ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಸಭಾಧ್ಯಕ್ಷರೂ ಸೇರಿದಂತೆ ಇಡೀ ಸದನ ರಾಜ್ಯದ ಜನರ ಕ್ಷಮೆ ಕೇಳಲಿ’ ವಿಮಲಾ ಕೆ. ಎಸ್.

ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಸಭಾಧ್ಯಕ್ಷರೂ ಸೇರಿದಂತೆ ಇಡೀ ಸದನ ರಾಜ್ಯದ ಜನರ ಕ್ಷಮೆ ಕೇಳಲಿ’ ವಿಮಲಾ ಕೆ. ಎಸ್.
ಚಿಂತಕಿ ವಿಮಲಾ ಕೆ. ಎಸ್.

Gender Sensitivity : ‘ಶಾಸನಸಭೆಗೆ ಇರುವ ಅಧಿಕಾರವನ್ನು ಬಳಸಿ ಅತ್ಯಾಚಾರ, ದೌರ್ಜನ್ಯಗಳಿಂದ ನಲುಗಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವ ತಾಖತ್ತು ಪ್ರದರ್ಶಿಸಿ. ವರ್ಷಗಟ್ಟಲೇ ನ್ಯಾಯಕ್ಕಾಗಿ ಅಲೆದಲೆದು ಮತ್ತೆ ಮತ್ತೆ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗಾಗಿ ಲಿಂಗ ಸಂವೇದನೆಯುಳ್ಳ ನ್ಯಾಯಾಧೀಶರನ್ನೊಳಗೊಂಡ ವಿಶೇಷ ನ್ಯಾಯಾಲಯಗಳನ್ನು ತೆರೆಯಲು ಕ್ರಮವಹಿಸಿ.’ ವಿಮಲಾ ಕೆ. ಎಸ್.

ಶ್ರೀದೇವಿ ಕಳಸದ | Shridevi Kalasad

|

Dec 18, 2021 | 6:22 PM

Rape : ಗುರುವಾರ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್​ ಮುಖಂಡ ಕೆ.ಆರ್​. ರಮೇಶ್​ ಕುಮಾರ್​ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್​ ಕುಮಾರ್​, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ. 

ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com

*

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಚಿಂತಕಿ ವಿಮಲಾ ಕೆ.ಎಸ್. ಅವರ ಪ್ರತಿಕ್ರಿಯೆ

*

ಒಂದು ಸಮಾಜದ ಅಭಿವೃದ್ದಿಯನ್ನು ಅಲ್ಲಿನ ಮಹಿಳೆಯರ ಸ್ಥಿತಿಗತಿಯ ಮೇಲೆ ಅಳೆಯಬೇಕು ಎಂಬ ಮಾತು ಬದಲಾಗಿ ಆ ಸಮಾಜದ ಗಂಡಿನ ಮನಃಸ್ಥಿತಿಯ ಮೇಲೆ ಅಳೆಯಬೇಕು ಎಂದು ಮಾಡಬೇಕು. ಕರ್ನಾಟಕದ ವಿಧಾನಸಭೆ ತಾನೊಂದು ಲಿಂಗ ಸಂವೇದನಾ ಶೂನ್ಯ ಸ್ಥಳ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದೆ. ಇದೇ ಸದನದಲ್ಲಿ ಹಿಂದೊಮ್ಮೆ ನೀಲಿಚಿತ್ರ ವೀಕ್ಷಣೆ ನಡೆದಿತ್ತು. ದುರಂತವೆಂದರೆ ಚಿತ್ರ ವೀಕ್ಷಣೆ ಮಾಡಿದವರು ಅನತಿ ಕಾಲದಲ್ಲಿಯೇ ರಾಜ್ಯದ ಉಪಮುಖ್ಯಮಂತ್ರಿಯೂ ಆಗಿ ಬಿಟ್ಟರು.

