Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದೊಳಗೆ ‘ವರ್ಣಕ’ದ ಪಾಂಡಿತ್ಯಸಾರ ಬಸಿದಿಟ್ಟಿದ್ದಾರೆ ಜನಾರ್ಧನ ಭಟ್

K P Rao : ಸುದೀರ್ಘ ರೈಲು ಪ್ರಯಾಣದ ಬಳಿಕ ಮಹಾಜನ್ ಮತ್ತು ಪೋತಿಯವರು ತಕ್ಷಶಿಲೆಯ ರೈಲು ನಿಲ್ದಾಣದಲ್ಲಿ ಇಳಿದಾಗ ಅವರಿಗೆ ಸೂಫಿ ಸಂತರೊಬ್ಬರು ಕಾಣಸಿಗುತ್ತಾರೆ. ತಕ್ಷಶಿಲೆ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಭಾಷಾಸಂಕಿರಣದಲ್ಲಿ ಭಾಗವಹಿಸಲು ತಾವಲ್ಲಿಗೆ ಹೋಗುತ್ತಿದ್ದೇವೆ ಎಂದು ಇವರು ಹೇಳಿದಾಗ ಅವರು ಗಹಗಹಿಸಿ ನಕ್ಕು, ಆ ಸಂಕಿರಣ ನಡೆದು 2422 ವರ್ಷಗಳೇ ಕಳೆದಿವೆ ಎನ್ನುತ್ತಾರೆ.

Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದೊಳಗೆ ‘ವರ್ಣಕ’ದ ಪಾಂಡಿತ್ಯಸಾರ ಬಸಿದಿಟ್ಟಿದ್ದಾರೆ ಜನಾರ್ಧನ ಭಟ್
ವಿಮರ್ಶಕ ಡಾ. ಜನಾರ್ಧನ ಭಟ್ ಮತ್ತು ಲೇಖಕ ಕೆ. ಪಿ. ರಾವ್
Follow us
ಶ್ರೀದೇವಿ ಕಳಸದ
|

Updated on:Dec 31, 2021 | 1:05 PM

Kannada Literature | ಓದಿನಂಗಳ 2021 : ಅಂತರಂಗದಿಂದ ಬಹಿರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ನಮ್ಮನ್ನು ನಾವು ನೇಯ್ದುಕೊಳ್ಳಲು ಇರುವ ಹಲವಾರು ಆತ್ಮಾವಲೋಕನದ ಮಾರ್ಗಗಳಲ್ಲಿ ಸಾಹಿತ್ಯವೂ ಒಂದು. ಒಮ್ಮೆ ಈ ‘ರುಚಿ’ಗೆ ಬಿದ್ದರೆ ಮುಗಿಯಿತು. ಪುಸ್ತಕಗಳೇ ನಮ್ಮನೆ ದೇವರು ಎಂದು ಜೀವಿಸುತ್ತಿರುವ ಅಸಂಖ್ಯಾತ ಮನಸ್ಸುಗಳೊಂದಿಗೆ ನಾವು ನಮಗರಿವಿಲ್ಲದೆಯೇ ಬೆಸೆದುಕೊಳ್ಳುತ್ತಾ ಹೋಗುತ್ತೇವೆ. ಎಂಥಾ ದೊಡ್ಡ ಜಾತ್ರೆಯಲ್ಲಿ, ಥರಾವರಿ ಆಟಿಕೆಗಳಲ್ಲಿ ಮಗು ಮನಸ್ಸು ನೆಡುವುದು ಒಂದೇ ಒಂದು ಆಟಿಕೆಯಲ್ಲಿ ಮಾತ್ರ. ಅದೇ ಆಟಿಕೆ ಯಾಕೆ, ಎಂಬ ಪ್ರಶ್ನೆಗೆ ಉತ್ತರವಿದೆಯೇ?; ಹೊಸ ವರ್ಷದ ಹೊಸ್ತಿಲೊಳಗೆ ನಿಂತು ಹಿಂದಿರುಗಿ ನೋಡಿದರೆ, ಈ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಸಾಹಿತ್ಯಕೃತಿಗಳ ಪ್ರಕಟಣೆ ವಿಪುಲ. ಅಂತೆಯೇ ಕನ್ನಡದ ಕೆಲ ವಿಮರ್ಶಕರಿಗೆ, ಈ ವರ್ಷ ನೀವು ಓದಿದ ಪುಸ್ತಕಗಳ ಪೈಕಿ ಯಾವುದೇ ಭಾಷೆಯ, ಯಾವುದೇ ಪ್ರಕಾರದ, ಯಾವುದೇ ವರ್ಷ ಪ್ರಕಟವಾದ ನಿಮಗಿಷ್ಟವಾದ ಒಂದು ಕೃತಿಯ ಬಗ್ಗೆ ನಿಮ್ಮ ಒಳನೋಟಗಳನ್ನು ಕಟ್ಟಿಕೊಡಬಹುದೆ? ಎಂದು ವಿನಂತಿಸಿಕೊಳ್ಳಲಾಯಿತು. ಅವರು ಬರೆದು ಕಳಿಸಿದ್ದು ನಿಮ್ಮ ಓದಿಗೆ. ಒಪ್ಪಿಸಿಕೊಳ್ಳಿ. 

