲ್ಲಿ ನಾವು ಅತ್ಯಂತ ಗಂಭೀರವಾಗಿ ಯೋಚಿಸಬೇಕಾದ ವಿಷಯವೊಂದಿದೆ. ಬಹುಶಃ ಇದನ್ನು ನಾವು ಒಂದು ನಾಗರಿಕ  ಸಮಾಜದ ಪುರುಷರೂ ಹಾಗೂ ಮಹಿಳೆಯರೆಲ್ಲರೂ ತಮ್ಮನ್ನು ತಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದೂ ಗುರುತಿಸಬಹುದೇನೋ!

ಅತ್ಯಾಚಾರದ ಬಗ್ಗೆ ಕುಹಕದ, ಲೇವಡಿಯ , ಕೀಳಭಿರುಚಿಯ ಹೇಳಿಕೆಗಳು , ಅದರಲ್ಲೂ ಮತ್ತೆ ಮತ್ತೆ ರಾಜಕೀಯ ನಾಯಕರು ಮತ್ತು ಮೇಲ್ವರ್ಗದ ಉನ್ನತ ಶ್ರೇಣಿಯ ಅಧಿಕಾರದ ಹುದ್ದೆಗಳನ್ನು ಹೊಂದಿದ ಪುರುಷರು, ಲಜ್ಜೆಗೇಡಿತನದಿಂದ ಅತ್ಯಾಚಾರದಂಥ ಘೋರವಾದ ಅಪರಾಧದ ಬಗ್ಗೆ ಇಂತಹ ಬೇಜವಾಬ್ದಾರಿಯ ಅಭಿಪ್ರಾಯಗಳನ್ನು ಅವ್ಯಾಹತವಾಗಿ ಪುನರುಚ್ಛರಿಸುವುದು ಏನನ್ನು ಬೊಟ್ಟು ಮಾಡಿ ತೋರಿಸುತ್ತಿದೆ? ಇಲ್ಲಿ ನನಗೆ ನಿರ್ಭಯಾಳ ಮೇಲೆ ನಡೆದ ಬರ್ಬರ ಸಾಮೂಹಿಕ ಅತ್ಯಾಚಾರದ ಸಂದರ್ಭದಲ್ಲಿ, ಅಷ್ಟೇ ಲಘುವಾಗಿ, ಉಡಾಫೆಯಿಂದ “ಯುವಕರು ಕೆಲವೊಮ್ಮೆ ಈ ರೀತಿಯ ಹುಡುಗಾಟಗಳನ್ನು ಮಾಡುತ್ತಾರೆ” ಎಂಬ ಬೆಚ್ಚಿ ಬೀಳಿಸುವ, ತಣ್ಣನೆಯ ಕ್ರೌರ್ಯದ ಹೇಳಿಕೆ ನೀಡಿದ ಮತ್ತೊಬ್ಬ ರಾಜಕೀಯ ನಾಯಕ ಮುಲಾಯಮ್ ಸಿಂಗ್ ಯಾದವ್ ನೆನಪಾಗುತ್ತಾರೆ. ಇವು ವಿಕೃತ ಲೈಂಗಿಕತೆ ಮತ್ತು ಹೆಣ್ಣಿನ ಶಾರೀರಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವುದು ಅತ್ಯಂತ ಯಕಶ್ಚಿತ್ ವಿಷಯವೆಂದು ಗೇಲಿ ಮಾಡುವ, ಮಹಿಳಾ ವಿರೋಧಿ, ಹಿಂಸಾತ್ಮಕ ಪುರುಷ ಲೈಂಗಿಕತೆಯನ್ನು ಪ್ರಚೋದಿಸುವ, ಲಿಂಗ ಅಸಮಾನತೆಯು ಸ್ವಾಭಾವಿಕವಾದದ್ದೆಂದು ಪ್ರತಿಪಾದಿಸುವ, ಪುರುಷ ಪ್ರಧಾನ, ಲೈಂಗಿಕ ಭಯೋತ್ಪಾದನೆಯ ಮನಸ್ಥಿತಿಯನ್ನು ಹುಟ್ಟು ಹಾಕುತ್ತಿದೆ.