ಇನ್ನೀಗ, ರಾಜಕೀಯ ಮುತ್ಸದ್ದಿ, ಸಂವೇದನಾಶೀಲ ವ್ಯಕ್ತಿ, ಎಂದು ಹೆಸರಾದ ಮಾಜಿ ಸಭಾಧ್ಯಕ್ಷರು ಮತ್ತು ಹಾಲಿ ಶಾಸಕರು ಆದ ಕೆ.ಆರ್.ರಮೇಶ್ ಕುಮಾರ್​ರವರು ಅತ್ಯಾಚಾರದಂಥಹ ಘೋರ ಕೃತ್ಯದ ಕುರಿತು ಇರುವ ಕೀಳು ಅಭಿರುಚಿಯ ಗಾದೆ ಮಾತುಗಳನ್ನು ಉಲ್ಲೇಖಿಸಿ ಅನಗತ್ಯವಾದ ಮಾತುಗಳನ್ನಾಡಿದರು. ಅದನ್ನು ಕೇಳಿ ಗಹಗಹಿಸಿ ನಗುತ್ತ ಎಂಜಾಯ್ ಮಾಡಿದವರು ಹಾಲೀ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು. ಜನರ ಪ್ರಶ್ನೆಗಳನ್ನು ಎತ್ತಿ ಯಾರಾದರೂ ಸದಸ್ಯರು ಮಾತನಾಡುತ್ತಿದ್ದರೆ ಮಧ್ಯದಲ್ಲಿಯೇ ಮೊಟಕುಗೊಳಿಸುವ ಅಧಿಕಾರ ಚಲಾಯಿಸುವ ಅವರು ಈ ಮಾತುಗಳನ್ನು ಕೇಳಿ ನಕ್ಕು ‘ಎಂಜಾಯ್’ ಮಾಡುತ್ತಿದ್ದರು. ಇಷ್ಟು ಕೀಳುಮಟ್ಟದ ಮಾತುಕತೆ ನಡೆಯುವಾಗ ಎದ್ದು ನಿಂತು ಪ್ರತಿಭಟಿಸದ ಸದನದ ಎಲ್ಲ ಶಾಸಕರು. ಇವು ಈ ಸಮಾಜದ ತುಕ್ಕು ಹಿಡಿದ ಮನಃಸ್ಥಿತಿಯ ದ್ಯೋತಕಗಳು.

ಅತ್ಯಾಚಾರವೆಂಬ ಘೋರ ಕೃತ್ಯವನ್ನು ಎಂಜಾಯ್ ಮಾಡು ಎಂಬರ್ಥದಲ್ಲಿ ಗಾದೆಯ ಮಾತುಗಳನ್ನು ಟಂಕಿಸಿದವರು ಹೀಗೆ ಸಂವೇದನೆಗಳೇ ಇಲ್ಲದ ಮನಃಸ್ಥಿತಿಯವರೇ ಆಗಿರುತ್ತಾರೆ. ಮದುವೆಯಾದ ಗಂಡನೊಂದಿಗೇ ಒಲ್ಲದ ಲೈಂಗಿಕ ಕ್ರಿಯೆ ಕೊಡುವ ಹಿಂಸೆಗಳ ಬಗ್ಗೆ ಬಹಳ ಜನ ಮಹಿಳೆಯರು ಹೇಳಿಕೊಳ್ಳಲಾಗದ, ಅನುಭವಿಸಲಾರದ ಕಷ್ಟದಲ್ಲಿರುತ್ತಾರೆ. ಇನ್ನು ಅತಿಕ್ರಮಣ ಮಾಡಿ ಮೈಮೇಲೆರಗಿದವನ ಹೀನ ಕೃತ್ಯವನ್ನು ಸುಖಿಸು ಎನ್ನುವ ಮಾತಾದರೂ ಹೇಗೆ ಬಂದೀತು ನಿಮ್ಮ ಬಾಯಲ್ಲಿ ಮಹನೀಯರೆ, ಇದು ನಿಮ್ಮ ಪರುಷ ಪಾರಮ್ಯದ ಪಾಳೆಯಗಾರಿ ಮನಃಸ್ಥಿತಿಯಲ್ಲವೇ? ಕೇವಲ ನಾಲ್ಕು ಮಾತಿನ ಕ್ಷಮಾಪಣೆಯಿಂದ ನೀವು ಮಾಡಿದ ಘಾಸಿಯಿಂದ ಹೊರಬರಲಾದೀತೆ? ಮತ್ತು ಇದು ಮೊದಲ ಬಾರಿಯಲ್ಲ ನೆನಪಿಸುತ್ತೇವೆ ನಿಮಗೆ. ಸಡಿಲ ಮಾತುಗಳು ಆಗಾಗ ಜಾರುತ್ತಿವೆ ಸದನದ ಒಳಗೂ ಹೊರಗೂ ಮತ್ತು ನಿಮ್ಮ ಬಾಯಿಂದಲೂ.