*

ಕೃತಿ : ವರ್ಣಕ (ಕಾದಂಬರಿ) ಲೇಖಕರು : ಕೆ. ಪಿ. ರಾವ್ ಪುಟ : 480 ಬೆಲೆ : ರೂ. 450 ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು

*

ವಿಮರ್ಶಕರಾದ ಡಾ. ಬಿ. ಜನಾರ್ದನ ಭಟ್​ ಅವರು ಪ್ರೊ. ಕೆ. ಪಿ. ರಾವ್ ಅವರ ವರ್ಣಕ ಕಾದಂಬರಿಯ ಬಗ್ಗೆ.

*

2021ರಲ್ಲಿ ಮುದ್ರಣವಾದ ‘ವರ್ಣಕ’ ಪ್ರೊ. ಕೆ.ಪಿ. ರಾವ್ (ಕಿನ್ನಿಕಂಬಳ ಪದ್ಮನಾಭ ರಾವ್, ಜನನ 1940) ಅವರ ವಿಶಿಷ್ಟ ಕಾದಂಬರಿ. ‘ವರ್ಣಕ’ ಕಾದಂಬರಿ ಭಾರತದ ಭಾಷಾವಿಜ್ಞಾನದ ಚಿಂತನೆಗಳ ಚರಿತ್ರೆಯನ್ನು ಅವಲೋಕಿಸುವ, ಚರ್ಚಿಸುವ, ಹಾಗೂ ಆ ಕುರಿತಾದ ಸಂಕಥನಗಳನ್ನು ಮರುಪರಿಶೀಲಿಸುವ ಕೃತಿ. ‘ವರ್ಣ’ ಅನ್ನುವುದು ಅಕ್ಷರಕ್ಕೂ ಮೂಲವಾಗಿರುವ ಭಾಷೆಯ ಘಟಕ. ಸಾಹಿತ್ಯ ಕೃತಿಗಳಲ್ಲಿರುವ ‘ವರ್ಣಕ’ ಮತ್ತು ‘ವಸ್ತುಕ’ ಎನ್ನುವ ವಿಭಾಗೀಕರಣವೂ ಇಲ್ಲಿ ಸೂಚಿತವಾಗಿದೆ.