ಈಗಾಗಲೇ ಲಿಂಗಾಧಾರಿತ ಅಸಮಾನತೆಯ ಕುರಿತಾದ ಆಘಾತಕಾರಿ ಅಂಕಿ-ಅಂಶಗಳು ನಮ್ಮ ಸಮಕಾಲೀನ ಭಾರತ ಉಪಖಂಡದಲ್ಲಿ ಮಹಿಳಾ ಸಬಲೀಕರಣದ ಕನಸು ಮರೀಚಿಕೆಯೇ ಆಗಿ ಉಳಿದುಬಿಡಬಹುದೆಂಬ ಭೀತಿಯನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸ್ತ್ರೀವಾದಿ ಚಿಂತನೆಗಳು ತಾತ್ವಿಕ, ಸಾಮಾಜಿಕ ಹಾಗೂ ಕಾನೂನಿನ ನೆಲೆಗಳಲ್ಲಿ ವ್ಯಾಪಕವಾಗಿ ಚರ್ಚೆಗೊಳಪಟ್ಟಿವೆ. ಅತ್ಯಾಚಾರ ವಿಕೃತಿಯಷ್ಟೇ ಅಲ್ಲ, ಅದು ನಮ್ಮ ಸಮಾಜದಲ್ಲಿ ಗಾಢವಾಗಿ ಬೇರೂರಿರುವ ಕ್ರಿಯೆ. ಸಮಾಜದಲ್ಲಿ ಮಹಿಳೆಯ ಅಸಮಾನತೆ ಹಾಗೂ ಶೋಷಣೆಯನ್ನು ರೂಢಿಗತಗೊಳಿಸುವ ವ್ಯವಸ್ಥೆ. ಸ್ತ್ರೀಯ ಸಮ್ಮತಿಯಿಲ್ಲದೇ ಬಲವಂತದಿಂದ ನಡೆಯುವ ಸಂಭೋಗವನ್ನು ಅತ್ಯಾಚಾರವೆಂದು ಪರಿಗಣಿಸಿದರೆ ಸಾಲದು, ನಮಗೆ ಬಲಾತ್ಕಾರದ ಕುರಿತಾಗಿ ಹೊಸದೊಂದು ಮಹಿಳಾಪರವಾದ ವ್ಯಾಖ್ಯಾನದ ಅವಶ್ಯಕತೆಯಿದೆ. ಎಂಬ ಕಟು ವಾಸ್ತವವನ್ನು ನಾವು ಗ್ರಹಿಸಬೇಕಾಗಿದೆ. ನಾವು ತಿಳಿದುಕೊಂಡಿರುವುದಕ್ಕಿಂತ ಗಣನೀಯ ಪ್ರಮಾಣದಲ್ಲಿ ಅತ್ಯಾಚಾರದ ಪ್ರಕರಣಗಳು ಜರುಗುತ್ತವೆ. ಅತ್ಯಾಚಾರವೆನ್ನುವುದು ಮಾನವ ಹಕ್ಕುಗಳ ಎಂಥಾ ಹೀನಾಯ ಉಲ್ಲಂಘನೆಯೆಂಬುದನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ಅದನ್ನು ಸಾಮಾಜಿಕ ಸಂದರ್ಭದಲ್ಲಿ ಒಂದು ವಿಶಿಷ್ಟ ಸಾಮಾಜಿಕ ಕ್ರಿಯೆಯಾಗಿ ವಿಶ್ಲೇಷಿಸಿದಾಗ ಮಾತ್ರ .