ಇದೇ ರಾಜ್ಯದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ದೂರು ಕೊಟ್ಟು ನಂತರ ಪ್ರತಿದಿನ ಇಲ್ಲಿನ (ಅ)ನ್ಯಾಯವ್ಯವಸ್ಥೆಯಿಂದ ಮತ್ತೆ ಮತ್ತೆ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಹೆಣ್ಣುಮಕ್ಕಳ ನೋವಿನ ಕನಿಷ್ಟ ಎಳೆಯಾದರೂ ನಿಮಗೆ ತಿಳಿದಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ. ಮಾತಿಗೆ ಗಹಗಹಿಸಿ ನಕ್ಕು ಸುಖಿಸಿದ ಸಭಾಧ್ಯಕ್ಷರೇ ತಾವೂ ಸೇರಿದಂತೆ, ಅತ್ಯಾಚಾರದ ಆರೋಪ ಹೊತ್ತವರ ಮುಂದೆ ಮಂಡಿಯೂರಿ ಶಿರಸಾಷ್ಟಾಂಗ ನಮಸ್ಕಾರ ಮಾಡಿ ಪ್ರಸಾದ ಸ್ವೀಕರಿಸುವ ಅನೇಕರು ಕರ್ನಾಟಕದ ಸದನದಲ್ಲಿ ಇದ್ದೀರಿ. ನಿಮಗೇನು ಗೊತ್ತಾದೀತು ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ನೋವು ಆಘಾತ. ಸದನದ ಒಳಗಿದ್ದೂ ಪ್ರತಿಭಟಿಸದ ಮಹಿಳಾ ಮಂತ್ರಿಣಿ ಶಶಿಕಲಾ ಜೊಲ್ಲೆಯವರೇ, ಸದನದಲ್ಲಿ ಕಲಾಪದಲ್ಲಿ ಪಾಲ್ಗೊಳ್ಳುತ್ತೀರೋ ಅಥವಾ ಶಾಸಕರ ಜೊತೆ ಮಾತನಾಡುತ್ತ ಕುಳಿತಿರುತ್ತೀರೋ? ತಾವು ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಹಾಗೆ ಹೇಳಿಕೊಂಡಿದ್ದೀರಿ. ಮಾರನೇದಿನ ಕಪ್ಪು ಪಟ್ಟಿ ಪ್ರದರ್ಶನ. ಯಾರೆದುರು ತೋರಿಸುವಿರಿ ತಮ್ಮ ಈ ಸೋಗು?

ಹೆಣ್ಣಿಗೆ ಪಾವಿತ್ರ್ಯದ ಸಂಕೋಲೆ ತೊಡಿಸಿ, ಅವಳ ಮೇಲೆ ನಿರಂತರ ದೈಹಿಕ ಮಾನಸಿಕ ದೌರ್ಜನ್ಯ ಎಸಗುವುದನ್ನು ಪುರುಷತ್ವದ ಪರಾಕ್ರಮವೆಂದು ಬಣ್ಣಿಸುತ್ತದೆ ಈ ಸಮಾಜ. ಹೆಣ್ಣು ತನ್ನ ಮೇಲೆ ನಡೆದ ದೌರ್ಜನ್ಯಗಳನ್ನು ಹೇಳಿಕೊಳ್ಳುವುದೂ ಅಪರಾಧ. ಆರೋಪ ಹೊತ್ತವರು ಎದೆ ಮುಂದೆ ಮಾಡಿ ನಡೆಯುವಾಗ, ತಮಗಿರುವ ಎಲ್ಲ ಶಕ್ತಿ ಸಾಮರ್ಥ್ಯಗಳನ್ನು ಬಳಸಿ ಇನ್ನಷ್ಟು ದೌರ್ಜನ್ಯ ಎಸಗುವಾತನನ್ನು ಪೂಜಿಸುವ ಸಮಾಜಕ್ಕೆ ಇಂಥಹ ಘಟನೆಗಳು ಇನ್ನಷ್ಟು ಪುಷ್ಟಿ ಕೊಡುತ್ತವೆ.