ಈ ಕಾದಂಬರಿಯಲ್ಲಿ ಮೂರು ಭಾಗಗಳಿದ್ದು ಅವುಗಳಿಗೆ ‘ಪ್ರಸ್ಥಾನ’, ‘ಪ್ರಯಾಣ’ ಮತ್ತು ‘ಪ್ರಬೋಧನ’ ಎಂಬ ಶೀರ್ಷಿಕೆಗಳಿವೆ. ‘ಪ್ರಸ್ಥಾನ’: ಈ ಭಾಗ ‘ಸ್ಮೃತಿ’ಯ ಮಾದರಿಯಲ್ಲಿದೆ. ಶಂಭು ಮಹಾಜನ್ ಅವರ ಸಂಸಾರದ ಮೂರು ತಲೆಮಾರಿನ ಕಥೆ ಈ ಭಾಗದಲ್ಲಿದೆ. ಇಂಗ್ಲೆಂಡಿನ ಆಕ್ಸಫರ್ಡ್​ ವಿ.ವಿ.ಯ ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾ ವಿಜ್ಞಾನಿ ಪ್ರೊ. ಶಂಭು ಮಹಾಜನ್ ಈ ಕಾದಂಬರಿಯ ಕೇಂದ್ರ ಪಾತ್ರ. ಶಂಭು ಅವರು ರುಮೇನಿಯಾದ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ಕುಟುಂಬದಿಂದ ದೂರವಾಗಿದ್ದರು. ಆಮೇಲೆ ನಿವೃತ್ತರಾಗಿ ಇಂಗ್ಲೆಂಡಿನಲ್ಲಿಯೇ ನೆಲೆಸಿದವರು. ತಕ್ಷಶಿಲಾ ವಿ.ವಿ.ಯಲ್ಲಿ ನಡೆಯಲಿದ್ದ ಭಾಷಾವಿಜ್ಞಾನದ ಸಮ್ಮೇಳನಕ್ಕೆ ಅವರ ಶಿಷ್ಯ ಪ್ರೊ. ಮಹಮದಾಲಿ ಅವರ ಆಹ್ವಾನವನ್ನು ಮನ್ನಿಸಿ ಹೊರಟವರು, ಹುಟ್ಟೂರಾದ ಮಂಗಳೂರು ಸಮೀಪದ ‘ಕಂಬಳ’ಕ್ಕೆ ಭೇಟಿನೀಡಲು ಬರುತ್ತಾರೆ. (ಲೇಖಕ ಕೆ.ಪಿ. ರಾವ್ ಅವರ ಹೆಸರಿನಲ್ಲಿರುವ ಕೆ. ಅಂದರೆ ‘ಕಿನ್ನಿಕಂಬಳ’ ಎಂಬ ಊರು).

ಮಹಾಜನರ ಕುಟುಂಬದ ಚರಿತ್ರೆ ಸಮಾಜದ ಚರಿತ್ರೆಯೂ ಹೌದು. ಅಸ್ಪೃಶ್ಯತೆ (‘ವರ್ಣ’ ಶೀರ್ಷಿಕೆ ಇಲ್ಲಿಗೂ ಅನ್ವಯವಾಗಬಹುದು) ಮತ್ತು ಸ್ತ್ರೀ ಶೋಷಣೆಗಳು ಈ ಭಾಗದ ಮಹಾಜನ ಕುಟುಂಬದ ಕಥಾನಕದಲ್ಲಿ ಬಹಳ ಸೂಕ್ಷ್ಮವಾಗಿ ಗೋಚರಿಸುತ್ತವೆ.

‘ಪ್ರಯಾಣ’: ಎರಡನೆಯ ಭಾಗದಲ್ಲಿ ಕೇರಳ ಕೇಂದ್ರಿತವಾದ ದಾಕ್ಷಿಣಾತ್ಯ ಭಾಷಾವಿಜ್ಞಾನ ಚಿಂತನೆಯ ಚರಿತ್ರೆಯನ್ನು ಅವಲೋಕಿಸಲಾಗಿದೆ. ಈ ಭಾಗ ‘ಪ್ರಯಾಣ’ದ ರೂಪಕದಲ್ಲಿದೆ. ಕಥಾನಾಯಕ ಮಾಂತ್ರಿಕ ವಾಸ್ತವ ಶೈಲಿಯ ರೈಲಿನಲ್ಲಿ ಪ್ರಯಾಣ ಮಾಡುವಾಗ ಈ ಕಥಾನಕ ಮತ್ತೊಂದು ಬಗೆಯ ಪ್ರಾಚೀನ ಬೌದ್ಧಿಕ ಪ್ರಯಾಣದ ನೆಲೆಯಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ.

‘ಪ್ರಬೋಧನ’: ಮೂರನೆಯ ಭಾಗದಲ್ಲಿ ತಕ್ಷಶಿಲೆಯನ್ನು ಕೇಂದ್ರವಾಗಿರಿಸಿಕೊಂಡು ಸಮಗ್ರ ಭಾರತದಲ್ಲಿ ನಡೆದಿದ್ದ ಭಾಷಾ ಚಿಂತನೆಗಳನ್ನು ಒಂದು ವಿಚಾರಸಂಕಿರಣದ ನಡಾವಳಿಗಳ ರೂಪದಲ್ಲಿ ದಾಖಲಿಸುವ ತಂತ್ರದ ಮೂಲಕ ಪರಿಶೀಲಿಸಲಾಗಿದೆ. ಇದರ ವೈಚಾರಿಕ ಹಂದರವನ್ನು ಇಷ್ಟು ಸರಳವಾಗಿ ಪರಿಚಯಿಸಲಾಗದು.