ಹಲವಾರು ದಶಕಗಳವರೆಗೂ ಅತ್ಯಾಚಾರ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನಿನ ವ್ಯಾಖ್ಯಾನ ಸಾಂಪ್ರದಾಯಿಕ, ಲಿಂಗ ಭೇದ-ಭಾವದ ದೃಷ್ಟಿಕೋನವನ್ನೇ ಅನುಮೋದಿಸುತ್ತಿತ್ತು. ಕಾನೂನು ಹಾಗೂ ಸಮಾಜದ ದೃಷ್ಟಿಯಲ್ಲಿ ಹೆಣ್ಣೊಬ್ಬಳ ಸ್ಥಾನ- ಮಾನ ಆಕೆಯ ಗಂಡನೊಂದಿಗೆ ತಳುಕು ಹಾಕಿಕೊಂಡ ವಿಷಯವಾಗಿತ್ತು . ಆಕೆ ಅವಿವಾಹಿತೆಯಾಗಿದ್ದರೆ ಅವಳ ತಂದೆ ಅಥವಾ ಸಹೋದರನ ಅಂತಸ್ತಿಗೆ ಸಂಬಂಧಿಸಿದ ವಿಷಯವಾಗಿತ್ತು. ಹೀಗೆ ಪುರುಷನೊಬ್ಬನ ಅಮಾನತ್ತಾಗಿದ್ದ ಮಹಿಳೆಯ ಅತ್ಯಾಚಾರ ಆಕೆಯ ಹಕ್ಕುಗಳ ಉಲ್ಲಂಘನೆಯಾಗುವುದಕ್ಕಿಂತ ಹೆಚ್ಚಾಗಿ, ನೇರವಾಗಿಯಲ್ಲದಿದ್ದರೂ, ಪರೋಕ್ಷವಾಗಿ ಪುರುಷನ ಹಕ್ಕುಗಳಿಗೆ ಚ್ಯುತಿ ತರುವಂಥ ಸಂಗತಿಯಾಗಿತ್ತು. ಈ ಮಾದರಿ ನಮಗೆ ಯುದ್ಧ– ಜನಾಂಗೀಯ ಘರ್ಷಣೆ, ಹಿಂಸೆಗಳ ಸಂದರ್ಭದಲ್ಲಿ ನಡೆಯುತ್ತಿದ್ದ ಅತ್ಯಾಚಾರಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. ವೈರಿ ಸಮುದಾಯದ ಮಹಿಳೆಯರು, ಅನ್ಯ ಧರ್ಮಿಯ ಮಹಿಳೆಯರನ್ನು ಕೋಮು ಗಲಭೆಗಳ ಸಮಯದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಗುರಿಪಡಿಸುವಿಕೆ ಇತ್ಯಾದಿ.