ಸಾಲದೆಂಬಂತೆ ಸದನದಲ್ಲಿ ಮೌನ ಪ್ರೇಕ್ಷಕರಾಗಿ ಕುಳಿತು ಹೊರಬಂದು ವೀರಾವೇಶದ ಮಾತಾಡುವ ಅಧಿಕಾರದಲ್ಲಿರುವ ಪಕ್ಷದ ಸದಸ್ಯರಿಗೆ ನನ್ನದೊಂದು ಪ್ರಶ್ನೆ. ಇಲ್ಲಿಯೂ ರಾಜಕೀಯ ಲಾಭ ಪಡೆಯುವಾಸೆಯೇ ನಿಮಗೆ. ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿದವರನ್ನೇ ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಿದವರಿಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರದು ತಪ್ಪಾದೀತೆ?

ಕರ್ನಾಟಕದ ಸದನಕ್ಕೇನಾದರೂ ಕನಿಷ್ಟ ಮಾನವ ಸಂವೇದನೆ ಇದೆ ಎಂದಾದರೆ ಮೊದಲು ಸಭಾಧ್ಯಕ್ಷರೂ ಸೇರಿದಂತೆ ಇಡೀ ಸದನ ರಾಜದ್ಯ ಜನರ ಕ್ಷಮೆ ಕೇಳಲಿ. ಶಾಸನಸಭೆಗೆ ಇರುವ ಅಧಿಕಾರವನ್ನು ಬಳಸಿ ಅತ್ಯಾಚಾರ, ದೌರ್ಜನ್ಯಗಳಿಂದ ನಲುಗಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವ ತಾಖತ್ತು ಪ್ರದರ್ಶಿಸಿ. ವರ್ಷಗಟ್ಟಲೇ ನ್ಯಾಯಕ್ಕಾಗಿ ಅಲೆದಲೆದು ಮತ್ತೆ ಮತ್ತೆ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗಾಗಿ ಲಿಂಗ ಸಂವೇದನೆಯುಳ್ಳ ನ್ಯಾಯಾಧೀಶರನ್ನೊಳಗೊಂಡ ವಿಶೇಷ ನ್ಯಾಯಾಲಯಗಳನ್ನು ತೆರೆಯಲು ಕ್ರಮವಹಿಸಿ. ಆಗ ನಿಮ್ಮ ಕ್ಷಮಾಯಾಚನೆಗೆ ಬೆಲೆ ಬಂದೀತು. ವರ್ಮಾ ಆಯೋಗದ ಶಿಫಾರಸುಗಳನ್ನು ಅಧ್ಯಯನ ಮಾಡಿ. ರಾಜ್ಯದಲ್ಲಿ ಉಗ್ರಪ್ಪ ನೇತೃತ್ವದ ಸಮಿತಿ ನೀಡಿದ ಶಿಫಾರಸುಗಳನ್ನು ಕನಿಷ್ಟ ಒಮ್ಮೆ ಕಣ್ಣಿಗಾದರೂ ಹಾಕಿಕೊಂಡು ಅದನ್ನು ರಾಜ್ಯದ ಜನತೆಯ ಚರ್ಚೆಗೆ ಬಿಡಿ. ಹುಟ್ಟುತ್ತದೆ ಆಗ ಕನಿಷ್ಟ ಲಿಂಗ ಸಂವೇದನೆ. ಅಲ್ಲಿ ಹುಡುಕುತ್ತೇವೆ ನಾವು ಮನುಷ್ಯ ಘನತೆಯನ್ನು. ಅದಿಲ್ಲದೇ ಮಾತಾಡಿದವರು ಕೇಳಿದ ಕ್ಷಮೆಗಾಗಲಿ, ನಕ್ಕು ಸುಖಿಸಿದವರು ಮ್ಯಾಟರ್ ಕ್ಲೋಸ್ ಎಂದು ಮುಗಿಸುವುದರಿಂದಲ್ಲ.

ಇದನ್ನೂ ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ನಾಲಗೆಯ ಹಿಡಿತ ತಪ್ಪಿದಲ್ಲಿ ಒಂದು ತಿಂಗಳ ವೇತನ, ಸರ್ಕಾರಿ ಸವಲತ್ತು ಕಡಿತಗೊಳಿಸಿ 

Follow us on

Most Read Stories

Click on your DTH Provider to Add TV9 Kannada