ಮಹಾಜನ್ ಪಾಕಿಸ್ತಾನದ ತಕ್ಷಶಿಲೆಗೆ ಹೋಗಲು ವಿಶೇಷವಾದ, ಇಬ್ಬರೇ ಪ್ರಯಾಣಿಕರುಳ್ಳ ಶತಮಾನದ ರೈಲಿಗೆ ಹತ್ತುತ್ತಾರೆ. ಮಂಗಳೂರು ಪೇಶಾವರ ಜಿ.ಟಿ. ಎಕ್ಸ್​ಪ್ರೆಸ್​ ರೈಲಿನ ನೂರನೆಯ ವರ್ಷಾಚರಣೆಗಾಗಿ ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಆಯೋಜಿಸಿದ್ದ ರೈಲುಯಾತ್ರೆ ಇದು. ಈ ರೈಲಿನಲ್ಲಿ ಅವರ ಸಹಪ್ರಯಾಣಿಕ ಅದೇ ಸಮ್ಮೇಳನಕ್ಕೆ ಹೊರಟಿರುವ ಕೇರಳದ ಭಾಷಾವಿಜ್ಞಾನಿ ಪದ್ಮನಾಭ ಪೋತಿಯವರು. 104 ಗಂಟೆಗಳ ಅತಿದೀರ್ಘ ಪ್ರಯಾಣ ಕಾಲದಲ್ಲಿ ಮಹಾಜನರ ಮಾಂತ್ರಿಕ ವಾಸ್ತವ ಅನುಭವ; ಪೋತಿಯವರ ಜತೆಗಿನ ಚರ್ಚೆಗಳು ಕಾದಂಬರಿಯ ಮುಖ್ಯ ವಸ್ತುವಿಗೆ ಪೂರಕವಾಗಿವೆ. ವಿಶೇಷ ರೈಲಿನಲ್ಲಿ ಇಬ್ಬರೇ ಪ್ರಯಾಣಿಕರು – ಮಹಾಜನ ಮತ್ತು ಪೋತಿ. ಇವರಿಬ್ಬರ ಊಟತಿಂಡಿ ಇತ್ಯಾದಿಗಳಿಗೆ ವ್ಯವಸ್ಥೆ ಮಾತ್ರವಲ್ಲ, ಒಂದು ಅದ್ಭುತ ಗ್ರಂಥಾಲಯವೂ ಇತ್ತು. ಪೋತಿಯವರು ಸೇರಿಕೊಳ್ಳುವ ಮುನ್ನ ಆ ಗ್ರಂಥಾಲಯಕ್ಕೆ ಹೋದ ಶಂಭು ಮಹಾಜನ್ ಈಗ ಬದುಕಿಲ್ಲದ ವಾಸುದೇವ ಎಂಬ ಲೇಖಕನನ್ನು ಅಲ್ಲಿ ಮುಖಾಮುಖಿ ಆಗುತ್ತಾರೆ. ಇದು ಮಾಂತ್ರಿಕ ವಾಸ್ತವ ಸನ್ನಿವೇಶ. ಸಂಸ್ಕೃತ ಭಾಷೆಯಲ್ಲಿ, ವಿವಿಧ ಪ್ರಕಾರಗಳಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಗ್ರಂಥಗಳನ್ನು ರಚಿಸಿದವರು ಕೇರಳದ ಮೇಲ್ಪತ್ತೂರು ನಾರಾಯಣ ಭಟ್ಟತಿರಿ. ಅವರ ಕಥೆಯನ್ನು ಅವರ ಸಹವರ್ತಿ ವಾಸುದೇವಕವಿಯ ವಂಶಜರಾದ ಇನ್ನೊಬ್ಬ ವಾಸುದೇವ ಎಂಬವರು ದಾಖಲಿಸಿದ್ದು, ಅದು ಕೇರಳ ಸಾಹಿತ್ಯಚರಿತ್ರೆಯ ಐದನೆಯ ಸಂಪುಟದಲ್ಲಿ ಮರುಮುದ್ರಣವಾಗಿದೆ ಎಂಬ ಮಾಹಿತಿ ಕಾದಂಬರಿಯಲ್ಲಿದೆ. ಮಹಾಜನರು ಈ ಐದನೆಯ ಸಂಪುಟವನ್ನು ಹುಡುಕಿ ತೆರೆದಾಗ ಅದರಿಂದ ಈ ವಾಸುದೇವ ಪ್ರತ್ಯಕ್ಷನಾಗಿ ಎದ್ದು ಬರುತ್ತಾನೆ! ಅವನು ಶಂಭು ಮಹಾಜನರಿಗೆ ನಾರಾಯಣ ಭಟ್ಟತಿರಿಯವರ ಕಥೆಯನ್ನು ಸ್ವತಃ ನಿರೂಪಿಸುತ್ತಾನೆ.