ಇಲ್ಲಿ ಕಂಡುಬರುವ ಅಂಶವೆಂದರೆ ಮಹಿಳೆಯರ ಮೇಲೆ ನಡೆಯುವ ಸಾಮೂಹಿಕ ಅತ್ಯಾಚಾರಗಳು ಅವರ ಸಮುದಾಯದ ಪುರುಷರ ವಿರುದ್ಧ ತೆಗೆದುಕೊಂಡ ಪ್ರತೀಕಾರವಾಗಿಬಿಡುವುದು. ಇದರ ಇನ್ನು ಹಲವು ಆಯಾಮಗಳನ್ನು ಗಮನಿಸಿದರೆ ಈ ಲಿಂಗ ತಾರತಮ್ಯದ ಹಿಂದಿರುವ ಹುನ್ನಾರಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅತ್ಯಾಚಾರವೆನ್ನುವುದು ಕೇವಲ ಗಂಡು ಮಾಡಬಹುದಾದ ಕ್ರಿಯೆ, ಹೆಣ್ಣು ಅಲ್ಲಿ ಬಲಿಪಶು ಮತ್ತು ಅತ್ಯಾಚಾರವೆನ್ನುವುದು ಒಬ್ಬ ಗಂಡು ತನ್ನ ಹೆಂಡತಿಯನ್ನು ಹೊರತುಪಡಿಸಿ ಬೇರೆ ಯಾವ ಹೆಣ್ಣಿನ ಮೇಲಾದರೂ ಎಸಗುವಂಥ ಅಪರಾಧ, ವೃತ್ತಿಯಿಂದ ವೇಶ್ಯೆಯಾದ ಮಹಿಳೆ ಅತ್ಯಾಚಾರಕ್ಕೊಳಗಾಗಲು ಸಾಧ್ಯವಿಲ್ಲವೆಂಬ ಸಾಂಪ್ರದಾಯಿಕ, ಲಿಂಗ ತಾರತಮ್ಯದ ದೃಷ್ಟಿಕೋನವೇ ಇಲ್ಲಿ ಕಂಡುಬರುತ್ತದೆ. ಇಂತಹ ಚೌಕಟ್ಟನಲ್ಲಿ ಅತ್ಯಾಚಾರವನ್ನು ಸಾಬೀತು ಮಾಡುವ ಹೊಣೆಯನ್ನು ಹೆಣ್ಣಿನ ಮೇಲೆ ಹೊರಿಸಲಾಗುತ್ತಿತ್ತು. ಆಕೆಯ ಚಾರಿತ್ರ್ಯದ ಬಗ್ಗೆ ಬಗ್ಗೆ ಪ್ರಶ್ನೆಗಳು ಸರ್ವೇ ಸಾಮಾನ್ಯವಾಗಿದ್ದವು, ಆದರೆ ಅತ್ಯಾಚಾರದ ಕುರಿತಾದ ವ್ಯಾಖ್ಯಾನಗಳು ಈಗ ಈ ಬಗೆಯ ಲಿಂಗ ತಾರತಮ್ಯದ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ಹೆಣ್ಣಿನ ಶಾರೀರಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಲೈಂಗಿಕ ದೌರ್ಜನ್ಯ ಮತ್ತು ಆಕ್ರಮಣಕಾರಿ ಲೈಂಗಿಕತೆಯನ್ನು ಕುರಿತಾಗಿವೆ.

ಈ ನಿಟ್ಟಿನಿಂದ ಗಮನಿಸಿದಾಗ ವೈವಾಹಿಕ ಸಂಬಂಧದ ಚೌಕಟ್ಟಿನಲ್ಲಿಯೂ ಪತಿ ತನ್ನ ಪತ್ನಿಯೊಡನೆ ಬಲವಂತದಿಂದ ಅವಳ ಇಚ್ಛೆಯ ವಿರುದ್ದವಾಗಿ ಸಂಭೋಗ ನಡೆಸಿದರೆ ಅದು ಆತ್ಯಾಚಾರವೇ ಆಗುತ್ತದೆ. ಈ ಗ್ರಹಿಕೆ ನಮಗೆ ಮತ್ತೊಂದು ತೀಕ್ಷ್ಣವಾದ ಒಳನೋಟವನ್ನೂ ನೀಡುತ್ತದೆ. ಅದೇನೆಂದರೆ ಅತ್ಯಾಚಾರವೆನ್ನುವುದು ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವ ಲಿಂಗಾಧಾರಿತ ಅಸಮಾನತೆ, ಲಿಂಗ ಭೇದ- ಭಾವದ ಒಂದು ಉಗ್ರ ಸ್ವರೂಪ, ಈ ಅಸಮಾನತೆಯ ವಿಕೃತ ಪರಾಕಾಷ್ಠೆಯ ಹಂತವೆನ್ನಬಹುದೇನೋ. ಅತ್ಯಾಚಾರ ಒಂದು ವಿಶಿಷ್ಟ ರೀತಿಯ ಹೇಯವಾದ ಅಪರಾಧ, ಖಂಡನೀಯ ದೌರ್ಜನ್ಯವಾಗುವುದು ಏಕೆಂದರೆ ಅದು ಸಾಮಾನ್ಯವಾಗಿ ಪುರುಷ ಹಾಗೂ ಮಹಿಳೆಯರ ಲೈಂಗಿಕ ಸಂಬಂಧದಲ್ಲಿನ ಅಸಮಾನತೆಯ ತೀವ್ರ ಉಲ್ಬಣಾವಸ್ಥೆಯ ಹಂತ.