ಈ ತಂತ್ರದ ಮೂಲಕ ಈ ಕಾದಂಬರಿಯಲ್ಲಿ ದಾಖಲಾಗುವ ನಾರಾಯಣ ಭಟ್ಟತಿರಿಯವರ ಸಾಧನೆಯು ಇಲ್ಲಿನ ನವಚಾರಿತ್ರಿಕ ಕಥನದ ಒಂದು ಮುಖ್ಯ ಆಯಾಮವಾಗಿದೆ. ಭಾರತದಲ್ಲಿ ಭಾಷಾ ವಿಜ್ಞಾನದ ಚರಿತ್ರೆಯನ್ನು ನೋಡಿದರೆ, ಪಾಣಿನಿ ಮತ್ತು ಭಟ್ಟತಿರಿ ಎರಡು ಮುಖ್ಯ ಹೆಸರುಗಳು. ಆದರೆ ಪಾಣಿನಿಯ ಹೆಸರು ಗೊತ್ತಿರುವ ಹಾಗೆ ಜನಸಾಮಾನ್ಯರಿಗೆ ಭಟ್ಟತಿರಿಯ ಹೆಸರು ತಿಳಿಯದು. ಪಾಣಿನಿಯ ಕೊಡುಗೆ ದೊಡ್ಡದೇ. ಸಂಸ್ಕೃತ ಭಾಷೆ – ವ್ಯಾಕರಣ ಮತ್ತು ಸಾಹಿತ್ಯಗಳಲ್ಲಿ ಉತ್ತರಾದಿ ಸಂಪ್ರದಾಯದಂತೆಯೆ ದಕ್ಷಿಣದ ಕೇರಳದಲ್ಲಿದ್ದ ದೊಡ್ಡ ಸಂಪ್ರದಾಯವನ್ನು ಈ ಕಾದಂಬರಿಯ ಮಧ್ಯಭಾಗದಲ್ಲಿ ವಿಶಿಷ್ಟ ರೀತಿಯಲ್ಲಿ ಪರಿಚಯಿಸಲಾಗಿದೆ. ಕೇರಳದ ಸಂಸ್ಕೃತ ವಿದ್ಯಾಕೇಂದ್ರಗಳ ಪರಿಚಯ ತುಂಬ ವಿಶಿಷ್ಟವಾಗಿ ಕಾದಂಬರಿಯಲ್ಲಿ ದಾಖಲಾಗಿದೆ. ತಿರುವನಂತಪುರದಲ್ಲಿ ಭಾಸನ ಸಂಸ್ಕೃತ ಕೃತಿಗಳು ಹಾಗೂ ಕೌಟಿಲ್ಯನ ‘ಅರ್ಥಶಾಸ್ತ್ರ’ ದೊರಕಿದ್ದು ವಿದ್ವದ್ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದುದನ್ನು ಕಾದಂಬರಿ ಉಲ್ಲೇಖಿಸುತ್ತದೆ. ನಾರಾಯಣ ಭಟ್ಟತಿರಿಯವರು ಪಾಣಿನಿಯ ಸೂತ್ರಗಳಿಗೆ ಹೊಸರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಇದನ್ನು ಅಪಾಣಿನೀಯವೆಂದು ವಿದ್ವಾಂಸರನೇಕರು ಅಮಾನ್ಯ ಮಾಡಿದ್ದನ್ನು ಮುಂದೆ ಪೋತಿಯವರು ಮಹಾಜನರಿಗೆ ವಿವರಿಸುತ್ತಾರೆ.

ಸುದೀರ್ಘ ರೈಲು ಪ್ರಯಾಣದ ಬಳಿಕ ಮಹಾಜನ್ ಮತ್ತು ಪೋತಿಯವರು ತಕ್ಷಶಿಲೆಯ ರೈಲು ನಿಲ್ದಾಣದಲ್ಲಿ ಇಳಿದಾಗ ಅವರಿಗೆ ಸೂಫಿ ಸಂತರೊಬ್ಬರು ಕಾಣಸಿಗುತ್ತಾರೆ. ತಕ್ಷಶಿಲೆ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಭಾಷಾಸಂಕಿರಣದಲ್ಲಿ ಭಾಗವಹಿಸಲು ತಾವಲ್ಲಿಗೆ ಹೋಗುತ್ತಿದ್ದೇವೆ ಎಂದು ಇವರು ಹೇಳಿದಾಗ ಅವರು ಗಹಗಹಿಸಿ ನಕ್ಕು, ಆ ಸಂಕಿರಣ ನಡೆದು 2422 ವರ್ಷಗಳೇ ಕಳೆದಿವೆ; ಆದರೆ ಆ ಸಂಕಿರಣದ ಕುರಿತು ಕೌಟಿಲ್ಯ ವಿಷ್ಣುಗುಪ್ತರು ಬರೆದ ನಡಾವಳಿಯ ಪ್ರತಿಯನ್ನು ನಿಮಗೆ ಕೊಡುತ್ತೇನೆ; ಅದರಲ್ಲಿ ನಿಮಗೆ ಅದರ ವಿವರಗಳು ಸಿಗುತ್ತವೆ ಎನ್ನುತ್ತಾರೆ. ಆ ನಡಾವಳಿಯನ್ನು ಕಾಲಕಾಲಕ್ಕೆ ಆಧುನಿಕ ಲಿಪಿಗಳಲ್ಲಿ ಪ್ರತಿ ಮಾಡಿ ಇಡಲಾಗುತ್ತಿದೆ; ಅದರ ಇತ್ತೀಚಿನ ಆವೃತ್ತಿ ಇದು ಎಂದು ಒಂದು ಹಸ್ತಪ್ರತಿಯ ಕಟ್ಟನ್ನು ಇವರಿಗೆ ನೀಡುತ್ತಾರೆ. ಇದು ಈ ಕಾದಂಬರಿಯ ಮತ್ತೊಂದು ಮಾಂತ್ರಿಕ ವಾಸ್ತವ ಸನ್ನಿವೇಶ. ಭಾಷೆಯ ಕುರಿತು ನಡೆದ ಆ ಸಂಕಿರಣದಲ್ಲಿ ಪ್ರಸ್ತುತಗೊಂಡ ಭಾಷಣಗಳು ಅಕ್ಷರರೂಪ ಪಡೆದು ಅಮರವಾಗಿವೆ ಎನ್ನುವುದು ಭಾಷಾ ಜಿಜ್ಞಾಸೆಯ ಒಂದು ಆಯಾಮವೂ ಹೌದು. ಸಮ್ಮೇಳನದ ಉಪನ್ಯಾಸಗಳನ್ನು, ಅಲ್ಲಿನ ನಡಾವಳಿಗಳನ್ನು ‘ಅರ್ಥಶಾಸ್ತ್ರ’ ಬರೆದ ಕೌಟಿಲ್ಯ ಅಥವಾ ವಿಷ್ಣುಗುಪ್ತರು ದಾಖಲು ಮಾಡಿ ಇರಿಸಿದ್ದರು. ಈ ಕಾಲ್ಪನಿಕ ಹಸ್ತಪ್ರತಿಯನ್ನು ಇಬ್ಬರೂ ವಿದ್ವಾಂಸರು ಓದಿದಂತೆ ಕಾದಂಬರಿಯ ಮೂರನೆಯ ಭಾಗವಿದೆ.