ಅತ್ಯಾಚಾರದ ಆರೋಪದ ಮೇಲೆ ಜೈಲು ಶಿಕ್ಷೆಗೆ ಒಳಗಾದ ಕೆಲವು ಖೈದಿಗಳೊಡನೆ ನಡೆಸಿದ ಸಂದರ್ಶನದಲ್ಲಿ ಪತ್ರಕರ್ತೆಯೊಬ್ಬರು ಹೇಳಿರುವುದರ ಪ್ರಕಾರ, ಯಾವ ಅತ್ಯಾಚಾರದ ಆರೋಪಿಗೂ ಸಂಭೋಗಕ್ಕೆ ಹೆಣ್ಣಿನ ಸಮ್ಮತಿಯ ಅವಶ್ಯಕತೆಯಿದೆ ಎನ್ನುವ ಕಿಂಚಿತ್ ಅರಿವೂ ಇರಲಿಲ್ಲ. ಅತ್ಯಾಚಾರದ ಕ್ರಿಯೆಯಲ್ಲಿ ಎಷ್ಟು ಪ್ರಚಂಡವಾದ ತೀವ್ರತೆಯಲ್ಲಿ ಹೆಣ್ಣು- ಗಂಡಿನ ನಡುವೆ ಇರುವ ಅಸಮಮಾನತೆ, ಹೆಣ್ಣಿನ ತುಚ್ಛೀಕರಣ ಹಾಗೂ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳ ಅನಾವರಣವಾಗುತ್ತದೆಯೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಈ ಅತ್ಯಾಚಾರಿ ಸಂಸ್ಕೃತಿ ವಿಜೃಂಭಿಸಿ ಸಮಾಜದಲ್ಲಿ ನೆಲೆಯೂರುವುದೇ ಒಂದು ವಿಶಿಷ್ಟ ಬಗೆಯ ಭಯೋತ್ಪಾದನೆಯಿಂದ. ಮಹಿಳೆಯರನ್ನು ಭಯಭೀತರನ್ನಾಗಿಸಿ, ಅವರು ಪುರುಷರನ್ನು ಅವಲಂಬಿಸುವ ಹಾಗೆ ಮಾಡುವುದು ಇದರ ಹುನ್ನಾರಗಳಲ್ಲೊಂದು.

ಅತ್ಯಾಚಾರದ ಭಯ ಮಹಿಳೆಯರನ್ನು ರಾತ್ರಿಯಲ್ಲಿ ರಸ್ತೆಗಳಲ್ಲಿ ಸಂಚರಿಸದಿರುವಂತೆ ನಿಷ್ಕ್ರಿಯಗೊಳಿಸುತ್ತದೆ. ತಾವು ಧರಿಸುವ ಉಡುಪು, ಹಾವ- ಭಾವ, ಚಲನ ವಲನಗಳು ಎಲ್ಲಿ ಯಾವ ಪುರುಷನಿಗೆ ಉದ್ರೇಕಕಾರಿಯಾಗಿ ಕಂಡು ತಾವು ಅತ್ಯಾಚಾರಕ್ಕೆ ಒಳಗಾಗಬಹುದು, ತಮ್ಮ ಮೇಲೆ ಆಘಾತಕಾರಿ ಲೈಂಗಿಕ ಆಕ್ರಮಣ ನಡೆದುಬಿಡಬಹುದೆಂದು ಅವರನ್ನು ಭಯಗ್ರಸ್ತರನ್ನಾಗಿಸುತ್ತದೆ. ನಾವು ಬದುಕುವ ಸಮಾಜದಲ್ಲಿ ಲೈಂಗಿಕತೆಯ ಆಯಾಮಗಳು, ರೂಪು – ರೇಷೆಗಳು, ಅದರ ಸ್ವರೂಪ, ಗಂಡಿನ ದೃಷ್ಟಿಕೋನದಿಂದ ನಿರ್ಮಿತವಾದ ಪರಿಕಲ್ಪನೆಗಳ ಸುತ್ತಲೇ ಪರಿಭ್ರಮಿಸುತ್ತವೆ. ಗಂಡಿನ ಪೌರುಷ, ಯಜಮಾನಿಕೆ, ಅವನ ವೀರ್ಯವಂತಿಕೆ, ಹೆಣ್ಣಿನ ಸಮರ್ಪಣಾ ಭಾವ – ಇವನ್ನೆಲ್ಲ ಶೃಂಗಾರ ರಸವೆಂಬಂತೆ ಬಿಂಬಿಸಿ, ಗಂಡು – ಹೆಣ್ಣುಗಳ ನಡುವಿನ ಲಿಂಗ ತಾರತಮ್ಯವನ್ನು ಸರ್ವೇ ಸಾಮಾನ್ಯ ನಿಯಮವೆಂದು, ಸಮರ್ಥಿಸುವ ಧೂರ್ತ ಪ್ರಕ್ರಿಯೆಯೇ ದುರ್ದೈವವಶಾತ್ ಲೈಂಗಿಕತೆಯ ಪರಿಭಾಷೆಯಾಗಿದೆ.