ಮಹಾಜನ್ ಮತ್ತು ಪೋತಿ ಇಬ್ಬರೂ ಈ ಹಸ್ತಪ್ರತಿಯನ್ನು ಓದುತ್ತಾ ಚರ್ಚಿಸುತ್ತಾ ಇದ್ದಂತೆ ಅವರನ್ನು ವಿಚಾರಸಂಕಿರಣಕ್ಕೆ ಆಹ್ವಾನಿಸಿದ್ದ ಪ್ರೊ. ಮಹಮದಾಲಿ ಮತ್ತು ಅವರ ಸಂಗಡಿಗರು ಬಂದು ಇವರಿಬ್ಬರನ್ನು ಸ್ವಾಗತಿಸಿ ಕರೆದುಕೊಂಡುಹೋಗುತ್ತಾರೆ. ಅವರು ಭಾಗವಹಿಸಲಿರುವ ವಿಚಾರ ಸಂಕಿರಣ ಇನ್ನು ಎರಡು ದಿನಗಳ ನಂತರ ನಡೆಯಲಿದೆ ಎಂಬ ಸೂಚನೆಯೊಂದಿಗೆ ಕಾದಂಬರಿ ಮುಗಿಯುತ್ತದೆ.

ಕಾದಂಬರಿಯಲ್ಲಿ ಭಾಷೆ ಮತ್ತು ಸಂವಹನದ ಕುರಿತಾಗಿ ತೀರಾ ಪ್ರಾಥಮಿಕ ಹಂತಗಳಿಂದ ಹಿಡಿದು, ಸಾಂಕೇತಿಕ, ನುಡಿಸಂಕೇತಗಳ ಚರಿತ್ರಾತ್ಮಕ ಬೆಳವಣಿಗೆ, ಭಾಷೆಯ ಲಿಪಿಕರಣ ಪ್ರಕ್ರಿಯೆ ಮತ್ತು ಸಂವಹನಾಧಾರಿತ ಎಂಬ ಹಲವು ಆಯಾಮಗಳನ್ನು ಸೂಚಿಸುವ ಸಣ್ಣ ಸಣ್ಣ ಪ್ರಕರಣಗಳು ನಡುನಡುವೆ ಬರುತ್ತವೆ.

‘ವರ್ಣಕ’ ಕಾದಂಬರಿಯಲ್ಲಿ ಕಥಾನಕದ ಚೌಕಟ್ಟು ಕಿರಿದು; ಆದರೆ ಅದರೊಳಗಿನ ವಿವರಗಳು ಸುದೀರ್ಘವಾಗಿವೆ. ಪಾರಂಪರಿಕ ಸೂತ್ರಗಳಿಂದ, ರಸಾನುಭವದ ನಿರೀಕ್ಷೆಯಲ್ಲಿ ಇದನ್ನು ಪ್ರವೇಶಿಸದೆ ಹೊಸ ಸಂರಚನೆಯನ್ನು ಪ್ರವೇಶಿಸುವ ಮುಕ್ತಮನಸ್ಸಿನಿಂದ ಪ್ರವೇಶಿಸಿದರೆ ಇದು ತನ್ನೊಳಗಿನ ಅನುಭವ ಶ್ರೀಮಂತಿಕೆಯನ್ನು ಬಿಟ್ಟುಕೊಡುತ್ತದೆ. ಇದು ‘ಪಾಂಡಿತ್ಯರಸ’ಭರಿತವಾಗಿದೆ ಎಂದು ಖಂಡಿತವಾಗಿ ಹೇಳಬಹುದು. ಇದು ಏಕಕಾಲದಲ್ಲಿ ಸಾಹಿತ್ಯಕೃತಿಯೂ ವಿದ್ವತ್ ಕೃತಿಯೂ ಆಗಿರುವುದು ಇದರ ವೈಶಿಷ್ಟ್ಯ.

ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ : ‘ಓದಿನಂಗಳ’ದೊಳಗೆ ‘ಉರಿವ ಜಾತ್ರೆ’ ಹೂಡಿದ್ದಾರೆ ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇದನ್ನೂ ಓದಿ : ವರ್ಷಾಂತ್ಯ ವಿಶೇಷ 2020;ಓದಿನಂಗಳ’ದಲ್ಲಿ ಕಥೆಗಾರ ಶಿ.ಜು.ಪಾಶ

Published On - 12:58 pm, Fri, 31 December 21