ಹೀಗಾಗಿ ಒಂದು ‘ಸಹಜ’ವೆಂದು ಪರಿಗಣಿಸಲ್ಪಡುವ ಸಂಭೋಗ ಕ್ರಿಯೆಯನ್ನೊಳಗೊಂಡು ವೇಶ್ಯಾವಾಟಿಕೆ, ಅಶ್ಲೀಲ ಚಿತ್ರಗಳ ಮಾಧ್ಯಮಗಳವರೆಗೆ, ಲೈಂಗಿಕತೆ ಎನ್ನುವುದು ಗಂಡಿನ ಯಜಮಾನಿಕೆ, ಪ್ರಾಬಲ್ಯ ಹಾಗೂ ಹೆಣ್ಣಿನ ಶರಣಾಗತಿ – ಸಮರ್ಪಣೆ ಎಂಬ ಅಸಮಾನತೆಯ ತಳಹದಿಯ ಮೇಲೆ ನಿರ್ಮಾಣಗೊಂಡಿದೆ. ಹುಡುಗಿಯನ್ನು ಚುಡಾಯಿಸುವುದು, ಪೀಡಿಸುವುದು , ಅವಳ ಅಂಗಾಂಗಗಳ ವರ್ಣನೆ ಮಾಡುತ್ತ, ಕುಹಕವಾಗಿ ಛೇಡಿಸಿ ವಿಕೃತವಾಗಿ ಸಂತೋಷ ಪಡುವುದು, ಆಕೆಯನ್ನು ಹಿಂಸಿಸುವುದು, ಒಲ್ಲದ ಹೆಣ್ಣನ್ನು ಪಳಗಿಸಿ, ಅವಳ ಕನ್ಯತ್ವವನ್ನು ಕೆಡಿಸಿ, ಬಲಾತ್ಕಾರದಿಂದ ಸಂಭೋಗಿಸುವುದು – ಇವೆಲ್ಲ ಆಕರ್ಷಕ, ಅಪೇಕ್ಷಣೀಯವಾದಂಥ ಪ್ರಣಯದ ರಿವಾಜುಗಳೆಂಬಂತೆ ಚಲನಚಿತ್ರಗಳು, ಜನಪ್ರಿಯ ಸಾಹಿತ್ಯಗಳಲ್ಲಿ ಬಿಂಬಿಸಲಾಗುತ್ತದೆ. ಅತ್ಯಾಚಾರ ಕೇವಲ ಹಿಂಸಾತ್ಮಕವಾದದ್ದು ಇಲ್ಲಿ ಲೈಂಗಿಕತೆ ಗೌಣ ಎಂಬ ಹುರುಳಿಲ್ಲದ ವಾದವನ್ನು ನಾನು ನಿರಾಕರಿಸುತ್ತೇನೆ.

ಅತ್ಯಾಚಾರದಲ್ಲಿ ಹಿಂಸೆ ಮತ್ತು ಲೈಂಗಿಕತೆ ಎರಡೂ ಮೇಳೈಸಿವೆ. ಪುರುಷನ ಅಧಿಕಾರ ಹಾಗೂ ಪ್ರಾಬಲ್ಯತೆಯ ಅಡಿಪಾಯದ ಮೇಲೆ ಸೃಷ್ಟಿಸಲಾದ ಲೈಂಗಿಕತೆಯ ಮಾದರಿಯಾಗಿರುವ ಸಂಭೋಗ ಕ್ರಿಯೆಯ ಉಗ್ರ ಸ್ವರೂಪವೇ ಅತ್ಯಾಚಾರ. ಹೆಣ್ಣು ಯಾವುದೇ ಬಗೆಯ ಒತ್ತಡದಿಂದ ಸಂಭೋಗಕ್ಕೆ ಸಹಕರಿಸುವುದು ಕೂಡ ಅತ್ಯಾಚಾರವೇ. ಅದು ಚಾಕುವಿನ ಇರಿತದ ಬೆದರಿಕೆಯಾಗಬೇಕಿಲ್ಲ, ಪುರುಷನ ಕೆಂಗಣ್ಣು, ಅವನ ಅವೇಶ ಭರಿತ ನೋಟ, ತಾರಕಕ್ಕೇರುವ ಧ್ವನಿ, ಅವನ ಅಪ್ರಸನ್ನತೆ, ಬಿಗಿ ಮುಷ್ಟಿ, ಕೋಪದ ತೀವ್ರತೆಯಿಂದ ಕಂಪಿಸುತ್ತಿರುವ ತುಟಿಗಳು – ಇವುಗಳಲ್ಲಿ ಯಾವುದಾದರೂ ಸರಿ, ಅದು ಮಾನಸಿಕ ಒತ್ತಡವನ್ನೇ ನಿರ್ಮಾಣ ಮಾಡುತ್ತದೆ. ಅದೆಷ್ಟು ರಾತ್ರಿಗಳಂದು, ಸುಮ್ಮನೇ ಮಲಗಿ ನಿದ್ರಿಸಬೇಕು ಎಂದು ಆಯಾಸಗೊಂಡಿರುವ ಪತ್ನಿಯರು ಗಂಡನ ಮುನಿಸು, ಅನಾದರ, ಅಪ್ರಸನ್ನತೆ, ರಂಪ- ರಾದ್ಧಾಂತಗಳಿಗೆ ಅಂಜಿ ಒಲ್ಲದ ಮನಸ್ಸಿನಿಂದಲೇ ಸಂಭೋಗದಲ್ಲಿ ಸಹಕರಿಸುವುದಿಲ್ಲವೇ? ಎಷ್ಟು ಮರ್ಯಾದಸ್ತ ಮಧ್ಯಮ ವರ್ಗದ ಮನೆಗಳ ಮಲಗುವ ಕೋಣೆಗಳಲ್ಲಿ ಕಾನೂನು ಅಪರಾಧವೆಂದು ಪರಿಗಣಿಸುವ ಅತ್ಯಾಚಾರಗಳ ವ್ಯಾಪ್ತಿಗೆ ನಿಲುಕದ ಅತ್ಯಾಚಾರಗಳು ನಡೆಯುತ್ತವೆಯೋ ಬಲ್ಲವರಾರು ಅಲ್ಲವೇ?

(ಈ ಸರಣಿ ಇಲ್ಲಿಗೆ ಮುಕ್ತಾಯವಾಯಿತು)

ಇದನ್ನೂ ಓದಿ  : ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಸಭಾಧ್ಯಕ್ಷರೂ ಸೇರಿದಂತೆ ಇಡೀ ಸದನ ರಾಜ್ಯದ ಜನರ ಕ್ಷಮೆ ಕೇಳಲಿ’ ವಿಮಲಾ ಕೆ. ಎಸ್.

Follow us on

Related Stories

Most Read Stories

Click on your DTH Provider to Add TV9 Kannada